ಜಗತ್ತಿನಲ್ಲೀಗ ಮಾರ್ಕ್ಸ್‌‌ವಾದಿ ಆರ್ಥಿಕ ತತ್ವಕ್ಕೆ ಮಾನ್ಯತೆ ಇಲ್ಲವಾಗಿದೆ. ನಮ್ಮ ದೇಶದಲ್ಲಿ ಗಾಂಧೀಜಿಯ ಆರ್ಥಿಕ ನೀತಿಯಂತು ಸಾಧ್ಯವಿಲ್ಲವಾಗಿದೆ. ಎಲ್ಲ ದೇಶದ ಸಮಾಜಗಳಿಗೂ ಅಭಿವರದ್ಧಿ ಆರ್ಥಿಕತೆಯ ಭ್ರಮೆ ಹಿಡಿದಿದೆ. ಕಾರ್ಪೋರೇಟ್ ಮಾದರಿಯ ಸರ್ಕಾರಗಳಿಂದಾಗಿ ಸ್ವತಃ ರಾಜಕಾರಣವೇ ಆರ್ಥಿಕ ವ್ಯವಸ್ಥೆಯನ್ನು ನಿರ್ಧರಿಸುತ್ತಿದೆ. ಸ್ವತಃ ಕನ್ನಡದ್ದೇ ಎನ್ನುವ ಆರ್ಥಿಕತೆಯೇ ಅಳಿದು ಹೋಗಿದ್ದು ಆರ್ಥಿಕ ವ್ಯವಸ್ಥೆಯು ಪರಕೀಯವಾದುದಾಗಿದೆ. ಜಾಗತೀಕರಣದ ಮಾರಾಟ ಜಾಲ ಹಾಗೂ ಅದರ ಉತ್ಪಾದನಾ ವಿಧಾನಗಳು ಸ್ಥಳೀಯ ಅರ್ಥ ವ್ಯವಸ್ಥೆಯನ್ನು ಮೂಲೆಗೊತ್ತರಿಸಿ ತನ್ನ ಆರ್ಥಿಕ ಸಾಮ್ರಾಜ್ಯವನ್ನು ವ್ಯಾಪಿಸಿಕೊಳ್ಳುತ್ತಿದೆ. ಸಮಾಜಗಳು ಏಕೀಕರಣಗೊಳ್ಳಲು ಉಂಟಾಗುವ ಜಾಗತೀಕರಣದ ಸಾಧ್ಯತೆಗಳು ತುಂಬ ಕಡಿಮೆಯಾಗಿವೆ. ತನ್ನ ಆರ್ಥಿಕ ದಿಗ್ವಿಜಯಗಳಿಗಾಗಿ ಸಮಾಜಗಳನ್ನೇ ಅನ್ಯ ಅಭಿರುಚಿಗಳಿಗೆ ಜಾಣ್ಮೆಯಿಂದ ರೂಪಾಂತರಿಸುವ ಜಾಲವು ವ್ಯವಸ್ಥಿತವಾಗಿ ಹಬ್ಬುತ್ತಿದೆ. ಸಮಾಜಗಳನ್ನೇ ಸಾರಾಸಗಟಾಗಿ ಖರೀದಿಸುವ ಉಪಾಯಗಳು ನಯವಂಚಕವಾಗಿವೆ. ಈ ಕ್ರೂರ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಅಳೆಯಲಾಗುತ್ತಿದೆ. ಜಗತ್ತಿನ ಎಲ್ಲ ಬಡ ಸಮಾಜಗಳು ಏಕೀಕರಣಗೊಳ್ಳುವುದಾದರೆ ಅಂತಹ ಜಾಗತೀಕರಣ ಬೇಕು ಎಂಬ ಆಶಯವು ತಪ್ಪಲ್ಲ. ಸಾಂಸ್ಕೃತಿಕ ಜಾಗತೀಕರಣದ ಸಂಸ್ಕೃತಿಗಳ ಮೂಲಕವೇ ಸಮುದಾಯಗಳು ಪುನರುಜ್ಜೀವನವನ್ನು ಕಂಡುಕೊಳ್ಳಬಹುದು ಎಂಬ ನಂಬಿಕೆಯು ವಿಶ್ವಾಸ ಕಳೆದುಕೊಳ್ಳುತ್ತಿದೆ. ಜಗತ್ತಿನ ಎಲ್ಲ ಸಮಾಜಗಳಿಗೆ ಅನುಭೋಗದ ಸುಖಬೇಕು. ಆದರೆ ವರ್ತಮಾನದ ಆರ್ಥಿಕತೆಯು ಸುಖಕ್ಕಾಗಿ ಯಾವುದೇ ಬಗೆಯ ಮಾರಾಟಕ್ಕೂ ಇಳಿಯಬಲ್ಲದು. ಅದರ ಸೌಂದರ್ಯದ ಒಳಗೆ ಬಲವಾದ ಕುರೂಪ, ಅನೀತಿ ಅಡಗಿರುತ್ತವೆ. ಕನ್ನಡ ಸಮಾಜದ ಆರ್ಥಿಕತೆಯ ಮೇಲೆ ಜಾಗತೀಕರಣದ ಮುಖವಾಡಗಳು ಹತ್ತಾರು ರೀತಿಯಲ್ಲಿದ್ದು ಒಟ್ಟು ಆರ್ಥಿಕ ವ್ಯವಸ್ಥೆಯು ನಿಯಂತ್ರಣ ಮೀರಿದೆ. ಹಣದುಬ್ಬರವೂ ವಿಪರೀತವಾಗುತ್ತಿದ್ದು, ಬೆಲೆ ಏರಿಕೆಗೆ ಯಾವ ನಿಯಂತ್ರಣಗಳು ಇಲ್ಲವಾಗುತ್ತಿವೆ. ಅಭಿವೃದ್ಧಿಯ ಕ್ರಮದಲ್ಲಿ ಬೆಲೆ ಏರಿಕೆಯು ಸಾಮಾನ್ಯ ಸಂಗತಿ ಎಂದು ಹೇಳುವುದು ನೈತಿಕವಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರ ಆಹಾರ ಸಮಸ್ಯೆ ಮತ್ತುಷ್ಟು ಹೆಚ್ಚುತ್ತಿದೆ. ಅಲ್ಲದೆ ಬಡತನದ ಕೆಳಗಿರುವವರ ಉದ್ಧಾರದ ಹೆಸರಲ್ಲೆ ಲೂಟಿಯೂ ನಡೆಯುತ್ತಿದೆ. ಮುಕ್ತ ಅವಕಾಶವು ತನ್ನ ತಂತ್ರದಿಂದಲೇ ಮುಂದೊಂದು ದಿನ ಏಕಸ್ವಾಮ್ಯ ಸಾಧಿಸಿ ಆಯ್ಕೆಗಳೇ ಇಲ್ಲದ ಏಕೈಕ ಅವಕಾಶವನ್ನು ಮಾತ್ರ ಹೇರಬಲ್ಲದು. ಕನ್ನಡ ಸಮಾಜದೊಳಗಿನ ಅನೇಕ ಬದಲಾವಣೆಗಳು ಇಂತಹ ಪರಿಸರದಿಂದ ತೀವ್ರವಾಗಿ ಆಗುತ್ತಿರುವುದು ಭವಿಷ್ಯವನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ. ಜಾಗತೀಕರಣವನ್ನು ನಿರಾಕರಿಸಲಾರದ ಸ್ಥಿತಿ ನಮ್ಮ ನಾಡಿನ ಆರ್ಥಿಕ ವ್ಯವಸ್ಥೆಯದು. ಸ್ವತಃ ದೇಶೀಯ ತಂತ್ರಜ್ಞಾನ, ಉತ್ಪಾದನಾ ವಿಧಾನಗಳು ಕೂಡ ಪರಕೀಯವಾಗಿದ್ದು, ಅವಲಂಬಿತ ಆರ್ಥಿಕ ಕ್ರಮಗಳಿಂದ ದಿಕ್ಕೆಟ್ಟಿವೆ.

