ಸಿನಿಮಾ ಮತ್ತು ಚಿತ್ರಕಲೆಯ ಮಾಧ್ಯಮಗಳು ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಗಳ ಭಾಗವೇ ಹೌದು. ಒಂದು ನಾಡಿನ ನಡೆನುಡಿ ವರ್ತನೆಗಳನ್ನು ನಿರ್ಧರಿಸುವಲ್ಲಿ ಆ ಭಾಷೆಯ ಸಿನಿಮಾ ಲೋಕವೂ ಮುಖ್ಯ ಪಾತ್ರ ವಹಿಸುತ್ತದೆ. ಸಮೂಹ ಮಾಧ್ಯಮಗಳಲ್ಲೇ ಪ್ರಬಲವಾದ ಸಿನಿಮಾ ಮಾಧ್ಯಮವು ಕನ್ನಡ ನಾಡಿನ ಸ್ವಭಾವವನ್ನು ಪ್ರತಿನಿಧಿಸಿದೆ ಹಾಗೂ ರೂಪಿಸಿದೆ. ಕನ್ನಡ ವೃತ್ತಿರಂಗಭೂಮಿಯ ಕಲಾವಿದರನ್ನು ಒಳಗೊಂಡು ಬೆಳೆದ ಕನ್ನಡ ಸಿನಿಮಾ ಜಗತ್ತು ಗಾಢವಾದ ಪ್ರಭಾವವನ್ನು ಕನ್ನಡಿಗರ ಮೇಲೆ ಮಾಡಿದೆ. ಸಾಹಿತ್ಯ ಪರಂಪರೆಗಳಲ್ಲಿ ಕಂಡ ಕನ್ನಡ ಲೋಕಕ್ಕೂ ಸಿನಿಮಾ ಲೋಕದಲ್ಲಿ ಪ್ರತಿಫಲನವಾದ ಸಮಾಜಕ್ಕೂ ಸಾಕಷ್ಟು ಅಂತರಗಳಿವೆ. ಆದರೆ ಸಿನಿಮಾ ಲೋಕದಲ್ಲಿ ಚಿತ್ರಿತವಾದ ಕನ್ನಡ ಸಮಾಜವು ಸಾಹಿತ್ಯದ ಮೂಲಕ ಕಂಡುಬಂದ ಸಮಾಜಕ್ಕಿಂತ ಭಿನ್ನವಾದುದು. ಸಾಹಿತ್ಯ, ಸಿನಿಮಾ ಹಾಗು ರಂಗಭೂಮಿ ಈ ಮೂರೂ ಪರಸ್ಪರ ಸಂಬಂಧವನ್ನು ಬೆಳೆಸಿಕೊಂಡು ಬಂದವು.

