ಈ ವಿಚಾರವು ಏಕೀಕರಣೋತ್ತರ ಕರ್ನಾಟಕದಲ್ಲಿ ದೊಡ್ಡ ಸಂಗತಿ ಅಲ್ಲದಿರಬಹುದು. ನಾಡುನುಡಿಗೆ ನೇರ ಸಂಬಂಧಿಸಿದ್ದೂ ಅಲ್ಲದಿರಬಹುದು. ಆದರೆ ಎಪ್ಪತ್ತರ ದಶಕದಲ್ಲಿ ಖಾಸಗೀ ಒಡೆತನದಲ್ಲಿದ್ದ ಬ್ಯಾಂಕ್ ಹಾಗೂ ಸಾರಿಗೆ ವ್ಯವಸ್ಥೆಯನ್ನು ರಾಷ್ಟ್ರೀಕರಣಕ್ಕೆ ಒಳಪಡಿಸಿದ್ದುದು ಸಾಧಾರಣ ಸಂಗತಿ ಅಲ್ಲ. ಬ್ಯಾಂಕ್ ಮತ್ತು ಸಾರಿಗೆ ಒಂದು ನಾಡಿನ ಅಭಿವೃದ್ಧಿಯಲ್ಲು ಸಂಪರ್ಕದಲ್ಲೂ ಸಮಾಜಗಳ ವಿಸ್ತರಣೆಯಲ್ಲೂ ಮಹತ್ತರ ಪಾತ್ರವಹಿಸುತ್ತವೆ. ಸಹಕಾರ ಸಂಸ್ಥೆಗಳು ಕರ್ನಾಟಕದಲ್ಲಿ ಬೆಳೆದು ಖಾಸಗೀ ವಲಯಗಳು ಅಸ್ತಿತ್ವ ರೂಪಿಸಿಕೊಳ್ಳಲು ಕೂಡ ಕಾರಣವಾಗಿವೆ ಎಂಬುದನ್ನು ಈ ಮೊದಲೇ ಚರ್ಚಿಸಿದ್ದೇವೆ. ಒಂದೆಡೆ ಗ್ರಾಮೀಣ ಸಹಕಾರಿ ವಲಯವು ಪ್ರಜಾಪ್ರಭುತ್ವದ ನೆಲೆಯಲ್ಲೆ ಖಾಸಗೀ ವಲಯವಾಗಿ ತಮ್ಮ ಅಸ್ತಿತ್ವಕ್ಕೆ ಬೇಕಾದ ಹಣಕಾಸಿನ ದಾರಿಗಳನ್ನು ಕಂಡುಕೊಳ್ಳುತ್ತಿದ್ದರೆ ಅದೇ ಕಾಲದಲ್ಲಿ ಇಂದಿರಾಗಾಂಧಿಯವರು ಸಮಾಜವಾದಿ ಗಣರಾಜ್ಯದ ಪರಿಕಲ್ಪನೆಯಲ್ಲಿ ಹೆಮ್ಮರವಾಗಿ ಬೆಳೆದಿದ್ದ ಬಂಡವಾಳಶಾಹಿ ದೊರೆಗಳ ಸಂಸ್ಥೆಗಳನ್ನು ಮುಟ್ಟುಗೋಲು ಹಾಕಿಕೊಂಡು ಅದನ್ನು ರಾಷ್ಟ್ರೀಕರಣಗೊಳಿಸಿದ್ದು ಕ್ರಾಂತಿಕಾರಕ ಎಂದು ಈಗ ಅನ್ನಿಸುತ್ತಿದೆ.

