‘ಮೈಸೂರಿನ ಸನಿಹದಲ್ಲಿ ತೋಟವಿದೆ. ೧೫ ಎಕರೆ ವಿಶಾಲ ಜಾಗದಲ್ಲಿ ಭತ್ತ, ತರಕಾರಿ, ಮಾವು, ಹುಣಸೆ, ಬಿದಿರು, ಲಿಂಬೆ, ಹಲಸು, ಚಿಕ್ಕು ಮುಂತಾದ ಬೆಳೆ ವೈವಿಧ್ಯಗಳಿವೆ. ಇಡೀ ಫಾರ್ಮ್‌ ಸಂಪೂರ್ಣ ಸಾವಯವ, ಅತ್ಯುತ್ತಮ ಸಗಣಿ ಗೊಬ್ಬರ ನಾವೇ ತಯಾರಿಸುತ್ತೇವೆ!’   ಹವಾನಿಯಂತ್ರಿತ ಕೊಠಡಿಯಲ್ಲಿ ಕೃಷಿ ಕತೆ ಶುರುವಾಗಿತ್ತು. ಅಧಿಕಾರಿಯ ಜತೆ ಮಾತಾಡುತ್ತಿದ್ದೇನೋ, ಕೃಷಿಕರ ಜತೆಗೋ? ಅನುಮಾನ ಹುಟ್ಟಿಕೊಂಡಿತು.

‘ವಾರ ಹದಿನೈದು ದಿನಕ್ಕೆ ಒಮ್ಮೆ ಫಾರ್ಮ್‌ಗೆ ಕುಟುಂಬ ಸಮೇತ ಹೋಗಿ ಆರಾಮವಾಗಿದ್ದು  ಬರ್ತೇವೆ. ಅಲ್ಲಿ ಫಾರ್ಮ್‌ ಮ್ಯಾನೇಜರ್ ಎಲ್ಲ ನೋಡ್ಕೋತಾರೆ. ಅವರಿಗೆ ಸಂಬಳ ಜತೆಗೆ ೧೫ ಹಸುಗಳ ಹಾಲು ಹೆಚ್ಚುವರಿ ಆದಾಯ ನೀಡುತ್ತದೆ! ‘ನೀವು ನಮ್ಮ ಹಸುಗಳನ್ನು ಚೆನ್ನಾಗಿ ಸಾಕಿರಿ, ನಮಗೆ ಸಗಣಿ ಮಾತ್ರ ನೀಡಿರಿ, ಅವು ನೀಡುವ ಹಾಲುಮಾರಿ ಅವರು ಹಣಮಾಡಬಹುದು!’ ಆಕಳು ಹಾಲು ಕೊಡುತ್ತದೆ ಎಂದು ಗೊತ್ತು, ಈಗ ಸಾಹೇಬರ  ಸಗಣಿ ಕತೆ ಅವರ ಕೃಷಿಗಿಂತ ಕುತೂಹಲ ಹೆಚ್ಚಿಸಿತು. ನಾಡ ದನಗಳು ಕಡಿಮೆ ಸಗಣಿ ಹಾಕುತ್ತವೆಂದೂ, ಒಂದೊಂದು ಜರ್ಸಿ ಆಕಳೂ ಅದಕ್ಕಿಂತ ಹತ್ತುಪಟ್ಟು ಜಾಸ್ತಿ ಸಗಣಿ ಉತ್ಪಾದಿಸುತ್ತವೆಂದೂ, ಇವು ಇಂದು ನೀಡಿದ ಮೇವನ್ನು ತಕ್ಷಣ ನಾಳೆಗೆ ಗೊಬ್ಬರವಾಗಿ ಪರಿವರ್ತಿಸುವ ಅದ್ಬುತ ಯಂತ್ರಗಳೆಂದರು! ‘ಮೇವಿಗೆಂದು ನೀರಾವರಿಯಲ್ಲಿ ಹುಲ್ಲು ಬೆಳೆಸಲಾಗಿದೆ, ಸಗಣಿಗೆಂದು ಹಸು ಸಾಕಲಾಗಿದೆ, ಹಾಲು ಫಾರ್ಮ್‌ ಮ್ಯಾನೇಜರ್‌ನ ವಿಶೇಷ ಆಕರ್ಷಣೆ’  ಕೃಷಿಯಲ್ಲೂ ಈಗ ಎಂತಹ ಅದ್ಬುತ ನಡುವಳಿಕೆಗಳಿವೆ ಸ್ವಾಮಿ!

