ಬೆಂಗಳೂರಿನಲ್ಲಿ ಸಾಲು ಮರಗಳು ಏಕೆ ಸಾಯುತ್ತಿವೆ? ಪರಿಸರ ತಜ್ಞ ಎ.ಎನ್.ಎಲ್ಲಪ್ಪರೆಡ್ಡಿ ನೇತ್ರತ್ವದಲ್ಲಿ ೫ ವರ್ಷದ ಹಿಂದೆ ಸರಕಾರ  ಒಂದು ಸಮಿತಿ ನೇಮಿಸಿತ್ತು. ರಸ್ತೆಯಂಚಿನ ಮರಗಳ ಸ್ಥಿತಿಗತಿ ಅಧ್ಯಯನ ಮಾಡಿದ ತಂಡ ಮರದ ಸಾವಿಗೆ ಕಾರಣ ಪಟ್ಟಿ ಮಾಡಿತು. ಜಾನುವಾರು ಮೇವಿಗಾಗಿ ಟೊಂಗೆ ಕಡಿಯುವದು, ಮರಕ್ಕೆ ಜಾನುವಾರು ಕಟ್ಟುವದು, ಮರಗಳಿಗೆ ಫಲಕ ಹಾಕಲು ಮೊಳೆ ಹೊಡೆಯುವದು, ತೊಗಟೆ ತೆಗೆಯುವದು, ರಸ್ತೆ ಗಟಾರಕ್ಕೆ ಕಲ್ಲು, ಕಾಂಕ್ರೀಟ್ ಹಾಕುವಾಗ ಬೇರು ಬೆಳವಣಿಗೆ ಅಡ್ಡಿಯಾಗುವುದು, ವಿದ್ಯುತ್ ಮಾರ್ಗ, ಒಳಚರಂಡಿ, ನೀರು ಸರಬರಾಜಿಗೆ ಭೂಮಿ ಅಗೆಯುವ ಕೆಲಸಗಳು  ಮರ ಕೊಲ್ಲುತ್ತಿವೆಯೆಂದು ವರದಿ ಹೇಳಿತು.

ಶುದ್ಧ ಪರಿಸರ, ನಗರ ಸೌಂದರ್ಯಕ್ಕೆ ಸಾಲು ಮರಗಳು ಬೇಕು. ಇಷ್ಟಾಗಿಯೂ  ಅಂಗಡಿ, ಮನೆ, ಶಾಲೆ, ಗೋಡೆಯಂಚಿನ ಮರಗಳನ್ನು ಪ್ರೀತಿಸುವವರಿಗಿಂತ ದ್ವೇಷಿಸುವವರ ಸಂಖ್ಯೆ ಜಾಸ್ತಿ. ಯಾವುದೋ ಬಡಾವಣೆಯಲ್ಲಿ ಒಂದು ಮರದ ಟೊಂಗೆ ಮುರಿದು ಸಾವು ನೋವು ಘಟಿಸಿದರೆ ಮಾಧ್ಯಮ ಮುಖೇನ ಸುದ್ದಿ ಬಿತ್ತರಗೊಳ್ಳುತ್ತದೆ. ಮರುಕ್ಷಣದಲ್ಲಿ ರಸ್ತೆ ಪಕ್ಕದ ಎಲ್ಲ ಮರಗಳ ಬಗೆಗೆಗೂ ವಿಚಿತ್ರ ಧ್ವೇಷ ಸಮೂಹ ಸನ್ನಿಯಾಗಿ ಎಲ್ಲ ಮರಗಳು ಮಕ್ಕಳ ಮೇಲೆ ಮುರಿದು ಬೀಳಬಹುದೆಂಬ ಭಯ ಆರಂಭವಾಗುತ್ತದೆ! ಪರಿಸರ, ಮರ ಗಿಡಗಳ ಮಹತ್ವದ ಬಗೆಗೆ  ಎಷ್ಟೇ  ಮಾಹಿತಿ, ಪಾಠ, ಕಾನೂನು, ಜಾಗೃತಿ, ಆಂದೋಲನ  ನಡೆದರೂ ನಗರ ಪರಿಸರದಲ್ಲಿ ಮರ ಪ್ರೀತಿಸುವ ಮಂದಿ ಕಡಿಮೆಯಾಗುತ್ತಿದ್ದಾರೆ. ಅರಣ್ಯ ಮೂಲದಿಂದ ನೀರು, ವಿದ್ಯುತ್, ನಾಟಾ, ಔಷಧ, ಆಹಾರ ಪಡೆಯುತ್ತಿರುವ ಸತ್ಯಗಳನ್ನು ನಾವು ಮರೆಯುತ್ತಿದ್ದೇವೆ. ಪರಿಸರ ನಾಶದ ಬಿಕ್ಕಟ್ಟಿನ ಮಧ್ಯೆ ಬಡಾವಣೆಗಳ ಜನ ಒಗ್ಗಟ್ಟಾಗಿ ಹೇಗೆ ಮರ ಬೆಳೆಸಬಹುದೆಂದು ಚಿಂತಿಸುವುದು ಮರೆತಿದ್ದೇವೆ. ಡಿಗ್ರಿ, ಪಿಎಚ್‌ಡಿ, ಇಂಜಿನಿಯರ್, ಡಾಕ್ಟರ್ ಹೀಗೆ ಟನ್‌ಗಟ್ಟಲೇ ಅಕ್ಷರಸ್ಥ ಸಮೂಹ ತುಂಬಿ ತುಳುಕುವ ನಗರದಲ್ಲಿ ಪರಿಸರ ವಿಚಾರದಲ್ಲಿ ಮಿಲಿಗ್ರ್ಯಾಮ್ ಕಾಳಜಿಯಿಲ್ಲ, ದಟ್ಟ  ದಾರಿದ್ರ್ಯ ಏಕೆ  ತುಂಬಿದೆ!? ಗ್ರಾಮೀಣ ನೈಸರ್ಗಿಕ ಸಂಪತ್ತು ದೋಚಿ ನಗರ ಬೆಳೆಯುತ್ತಿದೆ, ಕಸಿದುಕೊಂಡಿದ್ದನ್ನು ಸಾಲುಮರದ ಮುಖೇನವಾದರೂ ಕೊಂಚ ಭೂಮಿಗೆ ಹಿಂದಿರುಗಿಸೋಣ ಎಂಬ ಕನಿಷ್ಟ ಪ್ರಜ್ಞೆಯಾದರೂ  ಇರಬೇಕು.

‘ಸಸಿ ನೆಡ ಬೇಕೆಂದಿದ್ದೇನೆ, ಅದು ಮರವಾಗಿ ಬೆಳೆದಾಗ  ಎಲೆ ಉದುರಿಸಬಾರದು, ಅಂಗಳಕ್ಕೆ ವಿಪರೀತ ಕಸ ಉದುರಿಸಬಾರದು’  ಮನೆ ಎದುರಿನ ರಸ್ತೆಯಂಚಿನಲ್ಲಿ ಸಾಲು ಸಸಿ ಬೆಳೆಸುವ ಆಸಕ್ತಿ ಹೊಂದಿದ ಸ್ನೇಹಿತರೊಬ್ಬರು ಹೇಳಿದ್ದರು. ಮರದ ಸಹಜ ಕ್ರಿಯೆಯನ್ನು ನಮ್ಮ ಶಿಸ್ತಿಗೆ ಒಳಪಡಿಸಿ ನೋಡುವದಾದರೆ ಖಂಡಿತಾ ಪ್ಲಾಸ್ಟಿಕ್ ಮರ ಮಾತ್ರ ಪ್ರೀತಿಸಬಹುದು! ಇನ್ನು ಕೆಲವರಿಗೆ ಮನೆ ಎದುರು ನಿಲ್ಲಿಸಿದ ಕಾರಿನ ಮೇಲೆ ಮರದ ಎಲೆ, ಕಸಕಡ್ಡಿ ಬೀಳಬಾರದು, ಪಕ್ಷಿಗಳು ಕೂತು ಹಿಕ್ಕೆ ಹಾಕುವದು ನಿಷೇಧ. ಹಸುರಿನ ಅನ್ಯೋನ್ಯ ಒಡನಾಡಿಗಳನ್ನು ಆಚೆಯಿಟ್ಟು ಎಂತಹ ನಿಸರ್ಗ ಪ್ರೇಮ ಸಾಧಿಸುತ್ತೇವೆ? ಗಮನಿಸಿ ನೋಡಿ, ಬಡಾವಣೆಗಳಲ್ಲಿ ಹೆಚ್ಚು ಹೆಚ್ಚು ಮರ ಇದ್ದರೆ ವಾತಾವರಣ ಸಹ್ಯವಾಗಿರುತ್ತದೆ, ಇಲ್ಲದಿದ್ದರೆ ಸಿಮೆಂಟ್ ಛಾವಣಿಗಳು ಕಾದ ಕಾವಲಿ, ವಿದ್ಯುತ್ ಇಲ್ಲದಿದ್ದರೆ ಸಹಿಸಲೂ ಅಸಾಧ್ಯ ಸೆಕೆ ಹೆಚ್ಚುತ್ತದೆ. ಶಬ್ಧ ಮಾಲಿನ್ಯ, ವಾಯುಮಾಲಿನ್ಯ ನಿಯಂತ್ರಣಕ್ಕೆ ಮರಗಳು ಯಂತ್ರವಾಗಿ ಸೇವೆ ನಿರ್ವಹಿಸುತ್ತವೆ. ರಾಜ ಮಹಾರಾಜರ ಕಾಲದಲ್ಲಿ ಅಶ್ವತ್ಥ, ಆಲ,ಬೇವು, ಮಾವಿನ ಮರಗಳನ್ನು ರಸ್ತೆಯಂಚಿನಲ್ಲಿ ಬೆಳೆಸಿದ್ದು ನೋಡುತ್ತೇವೆ. ಕುದುರೆ, ಚಕ್ಕಡಿ, ಕಾಲ್ನಡಿಗೆ ಸಂಚಾರದ ಕಾಲಕ್ಕೆ ನೆರಳು ನೀಡುವ ಮರಗಳು ಮಹತ್ವ ಪಡೆದಿದ್ದವು. ಒಮ್ಮೆ ಬೆಳೆಸಿದವು ನೂರಾರು ವರ್ಷ ಬಾಳಿದವು. ರಸ್ತೆ ಅಗಲೀಕರಣ ಶತಮಾನದ ಮರಗಳನ್ನು ನಿರ್ದಾಕ್ಷಿಣ್ಯವಾಗಿ  ನುಂಗಿದ್ದನ್ನು ನಿತ್ಯ ಹೆದ್ದಾರಿಗಳಲ್ಲಿ ನೋಡುತ್ತೇವೆ. ಈಗ ಸಾಲು ಮರಗಳು ಬೇಗ ಬೆಳೆಯಬೇಕು, ಹೂವು ಬಿಡಬೇಕು  ಎಂಬುದಕ್ಕೆ ಹೆಚ್ಚಿನ ಆದ್ಯತೆ. ವಿದೇಶಿ ಸಸಿಗಳಲ್ಲಿ  ಸಾಲು ಚೆಂದ ನೋಡುವ ಹುಚ್ಚು ಹತ್ತಿದೆ. ನೆಡುವವರು ಕೆಲವರು, ಕಡಿಯುವವರು ಹಲವರು ತುಂಬಿದ ರಸ್ತೆಯಂಚಿನಲ್ಲಿ  ಮರ ಬೆಳೆಸುವದು  ದೊಡ್ಡ ಸಾಹಸ.

ನಗರ ಪರಿಸರದಲ್ಲಂತೂ ಸಸಿ ಬೆಳೆಸುವ ನಮ್ಮ ದೃಷ್ಟಿ ಕೊಂಚ ಬದಲಾಗಬೇಕು. ಸಂಪಿಗೆ, ಮೇ ಪ್ಲವರ್, ಬೇವು, ಹಲಸು ಎಂದು ಮಾಮೂಲಿ ಸಸಿ ನೆಡುವ ಬದಲು ಯಾವ ಸಸಿಯನ್ನು  ಜನ ಪ್ರೀತಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ನೋಡಬೇಕು. ಅಷ್ಟಕ್ಕೂ ರಸ್ತೆ ಪಕ್ಕದಲ್ಲಿ ಸಸಿ ನೆಡುವದಕ್ಕಿಂತ ನೆಟ್ಟ ಸಸಿ ಜೋಪಾನವಾಗಿ ಬೆಳೆಸುವ ಜಾಗೃತಿ ಬೇಕು. ಮನೆ ಮನೆಯ ಹಿತ್ತಲುಗಳಲ್ಲಿ ಜನ ಎಂತಹ ಸಸಿ ಬೆಳೆಸಿದ್ದಾರೆ ಎಂಬುದನ್ನು  ಪಟ್ಟಿ ಮಾಡಬೇಕು.  ಎಲ್ಲಾದರೂ ಹೆಚ್ಚು ಹೆಚ್ಚು ಸಸಿ ಬೆಳೆಸೋಣ ಎಂಬ ಕಾಳಜಿ ಬೇಕು. ದಾಲ್ಚಿನ್ನಿ, ಜಾಯಿಕಾಯಿ, ಲವಂಗ, ಹಲಸು, ಅಮಟೆ, ಬಿಂಬಳೆ, ನುಗ್ಗೆ, ಸಾಂಬಾರಬೇವು, ಮಾವು, ಕಂಚಿ, ಲಿಂಬು, ಬೇರು ಹಲಸು ಇಂತಹ ಸಸ್ಯಗಳನ್ನು ಮಲೆನಾಡಿನ ಶಹರಗಳಲ್ಲಿ ಬಹಳ ಕಾಳಜಿಯಿಂದ ಬೆಳೆಸುತ್ತಾರೆ. ಸ್ನಾನ, ಪಾತ್ರೆ ತೊಳೆದ ನೀರು ಒದಗಿಸಿ ಬೇಸಿಗೆಯಲ್ಲಿ ಸಸಿ  ಒಣಗದಂತೆ ಕಾಪಾಡುತ್ತಾರೆ. ಈ ಸಸಿಗಳು ಅವರ  ಆಹಾರ, ಆರೋಗ್ಯ ಸಂಸ್ಕೃತಿಯಲ್ಲಿ ಮಹತ್ವ ಪಡೆದಿವೆ. ಬೆಳೆಸಿದ ಹಿತ್ತಲ ಸಸಿಗಳ ಪುಟ್ಟ ಟೊಂಗೆ ಕಡಿಯುವಾಗಲೂ ಬಹಳ ಎಚ್ಚರವಹಿಸುತ್ತಾರೆ. ಬಳಕೆ ಪ್ರೀತಿ ಸಂರಕ್ಷಣೆ ಕಾಳಜಿಯ ಮೂಲವಾಗಿದೆ. ಈ ತತ್ವವನ್ನು  ನಗರ ಪರಿಸರ ಅಭಿವೃದ್ಧಿ ರೂಪಿಸಲು ಬಳಸಬೇಕು. ಕಿಲೋ ಮೀಟರ್ ಉದ್ದಕ್ಕೂ ಸಸಿ ನೆಟ್ಟು ವನಮಹೋತ್ಸವ ಮಾಡಿ ಪೋಟೊ ಪತ್ರಿಕೆಯಲ್ಲಿ ಬರುವದಕ್ಕಿಂತ ಹತ್ತಿಪ್ಪತ್ತು ಮನೆಗಳನ್ನು ಆಯ್ದು ಸುತ್ತಲಿನ ಸಸ್ಯ ಸಂಪತ್ತು ಹೆಚ್ಚಿಸುವ ಯೋಜನೆ  ಮಾಡುವದು ಉತ್ತಮ ಕೆಲಸ. ಖಾಸಗಿ ಭೂಮಿಯಲ್ಲಿ ಬೆಳೆದ ಮರ ಸುತ್ತಲಿನ ವಾತಾವರಣಕ್ಕೆ ತನ್ನ ಕೊಡುಗೆ ಧಾರಾಳ ನೀಡುತ್ತದೆ. ಔಷಧ, ಆಹಾರ, ಅಲಂಕಾರಿಕ ಮಹತ್ವ ಪಡೆದ ಸಸ್ಯಗಳ ಬಗೆಗೆ ಒಂದು ಬಡಾವಣೆಯ ಜನ ಪರಸ್ಪರ  ಮಾಹಿತಿ ವಿನಿಮಯ ಮಾಡಿಕೊಂಡು ಸಸ್ಯ ಸಂಗ್ರಹ, ಬಳಕೆ ವಿಧಾನ ಚರ್ಚಿಸಬೇಕು. ಕರಾವಳಿ ಮೂಲದವರಾಗಿ ನಗರದಲ್ಲಿರುವವರು  ಜಾಯಿಕಾಯಿ, ಬೇರು ಹಲಸಿನ ಅಡುಗೆ ಮಹತ್ವವನ್ನು ಇನ್ನುಳಿದವರಿಗೆ ತಿಳಿಸಬಹುದು. ತೋಟದ ದಾಳಿಂಬೆ, ಲಿಂಬು ಹೇಗೆ ಆರೈಕೆ ಮಾಡಬೇಕೆಂದು ಬಯಲುನಾಡಿನ ಜನ ವಿವರಿಸಬಹುದು. ವಿವಿಧ ಪ್ರಾದೇಶಿಕ ಮೂಲದವರು ಒಂದಾಗಿ ಗಿಡ ಜ್ಞಾನ ಪಡೆಯುವ ಅವಕಾಶಗಳು ಬಡಾವಣೆಯ ಜನರನ್ನು ರಚನಾತ್ಮಕ ಕೆಲಸದಲ್ಲಿ ತೊಡಗಿಸುತ್ತದೆ. ಮಾರುಕಟ್ಟೆ ತರಕಾರಿ ಬದಲು ಹಿತ್ತಲಿನ ಫಲದಲ್ಲಿ ಸ್ವಾವಲಂಬನೆ, ಆರೋಗ್ಯದ ಪರ್ಯಾಯ ಹುಡುಕಬಹುದು. ಮನೆ ಮನೆಯ ಹಿತ್ತಲನ್ನು ಆರೋಗ್ಯದ ಹಸುರು ಮಾತ್ರೆಗಳ ಸುಂದರ ಖಜಾನೆಯಾಗಿ ಪರಿವರ್ತಿಸಬಹುದು.

