ಭಾಷೆಯ ಅನನ್ಯತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ರೂಪಿತವಾದ ಕನ್ನಡ ಚಳುವಳಿಯು ದೀರ್ಘವಾದ ಹಿನ್ನೆಲೆಯನ್ನು ಹೊಂದಿದೆ. ಗಡಿ ಸಮಸ್ಯೆ ಭಾಷೆಯ ಜೊತೆಗಿನ ತಕರಾರಿನದು. ಏಕೀಕರಣಗೊಂಡ ನಂತರವೂ ಕರ್ನಾಟಕದಲ್ಲಿ ಅನ್ಯ ಭಾಷೆಗಳ ದಬ್ಬಾಳಿಕೆ ತಗ್ಗಿಲ್ಲ. ಸಂಸ್ಕೃತ, ಇಂಗ್ಲೀಷ್, ತೆಲುಗು, ತಮಿಳು, ಉರ್ದು, ಹಿಂದಿ ಭಾಷೆಗಳಲ್ಲದೆ ಉಳಿದ ಇನ್ನು ಅನೇಕ ಭಾಷೆಗಳು ತಮ್ಮ ಪ್ರಭಾವವನ್ನು ಬೆಳೆಸಿಕೊಳ್ಳಲು ತೊಡಗಿವೆ. ವಿಶೇಷವಾಗಿ ಶಿಕ್ಷಣ ಮಾಧ್ಯಮದಲ್ಲಿ ಭಾಷೆಯ ಸಮಸ್ಯೆ ಎದುರಾಗಿದೆ. ಕನ್ನಡದ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಭಾಷೆಯು ಒಂದು ಸಮಸ್ಯೆಯಾಗಿ ಶಿಕ್ಷಣದಲ್ಲಿ ಬಿಗಡಾಯಿಸುತ್ತಿದೆ. ನಗರ ಪ್ರದೇಶದ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವ ವಿಶೇಷ ಅವಕಾಶಗಳನ್ನು ಖಾಸಗಿ ಶಾಲೆಗಳಲ್ಲಿ ಪಡೆದುಕೊಳ್ಳುವಂತಾಗಿದೆ. ಹಿಂದಿ ಮತ್ತು ಸಂಸ್ಕೃತದ ಜೊತೆಗೆ ಇಂಗ್ಲೀಷ್ ಭಾಷೆಯೂ ಕೂಡ ಕನ್ನಡ ಕಲಿಕಾ ಭಾಷೆಗೆ ಅಡ್ಡಗಲಾಗಿದೆ.

ಕನ್ನಡ ನಾಡಿನಲ್ಲಿ ಕನ್ನಡವೇ ಉಸಿರುಗಟ್ಟಿ ನಿಟ್ಟುಸಿರುಬಿಡುವ ಸ್ಥಿತಿಯನ್ನು ಮೀರಲು ಕನ್ನಡಿಗರಿಗೆ ಈಗಲೂ ತಕ್ಕ ಪ್ರತಿರೋಧಶಕ್ತಿ ಸಾಧ್ಯವಾಗುತ್ತಿಲ್ಲ. ಏಕೀಕರಣಾನಂತರ ಕರ್ನಾಟಕದಲ್ಲಿ ಕನ್ನಡ ಚಳುವಳಿಗಳು ಅನೇಕ ರೀತಿಯಲ್ಲಿ ಕ್ರಿಯಾಶೀಲವಾಗಿದ್ದರೂ ಪ್ರಭುತ್ವ ತಕ್ಕ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕನ್ನಡ ಚಳುವಳಿಯ ಪ್ರಮುಖ ಹೋರಾಟಗಳ ತಾತ್ವಿಕತೆಯನ್ನು ಪ್ರತಿರೋಧ ನೆಲೆಗಳನ್ನು ಕೆಳಗಿನಂತೆ ಗುರುತಿಸಿಕೊಳ್ಳಬಹುದು.