ಅಧಿಕಾರಿ ಕೃಷಿಕರು, ಉದ್ಯಮಿ ಕೃಷಿಕರು ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವ, ಧಾರವಾಡ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ನಗರಗಳಂಚಿಗೆ ನಮಗೆ ಧಾರಾಳ ಸಿಗುತ್ತಾರೆ. ನಗರೀಕರಣದ ಪರಿಣಾಮಕ್ಕೆ ಬೆಚ್ಚಿ ಬಚಾವಾಗಲು ಕೃಷಿ ದಾರಿ ಹುಡುಕಿದವರು ಇವರು. ಆದಾಯದ ಮೂಲ ಬೇರೆ ಇದ್ದು  ಕೃಷಿ ಆಸಕ್ತಿ ಬೆಳೆಸಿಕೊಂಡವರಿಗೆ ಕೃಷಿ ಉತ್ಪನ್ನಕ್ಕಿಂತ ಮುಖ್ಯ ಆರಾಮವಾಗಿರಲು ಫಾರ್ಮಗಳು ಬೇಕು. ಗಿಡಮರಗಳ ಜತೆ ಹಾಯಾಗಿ ಬದುಕಬೇಕು ಎಂಬ ಆಸಕ್ತಿ ಬಿಟ್ಟರೆ ಇವರು ಕೃಷಿಯಿಂದ ತೀರ ಹೆಚ್ಚಿನ ನಿರೀಕ್ಷೆ ಇಟ್ಟವರಲ್ಲ. ಇಂತಹ ವ್ಯಕ್ತಿಗಳು ಒಂದೊಂದು ಊರಿನಲ್ಲಿ ತೋಟ ಬೆಳೆಸಿದಂತೆ ಸುತ್ತಲಿನ ಕೃಷಿ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತವೆ. ಬೇರೆ ಬೇರೆ ಜಾತಿಯ ಸಸ್ಯಗಳು ಬೆಳೆಯುವದು, ಗ್ರೀನ್‌ಹೌಸ್ ನಿರ್ಮಾಣ, ಕಂಪೌಂಡ್ ಗೋಡೆ ಏಳುವದು ಬಾಹ್ಯ ಚಿತ್ರಗಳು. ಕೂಲಿಗಳು ಕೇಳಿದಷ್ಟು ಹಣ, ವಿಶೇಷ ಸೌಲಭ್ಯ ನೀಡುವದರಿಂದ ಹಳ್ಳಿಯ ಸಾಂಪ್ರದಾಯಿಕ ಕೃಷಿಯಲ್ಲಿ ಕೂಲಿಬರದ ಪರಿಣಾಮ ನೋಡಬಹುದು.

ಪರಿಣಾಮ ಏನೇ ಇರಲಿ, ಆಸಕ್ತಿಗೆ ಪೂರಕವಾಗಿ ತೋಟ ನಿರ್ಮಿಸಲು ಇವರಿಗೆ ಸಲಹೆಗಳು ಬೇಕು,ಪೂರಕ ಕೆಲಸ ನಿರ್ವಹಿಸಲು ಜನ ಬೇಕು. ಆರಂಭದಲ್ಲಿ ಹೇಳಿದಂತೆ ಸಗಣಿಗಾಗಿ ಜರ್ಸಿ ಆಕಳು ಸಾಕಿದ್ದು  ಒಂದು ಹೈಟೆಕ್ ಉದಾಹರಣೆ ಮಾತ್ರ. ತೆಂಗಿನ ತೋಟದ ನಿರ್ವಹಣೆಗೆ ಜನ ಬೇಕು, ಅವರಿಗೆ ಎರಡು ಎಕರೆ ತೆಂಗಿನ ತೋಟದ ಅಷ್ಟು ಕಾಯಿಗಳನ್ನು ನೀಡುತ್ತೇವೆಂದು ಮಂಗಳೂರಿನ ಕೃಷಿಕರೊಬ್ಬರು ಒಮ್ಮೆ ಹೇಳಿದ್ದರು. ಕೃಷಿ ಸಲಹೆ, ನಿರ್ವಹಣೆಯ ಪ್ರಸ್ತುತ ಕತೆ ತಿಳಿದರೆ ನಮ್ಮ ಕೃಷಿ ಕುಟುಂಬಗಳೆಲ್ಲ ಸ್ವಂತ ಕೃಷಿ ಬಿಟ್ಟು ಇಂತಹ ಫಾರ್ಮ್‌ ಮ್ಯಾನೇಜರ್ ಕೆಲಸಕ್ಕೆ ಸೇರಿಬಿಡಬಹುದು! ಕೃಷಿ ವಲಯದ ಇವತ್ತಿನ ಅಚ್ಚರಿಗಳಿವು. ಮಲೆನಾಡಿನ ಮಿಡಿಮಾವಿನ ಬಗೆಗೆ ಮಾಹಿತಿ ಸಂಗ್ರಹಿಸಿ ಜನಜಾಗೃತಿ ಕಾರ್ಯಕ್ರಮ ನಡೆಸಿ ಈಗ ಮೂರು ವರ್ಷ ಕಳೆದಿದೆ. ನೂರಾರು ಮಿಡಿಮಾವಿನ ವಿಶೇಷ ಮಾಹಿತಿ ಸಂಗ್ರಹ ಬಳಿಕ ಕೃಷಿ ಯೋಗ್ಯ ಪ್ರಮುಖ ೪೦ ಜಾತಿಗಳನ್ನು ಸ್ವತಃ ಬೆಳೆಸುತ್ತಿದ್ದೇನೆ. ಯಾವ ಮಿಡಿಮಾವು ನಿಶ್ಚಿತವಾಗಿ ಎಷ್ಟು ವರ್ಷಕ್ಕೆ ಫಲ ನೀಡುತ್ತದೆಂದು ಹೇಳುವ ಧೈರ್ಯ ನನಗಿಲ್ಲ. ಆದರೆ ಕೋಲಾರ ಸುತ್ತಮುತ್ತ ಮಿಡಿಮಾವಿನ ತೋಟ ನಿರ್ಮಿಸುವ ತಜ್ಞರು, ಸಲಹೆಗಾರರ ದೊಡ್ಡಪಡೆಯಿದೆ. ನಾಲ್ಕೇ ವರ್ಷಕ್ಕೆ ಲಕ್ಷಾಂತರ ಗಳಿಸಬಹುದೆಂದು ಮಾಹಿತಿ ಹಂಚಿದವರಿದ್ದಾರೆ. ಸುಮಾರು ೨೦೦ ಎಕರೆ ಮಿಡಿಮಾವಿನ ತೋಟ ಎಬ್ಬಿಸಲು ಬಂಡವಾಳ ತೊಡಗಿಸಲಿದ್ದ ಆಂಧ್ರದ ಉದ್ಯಮಿಯೊಬ್ಬರು ಪೋನ್ ಮಾಡಿದ್ದರು. ವರ್ಷಕ್ಕೆ ಒಂದು ಮರದಲ್ಲಿ ೨೫ ಸಾವಿರ ರೂಪಾಯಿ ಮಿಡಿಮಾವು ದೊರೆಯುತ್ತದೆಂದು ನರ್ಸರಿ ತಜ್ಞ(?)ರ ಕತೆ ನಂಬಿ ಗಿಡ ನೀಡಲು ಹೊರಟಿದ್ದರು. ಯಾವ ಜಾತಿಯ ಮಿಡಿಮಾವು ಅದು ಎಂದು ವಿವರ ಕೆದಕಿದರೆ ಮಲೆನಾಡಿನ ಉತ್ಕೃಷ್ಟ ಜಾತಿಯದು ಎಂದು ನರ್ಸರಿ ಮನುಷ್ಯ ಹೇಳಿದ್ದರು. ಅಚ್ಚರಿಯೆಂದರೆ ತೇಗ, ಅಗರ್‌ವುಡ್ ಬ್ಲೇಡ್ ಕಂಪನಿಗಳಂತೆ ಈಗ ಹಲವು ಸಸ್ಯಗಳ ಹಿಂದೆ ಚೋರ ಕಂಪನಿಗಳಿವೆ! ಮೋಸದಾಟದ ಇವರ ಮುಖ್ಯ ಆಕರ್ಷಣೆ ಕೃಷಿ ಲೋಕಕ್ಕೆ ಹೊಸಪಾದಾರ್ಪಣೆ ಮಾಡುವವರು, ಅಧಿಕಾರಿ/ ಉದ್ಯಮಿ ಕೃಷಿಕರು!

