ಜಾತಿ ವರ್ಗ ಲಿಂಗ ತಾರತಮ್ಯಗಳು ಎಲ್ಲ ಸಮಾಜಗಳಲ್ಲೂ ಬಹುರೂಪಗಳಲ್ಲಿರುತ್ತವೆ. ಈ ಮೂರು ಅಂಶಗಳು ಪ್ರಾಚೀನ ಕರ್ನಾಟಕದಿಂದಲೂ ಸಮಾಜದ ಕೇಂದ್ರ ರಚನೆಗಳಾಗಿ ಸಾಗಿ ಬಂದಿವೆ. ವಶಾಹತುಶಾಹಿ ಜಗತ್ತಿನ ಸಂಬಂಧದಿಂದ ಕನ್ನಡ ಸಮಾಜವೂ ರೂಪಾಂತರಗೊಂಡಿದೆಯಷ್ಟೆ. ಇಪ್ಪತ್ತೊಂದನೆ ಶತಮಾನದ ಕನ್ನಡ ಸಮಾಜದಲ್ಲಿ ಪ್ರಜಾಪ್ರಭುತ್ವವು ಸಾಮಾಜಿಕ ರಚನೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ದಾಸ್ಯದ ಸಾಮಾಜಿಕ ವ್ಯವಸ್ಥೆಗಳು ಕುಗ್ಗಿವೆ ಹಾಗೂ ಬದಲಿ ವೇಷ ಧರಿಸಿವೆ. ಏಕೀಕರಣ ದೃಷ್ಟಿಯು ಒಂದು ಸಮಾಜವನ್ನು ತಿದ್ದುಪಡಿ ಮಾಡಬಲ್ಲದು. ಸ್ವಾತಂತ್ರ‍್ಯವಿರುವ ಸಮಾಜದ ರೀತಿ ನೀತಿಯು ಹೆಚ್ಚು ಬಾರಿ ಸ್ವ ಅನನ್ಯತೆಯನ್ನು ಸಾಧಿಸಿಕೊಳ್ಳಲು ಮುಂದಾಗಿರುತ್ತದೆ. ಬಹುರೂಪಿ ಸಮುದಾಯಗಳ ಸಾಮಾಜಿಕ ರಚನೆಗಳು ಇಂತಲ್ಲಿ ಆಕರ್ಷಣೆ ವಿಕರ್ಷಣೆ ವೈರುಧ್ಯಗಳ ಜೊತೆಗೆ ಸಂಘರ್ಷವನ್ನು ಒಳಗೆ ಕಾಯ್ದುಕೊಂಡಿರುತ್ತವೆ. ಜಾತಿಯಿಂದ ಛಿದ್ರಗೊಂಡ ಸಮಾಜಗಳಲ್ಲಿ ಇಂತಹ ಪ್ರವೃತ್ತಿಗಳು ಮತ್ತಷ್ಟು ಸಂಕೀರ್ಣವಾಗಿರುತ್ತವೆ. ಅನೇಕ ಶತಮಾನಗಳಿಂದ ರೂಢಿಗತ ಸಾಮಾಜಿಕ ವ್ಯವಸ್ಥೆಗೆ ಹೀಡಾಗಿರುವ ಕನ್ನಡ ಸಮಾಜದ ವರ್ತಮಾನವು ಹಳೆಯ ರೂಪಗಳನ್ನು ಆಧುನಿಕತೆಯ ಜೊತೆ ನವೀಕರಿಸಿಕೊಂಡೇ ಬಂದಿದೆ. ಹೀಗಾಗಿ ಕನ್ನಡ ಸಮಾಜವು ತನ್ನ ಹೊರ ರಚನೆಯಲ್ಲಿ ಅಲಂಕಾರಿಕವಾಗಿದ್ದರೂ ಮೂಲಭೂತ ಅಧಿಕಾರ ಶ್ರೇಣಿಯಲ್ಲಿ ಪುರಾತನ ಜಾಲಕ್ಕೇ ಬದ್ಧವಾಗಿದೆ.

ಎಪ್ಪತ್ತರ ದಶಕದ ಪಲ್ಲಟಗಳು ಕನ್ನಡ ಸಮಾಜವನ್ನು ಅಲುಗಾಡಿಸಿದ್ದೂ ಮತ್ತೊಂದೆಡೆಗಿದೆ. ವಿಶ್ವದ ಸಾಮೀಪ್ಯವೂ ಬಹು ಸಮಾಜಗಳ ನಂಬಿಕೆಗಳನ್ನು ಸಡಿಲಿಸಿದೆ. ಕನ್ನಡ ಸಮಾಜ ಎನ್ನುವುದು ಕೇವಲ ಭಾಷೆಯ ಆಧಾರದ ರಚನೆಯಲ್ಲ. ಅದು ಆಳದಲ್ಲಿ ಜಾತಿಯನ್ನೂ ಮತಧರ್ಮಗಳ ಮೌಲ್ಯಗಳನ್ನೂ ಶೋಷಣೆಯ ತಂತ್ರ ಮಂತ್ರಗಳನ್ನೂ ಅಧಿಕಾರ ಶ್ರೇಣಿಯ ವ್ಯವಸ್ಥೆಯನ್ನೂ ಭದ್ರವಾಗಿ ಅಳವಡಿಸಿಕೊಂಡು ಬೆಳೆದಿದೆ. ಹೀಗಾಗಿಯೇ ಕರ್ನಾಟಕದ ಏಕೀಕರಣದ ಪ್ರಶ್ನೆಯಲ್ಲಿ ಈ ಎಲ್ಲ ಅಂಶಗಳು ಸೇರ್ಪಡೆಯಾಗಿ ಕನ್ನಡ ನಾಡಿನ ರೂಪವನ್ನು ಸ್ಥಾಪಿಸಿಕೊಂಡಿರುವುದು. ವರ್ತಮಾನದ ಕನ್ನಡ ಸಮಾಜದ ಸ್ವರೂಪವನ್ನು ಈ ಮುಂದಿನಂತೆ ಗುರುತಿಸಿಕೊಳ್ಳಬಹುದು.