೧. ಕನ್ನಡ ನಾಡು ನುಡಿಯ ಅಭಿಮಾನವನ್ನು ಕೆಚ್ಚೆದೆಯನ್ನು ಸಾರಲು ಹಾಗೂ ಕನ್ನಡಕ್ಕಾಗಿ ಸಂಘಟಿತವಾಗಿ ಅದರ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಕನ್ನಡಿಗರೆಲ್ಲ ಒಂದಾಗಲೇ ಬೇಕು. ಏಕೀಕರಣದ ಹಿಂದಿನ ಹೋರಾಟದ ಕಾವನ್ನು ವಿಸ್ತರಿಸಿಕೊಳ್ಳಬೇಕು. ವರ್ತಮಾನದ ಕನ್ನಡಿಗರ ಬಿಕ್ಕಟ್ಟುಗಳ ಜೊತೆಯಲ್ಲೆ ಭವಿಷ್ಯದ ಕನ್ನಡ ಸ್ಥಿತಿಯನ್ನು ರೂಪಿಸಿಕೊಳ್ಳುವ ಮುಂಗಾಣ್ಕೆಯ ಇಚ್ಛಾಶಕ್ತಿಯನ್ನು ರೂಪಿಸಿಕೊಳ್ಳಬೇಕು.

೨. ಗಡಿನಾಡಿನ ಕನ್ನಡಿಗರಿಗೆ ರಕ್ಷಣೆ ದೊರೆಯಬೇಕು. ಕನ್ನಡದವರಿಗೇ ಉದ್ಯೋಗದಲ್ಲಿ ಮೊದಲ ಆಧ್ಯತೆ ನೀಡಬೇಕು. ಅನ್ಯ ಭಾಷಿಕರ ಹಾವಳಿಯನ್ನು ನಿಯಂತ್ರಿಸಬೇಕು. ಕನ್ನಡ ನಾಡಿನ ಸಂಪತ್ತನ್ನು ಹೊರಗಿನವರು ಲೂಟಿ ಮಾಡುವುದನ್ನು ತಡೆಯಬೇಕು. ನಮ್ಮ ನೆಲ ಜಲ ಜನರ ರಕ್ಷಣೆಗಾಗಿಯೇ ಪ್ರಭುತ್ವವು ಕೈ ಜೋಡಿಸಿ ಕರ್ನಾಟಕದ ರಕ್ಷಣೆಗೆ ನಿಲ್ಲಬೇಕು.

೩. ಆಡಳಿತ ಭಾಷೆ ಕನ್ನಡವೇ ಆಗಬೇಕು. ಮಹಿಷಿ ವರದಿ ಹಾಗೂ ಮಹಾಜನ್ ವರದಿಗಳು ಜಾರಿಯಾಗಲೇ ಬೇಕು. ಕನ್ನಡಿಗರ ಸ್ವಾಭಿಮಾನ ಬೆಳೆಸುವ ಜಾಗೃತಿ, ಆಂದೋಲನ ಒಟ್ಟಾಗಿ ಆಗಬೇಕು. ಕನ್ನಡಿಗರ ಅಭಿವೃದ್ಧಿಯೆ ನಾಡಿನ ಬೆಳವಣಿಗೆಯೂ ಹೌದು. ಹಾಗಾಗಿ ಕನ್ನಡ ನಾಡಿನ ಹಿತಕಾಯದಿದ್ದಲ್ಲಿ ಏಕೀಕರಣಕ್ಕೆ ಅರ್ಥವಿರದು.

೪. ಕನ್ನಡ ಸಿನಿಮಾ ಹಾಗೂ ಉದ್ಯಮಗಳಲ್ಲಿ ಕನ್ನಡಕ್ಕೆ ಚ್ಯುತಿ ಬರುವಂತಹ ಹೊಗಿನವರು ದಾಳಿಯನ್ನು ತಡೆಯಬೇಕು. ನಗರ ಪ್ರದೇಶಗಳಲ್ಲಿ ಬಂದು ಸೇರಿಕೊಳ್ಳುವ ಹೊರ ಭಾಷೆಯವರ ವಲಸೆಯನ್ನು ನಿಯಂತ್ರಿಸಬೇಕು.

