ಸಾಕ್ಷರವಾದ ನಾಡಿನ ಕಲ್ಪನೆಯು ಅಭಿವೃದ್ಧಿಯ ಹಿನ್ನೆಲೆಯಿಂದ ಬಂದುದಾಗಿತ್ತು. ಗ್ರಾಮೀಣ ಕರ್ನಾಟಕದ ಅನಕ್ಷರತೆಯನ್ನು ತೊಡೆದು ಹಾಕುವುದು ಮುಖ್ಯ ಗುರಿಯಾಗಿತ್ತು. ಬಡ ಜನರ ಸಾಕ್ಷರತೆಯು ಸುಧಾರಿಸಿದರೆ ಅವರಿಗೆ ಆಗುವ ಅನ್ಯಾಯವನ್ನು ತಡೆಯಲು ಸಾಧ್ಯ ಎಂಬ ಆಶಯ ಸಾಕ್ಷರತಾ ಆಂದೋಲನದಲ್ಲಿತ್ತು. ಶಿಕ್ಷಣವಿಲ್ಲದ ಸಮಾಜ ಆಧುನಿಕತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಶಿಕ್ಷಣ ಮತ್ತು ಸಾಕ್ಷರ ಮಟ್ಟವು ಬೆಳೆದಂತೆ ಅರಿವು ಮೂಡುತ್ತದೆ. ಸಮಾಜದ ಸಂಬಂಧಗಳೂ ವಿಸ್ತರಿಸುತ್ತವೆ. ಏಕೀಕರಣೋತ್ತರ ಸಮಾಜಗಳನ್ನು ಬಲಪಡಿಸಲು ಸಮಗ್ರ ಗ್ರಾಮೀಣ ಸಾಕ್ಷರತಾ ಯೋಜನೆಗಳು ಮಹತ್ತರ ಉದ್ದೇಶವನ್ನು ಹೊಂದಿದ್ದವು. ಮೊದಲಿಗೆ ವಯಸ್ಕರ ಶಿಕ್ಷಣ ಸಂಸ್ಥೆಯು ದೇಶಕ್ಕೇ ಮಾದರಿಯಾಗುವಂತೆ ಕರ್ನಾಟಕದಲ್ಲಿ ತನ್ನ ಕೆಲಸವನ್ನು ಆರಂಭಿಸಿತು. ಅಕ್ಷರ ಪ್ರಚಾರಾಂದೋಲನವನ್ನು ಬಿ.ಎಂ.ಶ್ರೀ ಅಂತವರೇ ಆರಂಭಿಸಿದ್ದುದು ಪೂರಕವಾಗಿತ್ತು. ಮೈಸೂರು ಸಂಸ್ಥಾನ ಅಕ್ಷರ ಪ್ರಚಾರ ಸಮಿತಿಯೇ ಮುಂದೆ ವಯಸ್ಕರ ಶಿಕ್ಷಣ ಸಮಿತಿಯಾಗಿ ಮಾರ್ಪಟ್ಟು ಯುನೆಸ್ಕೋ ಇದನ್ನು ತನ್ನ ಅಂಗಸಂಸ್ಥೆಯನ್ನಾಗಿ ಸ್ವೀಕರಿಸುವಂತಾಗಿತ್ತು. ಇಂತಹ ಹಿನ್ನೆಲೆಯ ವಯಸ್ಕರ ಶಿಕ್ಷಣದ ಅಕ್ಷರ ಪ್ರಚಾರವು ಕರ್ನಾಟಕದ ಹಳ್ಳಿಗಳಲ್ಲಿ ಹೊಸದೊಂದು ಅಕ್ಷರ ಪ್ರೀತಿಯನ್ನು ಅನಕ್ಷರಸ್ಥ ಕೆಳಜಾತಿಗಳಿಗೆ ಉಣಬಡಿಸಿತು. ಜಾತಿಯ ಎಲ್ಲೆ ಮೀರಿ ನಡೆದ ಸಾಕ್ಷರ ಪ್ರಜ್ಞೆಯು ನಾಡಿನ ನಿರ್ಮಾಣಕ್ಕೆ ಪೂರಕವಾಗಿತ್ತು.