೧. ಹೊಸ ಬಗೆಯ ಜಾತಿ ಸ್ವರೂಪಗಳು, ಅಸಮಾನತೆಯ ಕೌಶಲ್ಯಗಳು, ಲಿಂಗತಾರತಮ್ಯದ ಚಾಣಾಕ್ಷತೆಗಳು, ವರ್ಗದ ವಿಭಿನ್ನರೂಪಗಳು, ಶೋಷಣೆಯ ಸಂಕೀರ್ಣ ಹೊಸ ಬಗೆಗಳು ಒಟ್ಟು ಸಾಮಾಜಿಕ ರಚನೆಯಲ್ಲಿ ಸೇರಿಕೊಳ್ಳುತ್ತಿದ್ದು ಹಳೆಯ ಎಲ್ಲ ತಾರತಮ್ಯ, ಪೂರ್ವಾಗ್ರಹ, ವಿಧಿ ನಿಷೇಧಗಳು ಹೊಸ ಕಾಲದಲ್ಲಿ ನವೀಕರಿಸಲ್ಪಟ್ಟು ಸಮುದಾಯಗಳು ಸ್ವ ಅವಕಾಶಕ್ಕಾಗಿ ಪೈಪೋಟಿಯನ್ನು ಒಟ್ಟಿಗೇ ನಡೆಸುತ್ತಿದ್ದು ಸಂಕೀರ್ಣವಾದ ಮಾನವ ಸಂಬಂಧಗಳು ಬೆಳೆಯುತ್ತಿವೆ.

೨. ತಾಂತ್ರಿಕ ಜೀವನ ಕ್ರಮಗಳು, ಔದ್ಯೋಗಿಕ ಒತ್ತಡಗಳು, ಅನ್ಯತೆಯ ಸ್ವಭಾವಗಳು, ಸಂಕುಚಿತ ವಾಸದ ನೆಲೆಗಳು, ತೀವ್ರ ಜನಸಾಂದ್ರತೆ, ಅಸ್ವಸ್ಥ ಸಾಮಾಜಿಕತೆ, ಅಸಹಾಯಕ ಪರಿಸರ, ಅಪರಾಧಿ ಪ್ರವೃತ್ತಿ, ಭ್ರಷ್ಟತೆಯ ವ್ಯಾಪಕತೆ, ಹಿಂಸೆಯ ಪ್ರೇರಣೆಗಳು, ಹಣದ ವಿಪರೀತ ಪರಿಣಾಮಗಳು, ಬೆಳೆಯುತ್ತಿರುವ ವಿರೂಪ ನಗರಗಳು, ಅತಿಯಾದ ಮಾರುಕಟ್ಟೆಯ ಜಾಲ, ನಿಯಂತ್ರಣವಿಲ್ಲದ ಆಡಳಿತ ವ್ಯವಸ್ಥೆ, ಹೆಚ್ಚುತ್ತಿರುವ ನಿರಂತರ ಬೆಲೆಗಳು, ಪರಿಸರಮಾಲಿನ್ಯ, ಜನದಟ್ಟಣೆ, ಸಾರಿಗೆ ಒತ್ತಡ, ಅಭಿವೃದ್ಧಿಯ ಲೂಟಿಕೋರತನ, ದುಷ್ಟ ರಾಜಕರಣ, ಅನೈತಿಕ ನಡತೆಯ ವಿರಾಟ್ ರೂಪ ಹಾಗೂ ಸೌಲಭ್ಯವಂಚಿತ ಅನೇಕ ಸಮುದಾಯಗಳು, ಬೆಳೆಯುತ್ತಿರುವ ಕೊಳೆಗೇರಿಗಳು, ಮಹಿಳೆಯರ ಮೇಲಿನ ಹಲ್ಲೆ ಅತ್ಯಾಚಾರ ಹಿಂಸೆಗಳು ಮತ್ತು ವಿಪರೀತವಾಗುತ್ತಿರುವ ವಲಸೆಗಳು, ರೈತರ ಸಮಸ್ಯೆಗಳು, ಅಲೆಮಾರಿ ಆದಿವಾಸಿಗಳ ದಿಕ್ಕೆಟ್ಟ ದೀನಸ್ಥಿತಿ, ಜಾಗತೀಕರಣದ ವಿರಾಟ್ ಜಾಲಗಳು, ಮತೀಯವಾದ, ನಕ್ಸಲ್‌ವಾದ, ಭಯೋತ್ಪಾದನೆ ಹಾಗೂ ಮಾಹಿತಿ ತಂತ್ರಜ್ಞಾನದ ಅಂತರ್‌ ಜಾಲಗಳೆಲ್ಲವೂ ಒಟ್ಟಿಗೇ ಘಟಿಸುತ್ತಾ ಈ ಎಲ್ಲ ಸಮಸ್ಯೆಗಳು ಬಿರಿಯುತ್ತಾ ಒಟ್ಟು ಕನ್ನಡ ಸಮಾಜದ ಸ್ವರೂಪವು ಭಿನ್ನವಾಗುತ್ತಲೇ ಅನೇಕ ಸುಧಾರಣೆಗಳನ್ನು ಮಾಡಿಕೊಳ್ಳುತ್ತ ಸಂಕೀರ್ಣ ಸಮಾಜವಾಗುತ್ತಿದೆ.

