ಭಾಷೆಯ ಆಧಾರದ ಮೇಲೆ ರಾಜಕಾರಣವನ್ನು ತಮಿಳುನಾಡು ಈತನಕ ಕೇಂದ್ರದಲ್ಲಿ ಸಮರ್ಥವಾಗಿ ಮಾಡಿಕೊಳ್ಳುತ್ತ ಬಂದಿದೆ. ಭಾಷೆಯೊಂದು ರಾಜಕೀಯ ಶಕ್ತಿಯಾಗಿ ಮಾರ್ಪಟ್ಟಿರುವುದು ದಕ್ಷಿಣ ಭಾರತದಲ್ಲಿ ತಮಿಳಿಗೆ ಮಾತ್ರ ಎಂಬುದಕ್ಕೆ ಅವೈದಿಕ ನೆಲೆಯ ಚಾರಿತ್ರಿಕ ಹಿನ್ನೆಲೆಯೂ ಇದೆ. ಕನ್ನಡ ಭಾಷೆ ಒಂದು ರಾಜಕೀಯ ಶಕ್ತಿಯಾಗಲು ಪ್ರಯತ್ನಿಸಿದಂತೆಲ್ಲ ಅದು ವಿಫಲವಾಗಿದೆ. ಕನ್ನಡ ಚಳುವಳಿಯೇ ಅಂತಹ ಯಶಸ್ಸನ್ನು ಕಾಣಲಾಗಲಿಲ್ಲ. ಜಾತಿಯು ಭಾಷೆಯ ವಿಷಯದಲ್ಲಿ ಬೆರೆತಿರುವುದರಿಂದಲೂ ಹೀಗಾಗುತ್ತದೆ. ಪ್ರಬಲ ಜಾತಿಗಳಿಗೆ ಭಾಷೆ ಮುಖ್ಯ ವಾಗಿರುವುದಿಲ್ಲ. ಜಾತಿಗೆ ಬೇಕಾದ ಅವಶ್ಯಕತೆಗಳೇ ಮುಂದಾಗಿ ನಾಡುನುಡಿಯ ಅಗತ್ಯಗಳು ಹಿಂದೆ ಸರಿದಿವೆ. ಅಲ್ಪಸಂಖ್ಯಾತ ಸಮುದಾಯಗಳಂತು ಭಾಷೆಯ ವಿಚಾರದಲ್ಲಿ ತಟಸ್ಥವಾಗಿರುತ್ತವೆ. ಇಲ್ಲದಿದ್ದರೆ ತಮ್ಮ ಭಾಷೆಗೆ ಮುಖ್ಯ ಆದ್ಯತೆ ಬೇಕೆಂದು ಒತ್ತಾಯಿಸುತ್ತವೆ. ಇನ್ನು ಆದಿವಾಸಿಗಳು ಅಲೆಮಾರಿಗಳು ಕನ್ನಡ ಭಾಷೆ ಒಂದನ್ನೇ ತಮ್ಮ ಭಾಷೆ ಎಂದು ನಂಬಿರುವುದಿಲ್ಲ. ಅವರೆಲ್ಲರಿಗೂ ಅವರವರದೆ ಭಾಷೆಗಳಿವೆ. ಇನ್ನು ದಲಿತರಿಗೆ ಕನ್ನಡವೇ ಮೂಲ ಭಾಷೆಯಾಗಿದ್ದರೂ ಅದೊಂದನ್ನೆ ನಂಬಿ ಅದಕ್ಕಾಗಿ ಹೋರಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಸ್ಥಿತಿ ಇಲ್ಲ. ಹಾಗೆಯೇ ಕರ್ನಾಟಕದ ಒಳಗೆಯೇ ಅನೇಕ ಅನ್ಯಭಾಷಿಕರು ಗಂಭೀರ ಪ್ರಮಾಣದಲ್ಲಿದ್ದಾರೆ. ಗಡಿಭಾಗದ ಕರ್ನಾಟಕದಲ್ಲಿ ಕನ್ನಡ ಸಮಾಜ ರೂಪಾಂತರಗೊಂಡು ತೆಳುವಾಗಿದೆ.ಹಾಗೆಯೇ ಕೊಡವ, ಕೊಂಕಣಿ, ತುಳು ಭಾಷಿಗರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಕನ್ನಡ ಭಾಷೆಯು ಒಂದು ನಾಡಿನ ಭಾಷೆಯಾಗಿದ್ದರೂ ಅದು ಅಖಂಡ ಕರ್ನಾಟಕವನ್ನು ಪ್ರತಿನಿಧಿಸಲಾಗದು. ಈ ಸಮಸ್ಯೆಗಳಿಂದಾಗಿ ಕನ್ನಡ ಭಾಷೆ ಎಂದ ಕೂಡಲೇ ಏಕಾಭಿಪ್ರಾಯವು ಮೂಡಲಾರದು.

ಇದೇ ಸ್ಥಿತಿಯನ್ನು ಸ್ಥಳೀಯ ರಾಜಕಾರಣ ಮತ್ತು ಭಾಷೆಗೂ ಹೊಂದಿಸಿ ಹೇಳಬಹುದು. ಕರ್ನಾಟಕದ ರಾಜಕೀಯ ಸ್ಥಿತಿಯು ರಾಷ್ಟ್ರೀಯ ಪಕ್ಷಗಳ ಹಂಗಿನಲ್ಲೆ ಬೆಳೆದು ಅದೇ ಸ್ಥಿತಿಯಲ್ಲಿ ಬೆರೆತಿದೆ. ಏಕೀಕರಣದ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಹಂಗಿಗೆ ಒಳಗಾದ ಕರ್ನಾಟಕವು ಅದರಿಂದ ಬಿಡಿಸಿಕೊಳ್ಳಲು ಮಾಡುವ ಯತ್ನಗಳನ್ನೆಲ್ಲ ರಾಷ್ಟ್ರೀಯ ಪಕ್ಷಗಳ ಮುರಿಯುತ್ತಲೇ ಬಂದಿವೆ. ಹೀಗಿದ್ದರೂ ಕನ್ನಡಿಗರು ಮಾಡುತ್ತ ಬಂದ ಯತ್ನಗಳಲ್ಲಿ ಕೆಲವನ್ನು ಗಮನಿಸೋಣ.