ಕನ್ನಡ ಸಿನಿಮಾ ಲೋಕವು ಯಾವುದೇ ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ನೀತಿಯನ್ನು ಖಚಿತವಾಗಿ ತೋರ್ಪಡಿಸಲಿಲ್ಲ. ಆದರೆ ಎಪ್ಪತ್ತರ ದಶಕದ ಸಿನಿಮಾ ಪ್ರಪಂಚದ ಕೆಲವು ಪ್ರಯೋಗಗಳು ಗಮನಾರ್ಹವಾಗಿದ್ದು ಗಾಢವಾದ ಪರಿಣಾಮ ಮಾಡಿವೆ. ಹೇಳಿ ಕೇಳಿ ಸಿನಿಮಾ ಒಂದು ಮನರಂಜನಾ ಮಾಧ್ಯಮ. ಪ್ರೇಕ್ಷಕರನ್ನು ಸಂತೋಷಪಡಿಸುವುದು ಹಾಗು ಹಾಕಿದ ಬಂಡವಾಳದ ಮೇಲೆ ಲಾಭ ಪಡೆಯುವುದು ಅದರ ಗುರಿ. ಆದರೆ ಕೇವಲ ಮನರಂಜನೆ ಒಂದೇ ಒಂದು ಜನಪ್ರಿಯ ಮಾಧ್ಯಮವನ್ನು ಯಶಸ್ವಿಗೊಳಿಸಲಾರದು. ಸಾಮಾಜಿಕ ಬದಲಾವಣೆ, ಹೊಸ ನೀತಿ, ಸಾಮಾಜಿಕ ನ್ಯಾಯ ಕೂಡ ಸಮೂಹ ಮಾಧ್ಯಮದ ಸಫಲತೆಗೆ ಅನಿವಾರ್ಯವಾಗಿರುತ್ತದೆ. ಎಪ್ಪತ್ತರ ದಶಕವು ಸಿನಿಮಾ ಉದ್ಯಮದಲ್ಲಿ ಪ್ರಮುಖವಾದುದು. ನಾಡು ನುಡಿಗೆ ಸಿನಿಮಾ ಜಗತ್ತು ಪ್ರತಿಸ್ಪಂಧಿಸಿದ ಕಾಳವಿದು. ‘ಬೆಳ್ಳಿ ಮೋಡ’ ಸಿನಿಮಾ ಒಂದು ಕೌಟುಂಬಿಕ ದುರಂತ ಕಥನವನ್ನು ಹೇಳುವಂತಿದ್ದರೂ ಒಂದು ನಾಡು ಅಖಂಡ ವಿಶ್ವಾಸ ಪ್ರೀತಿ ಸಹಕಾರ ಒಲುಮೆಗಳಿಂದ ಇಲ್ಲವಾದರೆ ಅದು ನಾಶವಾಗುತ್ತದೆ ಎಂಬ ಸಂದೇಶವನ್ನು ಕೌಟುಂಬಿಕವಾಗಿಯೆ ಪರಿಣಾಮಕಾರಿಯಾಗಿ ಸಾರಿದ ಚಿತ್ರವಿದು. ನಾಡು ಹಾಗೂ ಕುಟುಂಬದ ಪ್ರಗತಿಯು ಒಂದೇ ಎಂಬ ಆದರ್ಶ ಕನಸು ಬಿತ್ತರಗೊಂಡದ್ದು ಈ ಕಾಲದಲ್ಲಿಯೇ. ಸಮಾಜದ ಬಡವರ ಬಗೆಗೆ ಸಿನಿಮಾ ಜಗತ್ತು ಸ್ಪಂಧಿಸಿತು. ಆ ಕಾರಣದಿಂದಲೇ ಬಡವರು, ಕಾರ್ಮಿಕರು, ಅನಾಥರು, ಅಸಹಾಯಕ ಮಹಿಳೆಯರು, ದೀನ ದಲಿತರ ಬಗೆಗಿನ ಚಿತ್ರಕಥೆಗಳು ತೆರೆಯ ಮೇಲೆ ಚಿತ್ರಿತವಾದವು. ಡಾ.ರಾಜ್‌ಕುಮಾರ್ ಅಂತಹ ಕಥಾ ನಾಯಕರಾಗಿ ಇಡೀ ಕನ್ನಡ ನಾಡಿನ ಗ್ರಾಮ ಲೋಕವನ್ನೆ ಪರೋಕ್ಷವಾಗಿ, ನೇರವಾಗಿ ಪ್ರಭಾವಿಸಿದರು. ಅಂತೆಯೇ ಕನ್ನಡನಾಡಿಗೆ ಸಿನಿಮಾಗಳ ಮೂಲಕವೇ ಅನೇಕ ಸಂದೇಶಗಳನ್ನು ಸಾರಿದರು. ಪ್ರಗತಿಶೀಲ ಕಾದಂಬರಿಕಾರರ ನೀತಿಗೂ ಎಪ್ಪತ್ತರ ದಶಕದ ರಾಝಕುಮಾರ್ ಪ್ರಣೀತ ಚಿತ್ರ ಕಥನಗಳಿಗೂ ಸಂಬಂಧವಿದೆ. ಪ್ರಗತಿಶೀಲ ಧೋರಣೆಯು ಎಪ್ಪತ್ತರ ದಶಕದ ಸಿನಿಮಾ ಜಗತ್ತಿನಲ್ಲಿ ಪರಿಣಾಮಕಾರಿಯಾಗಿ ಚಾಲ್ತಿಗೆ ಬಂತು. ಪ್ರಗತಿಶೀಲ ಕಾದಂಬರಿಕಾರರ ಕಾದಂಬರಿಗಳು ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳಲು ಇದರಿಂದ ಸಾಧ್ಯವಾಯಿತು. ನಾಡಿನ ನಿರ್ಮಾನದಲ್ಲಿ ರಂಗಭೂಮಿ, ಸಂಗೀತ, ಸಿನಿಮಾ, ಚಿತ್ರಕಲೆಗಳು ಒಂದಾಗಿ ಕಾರ್ಯನಿರ್ವಹಿಸಬೇಕು ಎಂಬ ಜಾಗೃತಿ ಮೂಡಿತು. ಆದ್ದರಿಂದಲೇ ಹಳ್ಳಿಗಳ ಸುಧಾರಣೆಯ ಸಿನಿಮಾ ಕತೆಗಳು ವಿಶೇಷವಾಗಿ ತೆರೆಕಂಡವು.