೩. ಕೃತಕವಾದ ಮಾನವ ಸಂಬಂಧಗಳು ಬೆಳೆಯುತ್ತಿವೆ. ವೇಗದ ಜನಜೀವನವೆ ಮುಖ್ಯವಾಗುತ್ತಿವೆ. ಹೀಗಾಗಿ ಆಧುನೀಕೋತ್ತರ ಕನ್ನಡ ಸಮಾಜವು ಗತಕಾಲದ ಸಮಾಜದಲ್ಲಿದ್ದ ನಂಬಿಕೆಗಳಿಂದ ಕಳೆದುಹೋಗುತ್ತಿದೆ. ಸಂಸ್ಕೃತಿಯ ನೆನಪುಗಳು ಕೂಡ ಮರೆಯಾಗುತ್ತಿವೆ. ವ್ಯಕ್ತಿ ಕೇಂದ್ರಿತ ಯತ್ರಗಳೇ ಮೊದಲಾಗಿದ್ದು ವ್ಯಕ್ತಿವಾದಿ ನಂಬಿಕೆಗಳು ಸಮಾಜದಲ್ಲಿ ಬಲವಾಗುತ್ತಿವೆ. ಅನುಭೋಗಿ ಪ್ರವೃತ್ತಿ ವಿಪರೀತವಾಗುತ್ತಿದ್ದು ಸರಳ ಸಜ್ಜನ ಜೀವನ ವಿಧಾನ ಹಿಂದೆ ಸರಿಯುತ್ತಿದೆ. ಹೊಸ ಅಲಂಕಾರಗಳಲ್ಲಿ ಸಾಮಾಜಿಕ ನಡತೆಯು ವ್ಯಾಪಿಸುತ್ತಿದೆ. ಸಹನೆ, ವಿಶ್ವಾಸ, ತಾಳ್ಮೆ ಕಡಿಮೆ ಆಗುತ್ತಿವೆ. ಸಹಜೀವನ ಬೇಡವಾಗುತ್ತಿದೆ. ದಿಢೀರನೆ ಎಲ್ಲವೂ ಕೈಗೆಟುಕಬೇಕು. ಕಷ್ಟವೇ ಇರಬಾರದೆಂಬ ಭಾವನೆ ಹೆಚ್ಚುತ್ತಿದೆ. ಪ್ರಾಮಾಣಿಕತೆಗಿಂತಲೂ ಚಾಣಾಕ್ಷತೆಯೇ ಮುಖ್ಯವಾಗುತ್ತಿದ್ದು ಸೇವಾ ಮನೋಭಾವದಲ್ಲಿ ವ್ಯಾಪಾರಿ ಮನೋಧರ್ಮ ಬೇರೂರಿದೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದು ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದು ಸಾಮಾಜಿಕ ಅಸಮಾನತೆಗಳು ವಿಷಮತೆಗಳು ಅಂತರಗಳು ದ್ವಿಗುಣವಾಗುತ್ತಿವೆ.