ಇದೇ ವೇಳೆಗೆ ಮಹಿಳೆಯರಿಗೆ ಅನೌಪಚಾರಿಕ ಶಿಕ್ಷಣವನ್ನು ನೀಡುವ ಸಲುವಾಗಿ ೧೯೭೫ರಲ್ಲೇ ಕ್ರಾಂತಿಕಾರಕ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಪುರುಷಾಧಿಪತ್ಯದ ಸಮಾಜವನ್ನು ತಿದ್ದಲು, ತಾರತಮ್ಯ, ಪೂರ್ವಾಗ್ರಹ, ಅಸಮಾನತೆಗಳನ್ನು ತೊರೆಯಲು ಮಹಿಳಾ ಶಿಕ್ಷಣವನ್ನು ಜಾರಿಗೊಳಿಸಲಾಯಿತು. ನಾಲ್ವಡಿ ಕೃಷ್ಣರಾಜರು ದೇಶಕ್ಕೇ ಮಾದರಿಯಾಗುವಂತೆ ಹಿಂದೆಯೇ ಮಹಿಳಾ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದರು. ಸ್ವಯಂ ಸೇವಾ ಸಂಸ್ಥೆಗಳು ಮಹಿಳಾ ಶಿಕ್ಷಣಕ್ಕೆ ಒತ್ತಾಸೆಯಾದವು. ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗಳಿಗೆ ಮಹಿಳಾ ಶಿಕ್ಷಣ ಅನಿವಾರ್ಯ ಎಂದು ತಿಳಿಯಲಾಯಿತು. ಗುಡಿಕೈಗಾರಿಕೆಗಳ ಮೂಲಕ ಸ್ವಾವಲಂಬನೆ ಸಾಧಿಸಲು ಅಕ್ಷರ ಜ್ಞಾನ ಕಡ್ಡಾಯವಾಗಿ ಬೇಕು ಎಂಬ ತಿಳುವಳಿಕೆಯು ಬಲವಾಯಿತು. ಮಹಿಳೆಯರ ಆರೋಯ, ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಪಾಲನೆ ಅವರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮಹಿಳಾ ಸಾಕ್ಷರತಾ ಯೋಜನೆಗಳು ಚಾಲನೆಗೆ ಬಂದವು. ಹೀಗಾಗಿ ಮಹಿಳೆಯರಿಗೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಉಂಟಾಯಿತು. ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣದಬಗ್ಗೆ ಎಲ್ಲರಲ್ಲೂ ಕಾಳಜಿ ಬೆಳೆಯಿತು. ಇದೇ ವೇಳೆಗೆ ಹಸಿರು ಕ್ರಾಂತಿಯ ಹಿನ್ನೆಲೆಯಲ್ಲಿ ರೈತ ಸಮೂಹಕ್ಕೂ ಸಾಕ್ಷರತೆಯ ಅನಿವಾರ್ಯತೆಯನ್ನು ಮನಗಾಣಿಸಲಾಯಿತು. ಅದಕ್ಕೆಂದೇ ಕ್ರಿಯಾತ್ಮಕ ಸಾಕ್ಷರತೆಯನ್ನು ಜಾರಿಗೊಳಿಸಿ ರೈತರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಯಿತಲ್ಲದೆ ವಿಶೇಷವಾಗಿ ರೇಡಿಯೊ ಕಾರ್ಯಕ್ರಮಗಳ ಮೂಲಕವೂ ಜಾಗೃತಿ ಮೂಡಿಸಲು ಯತ್ನಿಸಲಾಯಿತು.

