ಏಕೀಕರಣೋತ್ತರ ಕರ್ನಾಟಕದ ಅರ್ಧ ಶತಮಾನದ ಗತಿಶೀಲತೆಯನ್ನು ಅರ್ಥೈಸುವ ಈ ಪುಟ್ಟ ಪ್ರಯತ್ನ ನಾಡಿನ ಮುನ್ನಡೆಯನ್ನು ಹುಡುಕು ದಾಟಿಯದು. ಸಾಹಿತ್ಯ, ಸಮಾಜ, ಭಾಷೆ,ಸಂಸ್ಕೃತಿ ರಾಜಕಾರಣ ಈ ಪ್ರಮುಖ ನೆಲೆಗಳಲ್ಲಿ ಕನ್ನಡ ನಾಡು ರೂಪಾಂತರಗೊಳ್ಳುತ್ತ ಬಂದಿರುವುದು ಕಠಿಣ ಸವಾಲುಗಳ ಮೂಲಕವೇ. ಒಂದು ನಾಡಿನ ಅರ್ಧ ಶತಮಾನವು ಅದರ ಮುಂದಿನ ಇನ್ನರ್ಧ ಶತಮಾನವನ್ನು ನಿರ್ಧರಿಸಿಬಿಟ್ಟಿರುತ್ತದೆ. ಗತಕಾಲದ ಪ್ರಭಾವವು ಹೀಗಾಗಿಯೇ ವರ್ತಮಾನದ ಮೂಲಕ ಹಾಯ್ದು ಭವಿಷ್ಯತ್ ಕಾಲದ ತನಕ ವಿಸ್ತರಿಸಿಕೊಳ್ಳುವುದು. ಕರ್ನಾಟಕದ ಈ ಗತಿಯು ಸಾಗಿರುವ ನೀತಿಯು ಹೆಮ್ಮೆ ಪಡುವಂತದಲ್ಲ.

ಆದರೆ ಕನ್ನಡ ಸಮಾಜಗಳು ವಿಫಲಗೊಂಡಿಲ್ಲ. ಒಂದೊಂದು ಸಮುದಾಯದ ಸುಪ್ತ ಪ್ರತಿಭೆಯು ಈಗ ತಾನೆ ಹೊರಬರುತ್ತಿದೆ. ಎಲ್ಲ ರಂಗಗಳಲ್ಲಿ ಯುವ ಜನಾಂಗ ಭಾಗವಹಿಸುತ್ತಿದೆ. ಹೊಸ ಶೋಧಗಳು ಮುನ್ನುಗ್ಗುತ್ತಿವೆ. ವಿಭಿನ್ನ ಆಲೋಚನೆಗಳು ಚಿಗುರೊಡೆಯುತ್ತಿವೆ. ಯುವ ಜನಾಂಗದ ವೇಗ ಎಡವಿ ಬೀಳುವಂತಿರುವುದುಸಹಜವೇ. ಸಾಹಿತ್ಯ ವಲಯದ ಹಳೆಯ ಯಜಮಾನರು ವಿಶ್ವಾಸ ಕಳೆದುಕೊಂಡಿರುವಲ್ಲಿ ಯುವ ಲೇಖಕರು ಹೊಸ ಬಗೆಯ ಹುಡುಕಾಟಗಳನ್ನು ಮಾಡುತ್ತಿದ್ದಾರೆ.ಅವರ ಯತ್ನಗಳು ಈಗ ಘನವಾಗಿಲ್ಲದಿದ್ದರೂ ಮುಂದಿನ ನಿರೂಪಣೆಗಳು ಗಾಢವಾಗುವುದಷ್ಟೇ ಅಲ್ಲದೆ ನಾಡಿನ ಭವಿಷ್ಯವನ್ನು ರೂಪಿಸಬಲ್ಲವು. ನಾಳಿನ ಭವಿಷ್ಯವಾದರೂ ಹೇಗಿರಬೇಕೆಂದು ಯುವ ಪೀಳಿಗೆ ಚಿಂತಿಸುವುದು ಕಷ್ಠ. ಹಿರಿಯ ತಲೆಮಾರಿನ ಹೊಣೆಗಾರಿಕೆಯನ್ನು ಕಿರಿಯ ಮೇಲೆ ಹಾಕುವುದು ನೈತಿಕವಲ್ಲ. ಭವಿಷ್ಯದ ಕನ್ನಡ ನಾಡು ನಿರ್ಮಾಣವಾಗಬೇಕಾದದ್ದು ಭೌತಿಕ ಸ್ವರೂಪದಲ್ಲಲ್ಲ. ಮಾನಸಿಕವಾಗಿ ಸ್ವಸ್ಥವಾದ ನಾಡೇ ಸುಭದ್ರವಾದದ್ದು. ಒಂದೇ ಸಾರಿಗೆ ಎಲ್ಲವನ್ನು ಪಡೆದು ಸಾಧಿಸಿ ಬಿಡಬೇಕು ಎಂಬುದು ಭವಿಷ್ಯವನ್ನು ಕಾಣಲಾರದು. ಹಾಗೆ ನೋಡಿದರೆ ಇಡೀ ಆರ್ಥಿಕ ಸಾಮಾಜಿಕ ರಾಜಕೀಯ ಅಭಿವೃದ್ಧಿ ಮಾನದಂಡಗಳೇ ಭವಿಷ್ಯವನ್ನು ತೊಡಕಿಗೆ ಒಳಪಡಿಸುತ್ತಿವೆ. ಅಭಿವೃದ್ಧಿ ಕಥನಗಳು ಈ ಕಾಲದಲ್ಲಿ ಭವಿಷ್ಯವನ್ನು ಕಾಯುವ ಬದಲು ಬಳಸಿ ಬಿಸಾಡುವಂತವು. ಅನುಭೋಗಿ ಅಭಿವೃದ್ಧಿಯು ಭವಿಷ್ಯಕ್ಕೆ ಏನನ್ನೂ ಉಳಿಸಲಾರದು.

ಹೀಗಿರುವಾಗ ಸುಭದ್ರ ಅಭಿವೃದ್ಧಿ ನೀತಿಯಾಗಲಿ, ನೈತಿಕ ಸಬಲತೆಯಾಗಲಿ ಎರಡೂ ಸಾಧ್ಯವಾಗಲಾರವು. ಭವಿಷ್ಯವನ್ನು ರೂಪಿಸುವ ಸಾಹಿತ್ಯ ಸಮಾಜ ಆರ್ಥಿಕತೆ ರಾಜಕೀಯತೆಗಳು ವಿಕಾಸ ಪಥವನ್ನು ಅನುಸರಿಸುತ್ತವೆ. ನಾಳಿನ ನಂಬಿಕೆಯೇ ಇಲ್ಲದಂತೆ ಎಷ್ಟೋ ಸಮಾಜಗಳು ಕರಗಿ ಹೋಗುತ್ತಿರುವಾಗ ಬಲಿಷ್ಠ ಕೋಮುಗಳು ಮಾತ್ರ ಮತ್ತೂ ಕೊಬ್ಬಿಹೋಗುತ್ತಿವೆ. ಭಾಗಶಃ ಹುಚ್ಚು ಅಭಿವೃದ್ಧಿಯ ಲಾಲಸೆಯೇ ತನ್ನಿಂದ ತಾನಾಗಿಯೇ ನಾಶವಾಗಬಲ್ಲದು. ಪ್ರತಿಯೊಂದು ಅನಿಯಂತ್ರಿತ ಬೆಳವಣಿಗೆಗೂ ಅಂತಿಮವಾದ ಬೀಳು ಇರುತ್ತದೆ. ತನ್ನ ವಿಪರೀತ ಸಾಮಥ್ಯದಿಂದಲೇ ತಾನೇ ಸೋಲುವ ಸಾಯುವ ಇಕ್ಕಟ್ಟು ಯಾವುದೇ ಯಶಸ್ವಿ ಸ್ಥಿತಿಗೆ ಬಂದೊದಗುತ್ತದೆ. ಇದು ನಿಸರ್ಗದ ಸ್ವಯಂ ಚಾಲಿತ ತತ್ವ. ಬಲಾಢ್ಯವಾದದ್ದೆ ವಿಕಾಸದ ಹಂತಗಳಲ್ಲಿ ನಾಶವಾದದ್ದಿದೆ. ಅತ್ಯಂತ ದುರ್ಬಲವಾದ ಎಷ್ಟೋ ಜೀವಿಗಳು ಕಾಲದ ಎಷ್ಟೋ ಅಪಾಯಗಳನ್ನು ದಾಟಿ ಬಂದು ಉಳಿದೇ ಬಿಟ್ಟಿರುತ್ತವೆ. ಅಂತವುಗಳ ಸಾಮರ್ಥ್ಯ ಅಲಕ್ಷಿತ ಸಮುದಾಯಗಳಿಗೂ ಗುಪ್ತವಾಗಿರುತ್ತದೆ. ಈ ನೀತಿ ಸಮಾಜಗಳಿಗೂ ಅನ್ವಯವಾಗುತ್ತದೆ.

ಕೊಬ್ಬಿದ ಸಮುದಾಯಗಳು ತಮ್ಮ ಕೊಬ್ಬಿನಿಂದಲೇ ನೆಲಕಚ್ಚುತ್ತವೆ. ಅವಕಾಶಗಳಿಲ್ಲದೆ ಮಿತಿಗಳ ಒಳಗಿದ್ದ ಸಮುದಾಯಗಳೇ ಹೆಚ್ಚು ಬಲವಾಗಿ ಸುರಕ್ಷಿತವಾಗಿ ಸಾಗಿ ಬಂದಿದೆ. ಎಲ್ಲವನ್ನು ಪಡೆದುಕೊಂಡಿದ್ದ ಸಮುದಾಯಗಳೇ ಹೆಚ್ಚು ಅಪಾಯವನ್ನು ಎದುರಿಸಬೇಕಾಗಿರುವುದು. ಬಲಿಷ್ಠ ಅಭಿವೃದ್ಧಿ ಎನ್ನುವುದೇ ಒಂದುಹುಸಿ. ಬಲವಾಗಿದ್ದೇವೆಂದು ಕೊಳ್ಳುವ ಸಮಾಜಗಳು ಒಳಗೆ ನೈತಿಕವಾಗಿಯೂ ದೈಹಿಕವಾಗಿಯೂ ಮಾನಸಿಕವಾಗಿಯೂ ಬಹಳ ಟೊಳ್ಳಾಗಿರುತ್ತವೆ. ಯುರೋಪಿನ ಸಮಾಜಗಳು ಈ ರೀತಿಯಲ್ಲಿ ಭಿನ್ನವಾಗಿದ್ದರೂ ಜಾತಿಯಾಧರಿತ ಕನ್ನಡ ಸಮಾಜಗಳು ಈ ರೀತಿಯಲ್ಲಿ ಭಿನ್ನವಾಗಿದ್ದರೂ ಜಾತಿಯಾಧಾರಿತ ಕನ್ನಡ ಸಮಾಜಗಳು ಅಭಿವೃದ್ಧಿ ಪಥದಲ್ಲಿದ್ದೇವೆಂದುಕೊಂಡೇ ಅಪಾಯದಲ್ಲಿ ಮುಳುಗಿರುತ್ತವೆ. ಕನ್ನಡ ಸಮಾಜವು ಅಖಂಡವಾಗಿರಲು ಬೇಕಾದ ಅಭಿವೃದ್ಧಿ ಎಂದರೆ ಸಾಮಾಜಿಕ ನ್ಯಾಯವೇ ಅತ್ಯುಪಯುಕ್ತ ಮಂತರ. ಶತಮಾನಗಳಿಂದಲೂ ನ್ಯಾಯ ಸಾಧನೆಗಾಗಿ ಮಹಾತ್ಮರು ಹೋರಾಡುತ್ತಲೇ ಬಂದಿದ್ದರೂ ವೈಫಲ್ಯ ಯಾಕೆ ಸದಾ ಜೊತೆಯಲ್ಲೆ ಇರುತ್ತದೆ ಎಂಬುದನ್ನು ಕಂಡುಕೊಳ್ಳಬೇಕು.