೪. ರಾಷ್ಟ್ರ, ರಾಜ್ಯ, ನಾಡು, ನುಡಿ, ಸಮಾಜ, ಸಂಸ್ಕೃತಿ, ಸಾಹಿತ್ಯ, ಸಮುದಾಯಗಳ ಭಾವನಾತ್ಮಕ ಸಂಬಂಧ ಕರಗುತ್ತಿದೆ. ಸ್ವಹಿತಾಶಕ್ತಿಯ ಸಾಧನೆಯೇ ಅಂತಿಮವೆನಿಸುತ್ತದೆ. ಸಮಾಜಗಳೇ ಖಾಸಗೀ ವಲಯದ ಸ್ವಭಾವವನ್ನು ಅಳವಡಿಸಿಕೊಳ್ಳುತ್ತಿವೆ. ಜಾಗತಿಕ ಸಂಬಂಧಗಳಲ್ಲಿ ಕರಗಿಹೋಗಲು ಅನೇಕ ವರ್ಗಗಳು ಮುಂದಾಗಿವೆ. ಕನ್ನಡ ಸಮಾಜದ ಮನಸ್ಸು ಸ್ಥಳೀಯ ಸಾಂಸ್ಕೃತಿಕ ಸಂವೇದನೆಯನ್ನು ಕಳೆದುಕೊಳ್ಳುತ್ತ ವರ್ತಮಾನದ ಜಾಗತಿಕ ರೂಪಗಳಲ್ಲಿ ಸೇರ್ಪಡೆಯಾಗುತ್ತಿದೆ. ದುಡಿವ ರೀತಿಯೇ ಬದಲಾಗಿದೆ. ಆಹಾರ ಕ್ರಮವೂ ರೂಪಾಂತರಗೊಂಡು ದೈನಂದಿನ ಆಚಾರವಿಚಾರಗಳು ಪರಕೀಯವಾಗುತ್ತಿವೆ. ಜೀವನ ಶ್ರದ್ಧೆ, ಸಾಮಾಜಿಕ ಶ್ರದ್ಧೆ, ನಾಡಿನ ಶ್ರದ್ಧೆ ಈ ಮೂರು ಸಂಗತಿಗಳು ವ್ಯಕ್ತಿವಾದಿ ಸ್ವಾರ್ಥದಲ್ಲಿ ಅರ್ಥ ಕಳೆದುಕೊಳ್ಳುತ್ತಿವೆ.

೫. ನಗರೀಕರಣ ವಿಪರೀತವಾಗುತ್ತಿದ್ದು ಹಳ್ಳಿಗಳು ಕೆಟ್ಟ ಅನುಕರಣೆಗೆ ಸಿಲುಕಿ ಅಲ್ಲಿನ ಸಮಾಜಗಳಿಗೆ ಸೂಕ್ತ ಆಯ್ಕೆಗಳು ಇಲ್ಲವಾಗುತ್ತಿವೆ. ಹಳ್ಳಿಯ ಯುವ ಪೀಳಿಗೆಯು ನಗರದ ಹುಸಿ ಜಾಲಕ್ಕೆ ಹೆಚ್ಚು ಆಕರ್ಷಿತವಾಗುತ್ತಿದೆ. ಹಳ್ಳಿಯ ದುಡಿಮೆಯನ್ನೆ ನಿರಾಕರಿಸುವ ಪೇಟೆಯ ಹಣದಾಮಿಷದ ಕೂಲಿಯೇ ಆಪ್ತವಾಗುವ ಸ್ಥಿತಿ ತೀವ್ರವಾಗಿ ಉಂಟಾಗುತ್ತಿದ್ದು ಹಳ್ಳಿಗಳ ಕೃಷಿ ಚಟುವಟಿಕೆಗಳ ಮೇಲೆ ಹೆಚ್ಚಿನ ಹೊಡೆತ ಬಿದ್ದಿದೆ. ರೈತರಲ್ಲಿ ಹತಾಶೆ, ಕೂಲಿ ಕಾರ್ಮಿಕರಲ್ಲಿ ವಿಷಾದ ಹೆಚ್ಚುತ್ತಿದ್ದು ಹಳೆ ಕಾಲದ ಉತ್ಪಾದನಾ ವಿಧಾನಗಳೇ ನಶಿಸುತ್ತಿದ್ದು ಹೊಸ ವ್ಯವಸ್ಥೆಯ ಪ್ರವಾಹದಲ್ಲಿ ಗ್ರಾಮಾಂತರ ಕನ್ನಡ ಸಮಾಜವು ದಿಕ್ಕೆಡುತ್ತಿದೆ.