ಕರ್ನಾಟಕದಲ್ಲಿ ಆರಂಭಗೊಂಡ ಇಂತಹ ಸಾಕ್ಷರತಾ ಯೋಜನೆಯು ಮುಂದೆ ರಾಷ್ಟ್ರೀಯ ಗಮನ ಸೆಳೆದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮದ ಯೋಜನೆಗಳಾಗಿ ಪರಿವರ್ತನೆಗೊಂಡು ಕೊನೆಗೆ ರಾಷ್ಟ್ರೀಯ ಸಾಕ್ಷರತಾ ಮಿಷನ್ ಆಗಿಯು ವಿಸ್ತರಿಸಿತು. ಪರಿವರ್ತನೆಗೊಂಡು ಕೊನೆಗೆ ರಾಷ್ಟ್ರೀಯ ಸಾಕ್ಷರತಾ ಮಿಷನ್ ಆಗಿಯು ವಿಸ್ತರಿಸಿತು. ಕ್ರಿಯಾತ್ಮಕ ಸಾಕ್ಷರತೆಯ ಪರಿಣಾಮಕ್ಕಾಗಿ ಬೆಳೆದ ಹತ್ತಾರು ಯೋಜನೆಗಳಿಂದ ಗ್ರಾಮೀಣ ಅನಕ್ಷರತೆಯ ಶಾಪದ ಪರಿಚಯವಾಗಿ ಇದೊಂದು ರಾಷ್ಟ್ರೀಯ ಜಾಗೃತಿಯಾಗಿ ಮೂಡಿತು. ರಾಜ್ಯ ಹಾಗೂ ಕೇಂದ್ರಸರ್ಕಾರಗಳೆರಡೂ ಸಾಕ್ಷರತಾ ಚಿಂತನೆಗೆ ಪೂರಕ ಅವಕಾಶ ನಿರ್ಮಿಸಿ ಜನತೆಗೆ ಬೇಕಾದ ಶಿಕ್ಷಣ ನೀಡಲು ಯತ್ನಿಸಿದವು. ಕರ್ನಾಟಕದಲ್ಲಿ ಅಕ್ಷರ ಸೇನೆ ಕಾರ್ಯಕಗಳು ತಳಮಟ್ಟದಲ್ಲಿ ಆರಂಭಗೊಂಡವು. ಇವೆಲ್ಲದರಿಂದಾಗಿ ಭಾರತದ ಉಳಿದ ರಾಜ್ಯಗಳಿಗಿಂತ ಸಾಕ್ಷತೆಯಲ್ಲಿ ಕರ್ನಾಟಕವು ಮುಂದೆ ಬರಲು ಸಾಧ್ಯವಾಯಿತು. ರಾಷ್ಟ್ರೀಯ ಸಾಕ್ಷರತಾ ಮಿಷನ್ ಅಭಿವೃದ್ಧಿಯ ಕಾರಣದಿಂದ ನವಸಾಕ್ಷರತಾ ಯೋಜನೆಗಳನ್ನು ರೂಪಿಸಿತು. ಪ್ರತಿಯೊಂದು ಹಳ್ಳಿಗಳಲ್ಲೂ ಜನ ಜಾಗೃತಿಯ ಜೊತೆಯಲ್ಲೆ ಶಿಕ್ಷಣ ಜಾಗೃತಿಯನ್ನು ಬೆಳೆಸಲು ಸಹಾಯ ಮಾಡಿತು.

ಇವೆಲ್ಲ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ಸಾಮೂಹಿಕ ಸಾಕ್ಷರತಾ ಆಂದೋಲನ ಕಾರ್ಯಕ್ರಮಗಳು ಬೇರೊಂದು ರೂಪ ಪಡೆದು ಎಂಭತ್ತರ ದಶಕದ ಕೊನೆಯ ವೇಳೆಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅಕ್ಷರ ಕ್ರಾಂತಿಯ ಕಾರ್ಯಕ್ರಮಗಳನ್ನು ಮುಟ್ಟಿಸಿದವು. ಸಂಪೂರ್ಣ ಸಾಕ್ಷರತೆಯ ಆದರ್ಶವನ್ನು ಸಾರಿದವು. ಸಮಾಜದ ಅಪಕಲ್ಪನೆಗಳು, ತಾರತಮ್ಯಗಳು