ದಲಿತ ಮತ್ತು ರೈತ ಚಳುವಳಿಗಳ ಮುಂದುವರಿದ ಭಾಗವಾಗಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತ್ತು ಆದಿವಾಸಿಗಳ ಮುಕ್ತಿಯ ಯತ್ನಗಳನ್ನು ಪರಿಶೀಲಿಸಬಹುದು. ಜಾತಿ ವ್ಯವಸ್ಥೆಯ ಸ್ತರದಲ್ಲಿ ಖಚಿತವಾಗಿ ಗುರುತಿಸಿಕೊಳ್ಳಲು ಆಗದ ಸಮುದಾಯಗಳ ಅಸ್ತಿತ್ವದ ಪ್ರಶ್ನೆ ಸರಳವಾದುದಲ್ಲ. ತನ್ನ ಚಹರೆಯನ್ನೆ ಬೇರೆ ಬೇರೆ ಸಮುದಾಯಗಳಲ್ಲಿ ಕರಗಿಸಿಕೊಂಡು ಬೇರೆಯವರ ದನಿಯಲ್ಲಿ ತನ್ನ ನುಡಿಯನ್ನು ವ್ಯಕ್ತಪಡಿಸುವುದು ತಉಂಬ ಸಂಕೀರ್ಣವಾದ ಹಾಗೆಯೆ ಬಹಳ ತೊಡಕಿನ ಅಭಿವ್ಯಕ್ತಿ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಹಿಂದುಳಿದ ಅಲ್ಪಸಂಖ್ಯಾತ ಆದಿವಾಸಿ ಅಲೆಮಾರಿ ಸಮುದಾಯಗಳು ಒಗ್ಗಟ್ಟಾಗದಿರಲು ಅನೇಕ ಕಾರಣಗಳಿವೆ. ಏಕೀಕರಣೋತ್ತರ ಕರ್ನಾಟಕದಲ್ಲಿ ಈ ಬಗೆಯ ಸಮುದಾಯಗಳು ಸುರಕ್ಷಿತ ಸ್ಥಾನದಲ್ಲಿದ್ದೇವೆ ಎಂಬ ಭಾವನೆಯನ್ನು ತಳೆದಂತಿದೆ. ತನ್ನ ಮೇಲಿನ ಪ್ರಬಲ ಜಾತಿಳ ವಿರುದ್ಧ ಬಂಡಾಯವೇಳದ ಆದರೆ ತನಗಿಂತ ಕೆಳಗಿನ ದಲಿತಸಮುದಾಯಗಳ ಜೊತೆಯಲ್ಲು ಒಂದಾಗದ ಮಧ್ಯಮ ಮನಸ್ಥಿತಿಯು ಅಪಾಯಕಾರಿಯಾದುದು. ಅದು ಯಾರಿಗೂ ಉಪಯುಕ್ತವಲ್ಲ. ಆದರೆ ಅಪ್ಪಟ ಬುಡಕಟ್ಟುಗಳು ಇನ್ನು ಕೂಡ ನಾಡಿನ ಭಾಗವೇ ಆಗಿಲ್ಲ. ಕರ್ನಾಟಕದ ಆದಿವಾಸಿಗಳ ಹೆಸರಲ್ಲಿ ಜಾತಿಯಾಗಿ ಮಾರ್ಪಟ್ಟಿರುವ ಸಮುದಾಯಗಳೇ ಬುಡಕಟ್ಟುಗಳ ಹಕ್ಕುಬಾದ್ಯತೆಗಳನ್ನು ಕಸಿದು ಕೊಳ್ಳುತ್ತಿದ್ದು ರಾಜಕೀಯವಾಗಿ ಸಿಗಬೇಕಿದ್ದ ಪ್ರಾತಿನಿಧ್ಯವನ್ನು ಬೇರೆಯವರೇ ಪಡೆಯುವಂತಾಗಿದೆ. ಎಪ್ಪತ್ತರ ದಶಕದಲ್ಲಿ ಇಂತಹ ಸಮಾಜಗಳು ರಾಜಕೀಯ ಪ್ರವೇಶ ಪಡೆದದ್ದು