ಗದಗದ ಕಪ್ಪತಗುಡ್ಡದ ಹಳ್ಳಿಯೊಂದರ ಮನೆ ಹಿತ್ತಲಲ್ಲಿ ನೂರಾರು ಹಲಸಿನ ಫಲಗಳಿದ್ದವು. ಅವು ಹಣ್ಣಾಗಿ ಹಾಳಾಗುತ್ತಿದ್ದವು. ವಿಚಾರಿಸಿದರೆ ‘ಹಲಸು ತಿಂದ್ರೆ ಜಡ್ಡು ಆಗ್‌ತೈತ್ರೀ’ ಎಂದು ಹೇಳಿದರು. ಮಲೆನಾಡಿನ ಮನೆಮನೆಗಳಲ್ಲಿ ತಯಾರಿಸುವ ಹಲಸು ಖಾದ್ಯಗಳ ವಿವರ ನೀಡಿದಾಗ ಅಚ್ಚರಿಪಟ್ಟರು. ಶಿವಮೊಗ್ಗ ಸಾಗರದ ಗೋಳಗೋಡಿನ ಗೀತಕ್ಕ ಹಲಸಿನಿಂದ ೨೫೦ ಅಡುಗೆ ತಯಾರಿಸುವ  ವಿಚಾರ ತಿಳಿಸಿದಾಗ ಮರ ನೋಡುವ ದೃಷ್ಟಿ ಬದಲಾುತು. ಒಂದು ಫಲದ ವಿವಿಧ ಭಾಗಗಳನ್ನು ಹೇಗೆ ಬಳಸಬಹುದು ಎಂಬ ವಿಚಾರದಲ್ಲಿ  ಬಡಾವಣೆಗಳಲ್ಲಿ ಮಾಹಿತಿ ಕೊರತೆಯಿದೆ. ನಗರ ಬಡಾವಣೆಗಳಲ್ಲಿ ಇಂತಹ ಗಿಡ ಗೆಳೆತನ ಪಾಠ ದೊರೆತರೆ  ರಾಜ್ಯದ ವಿವಿಧ ಭಾಗಗಳಿಗೆ ತಲುಪುವ ಅವಕಾಶವಾಗುತ್ತದೆ. ದೇಸೀ ಆಹಾರ ಸಂಸ್ಕೃತಿ ಉಳಿಸುವ ಸಾಧ್ಯತೆಯಾಗುತ್ತದೆ. ಮರ ಗಿಡಗಳ ಬಳಸಿಬಲ್ಲ ಪ್ರೀತಿ ನಗರದ ಮನೆ ಮನೆಗಳಲ್ಲಿ ಉದ್ಯಾನ ಬೆಳೆಸುವ ನವಚೇತನವಾಗುತ್ತದೆ.

