ಆದರ್ಶ ರಾಜ್ಯದಿಂದ ಕೆಟ್ಟ ಕವಿಗಳನ್ನಲ್ಲದೆ ಕೆಟ್ಟ ರಾಜಕಾರಣಿಗಳನ್ನೂ ಹೊರ ಹಾಕಬೇಕಾದ್ದಿದೆ. ಆದರ್ಶವನ್ನು ಮೂಲೆ ಗುಂಪು ಮಾಡುವ ರಾಜಕಾರಣದಿಂದಲೇ ಆದರ್ಶ ರಾಜ್ಯವು ಕೇವಲ ಬಾಯಿ ಮಾತಿನದಾಗುವುದು. ವರ್ತಮಾನದ ರಾಜಕಾರಣವು ಮತದಾರರನ್ನು ಖರೀದಿಸುವ ಆಧಾರದ ಮೇಲೆ ನಡೆಯುತ್ತದೆ. ರಾಜಕಾರಣವೇ ಒಂದು ಉದ್ಯಮವಾಗಿದೆ. ಬಂಡವಾಳಶಾಹಿ ರಾಜಕಾರಣದಿಂದ ಮತದಾರರು ಕಚ್ಛಾ ವಸ್ತುವಿನಂತೆ ಕನಿಷ್ಠ ಬೆಲೆಗೆ ಬಿಕರಿಯಾಗುತ್ತಿದ್ದಾರೆ. ಇದರಿಂದಾಗಿ ನಾಡುನುಡಿ, ಪ್ರಜಾ ಸಮಾಜಗಳೆಲ್ಲವೂ ಅರ್ಥ ಕಳೆದುಕೊಳ್ಳುತ್ತಿವೆ. ರಾಜಕೀಯ ಪಕ್ಷಗಳು ಬೃಹತ್‌ ಉದ್ಧಿಮೆಯಂತೆ ಕೆಲಸ ಮಾಡುತ್ತಿವೆ. ರಾಜಕೀಯ ಪಕ್ಷಗಳ ಸಂಘಟಿತ ಜಾಲವು ಮತ ಬ್ಯಾಂಕುಗಳನ್ನು ವೃದ್ಧಿಸಿಕೊಂಡು ಮತದಾರರನ್ನು ಕಕ್ಷೆಯೊಳಕ್ಕೆ ತಂದುಕೊಳ್ಳುತ್ತಿರುತ್ತವೆ.

ಇಲ್ಲೆಲ್ಲ ಹುಸಿಯ ಆಶ್ವಾಸನೆಗಳೇ ಬಂಡವಾಳ. ಏಕೀಕರಣದ ನಂತರದ ನಾಡುನುಡಿಯ ರಾಜಕಾರಣವು ಕೆಲವೇ ದಶಕಗಳಲ್ಲಿ ಸಮಾಜಗಳ ರಾಜಕೀಯ ಜಾಗೃತಿಯನ್ನು ಅಪಮೌಲ್ಯೀಕರಿಸಿದೆ. ಎಪ್ಪತ್ತರ ದಶಕದ ನಂತರ ರಾಜಕೀಯ ಪರಿಣಾಮಗಳೂ ವಿಕಾರವಾಗಿ ಜಾತಿ ರಾಜಕಾರಣದ ಸೂತ್ರಕ್ಕೆ ಈಡಾಗಿವೆ. ಜಾತಿ ಮತ್ತು ರಾಜಕಾರಣಗಳೆರಡೂ ಕ್ರೂರವಾಗಿ ಬಲಿತು ರಾಜಕೀಯ ಪಕ್ಷಗಳೂ ಅದರಂತೆಯೇ ಬೆಳೆದಿವೆ. ಎಪ್ಪತ್ತರ ದಶಕದಲ್ಲಾದ ಬಹುಮುಖಿ ಎಚ್ಚರವನ್ನೂ ಎಂಬತ್ತರ ದಶಕದ ಮುಕ್ತ ಆರ್ಥಿಕ ನೀತಿಯು ಉರುಳಿಸಿತು. ವಿದೇಶಿ ಮಾರುಕಟ್ಟೆಯ ಜಾಲಕ್ಕೆ ಬೆಂಬಲವಾಗಿ ನಿಂತ ಸ್ವದೇಶಿ ಸರ್ಕಾರಗಳು ಬಹುಸಂಖ್ಯಾತ ಸಮುದಾಯಗಳ ಹಿತವನ್ನು ಬಲಿ ಕೊಟ್ಟಿತು. ಈ ಹಿನ್ನೆಲೆಯಲ್ಲಿ ತೊಂಬತ್ತರ ದಶಕದ ಕನ್ನಡ ರಾಜಕಾರಣವು ಬಹುಪಾಲು ಲೂಟಿಕೋರತನವನ್ನೆ ರಾಜಕಾರಣವನ್ನಾಗಿ ಮಾಡಿತು. ಈವರೆಗಿನ ಚುನಾವಣಾ ರಾಜಕಾರಣದ ಹುನ್ನಾರಗಳನ್ನು ಗ್ರಹಿಸಿದರೆ; ಹೇಗೆ ಕನ್ನಡ ನಾಡಿನ ರಾಜಕಾರಣವು ಕೂಡ ಭ್ರಷ್ಟ ವ್ಯವಸ್ಥೆಯ ಭಾಗವಾಗಿ ಸಮಾಜಗಳನ್ನು ಆಳಿವೆ ಎಂಬುದು ತಿಳಿಯುತ್ತದೆ. ಅಂತಹ ಅಂಶಗಳಿಂದಾಗಿಯೇ ಕರ್ನಾಟಕದ ಭವಿಷ್ಯವು ದಿಕ್ಕೆಟ್ಟಿರುವುದು. ಯಾವುದೇ ಆಡಳಿತಾರೂಢ ಸರ್ಕಾರಗಳು ಕೊಟ್ಟ ಆಶ್ವಾಸನೆಗಳಿಗೂ ಪಕ್ಷಗಳ ಘೋಷಣೆಗಳಿಗೂ ಮತದಾರರ ಕನಸು, ನಿರೀಕ್ಷೆಗಳಿಗೂ ಮಾನವೀಯ ಸಂಬಂಧಗಳೇ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ವರ್ತಮಾನದ ಕನ್ನಡ ರಾಜಕಾರಣದ ನೆಲೆಗಳನ್ನು ಹೀಗೆ ಪಟ್ಟಿ ಮಾಡಬಹುದು.

೧. ರಾಜಕಾರಣವು ಜಾತಿ ಶ್ರೇಣಿಗೆ ತಕ್ಕಂತೆ ಜಾತೀಕರಣಗೊಳ್ಳುತ್ತಿದೆ. ಜಾತಿಗೆ ಅನ್ವಯವಾಗುವ ಒಳ ಮೀಸಲಾತಿ ರಾಜಕಾರಣವು ಬಲವಾಗುತ್ತಿದೆ. ಜಾತಿ ವಿನಾಶದ ಸಾಮಾಜಿಕ ನೀತಿಯು ಒಂದೆಡೆಗಿದ್ದರೆ ರಾಜಕಾರಣದಲ್ಲಿ ಜಾತಿ ವ್ಯವಸ್ಥೆಯನ್ನು ಶಾಶ್ವತೀಕರಿಸುವ ಕುತಂತ್ರಗಳು ಜಾಣಾಕ್ಷವಾಗಿವೆ. ಜಾತಿಯ ಲೆಕ್ಕಾಚಾರದಿಂದಲೇ ಚುನಾವಣೆ ಮಾಡುವ, ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಹುನ್ನಾರಗಳು ಬಹಿರಂಗವಾಗಿವೆ. ಜಾತಿಯ ಭಾವನಾತ್ಮಕ ಅಂಶಗಳಿಂದಲೇ ಚುನಾವಣೆಗಳನ್ನು ಗೆಲ್ಲುವ ಕೌಶಲ್ಯ ಹೆಚ್ಚಾಗಿದೆ.

