ನಟುವಾಂಗ ಭಾರತೀಯ ನೃತ್ಯಗಳಲ್ಲಿ ಒಂದು ಪ್ರಮುಖ ಬಹಿಃಪ್ರಾಣ ನಟುವಾಂಗ ನುಡಿಸುವವರು ನರ್ತನದ ಸೂತ್ರವನ್ನು ಹಿಡಿದು ಎಲ್ಲೂ ವಿಘ್ನ ಬಾರದಂತೆ ನಡೆಸಿಕೊಂಡು ಹೋಗುವ ಮೇಧಾವಿಗಳು ಹಾಗೂ ಗುರುಗಳಾಗಿರುತ್ತಾರೆ. ಇವರ ಸ್ಥಾನವನ್ನು ಗುರು ಸ್ಥಾನವೆಂದು ಪರಿಗಣಿಸಲಾಗುತ್ತದೆ.

ಅಭಿನಯ ದರ್ಪಣದಲ್ಲಿ ನಂದಿಕೇಶ್ವರ ನರ್ತಿಸುವರರ ದಕ್ಷಿಣ ಭಾಗದಲ್ಲಿ ಅಂದರೆ ಬಲಭಾಗದಲ್ಲಿ ತಾಳಧಾರಿ ಇರಬೇಕೆಂದು ಹೇಳುತ್ತಾನೆ. ತಾಳಧಾರಿ ಅಂದರೆ ನಟುವಾಂಗದವರ ಎರಡೂ ಪಕ್ಕೆಗಳಲ್ಲಿ ಮೃದಂಗವಾದನಕಾರರು ಇರಬೇಕೆಂದು ಹೇಳುತ್ತಾನೆ.

ಹೀಗೆ ರಂಗ ಮಧ್ಯೆ ಸ್ಥಿತೇ ಪಾತ್ರೇ ತತ್ಸಮಿಪೇ ನಟೋತ್ತಮ
ದಕ್ಷಿಣೇ ತಾಲಧಾರಿಚ ಪಾರ್ಶ್ವದ್ವಂದ್ವೇಮೃದಂಗಿಕಾ !!

ಪಂಡರೀಕವಿಠಲ ತನ್ನ ನರ್ತನ ನಿರ್ಣಯದ ಮೊದಲ ಭಾಗದಲ್ಲಿ “ತಲಧಾರಿ ಪ್ರಕರಣಂ”ನಲ್ಲಿ ತಾಳಧಾರಿ ಅಂದರೆ ನಟುವಾಂಗದ ಬಗ್ಗೆ ಸವಿಸ್ತಾರ ವಿವರಣೆಯನ್ನು ನೀಡಿದ್ದಾನೆ.

ನರ್ತನದ ಪಂಚಅಂಗಗಳು

೧. ನಟುವಾಂಗದವರು

೨. ಮಾರ್ದಂಗಿಕರು

೩. ಗಾಯಕರು

೪. ನರ್ತನ ಕಲಾವಿದರು

೫. ನರ್ತನದ ವಸ್ತು ಮತ್ತು ಲಕ್ಷಣಗಳು

ನರ್ತನದ ಪಂಚ ಅಂಗಗಳಲ್ಲಿ ಮೊದಲ ಸ್ಥಾನದಲ್ಲಿರುವವರು ನಟುವಾಂಗದವರು

” ಲಕ್ಷ್ಯ ಲಕ್ಷಣ ಸಂಪನ್ನೋ ಗುಣವಾನ್‌ಪ್ರತಿಭಾಪಟುಃ
ಸಂಗೀತ ವಾದ್ಯ ನೃತ್ಯಸ್ಥ ಕಲಾಜ್ಞಾಸ್ತಾಲ ಧಾರ್ತೃಕ
(ನರ್ತನ ನಿರ್ಣಯ ಶ್ಲೋಕ ೪)

ನಟುವಾಂಗದವರು ನರ್ತನ ಶಾಸ್ತ್ರ ಮತ್ತು ಪ್ರಯೋಗ ಎಡರೂ ವಿಭಾಗಗಲ್ಲಿ ನುರಿತವರೂ, ಅತ್ಯಂತ ಪ್ರತಿಭಾಶಾಲಿಗಳು, ಗೀತ- ವಾದ್ಯ – ಸಂಗೀತ – ನರ್ತನದ ಕಲಾ ಪ್ರಮಾಣ ಮತ್ತು ತಾಳ ಪ್ರಮಾಣದ ಮೇಲೆ ಪ್ರಭುತ್ವ ಪಡೆದವರೂ ಆಗಿರುತ್ತಾರೆ. ಈ ಲಕ್ಷಣಗಳನ್ನು ಪಡೆದವರು ಗುರುಗಳಾಗಿರುತ್ತಾರೆ. ಆದ್ದರಿಂದ ನರ್ತನ ಕಾರ್ಯಕ್ರಮದಲ್ಲಿ ಗುರುವಿನ ಸ್ಥಾನ ಅತ್ಯಂತ ಹಿರಿದು.

ನಟುವಾಂಗದ ಬಗ್ಗೆ ಒಂದು ಅಧ್ಯಯನ ನಡೆಸುವಾಗ ಹಲವು ವಿಚಾರಗಳು ನಮ್ಮ ಕುತೂಹಲವನ್ನು ಜಾಗೃತಗೊಳಿಸುತ್ತದೆ. ನಟುವಾಂಗದವರ ಲಕ್ಷಣಗಳೇನು ? ನುಡಿಸುವಾಗ ಯಾವ ಪಾಠಾಕ್ಷರಗಳು ಬರುತ್ತವೆ ? ಅದರಲ್ಲಿ ವಿಹಿತವಾಗಿರುವ ವಿಧಾನಗಳೇನು ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ.