ಈ ಕಾಲದ ಸರ್ಕಾರಗಳು ವಿಶೇಷ ಆರ್ಥಿಕ ವಲಯ ಸ್ಥಾಪನೆಯ ನೆಪದಲ್ಲಿ ಸಾರ್ವಜನಿಕ ವಲಯವಾಗಬೇಕಿದ್ದವನ್ನೆಲ್ಲ ಖಾಸಗೀ ಉದ್ದಿಮೆದಾರರಿಗೆ ವಹಿಸಿ ಬೃಹತ್ ಖಾಸಗೀಕರಣವನ್ನು ಎಸಗುತ್ತಿರುವಾಗ ಇಂದಿರಾಗಾಂಧೀ ಅವರು ಜಾರಿಗೊಳೀಸಿದ್ದ ರಾಷ್ಟ್ರಿಕರಣ ಪ್ರಕ್ರಿಯೆಯು ಚಾರಿತ್ರಿಕವಾದದ್ದು ಎನಿಸುತ್ತದೆ. ಸರ್ಕಾರಗಳೇ ಇಂದು ಖಾಸಗೀ ಬಂಡವಾಳಶಾಹಿಗಳ ಜೊತೆ ಕೈಜೋಡಿಸಿ ಸ್ವತಃ ಜನಪ್ರತಿನಿಧಿಗಳೇ ಬಂಡವಾಳ ಶಾಹಿಗಳ ಭಾಗವಾಗಿ ನಡೆಯುವಂತಾಗಿದೆ. ಗಣಿ ಉದ್ಯಮದ ಹಣದ ಹೊಳೆಯು ರಾಜಕಾರಣದಲ್ಲಿ ಹರಿದು ಸರ್ಕಾರವೇ ಒಂದುಬಂಡವಾಳಶಾಹಿ ವ್ಯವಸ್ಥೆಯಾಗಿದೆ. ಈ ಸ್ಥಿತಿಯಲ್ಲಿ ಇದೇ ಬ್ಯಾಂಕ್ ಹಾಗೂ ಸಾರಿಗೆ ವ್ಯವಸ್ಥೇಗಳು ಇಂದು ಕನ್ನಡ ನಾಡಿನಲ್ಲಿ ಬೃಹತ್ತಾಗಿ ಬೆಳೆಯುತ್ತಿವೆ. ಬೆಂಗಳೂರು ಮೈಸೂರಿನ ಕಾರಿಡಾರ್ ರಸ್ತೆಯ ಒಂದೇ ಉದಾಹರಣೆಯು ಖಾಸಗೀಕರಣ ಪ್ರಕ್ರಿಯೆಯ ರಾಜಕಾರಣವನ್ನು ಸಮರ್ಥವಾಗಿ ಧ್ವನಿಸಬಲ್ಲದು. ಕೋಟಿಗಟ್ಟಲೆ ಹಣ ರಸ್ತೆ ನಿರ್ಮಾಣದ ಮೂಲಕ ಹರಿಯುತ್ತಿದೆ. ಮಿಲಿಯಗಟ್ಟಲೇ ಕೋಟಿ ಹಣವು ಗಣಿ ಉದ್ಯಮದಿಂದ ಕೊಚ್ಚಿ ಹೋಗುತ್ತಿದೆ. ಇದರಿಂದ ಕನ್ನಡಿಗರಿಗೆ ಏನಾಗುತ್ತಿದೆ? ಬಹುರಾಷ್ಟ್ರೀಯ ಕಂಪನಿಗಳು ಹಣದ ಮಳೆ ಸುರಿಸುತ್ತಿವೆ. ಇದರಿಂದ ನಿರುದ್ಯೋಗಿ ಕನ್ನಡಿಗರಿಗೆ ಏನಾಗುತ್ತಿದೆ? ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರಗಳು ಕೋಟ್ಯಾಂತರ ಹಣವನ್ನು ಬಿಡುಗಡೆ ಮಾಡುತ್ತಿವೆ. ಇವೆಲ್ಲದರಿಂದ ಕನ್ನಡ ನಾಡಿಗೆ ಏನಾಗುತ್ತಿದೆ? ಈ ಪ್ರಶ್ನೆಗಳು ಭವಿಷ್ಯದ ಕರ್ನಾಟಕದಲ್ಲಿ ಮತ್ತೂ ಹೀಗೇ ಮುಂದುವರಿಯುತ್ತವೆ. ಒಂದು ಕಾಲಕ್ಕೆ ಸರಳವೆನಿಸಿದ್ದ ರಸ್ತೆಸಾರಿಗೆಯು ಇಂದು ಬಹುಕೋಟಿ ಉದ್ಯಮವಾಗಿ ವಿಸ್ತರಿಸಿದೆ. ಈಗಿನ್ನೂ ನಿರ್ಮಾನವಾಗುತ್ತಿರುವ ಕಾರಿಡಾರ್ ಯೋಜನೆಯ ಜೊತೆಗೆ ಮತ್ತೊಂದು ಮೆಗಾರೋಡ್ ಯೋಜನೆಯು ರೈಲು ದಾರಿಯನ್ನೊಳಗೊಂಡಂತೆ ಅದೇ ಮೈಸೂರು ಬೆಂಗಳೂರು ಸಂಪರ್ಕ ರಸ್ತೆಯಾಗಿ ಬೆಳೆಯಲು ನೀಲಿನಕ್ಷೆಗಳು ತಯಾರಾಗಿವೆ. ಈ ರಸ್ತೆಗಳ ಮೇಲೆ ಯಾವ ಬಗೆಯ ಅಭಿವೃದ್ದಿಯ ಚಲನೆ ಸಾಧ್ಯ ಎಂಬುದನ್ನು ಊಹಿಸಬಹುದು.