ಮೊದಲ ಬಾರಿಗೆ ಕನ್ನಡ ಭಾಷೆಯ ರೂಪಕದ ಮೂಲಕ ಕನ್ನಡಿಗರ ರಾಜಕೀಯ ಪಕ್ಷದ ಆಕಾಂಕ್ಷೆಯು ರೂಪುಗೊಂಡದ್ದು ಕನ್ನಡ ಭಾಷೆಯ ಚಳುವಳಿಯ ಭಾಗವಾಗಿಯೆ ಎಂಬುದನ್ನು ಗಮನಿಸಬೇಕು. ಪ್ರಗತಿಶೀಲ ಸಾಹಿತಿಗಳಲ್ಲಿ ಇಂತಹ ಹಂಬಲ ತೀವ್ರವಾಗಿತ್ತು. ಮ. ರಾಮಮೂರ್ತಿ ಅವರ ಮೂಲಕ ಆಕಾರಗೊಂಡ ‘ಸಂಯುಕ್ತ ರಂಗ’ದಲ್ಲಿ ಮೊದಲಿಗೆ ಪ್ರಾದೇಶಿಕ ಪಕ್ಷದ ಬೀಜಗಳಿದ್ದವು. ಇದು ಕನ್ನಡ ಪಕ್ಷವಾಗಿ ರೂಪಾಂತರಗೊಂಡಿತಾದರೂ ರಾಮಮೂರ್ತಿ ಅವರ ಅಕಾಲ ಮರಣದಿಂದಾಗಿ ಹುಟ್ಟಿದ ಕೆಲವೇ ಸಮಯದಲ್ಲಿ ಅಸ್ತಿತ್ವ ಕಳೆದುಕೊಂಡಿತು. ಕನ್ನಡ ಪಕ್ಷವನ್ನು ತ.ರಾ.ಸು ಕೆಲಕಾಲ ನಿರ್ವಹಿಸಿದರಾದರೂ ಮುಂದುವರಿಸಲು ಆಗಲಿಲ್ಲ. ರಾಮಮೂರ್ತಿ ಹಾಗೂ ವಾಟಾಳ್ ನಾಗರಾಜ್ ಇಬ್ಬರಿಗೂ ಪ್ರಾದೇಶಿಕ ಪಕ್ಷ ನಿರ್ಮಾಣದಲ್ಲಿ ತೀವ್ರ ಆಕಸ್ತಿಯಿತ್ತು. ವಿಶೇಷವಾಗಿ ಬೆಂಗಳೂರು ನಗರ ಕೇಂದ್ರಿತ ಕಾರ್ಯ ವ್ಯಾಪ್ತಿಯಲ್ಲಿ ಅನ್ಯಭಾಷಿಕರ ಹಾವಳಿಯ ವಿರುದ್ಧ ಹಾಗು ಕನ್ನಡ ರಾಜಕಾರಿಣಿಗಳ ವೈಫಲ್ಯದ ಹಿನ್ನೆಲೆಯಲ್ಲಿಹುಟ್ಟಿಕೊಂಡ ಕನ್ನಡ ಪಕ್ಷವು ಯಾವುದೇ ಸೈದ್ಧಾಂತಿಕ ಹಾಗೂ ಅಖಂಡ ನೆಲೆಯ ರಾಜಕೀಯ ಪ್ರಣಾಳಿಕೆಗಳಿಂದ ಹುಟ್ಟಿಕೊಂಡಿರಲಿಲ್ಲ. ಅನ್ಯ ಭಾಷಿಕರ ಮೇಲಿನ ಪ್ರತಿರೋಧದಿಂದ ಹುಟ್ಟಿದ ಕನ್ನಡ ಪಕ್ಷಕ್ಕೆ ಕರ್ನಾಟಕದ ಎಲ್ಲ ಸಮುದಾಯಗಳೂ ಬೆಂಬಲಿಸಿರಲಿಲ್ಲ. ವಾಟಾಳ್ ನಾಗರಾಜ್ ತಮ್ಮ ಭಿನ್ನಾಭಿಪ್ರಾಯದ ಮೂಲಕ ಹೊರಬಂದು ಕನ್ನಡ ಪಕ್ಷದ ಸ್ವರೂಪವನ್ನು ‘ಕನ್ನಡ ಚಳುವಳಿ ಪಕ್ಷ’ ಎಂದು ಬದಲಿಸಿಕೊಂಡರು. ಇದರ ಹುಟ್ಟೇ ಸೀಮಿತವಾದುದಾಗಿತ್ತು. ಕನ್ನಡ ಚಳುವಳಿ ಮಾಡಲು ರಾಜಕೀಯ ಪಕ್ಷದ ಅಗತ್ಯವಿರಲಿಲ್ಲ. ತಮ್ಮ ರಾಜಕೀಯಕ್ಕಾಗಿ ವಾಟಾಳರು ಕನ್ನಡ ಚಳುವಳಿಯನ್ನು ಬಳಸಿಕೊಂಡರೆಂಬುದೇ ಇಲ್ಲಿನ ಗಮನಾರ್ಹ ಸಂಗತಿ.

ಭಾಷೆಯನ್ನೊಂದು ರಾಜಕೀಯ ಪಕ್ಷವಾಗಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಮುಂದಾಲೋಚನೆಯೆ ಅನೇಕರಿಗೆ ಇಲ್ಲ. ‘ಕನ್ನಡ ಚಳುವಳಿ ವಾಟಾಳ್ ಪಕ್ಷ’ ಎಂಬುದು ಕನ್ನಡದ ಅಖಂಡ ರೂಪಕವಲ್ಲ. ಭಾಷೆಯನ್ನು ರಾಜಕೀಯ ಪಕ್ಷವನ್ನಾಗಿ ಮಾಡಲು ಸಾಧ್ಯವಾಗುದು. ಬಹುಭಾಷೆ, ಜಾತಿ ವರ್ಗಗಳಿರುವ ನಾಡಿನಲ್ಲಿ ಏಕಭಾಷಾ ರಾಜಕಾರಣ ಅಸಾಧ್ಯ. ಒಂದು ವೇಳೆ ಸ್ಥಳೀಯ ಚುನಾವಣೆಗಳಲ್ಲಿಯೂ ಅದು ಸಫಲವಾಗಲಾರದು. ಗಡಿಭಾಗದ ಕನ್ನಡ ನೆಲೆಗಳಲ್ಲಿಯೂ ಈ ಸೂತ್ರ ಫಲಕಾರಿಯಾಗಿಲ್ಲ. ಒಟ್ಟಿನಲ್ಲಿ ಮ.ರಾಮಮೂರ್ತಿ ಮತ್ತು ವಾಟಾಳ್ ನಾಗರಾಜರಿಬ್ಬರ ‘ಕನ್ನಡ’ ಪಕ್ಷದ ಯತ್ನವು ಸಾಮಾಜಿಕವಾದುದಾಗಿರಲಿಲ್ಲ. ಭಾಷೆಯ ವ್ಯಾಪ್ತಿಯಿಂದಲೇ ಒಂದು ನಾಡಿನ ರಾಜಕಾರಣವನ್ನು ರೂಪಿಸಲಾಗದು ಎಂಬುದನ್ನು ಅವರ ಯತ್ನಗಳು ಸೂಚಿಸುತ್ತವೆ. ಭಾಷೆಯನ್ನುಉಳಿಸಿಕೊಳ್ಳಲು ಮಾಡುವ ಹೋರಾಟವೇ ಬೇರೆ. ಅಂತಹದೊಂದು ಭಾಷೆಯನ್ನು ರಾಜಕೀಯಕ್ಕೆ ಉಪಯೋಗಿಸಿಕೊಳ್ಳುವ ತಾತ್ವಿಕತೆಯೆ ಬೇರೆ. ರಾಜಕೀಯ ಮಾಡಲು ಭಾಷೆಯನ್ನು ಬಳಸಿಕೊಳ್ಳುವಾಗ ಭಾಷೆಯ ವಿಷಯವು ಪ್ರಧಾನ ಆಯ್ಕೆಯ ವಿಚಾರವಾಗದು. ಆದ್ದರಿಂದಲೇ ಈಗಲೂ ಶಾಸ್ತ್ರೀಯ ಸ್ಥಾನಮಾನದಬೇಡಿಕೆಯನ್ನು ರಾಜ್ಯ ಸರ್ಕಾರವು ಕೇಂದ್ರದ ಜೊತೆ ಮಂಡಿಸುವಾಗ ಅದನ್ನು ಅನಪೇಕ್ಷಿತ ಆಯ್ಕೆಯ ವಿಚಾರವಾಗದು. ಆದ್ದರಿಂದಲೇ ಈಗಲೂ ಶಾಸ್ತ್ರೀಯ ಸ್ಥಾನಮಾನದ ಬೇಡಿಕೆಯನ್ನು ರಾಜ್ಯ ಸರ್ಕಾರವು ಕೇಂದ್ರದ ಜೊತೆ ಮಂಡಿಸುವಾಗ ಅದನ್ನು ಅನಪೇಕ್ಷಿತ ಆಯ್ಕೆಯನ್ನಾಗಿ ಬಿಂಬಿಸುವುದು. ಆದರೆ ಕನ್ನಡಿಗರ ಭಾವನಾತ್ಮಕತೆಗೆ ನ್ಯಾಯ ಒದಗಿಸುತ್ತಿದ್ದೇವೆ ಎಂಬುದು ಕೂಡ ಭಾಷೆಯನ್ನು ರಾಜಕೀಯವಾಗಿ ದುರುಪಯೋಗಪಡಿಸುವುದೇ ಆಗಿರುತ್ತದೆ. ಮಹಾಜನ್ ವರದಿ ಹಾಗೂ ಮಹಿಷಿ ವರದಿಯಲ್ಲಿ ಭಾಷೆಯ ವಿಷಯವು ಇದರಿಂದಲೇ ಒಂದು ರಾಜಕೀಯ ವ್ಯವಹಾರವಾಗಿ ಮಾತ್ರ ಎಳೆದಾಡಲ್ಪಡುತ್ತಿದೆಯೇ ಹೊರತು ಭಾಷೆಯ ಬಗೆಗಿನ ಸಹಬಾಳ್ವೆಯನ್ನು ಬಿಂಬಿಸುತ್ತಿಲ್ಲ.

ವಾಟಾಳ್ ನಾಗರಾಜ್ ಕನ್ನಡ ಭಾಷೆಯ ಹೆಸರಿನಲ್ಲಿ ದೀರ್ಘಾವಧಿಯ ರಾಜಕಾರಣ ಮಾಡುತ್ತ ಬಂದಿರುವುದು ಮಾತ್ರ ದಾಖಲಾರ್ಹ ಸಂಗತಿ. ಮಿತಿಗಳ ನಡುವೆಯೂ ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ವಾಟಾಳ್ ಅವರ ಕನ್ನಡ ಚಳುವಳಿಯ ರಾಜಕಾರಣವು ಕನ್ನಡ ಜಾಗೃತಿಯ ಕೆಲಸವನ್ನು ಏಕಾಂಗಿಯಾಗಿಯೇ ಮಾಡಿಕೊಳ್ಳುತ್ತಾ ಬಂದಿದೆ. ಕನ್ನಡ ರಾಜಕಾರಣದ ಬದರ‍್ಧತೆ ಇವರೊಬ್ಬರಲ್ಲೇ ಇಷ್ಟು ಸಮಯದವರೆಗೂ ಸಾಗಿ ಬಂದಿರುವುದು ಸಾಮಾನ್ಯ ಸಂಗತಿ ಅಲ್ಲ. ಕನ್ನಡಿಗರಲ್ಲಿ ಇಲ್ಲದ ಕನ್ನಡ ರಾಜಕಾರಣದ ಕೊರತೆಯಿಂದ ವಾಟಾಳ್ ಅವರಿಗೆ ಹಿನ್ನೆಡೆ ಸಾಧ್ಯವಾಯಿತೆ ಹೊರತು ಅದು ಕೇವಲ ವಾಟಾಳ್ ಅವರ ರಾಜಕೀಯ ವೈಫಲ್ಯವಲ್ಲ. ಕನ್ನಡಿಗರು ವಾಟಾಳ್ ಅವರ ಕನ್ನಡ ಪ್ರಜ್ಞೆಯ ಭಾಗವಾಗಿ ನಾಡುನುಡಿಯ ರಾಜಕಾರಣವನ್ನು ಮಾಡಿದ್ದೇ ಆಗಿದ್ದಲ್ಲಿ ಗಡಿನಾಡಿನ ಯಾವ ಸಮಸ್ಯೆಗಳಾಗಲಿ, ಕೇಂದ್ರದ ಮಲತಾಯಿ ಧೋರಣೆಗಳಾಗಲಿ ಈ ಪ್ರಮಾಣದಲ್ಲಿ ಮುಂದುವರಿಯುತ್ತಿರಲಿಲ್ಲ. ಕನ್ನಡ ಸಾಹಿತ್ಯದ ಪ್ರಭಾವಿ ವ್ಯಕ್ತಿಗಳು ಕೂಡ ವಾಟಾಳರ ಜನಪ್ರಿಯ ರಾಜಕೀಯ ಶೈಲಿಯ ಜೊತೆ ಗುರುತಿಸಿಕೊಳ್ಳಲು ಮುಂದಾಗಲಿಲ್ಲ. ಸೀಮಿತಿ ಪರಿಣಾಮದಲ್ಲೇ ಪ್ರಾದೇಶಿಕ ರಾಜಕೀಯ ಪಕ್ಷಗಳ ಮುಗ್ಗರಿಸುತ್ತಿವೆ.