ಈ ಸ್ಥಿತಿಯಲ್ಲಿ ಕೃಷಿ ವಲಯ ದಿನೇ ದಿನೇ ಕುಸಿಯುತ್ತಿದೆ. ರೈತರನ್ನು ಕಾಯದ ಆರ್ಥಿಕತೆಯನ್ನು ಸರ್ಕಾರಗಳೇ ಎಸಗುತ್ತಿವೆ. ಸರ್ಕಾರಗಳು ವಿದೇಶಿ ಆರ್ಥಿಕ ದಾಶ್ಯದಲ್ಲಿದ್ದು ದೇಶೀಯ ಕೃಷಿ ನೀತಿಯನ್ನು ಗಾಳಿಗೆ ತೂರಿವೆ. ಮಾರುಕಟ್ಟೆಯಲ್ಲಿ ರೈತರ ಗೋಳು ಅರಣ್ಯರೋಧನವಾಗಿದೆ. ಬೆಳೆದ ಬೆಲೆಗೆ ಯೋಗ್ಯ ಬೆಲೆ ಸಿಗದಿರಲು ಸರ್ಕಾರಗಳ ವೈಫಲ್ಯವೇ ಕಾರಣ. ರೈತರನ್ನು ಕಾಯದ ಕೃಷಿ ನೀತಿಗಳು ಮತ್ತಷ್ಟು ಕ್ರೂರವಾಗಿ ರೈತರನ್ನು ಶೋಷಿಸುತ್ತಿವೆ. ಕೃಷಿ ಚಟುವಟಿಕೆ ತೀವ್ರವಾಗಿದ್ದರೂ ಮಾರುಕಟ್ಟೆಯ ಹಂತದಲ್ಲಿ ಕೃಷಿ ವಲಯದ ಎಲ್ಲ ಯತ್ನಗಳು ವಿಫಲವಾಗುತ್ತವೆ. ಭೂಮಿಯ ಮೇಲಿನ ನಂಬಿಕೆಯೇ ರೈತರಿಗೆ ಇಲ್ಲವಾಗುತ್ತಿದೆ. ವಿಪರೀತ ರಾಸಾಯನಿಕಗಳಿಂದ ಭೂಮಿ ವಿಷವಾಗಿರುವುದಲ್ಲದೆ ಸತ್ವ ಹೀನವಾಗಿ ಬೆಳೆದ ಬೆಳೆಯೂ ವಿಷವಾಗುತ್ತದೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆದರೂ ವಿದೇಶಿ ಮಾರುಕಟ್ಟೆಯಲ್ಲಿ ಇಂತಹ ಬೆಳೆಗಳಿಗೆ ಮಾನ್ಯತೆ ಇಲ್ಲವಾಗಿದ್ದು ಬಳಸಲು ಅನರ್ಹವೆನಿಸಿದೆ. ಇಂತಹ ಫಸಲನ್ನೆ ತಿಂದು ಬೆಳೆಯುತ್ತಿರುವ ಎಳೆಯ ತಲೆಮಾರಿನ ಮೇಲೆ ಮುಂದೆ ಅನೇಕ ಸಮಸ್ಯೆಗಳು ಎದುರಾಗಲಿವೆ. ವಿಷಯುಕ್ತ ಪರಿಸರ, ಆಹಾರ, ಕೃಷಿ ಚಟುವಟಿಕೆಗಳಿಂದಾಗಿ ಜೀವಜಾಲ ಎಲ್ಲ ಉತ್ಪಾದನಾ ಕ್ರಮಗಳಲ್ಲೂ ಸಾಂಗವಾಗಿ ಬೆರಕೆಯಾಗುತ್ತಿದೆ.

ಕೃಷಿ ಕಾರ್ಮಿಕರ ಗೋಳು ಹೇಳತೀರದು. ಸ್ವತಃ ರೈತರೇ ಭೂಮಿಯನ್ನು ನಂಬದೆ ದಿಕ್ಕೆಟ್ಟಿರುವಾಗ ಅವಲಂಬಿತ ಕೃಷಿ ಕೂಲಿ ಕಾರ್ಮಿಕರು ತಕ್ಕ ಆರ್ಥಿಕ ಅವಕಾಶಗಳಿಲ್ಲದೆ ನಗರಗಳಿವೆ ವಲಸೆ ಹೊರಟು ವಿಷಯುಕ್ತ ನಗರೀಕೃತ ಉತ್ಪಾದನಾ ಜಾಲದಲ್ಲಿ ಸಿಲುಕುತ್ತಿದ್ದಾರೆ. ಸಾರ್ವಜನಿಕ ವಲಯದ ಉದ್ಧಮೆಗಳು ಬೀಗಮುದ್ರೆಗೊಳಪಡುತ್ತಿದ್ದು, ಖಾಸಗೀ ವಲಯದ ಪೈಪೋಟಿಯಲ್ಲಿ ರೋಗ ಗ್ರಸ್ಥವಾಗುತ್ತವೆ. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಲೂಟಿ ಮಾಡುತ್ತಿದ್ದು ರಾಜಕಾರಣಿಗಳೇ ಅಂತಹ ಸಂಸ್ಥೆಗಳ ನಷ್ಠಕ್ಕೆ ಪರೋಕ್ಷವಾಗಿ ಹೊಣೆಯಾಗುತ್ತಲೂ ಇದ್ದಾರೆ. ಸಾಂಪ್ರದಾಯಿಕ ಉತ್ಪಾದನಾ ವಿಧಾನಗಳಲ್ಲೆ ತೊಡಗಿರುವ ಉದ್ಯಮಗಳು ಜಾಗತಿಕ ಪೈಪೋಟಿಯಲ್ಲಿ ಸೋತು ಸುಣ್ಣವಾಗುತ್ತಿವೆ. ಕೌಶಲ್ಯವಿಲ್ಲದ ಕಾರ್ಮಿಕ ವರ್ಗವು ದಿಕ್ಕೆಟ್ಟಿದೆ. ಅಭಿವೃದ್ಧಿ ಭ್ರಮೆಯಲ್ಲಿ ಕರಕುಶಲ ಸಮುದಾಯಗಳ ಉತ್ಪಾದನಾ ವಿಧಾನವೇ ಕೊಚ್ಚಿ ಹೋಗಿದೆ. ಪ್ರಭುದ್ಧ ಉತ್ಪಾದನಾ ವಿವೇಚನೆ ಇರುವ ಕಾರ್ಮಿಕ ವರ್ಗವು ಆರ್ಥಿಕ ವ್ಯವಸ್ಥೆಯ ವಿರೂಪವನ್ನು ತಡೆಯಬಲ್ಲದು. ಅಂತಹ  ಪ್ರಭುದ್ಧ ಉತ್ಪಾದನಾ ಪರಿಸರವೇ ಇಲ್ಲವಾಗಿದೆ. ಈ ಪರಿಸ್ಥಿತಿಯಲ್ಲಿ ಸ್ವತಂತ್ರ ಆರ್ಥಿಕತೆಯನ್ನೆ ರೂಪಿಸಲು ಸಾಧ್ಯವಾಗುತ್ತಿಲ್ಲ. ಸ್ವದೇಶಿ ಬಂಡವಾಳಶಾಹಿ ವ್ಯವಸ್ಥೆಯೂ ವಂಚಕತನದ್ದೇ. ವಿದೇಶಿ ಬಂಡವಾಳಶಾಹಿಯೂ ಕ್ರೂರವಾದದ್ದೇ. ಇವೆರಡರ ನಡುವ ಸಮಾಜಗಳು ಸಿಕ್ಕಿಕೊಂಡಿವೆ. ಸರ್ಕಾರಗಳು ಬಂಡವಾಳಶಾಹಿಗಳ ಮಧ್ಯವರ್ತಿಯಂತೆ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ. ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವೂ ನಿಯಂತ್ರಿಸುತ್ತಿದೆ. ಕೇಂದ್ರದ ಆರ್ಥಿಕ ನೀತಿ ನಿರ್ದೇಶನಗಳು ಕರ್ನಾಟಕಕ್ಕೆ ಅನ್ಯಾಯವೆಸಗುವಂತಿವೆ.