ಹಾಗೂ ಶಿಕ್ಷಣದ ಕಡೆ ಮುಖ ಮಾಡಿದ್ದು ಪರಿಣಾಮಕಾರಿಯಾಗಿತ್ತು. ದೇವರಾಜು ಅರಸು ಅವರ ಯತ್ನವೆ ಇದಕ್ಕೆ ಮೂಲವಾಗಿತ್ತು. ಪ್ರಬಲ ಜಾತಿಗಳ ಹಿಡಿತದಿಂದ ದೂರವಿಡಲು ಹಾಗು ದಲಿತ ಸಮುದಾಯಗಳ ಸಮೀಪ ನಡೆಯಲು ಮಾಡಿದ ಅರಸು ಅವರ ರಾಜಕೀಯ ತಂತ್ರಗಳು ಒಂದಿಷ್ಟು ಫಲಿಸಿದವು. ಹಿಂದುಳಿದ ನೂರಾರು ಸಮುದಾಯಗಳ ಭವಿಷ್ಯದ ಕಾರಣವಾಗಿಯೆ ಮೀಸಲಾತಿಗೆ ಸಂಬಂಧಿಸಿದ ಆಯೋಗ ವರದಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಜಾತಿಗಳ ನಡುವೆ ಅಂತರವನ್ನೂ ಸಾಮರಸ್ಯವನ್ನು ಏಕ ಕಾಲಕ್ಕೆ ತರಲು ಯತ್ನಿಸಲಾಯಿತು. ಲಿಂಗಾಯಿತ ಹಾಗೂ ಒಕ್ಕಲಿಗ ಜಾತಿಗಳ ನೆರಳಲ್ಲೇ ಇರುವಂತಹ ಇಕ್ಕಟ್ಟು ಇದರಿಂದ ಒಂದಿಷ್ಟು ಕಡಿಮೆ ಆಯಿತಾದರೂ ಜಾತಿಗಳ ಅಂತಿಮ ಹಿಡಿತವೂ ಚಾಣಾಕ್ಷವಾಗಿ ರೂಪಾಂತರಗೊಂಡಿತ್ತು. ಹಾವನೂರು ವರದಿಯಿಂದಾಗಿ ಮೊದಲಬಾರಿಗೆ ಅನೇಕ ಅದೃಶ್ಯ ಸಮುದಾಯಗಳ ಬೆಳಕಿಗೆ ಬಂದವು. ದಲಿತ ಹೋರಾಟಗಳಲ್ಲಿ ಅಂತಹ ಹಿಂದುಳಿದ ಸಮುದಾಯಗಳ ನೈತಿಕ ಬೆಂಬಲವು ಮೌನವಾಗಿದ್ದುದು ಪೂರಕವೇ ಆಗಿತ್ತು.

ಅಲ್ಪಸಂಖ್ಯಾತ ಮುಸ್ಲಿಂ ಸಮಾಜವು ಯಾವ ನಿರ್ಣಾಯಕ ಪಾತ್ರವನ್ನು ಈ ಹಂತದಲ್ಲಿ ನಿರ್ವಹಿಸಲಿಕ್ಕಾಗದಿದ್ದರೂ ಮುಸ್ಲಿಂ ಮತ ಬ್ಯಾಂಕ್ ತನ್ನ ನಿಚ್ಚಳತೆಯನ್ನು ರಾಜಕಿಯ ಸಂದರ್ಭಗಳಲ್ಲಿ ತೋರಲು ಸಾಧ್ಯವಾಯಿತು. ಮುಸ್ಲಿಂ ಸಮೂಹ ಕರ್ನಾಟಕದ ಏಕೀಕರಣದಲ್ಲಿ ಪಾಲುಗೊಂಡಿದ್ದುದು ಅತ್ಯಲ್ಪ ಪ್ರಮಾಣದಲ್ಲಿದ್ದುದಕ್ಕೆ ಆ ಸಮುದಾಯವನ್ನು ಆರೋಪಿಸಲು ಬರದು. ಆದರೆ ಏಕೀಕರಣೋತ್ತರ ಕರ್ನಾಟಕದಲ್ಲಿ ಪಲ್ಲಟಗಳಾಗುತ್ತಿದ್ದ ಕಾಲಘಟ್ಟದಲ್ಲಿಮುಸ್ಲಿಂ ಸಮುದಾಯವು