ಸುವರ್ಣ ಕರ್ನಾಟಕದ ಈ ಸಂದರ್ಭದಲ್ಲಿ ಎಪ್ಪತ್ತರ ದಶಕದ ಸಾಮಾಜಿಕ ಪಲ್ಲಟಗಳನ್ನು ವಿಶೇಷವಾಗಿ ಗಮನಿಸಬೇಕು. ನಾಡು ನುಡಿಯ ಸಾಹಿತ್ಯ, ಸಂಕೃತಿ, ರಾಜಕಾರಣ ಮತ್ತು ಅವುಗಳ ಭವಿಷ್ಯದ ನೆಲೆಯಲ್ಲಿ ಹತ್ತಾರು ಪಲ್ಲಟಗಳು ಈ ಅವಧಿಯಲ್ಲಿ ಘಟಿಸಿದವು. ಪ್ರಭುತ್ವದ ವಿರುದ್ಧ ಪ್ರತಿಭಟನೆಗಳು ಮೊಳಗಿದಂತೆಯೇ ಒಪ್ಪಂದಗಳೂ ಉಂಟಾದವು. ಸಮಾಜದ ಎಲ್ಲ ನೆಲೆಗಳಿಂದಲೂ ಧ್ವನಿಗಳು ಪ್ರತಿಧ್ವನಿಸಿದವು. ಕರ್ನಾಟಕದ ಅಖಂಡತೆಯನ್ನು ರೂಪಿಸಿ ಸರ್ವೋದಯವನ್ನು ಸಾಧಿಸುವ ಯತ್ನಗಳು ತೀವ್ರವಾಗಿ ಉಂಟಾದವು. ಎಪ್ಪತ್ತರ ದಶಕದಲ್ಲಿ ಘಟಿಸಿದಷ್ಟು ಚಾರಿತ್ರಿಕ ಸಂಗತಿಗಳು ಬೇರೆ ಯಾವ ದಶಕದಲ್ಲೂ ಜರುಗಲಿಲ್ಲ. ಅರವತ್ತರ ದಶಕದ ಹಸಿರು ಕ್ರಾಂತಿಯು ಅಂತಹ ದೊಡ್ಡ ಸಾಧನೆಯಾಗಿ ಕರ್ನಾಟಕವನ್ನೇನು ಆವರಿಸಿರಲಿಲ್ಲ. ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗುವ ಮೂಲಕ ನೆಹರು ಪ್ರನೀತ ಬೃಹತ್ ನಿರ್ಮಾಣಗಳ ಅಭಿವೃದ್ಧಿ ರಾಜಕಾರಣಕ್ಕೆ ಚಾಲನೆ ಸಿಕ್ಕಿತ್ತು. ಎಪ್ಪತ್ತರ ದಶಕದಲ್ಲಿ ಶ್ರೀಮತಿ ಇಂದಿರಗಾಂಧಿ ಅವರಿಂದ ಬೇರೊಂದು ಆಯಾಮ ಕರ್ನಾಟಕದ ರಾಜಕೀಯ ಆರ್ಥಿಕ ಸಾಮಾಜಿಕ ಹಾಗೂ ಸಾಹಿತ್ಯಿಕ ನೆಲೆಗಳಿಗೆ ಬಂದಿತ್ತು. ಇದಕ್ಕೆ ತಕ್ಕುದಾಗಿ ದೇವರಾಜ ಅರಸು ಅವರ ರಾಜಕೀಯ ಪ್ರಯೋಗಗಳು ಬಲತಂದುಕೊಟ್ಟಿದ್ದವು. ಪ್ರಭುತ್ವ ಮತ್ತು ಸಮಾಜ ಒಟ್ಟಿಗೆ ತಮ್ಮ ಅಸ್ತಿತ್ವ ಸಾಧಿಸಿಕೊಳ್ಳಲು ಮುಂದಾ ಪರಿಣಾಮದಿಂದಲೇ ಹಿಂದೊಂದೂ ಕಾಣಲಾಗದಿದ್ದ ಚಲನಶೀಲತೆ ಸಾಮಾಜಿಕವಾಗಿ ಸಾಧ್ಯವಾಯಿತು.

ಎಪ್ಪತ್ತರ ದಶಕವು ಪ್ರಜಾಪ್ರಭುತ್ವದ ಎಚ್ಚರದ ವಿಶಿಷ್ಟ ಕಾಲಮಾನ. ಏಕೀಕರಣದ ಆಶಯಗಳನ್ನು ತಕ್ಕುದಾಗಿ ನಿರ್ವಹಿಸಿದ ಅವಧಿ. ಏಕಕಾಲಕ್ಕೆ ಗಾಂಧಿ, ಮಾರ್ಕ್ಸ್, ಅಂಬೇಡ್ಕರ್ ರಂತಹ ಧೀಮಂತರ ವಿಚಾರಗಳು ಕರ್ನಾಟಕದ ಜನ ಸಾಮಾನ್ಯರ ಮನಸ್ಸಿನಲ್ಲಿ ಪ್ರವೇಶಗೊಂಡವು. ವಿಮುಕ್ತಿಯ ಅಪೇಕ್ಷೆಗಳು ದಟ್ಟವಾಗಿ ವ್ಯಾಪಿಸಿದವು. ಬಡವ, ಶ್ರೀಮಂತ, ಕಾರ್ಮಿಕ ಹಾಗೂ ಮಧ್ಯಮ ವರ್ಗಗಳ ಹಿಂದುಳಿದ ವರ್ಗಗಳು ಬುಡಕಟ್ಟು ಜನತೆ ಎಲ್ಲರೂ ತಮ್ಮ ಇರುವಿಕೆಯನ್ನು ತೋರಿಕೊಂಡವು. ಇದರಿಂದಲೇ ಎಪ್ಪತ್ತರ ದಶಕವು ಕರ್ನಾಟಕದ ಮಟ್ಟಿಗೆ ಪುಟ್ಟದಾದ ಪುನರುಜ್ಜೀವನದ ಅಲೆಯನ್ನು ಸೃಷ್ಟಿಸಲು ಸಾಧ್ಯವಾದದ್ದು. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅರಿವು ಮೂಡತೊಡಗಿತು. ಸುಧಾರಣೆಗಳು ಜಾರಿಗೆ ಬರತೊಡಗಿದವು. ಸಮಾಜದ ಕೊನೆಯವರಿಗೂ ಹಕ್ಕುಗಳಿವೆ ಎಂಬುದನ್ನು ಸಾರಲಾಯಿತು. ಸರ್ವೋದಯದ ಕನಸು ಎಲ್ಲೆಡೆ ಪ್ರತಿಫಲಿಸಿತು. ನೊಂದವರ ಸಂಘಟನೆಗಳು ತಲೆ ಎತ್ತಿದವು. ಶೋಷಣೆಯ ವಿರುದ್ಧದ ಕಹಳೆಗಳು ಮೊಳಗಿದವು. ಮಧ್ಯಮ ವರ್ಗವೂ ಬಲಿಯಿತು. ಸಹಕಾರಿ ಸಂಘಸಂಸ್ಥೆಗಳ ಮೂಲಕ ಖಾಸಗೀ ಕ್ಷೇತ್ರಗಳು ಬಲಗೊಂಡವು. ಶಿಕ್ಷಣಕ್ಷೇತ್ರದಲ್ಲು ಬದಲಾವಣೆಗೆ ಬೇಕಾದ ಎಚ್ಚರವು ರೂಪಿತವಾಯಿತು. ಇದು ಮುಂದೆ ಅನೇಕ ಬಗೆಯ ದಾರಿಗಳು ತೆರೆದುಕೊಳ್ಳಲು ಅವಕಾಶ ಮಾಡಿತು. ಎಪ್ಪತ್ತರ ದಶಕವನ್ನು ಕರ್ನಾಟಕದ ಮಟ್ಟಿಗೆ ಪುನರುಜ್ಜೀವನ ಕಾಲ ಎಂದು ಕರೆಯಲು ಬೇಕಾದ ಲ್ಲ ಘಟನೆಗಳು ಏಕಕಾಲಕ್ಕೆ ಘಟಿಸಿವೆ.