ಈ ನಡುವೆ ಸ್ವತಃ ಸರ್ಕಾರಗಳೇ ವಿಶೇಷ ಆರ್ಥಿಕ ಅಭಿವೃದ್ಧಿ ವಲಯಗಳನ್ನು ಗುರುತಿಸಿ; ಆ ಮೂಲಕ ಖಾಸಗೀ ಬಂಡವಾಳಶಾಹಿಗಳಿಗೆ ರೈತರ ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಕಿತ್ತುಕೊಂಡು ಕೊಟ್ಟು, ದಲ್ಲಾಳಿಯಂತೆ ಕೆಲಸ ನಿರ್ವಹಿಸುತ್ತಿರುವುದು ಕನ್ನಡ ನಾಡು ಮುಂದೊಂದು ದಿನ ಬಂಡವಾಳಶಾಹಿಗಳಿಗೆ ಹಂಚಿಹೋಗುತ್ತದೆ ಎಂಬುದರ ಮುನ್ನುಡಿಯಂತಿದೆ. ಸರ್ಕಾರದಲ್ಲಿರುವ ಪ್ರತಿಷ್ಟಿತ ಅಧಿಕಾರಿ ವರ್ಗವು ಆರ್ಥಿಕ ವ್ಯವಸ್ಥೆಯ ಗುಪ್ತದಳದ ದಲ್ಲಾಳಿಗಳಂತೆ ’ಕರ್ತವ್ಯ’ ನಿರ್ವಹಿಸುತ್ತಿರುವುದನ್ನು ಗಮನಿಸಬಹುದು. ಶತಕೋಟಿ ಗಟ್ಟಲೆ ಲಂಚದ ದಂಧೆಯು ರಾಜಕಾರಣಿಗಳ ಜೊತೆಗೂಡಿ ಆಡಳಿತ ವರ್ಗವೂ ಎಸಗುತ್ತಿರುವುದು ಲೂಟಿಕೋರತನವನ್ನೆ ಅಭಿವೃದ್ಧಿ ಎಂಬಂತೆ ಮಾಡುತ್ತಿದೆ. ಇಡೀ ಆರ್ಥಿಕ ಚಟುವಟಿಕೆಗಳನ್ನು ಸರ್ಕಾರವು ರಾಜಕೀಯ ಉದ್ದೇಶಗಳಲ್ಲೂ ಮಾಡುವುದಿದೆ. ಸಾರ್ವಜನಿಕ ಸೇವಾ ವಲಯದ ರಾಜ್ಯದ ಕರ್ತವ್ಯಗಳಲ್ಲೂ ಭಯಾನಕವಾದ ಲಂಚದ ಜಾಲವು ಕೋಟಿಗಟ್ಟಲೆ ಹಣವನ್ನು ನುಂಉಗತ್ತಿದೆ. ಅಭಿವೃದ್ಧಿ ಆರ್ಥಿಕತೆ ಎನ್ನುವುದು ಮೂಲತಃ ಒಂದು ಬೃಹತ್ ವ್ಯಾಪಾರ. ಆರ್ಥಿಕ ಚಟುವಟಿಕೆಗಳು ಉದ್ದಾರದ ಹೆಸರಿನಲ್ಲಿ ಹಣ ಹಂಚಿಕೊಂಡು ತುಂಬಲಾಗದ ನಷ್ಟವನ್ನು ತೋರುತ್ತವೆ. ಇಂತಹ ಅಪ್ರಮಾಣಿಕ ಆರ್ಥಿಕತೆಯಿಂದಲೇ ಬೆಲೆಗಳು ವರ್ಷವೊಂದರಲ್ಲೆ ಹಲವು ಬಾರಿ ಏರಿಕೆಯಾಗುತ್ತಲೇ ಹೋಗುವುದು. ಇದೇ ಹಂತದಲ್ಲಿ ಹಣದ ಮೌಲ್ಯವು ಕಳೆದು ಹೋಗುತ್ತಿದ್ದು, ಅತಿಯಾದ ಹಣದ ವ್ಯವಹಾರವು ಆರ್ಥಿಕ ವಲಯದ ಸಹಜ ಚಲನೆಯನ್ನು ಭ್ರಷ್ಠಗೊಳಿಸಿ ಪ್ರಗತಿಯನ್ನು ತಡೆಯುತ್ತದೆ. ವರ್ತಮಾನದ ಕನ್ನಡ ಸಮಾಜದಲ್ಲಿ ಹಣ ವಿಶೇಷವಾಗಿ ಬೆಳೆಯುತ್ತಿದೆಯೇ ಹೊರತು ಬಡವರ ನಿಜವಾದ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಭೂಮಿಯನ್ನೆ ನಂಬಿದವರ ಪಾಡನ್ನು ಹಣದ ಸಮಸ್ಯೆ ವಿಪರೀತ ಕಾಡುತ್ತಿದ್ದು; ಸಾಲದ ಭಾದೆಯಿಂದ, ಮಾಡುಕಟ್ಟೆಯ ಕ್ರೌರ್ಯದಿಂದ, ಸರ್ಕಾರಗಳ ಹೊಣೆ ಗೇಡಿತನದಿಂದ, ಸಾಮಾಜಿಕ ಸಂಕಷ್ಟಗಳಿಂದ ಅವರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಸಮಾಜವನ್ನು ಕಾಯಬೇಕಾದದ್ದು ಆರ್ಥಿಕ ವಲಯ. ದುಡಿಮೆಯ ಅರ್ಥವೇ ಕಳೆದು ಹೋಗುತ್ತಿದ್ದು ವಂಚಿಸುವುದೇ ದುಡಿಮೆ ಎಂದಾಗಿದೆ. ಮಾರುಕಟ್ಟೆಯಲ್ಲಿ ಸುಳ್ಳನ್ನು ನಂಬಿಸುವುದು. ಸುಳ್ಳನ್ನು ಬೆಳೆಸುವುದು, ಹುಸಿಯನ್ನೆ ಮಾನದಂಡವಾಗಿಸಿಕೊಳ್ಳುವುದು ದುಡಿಮೆ ಎನಿಸಿರುವುದು ನಿಜವಾದ ಆರ್ಥಿಕ ಚಟುವಟಿಕೆಯಲ್ಲ. ಮಾರುಕಟ್ಟೆಯ ಪರಿಭಾಷೆಯೇ ಪರಮ ವಂಚನೆಯದಾಗಿದ್ದು, ಇದನ್ನು ಸಾಧಿಸಲು ಸುಳ್ಳು ಅಥವಾ ಜಾಹಿರಾತು ಪ್ರಬಲ ಅಸ್ತ್ರವಾಗುತ್ತಿದೆ. ಜಾಹಿರಾತಿನ ಮೂಲಕವೇ ಸರ್ವೋದಯವನ್ನು ಸಾಧಿಸಿದಂತೆ ಸುಳ್ಳನ್ನು ಸರ್ಕಾರಗಳೇ ಸಾರುತ್ತಿವೆ.

ಹಾಗೆ ನೋಡಿದರೆ ಕನ್ನಡ ನಾಡಿನ ಪ್ರಬಲ ರಾಜಕಾರಣಿಗಳೇ ಕರ್ನಾಟಕದ ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿ ಪಾಲು ಪಡೆಯುತ್ತಿರುವುದು. ಭ್ರಷ್ಟಾಚಾರ ಅಭಿವೃದ್ಧಿ ಕೆಲಸಗಳ ಮಾಮೂಲು ವಿಚಾರ ಎಂಬಂತಾಗಿದೆ. ಹೀಗಾದಲ್ಲಿ ಗಾಂಧೀಜಿಯ ಸರ್ವೋದಯದ ಆರ್ಥಿಕ ನೀತಿಗಾಗಲಿ ಮಾರ್ಕ್ಸ್‌ವಾದದ ವರ್ಗ ಕ್ರಾಂತಿಯ ಕನಸಾಗಲಿ ಸಾಧ್ಯವಾಗಲಾರದು. ಸಮಾಜಗಳು ಅಂತಹ ಆಯ್ಕೆಯನ್ನು ಕಳೆದುಕೊಂಡು ಈಗಾಗಲೇ ಬಹಳ ಮುಂದೆ ಬಂದು ಅಭಿವೃದ್ಧಿ ಎಂಬ ರೈಲು ಹತ್ತಿ ದಿಕ್ಕಿಲ್ಲದ ನೆಲೆಗೆ ಬಂದು ಕಂಗೆಟ್ಟಿವೆ. ಜಾಗತೀಕರಣದ ಹಡಗು ಹತ್ತಿ ದೂರ ದಿಗಂತ ತಲುಪಬಹುದು ಎಂಬ ಅತಿ ಚಿಕ್ಕ ಕನಸು ಕೂಡ ಅರ್ಥ ಹೀನವೆನಿಸಿಬಿಟ್ಟಿದೆ. ಆದರೆ ಬಲವಂತವಾಗಿ ಹಡಗಿನಲ್ಲೊ, ರೈಲಿನಲ್ಲೊ ವಿಮಾನದಲ್ಲೊ ಯಾವುದೊ ಒಂದು ಮಾಯಾ ಜಾಲದಲ್ಲಿ ಕಿಂದರಿ ಜೋಗಿಯು ಹೊಸ ಕನಸಿನ ಲೋಕ ತೋರುವುದಾಗಿ ಹಳ್ಳಿಯ ಎಲ್ಲ ಮಕ್ಕಳನ್ನು ಹೊಳೆ ನಡುವಿನ ಆಳಕ್ಕೆ ಸಮ್ಮೋಹಕವಾಗಿ ಕರೆದುಕೊಂಡು ಹೋದಂತೆ ನಮ್ಮ ಸರ್ಕಾರಗಳೇ ರೂಪಿಸಿಕೊಳ್ಳುತ್ತಿರುವ ಆರ್ಥಿಕ ಚುಟವಟಿಕೆಗಳು ಎಲ್ಲ ಸಮಾಜಗಳನ್ನು ಎಳೆದುಕೊಂಡು ಹೋಗುತ್ತಿವೆ. ಇಂತಲ್ಲಿ ಆಯ್ಕೆಯೇ ಇಲ್ಲ. ಪ್ರತಿರೋಧವೇ ಇಲ್ಲ. ಸ್ವ ಅಸ್ತಿತ್ವದ ಪ್ರಬಲ ವಿವೇಚನೆಯೂ ಇಲ್ಲ. ಅನುಕರಣೆಯ ಅಮಲು ಅಭಿವೃದ್ಧಿಯ ಮೋಡಿಯಾಗಿದೆ. ಅಮಲಿನ ಮೋಡಿಯ ಅಭಿವೃದ್ಧಿಯಿಂದ ನಾಡುನುಡಿ ಬಹಳ ಕಾಲ ಉಳಿಯಲಾರದು. ಜಗತ್ತಿನ ಒಟ್ಟು ಜಾಯಮಾನವೇ ಈಗ ಅಭಿವೃದ್ಧಿ ಅಮಲಿನ ಕೇಡಿಗೆ ಹೀಡಾಗಿ ಅದರ ಚಟದಲ್ಲಿ ಹಿಂದುಳಿದ ಸಮಾಜಗಳನ್ನು ಸಾರಾಸಗಟಾಗಿ ಖರೀದಿಸಿ ಕಚ್ಛಾ ವಸ್ತುವಿನಂತೆ ಬೆಳೆಸುತ್ತಿದೆ. ಹಾಗೆಯೇ ಇಂತಹ ದೇಶಗಳ ಒಟ್ಟು ನೈಸರ್ಗಿಕ ಸಂಪತ್ತನ್ನು ಸ್ವತಃ ತಮಗೆ ತಾವೇ ಸರ್ಕಾರಗಳ ಮೂಲಕವೇ ವಿದೇಶಿ ಕಂಪನಿಗಳು ಕೊಳ್ಳೆ ಹೊಡೆದು ಆರ್ಥಿಕತೆಯ ಹೆಸರಿನಲ್ಲಿ ಪರಿಸರವನ್ನೆ ನಾಶಪಡಿಸುತ್ತಿವೆ. ಪರಿಸರವನ್ನು ವಿನಾಶಕ್ಕೀಡುಮಾಡಿ ಉತ್ಪಾದಿಸುವುದು ಅಭಿವೃದ್ಧಿಯೇ ಅಲ್ಲ. ಅದು ಲೂಟಿ ಕೋರತನ. ಕರ್ನಾಟಕದ ಗಣಿ ಉದ್ದಿಮೆಗಳ ಅಪರಾವತಾರಗಳು ಹೇಗೆ ನಾಡಿನ ಖನಿಜ ಸಂಪತ್ತನ್ನೂ ಮಾನವ ಸಂಪತ್ತನ್ನೂ ಬಡ ಕಾರ್ಮಿಕರ ಜೀವವನ್ನೂ ಹಿಂಡುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಿದರೆ ಯಾವ ಬಗೆಯ ಭವಿಷ್ಯ ಉಂಟಾಗುತ್ತಿದೆ ಎಂಬುದು ತಿಳಿಯುತ್ತದೆ. ಸಮಾಜಗಳ ಉದ್ಧಾರಕ್ಕಾಗಿ ಆರ್ಥಿಕ ಚಟುವಟಿಕೆ ಇರಬೇಕೇ ಹೊರತು ಕೆಲವೇ ಜಾತಿಗಳ ವ್ಯಕ್ತಿಗಳ ವರ್ಗಗಳೆ ಬಂಡವಾಳಶಾಹಿ ವ್ಯವಸ್ಥೆಯ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳು ಬಳಕೆಯಾಗಬಾರದು. ಪಂಚವಾರ್ಷಿಕ ಯೋಜನೆಗಳು ಹುಟ್ಟಿದ್ದು ನಾಡಿನ ದೇಶದ ಸಮಾಜದ ಉದ್ಧಾರಕ್ಕಾಗಿ. ಆದರೆ ಈ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳ ಆರ್ಥಿಕ ವ್ಯವಹಾರಗಳೆಲ್ಲ ಖಾಸಗೀ ವಲಯದವರ ಹಿತಕ್ಕೆ ತಕ್ಕಂತೆ ಮಾರ್ಪಾಟಾಗುತ್ತಿವೆ. ಇದಕ್ಕೆ ಬೇಕಾದ ಅಂಕಿ ಅಂಶಗಳನ್ನು ಆಧಾರವಾಗಿಟ್ಟು ಅಳೆಯುವ ಬದಲು ಸ್ವತಃ ಸರ್ಕಾರ ಮತ್ತು ಖಾಸಗೀ ಉದ್ಯಮಿಗಳ ಆರ್ಥಿಕ ಒಪ್ಪಂದಗಳನ್ನು ಗ್ರಹಿಸಿದರೆ ಸಾಕು.

