ಸಹಕಾರ ತತ್ವು ಮಾನವನ ಸಾಮಾಜಿಕ ಹೊಂದಾಣಿಕೆಯ ಪ್ರತೀಕ. ಸಹಕಾರವಿಲ್ಲದೆ ಸಮುದಾಯಗಳು ದೊಡ್ಡದನ್ನು ಸಾಧಿಸಲಾರವು. ಸಮಾನತೆಯ ನೀತಿಯು ಪರೋಕ್ಷವಾಗಿ ಸಹಕಾರದಲ್ಲಿರುತ್ತದೆ. ಕರ್ನಾಟಕದಲ್ಲಿ ಮೊದಲಿಗೆ ಸಹಕಾರಿ ಸಂಸ್ಥೆಗಳು ದೇಶಕ್ಕೇ ಮಾದರಿಯಾಗಿ ಆರಂಭಗೊಂಡು ಏಕೀಕರಣೋತ್ತರ ಕರ್ನಾಟಕದಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಗ್ರಾಮೀಣ ಕರ್ನಾಟಕದ ಅಭಿವೃದ್ಧಿಯಲ್ಲಿ ಸಹಕಾರ ಚಳುವಳಿಯು ಮಹತ್ತರವಾಗಬಲ್ಲದು. ಪ್ರತಿಯೊಂದು ಹಳ್ಳಿಗೂ ಸಹಕಾರ ಸಂಸ್ಥೆಗಳ ಅಗತ್ಯವಿರುತ್ತದೆ. ಸರ್ಕಾರವು ನೀಡುವ ಬಲದ ಜೊತೆಗೆ ಸಹಕಾರಿ ಸಂಸ್ಥೆಗಳ ಸಹಕಾರವು ಬಡಗ್ರಾಮೀಣರನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಬಲ್ಲದು. ಸಹಕಾರಿ ಸಂಸ್ಥೆಗಳ ಕಾರ್ಯವ್ಯಾಪ್ತಿಯು ಸಮಾಜದ ಎಲ್ಲ ನೆಲೆಗಳಿಗೂ ಸಂಬಂಧಿಸಿದ್ದುದಾಗಿದೆ.

ಆರ್ಥಿಕ ಯೋಜನೆಗಳಲ್ಲೆ ಸಹಕಾರಿ ಸಂಸ್ಥೆಗಳಿಗೆ ವಿಶೇಷ ಹೊಣೆಗಾರಿಕೆ ಇರುವುದು. ಏಕೀಕರಣೋತ್ತರ ಕರ್ನಾಟಕದ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಸಂಸ್ಥೆಗಳು ನಿರ್ವಹಿಸುತ್ತ ಬಂದಿರುವ ಅಂಶಗಳನ್ನೆಲ್ಲ ವಿವರಿಸಲು ಇಲ್ಲಿ ಸಾಧ್ಯವಿಲ್ಲ. ಸಾಹಿತ್ಯ ಸಂಸ್ಕೃತಿ, ಭಾಷೆ, ಪ್ರಭುತ್ವ ಸಮಾಜಗಳ ಸರಪಳಿಯಲ್ಲಿ ಸಹಕಾರತತ್ವದ ಕೆಲವೊಂದು ಅಂಶಗಳನ್ನಿಲ್ಲಿ ಪ್ರಸ್ತಾಪಿಸಬಹುದು.

೧. ಸಾಮೂಹಿಕವಾಗಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗವಹಿಸುವ, ಹೊಣೆ ಹೊರುವ ಹಾಗು ತನಗಾಗಿ ಎಲ್ಲರೂ ಎಲ್ಲರಿಗಾಗಿ ತಾನು ಎಂಬ ಭಾವನೆಯು ಗ್ರಾಮೀಣ ಪ್ರದೇಶಗಳಲ್ಲು ನಗರ ಪ್ರದೇಶಗಳಲ್ಲು ಮನವರಿಕೆ ಆಯಿತು.

೨. ಗ್ರಾಮೀಣ ಆರ್ಥಿಕ ಚಟುವಟಿಕೆಗಳು ಸ್ಥಳೀಯ ಸಂಬಂಧಗಳ ಮೂಲಕ ವಿಸ್ತರಿಸಿದವು.