೨. ಮತೀಯ ರಾಜಕಾರಣ ಜನಪ್ರಿಯವಾಗುತ್ತಿದೆ. ಧಾರ್ಮಿಕ ನಂಬಿಕೆಗಳಿಂದ ಸಮಾಜಗಳನ್ನು ಧಾರ್ಮಿಕ ರಾಜಕಾರಣಕ್ಕೆ ಸೆಳೆಯಲಾಗುತ್ತಿದೆ. ಮೂಲಭೂತವಾದವನ್ನು ರಾಜಕೀಯವಾಗಿ ಎತ್ತಿ ಹಿಡಿಯಲಾಗುತ್ತಿದೆ. ಮತಮೌಢ್ಯದ ಶ್ರದ್ಧೆಯನ್ನೆ ಚುನಾವಣಾ ಬಂಡವಾಳವನ್ನಾಗಿಸಲಾಗುತ್ತಿದೆ. ಧರ್ಮದ ಹೆಸರಲ್ಲಿ ಅನ್ಯಧರ್ಮೀರನ್ನು ನಿರಾಕರಿಸುವ ರಾಜಕೀಯ ಹುನ್ನಾರಗಳು ಬೆಳೆಯುತ್ತಿವೆ. ಅಲ್ಪಸಂಖ್ಯಾತ ಸಮುದಾಯಗಳ ಮತಗಳನ್ನು ಗಳಿಸಲು ಕೂಡ ಅವರವರ ಧರ್ಮಶ್ರದ್ಧೆಗಳನ್ನು ಬೆಳೆಸಲು ಒತ್ತಾಸೆಯಾಗುವ ಮೂಲಕ ಒಟ್ಟು ಮತೀಯ ರಾಜಕಾರಣವನ್ನು ಎಲ್ಲ ಪಕ್ಷಗಳು ಅನುಸರಿಸುತ್ತಿವೆ. ಸಂಸ್ಕೃತಿ ಹೆಸರಲ್ಲಿ ಧರ್ಮಬೀರುವಾಗುವ ಅಪಾಯ ಸಮಾಜಗಳಿಗೆ ಅಂಟಿದೆ. ಧರ್ಮ ಸೂಕ್ಷ್ಮಗಳನ್ನು ಕೆದಕುವ, ಸಾಮಾಜಿಕ ಭಾವನೆಗಳಿಗೆ ಮಸಿ ಬಳಿಯುವ ಆ ಮೂಲಕ ಸಮೂಹ ಸನ್ನಿಶಕ್ತಿಯನ್ನು ಹುಚ್ಚೆಬ್ಬಿಸಿ ಮತೀಯ ಹಿಂಸಾಚಾರವನ್ನು ಎಸಗುವ ಧೂರ್ತ ರಾಜಕಾರಣವು ಕ್ರಿಯಾಶೀಲವಾಗಿದೆ.

೩. ಚುನಾವಣಾ ರಾಜಕಾರಣವೇ ಒಂದು ಬೃಹತ್ ಉಧ್ಯಮವಾಗಿದೆ. ಸಮುದಾಯಗಳನ್ನು ಜಾತಿಶ್ರೇಣಿಯಲ್ಲಿ ವಿಂಗಡಿಸಿ ಮತದಾರರನ್ನು ಹಣದ ಮೂಲಕ ಭ್ರಷ್ಠಗೊಳಿಸಿ ಅಧಿಕಾರ ಹಿಡಿಯುವ ನೀಚ ರಾಜಕಾರಣವು ಬಲಗೊಂಡಿದೆ. ಚುನಾವಣೆಗಾಗಿ ಶತಕೋಟಿಗಟ್ಟಲೆ ಹಣ ಸುರಿದು ಗೆದ್ದು ನಂತರ ಇಡೀ ರಾಜ್ಯದ ಆರ್ಥಿಕತೆಯ ಯೋಜನೆಗಳಿಂದಲೇ ಸರ್ಕಾರದ ಬೊಕ್ಕಸದಿಂದಲೇ ಲೂಟಿ ಹೊಡೆವ ರಾಜಕೀಯ ಉದ್ಯಮವು ಕೊಬ್ಬಿದೆ. ಇದಕ್ಕೆ ಲೇವಾದೇವಿ, ದಲ್ಲಾಳಿ ರಾಜಕಾರಣ ಎಂತಲೂ ಕರೆಯಬಹುದಾಗಿದೆ. ಹಣದ ಮೂಲಕ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳು ನಾಡನ್ನು ಖಾಸಗೀ ಬಂಡವಾಳವನ್ನಾಗಿ ಮಾರ್ಪಡಿಸಿಕೊಳ್ಳುತ್ತಿವೆ. ಸ್ವತಃ ರಾಜಕೀಯ ಪಕ್ಷಗಳೇ ಖಾಸಗೀ ಸಂಸ್ಥೆಗಳಾಗಿದ್ದು ಜಾತಿಬದ್ಧವಾಗಿ ಸ್ವಾರ್ಥ ಕೇಂದ್ರಿತವಾಗಿವೆ.

೪. ಕೌಟುಂಬಿಕ ರಾಜಕಾರಣವು ವ್ಯಾಪಕವಾಗುತ್ತಿದೆ. ತಂದೆ ಮಕ್ಕಳ ರಾಜಕಾರಣದಿಂದ ನಾಡಿನ ಅಧಿಕಾರದ ಚುಕ್ಕಾಣಿಯು ವಂಶಪಾರಂಪರ್ಯ ರೀತಿಗೆ ಒಳಗಾಗಿದೆ. ಕೆಲವೇ ಕುಟುಂಬಗಳು ಕರ್ನಾಟಕದ ಅಧಿಕಾರ ಕೇಂದ್ರದಲ್ಲಿ ತೊಡಗಿವೆ. ಊಳಿಗಮಾನ್ಯ ಜಾತಿ ರಾಜಕಾರಣವು ಇದಕ್ಕೆ ಪೂರಕವಾಗಿದೆ. ಪ್ರಜಾಪ್ರಭುತ್ವವಾದಿ ರಾಜಕೀಯದ ಹೆಸರಲ್ಲೆ ಕೌಟುಂಬಿಕ ರಾಜಕಾರಣವು ಕನ್ನಡ ನಾಡನ್ನು ಖಾಸಗೀ ಕ್ಷೇತ್ರದಂತೆ ಪಟ್ಟಭದ್ರ ಗೊಳಿಸಿಕೊಂಡಿದೆ. ವ್ಯಕ್ತಿ ನಿಷ್ಠ ಹಠದ ರಾಜಕಾರಣದಿಂದ ನಾಡಿನ ಮತದಾರರೇ ಭ್ರಷ್ಠಗೊಂಡಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಪ್ರಬಲ ಜಾತಿಗಳ ಮುಖವಾಣಿಯಾಗುತ್ತಿದ್ದು ಜಾತಿಗೊಂದೊಂದು ರಾಜಕೀಯ ಕುಟುಂಬಗಳು ಬಲಗೊಳ್ಳುತ್ತಿವೆ. ಆಯಾ ಜಾತಿಯ ಪ್ರಮುಖ ರಾಜಕೀಯ ಕುಟುಂಬಗಳನ್ನು ಬೆಳಸುವುದು ರೂಢಿಯಾಗಿದೆ.