ಪ್ರತಿವರ್ಷ ಹೆಚ್ಚುವ ಬೆಲೆ ನೀತಿಯು ಖಾಸಗೀ ವಲಯಕ್ಕೆ ಸುಗ್ಗಿಯಂತಾಗುತ್ತಿದೆ. ಒಂದು ಸಲದ ಬೆಲೆ ಹೆಚ್ಚಳವು ವೃತ್ತಾಕಾರವಾಗಿ ಎಲ್ಲ ನೆಲೆಗಳಿಗೂ ಸುತ್ತಿಕೊಂಡು ಜನಸಾಮಾನ್ಯರನ್ನೂ ಲೂಟಿ ಮಾಡುತ್ತವೆ. ಆರ್ಥಿಕ ಅಭಿವೃದ್ಧಿ ತೀವ್ರವಾಗಿ ಆಗುವ ಸಮಾಜಗಳಲ್ಲಿ ಇಂತವೆಲ್ಲವೂ ಸಕಾರಾತ್ಮಕ ಲಕ್ಷಣಗಳು ಎಂದು ಆರ್ಥಿಕ ದಲ್ಲಾಳಿ ವಿದ್ವಾಂಶರು ಹೇಳುವುದಿದೆ. ಕನಿಷ್ಠ ಜೀವನಾವಶ್ಯಕ ಸೌಲಭ್ಯಗಳೇ ಇನ್ನೂ ಎಷ್ಟೋ ಹಳ್ಳಿಗಳಿಗೆ ತಲುಪಿಲ್ಲ. ನಗರಗಳ ಕೆಲವು ವರ್ಗಗಳು ಮಾತ್ರ ವಿಪರೀತ ಕೊಬ್ಬುತ್ತಿವೆ. ನಗರಗಳಲ್ಲೂ ತೀವ್ರವಾದ ಅಸಮಾನತೆ ಬೆಳೆಯುತ್ತಿದೆ. ನಿರುದ್ಯೋಗ ಸಮಸ್ಯೆ ಹಾಗೇ ಉಳಿದಿದೆ. ದುಡಿಯಲು ಎಂತದಾದರೂ ಒಂದು ಚಾಕರಿ ಪೇಟೆ ಪಟ್ಟಣಗಳಲ್ಲಿ ಸಿಗುವುದು ನಿಜವಿದ್ದರೂ ಅದು ಬಹಳ ಬೇಗ ವ್ಯಕ್ತಿ ಶಕ್ತಿಯನ್ನೆ ಬಸಿದುಕೊಂಡು ಬೀದಿ ಪಾಲು ಮಾಡುವಂತದಾಗಿದೆ. ಕೌಶಲ್ಯದ ತಿಳುವಳಿಕೆ ಇಲ್ಲದ ಗ್ರಾಮೀಣ ಯುವ ಜನಾಂಗವು ವಲಸೆ ಹೋಗಿ ನಗರಗಳ ಕೊಳೆಗೇರಿಗಳಲ್ಲಿ ಸೆರೆಯಾಗುತ್ತಿವೆ. ಹೊಸ ಉತ್ಪಾದನಾ ವಿಧಾನಗಳಿಗೆ ಸಜ್ಜುಗೊಳಿಸುವಂತಹ ಆರ್ಥಿಕ ತರಬೇತಿಗಳು ಇಲ್ಲವಾಗಿವೆ. ಅಂತಹ ಕೆಲ ಅವಕಾಶಗಳಿದ್ದರೂ ಅವು ಎಲ್ಲರ ಕೈಗೆಟುಕುತ್ತಿಲ್ಲ. ತಾರತಮ್ಯದ ಆರ್ಥಿಕ ಚಟುವಟಿಕೆಗಳಿಂದ ಸಮಾಜದಲ್ಲಿ ಹೊಸ ಬಗೆಯ ಮೇಲು ಕೀಳಿನ ಬಡತನ ಸಿರಿತನಗಳ ಅಂತರಗಳು ಹೆಚ್ಚುತ್ತಿವೆ. ಇಷ್ಟೊಂದು ಜನಸಂಖ್ಯೆಯಿರುವ ನಾಡಿನಲ್ಲಿ ಮಾನವ ಸಂಪತ್ತನ್ನು ಸರಿಯಾಗಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತೆಯೇ ಬಹುಸಮಾಜಗಳ ಪಾರಂಪರಿಕ ಕರಕುಶಲ ಜ್ಞಾನವನ್ನು ಪುನರುಜ್ಜೀವನಗೊಳಿಸಲು ಆಗುತ್ತಿಲ್ಲ. ಸರ್ಕಾರದ ಆರ್ತಿಕ ನೀತಿಯಲ್ಲಿ ಸಾವಿರಾರು ಯೋಜನೆಗಳಿದ್ದರೂ ವಾಸ್ತವದಲ್ಲಿ ಅವು ಒಳ್ಳೆಯವೇ ಆಗಿದ್ದರೂ ಅವಕ್ಕೆಲ್ಲ ನಿರ್ವಹಿಸುವಲ್ಲಿ ಇರಬೇಕಾದ ಬದ್ಧತೆ, ಪ್ರಾಮಾಣಿಕತೆ, ಇಚ್ಛಾಶಕ್ತಿ, ರಾಷ್ಟ್ರ ಪ್ರೇಮ, ಸಮಾಜ ಪ್ರೀತಿಗಳಿಲ್ಲದೆ ಎಲ್ಲ ಯೋಜನೆಗಳೂ ವೈಫಲ್ಯದಲ್ಲಿ ಕಳೆದುಹೋಗುತ್ತಿವೆ. ನೌಕರ ವರ್ಗದಲ್ಲಿ ತುಂಬಿರುವ ಭ್ರಷ್ಠಾಚಾರವು ಪರಮಾವಧಿಯನ್ನು ತಲುಪಿದ್ದು ಆರ್ಥಿಕ, ಸಾಮಾಜಿಕ, ರಾಜಕೀಯ ನಿರ್ವಹಣೆಯ ನೈತಿಕತೆಯೇ ಇಲ್ಲವಾಗಿದೆ. ಹೀಗಾಗಿ ಕನ್ನಡ ನಾಡಿನ ಆರ್ಥಿಕತೆಯನ್ನು ಸರಿಪಡಿಸಲು ಎಲ್ಲ ಸಮಾಜಗಳು ಒಟ್ಟಾಗಿ ನಾಡನ್ನು ಅಖಂಡವಾಗಿ ಕಟ್ಟಲು ದೊಡ್ಡ ಪ್ರಯತ್ನಗಳನ್ನು ಒಟ್ಟಾಗಿ ಮಾಡಬೇಕಾಗಿದೆ. ಇದನ್ನು ರೂಪಿಸಲು ಚಳುವಳಿಗೇ ಆಗಬೇಕು. ಎಪ್ಪತ್ತರ ದಶಕದಲ್ಲಿ ಉಂಟಾದ ಬಹುರೂಪಿ ಯತ್ನಗಳು ಮತ್ತೊಮ್ಮೆ ಸಮಷ್ಠಿಯಾಗಿ ಮುನ್ನಡೆದರೆ ಮಾತ್ರ ವರ್ತಮಾನದ ಆರ್ಥಿಕ ಅಪರಾಧಗಳನ್ನು ನಿಯಂತ್ರಿಸಬಹುದು.