ಯುರೋ ಮಾದರಿಯ ಪುನರುಜ್ಜೀವನ ಬೇರೆ. ನಮ್ಮ ದೇಶದ ಸುವರ್ಣ ಯುಗಗಳ ಪಾತ್ರ ಬೇರೆ. ಸ್ವಾತಂತ್ರ್ಯಾನಂತರದ ಕರ್ನಾಟಕದಲ್ಲಿ ಉಂಟಾದ ಸ್ಥಳೀಯ ಜಟ್ಟದ ಅನೇಕ ಬದಲಾವಣೆ ಆಂದೋಲನ ಎಚ್ಚರಗಳು ರಾಷ್ಟ್ರಕ್ಕೆ ಮಾದರಿಯಾಗಿವೆ. ಕರ್ನಾಟಕವು ತನ್ನ ಚರಿತ್ರೆಯ ಯಾವ ಕಾಲಘಟ್ಟದಲ್ಲು ಇಂತಹ ಕಾಲಮಾನವನ್ನು ಕಂಡಿರಲಿಲ್ಲ. ಸಾಮ್ರಾಜ್ಯಶಾಹಿ ರಾಜ ಪ್ರಭುತ್ವದಲ್ಲಿ ಇತ್ತೆಂದು ಹೇಳಲಾಗುವ ವೈಭವ ಬೇರೆ. ರಾಜಶಾಹಿಯ ವೈಭವವೇ ಒಂದು ಸಮಾಜದ ಏಳಿಗೆ ಅಲ್ಲ. ಸಮುದಾಯಗಳ ಎಚ್ಚರವೇ ನಿಜವಾದ ಚಾರಿತ್ರಿಕ ಸಂಗತಿ. ಸ್ವಾತಂತ್ರ್ಯವೇ ಇರದಿದ್ದ ಸಮಾಜ ಸುಖವಾಗಿತ್ತು ಎಂದು ಹೇಳಲಾಗದು. ಎಪ್ಪತ್ತರ ದಶಕದಲ್ಲಿ ಉಂಟಾದ ಘಟನೆಗಳು ಶೋಷಿತರ ಸಂದರ್ಭದಲ್ಲಿ ಹೊಸ  ಕಾಲದ ಸಾಮಾಜಿಕ ಮೌಲ್ಯಗಳ ಸಂವರ್ಧನೆಯನ್ನು ಸೂಚಿಸುತ್ತವೆ. ದೇವರಾಜ ಅರಸು ಅವರ ರಾಜಕೀಯದ ಉನ್ನತ ಕಾಲವು ಎಪ್ಪತ್ತರ ದಶಕವೇ ಆಗಿತ್ತು ಎಂಬುದು ಇಲ್ಲಿ ಪೂರಕವಾದ ಅಂಶ. ರಾಜಕೀಯ ಇಚ್ಛಾಶಕ್ತಿಯೂ ಈ ದಶಕದಲ್ಲಿ ವಿಶೇಷವಾಗಿತ್ತು. ಸಾಹಿತ್ಯ ಚಳುವಳಿಗಳಂತು ಗಾಢವಾದ ಪರಿಣಾಮವನ್ನು ಬೀರಿದವು. ಬೂಸಾ ಸಾಹಿತ್ಯ ಚಳವುಳಿಯಿಂದಲೇ ಕನ್ನಡ ಭಾಷೆಯ ನುಡಿಗೆ ಬೇರೊಂದು ಅರ್ಥ ಸಂಬಂಧ ಸಾಧಿತವಾಯಿತು. ಪುನರುಜ್ಜೀವನಗೊಳ್ಳುವುದು ಒಂದು ಸಾಮಾಜಿಕ ಪ್ರಕ್ರಿಯೆ. ಯಾರೊ ಕೆಲವರು ಮಾತ್ರ ಎಚ್ಚರಗೊಂಡಿದ್ದರೆ ಅಂತಹ ಸಾಧ್ಯತೆ ಘಟಿಸುವುದಿಲ್ಲ. ಸಮಾಜದ ಎಲ್ಲರ ಭಾಗವಹಿಸುವಿಕೆಯು ಅಖಂಡವಾದ ಗತಿಶೀಲತೆಯನ್ನು ರೂಪಿಸುತ್ತದೆ. ಕೇವಲ ಸಾಹಿತ್ಯ ಚಳುವಳಿಗಳಷ್ಟೇ ಒಂದು ನಾಡಿನ ಭಾಷೆಯ ಅಂತರಂಗವನ್ನು ಪ್ರತಿಪಾದಿಸಲಾರವು. ಸಮಾಜದ ಬೇರೆಲ್ಲ ನೆಲೆಗಳ ದನಿಗಳು ಒಗ್ಗೂಡಿದಾಗಲೇ ಭಾಷೆ ಮತ್ತು ಸಮಾಜಗಳು ವಿಸ್ತಾರ ಅರ್ಥ ಸಾಧ್ಯತೆಗಳನ್ನು ಅಭಿವೃದ್ಧಿಪಥದಲ್ಲಿ ಕಂಡುಕೊಳ್ಳಲು ಸಾಧ್ಯವಾಗುವುದು.