೬. ಸಮೂಹ ಮಾಧ್ಯಮಗಳು ಇಡೀ ಕನ್ನಡ ಸಮಾಜಗಳ ಸ್ವಭಾವ, ಅಭಿರುಚಿ, ನಡತೆ, ನಂಬಿಕೆ, ಜೀವನ ಕ್ರಮ, ಮನಸ್ಥಿತಿಯ ಮೇಲೆ ಮೋಹಕವಾದ ವಿಕೃತದಾಳಿಯನ್ನೆ ಮಾಡುತ್ತಿದ್ದು ಒಳ್ಳೆಯದೆಂದು ಸಾಮಾಜಿಕವಾಗಿ ಅಂಗೀಕಾರವಾಗಿದ್ದುದೆಲ್ಲ ಸ್ಥಾನಕಳೆದುಕೊಳ್ಳುತ್ತಿದೆ. ನೋಡುವುದನ್ನೇ ಕೇಳಿಸಿಕೊಳ್ಳುವುದನ್ನೇ ಅಂತಿಮವೆಂದು ತಿಳಿಯುವ ಸ್ಥಿತಿಯಲ್ಲಿ ಸಮೂಹ ಸನ್ನಿ ಸ್ವಭಾವವು ಹೆಚ್ಚುತ್ತಿದೆ. ಗಾಢವಾಗಿ ಆವಾಹಿಸಿಕೊಳ್ಳುವು, ಅಂತರಂಗದಲ್ಲಿ ಧ್ಯಾನಿಸುವ, ಏಕಾಂತದಲ್ಲಿ ಮಿಡಿಯುವ, ದಿವ್ಯ ತನ್ಮತೆಯಲ್ಲಿ ಅರಿಯುವ, ಸಮಷ್ಠಿಯಲ್ಲಿ ಬೆರೆಯುವ, ಮಾನವ ಪ್ರೇಮವನ್ನು ಹುಡುಕುವ ಮಾನವೀಯ ಸ್ವಭಾವಗಳು ಅರ್ಥಕಳೆದುಕೊಳ್ಳುತ್ತಿವೆ. ಹುಸಿಭಕ್ತಿ, ಹುಸಿ ಧಾರ್ಮಿಕತೆ, ಹುಸಿ ಸಾಮಾಜಿಕತೆಯೇ ಮುಂದಾಗಿ ನಿಜವಾದ ಉತ್ಕಟ ದೈವಿಕತೆಯೂ ಇಲ್ಲವಾಗುತ್ತಿದೆ. ಸೃಜನಶೀಲವಾದ ಸಾಮಾಜಿಕ ಕ್ರಿಯೆಗಳು ಬೇಡವಾಗಿ ವ್ಯಾಪಾರಿ ಕೌಸಲ್ಯವೇ ಪರಿಗಣಿಸಲ್ಪಡುತ್ತಿದೆ. ಶಿಕ್ಷಣದ ನೀತಿಯೇ ವ್ಯಾಪಾರಕ್ಕೀಡಾಗಿ ಜ್ಞಾನ ವ್ಯವಸ್ಥೆಗಳು ಸರಕಾಗುತ್ತಿವೆ. ಅಂತೆಯೇ ಪ್ರಾಥಮಿಕಜ್ಞಾನ ಪ್ರಕಾರಗಳೆಲ್ಲ ನಶಿಸುತ್ತಿದ್ದು, ಆಧುನಿಕೋತ್ತರ ಸಮಾಜಗಳ ವಂಚಕತೆಯು ವ್ಯಾಪಿಸುತ್ತಿದೆ. ಹೀಗಾಗಿ ಒಟ್ಟು ಸಮಾಜದ ಗತಿಶೀಲತೆಯು ಗುಣಾತ್ಮಕತೆಯ ಹೊರಗಿನ ಶಕ್ತಿಗಳ ಜೊತೆ ಕೂಡಿಕೊಳ್ಳುತ್ತಿದೆ.

ಈ ಬಗೆಯ ಸಾಮಾಜಿಕ ಪ್ರಕ್ರಿಯೆಗಳು ಸಾಗುತ್ತಿದ್ದರೆ ಮತ್ತೊಂದೆಡೆ ಇದೇ ಕನ್ನಡ ಸಮಾಜದ ಒಳಗೆ ಜಾತಿವ್ಯವಸ್ಥೆಯ ಚಹರೆಗಳು ಕೂಡ ಹಾಗೆ ಉಳಿದುಕೊಂಡಿವೆ. ಇವೆಲ್ಲವೂ ಹಾಗೇ ಶಾಶ್ವತವಾಗಿರುವ ಗುಣಗಳೇನಲ್ಲ. ಎಲ್ಲ ಸಮಾಜಗಳ ಚಲನೆಯಲ್ಲೂ ಇಂತಹ ನಡತೆಗಳು ಇರುವಂತವೇ. ಹೀಗಾಗಿ ಭವಿಷ್ಯದಲ್ಲಿ ಹೀಗೆ ಕಾಣುತ್ತಿರುವ ಅಂಶಗಳು ಸಕಾರಾತ್ಮಕ ಸ್ವಭಾವವನ್ನು ಹೊಂದಿಸಿಕೊಳ್ಳಲೇಬೇಕು. ಪ್ರತಿಯೊಂದು ಕಾಲದ ಸಮಾಜವು ಬೇಕಾದ ಅಗತ್ಯಗಳನ್ನು ಕೆಟ್ಟು ಹಾಗೂ ಒಳ್ಳೆಯ ಎರಡೂ ದಾರಿಗಳಲ್ಲಿ ಪಡೆಯುವುದು ಸಾಮಾಜಿಕ ಪ್ರಕ್ರಿಯೆಯ ರೀತಿಯಾಗಿರುತ್ತದೆ. ಯಾವ ಸಮಾಜವೂ ಪರಿಪೂರ್ಣವಲ್ಲ. ಹಾಗೆಯೇ ಎಲ್ಲ ಸಮಾಜಗಳ ತಪ್ಪಿನಿಂದಲೇ ಸರಿದಾರಿಗೆ ಚಲಿಸುವುದು. ಕನ್ನಡ ಸಮಾಜವು ಜಾಗತಿಕ ಜಾಲಕ್ಕೆ ಒಳಗಾಗುವ ಅವಸರದಲ್ಲಿ ಸಿಲುಕಿರುವುದರಿಂದಲೇ ಸಾಮಾಜಿಕ ರೀತಿನೀತಿಗಳು ಹೀಗೆ ಏರುಪೇರಾಗಿರುವುದು.