ಮತಬ್ಯಾಂಕ್ ಶಕ್ತಿಯಾಗಿ ಅಖಂಡತೆಯನ್ನು ತೋರಿದ್ದು ಅರಸು ಅವರ ಸುಧಾರಣೆಗಳ ಕಾಲದಲ್ಲಿಯೆ. ಎಪ್ಪತ್ತರ ದಶಕದಲ್ಲಾಗುತ್ತಿದ್ದ ಚಳುವಳಿಗಳು ಮುಸ್ಲಿಂ ಸಮುದಾಯವನ್ನು ಎಚ್ಚರಿಸಿವೆ. ಈ ಎಚ್ಚರವನ್ನು ಮುಖ್ಯವಾಗಿ ಮುಸ್ಲೀಮರ ರಾಜಕೀಯ ತೀರ್ಮಾನಗಳಲ್ಲಿ ಭಾವಿಸಬಹುದು. ಕಾಂಗ್ರೆಸ್‌ಪಕ್ಷದ ರಾಷ್ಟ್ರೀಯ ಹಾಗೂ ಸ್ಥಳೀಯ ರಾಜಕಾರಣದಲ್ಲಿ ಮುಸ್ಲಿಮರು ಕೈಜೋಡಿಸಿದ್ದುದು ಮಹತ್ವದ್ದಾಗಿತ್ತು. ಮತೀಯ ಶಕ್ತಿಗಳು ಇದರಿಂದ ಹಿನ್ನೆಡೆ ಪಡೆಯಬೇಕಾಯಿತು. ನಾಡು ನುಡಿಯಲ್ಲಿ ಮತಾಂಧ ಶಕ್ತಿಗಳು ತುಂಬ ಅಪಾಯಕಾರಿ.ಮುಸ್ಲಿಂ ಮೂಲಭೂತವಾದಿ ಧೋರಣೆಗಳು ಅಂತರಂಗದಲ್ಲಿದ್ದರೂ ಅವು ಕನ್ನಡ ಸಮಾಜದ ವಿರುದ್ಧ ಸಮರ ಹೂಡಲಿಲ್ಲ. ಮತೀಯತೆಯ ರಾಜಕಾರವನ್ನು ಮಾಡಿದ ಹಿಂದೂ ಶಕ್ತಿಗಳ ವಿರುದ್ಧ ಗೆಲ್ಲುವುದು ಕೂಡ ಮುಸ್ಲಿಂ ಸಮುದಾಯಕ್ಕೆ ಸುಲಭವಲ್ಲ. ಹೀಗಾಗಿ ನಾಡು ನುಡಿಯ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಭಾಗವಹಿಸುವಿಕೆಯು ಬಹಳ ಸೂಕ್ಷ್ಮವಾದದ್ದು ಹಾಗೆಯೇ ಅನೇಕ ಹಿಂದೂವಾದಿಗಳಿಎ ಅನಪೇಕ್ಷಣೀಯವಾದುದು. ಹೀಗಾಗಿ ಮುಸ್ಲಿಂ ಸಮಾಜ ರಾಜಕೀಯ ನಿರ್ಧಾರಗಳಲ್ಲಿ ಮಾತ್ರವೆ ತನ್ನ ಒತ್ತಡವನ್ನು ಹೇರಲು ಶಕ್ತವಾಯಿತು. ದೇವರಾಜ ಅರಸು ಅವರ ಕಾಲದಲ್ಲಿ ಮುಸ್ಲಿಂ ಮತ ಬ್ಯಾಂಕ್ ಪ್ರಜ್ಞಾಪೂರ್ವಕವಾಗಿ ತನ್ನ ಭಾಗವಹಿಸುವಿಕೆಯ ಉದ್ದೇಶವನ್ನು ಧ್ವನಿಸಿತು. ಈ ಅಂಶವು ಈಗಲೂ ಹಾಗೇ ಮುಂದುವರಿದುಕೊಂಡು ಬಂದಿದೆ. ಎಪ್ಪತ್ತರ ದಶಕದಲ್ಲಿ ಪ್ರವೇಶಗೊಂಡ ಮುಸ್ಲಿಂ ರಾಜಕೀಯ ನಾಯಕರ ಪಾತ್ರ ಈಗಲೂ ವಿಶೇಷವಾಗಿದೆ ಎಂಬುದನ್ನು ಗಮನಿಸಬಹುದು.