೫. ವೃತ್ತಿನಿರತ ರಾಜಕಾರಣವು ವ್ಯಾಪಕವಾಗುತ್ತಿದ್ದು ರಾಜಕಾರಣವು  ಖಾಸಗೀಕರಣಗೊಳ್ಳುತ್ತಿದೆ. ರಾಜಕಾರಣವು ನಾಡುನುಡಿಯ ಸಮಷ್ಠಿ ಸೇವಾಕ್ಷೇತ್ರವೆಂದೆನಿಸಿದ್ದ ಗಾಂಧಿಯುಗವು ಅಳಿದು ರಾಜ್ಯದ ಸರ್ಕಾರವನ್ನು ಹಿಡಿಯುವ ಅಧಿಕಾರ ನಡೆಸುವ ಹೊಣೆಯು ಈಗ ವೃತ್ತಿ ಸ್ವರೂಪ ಪಡೆದಿದೆ. ಈ ವೃತ್ತಿಯಾದರೂ ಊಳಿಗಮಾನ್ಯ ಪ್ರಭುತ್ವವನ್ನು ಪ್ರಜಾಪ್ರಭುತ್ವದ ಮಾದರಿಯಲ್ಲಿ ರೂಪಾಂತರಗೊಳಿಸಿಕೊಂಡಿರುವುದಾಗಿದೆ. ಸ್ವಹಿತಾಶಕ್ತಿಯು ಇಂತಹ ರಾಜಕಾರಣದಿಂದ ಜಾತಿಗಳನ್ನು ಸೀಳುವ ರಾಜಕಾರಣವೇ ಮುಖ್ಯವಾಗುತ್ತಿದೆ. ಲಿಂಗಭೇದ ನೀತಿಯ ರಾಜಕಾರಣವೂ ಇಲ್ಲಿ ಕೆಲಸ ಮಾಡುತ್ತದೆ. ಮಹಿಳಾ ಸಮಾಜದ ಇಚ್ಛಾ ಶಕ್ತಿಯನ್ನು ಕೊಲ್ಲುವ ಪುರುಷ ಪ್ರಧಾನ ರಾಜಕಾರಣವು ಮಹಿಳೆಯರ ರಾಜಕೀಯ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದೆ. ಒಂದು ವೇಳೆ ಮಹಿಳಾ ಮೀಸಲಾತಿಯನ್ನು ನೀಡಿದರೂ ಅದನ್ನು ಅಪಮೌಲ್ಯಗೊಳಿಸಿ ಪುರುಷಾಧಿಪತ್ಯವೇ ಆಳುವ ಹುನ್ನಾರಗಳು ಸೇರಿಕೊಳ್ಳುತ್ತವೆ.

೬. ಒಡೆದು ಆಳುವ ನೀತಿಯು ರಾಜಕಾರಣದ ತಂತ್ರವಾಗುತ್ತಿದೆ. ಬೃಹತ್ ಸಮುದಾಯಗಳ ರಾಜಕಾರಣವು ಅಲಕ್ಷಿತ ಸಮುದಾಯಗಳನ್ನು ದುರ್ಬಳಕೆ ಮಾಡಿಕೊಂಡು; ತಮ್ಮ ಹಿತಕ್ಕಾಗಿ ಕೆಳ ಜಾತಿಗಳ ಮೀಸಲು ಪ್ರತಿನಿಧಿಗಳನ್ನು ಗೌರವಾನ್ವಿತ ದಾಸ್ಯಕ್ಕೆ ಖರೀದಿಸುವುದು ಸಲೀಸಾಗಿದೆ. ಪ್ರಾತಿನಿಧ್ಯ ಕೊಡುವ ಮೂಲಕ ಒಂದೊಂದು ಜಾತಿಯನ್ನು ಸಮಾಧಾನಪಡಿಸುತ್ತಲೇ ಒಂದೊಂದು ಸಮುದಾಯಗಳನ್ನು ಅಂತಹ ಪ್ರತಿನಿಧಿಗಳ ಮೂಲಕ ಎತ್ತಿ ಕಟ್ಟಿ ಸಂಘಟಿತವಾಗುವ ಬಲವನ್ನೆ ಕುಗ್ಗಿಸಲಾಗುತ್ತಿದೆ. ಒಳಮೀಸಲಾತಿಯ ವರ್ಗೀಕರಣದ ರಾಜಕಾರಣವು ಸಮುದಾಯಗಳನ್ನು ಮತ್ತಷ್ಟು ಭಗ್ನಗೊಳಿಸಿದೆ. ಅಸಂಘಟಿತ ಅಲ್ಪಸಂಖ್ಯಾತ ಸಮುದಾಯಗಳನ್ನು ದ್ವೇಶಿಸುವ ತುಳಿಯುವ ರಾಜಕೀಯ ತಂತ್ರಗಳು ರಾಜಕೀಯದಲ್ಲಿ ಸಲೀಸಾಗುತ್ತಿವೆ.

೭. ಹಿಂಸೆ ಮತ್ತು ಅಪರಾಧಿ ರಾಜಕಾರಣವು ಮೊಳೆಯುತ್ತಿದೆ. ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿದ್ದ ರಾಜಕೀಯ ಹಿಂಸಾಚಾರವು ಈಗ ಎಲ್ಲ ರಾಜ್ಯಗಳಿಗೂ ಬೇರೆ ಸ್ವರೂಪಗಳಲ್ಲಿ ವಿನಿಮಯವಾಗುತ್ತಿದೆ. ಗುಜರಾತಿನ ಹೇಯ ಮತೀಯ ಹಿಂಸಾಚಾರದ ಹಿಂದೆ ಬಲಪಂಥೀ ರಾಜಕಾರಣವಿದೆ. ಕನ್ನಡ ನಾಡಿನಲ್ಲಿ ಬಲಪಂಥೀಯ ರಾಜಕಾರಣವು ಎಲ್ಲ ಪಕ್ಷಗಳಲ್ಲಿ ಬಳಖೆಯಾಗುತ್ತಿದ್ದು ಮೇಲು ನೋಟಕ್ಕೆ ಮಾತ್ರ ಜಾತ್ಯತೀತ ಸಮಾಜವಾದಿ ಧೋರಣೆಗಳು ಜಾಹಿರಾತಿನಂತೆ ಕಂಗೊಳಿಸುತ್ತಿವೆ. ಆಳದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಬಲಪಂಥೀಯ ಧೋರಣೆಯವೇ ಆಗಿದ್ದು ಅವುಗಳು ಅಧಿಕಾರ ಹಿಡಿಯುವಾಗ ನಡೆಸುವಾಗ ಬಲಪಂಥೀಯ ವ್ಯವಹಾರಗಳಲ್ಲೆ ತೊಡಗಿರುವುದು ಸ್ಪಷ್ಟವಾಗಿದೆ. ಬಲಪಂಥೀ ವಿಚಾರಗಳಿಗೆ ಪೂರಕವಾಗಿ ಹಿಂಸೆಯ ವಾತಾವರಣ ರೂಪುಗೊಳ್ಳುತ್ತಿದೆ. ಇನ್ನು ರಾಜಕೀಯ ಅಪರಾಧಗಳು ಸಲೀಸಾಗಿವೆ. ಸ್ವತಃ ರಾಜಕೀಯ ನಾಯಕರೇ ಬಲಪಂಥೀಯ ವಿಚಾರಗಳ ಪ್ರಚಾರಕರಾಗಿರುತ್ತಾರೆ.