ಇಂತಹ ಪಲ್ಲಟಗಳಿಗೆ ಒಳಗಾಗಿರುವ ಕನ್ನಡ ಸಮಾಜವು ಏಕೀಕರಣದ ಮೌಲ್ಯಗಳ ಆಚೆಗಿದೆ. ಜಗತ್ತಿನ ಅಭಿವೃದ್ಧಿಯ ಜಾಲ ವ್ಯಾಪಿಸಿರುವಲ್ಲಿ ಕನ್ನಡ ಭಾಷೆಗೂ ಮಿಗಿಲಾಗಿ ಆ ಭಾಷೆಯ ಸಮೂಹವೇ ಅಪಾಯದ ಅಂಚಿನಲ್ಲಿದೆ ಎಂದೂ ಹೇಳಲಾಗುತ್ತಿದೆ. ಸಮಾಜಗಳ ಪರಿವರ್ತನೆಯು ವಿರಾಟ್ ಸ್ವರೂಪದಲ್ಲಿ ಆಗುವುದರಿಂದಲೇ ಅದನ್ನು ನಿಯಂತ್ರಿಸಲು ಕಷ್ಟವಾಗುವುದು. ವಿಕಾಸದ ಕ್ರಮ ತಪ್ಪಿ ಜರುಗುವ ಯಾವ ಬದಲಾವಣೆಯೂ ದೀರ್ಘಕಾಲೀನ ಮೌಲ್ಯಗಳನ್ನು ಸೃಷ್ಟಿಸಲಾರದು. ಹೀಗಾಗಿಯೇ ಇಡೀ ಕನ್ನಡ ಸಮಾಜವು ಕ್ಷಣಿಕತೆಯಲ್ಲೆ ಹೆಚ್ಚು ತೃಪ್ತಿ ಪಟ್ಟುಕೊಳ್ಳುತ್ತಿದೆ. ಬಳಸಿ ಬಿಸಾಡುವ, ಲಯವಾಗಲೆಂದೇ, ಈ ಕ್ಷಣಕ್ಕೆ ಮಾತ್ರವೇ ಬದ್ಧವಾಗುವ ಮೌಲ್ಯ ವ್ಯವಸ್ಥೆಯು ಸಮಾಜದಲ್ಲಿ ದೀರ್ಘಕಾಲೀನ ಒಪ್ಪಂದಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಮಾಜದ ಮೂಲ ಮೌಲ್ಯಗಳು ಯಾವ ಕಾಲಕ್ಕೂ ವಿಕಾಸದ ಕಾರಣಕ್ಕಾಗಿ ಬೇಕಾಗಿರುತ್ತವೆ. ಕನ್ನಡ ಸಮಾಜದಲ್ಲಿ ಬದಲಾಗುತ್ತಿರುವುದೆಲ್ಲ ಕೆಟ್ಟ ರೀತಿಯಲ್ಲೇ ಇದೆ ಎಂದಲ್ಲ. ಒಳಿತಿನ ಪ್ರಮಾಣವು ಸಾಕಷ್ಟಿದೆ.

ನಗರೀಕರಣಕ್ಕೀಡಾಗುವ ಸಮಾಜಗಳ ಸ್ಥಿತಿ ಒಂದಾದರೆ ಗ್ರಾಮಾಂತರ ಕನ್ನಡ ಸಮಾಜದಲ್ಲಿ ಗತ ಚಹರೆಗಳು ತಮ್ಮ ಉಳಿವಿಗಾಗಿ ಬೇರೊಂದು ಉಪಾಯಗಳನ್ನು ಕಂಡುಕೊಳ್ಳುತ್ತಿವೆ. ಸಾಂಸ್ಕೃತಿಕ ಚಹರೆಗಳ ಮೂಲಕ ತಮ್ಮ ಅಸ್ತಿತ್ವವನ್ನು ಪ್ರಧಾನ ಧಾರೆಗಳ ಜೊತೆ ಜೋಡಿಸಿಕೊಳ್ಳಲು ಹೆಣಗಾಡುವ ಅಲಕ್ಷಿತ ಹಿಂದುಳಿತ ವರ್ಗಗಳ ಸಮಾಜವು ರಾಜಕೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಇಂತವರ ನಡುವೆಯೇ ಆದಿವಾಸಿ ಅಲೆಮಾರಿ ಸಮಾಜಗಳು ಭಗ್ನವಾಗಿ ಮತ್ತಷ್ಟು ಆತಂಕದಲ್ಲಿ ಕರಗಿ ಹೋಗುತ್ತಿವೆ. ಇವೆಲಕ್ಕಿಂತಲೂ ಮುಖ್ಯವಾಗಿ ಒಂದು ನಾಡಿನ ಅರ್ಧ ಭಾಗವಾಗಿರುವ ಮಹಿಳಾ ಸಮಾಜವು ಆಧುನಿಕತೆಯ ಎಲ್ಲ ಕೆಟ್ಟ ಪರಿಣಾಮಗಳಿಗೆ ಬಲಿಯಾಗಬೇಕಾದ ಅಪಾಯವೂ ಇದೆ. ಬದಲಾವಣೆಯ ಪ್ರಕ್ರಿಯೆಗಳಲ್ಲಿ ಸ್ತ್ರೀಯರಿಗೆ ಉಪಯೋಗವಾಗಿರುವುದು ಬೇರೆ. ಅಂತಹ ಉಪಯುಕ್ತತೆಯೂ ಅನೇಕ ವೇಳೆ ನ್ಯಾಯೋಚಿತವಾಗಿರುವುದಿಲ್ಲ. ಮಹಿಳಾ ಸಮಾಜವು ಪುರುಷ ಸಮಾಜದ ಬದಲಾವಣೆಗಳಿಗೆ ಮಾತ್ರವೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಸ್ವತಃ ಮಹಿಳಾ ಸಮಾಜ ರೂಪಿಸುವ ಬದಲಾವಣೆಗಳು ಪರಿಗಣಿಸಲ್ಪಡುತ್ತಿಲ್ಲ. ಸ್ತ್ರೀಯರ ಸಂವೇದನೆಯನ್ನು ಪುರುಷ ಪ್ರಧಾನ ವ್ಯವಸ್ಥೆಯು ತನ್ನ ಅನುಕೂಲಕ್ಕೆ ತಕ್ಕಂತೆ ಹಿಂದಿನಿಂದಲೂ ಬಳಸಿಕೊಂಡಿರುವುದರಿಂದ ಸಾಮಾಜಿಕ ವ್ಯವಸ್ಥೆಯ ಒಟ್ಟು ಬದಲಾವಣೆಯೆ ಅಸಮಾನತೆಯಲ್ಲಿ ಅನೀತಿಯಲ್ಲಿ ಸಾಗಿದೆ. ಈ ಬಗೆಯ ಇಕ್ಕಟ್ಟಿನಲ್ಲಿ ಕನ್ನಡ ಸಮಾಜದ ಒಳಗೇ ಇರುವ ಅಲ್ಪಸಂಖ್ಯಾತ ಸಮಾಜಗಳ ಗತಿಶೀಲತೆಯು ಜೊತೆಗೂಡಿದಂತೆಯೂ ಇಲ್ಲದಿರುವಂತೆಯೂ ಆಲಿಪ್ತ ನೀತಿ ಅನುಸರಿಸಿದಂತಿರುವುದು ವಿಚಿತ್ರವಾಗಿದೆ.

ಅತಂತ್ರ ಹಾಗೂ ಮುರುಕು ಸ್ಥಿತಿಯ ನೊಂದ ಹಾಗೂ ಗಾಯಗೊಂಡ ನೂರಾರು ಸಮುದಾಯಗಳು ಕರ್ನಾಟಕದಲ್ಲಿ ಈಗಲೂ ಹೆಣಗಾಡುತ್ತಿವೆ. ಇಂತಹ ಸಮಾಜಕ್ಕೆ ಆಧುನಿಕ ಪರಿವರ್ತನೆಗಳ ಅಗತ್ಯವಿಲ್ಲ. ಬದುಕುಳಿಯಲು ಮಾತ್ರ ಒಂದಿಷ್ಟು ಕಿರು ಅವಕಾಶಗಳನ್ನು ಬೇಡುವ ಸಮುದಾಯಗಳು ಭದ್ರತೆಯೇ ಇಲ್ಲದೆ ಸಮಾಜದ ಎಲ್ಲ ಶಾಪಗಳಿಗೆ ಹೀಡಾಗುತ್ತಿವೆ. ಮತ್ತೆ ಕೆಲವು ತಳ ಜಾತಿಗಳು ತಮ್ಮ ಸಂಸ್ಕೃತಿಗಳ ಚಹರೆಯ ಮೂಲಕ ಸಂವಿಧಾನ ಬದ್ದ ಹಕ್ಕುಗಳಿಂದ ನ್ಯಾಯದ ಬದಲಾವಣೆಗಳನ್ನು ಕಂಡು ಕೊಳ್ಳುತ್ತಲೂ ಇವೆ. ಎಪ್ಪತ್ತರ ದಶಕದ ಪುನರುಜ್ಜೀವನದಂತಹ ಪಲ್ಲಟಗಳು ಒಟ್ಟು ಕನ್ನಡ ಸಮಾಜಗಳ ಇವತ್ತಿನ ರೀತಿ ನೀತಿಗೂ ಪರೋಕ್ಷ ಪರಿಣಾಮಗಳನ್ನು ಮಾಡಿದೆ. ಆದರೆ ವರ್ತಮಾನದ ಸಾಮಾಜಿಕ ನೀತಿಯು ಬಹಳ ಸರಳೀಕರಣಗೊಂಡುದಾಗಿದೆ. ಕನ್ನಡ ಸಮಾಜದ ಒಳಗೆಯೇ ಜಾಗತಿಕ ಸಮುದಾಹ ಹಾಗೂ ಸಮಾಜಗಳ ಜೊತೆ ಗುರುತಿಸಿ ಕೊಳ್ಳುವಷ್ಟು ಪ್ರಬಲವಾಗಿ ಬೆಳೆಯುತ್ತಿರುವ ಸಾಮಾಜಿಕ ಗುಂಪುಗಳು ಕೂಡ ಅಸ್ತಿತ್ವದಲ್ಲಿವೆ. ಅಭಿವೃದ್ಧಿಯ ಭ್ರಮೆಗಳು ಸಮಾಜದಲ್ಲಿ ಇಷ್ಟೆಲ್ಲ ವ್ಯತ್ಯಾಯಗಳನ್ನು ಮಾಡಬಲ್ಲವು. ಪ್ರತಿಷ್ಠಿತ ವರ್ಗ ನಾಡುನುಡಿಯನ್ನು ನೆಪ ಮಾತ್ರಕ್ಕೆ ಉಳಿಸಿಕೊಂಡು ಪಲಾಯನ ಮಾಡುತ್ತ ಅಭಿವೃದ್ಧಿಯ ಹುಚ್ಚು ಕುದುರೆ ಸವಾರಿಯಲ್ಲಿ ಬಡ ಸಮಾಜಗಳನ್ನು ಕ್ರೂರವಾಗಿ ದಾಟಿಕೊಂಡು ಮಾಯವಾಗುತ್ತಿದೆ.