೩. ರೈತರ ಹಿತಾಸಕ್ತಿಗಳು ಸಹಕಾರ ಸಂಘಗಳ ಮೂಲಕ ಬಲಗೊಂಡವು.

೪. ದಲ್ಲಾಳಿಗಳ ಸಾಲದ ಬಾಧೆಯು ತಗ್ಗಿತು. ಖಾಸಗೀ ಹಣಕಾಸಿನ ಹಿಡಿತ ಸಡಿಲವಾಯಿತು. ಹಣವಂತರ ಬಡ್ಡಿ ಹೊಡೆತ ಕಡಿಮೆ ಆಯಿತು.

೫. ಗ್ರಾಮೀಣ ವೃತ್ತಿ ಕಸುಬುಗಳಿಗೆ ಬೆಂಬಲ ಬಂತು. ತಮ್ಮ ವೃತ್ತಿಗಳನ್ನು ಮುಂದುವರಿಸಿ ಜೀವನ ಮಟ್ಟ ಸುಧಾರಿಸಲು ಅನುಕೂಲವಾಯಿತು. ಗುಡಿ ಕೈಗಾರಿಕೆಗೂ ಇದರಿಂದ ಸಹಾಯವಾಯಿತು.

೬. ಸಾಮಾಜಿಕ ಸಹಾಯದ ಚಟುವಟಿಕೆಗಳು ಸಹಕಾರ ಸಂಸ್ಥೆಗಳ ಮೂಲಕವೂ ಉಂಟಾಗಿ ಪ್ರಗತಿಯ ಸಾಧ್ಯತೆಯನ್ನು ಒತ್ತಾಯಿಸಿದವು. ದುಡಿಯುವ ಶಕ್ತಿಗೆ ಇಂಬುಕೊಡುವ ಹೊಣೆಗಾರಿಯು ಕಂಡುಬಂತು.

೭. ಸ್ವಾವಲಂಬನೆ, ಪರಸ್ಪರ ಹೊಂದಾಣಿಕೆ, ಕಷ್ಠ ಸುಖ ಹಂಚಿಕೊಳ್ಳುವ ಭಾವನೆ, ಸ್ಥಳೀಯ ನಾಯಕತ್ವ, ಸೇವಭಾವನೆಗಳು ಬೆಳೆದವು.

೮. ಸ್ಥಳೀಯ ಮೂಲ ಸೌಕರ್ಯಗಳ ಕಡೆ ಗಮನ ಹರಿಸುವಂತಾಯಿತು.

೯. ರೈತ ಸಮುದಾಯಗಳಲ್ಲಿ ಆರ್ಥಿಕ ಎಚ್ಚರ ಮೂಡಿತು.

೧೦. ನೌಕರ ವರ್ಗಗಳು ತಮ್ಮ ಹಕ್ಕುಗಳಿಗೆ ಒಂದಾಗುವ ಜಾಗೃತಿಯೂ ಕಂಡುಬಂದು ಪ್ರಗತಿ ಸಾಧಿಸಲು ಸ್ವಯಂ ಸಹಕಾರಿ ಸಂಘಗಳನ್ನು ಕಟ್ಟಿಕೊಂಡು ಹೋರಾಡುವ ಹಾಗೆಯೇ ಸಹಕಾರ ಮಾಡಿಕೊಳ್ಳುವ ಗುಣ ಬೆಳೆಯಿತು.

೧೧. ಕ್ಷೀರೋಧ್ಯಮ ಹಾಗು ವಾಣಿಜ್ಯ ಬೆಳೆಗಳ ಕ್ಷೇತ್ರಗಳಲ್ಲಿ ಸಹಕಾರಿ ತತ್ವು ಬೆಳೆದು ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುವಂತಾಯಿತು.

೧೨. ಸಹಕಾರ ಸಂಸ್ಥೆಗಳು ಸರ್ಕಾರದ ಪರ್ಯಾಯ ವ್ಯವಸ್ಥೆಯಂತೆಯೂ ಬೆಳೆದು ಉದ್ಯಮದ ಸ್ವರೂಪ ಪಡೆಯುವಂತಾಯಿತು.

