ಇವಳು ಹಿಗ್ಗಿನ ಬುಗ್ಗೆ, ಋತು ವಸಂತನ ಲಗ್ಗೆ
ನಮ್ಮ ಮನೆಗೆ !
ದೇವಲೋಕದ ಹಣ್ಣು, ಕಲ್ಪವೃಕ್ಷದ ಕಣ್ಣು
ಮೂಡಿತಿಳೆಗೆ !
ಚಿಕ್ಕೆ ಬಳಗವೆ ಬಂದುವಿವಳಜೊತೆಗೆ !

ಹೊರಗೆ ಮಂಜಿರಲೇನು ? ಒಳಗೆ ನಿತ್ಯವು ಇವಳ
ನಗೆಮಲ್ಲಿಗೆ !
ಎಂದು ಬಡತನವಿಲ್ಲ ಅಕ್ಕರೆಯೊಳರಳಿರುವ
ಈ ಬಳ್ಳಿಗೆ !
ತುಂಬುದಿಂಗಳ ಹಣ್ಣು ಗೊನೆಗೆ ಗೊನೆಗೆ !

ಚಂದನದ ಗೊಂಬೆಗೂ ಜೀವ ತುಂಬುವ ಚದುರೆ
ಸೃಷ್ಟಿಮಾತೆ !
ಎಲ್ಲರಿಗು ತಾಯಾಗಿ ಲಾಲಿ ಹಾಡುವಳಿವಳು
ಲೋಕ ಮಾತೆ !
ತಾಯೊಲವು ತುಳುಕುತಿಹ ಜೀವಂತಗೀತೆ !

ತಾಯ ತೊಡೆಗದ್ದುಗೆಯೊಳೀಗ ಇವಳದೆ ಪೂರ್ಣ
ರಾಜ್ಯಭಾರ !
ಪುಟ್ಟ ಅಣ್ಣನಿಗೀಗ ರಾಜ್ಯಚ್ಯುತಿಯೊದಗಿಹುದು
ಅವನು ದೂರ !
ಇವರ ಕಿತ್ತಾಟದಲಿ ಸುಖ ಅಪಾರ !