ಭಾಗಶಃ ಈ ವೈಫಲ್ಯವು ಜಾತಿಯ ಬಿರುಕಿನಿಂದ ಎಂಬುದು ಒಂದುನೆಪ ಮಾತ್ರ. ಭಾರತೀಯ ಸಮಾಜಗಳು ಸೃಷ್ಟಿಶೀಲತೆಯಲ್ಲಿ ಮುಂದಿದ್ದರೂ ಸಮಷ್ಠಿ ಸಂಘಟನಾತ್ಮಕ ಭಾಗವಹಿಸುವಿಕೆಯಲ್ಲಿ ಸಮುದಾಯಗಳಿಗೆ ಮನಸ್ಸಿಲ್ಲ. ಕನ್ನಡ ಮನಸ್ಸು ಕೂಡ ಅಖಂಡವಾಗಿಲ್ಲ. ಕೂಡಿಕಟ್ಟುವ ಹೊಣೆಗಾರಿಕೆ ಇಲ್ಲದಿರುವುದು ಸಮಾಜಗಳ ಅವಿಶ್ವಾಸದ ಸ್ವಭಾವದಿಂದ. ಹಾಗೆಯೇ ಇಡೀ ಸಾಮಾಜಿಕ ಶ್ರೇಣಿಗೆ ಏಕರೂಪಿ ಕನಸೂ ಇಲ್ಲ. ಒಬ್ಬೊಬ್ಬರ ಕನಸೂ ವಿಭಿನ್ನವಾಗಿದೆ. ಮುಖ್ಯವಾಗಿ ನಮ್ಮ ಸಮಾಜಗಳು ಈತ ತಾನೆ ನಿದ್ದೆಯಿಂದ ಎದ್ದು ನಡೆವ ಬದಲು ಓಡಲು ಮುಂದಾಗಿದೆ. ಮಾನವೀಯತೆಯ ಪಾಲನೆಯಲ್ಲಂತು ಬಹುಪಾಲು ಎಲ್ಲ ಸಮಾಜಗಳು ಬಹಳ ಹಿಂದೆ ಬಿದ್ದಿವೆ. ಬೇಟೆಯಾಡಿಯೇ ಬದುಕುವ ಮೌಲ್ಯಗಳು ಕನ್ನಡ ಸಮಾಜದ ಆಳದಲ್ಲಿ ಉಳಿದುಕೊಂಡಿವೆ. ವ್ಯವಸ್ಥಿತವಾಗಿ ಪ್ರಭುದ್ಧವಾಗಿ ಸುಂದರವಾಗಿ ಶೋಷಿಸುವ  ಕೌಸಲ್ಯದಿಂದ ಒಟ್ಟು ಸಮಾಜದ ಆರೋಗ್ಯವೇ ಮಾನಸಿಕವಾಗಿ ಕಲುಷಿತಗೊಂಡಿದೆ. ಬರ್ಬರತೆಯನ್ನು ಸುಂದರವಾಗಿ ನಿರ್ವಹಿಸುವ ಆಧುನಿಕತೆಯ ಕೆಟ್ಟ ಬುದ್ಧಿಗಳು ಹಳೆಯ ಶೋಷಣಾ ರೀತಿಗಳ ಜೊತೆ ಸೇರಿಕೊಂಡು ಬಿಡುಗಡೆಯ ದಾರಿಗಳನ್ನು ಮತ್ತಷ್ಟು ಸಂಕುಚಿತಗೊಳಿಸುತ್ತಿವೆ.

ಈ ನಡುವೆ ಯುವ ಜನಾಂಗದ ಆಯ್ಕೆಗಳಿಗೂ ನೊಂದ ಸಮುದಾಯಗಳ ಹಳೆಯ ವಾಸಿಯಾಗದ ಗಾಯಗಳಿಗೂ ಹೊಂದಾಣಿಕೆಯೇ ಆಗುತ್ತಿಲ್ಲ. ಸಮುದಾಯಗಳ ಇಚ್ಛಾ ಶಕ್ತಿಯನ್ನು ಬದಲಾಗುತ್ತಿರುವ ಜೀವನ ಕ್ರಮಗಳು ಗೊಂದಲಕ್ಕೀಡು ಮಾಡುತ್ತವೆ. ಅತ್ತ ಸಮರ್ಥ ಕೈಗಾರಿಕಾ ಸಮಾಜವೂ ಆಗದೆ ಇತ್ತ ಕೃಷಿಕ ಸಮಾಜವೂ ಆಗದ ಅಥವಾ ಎರಡನ್ನೂ ಸಮನಾಗಿ ನಿರ್ವಹಿಸದ ರಾಜಕಾರಣವೂಇಲ್ಲದೆ ನಾಡು ಬೆಳೆಯದು. ಈ ಇಕ್ಕಟ್ಟಲ್ಲಿ ಸಮುದಾಯಗಳಿಗೆ ಬೇಕಾದ ಚಲನೆಯಾಗಲಿ ಭವಿಷ್ಯವಾಗಲಿ ಕಾಣದು. ಭಾಗಶಃ ಭಾರತೀಯ ಭಾಷೆಗಳ ಎಲ್ಲ ಸಮಾಜಗಳೂ ಯಾವ ಬಗೆಯ ಒಳ್ಳೆಯ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗದೆ ಸಂಕ್ರಮಣ ಸ್ಥಿತಿಯಲ್ಲಿ ನಿಂತಿವೆ. ರೂಪಾಂತರದ ಸ್ಥಿತ್ಯಂತರಗಳಲ್ಲಿ ಒಟ್ಟಾಗಿಯೇ ಸಮಾಜಗಳು ಕೆಲವೊಂದು ಸಮಾನ ತತ್ವಗಳನ್ನು ಒತ್ತಾಯಗಳನ್ನು ಕನಸಿನ ಗುರಿಯನ್ನು ಇಟ್ಟುಕೊಳ್ಳಲೇ ಬೇಕು. ಒಬ್ಬೊಬ್ಬರದೂ ಒಂದೊಂದು ಗುರಿಯಾಗಿ ಯತ್ನಿಸುತ್ತಿರುವುದರಿಂದ ಯಾರ ಗುರಿಯೂ ಹೀಡೇರುತ್ತಿಲ್ಲ. ಆದರೆ ಕೆಲವೇ ಜನರ ಗುರಿಗಳು ಹಿಂದಿನಿಂದ ಸಾಗಿ ಬಂದವು ಮಾತ್ರ ಯಶಸ್ವಿಯಾಗುತ್ತಿದ್ದ ಇದರಿಂದ ಸಾಮಾಜಿಕ ಅಸಮಾನತೆಯು ಮತ್ತಷ್ಟು ಉಲ್ಬಣಿಸಿದೆ.

ಹೀಗಿದ್ದರೂ ಪ್ರಾಮಾಣಿಕವಾದ ಯತ್ನಗಳು ಇಲ್ಲವೆಂದಲ್ಲ. ರಾಜಕೀಯ ಚಳುವಳಿ ತೀವ್ರವಾಗಿ ಈ ಕಾಲಕ್ಕೆ ಆಗಬೇಕು. ಸ್ಥಳೀಯ ರಾಜಕೀಯ ಪಕ್ಷಗಳನ್ನೆಲ್ಲ ರಾಷ್ಟ್ರೀಯ ಪಕ್ಷಗಳು ಮುಗಿಸಲು ಸಂಚು ಮಾಡಿ ಯಶಸ್ವಿ ಆಗುತ್ತಲೇ ಬಂದಿವೆ. ಕನ್ನಡ ನಾಡಿಗೆ ಸಮರ್ಥ ರಾಜಕೀಯ ನಾಯಕರೇ ಇಲ್ಲ. ಎಲ್ಲ ರಾಜಕೀಯ ನಾಯಕರು ಸ್ವಾರ್ಥ ಪರವಾಗಿದ್ದಾರೆ. ಪ್ರಧಾನಿ ಪದವಿಗೇರಿದ್ದಂತವರೇ ಕರ್ನಾಟಕದ ರಾಜಕಾರಣವನ್ನು ದಿಕ್ಕೆಡಿಸಿದ್ದಾರೆ. ತಮ್ಮ ಪಕ್ಷಗಳಿಗಾಗಿ ನಾಡನ್ನೆ ಬಲಿಕೊಡುವ ರಾಜಕಾರಣಿಗಳಿದ್ದಾಗ ನಾಡಿನ ಉದ್ಧಾರು ಮರುಭೂಮಿಯಲ್ಲಿ ನಡೆದಂತೆಯೇ ಸರಿ. ಜೊತೆಗೆ ಜನಸಾಮಾನ್ಯರ ರಾಜಕೀಯ ನಿರ್ಧಾರಗಳು ಪಕ್ಷಗಳ ಪರವಿದೆಯೇ ವಿನಃ ನಾಡಿನ ಪರವಾಗಿಲ್ಲ. ಹಾಗೆಯೇ ತಮ್ಮ ಭವಿಷ್ಯದ ಪರವಾಗಿಯೂ ಚಿಂತಿಸುವಂತಿಲ್ಲ. ಜನತೆ ಹೊರಬೇಕಾದ ಹೊಣೆಗಾರಿಕೆಯನ್ನು ಹೊರದೆ ಒಂದೊಂದು ಜಾತಿಯೂ ಈ ಹೊಣೆಯನ್ನು ಅಪಮೌಲ್ಯೀಕರಿಸಿದೆ. ಮೂಲತಃ ಸಮುದಾಯಗಳೇ ಬೇಜವಾಬ್ದಾರಿಯಲ್ಲಿ ಉದಾಸೀನತೆಯಲ್ಲಿ ಭಂಡತನದಲ್ಲಿ ಪಳಗಿವೆ. ರಾಷ್ಟ್ರೀಯ ಪ್ರಜ್ಞೆಯಾಗಲಿ ದೇಶ ಭಕ್ತಿಯಾಗಲಿ ಇಲ್ಲವಾಗಿದೆ. ಕನ್ನಡ ನಾಡನ್ನೆ ಕೊಳ್ಳೆ ಹೊಡೆಯುತ್ತಿದ್ದರೂ ಎಲ್ಲ ಬಗೆಯ ದುಷ್ಟರನ್ನು ಸಮಾಜಗಳು ರಕ್ಷಿಸುತ್ತಾ ಚುನಾವಣೆಗಳಲ್ಲಿ ಗೆಲ್ಲಿಸುತ್ತಾ ಬಂದಿರುವುದು ವಿಷಾದಕರ.

ಕನ್ನಡ ನಾಡನ್ನೆ ಸ್ವರಾಜ್ಯ ಕಲ್ಪನೆಯಲ್ಲಿ ರೂಪಿಸಬೇಕು ಎಂಬ ಹಳೆಯ ಆಶಯವು ಈಗಲೂ ಜೀವಂತವಾಗಿದೆ. ಕರ್ನಾಟಕವನ್ನು ಸ್ವತಂತ್ರ ದೇಶದ ನೆಲೆಯಲ್ಲಿ ಕಾಣುವ ಕನಸುಗಳು ಕೂಡ ಗುಪ್ತವಾಗಿದೆ. ಹೀಗಿದ್ದರೂ ಸ್ವತಃ ಸಮಾಜಗಳು ಮಾತ್ರ ವ್ಯಕ್ತಿವಾದಿಯಾಗಿವೆ ಬೆಳೆಯುತ್ತಿವೆ. ಅಪಾರ ಪ್ರಮಾಣದ ಮಾನವ ಸಂಪತ್ತನ್ನು ನಿರ್ವಹಿಸಲಾಗದೆ ತಕ್ಕ ಕ್ರಮದಲ್ಲಿ ಬಳಸಿಕೊಳ್ಳಲಾಗದೆ ಸರ್ಕಾರಗಳು ತಮ್ಮ ಅವಧಿಗೆ ಮಾತ್ರ ಸೀಮಿತವಾಗಿದ್ದು ಲೂಟಿ ಪ್ರಕ್ರಿಯೆಯಲ್ಲಿ ಪಾಲುಗೊಂಡಿದೆ. ಒಂದಿಷ್ಟು  ಎಚ್ಚರಗೊಂಡಿರುವ ಸಮಾಜಗಳನ್ನು ಮತ್ತಷ್ಟು ಒಳಿತಿನ ಕಡೆಗೆ ಕೊಂಡೊಯ್ಯುವ ಯತ್ನಗಳು ಹೆಚ್ಚಾಗಬೇಕು. ರಾಜಕಿಯ ಆಂದೋಲನಕ್ಕೆ ಬೇಕಾದುದು ಗಾಂಧಿ ಮತ್ತು ಅಂಬೇಡ್ಕರ್ ಪ್ರಜ್ಞೆ. ಇವರಿಬ್ಬರ ಚಿಂತನೆಗಳು ಮಾನವೀಯ ರಾಜಕಾರಣದ ಬೇರಿನವು. ಈ ಕಾಲದಲ್ಲಿ ಆ ಬಗೆಯನ್ನು ಪೂರ್ಣವಾಗಿ ಅನುಸರಿಸಲು ಆಗದಿದ್ದರೂ ಸರ್ವೋದಯದ ತತ್ವವೇ ನಿಜವಾದ ಅಭಿವೃದ್ಧಿ. ಇಪ್ಪತ್ತೊಂದನೆ ಶತಮಾನದಲ್ಲಿ ಎಲ್ಲ ರಾಜ್ಯಗಳಲ್ಲೂ ರಾಜಕೀಯ ಚಳುವಳಿ ತೀವ್ರವಾಗಿ ಆದರೆ ಮಾತ್ರ ಒಟ್ಟು ಭಾರತ ದೇಶದ ಸ್ವರೂಪ ಬದಲಾಗಲು ಸಾಧ್ಯ. ಅಖಂಡವಾಗಿ ಭಾರತವನ್ನು ಭಾವಿಸುವ ಬದಲು ಒಂದೊಂದು ರಾಜ್ಯವನ್ನೂ ಸ್ವರಾಜ್ಯ ತತ್ವಕ್ಕೆ ಒಳಪಡಿಸಿ ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಬೇಕು.