ಹೀಗಾಗಿಯೇ ಸಾಹಿತ್ಯೇತರ ಪಲ್ಲಟಗಳು ಏಕೀಕರಣೋತ್ತರ ಕನ್ನಡ ನಾಡಿನಲ್ಲಿ ಮಹತ್ವ ಪಡೆಯುವುದು. ಭಾಗಶಃ ಎಪ್ಪತ್ತರ ದಶಕದ ಸಾಂಘಿಕ ಯತ್ನಗಳು ಘಟಿಸದೇ ಹೋಗಿದ್ದರೆ ಇಪ್ಪತ್ತೊಂದನೆ ಶತಮಾನದಲ್ಲಿ ಅನೇಕ ಅಂಚಿನ ಸಮುದಾಯಗಳಿಗೆ ಚಹರೆಯೇ ಇಲ್ಲವಾಗಿ ಬಿಡುತ್ತಿತ್ತು. ಈ ಹಿನ್ನೆಲೆಗಳಿಂದ ಎಪ್ಪತ್ತರ ದಶಕವು ಭಾಷೆ ಸಮಾಜ, ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಹಾಗೂ ಆರ್ಥಿಕ ಮತ್ತು ತಂತ್ರಜ್ಞಾನದ ವಿಸ್ತರಣೆಗಳಿಂದ ಸ್ಥಳೀಯ ಪುನರುಜ್ಜೀವನ ಕಾಲವೆನಿಸಿದೆ. ಈ ಅವಧಿಯಲ್ಲಾದ ಪಲ್ಲಟಗಳು ರೂಪಾಂತರಗೊಂಡು ಇಂದಿಗೂ ಪ್ರತಿಫಲಿಸುತ್ತಿವೆ. ಜನತೆಯ ಪ್ರಭುತ್ವ ಸ್ಥಳೀಯ ರಾಜಕಾರಣವು ಕನ್ನಡ ನಾಡುನುಡಿಯ ಭಾಗವಾಗಿಯೇ ಪೂರಕವಾಗಿದ್ದುದು ಅನೇಕ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿತು. ಎಪ್ಪತ್ತರ ದಶಕದಲ್ಲಾದ ಪ್ರಮುಖ ಚಾರಿತ್ರಿಕ ಸಂಗತಿಗಳನ್ನು ಇಲ್ಲಿ ಹೀಗೆ ನಮೂದಿಸಬಹುದು.