೧. ನಟುವಾಂಗ ನುಡಿಸುವವರ ಲಕ್ಷಣಗಳು- ನಟುವಾಂಗದವರು ರಂಗಮಂಡಲಿಯ ಪ್ರಥಮ ಸ್ಥಾನವನ್ನು ಪರಿಗ್ರಹಿಸುತ್ತಾರೆ. ಅವರು ನೋಡಲು ಸುಂದರವಾಗಿದ್ದು ಆಕರ್ಷಕ ಭಂಗಿಯಲ್ಲಿ ಕುಳಿತು ಕೊಳ್ಳಬೇಕು. ವಿನೀತ ಭಾವಯುತವಾಗಿರಬೇಕು. ತಾಳಗಳ ತಾಡನಕ್ರಿಯೆಯಲ್ಲಿ ಪಟುತ್ವವನ್ನು ಹೊಂದಿರಬೇಕು. ಯತಿತಾಳ ಲಯಜ್ಞನಾಗಿರಬೇಕು. ತಾಳದ ಗ್ರಹ, ಸಮ, ಅತೀತ, ಅನಾಗತಗಳಲ್ಲಿ ಖಚಿತತೆ ಇರಬೇಕು. ತಾಡನ ಕ್ರಿಯೆಯಲ್ಲಿ ಮೃದುತ್ವವಿದ್ದು ಘಾತಗಳನ್ನು ನುಡಿಸುವಲ್ಲಿ ಕೈಗಳು ಚುರುಕಾಗಿ ಚಲಿಸಬೇಕು. ಹೇಳುವ ಸೊಲ್ಲು ಕಟ್ಟುಗಳ ಜೊತೆ ನುಡಿಸುವ ಗ್ರಹ-ಮೋಕ್ಷಗಳಲ್ಲಿ ಖಚಿತತೆ ಇರಬೇಕು. ಆಯಾಸವನ್ನು ತಡೆಯುವ ಶಕ್ತಿ ಇರಬೇಕು. ತಾಡನದ ಇಂಪು (ಸಂಚಗಳು) ಕೊಡುವುದರಲ್ಲಿ ಕಲ್ಪನಾಶಕ್ತಿ ಇರಬೇಕು. ಅತ್ಯಂತ ಸೂಕ್ಷ್ಮಗ್ರಾಹಿಗಳಾಗಿ ಜಾಗರೂಕತೆಯಿಂದ ಇರಬೇಕು. ದೇಶಿತಾಳಗಳನ್ನು ಅಭ್ಯಾಸಮಾಡಿ ಅದರಲ್ಲಿರುವ ಸೌಂದರ್ಯ ತತ್ವವನ್ನು ಪ್ರಭಾವಶಾಲಿಯಾಗಿ ವಿಶದ ಪಡಿಸುವವರಾಗಿರಬೇಕು. ನಾಲ್ಕು – ಐದು ಕಡೆ ಗಮನವನ್ನು ಏಕಕಾಲದಲ್ಲಿ ಹರಿಸುವ, ನಿರ್ವಹಿಸುವ ಏಕಾಗ್ರತೆ ಇಂದ “ಅವಧಾನ” ವನ್ನು ಕರಗತಮಾಡಿಕೊಂಡಿರಬೇಕು. ನಟುವಾಂಗವನ್ನು ನುಡಿಸಿದಾಗ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯುವ ಕ್ಷಮತೆ ಇರಬೇಕು ಎಂದು ಪಂಡರೀಕ ವಿಠಲ ನರ್ತನ ನಿರ್ಣಯದಲ್ಲಿ ವಿವರಿಸುತ್ತಾನೆ.