೫. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಸಮರ ಸಾರಬೇಕು. ಕೇಂದ್ರದ ತಾರತಮ್ಯದಿಂದ ಕನ್ನಡ ನಾಡಿಗೆ ಜಲನೀತಿಯಲ್ಲು, ರೈಲ್ವೇ ಬಜೆಟ್‌ನಲ್ಲು, ಆರ್ಥಿಕ ಅವಕಾಶಗಳಲ್ಲು ತೀವ್ರವಾದ ಅನ್ಯಾಯವಾಗುತ್ತಿದೆ. ಗಡಿನಾಡಿನ ಸಮಸ್ಯೆಗಳ ಇತ್ಯರ್ಥದಲ್ಲು ಕೇಂದ್ರದಿಂದಾಗಿ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ಪ್ರತಿರೋಧ ಒಡ್ಡದೇ ಬಂದಿರುವುದರಿಂದ ಕನ್ನಡ ನಾಡು ನುಡಿಯ ಭವಿಷ್ಯಕ್ಕೆ ಪೆಟ್ಟಾಗುತ್ತಿದೆ. ಕನ್ನಡಿಗರು ಈ ನಿಟ್ಟಿನಲ್ಲಿ ಒಂದಾಗುವ ಮೂಲಕ ಕನ್ನಡದ ಹಿತ ಕಾಯಲು ಮುಂದಾಗಬೇಕು. ಅಭಿಮಾನ ಹೀನತೆಯಿಂದ ಕನ್ನಡಿಗರು ಪಾರಾಗುವುದು ಕೂಡ ಚಳುವಳಿಯ ಭಾಗವಾಗಬೇಕು.

೬. ಗೋಕಾಕ್ ವರದಿಯಂತೆ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಥಮ ಭಾಷೆಯ ಸ್ಥಾನಕ್ಕೆ ಕನ್ನಡವನ್ನೇ ಸ್ಥಿರಗೊಳಿಸಬೇಕು. ಅನ್ಯಭಾಷೆಯ ಹೇರಿಕೆಯನ್ನು ಕನ್ನಡದ ಮಕ್ಕಳ ಮೇಲೆ ಹಾಕಕೂಡದು. ಪರಭಾಷಿಗರು ಕೂಡ ಕನ್ನಡವನ್ನು ಕಲಿಯುವಂತಾಗಬೇಕಲ್ಲದೆ ಅಂತವರ ಮಕ್ಕಳಿಗೂ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಬೇಕು. ಆ ಮೂಲಕ ಕನ್ನಡ ಭಾಷೆಯ ಸ್ಥಾನಮಾನವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಕಾಯ್ದುಕೊಂಡು ಕನ್ನಡಿಗರ ಅಸ್ತಿತ್ವವನ್ನು ಕಾಪಾಡುವಂತಾಗಬೇಕು.