ಅಲ್ಪಸಂಖ್ಯಾತ ಹಾಗು ಹಿಂದುಳಿದ ಮತ್ತು ಆದಿವಾಸಿ ಅಲೆಮಾರಿ ಸಮುದಾಯಗಳು ಒಂದೇ ರೀತಿ ಅಲ್ಲ. ಇವುಗಳನ್ನು ನಾವು ಒಂದು ಗುಂಪೆಂದು ಭಾವಿಸಿದ್ದೇವೆಯೇ ವಿನಃ ಸ್ವತಃ ಆ ಸಮುದಾಯಗಳು ಹೀಗೆ ಒಂದು ಅಖಂಡ ಗುಂಪೆಂದು ಒಪ್ಪಿಕೊಂಡಿಲ್ಲ. ಇವರ ಸಮಸ್ಯೆಗಳು ಬೇರೆಯಾಗಿಯೆ ಇವೆ. ಹಿಂದುಳಿದ ವರ್ಗಗಳಲ್ಲೂ ಅನೇಕ ಸಣ್ಣಪುಟ್ಟ ಸಮುದಾಯಗಳು ಬೆರೆತಂತಿವೆ. ಇತರೆ ಹಿಂದುಳಿದ ಸಮುದಾಯಗಳು ಯಾರ ಜೊತೆ ದನಿಗೂಡಿಸಿ ಯಾವ ಬಗೆಯ ರಾಜಕೀಯ ಶಕ್ತಿಯವಾಗಿ ಭವಿಷ್ಯದ ನಾಡನ್ನು ರೂಪಿಸಿಕೊಳ್ಳಬೇಕು ಎಂಬುದರ ಕಡಗೆ ಗಂಭಿರವಾಗಿ ಚಿಂತಿಸುತ್ತಿಲೇ ಇಲ್ಲ.  ವಾಸ್ತವ ಹೀಗಿರುವಲ್ಲಿ ಹಿಂದುಳಿದ ವರ್ಗಗಳು ಎಂದು ವಿಂಗಡಿಸಿರುವ ಕ್ರಮದಲ್ಲೇ ಲೋಪವಿದೆ. ಹಾವನೂರು ಆಯೋಗದ ಇಂತಹ ಸಮೂಹ ವಿಂಗಡನೆಯು ಎಪ್ಪತ್ತರ ದಶಕದಲ್ಲಿ ನ್ಯಾಯದ ಗುರಿಯಿಂದಲೇ ಅನೇಕ ಅಧಿಕಾರತಬುಡಕಟ್ಟು ಸಮುದಾಯಗಳಿಗೆ ಅನ್ಯಾಯವನ್ನು ಮಾಡಿದೆ. ಇಂತಿಂತಹ ಅಲಕ್ಷಿತ ವರ್ಗಗಳು ಇವೆ ಎಂದು ಹಾವನೂರು ವರದಿ ಗುರುತಿಸುವಲ್ಲಿ ಮಾತ್ರ ಸಫಲವಾಯಿತೇ ಹೊರತು ಆ ವಂಚಿತ ಸಮಾಜಗಳಿಗೆ ಖಚಿತ ನೆಲೆಯ ನ್ಯಾಯ ಒದಗಿಸುವಲ್ಲಿ ಎಡವಿತು. ಇದರಿಂದ ಹಿಂದುಳಿದ ವರ್ಗಗಳಲ್ಲೆ ಪ್ರಬಲವಾಗಿರುವ ಕೋಮುಗಳಿಗೆ ಮಾತ್ರ ಲಾಭವಾಗಿ ಅನೇಕರಿಗೆ ನ್ಯಾಯವು ಮರೀಚಿಕೆಯೆ ಆಯಿತು.

ಮೀಸಲಾತಿ ಹಂಚಿಕೆಯಲ್ಲಿ ಇಂತಹ ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳಿಗೆ ಬಹಳ ಅನ್ಯಾಯವಾಗಿದ್ದು ಕೆಲವೇ ವರ್ಗಗಳು ಹೆಚ್ಚಿನ ಪ್ರಮಾಣದ ಲಾಭಗಳನ್ನು ಪಡೆದುಕೊಂಡು ಸಮಾಝದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಆದಿವಾಸಿಗಳನ್ನುಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಗುರುತಿಸಿರುವ ಪ್ರಮಾದವೂ ಉಂಟಾಗಿದ್ದು ಕೆಲವೆಡೆ ಬುಡಕಟ್ಟು ಅಲ್ಲದವರನ್ನೆ ಬುಡಕಟ್ಟು ಎಂದು ಗುರುತಿಸಲಾಗಿದೆ. ಬಲಿಷ್ಠ ಗೌಡ ಹಾಗೂ ಲಿಂಗಾಯಿತ ಜಾತಿಗಳ ಪ್ರಾಬಲ್ಯವನ್ನು