ನೀರವ ಕುಟೀರದಲ್ಲಿ ಕೂತು ನಟ್ಟಿರುಳಲ್ಲಿ
ಚಿಂತಾಮಗ್ನ ಆಚಾರ್ಯ ದ್ರೋಣ :
ಎಂಥ ಅವಿವೇಕದಲ್ಲಿ ನನ್ನ ತೊಡಗಿಸಿದೆ ದೇವರೇ,
ಘಟಿಸಬಹುದೇ ನನ್ನಿಂದ ಇಂಥ ನಿಷ್ಕರುಣ

ಕಿರಾತ ಕಾರ್ಯ ! ಎಂಥ ಕಾಡೊಳಗೆ ದಾರಿ
ತಪ್ಪುತ್ತ ಇದಾವ ಬಲೆಯೊಳಗೆ ಬಿದ್ದೆ ನಾನು ?
ಕಾಡ ಬೇಡರ ಹುಡುಗನನ್ನೇಕೆ ಕಾಡಿದೆನೊ ಹೀಗೆ
ಗುರುದಕ್ಷಿಣೆಯ ನೆಪದಲ್ಲಿ ಹೆಬ್ಬೆರಳನ್ನು ?

ಆ ಅವನೊ, ಕೇಳಿದೊಡನೆಯೇ ಹಠಾತ್ತಾಗಿ
ಕೊಟ್ಟೇ ಬಿಡುವುದೇ ಪೌರುಷದ ಪ್ರಾಣವನ್ನು?
ಅದನ್ನವನು ಕೊಡಲಾರೆನೆಂದು ನಿರಾಕರಿಸಿದ್ದ-
ರೊಳಿತಾಗಿತ್ತು, ಬದುಕಬಹುದಾಗಿತ್ತು ನಾನೂ.

ಸುತ್ತ ಹಲ್ಮೊರೆವ ಕಾಡು. ಬೆರಳನು ಕೊಟ್ಟು
ದೊಡ್ಡವನಾದ ಅವನು, ಕೇಳಿ ಕೀಳಾದೆ ನಾನು.
ಯಾವ ಹಂಗಿನ ಮಿಣಿಗೊ ಕೊರಳೊಡ್ಡಿ ಬೆರಳ
ಕೇಳಿದ ನನಗೆ, ಬೇರೆ ದಾರಿಯೇ ಇರಲಿಲ್ಲವೇನು?