ಹೀಗೆ ಹತ್ತಾರು ನಿಟ್ಟಿನಲ್ಲಿ ಕನ್ನಡ ಚಳುವಳಿಗಳು ಸರ್ಕಾರಗಳ ಮೇಲೆ ಒತ್ತಡ ಹೇರುತ್ತಲೇ ಇವೆ. ಸಮಸ್ಯೆಗಳು ಮುಂದುವರಿದು ಹೊಸ ಸವಾಲುಗಳು ಸೃಷ್ಟಿಯಾಗುತ್ತಿವೆ. ಕನ್ನಡ ನೌಕರರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧದ ಕೂಗು ಈಗಲೂ ಕೇಳಿಸುತ್ತಿದೆ. ಕನ್ನಡ ಭಾಷೆಗೆ ವಿಧಾನ ಸೌಧದಲ್ಲೆ ಜಾಗವಿಲ್ಲ ಎಂಬ ಆಕ್ಷೇಪಗಳು ಬರುತ್ತಲೇ ಇವೆ. ಕನ್ನಡ ಚಳುವಳಿಯು ನಿರಂತರ ಪ್ರಕ್ರಿಯೆ ಎಂಬ ಭಾವನೆ ಹಬ್ಬುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಸಮರ ಶೈಲಿಯಲ್ಲಿ ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ದಂಗೆ ಎದ್ದಿದೆ. ವಾಟಾಳ್ ನಾಗರಾಜ್ ಅವರು ಕನ್ನಡ ಚಳುವಳಿಯ ಸಂಕೇತವಾಗಿ ಈಗಲೂ ಏಕಾಂಗಿಯಾಗಿ ಹೋರಾಡುತ್ತಲೇ ಇದ್ದಾರೆ. ಚಿದಾನಂದ ಮೂರ್ತಿ ಅವರು ಕನ್ನಡ ಶಕ್ತಿ ಕೇಂದ್ರದ ಮೂಲಕ ಬಲಪಂಥೀಯ ವಿಚಾರಗಳ ಮೂಲಕ ಕನ್ನಡ ನಾಡುನುಡಿಯ ಕೂಗನ್ನು ಮಾಡುತ್ತಿದ್ದಾರೆ. ಗಡಿನಾಡ ಕನ್ನಡ ಸಂಘಗಳು ಅದೇ ಹಳೆಯ ಸಮಸ್ಯೆಯನ್ನೆ ನಿತ್ಯವೂ ಹಾಡುತ್ತಿವೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಒತ್ತಡಗಳು ಈಗ ಹೊಸದಾಗಿ ಪ್ರತಿಧ್ವನಿಸುತ್ತಿವೆ. ಇಂಗ್ಲೀಷ್ ಮಾಧ್ಯಮ ಹಾಗೂ ಕನ್ನಡ ಮಾಧ್ಯಮದ ಹೊಸ ಚರ್ಚೆಗಳು ಬೆಳೆದು ಇಂಗ್ಲೀಷ್ ಭಾಷೆಯು ಜಾಗತೀಕರಣದ ಕಾಲದಲ್ಲಿ ಗ್ರಾಮೀಣ ಕನ್ನಡ ಮಕ್ಕಳಿಗೆ ಒಂದು ಕಲಿಕಾ ಭಾಷೆಯೂ ಆಗಬೇಕು ಎಂಬ ವಾದಗಳು ಎಲ್ಲೆಡೆ ಕೇಳಿಬರುತ್ತಿವೆ.

ದಲಿತ ಹಾಗೂ ಗ್ರಾಮೀಣ ಮತ್ತು ಮಹಿಳೆಯರಿಗೆ ಇಂಗ್ಲೀಷ್ ಭಾಷೆಯು ಒಂದು ಉಪಕರಣದ ರೀತಿಯಲ್ಲಿ ಬೇಕಿದ್ದು ಜಗತ್ತಿನ ಅನ್ಯ ಸಂಬಂಧಗಳ ಅಪಾಯದಿಂದ ಪಾರಾಗಿ ಆ ಅಪಾಯವನ್ನೆ ಉಪಾಯ ಮಾಡಿಕೊಂಡು ಅದರಲ್ಲಿ ತನ್ನ ಕನ್ನಡ ನಾಡು ನುಡಿಯ ಅವಕಾಶವನ್ನು ಸಾಧಿಸಿಕೊಳ್ಳಬೇಕಾದ ಜಾಣ್ಮೆಯು ಕೂಡ ಇಂದು ಮುಖ್ಯವಾಗುತ್ತಿದೆ. ಕನ್ನಡ ಚಳುವಳಿಯ ಮೂಲ ಆಶಯಗಳು ಒಂದೆಡೆ ಇದ್ದರೆ ಅದೇ ವೇಳೆಯಲ್ಲಿ ಬದಲಾಗುವ ಜಾಗತಿಕ ನೆಲೆಗಳಿಂದ ಕನ್ನಡದ ಮಕ್ಕಳು ಕೂಡ ಅಂತಹ ಭವಿಷ್ಯದ ಲೋಕದಲ್ಲಿ ಅಪಾಯದಿಂದ ಪಾರಾಗಲು ಇಂಗ್ಲೀಷ್ ಭಾಷೆಯನ್ನು ಕಲಿಯಬೇಕಾದ ಅನಿವಾರ್ಯತೆಯು ಬಹುಸಂಖ್ಯಾತ ಗ್ರಾಮೀಣರಿಗೇ ಉಂಟಾಗಿದೆ. ಇದು ಪ್ರಗತಿ ಪಥದ ಎಲ್ಲ ಸಮಾಜಗಳ ಲಕ್ಷಣ. ಅಭಿವೃದ್ಧಿಗೆ ಒಂದೇ ಭಾಷೆ ಸಾಕಾಗುವುದಿಲ್ಲ. ಆರ್ಥಿಕವಾಗಿ ಸಮೀಪವಾಗುವ ಎಲ್ಲ ನಾಡುನುಡಿಗಳು ಅಭಿವೃದ್ಧಿಯ ಭಾಗವಾಗಿಯೇ ಬೇರೆ ಭಾಷೆಗಳ ಒತೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