ಮುರಿಯಲು ಮಾಡಿದ ಮೀಸಲಾತಿ ಯೋಜನೆಯೂ ಸಹ ದುರುಪಯೋಗವಾಗಿದೆ. ಅರಸು ಅವರ ಈ ಯತ್ನದಲ್ಲಿ ಸಾಮಾಜಿಕ ನ್ಯಾಯವಿತ್ತಾದರೂ ಮೇಲು ಜಾತಿಗಳಿಗಿರುವ ರಾಜ್ಯಾಧಿಕಾರದ ಶಕ್ತಿಯನ್ನು ನಿಯಂತ್ರಿಸುವುದೂ ಆಗಿತ್ತು. ಈ ಹಿನ್ನೆಲೆಯಲ್ಲಿ ಪಡೆದ ರಾಜಕೀಯ ಮೀಸಲಾತಿಯಲ್ಲು ಅನ್ಯಾಯವಾಗಿದ್ದು, ಬುಡಕಟ್ಟುಗಳ ಮತಾಧಿಕಾರವೇ ಇಲ್ಲದಂತಾಗಿದೆ. ಈ ಬೆಳವಣಿಗೆಗಳು ತಕ್ಕುದಾಗಿಲ್ಲ. ನ್ಯಾಯ ಮತ್ತು ಅನ್ಯಾಯ ಜೊತೆಯಲ್ಲೇ ಬೆಳೆದದ್ದರಿಂದ ಹಿಂದುಳಿದ ವರ್ಗಗಳು ನಿಖರವಾಗಿ ಒಂದು ಶಕ್ತಿಯಾಗಿ ರೂಪುಗೊಳ್ಳಲು ತೊಡಕಾಯಿತು ಮತ್ತು ಸದಾ ಮತ್ತೊಂದು ಪ್ರಬಲ ಶಕ್ತಿಯ ರಾಜಕಾರಣದಲ್ಲೇ ಪರ್ಯಾವಸಾನಗೊಳ್ಳುವ ಇಕ್ಕಟ್ಟು ಸೃಷ್ಟಿಯಾಯಿತು. ಆದರೆ ಹಿಡಿಯಾಗಿ ಹಿಂದುಳಿದ ವರ್ಗಗಳ ಎಚ್ಚರ ಸೂಕ್ಷ್ಮವಾಗಿಉಂಟಾದದ್ದು ವಿಶೇಷವಾಗಿತ್ತು. ಮೊದಲ ಬಾರಿಗೆ ಮೀಸಲಾತಿಯ ಪಟ್ಟಿ ತಯಾರಾಗಿ ಮರೆಯಲ್ಲಿದ್ದ ಎಷ್ಟೋ ಸಮುದಾಯಗಳು ಲೆಕ್ಕಕ್ಕೆ ಒಳಗಾದವು. ಅಲ್ಪಸ್ವಲ್ಪ ರಾಜಕೀಯ ಜಾಗೃತಿಯೂ ಉಂಟಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಕನಿಷ್ಠ ಅವಕಾಶ ಸಾಧ್ಯವಾಯಿತು. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತ ಬ್ಯಾಂಕ್ ರಾಜಕೀಯದ ಕಾರಣಕ್ಕಾಗಿಯಾದರೂ ಸರ್ಕಾರಗಳು ಅನೇಕ ಜನೋಪಯೋಗಿ ಯೋಜನೆಗಳನ್ನು ರೂಪಿಸಬೇಕಾಯಿತು. ಒಂದಿಷ್ಟು ಪ್ರಮಾಣದಲ್ಲಾದರೂ ಪ್ರಬಲ ಜಾತಿಗಳ ಹಿಡಿತವನ್ನು ಸಡಿಲಿಸಲು ಸಾಧ್ಯವಾಯಿತು. ಅನೇಕ ಅಲ್ಪಸಂಖ್ಯಾತ ಹಿಂದುಳಿದ ಸಮುದಾಯಗಳು ಸ್ಥಳೀಯವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಘಟನೆಗಳನ್ನು ಕಟ್ಟಿಕೊಳ್ಳಲು ಅವಕಾಶವಾಯಿತು. ಪ್ರಬಲ ಜಾತಿಗಳು ಹಿಂದುಳಿದ ಜಾತಿಗಳನ್ನು ವಿಶ್ವಾಸಕ್ಕೆ  ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು. ಹಾಗೆಯೆ ಸಣ್ಣ ಪುಟ್ಟ ಸಮುದಾಯಗಳೂ ಕೂಡ ಪ್ರಬಲ ಜಾತಿಗಳ ಜೊತೆ ಅನುಕೂಲ ರಾಜಕಾರಣವನ್ನು ಮಾಡುವಂತಾಯಿತು.