ಇಪ್ಪತ್ತೊಂದನೆ ಶತಮಾನದಲ್ಲಿ ಆರ್ಥಿಕ ಚಟುವಟಿಕೆಯೆ ಅಭಿವೃದ್ಧಿ ಎಂಬ ರಾಜಕಾರಣವಾಗಿ ಬಿಟ್ಟಿದೆ. ಪ್ರಜಾಪ್ರಭುತ್ವದ ಒಟ್ಟು ಆಶಯವೇ ಇಂತಹ ಬದಲಾವಣೆಗೆ ಹೀಡಾಗುತ್ತಿದೆ. ಕನ್ನಡ ಪ್ರಭುತ್ವ ಅರ್ಥಾತ್‌ ವರ್ತಮಾನದ ರಾಜಕಾರಣವು ಬೃಹತ್ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆಯನ್ನು ನಿರ್ವಹಿಸು ಕಂಪೆನಿಗಳಂತಾಗಿದೆ. ಈಸ್ಟ್ ಇಂಡಿಯಾ ಕಂಪನಿಯು ಇದೇ ರೀತಿಯಲ್ಲಿ ಆರ್ಥಿಕ ನಿರ್ವಹಣೆಗಳನ್ನು ಭಾರತೀಯ ಸಮಾಜಗಳಿಗೆ ಮಾಡುತ್ತಿತ್ತು. ಕಾಲ ಬದಲಾಗಿ ಆರ್ಥಿಕತೆಯು ನಯವಾಗಿದ್ದರೂ ಹಳೆಯ ಲೂಟಿಕೋರತನ ಸ್ವದೇಶಿ ಬಂಡವಾಳಶಾಹಿಗಳಿಂದಲೂ ಆಗುತ್ತಿದೆ. ಆರ್ಥಿಕ ಚುಟವಟಿಕೆಗಳನ್ನು ಸರ್ಕಾರಗಳು ಕಂಟ್ರಾಕ್ಟರ್‌ಗಳ ಮಾದರಿಯಲ್ಲೆ ಮಾಡುತ್ತಿವೆ. ಇದರಿಂದಾಗಿಯೇ ಅಭಿವೃದ್ಧಿ ಚಟುವಟಿಕೆಗಳಲ್ಲಿ ಬಿಲ್ಡರ್ಸ್‌ ಮಾಫಿಯಾವು ಸೇರಿದೆ. ಯಾವ ಸರ್ಕಾರಗಳು ಹೊಸ ಹೊಸ ಆರ್ಥಿಕ ಯೋಜನೆಗಳನ್ನು ಶತಕೋಟಿಗಳಲ್ಲಿ ಪ್ರಕಟಿಸುತ್ತವೆಯೊ ಅವು ಅಷ್ಟು ಪ್ರಮಾಣದಲ್ಲಿ ಹಣದ ಒಳ ವ್ಯವಹಾರಗಳನ್ನು ಮಾಡಿ ಚುನಾವಣಾ ರಾಜಕಾರಣವನ್ನು ಮಾಡಲು ಪಕ್ಷಗಳಲ್ಲಿ ಬಲಪಡಿಸಿಕೊಳ್ಳಲು ಯತ್ನಿಸುತ್ತವೆ. ಹೀಗಾಗಿ ಚುನಾವಣೆಗಳಲ್ಲೇ ಆರ್ಥಿಕ ಒಪ್ಪಂದಗಳು ಕಳ್ಳವ್ಯವಹಾರವು ನಡೆದು ಬೃಹತ್‌ ಉದ್ಯಮದಂತೆ ಚುನಾವಣೆಗಳು ಮತದಾರರ ಖರೀದಿಯಲ್ಲಿ ತೊಡಗುತ್ತವೆ. ಈ ಹಿನ್ನೆಲೆಯಲ್ಲೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ ವ್ಯಾಪಾರದ ಜಾಹಿರಾತಿನಂತೆ ಪ್ರಣಾಳಿಕೆಗಳನ್ನು ಹೊರಡಿಸಿ ದಲ್ಲಾಳಿ ಸರ್ಕಾರಗಳ ಆಳ್ವಿಕೆಯಲ್ಲಿ ಪ್ರಜೆಗಳು ಆರ್ಥಿಕ ಜೀತಕ್ಕೆ ಒಳಪಡುವಂತಾಗಿದೆ.

ಹೀಗಾಗಿ ವರ್ತಮಾನದ ಕನ್ನಡ ಸಮಾಜದ ಆರ್ಥಿಕ ರಾಜಕೀಯ ಈ ಮೂರೂ ಸ್ತರಗಳ ವ್ಯಾಪಾರಿ ದರ್ಬಾರನ್ನು ಮಾಡುತ್ತಿವೆ. ಆರ್ಥಿಕ ಶೀಲವಿಲ್ಲದ ರಾಜಕಾರಣ ಮತ್ತು ಸಮಾಜಗಳು ಯಾವ ಕೊನೆ ಮುಟ್ಟಬಲ್ಲವೆಂಬುದು ನಿರ್ದಿಷ್ಟವಲ್ಲ. ಕಪಟವಾದ ಅಭಿವೃದ್ಧಿಯು ಸಮಾಜವನ್ನು ಸೃಷ್ಟಿಶೀಲಗೊಳಿಸದು. ನೈಸರ್ಗಿಕ ಸಂಪತ್ತನ್ನು ಈ ಬಗೆಯ ಕಪಟ ಅಭಿವೃದ್ಧಿಯು ನಾಶಪಡಿಸುತ್ತ ತಾನೇ ನಾಶವಾಗಿ ಹೋಗುತ್ತದೆ. ಬಂಡವಾಳಶಾಹಿ ಅಭಿವೃದ್ಧಿಯ ವಿರುದ್ಧ ಚಿಂತನೆಗಳನ್ನು ಮಾತ್ರವೇ ಇಂತಲ್ಲಿ ಬಿತ್ತಬೇಕಾದ್ದಿದೆ. ವೇಗದ ವಿರುದ್ಧವಾದ ಚಲನೆಯನ್ನೆ ಸಾಧಿಸಬೇಕಿದೆ. ಅನುಭೋಗವೇ ಸುಖವಲ್ಲ. ಹೆಚ್ಚು ಗಳಿಸುವುದು ನೈತಿಕವಲ್ಲ. ಏಕರೂಪಿ ಉತ್ಪಾದನೆಯ ಏಕಸ್ವಾಮ್ಯವು ನ್ಯಾಯವಾದುದಲ್ಲ. ಜಾಗತಿಕ ಏಕರೂಪಿ ಅಭಿರುಚಿಗಳನ್ನು ನಿರಾಕರಿಸಿ ಸ್ಥಳೀಯ ಬಹುರೂಪಿ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಯಂತ್ರಗಳ ಗುಲಾಮರಾಗಿ ಉತ್ಪಾದಿಸುವುದು ವಿಕಾಸವಲ್ಲ. ಅದು ವಿಕಾಸದ ವಿರುದ್ಧವಾದ ಅಡ್ಡದಾರಿ. ಜೀವ ಜಾಲದ ನ್ಯಾಯೋಚಿತ ಕ್ರಮವು ವೇಗದಿಂದ ಬಂದುದಲ್ಲ. ಅಭಿವೃದ್ಧಿಯ ಅವಸರದಿಂದ ಜೀವ ವಿಕಾಸದ ಮೇಲೆ ಈಗಾಗಲೇ ಕೆಟ್ಟ ಪರಿಣಾಮ ಆಗಿದೆ.