೧. ದಲಿತ ಸಂಘರ್ಷ ಸಮಿತಿಯ ಉದಯ

೨. ರಾಜ್ಯ ರೈತ ಸಂಘದ ಹೋರಾಟ

೩. ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗಗಳ ಎಚ್ಚರ

೪. ಕಾರ್ಮಿಕ ಸಮಾಜದ ಹೋರಾಟ

೫. ಜಾತಿ ವಿನಾಶ ಜಾಗೃತಿ ಮತ್ತು ಮೀಸಲಾತಿ ಚಳುವಳಿ

೬. ಭೂ ಸುಧಾರಣಾ ಕಾಯ್ದೆ ಮತ್ತು ತಿದ್ದುಪಡಿ

೭. ಸಕ್ಷರತಾ ಅಂದೋಲನ ಮತ್ತು ಶಿಕ್ಷಣ ಸುಧಾರಣೆ

೮. ಸಹಕಾರ ಸಂಸ್ಥೆಗಳ ವಿಸ್ತರಣೆ

೯. ಸಮಾಜವಾದಿ ರಾಜಕಾರದ ಪ್ರವೇಶ

೧೦. ಜನಪ್ರಿಯ ಸಿನಿಮಾ ಮತ್ತು ಚಿತ್ರಕಲೆ

೧೧. ಕನ್ನಡ ಚಳುವಳಿ ಮತ್ತು ಗಡಿನಾಡ ಸಮಸ್ಯೆ

೧೨. ಬ್ಯಾಂಕ್ ಮತ್ತು ಸಾರಿಗೆ ವ್ಯವಸ್ಥೆಯ ರಾಷ್ಟ್ರೀಕರಣ

೧೩. ಪ್ರಾದೇಶಿಕ ಪಕ್ಷಗಳ ಪ್ರಯತ್ನ ಮತ್ತು ವೈಫಲ್ಯ

೧೪. ಪ್ರತ್ಯೇಕತಾವಾದದ ಬಿಕ್ಕಟ್ಟುಗಳು

ಈ ಒಂದೊಂದೂ ಕ್ಷೇತ್ರಗಳಲ್ಲೂ ಹಲವು ಪರಿಣಾಮಗಳ ಘಟನೆಗಳು ಏಕೀರಣೋತ್ತರ ಕರ್ನಾಟಕದಲ್ಲಿ ಆಗಿವೆ. ದಲಿತ ಬಂಡಾಯ ಸಾಹಿತ್ಯದ ಜೊತೆಗೆ ಸಮುದಾಯ ರಂಗ ಚಳುವಳಿಯು ಕರ್ನಾಟಕದ ಮೂಲೆ ಮೂಲೆಯನ್ನು ಮುಟ್ಟಿತು. ಈ ಅಂಶಗಳನ್ನು ಈ ಮೊದಲೇ ಪ್ರತ್ಯೇಕವಾಗಿ ಸಾಹಿತ್ಯ ಸಂದರ್ಭದಲ್ಲಿ ಚರ್ಚಿಸಲಾಗಿದೆ. ಇಲ್ಲಿ ಪ್ರಸ್ತಾಪಿಸಿರುವ ಸಂಗತಿಗಳನ್ನು ವಿವರವಾಗಿ ಪರಿಶೀಲಿಸಲು ಅವಕಾಶ ಇರದಿರುವ ಕಾರಣ ಇವುಗಳ ಸ್ಥೂಲ ನೆಲೆಯನ್ನು ಮಾತ್ರ ಭಾವಿಸಬಹುದು. ಈ ಎಲ್ಲಾ ಸಂಗತಿಗಳೂ ಕನ್ನಡ ಭಾಷೆ, ಸಾಹಿತ್ಯ, ಸಮಾಜ ಹಾಗೂ ರಾಜಕಾರಣಕ್ಕೆ  ನೇರವಾಗಿ ಸಂಬಂಧಿಸಿದ್ದಾಗಿವೆ. ಇಲ್ಲಿ ಘಟನೆಗಳ ವಿವರಗಳಿಗಿಂತ ಅವು ಮಾಡಿದ ಪರಿಣಾಮಗಳ ಕಡೆಗೆ ಒತ್ತು ನೀಡಲಾಗಿದೆ. ಮೇಲು ನೋಟಕ್ಕೆ ಈ ಪಲ್ಲಟಗಳೆಲ್ಲವೂ ಘನವಾಗಿ ತೋರುತ್ತವೆ. ಆದರೆ ಆಳದಲ್ಲಿ ಇವುಗಳು ಅಡಗಿಸಿಕೊಟ್ಟುಕೊಂಡ ಜಾತಿ ವರ್ಗ ಭೇದಗಳನ್ನು ಮರೆಮಾಚಲಾಗದು. ಕ್ರಾಂತಿಯ ಕನಸಿನಿಂದ ಆರಂಭಗೊಳ್ಳುವ ಯತ್ನಗಳು ಮೊದಲಿಗೆ ಆದರ್ಶಗಳನ್ನು ಕಾಯ್ದುಕೊಳ್ಳುತ್ತವೆಯಾದರೂ ತದನಂತರ ಅವು ವಿರೂಪಕ್ಕೂ ಒಳಪಡುವುದು ಭಾರತೀಯ ಸಮಾಜದ ಗುಣವಿದು. ಊಲಿಗಮಾನ್ಯ ಸ್ವಭಾವ ಕನ್ನಡ ಸಮಾಜದ ತಳಪಯವಾಗಿದೆ. ಅದರಲ್ಲಿ ಜಾತಿಯೇ ಅಸ್ಥಿಭಾರ. ಧರ್ಮ ಇಲ್ಲಿ ಬುನಾದಿಯ ಜೊತೆಗಿರುತ್ತದೆ. ಆದ್ದರಿಂದಲೇ ಅಸಮಾನತೆಯನ್ನು ಸ್ಥಾಪಿಸುವ ಶಕ್ತಿಗಳು ಯಾವತ್ತೂ ಜಾಗೃತವಾಗಿರುತ್ತವೆ. ಇಷ್ಟೊಂದು ಜನತಾಂತ್ರಿಕ ವ್ಯವಸ್ಥೆಯಲ್ಲು ಜನತೆಯ ಎಚ್ಚರವನ್ನು ತಪ್ಪಿಸುವುದು ಕೇವಲ ಸರ್ಕಾರಗಳಲ್ಲ. ಸರ್ಕಾರಗಳನ್ನು ನಡೆಸುತಿತರುವ ಬಲಿಷ್ಠ ಜಾತಿಗಳೇ ಎಂಬುದನ್ನು ಗಮನಿಸಬೇಕು. ಎಪ್ಪತ್ತರ ದಶಕದಲ್ಲಿ ಉಂಟಾದ ಕ್ರಾಂತಿಕಾರಿ ಬದಲಾವಣೆಗಳು ಅಂತಿಮ ವಾಗಿ ಕನ್ನಡ ನಾಡುನುಡಿಯ ಭವಿಷ್ಯವನ್ನು ಹೇಗೆ ರೂಪಿಸಿದವು ಎಂಬುದನ್ನು ಹತಾಸೆಯಾಗಿಯೇ ಉಳಿಯುತ್ತದೆ. ಆ ವಿಶ್ಲೇಷಣೆಯ ಭಾಗವಾಗಿ ಮೇಲೆ ಪಟ್ಟಿ ಮಾಡಿದ ಪ್ರಮುಕ ಸಂಗತಿಗಳನ್ನು ವಿಮರ್ಶಿಸೋಣ.