೨. ನಟುವಾಂಗ ತಾಳದ ಲಕ್ಷಣಗಳು – ತಾಳಗಳು ಘನವಾದ್ಯ, ಇವುಗಳನ್ನು ಕಂಚಿನಿಂದ ಮಾಡಲ್ಪಟ್ಟ ವೃತ್ತಾಕಾರದಲ್ಲಿ ಹೊಳಪಿನಿಂದ ಕೂಡಿದವುಗಳಾಗಿರುತ್ತವೆ. ಮೊದಲು ತಾಳಗಳು ವಿಶ್ವಕರ್ಮನಿಂದ ರೂಪಿಸಲ್ಪಟ್ಟುವು. ಇವುಗಳಲ್ಲಿ ಒಂದು ತಾಳವನ್ನು ಶಕ್ತಿ ಎಂದೂ ಮತ್ತೊಂದನ್ನು ಶಂಕರನೆಂದು ಪರಿಗಣಿಸಲಾಗುತ್ತದೆ. ಏಡಕೈಯಲ್ಲಿ ಹಿಡಿಯುವ ತಾಳ ಶಕ್ತಿ. ಇದು ಪಾರ್ವತಿಯ ದ್ಯೋತಕ, ಇದರ ನಾದ ಹಾಗೂ ಮೃದು. ಬಲಗೈಯಲ್ಲಿ ಹಿಡಿಯುವ ತಾಳಗಳನ್ನು ಒಂದು ಮೊಳ ರೇಷ್ಮೆ ಹಗ್ಗದ ಎರಡೂ ತುದಿಗಳಿಗೆ ಕಟ್ಟಬೇಕು. ತಾಳದಿಂದ ಅಪ್ಯಾಮಾನವಾದ ನಾದವನ್ನು ಹೊರಡಿಸುವ ಶಕ್ತಿಯನ್ನು “ಅರಾಲ”, ಹಸ್ತದಿಂದ ಮಾತ್ತು ಶಿವನನ್ನು “ಕಪಿಸ್ಥ” ಹಸ್ತದಿಂದ ಹಿಡಿಯಬೇಕು ಎಂದು ಹೇಳಲಾಗಿದೆ. ಶಕ್ತಿಯನ್ನು ಅಡ್ಡವಾಗಿ ಮುಖದ ಎದುರಿಗೆ ಹಿಡಿಯಬೇಕು. ಬಲಗೈ ತಾಳವನ್ನು ಎಡಗೈ ತಾಳದ ಮದ್ಯ ಮತ್ತು ತುದಿಯಲ್ಲಿ ತಾಗಿಸುವುದರಿಂದ ವಿವಿಧ ಶಬ್ದಗಳು ಬರುತ್ತವೆ. ಕೈ ಹೊಡೆತವನ್ನು ಶಕ್ತಿಯಿಂದ ಶಂಕರನಿಗೆ ವರ್ಗಾಹಿಸಬೇಕೆ ಹೊರತು ಶಂಕರನಿಂದ ಶಕ್ತಿಯನ್ನು ಹೊಡೆತದಿಂದ ಕುಟ್ಟಬಾರದು. ಇದನ್ನು ಪಾಲಿಸದಿದ್ದಾಗ ನುಡಿಸುವಿಕೆ ದೋಷಪೂರ್ಣವೆಂದು ಪಂಡರೀಕವಿಠಲ ಹೇಳುತ್ತಾನೆ. ನುಡಿಸುವಾಗ ನುಡಿಕಾರ ಶಿವನಿಂದ ಶಕ್ತಿಯ ಮೇಲೆ ಬರುತ್ತದೆಯೋ ಹೊರತು ಶಕ್ತಿ ಇಂದ ಶಿವನ ಮೇಲೆ ಪ್ರಹಾರ ನಡೆಸಿ ನುಡಿಕಾರ ಹೊರಡಿಸಬಾರದು. ಮತ್ತೊಂದು ವಿಚಾರವನ್ನು ಗಮನದಲ್ಲಿಡಬೇಕು. ಹಾಡುವವರ ಶೃತಿಗೆ ಅನುಗುಣವಾಗಿ ತಾಳದ ಶೃತಿಯೂ ಸೇರಬೇಕು, ಇಲ್ಲದಿದ್ದರೆ ತಾಳದ ನಾದ ದೋಷಪೂರ್ಣವಾಗಿ ತೋರುತ್ತದೆ.

೩. ಪಾಠ :- ವಾದ್ಯ ಪ್ರಧಾನ ಅಕ್ಷರಗಳು ಸೊಲ್ಲುಕಟ್ಟನ್ನು ಹೇಳುವಾಗ, ಪಾಠಾಕ್ಷರಗಳನ್ನು ನಟುವಾಂಗದಲ್ಲಿ ನುಡಿಸಲಾಗುತ್ತದೆ. ಇವುಗಳನ್ನು ಪಾಠಾಕ್ಷರಗಳೆಂದು ಕರೆಯಲಾಗುತ್ತದೆ. ಸೊಲ್ಲು ಕಟ್ಟಿನ ಪಾಠಾಕ್ಷರಗಳು – ೨೦.

ಕ, ಖ, ಗ, ಘ, ಟ, ಠ, ಡ, ಢ, ಣ, ತ, ಥ, ದ, ಧ, ನ, ರ, ಹ, ಮ, ಲ, ಜ, ಝ. ಈ ಅಕ್ಷರಗಳನ್ನು ವಿವಿಧ ರೀತಿಯಾಗಿ ಜೋಡಿಸಿ ಸಂಗೀತದ ಸ್ವರಗಳಂತೆ ಸಮಧುರವಾಗಿ ಹೇಳಲ್ಪಡುತ್ತದೆ. ಪಾಠಗಳಲ್ಲಿ ೪ ವಿಧ.

೧.    ಶುದ್ಧ ಪಾಠ – ತ, ಧಿತ್‌, ಥೋಂ, ಟೇಂ, ಹೆಂ, ದೆಂ

೨.    ವ್ಯಾಪಕ ಪಾಠ – ಶುದ್ಧ ಪಾಠಾಕ್ಷರಗಳನ್ನು ಮೇಲೆ ಹೇಳಿದ ೨೦ ಪಾಠಾಕ್ಷರಗಳೊಡನೆ ಸೇರಿಸಿ ಹೇಳುವುದು. ಉದಾ: ತಕ, ತಕಧಿತ್‌, ಣಥೋಂ ಝನೆಂ ಇತ್ಯಾದಿ.

೩.    ಕೂಟ ಪಾಠ – ಶುದ್ಧ  ಪಾಠಾಕ್ಷಗಳನ್ನು ಬಿಟ್ಟು ಹೇಳುವುದು. ಉದಾ: ಕ, ಧಿತ್‌ಇತ್ಯಾದಿ.