ಬೀಜ ಬ್ಯಾಂಕ್, ನಾಟಿ ಭತ್ತದ ಬಗೆಗೆ ಜಾಗೃತಿ ಮೂಡಿಸುವುದು, ಸಾವಯವ ಉತ್ಪನ್ನ ಮಾರಾಟ ಮಳಿಗೆ ಆರಂಭ, ಬಿಟಿ ತಳಿ ವಿರುದ್ದ ಜನಾಂದೋಲನ ಕಾರ್ಯಗಳಲ್ಲಿ ಶ್ರಮಿಸುತ್ತಿರುವ ಸಹಜ ಸಮೃದ್ಧದ ಜಿ. ಕೃಷ್ಣಪ್ರಸಾದ್‌ರ ಬೆಂಗಳೂರಿನ ಕಚೇರಿಗೆ ವಾರಕ್ಕೆ ನಾಲ್ಕಾರು ಜನ ಕೃಷಿ ಸಲಹೆ ಕೇಳಿಕೊಂಡು ಬರುತ್ತಾರಂತೆ! ಯಾವ ಸಸಿ ನೆಡಬೇಕು? ಎಷ್ಟು ನೀರು ಕೊಡಬೇಕು? ಯಾವ ನರ್ಸರಿಯಿಂದ ಗಿಡ ತರಬೇಕು? ಹೀಗೆ ಕೃಷಿ ಪ್ರಶ್ನೆಗಳಷ್ಟೇ ಅವರಲ್ಲಿದೆ. ಸೂಕ್ತ ಮಾರ್ಗದರ್ಶನ ನೀಡುವವರ ಅಗತ್ಯವಿದೆ ಎನ್ನುತ್ತಾರೆ ಕೃಷ್ಣಪ್ರಸಾದ್.

ಕೃಷಿ ಆಸಕ್ತಿ,  ಆದಾಯ ಮೀರಿದ ಅಕ್ರಮ ಸಂಪತ್ತು ಬಚಾವು ಮಾಡಲು ಕೃಷಿಗೆ ಹೊರಟವರು ಇವರು ಎಂದು ಮೇಲ್ಲೋಟಕ್ಕೆ ನಮಗೆಲ್ಲ ಗೊತ್ತು. ಹಣದ ಮೂಲ ಯಾವುದು ಎಂಬ ಮಾತು ಬದಿಗಿರಲಿ, ತೋಟ ಬೆಳೆಸುವ ಆಸಕ್ತಿಗೆ ಪೂರಕವಾಗಿ ಮಾರ್ಗದರ್ಶನ ನೀಡುವದು ಹೊಸ ಉದ್ಯೋಗವಾಗುತ್ತಿದೆ. ಕೃಷಿಕರಿಲ್ಲದ ಭೂಮಿಯಲ್ಲಿ ಕೃಷಿಕರಾಗಿ ನಿಂತು ಮಾದರಿ ತೋಟ ಬೆಳೆಸುವವರ ಅಗತ್ಯ ಹೆಚ್ಚುತ್ತಿದೆ. ಕೃಷಿ ವಿಜ್ಞಾನ ಅರ್ಥಮಾಡಿಕೊಂಡು ಒಡೆಯನಿಲ್ಲದ ನೆಲೆಯಲ್ಲಿ ಒಕ್ಕಲಾಗಿ ನಿಂತು ಗಿಡ ಮರ ಬೆಳೆಸುವವರಿಗೆ ಅವಕಾಶ ಹೆಚ್ಚುತ್ತಿದೆ. ಕೃಷಿಸಲಹೆ, ನಿರ್ವಹಣೆಯ  ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ವೃತ್ತಿ ತರಬೇತಿಗಳು ಬೇಕಾಗಿದೆ.