ಜಯಪ್ರಕಾಶ ನಾರಾಯಣ್ ಅವರು ಕನಸಿದ್ದ ರಾಜಕೀಯ ಕ್ರಾಂತಿಯು ತಕ್ಕ ರೀತಿಯಲ್ಲಿ ಮುಂದುವರಿಯಲಿಲ್ಲ. ಕರ್ನಾಟಕದಲ್ಲಿ ಉಂಟಾದ ಎಪ್ಪತ್ತರ ದಶಕದ ಅನೇಕ ಆಂದೋಲನಗಳು ಮತ್ತೊಮ್ಮೆ ಸಮಕಾಲೀನ ಬಿಕ್ಕಟ್ಟುಗಳನ್ನು ಇಟ್ಟುಕೊಂಡುಉಂಟಾಗಬೇಕಾದ ಅನಿವಾರ್ಯತೆ ಇದೆ. ಇದನ್ನೆಲ್ಲ ಆಗು ಮಾಡಲು ಗಾಢವಾದ ಸಾಮಾಜಿಕ ಬದ್ಧತೆ ಎಲ್ಲರಿಂದಲೂ ಆಗಬೇಕು. ಸಮಾಜಗಳ ಜಡತೆಯನ್ನು ಆಧರಿಸಿಯೇ ಎಲ್ಲ ಬಗೆಯ ಶೋಷಣೆಗಳು ಬೆಳೆಯುವುದು. ಕನ್ನಡ ನಾಡಿನ ಸರ್ವೋದಯಕ್ಕೆ ಏಕೀಕರಣದ ಅರ್ಧಶತಮಾನವು ಸಾಕಾಗಲಿಲ್ಲ ಎಂದರೆ ಕನ್ನಡ ನಾಡಿನ ಸಮಾಜಗಳ ಜೀವನ ಕ್ರಮ ಹೀಗಿದೆ ಎಂಬುದು ತಿಳಿಯುತ್ತದೆ. ಶತಮಾನಗಳಿಂದ ರೂಢಿಗತ ನಂಬಿಕೆಗಳಿಗೆ ದಾಸರಾಗಿರುವ ಸಮುದಾಯಗಳು ಇಪ್ಪತ್ತೊಂದನೆ ಶತಮಾನದಲ್ಲೂ ಬದಲಾಗಿದೆ ಹಿಂದೆ ಸರಿಯುವುದು ಚೋಧ್ಯವಾಗಿದೆ. ಪ್ರಗತಿಯನ್ನು ಅನೇಕ ವಲಯಗಳಲ್ಲಿ ಸಾಧಿಸಿದ್ದರೂ ಸಾಮಾಜಿಕ ಸಂಬಂಧಗಳು ವಿಶಾಲವಾಗಿಲ್ಲ. ಸನಾತನ ಮೌಲ್ಯಗಳು ರೂಪಾಂತರಗೊಂಡು ಮತ್ತೆ ಬಲಗೊಂಡಿವೆ. ಧರ್ಮ ಎನ್ನುವುದೀಗ ದುಷ್ಠ ರಾಜಕಾರಣದ ಸಂತೆಯಾಗಿದೆ. ಆಧ್ಯಾತ್ಮ ನೀತಿಯನ್ನು ಸಮಾಜಕ್ಕೆ ಉಣಬಡಿಸಬೇಕಿದ್ದ ಧಾರ್ಮಿಕ ನಾಯಕರೇ ವಿಷ ನೀಡುವ ಮಟ್ಟ ತಲುಪಿದ್ದಾರೆ. ಧರ್ಮದ ಸುಧಾರಣೆಯನ್ನಾದರೂ ಮಠಗಳು ಮಾಡುತ್ತಿಲ್ಲ. ಧರ್ಮದ ನಿಜವಾದ ಸಾರವನ್ನು ಸಮಾಜಗಳ ಬಿಕ್ಕಟ್ಟಿಗೆ ಬಳಸುತ್ತಿಲ್ಲ. ಕರ್ನಾಟಕವನ್ನು ಸಮೃದ್ಧ ಹಸಿರು ನಾಡನ್ನಾಗಿಸುವ ಚಳುವಳಿಗಳೆಲ್ಲ ಭಗ್ನಗೊಂಡು ಮುಪ್ಪಾಗಿವೆ.