೧೩. ಬಂಡವಾಳಶಾಹಿ ಸ್ಥಳೀಯ ವ್ಯವಸ್ಥೆಯು ಸಾಮಾಜಿಕ, ಆರ್ಥಿಕ, ರಾಜಕೀಯ ರೂಪಗಳಲ್ಲಿ ಬೆಳೆಯಲು ಅವಕಾಶವಾಯಿತು.

ಹೀಗೆ ಏಕೀಕರಣೋತ್ತರ ಕರ್ನಾಟಕ ಆರ್ಥಿಕ ಚಟುವಟಿಕೆಗಳಲ್ಲಿ ಪರಿಣಾಮ ಬೀರುವಂತಾದ ಸಹಕಾರ ಸಂಸ್ಥೆಗಳು ನಾಡುನುಡಿಯ ರೂಪಾಂತರದಲ್ಲಿ ಪ್ರಮುಖ ಪಾತ್ರವಹಿಸಿವೆ. ಆದರೆ ಖಾಸಗೀ ವಲಯದ ಈ ಸಹಕಾರಿ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಸರ್ಕಾರದ ನಿಯಮಗಳಲ್ಲಿ ಕಾರ್ಯ ನಿರ್ವಹಿಸಲಾರದವು. ಊಳಿಗಮಾನ್ಯ ಜಾತಿಗಳು ಮಠಗಳು ವರ್ಗಗಳು ಸಹಕಾರ ತತ್ವವನ್ನು ಹೇಳುತ್ತಲೇ ತಮ್ಮ ಜಾತಿಗಳನ್ನು ಇಂತಹ ಸಂಸ್ಥೆಗಳ ಮೂಲಕ ಸ್ಥಾಪಿಸಿಕೊಂಡಿವೆ. ಸ್ವಜಾತಿ ನೀತಿಯು ಈ ಸಂಸ್ಥೆಗಳಲ್ಲಿ ತುಂಬಿದೆ. ಬಂಡವಾಳಶಾಹಿ ವ್ಯವಸ್ಥೆಯು ಇಂತಲ್ಲಿ ನೆಲೆಗೊಂಡು ಊಳಿಗಮಾನ್ಯ ತತ್ವವೇ ಸಹಕಾರ ತತ್ವದಲ್ಲಿ ಬೆರೆತು ಹೋಗಿದೆ. ಶ್ರೀಮಂತರ ಹಾಗೂ ಮೇಲು ಜಾತಿಗಳ ಅನುಕೂಲಕ್ಕೆ ತಕ್ಕಂತೆ ಸಹಕಾರ ತತ್ವು ಬೆಳೆದಿದೆಯೆ ವಿನಃ ಅದು ನಾಡುನುಡಿಯ ಸುಖೀ ಸಮಾಜದ ಸರ್ವೋದಯ ತತ್ವವನ್ನು ನಂಬಿ ವಿಕಾಸವಾಗಿಲ್ಲ.