೪.   ಖಂಡ ಪಾಠ – ಶುದ್ಧ ಮತ್ತು ಕೂಟ ಪಾಠಾಕ್ಷಗಳನ್ನು ಸೇರಿಸಿ ಹೇಳುವುದು. ಉದಾ: ತ – ಕ, ತ – ಧಿತ್‌, ಥೋಂ – ಧಿತ್‌.

ಈ ಪಾಠಕ್ಷರಗಳನ್ನು ಪುಷ್ಕರವಾದ್ಯಗಳಲ್ಲಿ ಉಂಟಾಗುವ ಶಬ್ದನಾದವನ್ನು ಅನುಸರಿಸಿ ನಿರ್ಧರಿಸಲಾಗಿದೆ.

ದಂ = ಪಟಹ

ತೋಂ, ಥೋಂ = ಮೃದಂಗ

ಗುಂ = ಘಡಸ

ಘಂ = ಘಟ

ಢೇಂ = ಢವ

ಢಿಂ = ಢಕ್ಕ

ತಝೇಂ = ಹುಡುಕ್ಕಾ

ಧೋಂ = ದುಂಧುಭಿ

ಧಲಾಂ = ಭೇರಿ

ಡಂ = ಡಮರು

ರುಡುಂ = ರುಂಜ

ತುಂ = ಡಕ್ಕ ಮತ್ತು ಡಕ್ಕುಲಿ ಮತ್ತು ಕಂಬುಲ

ಥುಂ = ತುಂಬಕಿ

ಥಡಿಂ = ನಿಸ್ಸಾಣ

ಧಿಂ = ಸೆಲ್ಲುಕ

ದೌ = ತ್ರಿವಳಿ

ತಕ = ಕಂಚಿನ ತಾಳ (ಘನತಾಳ)

ಟೇಂ = ಕರಟಾ

ಮಿಕ್ಕ ಪಾಠಗಳು ಎಲ್ಲ ರೀತಿಯ ವಾದ್ಯಗಳಲ್ಲಿ ಹೊರಡುವಂತಹವು.

೪. ಅಲಂಕಾರಗಳು – ಪಾಠಗಳನ್ನು ಸೌಂದರ್ಯ ಪೂರ್ಣವಾಗಿ ವಿವಿಧ ರೀತಿಗಳಲ್ಲಿ ಜೋಡಿಸುವುದಕ್ಕೆ ಅಲಂಕಾರಗಳೆನ್ನುತ್ತಾರೆ.

ನಾವು ನೃತ್ಯಗಳಲ್ಲಿ ನೃತ್ತದಲ್ಲಿ ನೋಡುವ ಜತಿ ಅಥವಾ ಸೊಲ್ಲು ಕಟ್ಟುಗಳ ಗುಂಪುಗಳ ತಳಹದಿ ಅಲಂಕಾರದಲ್ಲಿದೆ. ಆಲಂಕರಣದಿಂದ ಒಂದು ವಸ್ತುವಿಗೆ ಮೆರಗು ಬರುವಂತೆ ಈ ಅಲಂಕಾರಗಳು ನಟುವಾಂಗ ಕ್ರಿಯೆಗೆ ಮೆರಗು ನೀಡುತ್ತದೆ ಮತ್ತು ಕಲಾತ್ಮಕತೆಯನ್ನು ಎತ್ತಿ ಹಿಡಿಯುತ್ತದೆ. ಆಲಂಕಾರಗಳಲ್ಲಿ ೧೩ ವಿಧಗಳಿವೆ.

೧.    ಸಮ – ಪಾಠಾಕ್ಷರಗಳು ಸಮಸಂಖ್ಯೆಯಲ್ಲಿ ಇರುತ್ತವೆ.
ಉದಾ: ತತದಿಕಿ, ತಕಢೇಂ, ಗಿನಗಿನ, ಢೇಂ (ತಕದಿಕು, ತಕದೀಂ, ಗಿನತಕ, ಧೀಂ)

೨.   ವಿಷಮ – ಪಾಠಾಕ್ಷರಗಳು ಬೆಸ ಸಂಖ್ಯೆಯಲ್ಲಿ ಇರುತ್ತವೆ.
ಉದಾ: ಢೇಂ ಕಟ್‌, ಡೇಂಕಿಟ, ಕುಕುಡೇ ( ಧೀಂಕಟ, ಧೀಂಕಿಟ, ಕುಕುತ)

೩.   ಚಕ್ರವಾಲ – ಇಂದು ಗುಂಪಿನಲ್ಲಿ ಮೊದಲು ಮತ್ತು ಕೊನೆ ಪಾಠಾಕ್ಷರಗಳು ಒಂದೇ ಆಗಿರುತ್ತದೆ.
ಉದಾ: ಕಿಟತಕ ತಧಿ ಕಿಟತಕ ತಕಗಿನ ಧಿಮಿಧಿ ತಕಗಿನ (ತಕ ತಗಿನತಿನ ಧಮಿದಿ ತಕ ತಗಿನ )

೪.   ಗ್ರಹಮುಕ್ತ – ಪಾಠಾಕ್ಷರ ಗುಂಪಿನ ಮೊಲದಕ್ಷರ ಮತ್ತು ಕೊನೆ ಅಕ್ಷರ ಒಂದೇ ಆಗಿರುತ್ತದೆ.
ಉದಾ: ಕಿಟ ಕಿಟ ಖಿರಟಕಿ. (ಥೋಂಗ ದಿಕುತಗ ಥೋಂ)