ಈ ಸ್ಥಿತಿಯಲ್ಲಿ ಭವಿಷ್ಯವನ್ನು ನಕಾರಾತ್ಮಕವಾಗಿಯೇ ಬಿಂಬಿಸುವಂತಿದ್ದರೂ ಈ ಪರಿಯ ಬಿಕ್ಕಟ್ಟುಗಳಿಂದ ಮುಕ್ತವಾಗುವುದೇ ನಿಜವಾದ ಭವಿಷ್ಯದ ಹುಡುಕಾಟ. ನಮ್ಮ ಮಿತಿಗಳನ್ನು ಮೀರುವುದೇ ಅತ್ಯುತ್ತಮ ಪರಿವರ್ತನೆ. ಕನ್ನಡ ನಾಡಿನ ಎಲ್ಲ ಸಮುದಾಯಗಳು ಪರಿವರ್ತನೆಯ ಇಚ್ಛಾಶಕ್ತಿಗೆ ಬದ್ಧವಾಗಬೇಕು. ಅದು ಸಾಧ್ಯವಾಗಲು ಅಖಂಡವಾದ ಚಳುವಳಿಯನ್ನೆ ಸಂಘಟಿಸಲು ಎಲ್ಲರೂ ತೊಡಗಬೇಕು. ಆ ಬಗೆಯ ಸಾಧ್ಯತೆಯು ಇಪ್ಪತ್ತೊಂದನೆ ಶತಮಾನದ ಮೊದಲ ಘಟ್ಟದಲ್ಲಿ ಸಾಧ್ಯ ಎಂಬುದನ್ನು ಭಾವಿಸಬಹುದೇನೊ. ಭವಿಷ್ಯವನ್ನು ಯಾರೂ ಯಾವತ್ತೂ ಖಚಿತವಾಗಿ ಹೇಳಲಾಗದು. ಆದರೆ ಸಮಾಜಗಳ ಎಚ್ಚರವೇ ನಿಜವಾದ ಭವಿಷ್ಯ. ಏಕೀಕರಣೋತ್ತರ ಕಾಲದ ಒಟ್ಟು ಬೆಳವಣಿಗೆ ಮುಂದಿನ ಇನ್ನರ್ಧ ಶತಮಾನವನ್ನು ನಿರ್ಧರಿಸಬಲ್ಲದು. ಆಹಿನ್ನೆಲೆಯಿಂದ ಗಮನಿಸಿದರೆ ಮುಂದಿನ ಕರ್ನಾಟಕದ ಸ್ಥಿತಿಯು ಸುಭದ್ರತೆಯ ಕಡೆಗೆ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂಬ ನಂಬಿಕೆ ಏನೂ ಇಲ್ಲ. ಕರ್ನಾಟಕದ ಏಕೀಕರಣದ ಒಂದು ನೂರು ವರ್ಷಗಳ ಕಾಲಮಾನ ಸಾಗಿದಮೇಲೆ ಭಾಗಶಃ ಕನ್ನಡ ನಾಡು ಜಗತ್ತಿನ ಸಾಮಥ್ಯಗಳ ನಕ್ಷೆಯಲ್ಲಿ ಗಮನಾರ್ಹ ಗುರುತನ್ನು ಪಡೆದು ಕೊಳ್ಳುವ ಎಲ್ಲ ಸಾಧ್ಯತೆಗಳು ಇರಬಲ್ಲವೇನೊ. ಆ ನಿಟ್ಟಿನ ಪಯಣಕ್ಕೆ ಯಶಸ್ಸು ಸಾಧ್ಯವಾಗಲಿ.

* * *