ವಾಟಾಳರು ಭಾಷೆ ಮೂಲಕ ರೂಪಿಸ ಹೊರಟ ರಾಜಕೀಯ ಚದುರಂಗದಾಟವು ರಾಷ್ಟ್ರೀಯ ರಾಜಕಾರಣದಿಂದ ಗುರಿ ಸಾಧಿಸುವಲ್ಲಿ ವಿಫಲವಾಯಿತು. ಕನ್ನಡ ನಾಡು ನುಡಿಯ ಭಾಗವಾಗಿ ರೂಪುಗೊಂಡ ರೈತ ಸಂಘದ ರಾಜಕೀಯ ಯತ್ನವು ಕೂಡ ದೊಡ್ಡ ಸಾಧನೆಗೆ ತೊಡಗಲಿಲ್ಲ. ಪ್ರೊ. ನಂಜುಂಡಸ್ವಾಮಿ ಅವರ ‘ಕನ್ನಡ ದೇಶ’ ಪಕ್ಷವು ರೈತ ಸಂಘದ ಬಲದ ಜೊತೆ ಆರಂಭದಲ್ಲಿ ದೊಡ್ಡ ಕೂಗನ್ನೆ ಮೊಳಗಿಸಿತು. ವಿಧಾನ ಸೌಧದಲ್ಲಿ ರೈತರ ರಾಜಕೀಯ ಕಹಳೆ ಮೊಳಗಿ ರೈತ ನಾಡು ಹಸಿರಾಗುತ್ತದೆ ಎಂದು ನಂಜುಂಡಸ್ವಾಮಿಯವರು ಚುನಾವಣಾ ರಾಜಕಾರಣಕ್ಕೆ ಧುಮುಕಿಯೇ ಬಿಟ್ಟರು. ಕರ್ನಾಟಕದಲ್ಲಿ ಮಣ್ಣಿನ ಮಕ್ಕಳ ರಾಜ್ಯವು ಬೇರೊಂದು ನ್ಯಾಯವನ್ನೆ ರೂಪಿಸುತ್ತದೆ ಎಂಬ ಭ್ರಮೆ ಎಲ್ಲೆಡೆ ಆವರಿಸಿತ್ತು. ವಕ್ಕಲಿಗ ಹಾಗೂ ಲಿಂಗಾಯಿತ ಜಾತಿಗಳು ಒಟ್ಟಾಗಿ ರೈತ ರಾಜಕಾರಣವನ್ನು ಸಾಧಿಸಿದರು ಎನ್ನುವಷ್ಟರಲ್ಲಿ ನಂಜುಂಡಸ್ವಾಮಿ ಅವರ ವ್ಯಕ್ತಿ ಪ್ರತಿಷ್ಠೆ ಹಾಗೂ ವಕ್ಕಲಿಗ ಹಾಗೂ ಲಿಂಗಾಯಿತ ಜಾತಿಗಳ ಸ್ಥಾನಮಾನದ ಬಿರುಕಿನಿಂದ ಹಾಗೆಯೇ ರಾಷ್ಟ್ರೀಯ ರಾಜಕೀಯ ಪಕ್ಷಗಳ ಹುನ್ನಾರದಿಂದ ಕನ್ನಡ ದೇಶ ಪಕ್ಷವು ತನ್ನಿಂದ ತಾನೇ ಸೋಲುಂಡು ನಾಡುನುಡಿಯ ಪ್ರಾದೇಶಿಕ ರಾಜಕೀಯ ಪಕ್ಷಗಳ ಕನಸು ಮತ್ತೆ ಭಗ್ನವಾಯಿತು. ಇನ್ನು ಲಂಕೇಶ್ ಅವರ ಕರ್ನಾಟಕ ಪ್ರಗತಿ ರಂಗವು ಶಿಶು ಪ್ರಾಯದಲ್ಲೆ ಅಸುನೀಗಿತು. ಸಮಾಜವಾದಿ ರಾಜಕಾರಣವನ್ನು ಕನಸಿದ್ದ ಲಂಕೇಶರ ಪ್ರಾದೇಶಿಕ ರಾಜಕಾರಣವು ತಕ್ಕ ಬೆಂಬಲವಿಲ್ಲದೆ ಬಿದ್ದು ಹೋಯಿತು. ಇದೇ ವೇಳೆಗೆ ದಲಿತ ಸಂಘರ್ಷ ಸಮಿತಿ ರೈತ ಸಂಘ ಹಾಗೂ ಪ್ರಗತಿ ರಂಗಗಳು ಕೂಡ ಪರ್ಯಾಯ ಶಕ್ತಿಯಾಗಿ ರಾಜಕಾರಣವನ್ನು ಕೈವಶ ಮಾಡಿಕೊಳ್ಳಲು ತೊಡಗಿದವು. ವಿಶೇಷವಾಗಿ ಹಿಂದುಳಿದ ವರ್ಗಗಳ ಪ್ರವೇಶವೇ ಈ ಮೂರು ಶಕ್ತಿಗಳಲ್ಲಿ ಇರಲಿಲ್ಲ. ದಲಿತರು, ರೈತರು ಹಾಗೂ ಲಂಕೇಶ್ವರ ಜಾಣ ಜಾಣೆಯರು, ಸಾಹಿತಿಗಳು, ಎಡಪಂಥೀಯ ಒಲವಿದ್ದ ಓದುಗರು ಕೂಡಿ ಮಾಡಲೆತ್ನಿಸಿದ ಪರ್ಯಾಯ ರಾಜಕಾರಣವು ಬಿದ್ದು ಹೋಯಿತು.