೮. ಸಮ್ಮಿಶ್ರ ರಾಜಕಾರಣ ಅಪವಿತ್ರ ಮೈತ್ರಿ ನೀತಿಯು ರಾಜಕಾರಣದಲ್ಲಿ ಈಗ ಹೆಚ್ಚು ಚಾಲ್ತಿಯಲ್ಲಿದೆ. ಯಾವ ರಾಜಕೀಯ ಪಕ್ಷಗಳಿಗೂ ಬಹುಮತ ಸಾಬೀತಾಗುತ್ತಿಲ್ಲ. ಸ್ವತಃ ಪ್ರಜೆಗಳಿಗೆ ಪ್ರತಿನಿಧಿಗಳ ಬಗ್ಗೆ ವಿಶ್ವಾಸವೇ ಇಲ್ಲ. ಅಂತೆಯೇ ರಾಜಕೀಯ ಪಕ್ಷಗಳಿಗೂ ಆಳದಲ್ಲಿ ಅವಿಶ್ವಾಸವೇ ಮನೆ ಮಾಡಿದ್ದು ರಾಜಕೀಯ ಒಪ್ಪಂದಗಳೆಲ್ಲ ಹುಸಿಯಾಗಿದ್ದು ರಾಜಕೀಯವಾದ ಬೇಟೆಯ ಸಂಚು ವ್ಯಾಪಕವಾಗುತ್ತಿದೆ. ರಾಜಕೀಯ ದ್ವೇಶಗಳು ತುಂಬ ಕೀಳು ಮಟ್ಟಕ್ಕೆ ಇಳಿಯುತ್ತಿವೆ. ಸ್ವತಃ ರಾಜಕೀಯ ಪಕ್ಷಗಳು ಕೂಡ ರಾಜಕೀಯ ದ್ವೇಶವನ್ನೆ ಸಾಧಿಸಲು ಮುಂದಾಗುತ್ತಿವೆ. ನಾಡುನುಡಿ ಸಮಾಜಗಳ ಬಗ್ಗೆ ಇಟ್ಟುಕೊಳ್ಳಬೇಕಾದ ಏಕಾಭಿಪ್ರಾಯವನ್ನು ಪಕ್ಷಗಳು ನಿರ್ವಹಿಸದೆ ವಿರೋಧ ನೀತಿಯಲ್ಲೆ ಮಾತನಾಡುವುದಿದೆ. ವಿರೋಧ ಪಕ್ಷಗಳೂ ವಿರೋಧಿಸುತ್ತಿವೆ. ಆಳುವ ಪಕ್ಷಗಳೂ ವಿರೋಧಿಸುತ್ತಿವೆ. ಒಬ್ಬರನ್ನೊಬ್ಬರು ವಿರೋಧಿಸುತ್ತಲೇ ಸಮಾಜಗಳನ್ನು ಸ್ವಾರ್ಥದಿಂದ ಆಳುತ್ತಿರುತ್ತವೆ. ಸಕಾರಾತ್ಮಕವಾದ ಕನಸುಗಳೇ ಸಮ್ಮಿಶ್ರ ರಾಜಕಾರಣದಲ್ಲಿಲ್ಲ. ಆಳುವ ಅಧಿಕಾರದ ಗದ್ದುಗೆಯ ಮೇಲೆಯೇ ಎಲ್ಲ ರಾಜಕೀಯ ಪಕ್ಷಗಳ ಗುರಿಯಿದೆ.

೯. ಭ್ರಷ್ಠ ಚುನಾವಣಾ ರಾಜಕಾರಣದಲ್ಲಿ ಮತದಾನದ ಪ್ರಮಾಣ ಕುಗ್ಗುತ್ತಿದ್ದು ಪ್ರಜ್ಞಾವಂತರು ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿಯುತ್ತಿದ್ದಾರೆ. ಮತದಾನದ ಪ್ರಮಾಣ ಕಡಿಮೆ ಇದ್ದರೂ ಹೆಚ್ಚು ಪ್ರಮಾಣದ ಮತದಾನ ಆಗಿದೆ ಎಂಬ ಸುಳ್ಳನ್ನು ಸೃಷ್ಟಿಸಲಾಗುತ್ತಿದೆ. ಬಲವಂತದ ಮತದಾನ ರೂಢಿಯಾಗಿದೆ. ಲಂಚದ ಮತದಾನದಿಂದ ಜನರ ರಾಜಕೀಯ ಆಯ್ಕೆಯೇ ಸಂಕುಚಿತವಾಗಿದೆ. ಅನೈತಿಕ ಚುನಾವಣಾ ಕ್ರಮಗಳಿಂದ ನ್ಯಾಯೋಚಿತ ಗೆಲುವು ಸಾಧ್ಯವಾಗದೆ ಅನ್ಯಾಯದ ಗೆಲುವು ಮೇಲಗೈ ಸಾಧಿಸುತ್ತಿದೆ. ಸಮೂಹ ಸನ್ನಿ ರಾಜಕಾರಣದ ವರ್ತನೆಗಳಿಂದ ಮತದಾರರ ವಿವೇಚನಾಶಕ್ತಿಯು ಕಳೆದು ಹೋಗುತ್ತಿದೆ. ಸಂವಿಧಾನ ಬದ್ಧ ಮತದಾನದ ಮಹತ್ವದ ಹಕ್ಕು ಮೌಲ್ಯ ಕಳೆದುಕೊಂಡಿದೆ. ಚುನಾವಣಾ ವೆಚ್ಚಗಳು ವಿಪರೀತವಾಗಿದ್ದು ಸ್ಪರ್ಧಿಗಳು ಎಲ್ಲ ಬಗೆಯ ಕುತಂತ್ರದಿಂದ ಮತದಾರರನ್ನು ವಂಚಿಸುವುದಿದೆ. ಕಳ್ಳ ಮತದಾನ ಸಲೀಸಾಗುತ್ತಿದೆ. ಮತದಾನದ ಪ್ರಕ್ರಿಯೆಯು ಸಾರಾಸಗಟು ಮತಖರೀದಿಯ ಬೃಹತ್ ಮಾರುಕಟ್ಟೆಯಂತೆ ಕಂಡುಬರುತ್ತದೆ.