ಆದರೆ ಆದಿವಾಸಿ ಅಲೆಮಾರಿ ಸಮುದಾಯಗಳಿಗೆ ಮಾತ್ರ ಯಾವುದೇ ವಿಶೇಷ ನೆರವು ಉಂಟಾಗಲಿಲ್ಲ. ಆದಿವಾಸಿ ಮತ್ತು ಅಲೆಮಾರಿಗಳನ್ನು ಮೀಸಲಾತಿ ಅಡಿಯಲ್ಲಿ ಸೇರಿಸುವ ಪ್ರಕ್ರಿಯೆಯೇ ಅನೇಕ ರೀತಿಯಲ್ಲಿ ಈ ಎರಡೂ ಗುಂಪಿನ ಸಮುದಾಯಗಳಿಗೆ ಅನ್ಯಾಯವನ್ನು ಮಾಡಿತು. ಕಾಡಿನ ಅಪ್ಪಟ ಆದಿವಾಸಿಗಳನ್ನು ಪರಿಶಿಷ್ಟ ಪಂಗಡಗಳಲ್ಲಿ ಸೇರಿಸಿ ಅವರ ಪಾಲನ್ನು ಬೇರೊಬ್ಬರು ಪಡೆಯುವುದಕ್ಕೆ ಅವಕಾಶ ಕಲ್ಪಿಸಿದಂತಾಯಿತು. ಆದಿವಾಸಿ ಹಂತದಿಂದ ಹೊರಬಂದು ಜಾತಿ ಸ್ವರೂಪ ಪಡೆದುಕೊಂಡ ಜಾತಿಗಳೇ ನಿಜವಾದ ಆದಿವಾಸಿಗಳ ಮೀಸಲು ಹಕ್ಕನ್ನು ಕಸಿದು ಕೊಳ್ಳುವಂತಾಯಿತು. ಇದು ಇಂದಿಗೂ ಚಾಲ್ತಿಯಲ್ಲಿದೆ. ಕಾಡಿನ ಆದಿವಾಸಿಗಳನ್ನು ಕನ್ನಡ ನಾಡು ನುಡಿಯ ಪ್ರಕ್ರಿಯೆಗಳು ಸೂಕ್ತವಾಗಿ ಪರಿಗಣಿಸಲೇ ಇಲ್ಲ. ಕೇಂದ್ರ ಸರ್ಕಾರದ ಆದಿವಾಸಿ ನೀತಿಯೂ ರಾಜ್ಯದಲ್ಲಿ ಸೂಕ್ತವಾಗಿ ಜಾರಿಯಾಗಲಿಲ್ಲ. ಆದಿವಾಸಿಗಳನ್ನು ಮತಬ್ಯಾಂಕ್ ಆಗಿ ಪರಿವರ್ತಿಸುವ ಸಣ್ಣಪುಟ್ಟ ಯತ್ನಗಳು ಮಾತ್ರ ಹಿಂದಿನಿಂದಲೂ ಆಗಿರುವುದನ್ನು ಬಿಟ್ಟರೆ ಇವರನ್ನು ಪ್ರಧಾನಧಾರೆಗೆ ತಂದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಆಗಿಯೆ ಇಲ್ಲ. ಆದರೆ ಕಾಡಿನ ಮೇಲಿನ ಸಾರ್ವಭೌಮತ್ವವನ್ನು ಸ್ಥಾಪಿಸಿದ ಸರ್ಕಾರಗಳು ಆದಿವಾಸಿಗಳನ್ನು ವಕ್ಕಲೆಬ್ಬಿಸುವ ಕಾರ್ಯಾಚರಣೆಯಲ್ಲಿ ಹಿಂದೆ ಬೀಳಲಿಲ್ಲ. ಸ್ವಾತಂತ್ರ್ಯ ಭಾರತದಲ್ಲಿ ಆದಿವಾಸಿಗಳಿಗೆ ತೀವ್ರತರವಾದ ಸಮಸ್ಯೆಗಳು ನಮ್ಮವರಿಂದಲೇ ಉಂಟಾದದ್ದು, ಇದು ಕರ್ನಾಟಕದ ಸಂದರ್ಭದಲ್ಲು ನಿಜ.