ನಗರದ ಮಹಿಳಾ ಸಂಘ, ಸ್ವಸಹಾಯ ಸಂಘ, ಯುವಕ ಸಂಘ, ಗಣೇಶೋತ್ಸವ ಸಮಿತಿ ಹೀಗೆ ಯಾವುದೇ ಸಂಘಟನೆ ವನಮಹೋತ್ಸವದ ಸಿದ್ದ ಕಲ್ಪನೆಗಳ ಹೊರತಾಗಿ ಗಿಡ ಬೆಳೆಸುವ ಜಾಣತನ ಹುಡುಕಬೇಕು. ೩೫೪ ದಿನದ ಸಕತ್ ನಿದ್ದೆ ಹಾಗೂ ಒಂದು ದಿನದ ಸಾಂಕೇತಿಕ ಎಚ್ಚರದಂತೆ ವನಮಹೋತ್ಸವದಲ್ಲಿ ಗಿಡ ನೆಡುವ ಬದಲು ನಿತ್ಯ ಸಲಹುವ ಸಾಧ್ಯತೆ ಹುಡುಕಬೇಕು. ಅದು ನಮ್ಮ ನಗರ ಪರಿಸರ ಬದಲಿಸುವ ದಾರಿಯಾಗುತ್ತದೆ. ಪ್ರತಿ ವರ್ಷ ವಿವಿಧ ಬಡಾವಣೆಗಳು ಇಂತಹ ಗಿಡ ವೈವಿಧ್ಯ ಸಂರಕ್ಷಿಸಿದ ಮನೆಗಳನ್ನು ಗುರುತಿಸಬಹುದು, ಬಹುಮಾನ ನೀಡಬಹುದು, ಸಸಿ ಮುಖೇನ ಸಂಬಂಧ ಬೆಸೆಯಬಹುದು. ಬಡಾವಣೆಯ ಸಸ್ಯ ವೈವಿಧ್ಯ ರೆಜಿಸ್ಟರ್ ಇಡಬಹುದು !

ಇಂದು ನಗರ ಬಹುತೇಕ ಬಡಾವಣೆಗಳು  ನೌಕರ ಯಂತ್ರಗಳ ದೊಡ್ಡ ದಾಸ್ತಾನಿನಂತೆ ಕಾಣುತ್ತಿವೆ, ಬೆಳಿಗ್ಗೆ ೧೦ರಿಂದ ಸಾಯಂಕಾಲ ೫ರವರೆಗೆ ದುಡಿದು ಸುಸ್ತಾದವರ ನಿಲ್ದಾಣವಾಗಿವೆ. ಇಲ್ಲಿ ಮರಗಳು  ಪರಸ್ಪರ ಸ್ನೇಹ ಬೆಸೆಯುವ ಸುಲಭ ಸೂತ್ರವಾಗಬಹುದು. ಮರ ಗಿಡ ಬೆಳೆಸುವ ಆಸಕ್ತಿ ಇಡೀ ಕಾಲನಿಯ ಎಲ್ಲ ಜನರಲ್ಲಿ ಎಕಕಾಲಕ್ಕೆ ಉದುಸುತ್ತದೆ, ನಾವು ಹೇಳಿದಾಕ್ಷಣ ಅವರೆಲ್ಲ ಗಿಡ ಬೆಳೆಸುತ್ತಾರೆ, ಇಡೀ ಪ್ರದೇಶ  ಒಮ್ಮೆಲೇ ಸಸ್ಯ ಸಮೃದ್ಧವಾಗುತ್ತದೆಂಬ  ಭ್ರಮೆ ಬೇಡ. ಆರಂಭದಲ್ಲಿ ಒಂದಿಬ್ಬರು ಗೆಳೆಯರು ಇಂತಹ ಕೆಲಸ ಶುರುಮಾಡಬೇಕು, ಟೀಕೆಗಳು ಬಂದರೆ ಕುಗ್ಗುವದು ಬೇಡ. ಶ್ರದ್ಧೆಯಿಂದ ಕೆಲಸ ನಡೆಯಲಿ, ಮನೆ ಮನೆ ತಲುಪುವ ಸಸಿಗಳು ಕ್ರಮೇಣ ಎಲ್ಲರ ಮನಸ್ಸು ಸೇರಿಸುವದರಲ್ಲಿ ಸಂದೇಹವಿಲ್ಲ. ಮರ ಬೆಳೆಸುವ  ಈ ಹಿತ್ತಲ ಮದ್ದು  ನಿಮ್ಮೊಳಗೂ ಪರಿವರ್ತನೆ ತರುತ್ತಿದೆಯೇ?. ಈಗ ಹೇಳಬೇಡಿ, ಗಿಡ ಬೆಳೆದು ಫಲ ಬಿಟ್ಟ ಬಳಿಕ ಮತ್ತೆ ಮಾತಾಡೋಣ !