ಇಂತಹ ವಾಸ್ತವಾಂಶಗಳಲ್ಲಿ ಕನ್ನಡ ಸಮಾಜವು ಸಿಲುಕಿದೆ. ಕನ್ನಡ ನಾಡನ್ನು ಕಾಯುವ ನಿಟ್ಟಿನಲ್ಲಿ ನಡೆದ ರಾಜಕೀಯ ಯತ್ನಗಳು ವಿಫಲವಾಗುತ್ತಿವೆ. ಪ್ರಾದೇಶಿಕ ರಾಜಕೀಯ ಪಕ್ಷಗಳು ಹುಟ್ಟಿನಿಂದಲೇ ಕುಂಟುತ್ತ ದಾರಿ ತಪ್ಪುತ್ತಿವೆ. ರಾಜಕಾರಣವೂ ಜಾಗತೀಕರಣಗೊಳ್ಳುತ್ತ ಕನ್ನಡ ನಾಡಿನ ಮೂಲ ಆಶಯಗಳು ಕರಗಿ ಹೋಗುತ್ತಿವೆ. ಏಕೀಕರಣೋತ್ತರ ಕನ್ನಡ ರಾಜಕಾರಣವು ನಾಡನ್ನು ಅಖಂಡವಾಗಿ ಕಟ್ಟಲು ಸಾಧ್ಯವಾಗದೆ ರಾಷ್ಟ್ರೀಯ ಪಕ್ಷಗಳ ಕೇಂದ್ರ ನೀತಿಯಿಂದಾಗಿ ಅಧಿಕಾರಕ್ಕಾಗಿ ಎಲ್ಲ ಸಂಧಾನಗಳನ್ನು ಮಾಡಿಕೊಳ್ಳುತ್ತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಒತ್ತಾಯಕ್ಕೂ ಕೂಡ ಕನ್ನಡ ಭಾಷೆಯ ರಾಜಕಾರಿಣಿಗಳು ತಕ್ಕ ಪ್ರತಿರೋಧವನ್ನೆ ಒಡ್ಡುತ್ತಿಲ್ಲ ಎಂದರೆ ಕನ್ನಡ ರಾಜಕಾರಣದ ಗತಿ ಯಾವ ಸ್ಥಿತಿಯದು ಎಂಬುದು ತಿಳಿಯುತ್ತದೆ. ಕೇಂದ್ರ ಸರ್ಕಾರಗಳ ರಾಜಕಾರಣದ ಹಂಗಿಗೆ ಒಳಗಾಗುವ ಕನ್ನಡ ರಾಜಕಾರಿಣಿಗಳು ಪಕ್ಷಗಳ ಪರವಾಗಿ ಕೆಲಸ ಮಾಡುವರೇ ವಿನಃ ನಾಡು ನುಡಿಯ ಪರವಾಗಿ ಅವರು ಬದ್ಧರಾಗಿಲ್ಲ. ಸ್ಥಳೀಯ ರಾಜಕಾರಣ ಕೂಡ ಪಕ್ಷಗಳ ರಾಷ್ಟ್ರೀಯ ತೀರ್ಮಾನಗಳಿಗೆ ಬದ್ಧವಾಗಿ ರೂಪಿತವಾಗುತ್ತದೆ. ಆಯಾ ಪಕ್ಷಗಳು ಅಧಿಕಾರಕ್ಕೆ ಬರುವುದು ಮುಖ್ಯವಾಗುತ್ತಿದೆಯೇ ವಿನಃ ನಾಡಿನ ಹೊಣೆಗಾರಿಕೆ ಪಕ್ಷಗಳಿಗೆ ಪ್ರಧಾನವಾಗುತ್ತಿಲ್ಲ.

ಯಾವ ರಾಜಕೀಯ ಪರಿಸರದಲ್ಲಿ ಸ್ವಂತ ನಿರ್ಧಾರಗಳು ಇರುವುದಿಲ್ಲವೊ ಅಂತಲ್ಲಿ ರಾಜಕೀಯ ಸ್ವಾತಂತ್ರ‍್ಯವು ಇರುವುದಿಲ್ಲ. ಮಂತ್ರಿ ಶಾಸಕ ಕಾರ್ಯಕರ್ತ ಇವರೆಲ್ಲರೂ ರಾಜಕೀಯ ಪಕ್ಷಗಳ ಪ್ರಬಲ ಏಕಸ್ವಾಮ್ಯ ನಾಯಕರ ಹಂಗಿನಲ್ಲೇ ಅಧಿಕಾರದ ಕುರ್ಚಿ ಪಂದ್ಯದಲ್ಲಿ ಭಾಗವಹಿಸಿರುತ್ತಾರೆ. ನಿರ್ಣಾಯಕ ವೇಳೆಯಲ್ಲೆಲ್ಲ ಹೈಕಮಾಂಡಿನ ನಿರ್ದೇಶನಕ್ಕೆ ಕಾಯುವುದು ನೈತಿಕ ಶ್ರದ್ಧೆಯಲ್ಲ. ಅದು ಅಧಿಕಾರದಾಟದ ತಂತ್ರ ಮಾತ್ರ. ಸಮಾಜಕ್ಕಿಂತಲೂ ಹೈಕಮಾಂಡ್ ದೊಡ್ಡದಲ್ಲ. ಮತದಾರರಿಗಿಂತಲೂ ಮುಖ್ಯ ಮಮತ್ರಿ ಸ್ಥಾನವು ಅಂತಿಮವಲ್ಲ. ಚಿಲ್ಲರೆ ರಾಜಕೀಯ ಚಟುವಟಿಕೆಗಳಲ್ಲೂ ಹೈಕಮಾಂಡಿನ ಪ್ರಭಾವ ಇರುತ್ತದೆ ಎಂದು ಹೇಳಲಾಗುತ್ತದೆ. ಸ್ವಾತಂತ್ರ‍್ಯವಿಲ್ಲದ ರಾಜಕೀಯ ನಡತೆಯು ನಾಡನ್ನು ಬೆಳೆಸಲಾಗದು; ಬದಲಿಗೆ ಪಕ್ಷಗಳು ನಾಡನ್ನು ಹೈಕಮಾಂಡಿಗೆ ಅಡವಿಡಬಲ್ಲವು. ಅನೇಕ ರಾಜಕೀಯ ಪ್ರತಿನಿಧಿಗಳು ಆಯಾ ಸಮುದಾಯಗಳ ಪ್ರಾತಿನಿಧ್ಯವನ್ನೆ ದುರುಪಯೋಗ ಪಡಿಸಿಕೊಂಡಿರುತ್ತಾರೆ. ತಳಸಮುದಾಯಗಳ ಹೆಸರಿನ ರಾಜಕೀಯ ಪ್ರವೇಶವು ಪ್ರಬಲ ಜಾತಿ ಮತ್ತು ಪಕ್ಷಗಳ ನಾಯಕರ ಪಾಲಿಗೆ ಸಲ್ಲಿಸುವ ಕಪ್ಪಕಾಣಿಕೆಯಾಗಿದೆ. ಬಹುಪಾಲು ಮೀಸಲು ಕ್ಷೇತ್ರಗಳ ರಾಜಕೀಯ ಪ್ರಾತಿನಿಧ್ಯವು ಅಂತಿಮವಾಗಿ ಪ್ರಬಲ ಜಾತಿಗಳ ರಾಜಕಾರಣದಲ್ಲಿ ಲೀನವಾಗುತ್ತದೆ. ಹಿಂದುಳಿದ ವರ್ಗಗಳಿಗೆ ಸಿಗಬೇಕಾಗದ ರಾಜಕೀಯ ಮೀಸಲಾತಿಯು ಪ್ರಬಲಜಾತಿಗಳ ಪಾಲಾದರೆ, ಬುಡಕಟ್ಟುಗಳ ರಾಜಕೀಯ ಮೀಸಲಾತಿಯು ಬುಡಕಟ್ಟು ಅಲ್ಲದವರಿಗೆ ದೊರೆತು ಅನ್ಯಾಯವಾಗುತ್ತಿರುತ್ತದೆ. ಈ ಸ್ಥಿತಿಯಲ್ಲಿ ಆದಿವಾಸಿಗಳಿಗೆ ರಾಜಕೀಯ ಮೀಸಲಾತಿಯು ಇದ್ದೂ ಇಲ್ಲವಾಗಿದೆ. ಮೀಸಲು ಕ್ಷೇತ್ರದ ರಾಜಕೀಯ ಪ್ರಾತಿನಿಧ್ಯವನ್ನು ದಲಿತ ಸಮುದಾಯದ ಉದ್ಧಾರಕ್ಕಾಗಿ ವಿನಿಯೋಗಿಸಿಕೊಳ್ಳುವ ಬದಲು ವೈಯಕ್ತಿಕವಾಗಿ ಮಾತ್ರ ಅಂತಹ ನ್ಯಾಯದ ಅವಕಾಶವು ದುರ್ಬಳಕೆಯಾಗುತ್ತಿರುತ್ತದೆ. ರಾಜಕಾರಣಿಗಳ ನಡುವೆ ಅಧಿಕಾರದ ಕೆಟ್ಟ ಪೈಪೋಟಿಯು ನಿರಂತರವಾಗಿದೆ. ಅಧಿಕಾರ ಗದ್ದುಗೆಗೆ ಅಡ್ಡ ಬಂದ ಯಾವುದೇ ಕೆಳಜಾತಿಯ ರಾಜಕಾರಿಣಿಗಳನ್ನು ಮಟ್ಟ ಹಾಕುವುದು ಮಾಮೂಲಾಗಿದೆ.