ಎಡಪಂಥೀಯ ಪಕ್ಷಗಳು ಕೂಡ ಈ ವೇಳೆಗಾಗಲೇ ದಣಿದಿದ್ದವು. ‘ಜನತಾಪಕ್ಷ’ದ ಚೌಕಟ್ಟಿನಲ್ಲಿ ಅಧಿಕಾರಕ್ಕೆ ಬಂದಿದ್ದ ರಾಮಕೃಷ್ಣ ಹೆಗಡೆ ಅವರಿಗೆ ತೃತೀಯ ಶಕ್ತಿ ಬೆಳೆಯುವುದು ಬೇಕಿರಲಿಲ್ಲ. ಅಲ್ಲದೆ ನಂಜುಂಡಸ್ವಾಮಿ, ಲಂಕೇಶರ ನಡುವೆ ಪ್ರೀತಿಯ ಬೆಸುಗೆ ರಾಜಕೀಯವಾಗಿಯೂ ಆಗಿರಲಿಲ್ಲ. ಅವರಿಬ್ಬರ ಪ್ರತಿಷ್ಠೆಗಳು ಮಾತ್ರ ರಾರಾಜಿಸಿದ್ದವು. ದಲಿತರಿಗೆ ಇವರಿಬ್ಬರ ನಡುವೆ ವಿಶ್ವಾಸ ಇರದಿದ್ದರೂ ರೈತರನ್ನೂ ಅವರ ಕನ್ನಡ ದೇಶ ಪಕ್ವವನ್ನೂ ನಂಬಿ ಜೊತೆಗೂಡಬೇಕಾದ ರಾಜಕೀಯ ಅಪೇಕ್ಷೆಗಳು ಒಳಗಿದ್ದವು. ಸ್ವತಃ ದಲಿತರೇ ಒಂದು ರಾಜಕೀಯ ಪಕ್ಷವನ್ನು ಕಟ್ಟುವಷ್ಟು ಸಾಮರ್ಥ್ಯ ಪಡೆದಿರಲಿಲ್ಲ. ಈ ವಿಚಾರದಲ್ಲಿ ದೇವನೂರು ಮಹಾದೇವ ಮತ್ತು ಬಿ.ಕೃಷ್ಣಪ್ಪನವರ ನಡುವೆ ಸೂಕ್ಷ್ಮ ಭಿನ್ನಾಭಿಪ್ರಾಯಗಳೂ ಇದ್ದವು. ಯಾವ ರಾಜಕೀಯ ಪಕ್ಷಗಳ ಜೊತೆ ತಮ್ಮ ಸಂಘಟನೆಯ ಶಕ್ತಿಯನ್ನು ತೊಡಗಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಗೊಂದಲವಿತ್ತು. ಅಲ್ಲದೆ ತೃತೀಯ ಶಕ್ತಿಯು ಒಂದುಗೂಡದೆ ಅತಂತ್ರವಾಗಿದ್ದು ಕರಗಿ ಹೋಗಿತ್ತು. ದಲಿತ ರೈತ ಸಂಘಟನೆಗಳು ಕೂಡಿ ರಾಜಕಾರಣ ಮಾಡಿ ಪ್ರಾದೇಶಿಕ ಪಕ್ಷ ರಚಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ವಿಶ್ವಾಸ ಬಿ.ಕೃಷ್ಣಪ್ಪನವರಿಗಿತ್ತು. ಆಗಿನ್ನು ರೂಪುಗೊಳ್ಳುತ್ತಿದ್ದ ಕಾನ್ಷೀರಾಮ್ ಅವರ ಬಿಎಸ್‌ಪಿ ಕಡೆಗೆ ಕೃಷ್ಣಪ್ಪನವರಿಗೆ ಒಲವಿತ್ತು. ಅದರಂತೆಯೇ ಅವರು ತಮ್ಮ ಕೊನೆಗಾಲದಲ್ಲಿ ಬಿಎಸ್‌ಪಿಯಲ್ಲಿ ಗುರುತಿಸಿಕೊಂಡು ರಾಜಕೀಯಕ್ಕೆ ಇಳಿದರು. ಎಪ್ಪತ್ತರ ದಶಕದ ಪರಿಣಾಮವಾದ ರಾಜ್ಯ ರೈತ ಸಂಘ, ರಾಜ್ಯ ದಲಿತ ಸಂಘರ್ಷ ಸಮಿತಿಗಳ ರಾಜಕೀಯ ಆಕಾಂಕ್ಷೆ ಮತ್ತು ಗುರಿಗಳು ಇಬ್ಬಾಗವಾಗಿಯೇ ದಾರಿ ಕಂಡುಕೊಂಡವು. ನಂಜುಂಡ ಸ್ವಾಮಿ ಅವರ ರಾಜಕೀಯ ಕನಸುಗಳು ಚೂರಾಗಿದ್ದವು. ಪ್ರಾದೇಶಿಕ ಪಕ್ಷದ ಆಶಯವು ರೈತ ಸಂಘದ ಭಗ್ನತೆಯಿಂದ ಮತ್ತೂ ನಶಿಸಿತು. ಆ ಬಗೆಯ ರಾಜಕೀಯ ಹೋರಾಟಕ್ಕೆ ಈಗಲೂ ರೈತ ಸಂಘದ ವಿಭಿನ್ನ ಬಣಗಳಲ್ಲಿ ಒಪ್ಪಂದಗಳು ನಡೆಯುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ.