ಇವೆಲ್ಲವೂ ಕನ್ನಡ ಸಮಾಜದ ಆರ್ಥಿಕತೆಯ ಹಿನ್ನೆಲೆಯಲ್ಲಿ ನಿಜ. ಕೈಗಳಿಂದ ಸೃಷ್ಟಿಸುವುದೇ ಶ್ರೇಷ್ಠ ಉತ್ಪಾದನೆ. ಕುಶಲಿಯಾದ ಉತ್ಪಾದನಾ ಕೌಶಲ್ಯಗಳು ನಿಸರ್ಗದ ನೀತಿಯನ್ನು ಅನುಸರಿಸುತ್ತವೆ. ಬೃಹತ್ ಉತ್ಪಾದನಾ ವಿಧಾನಗಳು ಮಾನವ ವಿರೋಧಿಯಾದವು. ಮನುಷ್ಯರ ಕೆಟ್ಟ ಅನುಭೋಗದ ರುಚಿಗೆ ಮಾತ್ರ ಅಂತಹ ಬೃಹತ್ ಉತ್ಪಾದನೆಗಳಿಂದ ಲಾಭವಾಗಬಹುದಾದರೂ ಅಖಂಡ ಮಾನವತ್ವದ ವಿಕಾಸಕ್ಕೆ ಅಸ್ತಿತ್ವಕ್ಕೆ ಮನುಷ್ಯರಾಗಿ ದುಡಿದು ಉತ್ಪಾದಿಸುವುದೇ ಅತ್ಯುತ್ತಮವಾದುದು. ಯಂತ್ರಗಳ ಮೂಲಕ ಈಗಾಗಲೇ ಜಗತ್ತಿನ ಎಲ್ಲ ಸಮಾಜಗಳು ಸ್ವಂತ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಇದು ಎಲ್ಲ ಬಗೆಯ ಆರ್ಥಿಕ ನಷ್ಟಕ್ಕಿಂತಲೂ ಮಿಗಿಲಾದುದು. ಉತ್ಪಾದನೆಯ ವಿಧಾದನಲ್ಲಿರುವ ಮಾನವೋಪಯೋಗಿ ಸಾಧನಗಳು ಇರಬೇಕಾದ್ದು ನಾಗರೀಕತೆಯಾದರೂ ಮನುಷ್ಯನೇ ಯಂತ್ರಗಳ ದಾಸನಾಗಬೇಕಾದ್ದಿಲ್ಲ. ಈ ಕಾಲದ ಎಲ್ಲ ಉತ್ಪಾದನೆಗಳಲ್ಲೂ ಮನುಷ್ಯರ ಭಾಗವಹಿಸುವಿಕೆ ಕಡಿಮೆ ಆಗುತ್ತಿದೆ. ಮುಂದಿನ ಜನಾಂಗಗಳ ವಿಕಾಸದಲ್ಲಿ ಇದು ಒಳಿತನ್ನು ತರಲಾರದು. ನೀತಿಯಿಲ್ಲದ ಉತ್ಪಾದನೆಯು ಮನುಷ್ಯ ವಿರೋಧಿಯಾದುದು ಎಂಬುದನ್ನು ಗಾಂಧೀಜಿ ಅವರು ಯಾವತ್ತೂ ಹೇಳುತ್ತಿದ್ದರು. ಈ ಕಾಲದಲ್ಲಿ ಅಭಿವೃದ್ಧಿ ಆರ್ಥಿಕತೆಯೇ ಬೇಡ ಎಂಬ ಆಂಧೋಲನ ಬೇಕಾಗಿದೆ. ಸರಳ ಜೀವನ ಕ್ರಮವೇ ಶ್ರೇಷ್ಠ ಆರ್ಥಿಕ ವ್ಯವಸ್ಥೆ. ನಿಸರ್ಗವನ್ನು ರಕ್ಷಿಸುವ ಉತ್ಪಾದನೆಯಿಂದಲೇ ಮನುಷ್ಯನ ಸೃಷ್ಟಿಶೀಲತೆಯು ಬೆಳೆಯುವುದು. ಉದ್ಯಮ ಸ್ವಭಾವವು ಲಾಭಕೋರತನದ್ದು. ಹಂಚಿಬಾಳುವ ಆರ್ಥಿಕತೆಯಿಂದ ಸಮಾಜಗಳು ಉಳಿಯುತ್ತವೆ. ನಿಧಾನಗತಿಯ ಚಲನೆಯೇ ಸುಂದರವಾದದ್ದು. ಜನಪದ ಸಮಾಜಗಳು ಬೆಳೆದು ಬಂದದ್ದು ಇಂತಹ ಆದರ್ಶಗಳಲ್ಲೆ. ಈ ಕಾಲದಲ್ಲಿ ಒಮ್ಮೆಗೇ ಇವು ವೇಗತಪ್ಪಿ ಮುಗ್ಗರಿಸುತ್ತಿರುವುದನ್ನು ತಡೆಯದಿದ್ದರೆ ಹಿಂದಕ್ಕೆ ಬರಲಾರದ ದಾರಿಗೆ ಅವು ಸೇರಿ ಹೋಗುತ್ತವೆ. ಅಭಿವೃದ್ಧಿ ಆರ್ಥಿಕ ವೇಗಕ್ಕೆ ಒಮ್ಮೆ ಸಿಕ್ಕಿಕೊಂಡರೆ ಹಿಂತಿರುಗಿ ಬರಲು ಆಗುವುದೇ ಇಲ್ಲ. ಅದರ ವೇಗದಲ್ಲಿ ಕೆಳಗಿಳಿದು ಭೂಮಿಯ ಸಂಬಂಧವನ್ನು ಮಾಡಲು ಅವಕಾಶವಾಗಲಿ ಮನಸ್ಸಾಗಲಿ ಇರುವುದಿಲ್ಲ.

ಏಕರೂಪಿ ಬೃಹತ್ ಆರ್ಥಿಕತೆಯಿಂದಲೇ ಎಲ್ಲ ಸಮಾಜಗಳಿಗೂ ಸಮಾನ ಆರ್ಥಿಕತೆಯನ್ನು ರೂಪಿಸಲಾಗದು. ಒಂದೊಂದು ಸಮುದಾಯದ ಸಂಪನ್ಮೂಲಗಳೂ ಒಂದೊಂದು ರೀತಿಯಲ್ಲಿವೆ. ಎಷ್ಟೋ ಸಮುದಾಯಗಳು ದಿವಾಳಿಯಾಗಿವೆ. ಅಲೆಮಾರಿ ಆದಿವಾಸಿಗಳಿಗೆ ಆರ್ಥಿಕ ಪ್ರವಾಹದಲ್ಲಿ ಜೀವ ರಕ್ಷಕ ದಾರಿಗಳೇ ಇಲ್ಲ. ಉಳ್ಳವರು ಮಾತ್ರವೇ ಆರ್ಥಿಕ ಸವಲತ್ತುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಸರ್ಕಾರದ ಯೋಜನೆಗಳು ಸೋರಿಕೆಯಲ್ಲೆ ಲಯವಾಗುತ್ತಿವೆ. ಇವನ್ನೆಲ್ಲ ನಿಯಂತ್ರಿಸಲು ತಕ್ಕ ಆರ್ಥಿಕ ನಿವೇಶನಗಳೇ ಇಲ್ಲವಾಗಿವೆ. ಒಳ್ಳೆಯ ಯೋಜನೆ ಉದ್ದೇಶವಿದ್ದರೆ ಸಾಲದು. ಅದನ್ನು ಕಾರ್ಯರೂಪಕ್ಕೆ ತರಲು ಬೇಕಾದ ಬದ್ಧತೆ ಅರ್ಪಣೆ ಪ್ರಾಮಾಣಿಕತೆ ಬೇಕು. ಹಾಗೆಯೇ ಭ್ರಷ್ಟವಾಗಿರುವ ಸಮಾಜದ ಮನಸ್ಸನ್ನು ಮೊದಲು ಸರಿಪಡಿಸಲು ಎಲ್ಲ ಕಾನೂನು ಕ್ರಮಗಳನ್ನು ಜಾರಿಗೊಳಿಸಿ ಕಟ್ಟುನಿಟ್ಟಿನ ವಿಧಿ ನಿಷೇಧಗಳನ್ನು ಅನುಸರಿಸಿದರೆ ಆರ್ಥಿಕ ಭ್ರಷ್ಟತೆಯನ್ನು ತಡೆಯಬಹುದು. ಬೇಲಿಯೇ ಎದ್ದು ಹೊಲ ಮೇದರೆ ಏನು ಮಾಡಬೇಕು ಎಂಬ ಹತಾಶೆಗಿಂತ ಬೇಲಿಯ ಅನಿವಾರ್ಯತೆಯನ್ನೆ ಕೈ ಬಿಟ್ಟು ಮೊದಲು ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಬೇಕು. ಕನ್ನಡ ಸಮಾಜದಲ್ಲಿ ಅಡಗಿರುವ ಬೇಜವಾಬ್ದಾರಿತನವನ್ನು ಕಿತ್ತುಹಾಕಲು ಕ್ರಮವಹಿಸಿದರೆ ಆರ್ಥಿಕ ಕ್ರಮಗಳು ಸರಿದಾರಿಗೆ ಬರಬಲ್ಲವು. ಚೀನಾ ದೇಶದ ಆರ್ಥಿಕತೆಯಲ್ಲಿ ಜನತೆಯೇ ಮುಖ್ಯ ರಕ್ಷಾ ಕವಚ ಮತ್ತು ಸಮಷ್ಠಿ ದುಡಿಮೆಯಿಂದಲೇ ಅಲ್ಲಿನ ಆರ್ಥಿಕತೆಯು ಹೆಚ್ಚು ಜನಕೇಂದ್ರಿತವಾಗಿರುವುದು. ನಮ್ಮ ಸಮಾಜಗಳಲ್ಲಿ ಸಮಷ್ಠಿ ಹೊಣೆಗಾರಿಕೆ ಇಲ್ಲದಿರುವುದರಿಂದ ಹಾಗೂ ಸಾರ್ವಜನಿಕ ಅಭಿಪ್ರಾಯಗಳು ಘನವಾಗಿ ಕೇಂದ್ರೀಕೃತವಾಗದಿರುವುದರಿಂದ ಯಾರು ಯಾವುದೇ ಬಗೆಯ ತಪ್ಪು ಮಾಡಿ ಬಚಾವಾಗಲು ಅವಕಾಶಗಳಿವೆ. ಪ್ರಜಾಪ್ರಭುತ್ವದ ಎಲ್ಲ ಒಳ್ಳೆಯ ರಕ್ಷಣೆಯ ಮೌಲ್ಯಗಳನ್ನು ದುಷ್ಠತನಕ್ಕೆ ಬಳಸಿಕೊಳ್ಳುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಗುತ್ತಿಲ್ಲ.