ಅಹಿಂದ ಯತ್ನದಲ್ಲಿ ಸಿದ್ಧರಾಮಯ್ಯನವರು ಸೋತದ್ದು ಕೂಡ ಪಕ್ಷರಾಜಕಾರಣಿಗಳ ತಂತ್ರದಿಂದಲೇ. ಪ್ರಬಲ ವಕ್ಕಲಿಗ ಹಾಗೂ ಲಿಂಗಾಯತ ಜಾತಿಗಳೆರಡೇ ಶಕ್ತಿ ರಾಜಕಾರಣವನ್ನು ಮಾಡಿ ಯಶಸ್ವಿಯಾಗುತ್ತಿರುವುದು. ಈ ಎರಡೇ ಕೋಮಿನ ಜಾತಿ ರಾಜಕಾರಣವು ಕರ್ನಾಟಕದ ಭವಿಷ್ಯವನ್ನು ಜಾತಿ ಭವಿಷ್ಯವನ್ನಾಗಿ ಮಾರ್ಪಡಿಸಿಕೊಂಡಿವೆ. ಇವೆರಡೂ ಜಾತಿಗಳು ಈಗಾಗಲೇ ಬಲಿಷ್ಠವಾಗಿ ರಾಜಕೀಯ ಜಾತಿಗಳಾಗಿ ಬೆಳೆದಿವೆ. ದೇವೇಗೌಡರು ವಕ್ಕಲಿಗ ಸಮುದಾಯವನ್ನು ಅತ್ಯಂತ ಪ್ರಬಲ ರಾಜಕೀಯ ಸಮುದಾಯವನ್ನಾಗಿ ಪರಿವರ್ತಿಸಿದ್ದಾರೆ. ಇದರ ಪೈಪೋಟಿಯಲ್ಲಿ ಈಗ ಕುರುಬ ಸಮುದಾಯವು ಎದ್ದು ನಿಂತಿರುವುದನ್ನು ಗಮನಿಸಬಹುದು. ಹಿಂದುಳಿದ ವರ್ಗಗಳಲ್ಲಿ ಚಹರೆ ಮರೆಯಾಗಿದ್ದ ಸಮುದಾಯಗಳೀಗ ರಾಜಕೀಯ ಪ್ರವೇಶಕ್ಕಾಗಿ ಸಜ್ಜಾಗುತ್ತಿವೆ. ಎಲ್ಲ ಜಾತಿಗಳೂ ರಾಜಕೀಯ ಪ್ರಾತಿನಿಧ್ಯವನ್ನು ಒತ್ತಾಯಿಸುತ್ತಿವೆ. ಜಾತಿಯ ರಾಜಕೀಯ ಅಭಿವೃದ್ಧಿಯೇ ನಿಜವಾದ ನ್ಯಾಯ ಎಂಬ ಸ್ಥಿತಿ ಬಂದೊದಗಿದೆ. ಜಾತಿ ನಿರಾಕರಣೆಯ ರಾಜಕಾರಣ ಸಾಧ್ಯವೇ ಇಲ್ಲದಂತಾಗಿದ್ದು ಪ್ರತಿ ಹಂತದಲ್ಲೂ ಜಾತಿ ರಾಜಕಾರಣವೇ ನಿರ್ಣಾಯವಾಗುತ್ತಿದೆ.

ಅಂದರೆ ಜಾತಿ ವ್ಯವಸ್ಥೆಯ ಅಧಿಕಾರ ವಿಂಗಡಣೆಯೇ ರಾಜಕಾರಣವಾಗಿದೆ. ಪ್ರಾಚೀನ ಸಮಾಜಗಳಲ್ಲಿ ಜಾತಿಯಾಧಾರಿತ ಧಾರ್ಮಿಕ ರಾಜಕಾರಣವಿತ್ತು. ಈ ಕಾಲದಲ್ಲಿ ಪ್ರಜಾಪ್ರಭುತ್ವಾಧಾರಿತ ಅಧಿಕಾರ ರಾಜಕಾರಣವಿದೆ. ಸಮುದಾಯಗಳ ಶೇಕಡಾವಾರು ರಾಜಕೀಯ ಯಜಮಾನಿಕೆಯು ಅಂತಿಮವಾಗಿ ಬಲಿಷ್ಠ ಜಾತಿಗಳಿಗೇ ಅಧಿಕಾರವನ್ನು ಪ್ರಧಾನವಾಗಿ ಬಿಟ್ಟುಕೊಟ್ಟು ತಮ್ಮ ಕನಿಷ್ಠ ಪಾಲನ್ನೇ ದೊಡ್ಡದೆಂದು ಭ್ರಮಿಸುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಜಾತಿಯ ಸಮುದಾಯವು ಅಖಂಡವಾಗಿ ಪಾಲುಗೊಳ್ಳಲು ಸಾಧ್ಯವಾಗುತ್ತಿಲ್ಲ. ಜಾತಿನಿಷ್ಠ ರಾಜಕೀಯ ಚಟುವಟಿಕೆಗಳು ನಾಡಿನ ಸಮಷ್ಠಿತನವನ್ನು ಪ್ರತಿನಿಧಿಸಲಾರವು. ಹೀಗಾಗಿಯೇ ದೇಶಕ್ಕಿಂತಲೂ ಸಮಾಜಕ್ಕಿಂತಲೂ ಅವರವರ ಜಾತಿಗಳೇ ಸರ್ವಸ್ವವಾಗಿರುವುದು. ಜಾತ್ಯತೀತ ರಾಜಕಾರಣದ ಆಶಯವಿರುವ ಸಂವಿಧಾನದ ಆಶಯವೇ ಅರ್ಥಹೀನವಾಗಿದ್ದು ಸಮಾಜಗಳು ಜಾತಿಗೇ ಹಿಂತಿರುಗುತ್ತಿವೆ. ಹೀಗಾಗುವುದರಿಂದ ಹಿಂದೂ ರಾಜಕಾರಣಕ್ಕೆ ಅದರ ಮತೀಯ ಮೂಲಭೂತ ತಂತ್ರಗಳಿಗೆ ಬಲವನ್ನು ತಂದುಕೊಟ್ಟಂತಾಗುತ್ತದೆ. ಧರ್ಮಗಳ ಉಪಾಯಗಳೂ ಕೂಡ ರಾಜಕೀಯ ಶಕ್ತಿಯನ್ನು ಕುರೂಪಗೊಳಿಸುತ್ತಿವೆ.