ಇಲ್ಲಿ ಗಮನಿಸಬೇಕಾದ್ದೆಂದರೆ; ಜಾತಿ ವ್ಯವಸ್ಥೆಯೆ ಪ್ರಾದೇಶಿಕ ರಾಜಕೀಯ ಪಕ್ಷಗಳ ಅಸ್ತಿತ್ವಕ್ಕೆ ದೊಡ್ಡ ಸವಾಲಾಗಿರುವುದು. ರಾಷ್ಟ್ರೀಯ ಪಕ್ಷಗಳು ಬಲಿಷ್ಠ ಜಾತಿಗಳ ರಾಜಕೀಯ ನಾಯಕರನ್ನು ಹಿಂದಿನಿಂದಲೂ ಸಾಕಿಕೊಂಡು ಬೆಳೆಸುತ್ತಲೇ ಬಂದಿವೆ. ಹೀಗಿರುವಲ್ಲಿ ಪ್ರಬಲ ಜಾತಿಗಳೇ ಸ್ಥಳೀಯ ರಾಜಕೀಯ ಪಕ್ಷಗಳನ್ನು ಬೀಳೀಸಬಲ್ಲವು. ಮಣ್ಣಿನ ಮಗನೆಂದು ಸಾರಿಕೊಳ್ಳುವ ದೇವೇಗೌಡರೇ ರೈತಸಂಘವನ್ನು ಭಗ್ನಪಡಿಸಿ ‘ರೈತ’ರಿಗೆ ಬದಲಾಗಿ ‘ವಕ್ಕಲಿಗ ಜಾತಿ’ಯನ್ನು ಸಂಘಟಿಸಿ ತಮ್ಮ ರಾಜಕೀಯ ಜಾಲವನ್ನು ಸ್ಥಾಪಿಸಿಕೊಳ್ಳಬಲ್ಲರು. ಹೀಗಾಗಿಯೇ ಹಿಂದುಳಿದ ವರ್ಗಗಳು ಇಲ್ಲೆಲ್ಲ ರಾಜಕೀಯ ಪಕ್ಷವನ್ನು ಪ್ರಾದೇಶಿಕವಾಗಿ ಕಟ್ಟಿಕೊಂಡು ಗೆಲುವು ಸಾಧಿಸುವುದು ಅಸಾಧ್ಯವಾಗಿರುವುದು. ಅಲ್ಲದೆ ಕರ್ನಾಟಕದಲ್ಲಿ ಹುಟ್ಟಿಕೊಂಡು ಗೆಲುವು ಸಾಧಿಸುವುದು ಅಸಾಧ್ಯವಾಗಿರುವುದು. ಅಲ್ಲದೆ ಕರ್ನಾಟಕದಲ್ಲಿ ಹುಟ್ಟಿಕೊಂಡ ಸ್ಥಳೀಯ ರಾಜಕೀಯ ಪಕ್ಷಗಳು ಜಾತಿವಾರು ಲೆಕ್ಕಾಚಾರಗಳಿಗೆ ಬಲಿ ಆಗಲೇ ಬೇಕು ಎಂಬ ಸ್ಥಿತಿಗೆ ಸಿಲುಕಿವೆ. ಯಾಕೆ ಪ್ರಾದೇಶಿಕ ರಾಜಕೀಯ ಪಕ್ಷಗಳು ಭಾಷೆಯ ಮೂಲಕ ಅಥವಾ ಸಾಮಾಜಿಕ ನ್ಯಾಯದ ಮೂಲಕ ಯೋಜಿತ ಗುರಿಯನ್ನು ಸಾಧಿಸಲಾಗುತ್ತಿಲ್ಲ ಎಂಬುದನ್ನು ಗಂಭೀರವಾಗಿ ಅಧ್ಯಯನ ಮಾಡಬೇಕಿದೆ. ಹಿಂದುಳೀದ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಬಂಗಾರಪ್ಪ ಅವರು ಸ್ಥಾಪಿಸಿಕೊಂಡಿರುವ ಸಮಾಝವಾದಿಪಕ್ಷ ಕೂಡ ಭಾಷೆ, ಸಂಸ್ಕೃತಿ, ಸಾಮಾಜಿಕ ನ್ಯಾಯಗಳನ್ನು ಮಾತನಾಡಿದರೂ ಸಹ ಅದಕ್ಕೂ ದೊಡ್ಡ ಭವಿಷ್ಯವಿಲ್ಲ. ದೇವೇಗೌಡರಿಂದ ದಂಡನೆಗೀಡಾಗಿ ಹೊರಬರಬೇಕಾದ ಸಿದ್ಧರಾಮಯ್ಯ ಕೂಡ ‘ಅಹಿಂದ’ ಸಂಘಟನೆ ಮಾಡಿ ಕೆಲದಿನ ಮಾತ್ರ ಕನ್ನಡಿಗರ ಮುಂದೆ ತನ್ನ ಸ್ವಜಾತಿ ಮಂದಿಯ ಎದಿರು ಅದೇ ಹಿಂದುಳಿದ ವರ್ಗಗಳ ಸಮ್ಮುಖದಲ್ಲಿ ಅನ್ಯಾಯವನ್ನು ಜಾಹೀರು ಮಾಡಿಕೊಂಡರೇ ವಿನಃ ಅವರೇ ಒಂದು ರಾಜಕೀಯ ಪಕ್ಷವನ್ನು ಪ್ರಾದೇಶಿಕವಾಗಿ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಹಿಂದುಳಿದ ವರ್ಗಗಳು ಶೇಕಡ ಐವತ್ತೇಳರಷ್ಟು ಪ್ರಮಾಣದಲ್ಲಿದ್ದರೂ ಅವರೆಲ್ಲ ಕೂಡಿ ಸಂಘಟಿತ ರಾಜಕೀಯ ಪಕ್ಷವನ್ನು ಕಟ್ಟಲಾಗದು ಎಂದರೆ ಜಾತಿಗಳು ಹೇಗೆ ಪ್ರಜಾಪ್ರಭುತ್ವದಲ್ಲಿ ಪ್ರಾದೇಶಿಕ ರಾಜಕಾರಣವು ಬೆಳೆಯದಂತೆ ತಡೆದಿವೆ ಎಂಬುದನ್ನು ಗಮನಿಸಬಹುದು.

ಲಂಕೇಶರ ಪ್ರಗತಿರಂಗವು ಸಾಹಿತ್ಯ ಸ್ವಭಾವದಲ್ಲಿತ್ತೇ ಹೊರತು ಸಾಮಾಜಿಕ ಚಳುವಳಿಯ ಭಾಗವಾಗಿರಲಿಲ್ಲ. ರಾಮಕೃಷ್ಣ ಹೆಗಡೆ ಅವರು ಅಧಿಕಾರಕ್ಕೆ ಬರುವಲ್ಲಿ ಲಂಕೇಶ್‌ ಪತ್ರಿಕೆಯು ಪ್ರಮುಖ ಪಾತ್ರವಹಿಸಿತ್ತೆಂಬುದು ಸಂಘಟನಾತ್ಮಕ ಶಕ್ತಿಯಂತಿರಲಿಲ್ಲ. ಪತ್ರಿಕೆಯ ರೂಪಿಸಿದ ಸಾರ್ವಜನಿಕ ಅಭಿಪ್ರಾಯವನ್ನು ನಿರ್ಣಾಯಕ ರಾಜಕೀಯ ಶಕ್ತಿಯೆಂದು ಭಾವಿಸಿದ್ದುದು ಸೂಕ್ತವಾಗಿರಲಿಲ್ಲ. ಹೊರತು ಸ್ವತಃ ಲಂಕೇಶ್‌ರ ಕರ್ನಾಟಕ ಪ್ರಗತಿ ರಂಗವು ಯಾವ ರೀತಿಯಲ್ಲು ಪರಿಣಾಮಕಾರಿಯಾಗಿರಲಿಲ್ಲ. ಸ್ಥಳೀಯವಾಗಿ ವಿಚಾರ ಮಂಥನ ಮಾಡಿದ ಪ್ರಗತಿರಂಗವು ರಾಜಕೀಯ ಶಿಕ್ಷಣದ ಕೆಲಸವನ್ನು ಮಾಡಿದ್ದರೆ ಸಾಕಿತ್ತು. ಸ್ವತಃ ಲಂಕೇಶರು ಗಾಢವಾದ ರಾಜಕೀಯ ಪಕ್ಷದ ನಿರ್ಮಾಣಕ್ಕೆ ತೊಡಗುವುದು ಸಾಧ್ಯವಿರಲಿಲ್ಲ. ಹೆಚ್ಚೆಂದರೆ ತಮ್ಮ ಪತ್ರಿಕೆಯ ಮೂಲಕ ಅವರು ವಿರೋಧ ಪಕ್ಷದ ದನಿಯಾಗಿ ಬರಹ ಪ್ರತಿರೋಧವನ್ನು ಒಡ್ಡಿ ಸರ್ಕಾರಗಳ ಮೋಸವನ್ನು ಬಯಲು ಮಾಡುವುದೇ ಅತ್ಯುತ್ತಮ ರಾಜಕಾರಣವಾಗಿತ್ತು.