ಏಕೀಕರಣೋತ್ತರ ಕನ್ನಡ ಸಿನಿಮಾರಂಗವು ಜನಮುಖಿಯಾದದ್ದು ಎಪ್ಪತ್ತರ ದಶಕದಲ್ಲಿಯೆ ಎಂಬುದು ಗಮನಾರ್ಹ. ಹಳ್ಳಿಯ ಉದ್ಧಾರದ ಕೌಟುಂಬಿಕ ಕಥನಗಳು ಸಾಹಿತ್ಯ ಕೃತಿಗಳಿಗಿಂತಲೂ ಮಿಗಿಲಾದ ಪರಿಣಾಮಗಳನ್ನು ಮಾಡಿದವು. ರಮ್ಯ, ಮಾಂತ್ರಿಕ ಲೋಕದಲ್ಲಿ ಜನಸಾಮಾನ್ಯರು ತಮ್ಮ ಆಸೆ ಕನಸು ಸುಖ ದುಃಖಗಳನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಭ್ರಾಮಕವಾದ ದೃಶ್ಯ ಜಗತ್ತು ಬಡವರ ಹತಾಶೆಗಳಿಗೆ ಬೇರೊಂದು ಸಾಂತ್ವನ ಹೇಳಿತು. ಈ ಹಿನ್ನೆಲೆಯಲ್ಲಿ ಎಪ್ಪತ್ತರ ದಶಕದ ಕನ್ನಡ ನಾಡುನುಡಿಯ ಭಾಗವಾಗಿ ಸಿನಿಮಾ ಲೋಕವು ಮಾಡಿ ಪರಿಣಾಮಗಳನ್ನು ಹೀಗೆ ಪಟ್ಟಿ ಮಾಡಬಹುದು.

೧. ಶೋಷಿತರ ಕಷ್ಟ ನಷ್ಠಗಳು ಸಿನಿಮೀಯವಾಗಿ ತೋರ್ಪಡಿಸಲ್ಪಟ್ಟವು. ಬಡವರ, ಅನಾಥರ, ನೊಂದವರ, ಅಸಹಾಯಕ ಮಹಿಳೆಯರ ಸಾಂಸಾರಿಕ ದುಃಖ, ದುರಂತಗಳು ಅನಾವರಣಗೊಂಡವು.

೨. ಗ್ರಾಮೀಣ ಜನಜೀವನದ ಮಾನವೀಯ ಮೌಲ್ಯಗಳು ಪ್ರತಿಪಾದಿತವಾದವು.

೩. ಸಾಹಿತ್ಯ ಮತ್ತು ರಂಗಭೂಮಿಯ ಅರ್ಥಪೂರ್ಣ ಸಂಬಂಧಗಳು ಬೆಸುಗೆಯಾಗಿ ಶ್ರೇಷ್ಠ ಅಭಿನಯದ ಚಿತ್ರಗಳು ಸೃಷ್ಟಿಗೊಂಡವು.

೪. ನಾಡುನುಡಿಯ ನಿರ್ಮಾಣಕ್ಕೆ ಪೂರಕವಾದ ವಾತಾವರಣವನ್ನು ಸಿನಿಮಾ ಕಥನಗಳು ಒತ್ತಾಯಿಸಿ ಪ್ರೇಕ್ಷಕರಲ್ಲಿ ಕನ್ನಡ ನಾಡಿನ ಅಭಿಮಾನವನ್ನು ಮೂಡಿಸಿದವು.

೫. ಗ್ರಾಮೀಣ ಸಮಾಜದಲ್ಲಿ ಆಧುನೀಕತೆಯನ್ನು ಪರಿಚಯಿಸಿ ಜೀವನ ವಿಧಾನದಲ್ಲಿ ಹೊಸತನವನ್ನು ಸಿನಿಮಾ ಮಾಯೆಯು ಸೃಷ್ಟಿಸಿತು.

೬. ಗ್ರಾಮೀಣ ಕರ್ನಾಟಕದಲ್ಲಿ ಡಾ. ರಾಜ್ ಕುಮಾರ್ ಅಭಿನಯದ ಸಲುವಾಗಿ ಸುಧಾರಿತ ಹಳೆ ಮೈಸೂರಿನ ಕನ್ನಡ ಭಾಷೆಯ ಮಾದರಿಯೊಂದು ಕರ್ನಾಟಕದ ಉದ್ದಕ್ಕೂ ವ್ಯಾಪಿಸಿ ಜನಜನಿತವಾಯಿತು.

೭. ವಿಶೇಷವಾಗಿ ಕನ್ನಡ ಪರ ಚಳುವಳಿಯಲ್ಲಿ ಭಾಗವಹಿಸುವುದರಲ್ಲಿ ಕನ್ನಡ ಸಿನಿಮಾ ಲೋಕವು ನಾಡುನುಡಿಯ ತನ್ನ ಸಂಬಂಧವನ್ನು ವಿಸ್ತರಿಸಿತು. ಪರಭಾಷೆಯ ಚಿತ್ರಗಳ ಹಾವಳಿ ತಡೆಯಲು ಒತ್ತಾಯಿಸಿತು.  ಗೋಕಾಕ್ ಚಳುವಳಿಯಲ್ಲಿ ದುಮುಕಿದ ಕಲಾವಿದರಿಂದಾಗಿ ಚಳುವಳಿಯ ಪ್ರಭಾವ ದಟ್ಟವಾದದ್ದಲ್ಲದೆ ಕನ್ನಡ ಪ್ರಜ್ಞೆಯು ಹೊಸ ಆಯಾಮ ಪಡೆಯಿತು.

೮. ಶ್ರೀಮಂತರ, ಭೂ ಮಾಲೀಕರ, ಶೋಷಕರ ಮನ ಪರಿವರ್ತನೆಗೆ ಬೇಕಾದ ಚಿತ್ರಕಥೆ, ಅಭಿನಯ ಮತ್ತು ಭಾವನಾತ್ಮಕ ಸಂಬಂಧಗಳ ಬೆಸುಗೆಯಿಂದ ಮನುಷ್ಯ ಸಂಬಂಧಗಳು ವಿಸ್ತರಿಸಲು ಸಿನಿಮಾ ಲೋಕ ಮುಂದಾಯಿತು. ನ್ಯಾಯನಿಷ್ಠೆ, ಸತ್ಯಶೀಲತೆ, ಆದರ್ಶಗುಣ, ಸಮತೆಯಿಂದ ಒಂದಾಗಿ ಬಾಳುವ ಅನಿವಾರ್ಯತೆಗಳನ್ನು ಪ್ರದರ್ಶಿಸಿತು ಹಾಗೂ ಅನ್ವಯಿಸಲು ಪ್ರೇರಣೆ ನೀಡಿತು.

೯. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ ಜೀವನ ವಿಧಾನ ಹಾಗೂ ಐತಿಹಾಸಿಕತೆಯನ್ನು ಧಾರ್ಮಿಕ ಮೌಲ್ಯಗಳನ್ನು ಸಿನಿಮಾ ಮೂಲಕ ಎತ್ತಿ ಹಿಡಿಯುವ ಅವಕಾಶವಾಯಿತು.

೧೦. ಪ್ರಾಯೋಗಿಕ ಸಿನಿಮಾಗಳು ವಿಶೇಷವಾಗಿ ಬೆಳೆದು ಸಮಾಜದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದವು. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾ ಲೋಕವನ್ನು ತೋರಿಸಲು ಸಾಧ್ಯವಾಯಿತು.

೧೧. ಕನ್ನಡ ನಾಡಿನ ಸಮಾಜಕ್ಕೆ ರಂಜನೆ, ನೀತಿ ಪಾಠ, ಹಿರಿಯರು ತೋರಿದ ಹಾದಿಗಳನ್ನು ತೋರುವ ಮೂಲಕ ಸಮಾಜ ಸುಧಾರಣೆಗೂ ತೊಡಗಿದಂತಾಯಿತು.

ಹೀಗೆ ಹತ್ತಾರು ನೆಲೆಗಳಿಂದ ಸಿನಿಮಾ ಲೋಕವು ನಾಡು ನುಡಿಯ ಹಿತಕ್ಕಾಗಿ ದುಡಿದಿದೆ. ಸಿನಿಮಾ ಮಾಧ್ಯಮ ಒಂದು ಪರಿಣಾಮಕಾರಿ ಅಸ್ತ್ರ. ಸಾಹಿತ್ಯ ಮಾಡಬಹುದಾದುದಕ್ಕಿಂತಲೂ ಸಿನಿಮಾ ಸಮಾಜದ ಮೇಲೆ ಎಲ್ಲ ಬಗೆಯಾದ ಪ್ರಭಾವಗಳನ್ನು ಮಾಡಬಲ್ಲದು. ಕನ್ನಡ ಚಳುವಳಿಗಳಿಗೆ ಸಿನಿಮಾ ಲೋಕವು ನಿರಂತರವಾಗಿ ಸ್ಪಂದಿಸುತ್ತಲೆ ಬಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಿನಿಮಾ ಪ್ರಪಂಚವು ದೊಡ್ಡದೊಂದು ಉದ್ಯಮವೂ ಆಗಿ ಸಾಮಾಜಿಕ ಶಕ್ತಿಯೂ ಆಗಿದೆ ಎಂಬುದು ಗಮನಾರ್ಹವಾದುದು. ಕನ್ನಡ ನಾಡಿನ ಬೆಳವಣಿಗೆಯ ಭಾಗವೇ ಆಗಿರುವ ಸಿನಿಮಾ ಉದ್ಯಮಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಹೊಣೆಗಾರಿಕೆ ಇದೆ. ಆ ದಾರಿಯು ದುರ್ಗಮವಾದುದು ಎಂಬುದು ಮಾತ್ರ ವಾಸ್ತವ.