ಹೀಗಾಗಿ ಭವಿಷ್ಯದಲ್ಲಿ ಕನ್ನಡ ನಾಡಿಗೆ ಯಾವ ಬಗೆಯ ರಾಜಕಾರಣ ಬೇಕು ಎಂಬುದನ್ನು ವಿವೇಚಿಸಿ ನಿರ್ಧರಿಸುವುದು ಬಹಳ ಕಷ್ಠವಾಗಿದೆ. ಭಾರತೀಯ ಮತದಾರರ ಹಾಗೆ ಕನ್ನಡದ ಮತದಾರರು ಕೂಡ ದಿಕ್ಕೆಟ್ಟಿದ್ದಾರೆ. ತಕ್ಕ ರಾಜಕೀಯ ಪ್ರಜ್ಞೆ ಬೆಳೆಯದೆ ಯೋಗ್ಯ ರಾಜಕಾರಣವನ್ನು ಸಾಧಿಸಲಾಗದು. ಮತದಾನದ ಹಕ್ಕಿನ ಮಹತ್ವವೇ ಸಮಾಜದಲ್ಲಿ ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಮತದಾರರೆಲ್ಲ ಅಸಮರ್ಥರೆಂದೇನು ಅಭಿಪ್ರಾಯವಲ್ಲ. ಮುಖ್ಯವಾಗಿ ಪ್ರಭುದ್ಧ ಮತದಾರರ ಮತಗಳೇ ಲೆಕ್ಕಕ್ಕೆ ಬರುತ್ತಿಲ್ಲ. ಗೆಲ್ಲುವ ಕುದುರೆಗಳ ಪರವಾಗಿ ವಿವೇಚನೆ ಇರುವವರು ಮತ ಚಲಾಯಿಸಿರುವುದಿಲ್ಲ. ಹಾಗಾಗಿ ಪ್ರಭುದ್ಧ ಮತದಾರರು ಸೋಲುತ್ತಲೇ ಬಂದಿದ್ದಾರೆ. ಕೆಲವೇ ಸಂಖ್ಯೆಯ ಮತಗಳಿಸಿ ಗೆದ್ದದ್ದು ಬಹುಸಂಖ್ಯಾತ ಭಿನ್ನ ಮತದಾರರ ಹಕ್ಕನ್ನು ಕಿತ್ತುಕೊಂಡಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಇದು ನ್ಯಾಯದ ಹೆಸರಲ್ಲೇ ಉಂಟಾಗುವ ಅನ್ಯಾಯ. ಮತದಾರರನ್ನೆಲ್ಲ ಒಳಕೊಂಡಂತೆ ನಡೆವ ಚುನಾವಣಾ ಕ್ರಮವೇ ಒಳ್ಳೆಯದು. ಖಡ್ಡಾಯ ಮತದಾನ ಪದ್ಧತಿ ಬರಬೇಕು. ಅಕ್ರಮ ಚುನಾವಣೆಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅತ್ಯಂತ ಸುಲಭವಾಗಿ; ಚುನಾಯಿತ ಪ್ರತಿನಿಧಿಗಳನ್ನು, ಸರ್ಕಾರಗಳನ್ನು ಉರುಳಿಸುವ ನಿರ್ಣಾಯಕ ಅಧಿಕಾರವನ್ನು ಮತದಾರರು ಪಡೆಯುವಂತಾಗಬೇಕು. ಇದಕ್ಕಾಗಿ ಪಕ್ಷಾತೀತವಾಗಿ ಸರ್ಕಾರಗಳ ವ್ಯಾಪ್ತಿ ಮೀರಿ ನ್ಯಾಯಾಂಗದ ಚೌಕಟ್ಟಿನಲ್ಲಿ ಮತದಾರರು ವಿಶೇಷ ಅಧಿಕಾರವನ್ನು ಪಡೆಯಬೇಕು. ಇಂತಹ ಅವಕಾಶಗಳಿದ್ದರೂ ಅವು ಪರಿಣಾಮಕಾರಿಯಾಗಿಲ್ಲ. ತಪ್ಪಿತಸ್ಥ ರಾಜಕಾರಣಿಗಳನ್ನು ಪಕ್ಷಗಳನ್ನು ಕೆಳಗಿಳಿಸುವ ಪರಮಾಧಿಕಾರ ಮತದಾರರಿಗೆ ದೊರೆತಾಗ ರಾಜಕಾರಣದ ರೀತಿನೀತಿಗಳು ಬದಲಾಗಬಲ್ಲವು.

ಸಮುದಾಯಗಳಿಗೆ ಮೂಲಭೂತ ಅವಕಾಶಗಳೆಲ್ಲ ದೊರೆತ ನಂತರಕ್ಕಾದರೂ ರಾಜಕೀಯ ಶಿಕ್ಷಣ ತಿಳುವಳಿಕೆ ಬಂದ ಮೇಲಾದರೂ ರಾಜಕೀಯ ಅಪರಾಧಗಳು ಕಡಿಮೆ ಆಗಿ ಸಾಮಾಜಿಕ ನ್ಯಾಯದ ರಾಜಕಾರಣವು ಸಾಧ್ಯವಾಗಬಹುದು. ಮಹಿಳಾ ರಾಜಕಾರಣವು ಈ ಹಂತದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ. ಪುರುಷ ರಾಜಕಾರಣದ ಅಪರಾಧಗಳನ್ನು ಸರಿಪಡಿಸಲು ಮಹಿಳೆಯರನ್ನು ಹೊಣೆಗಾರರನ್ನಾಗಿಸುವುದು ನ್ಯಾಯವಲ್ಲ. ವಿಶೇಷವಾಗಿ ಮಹಿಳಾ ರಾಜಕಾರಣವನ್ನು ಸ್ವತಃ ಮಹಿಳೆಯರೇ ರೂಪಿಸಿಕೊಂಡು ಲಿಂಗ ತಾರತಮ್ಯವಿಲ್ಲದ ಮಾನವ ರಾಜಕಾರಣವನ್ನು ಕಂಡುಕೊಳ್ಳಬೇಕಾಗಿದೆ. ರಾಜಕಾರಣದ ಉದ್ಯಮವನ್ನು ತಡೆಯದಿದ್ದರೆ ಕನ್ನಡ ನಾಡೇ ಬಹುರಾಷ್ಟ್ರೀಯ ಕಂಪನಿಗಳಂತಾಗಿ ಬಿಡುತ್ತದೆ. ನಾಡುನುಡಿಯ ರಾಜಕಾರಣವು ಸಮುದಾಯಗಳನ್ನು ರಕ್ಷಿಸಬಲ್ಲದು. ಈ ಹಿನ್ನೆಲೆಯಲ್ಲಿ ಜರೂರಾಗಿ ರಾಜಕೀಯ ಆಂದೋಲನಗಳು ಘಟಿಸಬೇಕಾದುದಿದೆ. ಹೀಗೆ ಭಾವಿಸುವುದು ಬಿಟ್ಟೆ ಸಲಹೆಯಂತಾಗಿದೆ. ಕರ್ನಾಟಕದ ಒಟ್ಟು ಸುಧಾರಣೆಗೆ ಬೆಟ್ಟದಷ್ಟು ಸಲಹೆ, ಯೋಜನೆ,ತಂತ್ರಗಳಿವೆಯಾದರೂ ಅವಾವೂ ಸಂಘಟಿತ ಯತ್ನವಾಗುತ್ತಿಲ್ಲ. ಆಧುನಿಕ ಸಮಾಜಗಳಿಗೆ ಅತಿ ಬುದ್ಧಿಯೆ ಅಪಾಯಕಾರಿಯಾಗಿರುವುದು. ಎಚ್ಚರಗೊಂಡಿರುವುದೆಲ್ಲ ಕೆಟ್ಟದ್ದನ್ನು ಮಾಡಿ ದಕ್ಕಿಸಿಕೊಳ್ಳುವುದಕ್ಕೆ ಎಂಬುದು ಸಮಾಜದ ಎಲ್ಲ ಹಂತಗಳಲ್ಲೂ ಕಂಡುಬರುತ್ತಿದೆ.