ಒಟ್ಟಿನಲ್ಲಿ ಕನ್ನಡ ಚಳುವಳಿಯಿಂದ ಸಾಕಷ್ಟು ಎಚ್ಚರ ಉಂಟಾಗಿದೆ. ಆದರೂ ಸಮಸ್ಯೆಗಳು ಪೂರ್ಣವಾಗಿ ಬಗೆಹರಿದಿಲ್ಲ. ಕನ್ನಡ ನಾಡುನುಡಿಗಾಗಿ ಅನೇಕಬಗೆಯ ‘ಅಕಾಡೆಮಿ’ಗಳನ್ನು ರಾಜ್ಯ ಸರ್ಕಾರವು ರೂಪಿಸಿದೆ. ಸರ್ಕಾರಿ ರೀತಿ ನೀತಿಗಳಲ್ಲಿ ಅವು ಕಾರ್ಯ ನಿರ್ವಹಿಸುತ್ತಿವೆ. ಸಾಂಸ್ಕೃತಿಕ ಸಾಹಿತ್ಯಿಕ ನೆಲೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯು ದೇಶದಲ್ಲೇ ಮೊದಲಿಗೆ ಭಾಷೆಯ ವಿಚಾರದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಕನ್ನಡ ಅಭಿವೃದ್ಧೀ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರಗಳೂ ಸರ್ಕಾರಿ ಸಂಸ್ಥೆಗಳಾಗಿ ಅಸ್ತಿತ್ವದಲ್ಲಿವೆ. ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು ಕೂಡ ಅಖಂಡ ಕರ್ನಾಟಕದ ಭವಿಷ್ಯದ ನಿರ್ಮಾಣಕ್ಕಾಗಿ. ಸರ್ಕಾರ ಮತ್ತು ಸಮಾಜ ಹಾಗೂ ಹಲವು ಸಂಸ್ಥೆಗಳು ತಮ್ಮ ನೆಲೆಯಲ್ಲಿ ಕನ್ನಡ ಭಾಷೆಯನ್ನೂ ಅದರ ಸಮಾಜವನ್ನೂ ನಿರ್ವಹಿಸುತ್ತಲೇ ಇವೆ. ಇಪ್ಪತ್ತೊಂದನೆ ಶತಮಾನದಲ್ಲಿ ಕನ್ನಡ ಚಳುವಳಿಯ ಪ್ರಶ್ನೆಗಳು ಸಂಕೀರ್ಣವಾಗಿವೆ. ಅದರ ಅರ್ಥ ಅಭಿವೃದ್ಧಿಯ ಕಡೆ ನಡೆದಾಗಲೆಲ್ಲ ಒಂದು ನಾಡುನುಡಿ ಎದುರುಗೊಳ್ಳಬೇಕಾದ ಸ್ಥಿತಿಯನ್ನು ಅದು ಧ್ವನಿಸುತ್ತಿದೆ. ಏಕೀಕರಣೋತ್ತರ ಕನ್ನಡ ಚಳುವಳಿಗಳು ಹಳೆಯ ಹಾಗೂ ಹೊಸ ಕಾಲದ ಚಿಂತನೆಗಳನ್ನೆಲ್ಲ ಒಟ್ಟು ಮಾಡಿಕೊಂಡು ಭವಿಷ್ಯವನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕಾದ ಚಾರಿತ್ರಿಕ ತುರ್ತು ಈಗ ಉಂಟಾಗಿದೆ.