೫.   ಮುಕ್ತ ಗ್ರಹ – ಒಂದು ಪಾಠದ ಅಂತ್ಯ ಮತ್ತೊಂದು ಪಾಠದ ಪ್ರಾರಂಭವಾಗಿರುತ್ತದೆ.
ಉದಾ: ಥೋಂಗಿನಥೋಂ, ಥೋಂಗಿನ ತಕಥೋಂ ( ತರಿತ ಧಣ,ಧಣತ ಜಣು, ಜಣುತ, ದಿಮಿ ದಮಿತ ಕಿಟ)

೬.   ವರ್ಧಮಾನಕ – ಪಾಠಾಕ್ಷರಗಳ ಗುಂಪಿನಲ್ಲಿ ಒಂದೊಂದೇ ಅಕ್ಷರ ಹೆಚ್ಚಿಸುತ್ತಾ ಹೋಗುವುದು.
ಉದಾ: ಧೇಂ – ತಧೇಂ -ಜಗಢೇಂ – (ತೈ – ತಕ – ತಕಿಟ – ತಕದಿಮಿ )

೭.    ಪಾಠಾಕ್ಷರಗಳ ಗುಂಪಿನಲ್ಲಿ ಒಂದೊಂದೇ ಅಕ್ಷರ ಇಳಿಸುತ್ತ ಬರುವುದು.
ಉದಾ: ಕಿಟಕುಕುತಾ – ಕಿಣಂಗುಡೆಂ – ಕಿಣಡೆಂ ದಿಧಿ – ಧಿ
(ತಕತದಿಕುತಕ – ತಕದಿಕುತಕ – ತದಿಕುತಕ – ದಿಕುತಕ – ತದಿಕು -ತಕ – ತ)

೮.   ಚಂದ್ರಕಲ – ಪಾಠಾಕ್ಷರಗಳನ್ನು ಏರಿಸುತ್ತಾ ಹೋಗಿ ಇಳಿಸುತ್ತಾ ಒಂದಕ್ಷರಕ್ಕೆ ಬರುವುದು. ಏರಿಕೆಯನ್ನು ೧೬ ಅಕ್ಷರಗಳ ಗುಂಪಿನ ವರೆಗೆ ಏರಿಸುವುದು.
ಉದಾ: ತ- ಥಥ – ತಝೆಂತ, ತಕಝೆಂಝೆಂ ಗಿಣಂಗುತ ತರೆಂ.. ತಳಾಂಗುದೇಂ, ತದೋಂ, ದಿತಾಂ ಧಿ.

೯.    ಶೃಂಖಲ-ಒಂದು ಗುಂಪಿನ ಪಾಠಾಕ್ಷರಗಳ ಮಧ್ಯದ ಅಕ್ಷರ, ಮುಂದಿನ ಗುಂಪಿನ ಮೊದಲಕ್ಷರವಾಗಿರುತ್ತದೆ.
ಉದಾ: ತಗಟ ತಧಮಿತ – ತಧಿಗದೋ

೧೦. ಗತಾಗತ – ಪಾಠಾಕ್ಷರಗಳು ಒಂದೇ ಗುಂಪಿನಲ್ಲಿ ಮತ್ತೆ ಮತ್ತೆ ಪ್ರಯೋಗವಾಗಿರುತ್ತದೆ.
ಉದಾ: ಕಿಟಕಿಟತ – ಝೇಂತ ಝೇಂತರೆ.

೧೧. ಅರ್ಧಪ್ರತ್ಯಾಗತ – ಪಾಠಾಕ್ಷರಗಳು ಮುಂದುವರೆದು ಅರ್ಥದಿಂದ ಹಿಂತಿರುತ್ತದೆ.
ಉದಾ: ಕಿಟತಕ ಝೇಂ ಕುಕುಝೇಂ ಝೇಂ ( ತಕಿಟ ತಝಂತಝಂ – ಝಂತ ಝಂತ)

೧೨. ರೂಪರಂಜಕ – ರಂಜಕತ್ವವುಳ್ಳ, ಸ್ವೇಚ್ಛೆ ಇಂದ ರಚಿಸಲ್ಪಟ್ಟ ಪಾಠಾಕ್ಷರಗಳು.
ಉದಾ: ಧಿಮಿತ ದಿಮಿದಿಮಿ – ಧಮತಧಮಧಮ – ಕಿಟತಕಿಟ – ಕುಕುತ ಕಿಣಝೇ.

೧೩.  ಚಿತ್ರ – ಅಲಂಕಾರಗಳೆಲ್ಲಾ ಮಿಶ್ರವಾದಾಗ ಚಿತ್ರ ಆಗುತ್ತದೆ.
ಉದಾ: ಕಿಟಥೋ – ಥೋಂಗಿನಗಿನ ಥೋಂತಜೆಹಿ – ಕುಟಕಿತಕಣ ಹುಕುಝೇ.