ಹಾವನೂರು ಆಯೋಗವು ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗೆ ಯತ್ನಿಸಿದ್ದು ನಿಜವಿದ್ದರೂ ಪ್ರಯೋಗ ಮತ್ತು ನಿರ್ವಹಣೆಗಳಲ್ಲಿ ಅದು ಸಾಧ್ಯವಾಗಲಿಲ್ಲ ಆದರೆ ಹಿಂದುಳಿದ ವರ್ಗಗಳ ಚಳುವಳಿಗೆ ಈ ಆಯೋಗದಿಂದ ಒಳಿತೇ ಆಯಿತು. ಜಾತಿಯ ಆರ್ಥಿಕ ನೆಲೆಗಳನ್ನು ವಿಶೇಷವಾಗಿ ಅರ್ಥೈಸಿದ ಹಾವನೂರು ಆಯೋಗದಿಂದ ಮೀಸಲಾತಿಗೆ ಹೊಸ ವ್ಯಾಖ್ಯೆಯೂ ಸಾಧ್ಯವಾಯಿತು. ಉದ್ಯೋಗದಲ್ಲಿ ಶಿಕ್ಷಣದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಆರ್ಥಿಕ ವಲಯಗಳಲ್ಲಿ ಹಿಂದುಳಿದ ವರ್ಗಗಳ ಹಕ್ಕು ಬಾಧ್ಯತೆಗಳನು ಮೀಸಲಿರಿಸಲು ಹಾವನೂರು ವರದಿ ಒತ್ತಾಯಿಸಿತು. ಪರಿಣಾಮವಾಗಿ ರಾಜ್ಯದ ನಾಡುನುಡಿಯ ಭಾಗವಾಗಿಯೇ ಈ ವರ್ಗಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಆಯಾಮವೇ ಸೃಷ್ಟಿಯಾಯಿತು. ರಾಜ್ಯದ ಉದ್ದಕ್ಕೂ ಹಿಂದುಳಿದ ವರ್ಗಗಳ ಹಾಸ್ಟೆಲುಗಳು, ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದವು. ಬಲಿಷ್ಠ ಜಾತಿಗಳು ಮಾತ್ರವೇ ನಡೆಸುತ್ತಿದ್ದ ಖಾಸಗೀ ಶಿಕ್ಷಣ ಸಂಸ್ಥೆಗಳ ಯಾಜಮಾಣಿಕೆಗೆ ಇದರಿಂದ ಕೊಂಚಮಟ್ಟಿನ ಪೆಟ್ಟು ಬಿದ್ದದ್ದು ನಿಜ. ಹಿಂದುಳಿದ ವರ್ಗಗಳ ಜೊತೆಯಲ್ಲೇ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಬಡವರಿಗೂ ಇಂತಹ ನೆರವು ಮೀಸಲಾತಿ ರೂಪದಲ್ಲಿ ದೊರೆಯುವಂತಾದುದು ಪಲ್ಲಟ.

ಆದರೆ ಹಾವನೂರು ವರದಿಯನ್ನು ಪೂರ್ಣವಾಗಿ ದೀರ್ಘವಾಗಿ ಅನುಷ್ಠಾನಗೊಳಿಸಲು ಅನೇಕ ತೊಡಕುಗಳು ಎದುರಾದವು. ಪರಿಣಾಮವಾಗಿ ವೆಂಕಟಸ್ವಾಮಿ ಆಯೋಗ ಎರಡನೆ ಭಾರಿಗೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹೊಸ ಸಂಗತಿಗಳನ್ನು ಸೇರಿಸಬೇಕಾಯಿತು. ಪ್ರಬಲ ಗೌಡ ಜಾತಿಯು ಚಿನ್ನಪರೆಡ್ಡಿ ಆಯೋಗವನ್ನು ತಪ್ಪಾಗಿ ಭಾವಿಸಿತು. ಈ ಎರಡೂ ಆಯೋಗಗಳು ಮೂಲಭೂತ ಬದಲಾವಣೆಗಳನ್ನೇನು ಮಾಡಲು ಸಾಧ್ಯವಿರಲಿಲ್ಲ. ಒಟ್ಟಿನಲ್ಲಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಕ್ಯಾತ ಸಮುದಾಯಗಳ ಉದ್ಧಾರದ ನೆಲೆಯಲ್ಲಿ ರೂಪುಗೊಂಡ ಆಯೋಗಗಳ ಪರೋಕ್ಷವಾಗಿ ತೀವ್ರತರ ಪರಿಣಾಮಗಳನ್ನು ಉಂಟು ಮಾಡಿವೆ.