ಕರ್ನಾಟಕದ ಒಳ ನಾಡಿಗೆ ಬೇಕಾದ ಸಂಪರ್ಕವೇ ಇಲ್ಲವಾಗಿ ಈಗ ಮಾಹಿತಿ ಹೆದ್ದಾರಿಗಳು ಆವರಿಸಿಕೊಳ್ಳುತ್ತಿವೆ. ತಂತ್ರಜ್ಞಾನದ ರಾಷ್ಟ್ರೀಕರಣವಾಗಬೇಕಿದ್ದರೂ ಆ ಬಗ್ಗೆ ಚಕಾರವೆತ್ತಲಾ ಗುತ್ತಿಲ್ಲ. ಗ್ರಾಮೀಣ ಕರ್ನಾಟಕಕ್ಕೆ ಇನ್ನೂ ಸರಿಯಾದ ರಸ್ತೆಗಳಾಗಲಿ ಮೂಲ ಸೌಕರ್ಯಗಳಾಗಲಿ ಸಾಧ್ಯವಿಲ್ಲದಿರುವಾಗ ಸರ್ಕಾರಗಳು ನಗರಗಳನ್ನು ಉದ್ಧಾರ ಮಾಡಲು ಹೊರಟಿವೆ. ನಗರೋದ್ಯಮ ವಿಶೇಷವಾಗಿ ಬೆಳೆಯುತ್ತಿದೆ. ನಗರ ನಿರ್ಮಾನವೇ ದೊಡ್ಡದಂದೆ. ನಗರಗಳು ಬೆಳೆದಷ್ಟು ಹಣ ಹರಿಯುತ್ತದೆ ಎಂಬ ಭಾವನೆ ಬೆಳೆದು ಬಿಲ್ಡಿಂಗ್ ಉದ್ಯಮವು ಬಹುಕೋಟಿಗಳ ವ್ಯಾಪಾರವಾಗುತ್ತಿದೆ. ಇವುಗಳಲ್ಲಿ ಬ್ಯಾಂಕ್ ಮತ್ತು ಸಾರಿಗೆಯ ಪಾತ್ರವೂ ಇದೆ. ಖಾಸಗಿ ಸಾರಿಗೆ ವ್ಯವಸ್ಥೆಯು ಇಂದು ದೊಡ್ಡ ಉದ್ಯಮವಾಗಿದ್ದು, ಅದನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲವಾಗಿದೆ. ಮೂಲತಃ ಬ್ಯಾಂಕ್ ಮತ್ತು ಸಾರಿಗೆಯ ಪಾತ್ರವೂ ಇದೆ. ಖಾಸಗಿ ಸಾರಿಗೆ ವ್ಯವಸ್ಥೇಯು ಇಂದು ದೊಡ್ಡ ಉದ್ಯಮವಾಗಿದ್ದು, ಅದನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲವಾಗಿದೆ. ಮೂಲತಃ ಬ್ಯಾಂಕ್ ಮತ್ತು ಸಾರಿಗೆ ವ್ಯವಸ್ಥೆಯ ಜೊತೆಗೆ ಅಭಿವೃದ್ಧಿ ಯೋಜನೆಗಳು ತಳುಕು ಹಾಕಿಕೊಂಡಿವೆ. ರಸ್ತೆ ನಿರ್ಮಾಣದ ದೊಡ್ಡ ರಾಜಕೀಯವನ್ನು ಸಾರಿಗೆಯ ಭಾಗವಾಗಿಯೇ ನೋಡಬೇಕಾಗಿದೆ. ಸರ್ಕಾರಿ ಸ್ವಾಮ್ಯದ ಸಾರಿಗೆಯಿಂದ ನಷ್ಟವೇ ಹೆಚ್ಚಾಗಿದ್ದು ನಾಡಿನ ನಿರ್ಮಾಣಕ್ಕಿಂತ ರಾಜಕಾರಿಣಿಗಳು ಹಾಗೂ ಅಧಿಕಾರಿಗಳು ಸ್ವಹಿತಕ್ಕೆ ಮಾತ್ರವೇ ತೊಡಗಿರುವ ವಿಪರ್ಯಾಸ ವಿದೆ. ಸಾರ್ವಜನಿಕ ವಲಯಗಳೆಲ್ಲ ಹೆಚ್ಚು ಕಡಿಮೆ ಇದೇ ಹಾದಿ ಹಿಡಿದಿವೆ. ಖಾಸಗೀಕರಣಕ್ಕೆ ನಿಯಂತ್ರಣವೇ ಇಲ್ಲವಾಗಿದೆ. ಸೇವಾ ಧೋರಣೆಯೇ ಅಲ್ಲಿ ಕಾಣುತ್ತಿಲ್ಲ. ಖಾಸಗೀ ವಲಯದ ಸಾಮಾಜಿಕ ನ್ಯಾಯವನ್ನು ಒಪ್ಪುವಂತದಲ್ಲ. ವ್ಯಾಪಾರವ್ಯವಹಾರವೇ ಖಾಸಗಿ ಕ್ಷೇತ್ರದ ಪ್ರಥಮ ಆದ್ಯತೆಯಾಗಿದೆ. ಸಮಾಜವನ್ನು ಖಾಸಗೀಕರಣವು ಛಿದ್ರಗೊಳಿಸಿ ಅಸಮಾನತೆಯನ್ನು ಬೆಳೆಸಿ ಶೋಷಣೆಯ ಜಾಲವನ್ನು ಬಲಿಷ್ಠ ಗೊಳಿಸುವಂತದ್ದು.

ನಾಡು ನುಡಿಯ ಹಿತ ಇಂತಲ್ಲಿ ವ್ಯಾಪಾರಿ ಮಟ್ಟದಲ್ಲೇ ಇರುತ್ತದೆ. ನಾಡನ್ನೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಲು ಮುಂದಾಗಿರುವ ರಾಜಕಾರಿಣಿಗಳು ಉದ್ಯಮಿಗಳು ಕರ್ನಾಟಕದ ನೊಂದ ಸಮುದಾಯಗಳನ್ನು ಕಾಯಬಲ್ಲರೇನು? ಕನ್ನಡ ಭಾಷೆಯ ಜನರನ್ನೆ ಕರ್ನಾಟಕದ ಸಂಪತನ್ನೆ ಬಳಸಿಕೊಳ್ಳುತ್ತ ಖಾಸಗೀ ವಲಯಗಳು ಕನ್ನಡಿಗರನ್ನೆ ಕೈಬಿಟ್ಟಿವೆ. ನಮ್ಮ ನೆಲ ಜಲ ಜನಗಳನ್ನೆ ಖರೀದಿಸಿ ಮಾರುವ ರಾಜ್ಯ ಸರ್ಕಾರ ಹಾಗೂ ಪ್ರತಿಷ್ಠಿತ ಉದ್ಯಮಗಳು ಇಡೀ ಸಮಾಜವನ್ನೆ ಅಭಿವೃದ್ಧಿಯ ಹೆಸರಲ್ಲಿ ಚಿಲ್ಲೆರೆ ಬೆಲೆಗೆ ಮಾರಾಟ ಮಾಡುತ್ತಿವೆ. ಇದು ಎಪ್ಪತ್ತರ ದಶಕದಲ್ಲಿದ್ದ ಸಾರ್ವಜನಿಕ ವಲಯಗಳನ್ನು ಇಂದು ಮೂಲೆಗುಂಪು ಮಾಡುವಂತಾಗಿದೆ. ಸಾರಿಗೆ ವ್ಯವಸ್ಥೆಯು ಇನ್ನೂ ಕೆಲವೇ ವರ್ಷಗಳಲ್ಲಿ ಪೂರ್ಣವಾಗಿ ಖಾಸಗೀ ಆಡಳಿತಕ್ಕೆ ಒಳಪಡಲಿದೆ. ಈಗಾಗಲೇ ಸಾರಿಗೆ ವ್ಯವಸ್ಥೆಯು ನೆಪಕ್ಕೆ ಸರ್ಕಾರಿ ರೀತಿ ನೀತಿಗಳನ್ನು ಅನುಸರಿಸುತ್ತಿದ್ದು ಅವನ್ನೆಲ್ಲ ಗಾಳಿಗೆ ತೂರಿ ಖಾಸಗಿ ವಲಯದವರೇ ಸರ್ಕಾರಿ ವೇಷಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೊಂದಾಗಿ ಹೀಗೆ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಇಲಾಖೆಗಳೆಲ್ಲ ಖಾಸಗೀಕರಣಕ್ಕೆ ಹೀಡಾಗುತ್ತಿವೆ. ಸಾರ್ವಜನಿಕ ವಲಯದ ಉದ್ಯಮಗಳನ್ನೆಲ್ಲ ಜಾತಿ ಮತ್ತು ಅಧಿಕಾರಶಾಹಿ ಜೊತೆ ರಾಜಕಾರಣಿಗಳು ಕೂಡಿ ಕೊಳ್ಳಹೊಡೆದು ರೋಗಪೀಡಿತ ಮಾಡಿ ಅಂತಹ ಸಂಸ್ಥೆಗಳನ್ನು ನಷ್ಟದ ಹೆಸರಲ್ಲಿ ಮುಚ್ಚಿ ಅವನ್ನು ಕೊನೆಗೆ ಖಾಸಗೀ ಉದ್ಯಮಗಳಿಗೆ ಕ್ರಯ ಮಾಡಿಕೊಳ್ಳುವ ಪ್ರಮಾಣ ಹೆಚ್ಚುತ್ತಲೇ ಇದೆ. ಅಂದರೆ ಏಕೀಕರಣೋತ್ತರ ಕರ್ನಾಟಕವು ಖಾಸಗೀಕರಣವನ್ನು ಯಶಸ್ವಿಯಾಗಿ ಕಂಡುಕೊಳ್ಳುತ್ತಿದೆ. ಸಾಹಿತ್ಯ, ಸಂಸ್ಕೃತಿ, ಸಮಾಜ ಇವೆಲ್ಲವೂ ಇಲ್ಲಿ ಕೇವಲ ಸಂಗತಿಗಳಾಗುತ್ತಿದ್ದು ಬಲಿಷ್ಠ ಜಾತಿಗಳ ನಾಯಕರ, ಕೋಟ್ಯಾಧೀಶ ಉದ್ದಿಮೆಗಳ ಮಾಲೀಕರ, ರಾಜಕೀಯ ವ್ಯಕ್ತಿಗಳ ಪಾಲಾಗಿ ಕರ್ನಾಟಕವು ಹಂಚಿಕೆಯಾಗುತ್ತಿದೆ.ಇಂತಲ್ಲಿ ವಿದೇಶಿ ಸಂಸ್ಥೆಗಳ ಮೇಲೂ ಜಾಗತೀಕರಣದ ಮೇಲೂ ಇಂತವರೇ ಅಮಾಯಕರನ್ನು ಛೂ ಬಿಡುವುದು ದುರಂತವಾಗಿದೆ. ಕರ್ನಾಟಕದ ಒಳಗಿನ ನಮ್ಮವರೇ ಭಯಂಕರವಾಗಿ ನಾಡನ್ನುಕೊಳ್ಳೆ ಹೊಡೆಯುತ್ತಿರುವ ಸಂದರ್ಭದಲ್ಲಿ ಖಾಸಗೀ ವಲಯಗಳ ರಾಷ್ಟ್ರೀಕರಣ ಸಾಧ್ಯವೇ ಇಲ್ಲದ ಕೆಲಸ. ಈ ದಾರಿಯಲ್ಲಿ ಖಾಸಗೀಕರಣಗೊಳ್ಳುತ್ತ ಸಾಗುವ ಭವಿಷ್ಯದ ಕರ್ನಾಟಕವು ಊಹೆಗೆ ನಿಲುಕದಂತಿದೆ.