೫. ಕವಿತ – ಸ್ಫೂರ್ತಿ ಇಂದ ಬಂದ ಕವಿತೆಯೊಡಗೂಡಿದ ಪಾಠಾಕ್ಷರಗಳು. ಇದರಲ್ಲಿ ಛಂದೋ ಬದ್ಧವಾದ ಕರ್ಣಾನಂದವಾದ ಶಬ್ದಗಳ ಜೋಡಣೆ ಇದ್ದು ಭಾವನೆಗಳನ್ನು ವ್ಯಕ್ತಪಡಿಸುವಂತಹದಾಗಿರುತ್ತದೆ. ಪುಪ್ಕರ ವಾದ್ಯಗಳ ಪಾಠಾಕ್ಷರಗಳು ಇರುತ್ತವೆ. ಈ ರಚನೆಗಳನ್ನು ಪುಷ್ಕರ ವಾದ್ಯದವರು ರಚಿಸುತ್ತಾರೆ. ಅವರಿಗೆ ಕವಿತ್ಯಾಕಾರರೆನ್ನುತ್ತಾರೆ. ಇದನ್ನು ತಾತುವಂ ಅಥವಾ ಕೌತುವಂ ಅಥವಾ ಕವಿತ ಎಂದು ಹೆಸರಿಸುತ್ತಾರೆ.

೬. ಸಂಚುಗಳು – ಕಂಚಿನ ತಾಳಗಳನ್ನು ಸೌಂದರ್ಯ ಪೂರ್ಣವಾಗಿ, ಚಲಿಸಿ ಕಿವಿಗಳಿಗೆ ಹಿತವಾದ ನಾದವನ್ನು ಉಂಟು ಮಾಡುವ ರೀತಿಗೆ ಸಂಚವೆನ್ನುತ್ತಾರೆ. ಸಾಧನೆ ಇಂದ ಇದನ್ನು ಕರಗತ ಮಾಡಿಕೊಳ್ಳಬೇಕು. ಸಂಚಗಳು ನರ್ತನ ಕಲಾವಿದರ ಕಾಲಿನ ನುಡಿಕಾರ. ಸೊಲ್ಲುಕಟ್ಟು ಹಾಗೂ ಸಂಗೀತದ ಮಾಧುರ್ಯ ಹಾಗೂ ಲಯವನ್ನು ವಿಶದಡಿಸುತ್ತದೆ. ಜೊತೆಗೆ ನರ್ತನದಲ್ಲಿ  ಬರುವ ಭಾವಗಳಿಗೂ ಪೂರಕವಾಗಿ ಇರುತ್ತದೆ. ಸಂಚುಗಳ ೧೦ ವಿಧ, ಈ ವಿಧಗಳ ಪ್ರಯೋಗವನ್ನು ಸತತ ಅಭ್ಯಾಸದಿಂದ ಪರಿಣಿತಿ ಪ್ರಾಪ್ತವಾಗುತ್ತದೆ.

೧.    ಕಲ್ಪ – ತ್ತೇ, ತೆ, ಥೆ, ತು

೨.   ಚಿತ್ರ – ತಕ್ಕಿಡ, ಗಿಡದಗ ( ತಕ್ಕಿಟ ಕಿಟತಕ)

೩.   ಅದ್ದರ – ಧರಗಿಡ (ಧರಿಕಿಟ)

೪.   ದಿಗಿದಿಗಿ – ದಿಗಿದಿಗಿ

೫.   ಅರ್ಧಕರ್ತರಿ – ತ – ಕ – ತಕ ( ತಕ ತಕ ತಕ ತಕ)

೬.   ಕರ್ತರಿ – ಧರಿಗಿಡ ದಿಗಿದಿಗಿ (ಧರಿಕಟ ದಿಗಿದಿಗಿ)

೭.   ಉರುಟು – ಧಿರಿಗಿಡ (ಧಿರಿಕಿಟ)

೮.   ದದ್ದ – ದದ್ದ ದದ್ದ ದದ್ದ ದದ್ದ

೯.    ಝೆಂಕೃತಿ – ಝೇಂ ಝೇಂ ಝೇಂ ಝೇಂ

೧೦. ಅವಧಾನಕ – ಖಿ – ರಿ ಯ ಪುನಾವರ್ತನೆ

೭. ನಟುವಾಂಗ ನುಡಿಸುವಾಗಿನ ಭಂಗಿಗಳು – ನಟುವಾಂಗ ನುಡಿಸುವಾಗಿನ  ಶಾರೀರಿಕ ಭಂಗಿಗಳನ್ನು ಸ್ಥಾನಕಗಳು ಎನ್ನುತ್ತಾರೆ. ಈಗ್ಗೆ ಇನ್ನೂರು ವರ್ಷಗಳ ಹಿಂದೆ ನರ್ತನ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರು ನಟುವಾಂಗದವರ ಜೊತೆ ಪೂರ್ವಾಭಿಮುಖವಾಗಿ ಕಲಾವಿದರ ಹಿಂದೆ ನಿಂತು ನಟುವಾಂಗವನ್ನು ನಿರ್ವಹಿಸುತ್ತಿದ್ದರು. ಆದರೆ ನಂತರ ಕಲಾವಿದ ಬಲಭಾಗದಲ್ಲಿ ಸಹಕಲಾವಿದರು ಕುಳಿತು ಸಂಗೀತ ಸಹಕಾರ ನೀಡಲಾರಂಭಿಸಿದರು. ನರ್ತನ ನಿರ್ಣಯ ಗ್ರಂಥದ ರಚನಾಕಾಲದಲ್ಲಿ ನಟುವಾಂಗದವರು ಹಿಂದೆ ನಿಲ್ಲುತ್ತಿದ್ದ ಕಾರಣ ಅವರಿಗೆ ಸ್ಥಾನಕಗಳನ್ನು ಹೇಳಿದ್ದಾರೆ – ಅವುಗಳು ೭ ವಿಧ.

೧.    ಸಂಹತ – ಸ್ವಾಭಾವಿಕ ನಿಲುವು – ಹೆಬ್ಬೆರಳು ಮತ್ತು ಹಿಮ್ಮಡಿಗಳು ಒಂದನ್ನೊಂದು ತಗುಲುತ್ತಾ ಇರುತ್ತವೆ.

೨.    ಸಮಪಾದ – ಸ್ವಾಭಾವಿಕ ನಿಲುವು ಪಾದಗಳು ಒಂದು ಗೇಣು ದೂರದಲ್ಲಿ ಇರುತ್ತವೆ.

೩.    ವೈಶಾಖ – ಪಾದಗಳು ಓರೆಯಾಗಿದ್ದು ಮೂರು ಗೇಣು ಅಂತರದಲ್ಲಿದ್ದು, ತೊಡೆಯು ತಿರುಗಿರುತ್ತದೆ.

೪.   ವೈಷ್ಣವ – ಒಂದು ಹೆಜ್ಜೆ ಸಮ ಮತ್ತು ಇನ್ನೊಂದು ಪಾದ ಎರಡುವರೆ ಗೇಣು ಅಂತರದಲ್ಲಿ ಕಾಲು ಸ್ವಲ್ಪ ತಿರುಗಿರುತ್ತದೆ.

೫.   ಚತುರಶ್ರೀ – ಎರಡೂ ಪಾದಗಳು ತಿರುಗಿದ್ದು ಒಂದು ಮೊಳ ದೂರದಲ್ಲಿರುತ್ತದೆ.

೬.   ಅಲೀಢ – ಎರಡು ಪಾದಗಳು ತಿರುಗಿ ಐದು ಗೇಣು ಅಂತರದಲ್ಲಿ ಬಲ ತೊಡೆ ಬಗ್ಗಿರುತ್ತದೆ.

೭.   ಪತ್ಯಾಲೀಢ – ಎರಡು ಪಾದಗಳು ತಿರುಗಿ ಐದು ಗೇಣು ಅಂತರದಲ್ಲಿ ಬಲ ತೊಡೆ ಬಗ್ಗಿರುತ್ತದೆ.

ನರ್ತನದ ಪಂಚ ಅಂಗಳಲ್ಲಿ ತಾಲಧಾರಿ ಪ್ರಥಮ ಸ್ಥಾನದಲ್ಲಿದ್ದು, ಕಾರ್ಯಕ್ರಮದ ಸಂಪೂರ್ಣ ಹಿಡಿತ ಇವರ ಕೈಯಲ್ಲಿ ಇರುತ್ತದೆ. ಆದ್ದರಿಂದ ಗುರುಗಳೇ ನಟುವಾಂಗ ನಿರ್ವಹಣೆ ಮಾಡುವುದು ಮತ್ತು ಅವರಿಗೆ ಸಂಪೂರ್ಣ ಆಗು ಹೋಗುಗಳ ಬಗ್ಗೆ ತಿಳುವಳಿಕೆ – ಸಾಮರ್ಥ್ಯ ಇರುವುದರಿಂದಲೇ ನಟುವಾಂಗ ಕಲೆಯನ್ನು ಕರಗತ ಮಾಡಿಕೊಳ್ಳುವ ವಿದ್ಯಾರ್ಥಿಗಳು ನೃತ್ಯ ಬಂಧದಲ್ಲಿ ಬರುವ ಪಾಠಾಕ್ಷರಗಳು ಮತ್ತು ಆಲಂಕಾರಗಳನ್ನು ಸಂಚವನ್ನು ಅಳವಡಿಸಿ ಹೇಳುವುದನ್ನು ಅಭ್ಯಾಸ ಮಾಡಬೇಕು. ಆಗ ಧ್ವನಿಯ ಏರಿಳಿತಗಳಿಂದ ಘನವಾದ್ಯದಲ್ಲಿ ಮಾಡಬೇಕಾದ ನಾದ ತರಂಗಗಳ ಬಗ್ಗೆ ಅರಿವು ಮೂಡುತ್ತದೆ. ನಂತರ ನರ್ತನದಲ್ಲಿ ಸೊಲ್ಲುಕಟ್ಟುಗಳು ಯಾವ ರೀತಿ ನರ್ತಿಸಲಾಗುತ್ತದೆ ಎಂಬುದನ್ನು ಗಮನಿಸಿ ತಾಳಗಳನ್ನು ನುಡಿಸಬೇಕು. ಇದಕ್ಕೆ

ಪೂರ್ವ ಭಾವಿಯಾಗಿ ನರ್ತನದ ಅಡವುಗಳ ಸೊಲ್ಲು ಕಟ್ಟನ್ನು ಹೇಳುತ್ತಾ ನುಡಿಸುವುದನ್ನು ಕಲಿಯಬೇಕು. ಅಡವುಗಳ ಜೊತೆ ನುಡಿಸುವಾಗ ವೇಗವಾಗಿ

ನುಡಿಸುವ ಕೈಚಳಕ, ಅಕ್ಷರಗಳನ್ನು ಬಿಟ್ಟು ನುಡಿಸುವ ರೀತಿ, ವಿವಿಧ ರೀತಿಯಲ್ಲಿ ಸಶಃಬ್ದಗಳ ಪ್ರಯೋಗವನ್ನು ಗಮನಿಸಬೇಕು.