ಹಿಂದುಳಿದ ವರ್ಗಗಳು ವಿಶೇಷವಾಗಿ ಯಾರ ವಿರುದ್ಧ ಹೋರಾಟಕ್ಕೆ ಇಳಿದಿವೆ ಎಂಬುದನ್ನು ಗಮನಿಸಬೇಕು. ಮುಖ್ಯವಾಗಿ ಅವು ಸರ್ಕಾರದಲ್ಲಿ ತಮ್ಮ ಪಾಲನ್ನು ಕೇಳುವ ಹಕ್ಕೊತ್ತಾಯವನ್ನು ಮಾಡಿವೆಯೇ ವಿನಃ ಸಾಮಾಜಿಕ ರಚನೆಯ ಭೇದಗಳ ವಿರುದ್ಧ ನಿರ್ಣಾಯಕ ಪಾತ್ರವನ್ನು ವಹಿಸಿಯೇ ಇಲ್ಲ. ಇದು ಜಾತಿ ಸಮಾಜದ ವಿಪರ್ಯಾಸ. ರೈತ ಸಂಘವಾದರೂ ಹೀಗೆಯೇ ಎಂದು ಹೇಳಲಾಗದಿದ್ದರೂ ಹಿಡಿಯಾಗಿ ರೈತ ಸಮಾಜಗಳು ಕೂಡ ಸರ್ಕಾರದ ವಿರುದ್ಧ ದನಿ ಎತ್ತಿದವೇ ಹೊರತು ಸಮಾಜದಲ್ಲಿ ಬೇರೆ ಬೇರೆ ಜಾತಿಗಳ ಅನ್ಯಾಯದ ವಿರುದ್ಧ ಕೂಗಲಿಲ್ಲ. ನಾಡುನುಡಿಯ ಪುನರ್ ನಿರ್ಮಾಣದಲ್ಲಿ ಹಕ್ಕುಗಳನ್ನು ಕೇಳುವುದಷ್ಟೇ ಎಚ್ಚೆತ್ತ ಪ್ರಜ್ಞೆ ಅಲ್ಲ. ತನ್ನಿಂದ ಈ ಸಮಾಜಕ್ಕೆ ನೀಡಬಹುದಾದ ಕರ್ತವ್ಯಗಳು ಏನು? ಸಾಧಿಸಬಹುದಾದ ನ್ಯಾಯವೇನು? ಹಂಚಿಕೊಳ್ಳಬಹುದಾದ ಪಾಲು ಯಾವುದು? ಒಂದಾಗಿ ಸಮಾನತೆಗಾಗಿ ತೊಡಗಲು ಬೇಕಾದ ಮೌಲ್ಯಗಳೇನು? ಎಂಬುದರ ಕಡೆಗೆ ಪ್ರಬಲ ಜಾತಿಗಳೂ ಹಾಗೆಯೇ ಹಿಂದುಳಿದ ಜಾತಿಗಳು ಕೇಳೀಕೊಳ್ಳಲಿಲ್ಲ. ಹೀಗಾಗಿ ಅವರವರ ಅಸ್ತಿತ್ವವೇ ಅವರಿಗೆ ದೊಡ್ಡದಾಗಿ ಸಾಮಾಜಿಕ ಸುಧಾರಣೆಯು ವೈಯಕ್ತಿಕ ಮಟ್ಟಿಕ್ಕೆ ಇಳಿದು ತಮ್ಮ ತಮ್ಮ ಹಕ್ಕುಗಳನ್ನು ಮಾತ್ರ ಕೇಳಿ ಕರ್ತವ್ಯಗಳನ್ನು ಮರೆಯುವಂತಾಯಿತು. ಭಾರತೀಯ ಜಾತಿ ಸಮಾಜಗಳ ವೈರುಧ್ಯವಿದು. ಆದ್ದರಿಂದಲೇ ಅಖಂಡವಾದ ದೇಶ ಇಲ್ಲವೇ ನಾಡಿನ ಕಲ್ಪನೆ ಈತನಕ ಬರಲಾಗದಿರುವುದು. ಈ ಬಗೆಯ ಸಮಸ್ಯೆಗಳು ನಾಡುನುಡಿಯ ಹಿತಕ್ಕೆ ಪೂರಕವಲ್ಲ. ಈ ಎಲ್ಲವುಗಳ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಂದ ರೂಪುಗೊಂಡ ಲೇಖಕರ, ಚಿಂತಕರ, ಹೋರಾಟಗಾರರ ಹಾಗೂ ರಾಜಕಾರಣಿಗಳ ಸಂಖ್ಯೆಯು ಗಣನೀಯವಾಗಿದೆ. ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ಅವರ ದನಿ ಮತ್ತು ಆಲೋಚನೆ ದಾಖಲಾಗಿದೆ. ಅಲಕ್ಷಿತವಾಗಿದ್ದ ಸಮುದಾಯಗಳ ಜೀವನ ದರ್ಶನಗಳು ಕೂಡ ನಾಡುನುಡಿಯಲ್ಲಿ ಬಎರೆಯುವಂತಾಗಿದೆ. ಕರ್ನಾಟಕದ ಭವಿಷ್ಯದಲ್ಲಿ ಈ ವರ್ಗಗಳ ಪಾತ್ರವು ನಿರ್ಣಾಯಕವಾದುದಾಗಿದ್ದು, ಸಾಮಾಜಿಕ ನ್ಯಾಯವು ವಿಸ್ತರಿಸಲು ಮುಂದೆ ಅವಕಾಶವಿದೆ.