ನಿಷೇಧಗಳು ಭೇದಗಳು ನಾಶವಾಗಲು ಅಕ್ಷರದ ಮೂಲಕ ಸಾಧ್ಯ ಎಂದು ಪ್ರತಿಪಾದಿಸಲಾಯಿತು. ನಿರಂತರವಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಯಿತು. ಕೆಳ ಮಟ್ಟದ ಶಿಕ್ಷಣವಿಲ್ಲದೆ ಯಾವ ಅಭಿವೃದ್ಧಿಯನ್ನು ಸಾಧಿಸಲಾಗದು ಎಂಬ ಅರಿವು ಪ್ರಚಾರವಾಯಿತು. ಸ್ವತಃ ಜನರೇ ಶಿಕ್ಷಣದ ಕಲಿಕೆಗೆ ಮನಸ್ಸು ಕೊಡುವಂತಹ ಸಾಂಸ್ಕೃತಿಕ ಒತ್ತಡವನ್ನು ಸಾಕ್ಷರತಾ ಕಲಾಜಾಥಗಳು ನಿರ್ಮಿಸಿದವು. ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಿಸಲಾಯಿತಲ್ಲದೆ ಸ್ತ್ರೀ ಸ್ವಾತಂತ್ರ‍್ಯವನ್ನೂ ಪ್ರತಿಪಾದಿಸಿ ಮಹಿಳಾ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಯಿತು. ಇವೆಲ್ಲದರಿಂದ ಪರೋಕ್ಷವಾಗಿ ಸಾಮಾಜಿಕ ಆರೋಗ್ಯ ಸ್ವಾವಲಂಬನೆ ಮತ್ತು ಸಮಾನತೆ ಸಾಧ್ಯವೆಂದು ಬೋಧಿಸಲಾಯಿತು.

ಇವನ್ನೆಲ್ಲ ಗಮನಿಸಿದರೆ ಸಾಹಿತ್ಯ ಪರಂಪರೆಗಳು ಮಾಡಬಹುದಾದ ಎಷ್ಟೋ ಪ್ರಭಾವಿ ಕರ್ತವ್ಯಗಳನ್ನು ಶಿಕ್ಷಣದ ಕನಸುಗಳು ಕೂಡ ಮಾಡುತ್ತವೆಂಬುದು ಸ್ಪಷ್ಟವಾಗುತ್ತದೆ. ಭಾಷೆ ಮತ್ತು ಸಂಸ್ಕೃತಿಗಳು ಅಕ್ಷರಕ್ರಾಂತಿಯಿಂದ ವಿಸ್ತರಿಸುತ್ತದೆ. ಅಭಿವೃದ್ಧಿಯ ಒಳಿತು ಕೆಡುಕಿನ ದಾರಿ ತಿಳಿಯುತ್ತದೆ. ವರ್ತಮಾನದ ಸಮಾಜದಲ್ಲಿ ಪ್ರಶ್ನಿಸುವ ಶಕ್ತಿ ಮೂಡುತ್ತದೆ. ಪ್ರತಿಭಟನೆಯ ಸ್ವಭಾವ ವೃದ್ಧಿಸುತ್ತದೆ. ಸಹಕಾರಿ ಭಾವನೆಯ ಜೊತೆಗೆ ಸಾಮರಸ್ಯವೂ ಅರಳುತ್ತದೆ. ಸುಶಿಕ್ಷಿತ ನಡತೆಯಿಂದ ಸಮಾಜದ ಶಾಂತಿಯು ಹೆಚ್ಚುತ್ತದೆ. ಸಾಕ್ಷತೆಯಿಂದ ಸಾಮಾನ್ಯ ವ್ಯವಹಾರ ಬುದ್ಧಿಯು ಚುರುಕುಗೊಳ್ಳುತ್ತದೆ. ರಾಜಕೀಯ ವರ್ತಮಾನಗಳು ತಿಳಿಯಲ್ಪಡುತ್ತವೆ. ನೌಕರಷಾಹಿಯ ಅನ್ಯಾಯವನ್ನು ಕಂಡುಕೊಂಡು ಹಕ್ಕು ಚಲಾಯಿಸಲು ಅವಕಾಶವಾಗುತ್ತದೆ. ಹೀಗೆ ಅನೇಕ ಸಕಾರಾತ್ಮಕ ಸಾಧ್ಯತೆಗಳನ್ನು ಪಟ್ಟಿಮಾಡಬಹುದು. ಆದರೆ ವಾಸ್ತವ ಯಾವತ್ತೂ ಭಾರತೀಯ ಸಮಾಜದಲ್ಲಿ ತದ್ವಿರುದ್ಧವಾಗಿರುತ್ತದೆ. ಇಂತಹ ಮಹತ್ವದ ಯೋಜನೆಗಳಿಂದ ವಯಕ್ತಿಕ ಎಚ್ಚರವೇ ಉಂಟಾಗುತ್ತಿದ್ದು ಅಖಂಡ ಪರಿವರ್ತನೆ ಸಾಧ್ಯವಾಗುತ್ತಿಲ್ಲ. ಸಾಕ್ಷರತಾ ಆಂದೋಲನ ಒಂದು ನಿರಂತರ ಪ್ರಕ್ರಿಯೆಯಾಗಿ ಈಗಲೂ ಕ್ರಿಯೆಯಲ್ಲಿ ತೊಡಗಿದೆ. ನಿರ್ವಹಣೆಯೇ ಬಹುದೊಡ್ಡ ವ್ಯವಹಾರ. ಸರ್ಕಾರದ ಯೋಜನೆಗಳೆಲ್ಲ ನೌಕರಶಾಹಿಯಿಂದ ಹಿಡಿದು ರಾಜಕಾರಿಣಿಗಳವರೆಗೂ ಸ್ವಯಂಸೇವಾ ಸಂಸ್ಥೆಗಳ ತನಕ ಒಂದು ವ್ಯವಹಾರ ವ್ಯಾಪಾರ ಒಪ್ಪಂದದ ಭಾಗವಾಗಿಯೇ ನಡೆಯಲ್ಪಡುತ್ತವೆ. ಹೀಗಾಗಿ ಉದ್ದೇಶಿತ ಗುರಿಯು ಯಾವತ್ತೂ ತಪ್ಪುತ್ತಿರುತ್ತದೆ. ಎಪ್ಪತ್ತರ ದಶಕದಿಂದಲೂ ಸಾಕ್ಷರತಾ ಆಂದೋಲನ ನಡೆಯುತ್ತಲೇ ಇದ್ದರೂ ಪೂರ್ಣ ಸಾಕ್ಷರತೆ ಸಾಧ್ಯವೇ ಆಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಕರ್ನಾಟಕದ ಶಿಕ್ಷಣದ ಹೊಣೆಗಾರಿಕೆಯೂ ಬೇರೆಯಾಗಬೇಕಾಗಿದೆ.

ಹಾಗೆ ನೋಡಿದರೆ ಶಿಕ್ಷಣದ ಖಾಸಗೀಕರಣ ಏಕೀಕರಣದ ನಂತರದಲ್ಲಿ ತೀವ್ರವಾಗಿ ಉಂಟಾಗಿದೆ. ಈ ಬಗ್ಗೆ ಎಲ್ಲ ಪ್ರಗತಿಪರರು ಚಿಂತಿಸಿದ್ದು ಪ್ರತಿಭಟಿಸಿದ್ದು ಕೇವಲ ಅರಣ್ಯ ರೋಧನವಾಗಿದೆ. ಶಿಕ್ಷಣದ ಖಾಸಗೀಕರಣವೂ ಕೂಡ ಜಾತಿ ಧರ್ಮಗಳ ಆಧಾರದಲ್ಲಿಯೇ ಆಗಿದೆ. ಅನ್ಯಾಯವನ್ನು ಖಂಡಿಸುವ ಬದಲು ಅವರೆಲ್ಲ ಪಾಲು ಪಡೆಯುವುದೇ ನ್ಯಾಯ ಮಾರ್ಗ ಎಂಬ ಭಾವನೆಯು ಎಲ್ಲ ರಂಗಗಳಲ್ಲೂ ಬಲವಾಗುತ್ತಿದೆ. ಹೀಗಾಗಿಯೇ ಸಾಮಾಜಿಕ ನ್ಯಾಯದ ಹೋರಾಟ, ಕ್ರಿಯಾಯೋಜನೆಗಳು ಕೂಡ ಅನ್ಯಾಯದ ಕ್ರಮದಲ್ಲೇ ಸಾಗಿ ಅನ್ಯಾಯದಿಂದ ನ್ಯಾ ಪಡೆವ ಸ್ಥಿತಿ ನಿರ್ಮಾನವಾಗುತ್ತಿದೆ. ಒಂದು ನಾಡಿನ ಏಳಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ವ್ಯಾಪಾರಿಯದಾದರೆ ಅದಕ್ಕಿಂತ ವಿಪರ್ಯಾಸ ಮತ್ತೊಂದಿರಲಾರದು. ಇದಕ್ಕೂಮಿಗಿಲಾದ ಅಪರಾಧವೆಂದರೆ ಶಿಕ್ಷಣದ ಮೂಲ ಆಶಯಗಳನ್ನು ಬಂಡವಾಳಶಾಹಿ ಹಾಗು ಮತೀಯ ಧಾರ್ಮಿಕ ಉದ್ದೇಶಗಳಿಗೆ ತಕ್ಕಂತೆ ವಿರೂಪಗೊಳಿಸುವುದು. ಶಿಕ್ಷಣದ ಕೇಸರೀಕರಣ ಕರ್ನಾಟಕದಲ್ಲೂ ಬಲವಾಗಿ ಆಗುತ್ತಿದೆ. ಒಂದೆಡೆ ಶಿಕ್ಷಣದ ಖಾಸಗೀಕರಣ ಮತ್ತೊಂದೆಡೆ ಶಿಕ್ಷಣದ ಕೇಸರೀಕರಣ ಇವೆರಡೂ ನಾಡುನುಡಿಯ ಶಾಪಗಳು. ರಾಜಕಾರಣಿಗಳೇ ಈ ಸ್ಥಿತಿಗಳ ನಿರ್ಮಾಪಕರು ಹಾಗು ಮಾಲೀಕರು.ಉನ್ನತ ಶಿಕ್ಷಣ ಸಂಸ್ಥೆಗಳೂ ಜಾತಿಯ ಕೂಪಗಳಾಗುತ್ತಿವೆ. ಇನ್ನು ವೃತ್ತಿಪರ ಶಿಕ್ಷಣವು ದಲ್ಲಾಳಿಕೋರತನದ ಪ್ರತೀಕವಾಗುತ್ತಿದ್ದು ಮಾಹಿತಿ ತಂತ್ರಜ್ಞಾನದ ಶಿಕ್ಷಣವು ನಾಡನ್ನೆ ಹರಾಜಿಗಿಡುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಜೀತಗಾರಿಕೆಗೆ ನಾಡಿನ ಖಾಸಗೀ ಶಿಕ್ಷಣ ಸಂಸ್ಥೆಗಳು ಯುವ ಪೀಳಿಗೆಯನ್ನು ಸೆಳೆದು ಅವರನ್ನು ಖಾಸಗೀ ನೆಲೆಗಳಿಗೆ ರೂಪಾಂತರಿಸುವ ಹಾಗೆಯೇ ಒಳಗೆ ಅವರನ್ನು ತಂತ್ರಜ್ಞಾನದ ಗುಲಾಮಗಿರಿಗೆ ತಳ್ಳಿ ಸಾರಸಗಟು ಮಾರುವ ಅಭಿವೃದ್ಧಿದಂದೆಗೆ ಒಳಪಡಿಸಲಾಗುತ್ತಿದೆ. ಶಿಕ್ಷಣ ಎಂಬುದು ಮೂಲಭೂತ ಹಕ್ಕು ಎಂಬ ಸಂವಿಧಾನದ ಆಶಯವನ್ನೆ ಗಾಳಿಗೆ ತೂರಿ ಪ್ರಬಲ ಜಾತಿ ಮತ್ತು ವರ್ಗಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಬಡ ಸಮುದಾಯಗಳಿಗೆ ಈ ಶಿಕ್ಷಣದ ದಾರಿಯೆ ಮುಂದೆ ಮುಚ್ಚಿ ಹೋಗುಬಲ್ಲುದು. ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳನ್ನೆಲ್ಲ ನಗರದ ಮಕ್ಕಳೇ ಪಡೆದುಕೊಳ್ಳುವಂತಹ ತಾರತಮ್ಯದ ನೀತಿಯೂ ಶಿಕ್ಷಣ ವ್ಯವಸ್ಥೆಯಲ್ಲಿ ಬೇರೂರಿದೆ.