ಕನ್ನಡ ಸಮಾಜವು ಇಂತಹ ಸ್ವಭಾವವನ್ನು ಹಿಂದಿನಿಂದಲೂ ರೂಢಿಸಿಕೊಂಡುಬಿಟ್ಟಿದೆ. ಹೀಗಾಗಿಯೇ ಅಭಿವೃದ್ಧಿಯ ನಿಜವಾದ ಫಲಗಳು ಸಮಾಜಕ್ಕೆ ತಲುಪುತ್ತಿಲ್ಲ. ಪ್ರಖ್ಯಾತ ಅರ್ಥಶಾಸ್ತ್ರಜ್ಞ ಗುನ್ನಾರ್ ಮಿರ್ಡಾಲ್ ಹಿಂದೊಮ್ಮೆ ಹೀಗೆ ಹೇಳಿದ್ದರು. ಭಾರತೀಯರು ಒಂದು ಅತ್ಯುತ್ತಮ ಆರ್ಥಿಕ ಯೋಜನೆಯನ್ನು ನೂರು ರೀತಿಯ ಕೆಟ್ಟದಾರಿಗಳಿಂದ ನಿರ್ವಹಿಸುತ್ತಾರೆ. ಈ ಅಭಿಪ್ರಾಯ ಇಂದಿಗೆ ಮತ್ತಷ್ಟು ಬಲವಾಗಿ ಹೊಂದುತ್ತದೆ. ಆರ್ಥಿಕ ಪ್ರಗತಿ ಎಂಬುದೇನು ಮಹಾ ಸಮಸ್ಯೆಯಲ್ಲ. ಅದನ್ನು ಸಮರ್ಥವಾಗಿ ನಿರ್ವಹಿಸಿದರೆ ಅದರ ಒಳಿತು ಎಲ್ಲರಿಗೂ ತಲುಪುತ್ತದೆ. ಅಭಿವೃದ್ಧಿಗಾಗಿ ಇಷ್ಟೆಲ್ಲ ಪಾಡುಪಟ್ಟು ಭಾರೀ ಬಂಡವಾಳ ಹೂಡುವುದೇ ಸಮಾಜಗಳ ಉದ್ದಾರದ ಗುರಿಯಿಂದಲ್ಲ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸ್ವತಃ ಸಮಾಜಗಳೇ ತೊಡಗಿದರೆ ಉದ್ಧಾರದ ದಲ್ಲಾಳಿತನ ಮಾಡುವ ಸರ್ಕಾರಗಳಿಗೂ ಅಧಿಕಾರ ವರ್ಗಕ್ಕೂ ರಾಜಕಾರಣದ ಕುತಂತ್ರಕ್ಕೂ ಅವಕಾಶವಿರುವುದಿಲ್ಲ. ಪರೋಕ್ಷವಾಗಿ ಇಡೀ ಕನ್ನಡನಾಡೇ ಇಂತಹ ದಲ್ಲಾಳಿ ಆರ್ಥಿಕತೆಯಲ್ಲಿ ಲೂಟಿಯಾಗುತ್ತಿದೆ. ಜನರ ಭಾಗವಹಿಸುವಿಕೆಯು ಭೌತಿಕವಾದುದಕ್ಕಿಂತ ಬೌದ್ಧಿಕವಾಗಿದ್ದರೆ ಹೆಚ್ಚು ಉಪಯುಕ್ತ. ಭೌತಿಕ ನಿರ್ಮಾಣವೇ ಅಭಿವರದ್ಧಿಯಲ್ಲ. ಬೌದ್ಧಿಕ ಆವರಣ ವಿಸ್ತರಿಸಿ ಅದು ವೃದ್ಧಿಸಿದಂತೆಲ್ಲ ಸಮಾಜಗಳಲ್ಲಿ ನಿಜವಾದ ಪ್ರಗತಿ, ವಿಕಾಸ ಬೆಳವಣಿಗೆ ಸಾಧ್ಯವಾಗುತ್ತದೆ. ಜನಸಂಖ್ಯೆಯ ಆಧಾರದಿಂದಲ್ಲ ಆರ್ಥಿಕ ಉತ್ಪಾದನೆಗಳು ತೀರ್ಮಾನವಾಗಬೇಕಾದದ್ದು. ಜನತೆಯ ನಿಜವಾದ ಅವಶ್ಯಕತೆ ಮತ್ತು ಸರಳ ಜೀವನ ಕ್ರಮಗಳಿಂದಲೇ ಉತ್ಪಾದನೆಯ ಪ್ರಮಾಣವು ನಿರ್ಧಾರವಾಗಬೇಕಾಗಿರುವುದು. ಜನಸಂಖ್ಯಾ ಸ್ಫೋಟದ ಸಮಾಜಗಳು ಸಂಖ್ಯೆಯನ್ನು ಪ್ರಮುಖವಾಗಿ ತೆಗೆದುಕೊಂಡು ಮಾರುಕಟ್ಟೆಯ ಮಾರಾಟದ ಪ್ರಮಾಣವನ್ನು ಲೆಕ್ಕಿಸುವುದು ಅನೈತಿಕವಾದುದು. ಅಭಿವೃದ್ಧಿ ಎನ್ನುವುದು ಮನಸ್ಸಿನ ಪ್ರಕ್ರಿಯೆಯಾಗಬೇಕು. ಸೃಜನಶೀಲವಾದ ನಿಸರ್ಗನಿಷ್ಠ ಪರಿಸರದ ಉತ್ಪಾದನೆಯೇ ನಿಜವಾದ ಸೌಂದರ್ಯ. ಆದರ್ಶ ಅರ್ಥಶಾಸ್ತ್ರವನ್ನು ರಾಜಕೀಯ ವ್ಯವಸ್ಥೆಗಳು ಖಡ್ಡಾಯವಾಗಿ ಪಾಲಿಸಿದಲ್ಲಿ ಏಕೀಕರಣೋತ್ತರ ಕರ್ನಾಟಕವು ಮುಂದೆ ಬಲಿಷ್ಠವಾಗಬಲ್ಲದು. ಆ ಬಗೆಗಿನ ಯತ್ನಗಳು ಈ ಕಾಲದಲ್ಲಿ ಕನಸಿನಂತಿವೆ. ಆದರೂ ಆ ಬಗೆಯ ಯತ್ನಗಳು ಅಸಾಧ್ಯವೇನಲ್ಲ. ಅಂತಹ ದಿನಗಳು ಬರಬೇಕಾಗಿದೆಯಷ್ಟೆ.