ಹೀಗೆಯೇ ಒಂದೊಂದು ಜಾತಿಗಳ ರಾಜಕೀಯ ಸಾಮಾಜಿಕ ಆರ್ಥಿಕ ಎಚ್ಚರಗಳು ಸಮನಾಗಿಲ್ಲ. ಒಂದು ಸಮುದಾಯದ ವಿವೇಕಕ್ಕೂ ಮತ್ತೊಂದರ ತಿಳುವಳಿಕೆಗೂ ಹೊಂದಾಣಿಕೆಯೇ ಇಲ್ಲ. ಒಬ್ಬೊಬ್ಬರ ರಾಜಕೀಯ ಎಚ್ಚರವೂಸಮುದಾಯ ಕೇಂದ್ರಿತವಾಗಿ ವ್ಯಕ್ತಿವಾದಿಯಾಗುತ್ತಿದೆಯೇ ವಿನಃ ನಾಡಿನ ಸಮಷ್ಠಿ ರಾಜಕಾರಣವಾಗುತ್ತಿಲ್ಲ. ಒಂದು ಸಮುದಾಯದ ಆಯ್ಕೆಗೂ ಮತ್ತೊಂದರ ಆಯ್ಕೆ ಅವಕಾಶಗಳಿಗೂ ವೈರುಧ್ಯಗಳಿವೆ. ಒಬ್ಬರ ಪರವಾದ ನ್ಯಾಯಕ್ಕೆ ಮತ್ತೊಬ್ಬರ ವಿರೋಧ ರಾಜಕೀಯವಾಗಿ ಒಳಗೇ ಹೊಗೆಯಾಡುತ್ತಿರುತ್ತದೆ. ಆದ್ದರಿಂದಲೇ ಎಲ್ಲಜಾತಿಗಳನ್ನು ಸಮಧಾನಪಡಿಸುವಂತಹ ಅಭಿವೃದ್ಧಿಯ ಪ್ಯಾಕೇಜ್ ಕಾರ್ಯಕ್ರಮಗಳು ಘೋಷಿತವಾಗುವುದು. ಏಕೀಕರಣೋತ್ತರ ರಾಜಕಾರಣವು ಇದರಿಂದಾಗಿಯೇ ಜಾತಿವಾರು ಲೆಕ್ಕದಲ್ಲಿ ನಾಡನ್ನೆ ಜಾತಿಗಳಿಗೆ ತಕ್ಕಂತೆ ರೂಪಿಸುತ್ತಿರುವುದು. ಜಾತ್ಯತೀತ ಸಂವಿಧಾನದಲ್ಲಿ ಜಾತಿನಿಷ್ಠ ರಾಜಕಾರಣವು ಜನಪ್ರಿಯವಾಗುತ್ತಿದ್ದು ಜನಜೀವನದಲ್ಲಿ ರಾಜಕೀಯವು ವ್ಯಾಪಾರವಾಗಿದೆ.

ಈ ಬಗೆಯ ಹಿನ್ನೆಲೆಗಳಿಂದ ವರ್ತಮಾನದ ರಾಜಕಾರಣವು ಮುನ್ನುಗುತ್ತಿದೆ. ಎಚ್ಚೆತ್ತ ಮತದಾರರು ಮಾತ್ರವೇ ಕೆಟ್ಟ ರಾಜಕಾರಣವನ್ನು ನಿಯಂತ್ರಿಸಲು ಸಾಧ್ಯ. ಬೆಕ್ಕಿಗೆ ಗಂಟೆ ಕಟ್ಟಲು ಎಲ್ಲರೂ ಸೋಲುತ್ತಿದ್ದಾರೆಂಬುದು ಕೇವಲ ಅಸಹಾಯಕತೆಯ ಪರಬಲ ಅಭಿವ್ಯಕ್ತಿಯಷ್ಟೆ. ಆದರೆ ಸ್ವತಃ ಬೆಕ್ಕೇ ಗಂಟೆ ಕಟ್ಟಿಕೊಳ್ಳುವಂತಹ ಸಂದರ್ಭವನ್ನು ರೂಪಿಸಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ. ಇಲ್ಲವೇ ಇಲಿಗಳೇ ಗಂಟೆ ಕಟ್ಟಲು ಉಪಾಯ ಕಂಡುಕೊಳ್ಳಬೇಕು. ಈ ಎರಡೂ ರೂಪಕಗಳು ರಾಜಕಾರಣದಲ್ಲಿ ಯಾವತ್ತೂ ಬರುತ್ತಿರುತ್ತವೆ. ಅಂದರೆ ರಾಜಕಾರಣ ಎಂಬುದಾಗಲಿ, ಪ್ರಭುತ್ವ ಎಂಬುದಾಗಲಿ ವ್ಯಾಘ್ರತ್ವವನ್ನು ಪ್ರತಿನಿಧಿಸುತ್ತದೆ ಎಂದಾಯಿತು. ಪ್ರಜೆಗಳು ಕೇವಲ ಪ್ರಭುತ್ವದ ಜೀತಗಾರರಲ್ಲ ಅಥವಾ ರಾಜಕಾರಣಿಗಳ ಹಿತಕ್ಕಾಗಿಯೇ ಇರುವ ಬಲಿಪಶುಗಳಲ್ಲ. ರಾಜಕಾರಣವೀಗ ಬುದ್ಧಿವಂತ ಬೆಕ್ಕಿನಂತಾಗಿದೆ. ಗಂಟೆ ತಾನೇ ಕಟ್ಟಿಕೊಂಡು ನ್ಯಾಯದ ಗಂಟೆಯನ್ನು ಸಾರುತ್ತಿದೆ. ಇದು ತುಂಬ ಸಂಕೀರ್ಣವಾದ ಅಪಾಯಕಾರಿ ಸ್ಥಿತಿ. ಕನ್ನಡ ನಾಡಿನ ಭವಿಷ್ಯವನ್ನು ರಾಜಕಾರಣದ ಸುಧಾರಣೆಯಿಂದ ಮಾತ್ರ ಬಲಿಷ್ಠಗೊಳಿಸಲು ಸಾಧ್ಯ. ಅಖಂಡವಾದ ಮಾನವೀಕರಣದ ರಾಜಕಾರಣವೇ ಯಾವುದೇ ನಾಡಿನ ಮೊದಲ ಆದ್ಯತೆಯಾಗಬೇಕು. ಇಂತಹ ತತ್ವದ ಮೇಲೆಯೇ ನಾಡು ನುಡಿ ಸಮಾಜ ಸಂಸ್ಕೃತಿ ಸಾಹಿತ್ಯ ಚರಿತ್ರೆ ಆರ್ಥಿಕತೆ ನಿರ್ಮಾನವಾಗುವುದು. ಆದರೆ ಯಾವುದೊ ದುಷ್ಟ ಸ್ಥಿತಿಯಲ್ಲಿ ಇವೆಲ್ಲವೂ ಅರ್ಥಹೀನವಾಗಲು ಸ್ವತಃ ಆ ಸಮಾಜಗಳೇ ಹೊಣೆ ಹೊರಬೇಕಾಗುತ್ತದೆ ಬದಲಾವಣೆಯ ಪ್ರಕ್ರಿಯೆಗಳಲ್ಲಿ ಈ ದಾರಿಗಳೆಲ್ಲವೂ ಅನಿವಾರ್ಯ. ಮುಂದಿನ ಕನ್ನಡ ರಾಜಕಾರಣವು ಅಖಂಡತೆಯನ್ನು ಸ್ಥಾಪಿಸಬಲ್ಲದೆಂದು ನಂಬುವ.

* * *