ಲಂಕೇಶ್ ಪತ್ರಿಕೆಯ ಪ್ರಮುಖ ವರದಿಗಾರರಾಗಿದ್ದ ರವೀಂದ್ರ ರೇಷ್ಮೆ ಅವರು ರಾಜಕೀಯ ವ್ಯಕ್ತಿಗಳ ಕೃತ್ಯಗಳನ್ನು ಬಯಲಿಗಳೆದದ್ದು ಅಸಾಮಾನ್ಯವಾದದ್ದು. ಅದರಿಂದಲೇ ಕರ್ನಾಟಕದ ರಾಜಕಾರಣದಲ್ಲಿ ಅನೇಕ ಇಕ್ಕಟ್ಟುಗಳು ಎದುರಾಗಿ ಮತಾದಾರರುಜಾಗೃತರಾಗುವಂತಾಯಿತು. ಏಕೀಕರಣಾನಂತರ ಕರ್ನಾಟಕದಲ್ಲಿ ಲಂಕೇಶ್ ಪತ್ರಿಕೆ ಹಾಗೂ ಆ ಪತ್ರಿಕೆಯಲ್ಲಿ ಬರೆದ ಲೇಖಕರ ಬಳಗವು ಪ್ರಬಲವಾದ ಪರಿಣಾಮಗಳನ್ನು ಸಾಹಿತ್ಯ, ರಾಜಕಾರಣ, ಸಂಸ್ಕೃತಿ, ಭಾಷೆ, ಧರ್ಮ, ಜಾತಿ ಲಿಂಗಸಂಬಂಧ ಮುಂತಾದ ಸಂಗತಿಗಳಲ್ಲಿ ತೀವ್ರವಾಗಿ ಮಾಡಿದ್ದಾರೆ. ಲಂಕೇಶ್ ಪತ್ರಿಕೆಯೇ ಒಂದು ಪ್ರತಿರೋಧ ವೇದಿಕೆಯಾಗಿ ದಲಿತ ಬಂಡಾಯದ ಜಾಡಿನ ಆಚೆ ನಿಂತು ಕರ್ನಾಟಕದ ನಾಡುನುಡಿಗೆ ಸಲ್ಲಿಸಿರುವ ಸೇವೆಯು ರಾಜಕೀಯ ಪಕ್ಷವೊಂದು ಪ್ರಾದೇಶಿಕವಾಗಿ ಮಾಡಬಹುದಾದ ಸಾಧನೆಗಿಂತಲೂ ದೊಡ್ಡದಾಗಿದೆ ಹಾಗೆಯೇ ಸಾಹಿತ್ಯ ಪಂಥದ ಸಾಧನೆಯಂತೆಯೇ ಇದೆ. ದಸಂಸದ ರಾಜಕೀಯ ನಿರ್ಧಾರಗಳು ಇದೇ ಕಾಲದಲ್ಲಿ ಗೊಂದಲ್ಲಿದ್ದವು. ಬಿ.ಕೃಷ್ಣಪ್ಪನವರು ಬಿಎಸ್‌ಪಿಯಲ್ಲಿ ಗುರುತಿಸಿಕೊಂಡಂತೆಯೇ ದೇವನೂರು ಮಹದೇವ ಹಾಗೂ ಸಿದ್ದಲಿಂಗಯ್ಯ ಹಾಗೂ ಇನ್ನುಳಿದ ದಲಿತ ನಾಯಕರು ರಾಮಕೃಷ್ಣ ಹೆಗಡೆ ಅವರ ಪರವಾಗಿ ಜನತಾಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಿದರು. ಈ ಬಗೆಯ ವೈರುಧ್ಯವನ್ನು ಚಾರಿತ್ರಿಕ ಉಪಯೋಗವೆಂದು ಕರೆಯಬಹುದಾದರೂ ಈ ಇಬ್ಬರೂ ನಾಯಕರ ಸ್ವಾರ್ಥವನ್ನು ಕೂಡ ಕಾಂಗ್ರೆಸ್ಸಿನ ಹಿಡಿತದಿಂದ ದಲಿತರು ಮುಕ್ತರಾಗಬೇಕು ಎಂಬ ‘ದಸಂಸ’ದ ನಿರ್ಧಾರದಿಂದ ಸಂಘಟನೆಯ ಒಳಗೇ ಭಿನ್ನಾಭಿಪ್ರಾಯಗಳು ತಲೆದೂರಿ ಬಿರುಕುಗಳು ಕಾಣಿಸಿದವು.