ನೃತ್ಯ ಬಂಧಗಳಿಗೆ ನುಡಿಸುವಾಗ ಅಪ್ಯಾಯಮಾನವಾಗಿ ಸೊಲ್ಲುಕಟ್ಟಿನ ರಚನಾಸೌಂದರ್ಯ ಎತ್ತಿ ಕಾಣುವಂತೆ ನುಡಿಸಿ, ಸಾಹಿತ್ಯಭಾಗ ಬಂದಾಗ ತಾಳದ ರೀತಿಯನ್ನು ತೋರಿಸಬೇಕು. ಸಾಹಿತ್ಯದ ಸಬ್ದಗಳು ಸರಿಯಾಗಿ ಕೇಳುವಂತೆ ಮೃದುವಾಗಿ ನುಡಿಸಬೇಕು.

ತಾಳ ನುಡಿಸುವುದರಲ್ಲಿ ಎರಡು ಸಶಃಬ್ದ ಕ್ರಿಯೆಗಳು ಮುಖ್ಯವಾಗಿವೆ.

೧. ಶಮ್ಯಾ – ಬಲಗೈ ತಾಳದಿಂದ ಎಡಕ್ಕೆ ತಾಳಕ್ಕೆ ಹೊಡೆಯುವುದು.

೨. ಸನ್ನಿಪಾತ – ಎರಡೂ ಕೈಗಳಿಂದ ಸಮಾನ ಬಲದಿಂದ ತಾಳಕ್ಕೆ ತಾಳವನ್ನು ಹೊಡೆಯುವುದು.

ತಾಳ ನುಡಿಸುವಾಗ ಬರುವ ನಿಶ್ಯಃಬ್ದ ಕ್ರಿಯೆ ಬಹುಮುಖ್ಯ. ನಿಶ್ಯಃಬ್ದ ಕ್ರಿಯೆಯ ಕಾಲಮಾಪನ ನುಡಿಸುವಲ್ಲಿ ಪ್ರಭಾವ ಶಾಲಿಯಾದ ಸೌಂದರ್ಯವನ್ನು ಹೊಮ್ಮಿಸುತ್ತದೆ. ಘನವಾದ್ಯವನ್ನು ಉಪಯೋಗಿಸುವ ಮೊದಲು ಮತ್ತು ನಂತರ ನಮಸ್ಕರಿಸುವುದು, ಶಮ್ಯಾ ಮತ್ತು ಸನ್ನಿಪಾತ ನುಡಿಸಿ ತಾಳಗಳನ್ನು ಬೇರ್ಪಡಿಸುವುದು, ಮುಕ್ತಾಯ ಮಾಡಿದಾಗ ಎರಡು ತಾಳಗಳನ್ನು ಜೋಡಿಸುವುದು ತಾಳಗಳನ್ನು ಬೀಳಿಸದೆ ಇರುವುದು, ತಾಳಗಳನ್ನು ನೆಲದ ಮೇಲೆ ಮುಚ್ಚಿಡದೇ ಇರುವುದು (ಮೊಗಚಬಾರದು), ತಾಳಗಳನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಇಡುವುದು ಮೊದಲಾದ ಕ್ರಮವನ್ನು ವಿದ್ಯಾರ್ಥಿಗಳು ಯಾವಾಗಲೂ ನಿರ್ವಹಿಸುವುದಕ್ಕೆ ಗಮನ ನೀಡಬೇಕು.

ನಟುವಾಂಗ ನರ್ತನ ಕಾರ್ಯದಲ್ಲಿ ಬೆನ್ನೇಲುಬು. ಕರ್ಣಾನಂದವಾದ ನಟುವಾಂಗ ಪ್ರೇಕ್ಷಕರನ್ನು ತನ್ಮಯಗೊಳಿಸಿ ಆನಂದವನ್ನು ನೀಡುತ್ತದೆ. ನರ್ತನ ಕಲಾವಿದರು ನಟುವಾಂಗದ ಬಗ್ಗೆ ವಿಸ್ತಾರವಾಗಿ ತಿಳಿದುಕೊಂಡು, ನರ್ತನದ ಅಂಗವಾಗಿ ಶಿಕ್ಷಣ ಪಡೆದರೆ ಗುರುಮುಖೇನ ಪ್ರಾಪ್ತವಾದ ವಿದ್ಯೆ ಆಸಕ್ತರಲ್ಲಿ ಹರಡಲು ಪ್ರಮುಖ ಸ್ಥಾನವನ್ನು ನಿರ್ವಹಿಸುತ್ತದೆ.

“ಪಂಡರೀಕ ವಿಠಲನ ನರ್ತನ ನಿರ್ಣಯ ಗ್ರಂಥ ಆಧಾರಿತ ಲೇಖನ. ಈ ಗ್ರಂಥವನ್ನು ಆಂಗ್ಲ ಭಾಷೆಗೆ ವ್ಯಾಖೆಯೊಡನೆ ತರ್ಜುಮೆ ಮಾಡಿರುವವರು, ಶ್ರೀ ಮಹಾಮಹೋಪೋದ್ಯಾಯ, ಸತ್ಯನಾರಾಯಣ ಅವರು ಇವರಿಗೆ ನಾನು ಕೃತಜ್ಞಳಾಗಿದ್ದೇನೆ. ಇವರ ಮೊದಲ ವ್ಯಾಖ್ಯಾ ಗ್ರಂಥ ಪುಂಡರೀಕಮಾಲಾ ಈ ಲೇಖನಕ್ಕೆ ನನಗೆ ಮಾರ್ಗದರ್ಶನ ನೀಡಿದೆ.