ಸ್ವಾರ್ಥ ಮೂಲಗುಣ ಇವುಗಳಲ್ಲಿ ಬೇರು ಬಿಟ್ಟಿರುವುದರಿಂದಲೇ ಸಮಾಜದ ನೊಂದವರಿಗೆ ಈ ಸಂಸ್ಥೆಗಳಲ್ಲಿ ನ್ಯಾಯ ಸಿಗುತ್ತಿಲ್ಲ. ಜಾತಿವಾದವು ಸಹಕಾರ ನೀತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡಿದೆ. ಖಾಸಗೀಕರಣದ ಈ ಕಾಲದಲ್ಲಿ ಇಂತಹ ಸಂಸ್ಥೆಗಳು ಪ್ರಜಾಪ್ರಭುತ್ವದ ಮೂಲಭೂತ ಸಂಹಿತೆಗಳನ್ನು ಅನುಸರಿಸವು. ಮೀಸಲಾತಿಯಂತೂ ಇಂತಲ್ಲಿ ಇದ್ದೂ ಇಲ್ಲವಾಗುತ್ತದೆ. ಸರ್ಕಾರದ ಖಾನೂನಿನ ಭಯ ಇಲ್ಲಿ ಇರುವುದೂ ಇಲ್ಲ. ಸಾರ್ವಜನಿಕ ಹಣದ ವಿಪರೀತ ದುರುಪಯೋಗವೂ ಇಂತಹ ಸಂಸ್ಥೆಗಳಲ್ಲಿ ನಡೆಯುತ್ತಲೇ ಇದ್ದು ಸಹಕಾರಿ ಬ್ಯಾಂಕುಗಳ ಹಣದ ಲುಕ್ಸಾನು ಲೆಕ್ಕವಿಲ್ಲದಷ್ಟಿದೆ. ಹಾಗೆಯೇ ಸಹಕಾರ ಸಂಸ್ಥೆಗಳು ತಮ್ಮ ನೀತಿಯನ್ನು ಕೈಬಿಟ್ಟು ವಂಚನೆಯ ನೆಲೆಯೂ ಆಗುತ್ತಿವೆ. ಇವನ್ನೆಲ್ಲ ಗಮನಿಸಿದರೆ ಎಪ್ಪತ್ತರ ದಶಕದಲ್ಲಾದ ಎಡಪಂಥೀಯ ಚಳುವಳಿಗೆ ಪರ್ಯಾಯವೊ ಎಂಬಂತೆ ಸಹಕಾರಿ ಸಂಸ್ಥೆಗಳು ಕರ್ನಾಟಕವನ್ನು ತಮ್ಮ ಖಾಸಗೀ ನೆಲೆಗೆ ಬಳಸಿಕೊಂಡು ಮೇಲೆ ಮಾತ್ರ ತತ್ವವನ್ನು ಮಾತನಾಡಿವೆ. ಬಲಿಷ್ಠ ಜಾತಿಗಳ ಹಿಡಿತದಲ್ಲಿರುವ ಹಾಗೆಯೇ ದೂರ್ತ ನಾಯಕರ ಕೈವಶವಾಗಿರುವ ಇಂತಹ ಸಂಸ್ಥೆಗಳು ಈಗ ರಾಜಕೀಯ ನೆಲೆಯೂ ಆಗಿಯುವ ಯುವ ರಾಜಕಾರಿಣಿಗಳ ಪ್ರಾಥಮಿಕ ತರಬೇತಿ ಕೇಂದ್ರಗಳಂತೆಯೂ ಆಗುತ್ತಿವೆ. ಒಂದು ವೇಳೆ ಈ ಸಂಸ್ಥೆಗಳು ನಿಜವಾದ ಸಹಕಾರ ತತ್ವವನ್ನು ಪಾಲಿಸಿದ್ದಿದ್ದರೆ ಕರ್ನಾಟಕದಲ್ಲಿ ಇಷ್ಟೊಂದು ರೈತರ ಕಾರ್ಮಿಕರ ಬಡಜನರ ಆತ್ಮಹತ್ಯೆಗಳೇ ಆಗುತ್ತಿವೆ. ಒಂದು ವೇಳೆ ಈ ಸಂಸ್ಥೆಗಳು ನಿಜವಾದ ಸಹಕಾರ ತತ್ವವನ್ನು ಪಾಲಿಸಿದ್ದಿದ್ದರೆ ಕರ್ನಾಕದಲ್ಲಿ ಇಷ್ಟೊಂದು ರೈತರ ಕಾರ್ಮಿಕರ ಬಡಜನರ ಆತ್ಮಹತ್ಯೆಗಳೇ ಆಗುತ್ತಿರಲಿಲ್ಲ. ಸರ್ಕಾರ ಹಾಗು ಖಾಸಗೀ ಸಂಸ್ಥೆಗಳೆರಡೂ ಜನಸಾಮಾನ್ಯರನ್ನು ಕೊಳ್ಳೆ ಹೊಡೆಯುತ್ತಿರುವಂತಹ ಸ್ಥಿತಿಯಲ್ಲಿ ಸಹಕಾರಿ ಆಂದೋಲನವು ಕೇವಲ ಮಾತಿನಲ್ಲಿದ್ದು ವಾಸ್ತವದಲ್ಲಿ ಅದು ಎಲ್ಲ ಬಗೆಯ ಸಾಮಾಜಿಕ ಶಾಪಗಳ ಭಾಗವಾಗಿಯೇ ಬೆಳೆಯುತ್ತಿರುವುದು ವಿಪರ್ಯಾಸಕರ.