ಇದರಿಂದ ನಿರ್ಣಾಯಕ ಪಾತ್ರ ವಹಿಸಬಹುದಾಗಿದ್ದ ದಲಿತ ಮತ ಶಕ್ತಿಯು ರಾಜಕಾರಣದಲ್ಲಿ ಎಡವಿತು. ಬಲಿಷ್ಠ ಭೂಮಾಲೀಕ ಜಾತಿಗಳ ಬಲದಿಂದ ರೂಪುಗೊಂಡಿದ್ದ ಆಗಿನ ಜನತಾಪಕ್ಷವು ದಲಿತರ ಹಿತ ಕಾಯ್ದದ್ದು ಕೇವಲ ದಲಿತ ನಾಯಕರಿಗೆ ಮಣೆ ಹಾಕುವ ಮೂಲಕ. ದಸಂಸದ ಸಂಘಟನಾತ್ಮ ಶಕ್ತಿಯನ್ನು ಅದರ ನಾಯಕರು ದುರುಪಯೋಗ ಮಾಡಿಕೊಂಡರು ಎಂಬ ತೀಕ್ಷ್ಣವಾದ ಆರೋಪಗಳು ಅತೃಪ್ತ ದಲಿತ ನಾಯಕರಿಂದಲೇ ಕೇಳಿಬಂತು. ಸಮಾಜವಾದಿ ರಾಜಕಾರಣವನ್ನು ಬೆಂಬಲಿಸುತ್ತೇವೆ ಎಂಬ ಸಮಜಾಯಿಸಿಯು ದಲಿತ ಸಂಘರ್ಷ ಸಮಿತಿಯ ನಾಯಕರಿಂದ ಬಂತಾದರೂ ದಸಂಸವು ಒಂದಾಗಿಯೇ ಉಳಿಯದಾಯಿತು. ರಾಜಕೀಯವೇ ಬೇರೆ ಸಂಘಟನೆಯ ಹೋರಾಟವೇ ಬೇರೆ ಎಂಬ ವೈರುಧ್ಯ ಕಾಣಿಸಿಕೊಂಡಿತು. ರಾಜಕೀಯ ತೀರ್ಮಾನ ಮತ್ತು ಸಂಘರ್ಷಗಳ ತೀರ್ಮಾನ ಎರಡೂ ಒಂದಾಗಲಿಲ್ಲ. ಸಮುದಾಯಗಳ ತೀರ್ಮಾನಕ್ಕಿಂತ ವ್ಯಕ್ತಿಗತ ತೀರ್ಮಾನಗಳ ವ್ಯತಿರಿಕ್ತವಾದವು. ಒಟ್ಟಿನಲ್ಲಿ ಪ್ರಾದೇಶಿಕ ರಾಜಕಾರಣದ ಯತ್ನಗಳು ಆಯ್ಕೆಗಳು ತೀರ್ಮಾನಗಳು ಕರ್ನಾಟಕದಲ್ಲಿ ಸಮರ್ಥವಾಗಿ ನಾಡುನುಡಿಯ ದನಿಯಾಗಿ ಅಖಂಡ ಸಮುದಾಯ ಪ್ರಜ್ಞೆಯ ಭಾಗವಾಗಿ ಆಗಿಯೇ ಇಲ್ಲ.

ಇದರಿಂದ ಪ್ರಾದೇಶಿಕ ಪಕ್ಷಗಳೆಲ್ಲ ವೈಫಲ್ಯದಲ್ಲೆ ಮುಳುಗುತ್ತಿವೆ. ಇತ್ತೀಚೆಗೆ ಅದೇ ಹಳೆಯ ದಲಿತ ಸಂಘರ್ಷ ಸಮಿತಿಯ ಒಂದು ಬಣ ದೇವನೂರು ಮಹಾದೇವರ ನೇತೃತ್ವದಲ್ಲಿ ಹಿಂದಿನ ಯತ್ನದಂತೆ ರೈತಸಂಘದ ಇನ್ನೊಂದು ಬಣದ ಜೊತೆ ಮೈತ್ರಿ ಮಾಡಿಕೊಂಡು ಸರ್ವೋದಯ ಕರ್ನಾಟಕ ಪಕ್ಷವನ್ನು ಕಟ್ಟಿಕೊಂಡಿದೆ. ಇದು ಹುಟ್ಟಿ ವರ್ಷವಾಗಿದ್ದರ ಅದು ಯಾವ ಗಟ್ಟಿದನಿಯನ್ನು ಮಾಡದೆ ಹೆಸರಿಗೊಂದು ಪಕ್ಷವಾಗಿ ಕೆಲವೇ ವ್ಯಕ್ತಿಗಳಿಗೊಂದು ರಾಜಕೀಯ ವೇದಿಕೆಯಾಗಿ ವಿಪರ್ಯಾಸಗೊಳ್ಳುತ್ತಿದೆ. ನಾಡುನುಡಿಯ ಜನತೆಯ ಸರ್ವೋದಯದ ಕನಸನ್ನು ಕಾಣಲು ಕಷ್ಟಪಡಬೇಕಾಗಿಲ್ಲ. ಅದೊಂದು ಬಿಟ್ಟಿ ಕಾಯಕ ಎಂಬತಿರುವ ಈ ಕಾಲದಲ್ಲಿ ಹಿಂದುಳಿದ ವರ್ಗಗಳ ಗೈರು ಹಾಜರಿಯಲ್ಲಿ ದೇವನೂರು ಮಹದೇವ ಅವರ ಸರ್ವೋದಯ ಕರ್ನಾಟಕದಿಂದ ಯಾರ್ಯಾರಿಗೆ ಸರ್ವೋದಯವಾಗುತ್ತದೊ ಎಂಬುದನ್ನು ಕಾದು ನೋಡಬೇಕಾಗಿದೆ. ಇತ್ತೀಚೆಗಷ್ಟೆ ಜೆ. ಎಚ್.ಪಟೇಲರ ಮಗ ಮಹಿಮಾ ಪಟೇಲರು ರೂಪಿಸಿರುವ ಸ್ವರ್ಣಯುಗ ಎಂಬ ಪ್ರಾದೇಶಿಕ ರಾಜಕೀಯ ಪಕ್ಷವು ಕಾಣಿಸಿಕೊಂಡಿದೆ. ವಿಷಾದವೆಂದರೆ ಈ ಪಕ್ಷಕ್ಕೆ ಕನಿಷ್ಠ ಪ್ರಾಣಾಳಿಕೆಯೇ ಇಲ್ಲವಾಗಿದೆ. ಇಂತಹ ಯತ್ನಗಳಿಂದಲೇ ಕರ್ನಾಟಕದ ರಾಜಕಾರಣ ಸೊರಗುತ್ತಿರುವುದು. ಒಟ್ಟಿನಲ್ಲಿ ಏಕೀಕರಣೋತ್ತರ ಕರ್ನಾಟಕದ ಪ್ರಾದೇಶಿಕ ರಾಜಕೀಯ ಪಕ್ಷಗಳು ಹುಟ್ಟುತ್ತಲೇ ಇವೆ. ಸಾಯುತ್ತಲೇ ಇವೆ. ವೈಯಕ್ತಿಕ ಹಿತದ ಹಣವಂತರ ಪ್ರಾದೇಶಿಕ ರಾಜಕೀಯ ಪಕ್ಷಗಳು ಕೂಡ ಹುಟ್ಟಿ ಸಾಯುತ್ತಿವೆ. ಭವಿಷ್ಯದ ಕರ್ನಾಟಕ ಈ ಹಾದಿಯಲ್ಲೆ ಮುಂದೆ ಸಾಗಬೇಕಿದೆ.