ಇದರಲ್ಲೆ ಸಾಮಾಜಿಕ ಸಾಮರಸ್ಯವು ಕೂಡ ಹದಗೆಡುತ್ತಿದೆ. ಒಳಜಾತಿಗಳಲ್ಲೆ ಪೈಪೋಟಿ, ಒಳಜಗಳ ಬೆಳೆದು ಅವಿಭಾಜ್ಯವಾಗಿದ್ದ ಸಮಾಜಗಳೇ ತಮಗೆ ತಾವೇ ಸೀಳಿಕೊಳ್ಳುತ್ತಾ ಸಮುದಾಯಗಳು ದೂರಸರಿಯುತ್ತಿವೆ. ಜಾತಿಯ ಒಳಪಂಗಡಗಳ ಸಾವಯವ ರಚನೆಯು ಭಗ್ನವಾಗಿದೆ. ಮೇಲುಜಾತಿಗಳು ಮತ್ತಷ್ಟು ಕುತಂತ್ರದಿಂದ ಕೆಳಗಿನ ಜಾತಿಗಳನ್ನು ಮತ್ತೂ ಸೀಳಿ ಹೊಡೆದು ಆಳುವ ನೀತಿಯನ್ನು ಸಲೀಸಾಗಿಸಿಕೊಳ್ಳುತ್ತಿವೆ. ಅಲ್ಲದೆ ತಾರತಮ್ಯದ ಅನೇಕ ತಂತ್ರಗಳನ್ನು ಪ್ರಜಾಪ್ರಭುತ್ವದ ಅವಕಾಶಗಳಲ್ಲೆ ಪಾಲಿಸಿ ಸಾಂಘಿಕವಾದ ಯತ್ನಗಳನ್ನು ವಿಫಲಗೊಳಿಸುತ್ತಿವೆ. ಧೂರ್ತ ರಾಜಕಾರಣವು ಸಮಾಜಗಳನ್ನು ವಕ್ರವಾಗಿ ವಿಂಗಡಿಸುತ್ತ ಅಧಿಕಾರಕ್ಕಾಗಿ ಸಮಾಜದ ಇಚ್ಛಾಶಕ್ತಿಯನ್ನೂ ಸಮಷ್ಠಿ ಒಪ್ಪಂದಗಳನ್ನು ನಾಶಪಡಿಸುತ್ತಿದೆ. ಸಮುದಾಯಗಳ ನಡುವಿದ್ದ ವಿಶ್ವಾಸವೇ ತುಂಡಾಗುತ್ತಿದೆ. ಸಂಪರ್ಕವಂತೂ ಹಳಿತಪ್ಪುತ್ತಿದ್ದು ಪೂರ್ವಾಗ್ರಹಗಳು ಹೆಚ್ಚುತ್ತಿವೆ. ಅನೀತಿಯು ಜೀವನ ಕ್ರಮದ ಭಾಗವೇ ಆಗುತ್ತಿದ್ದು ಬಹುರೂಪಿಯಾದ ಕೇಡಿನ ನಡತೆಗಳು ಸಮಾಜದಲ್ಲಿ ಸಲೀಸಾಗಿ ಸಾಗುತ್ತಿವೆ. ಅಭಿವೃದ್ಧಿಯ ತರಾತುರಿಯಲ್ಲಿ ಇವೆಲ್ಲವೂ ಸಹಜ ಎಂಬ ವಾದವಿದೆ. ದೊಡ್ಡದೊಂದು ಜಿಗಿತಕ್ಕೆ ಸಮಾಜಗಳು ಒಟ್ಟಿಗೆ ನುಗ್ಗಿದಾಗ ಹೀಗಾಗುವುದಿದೆ ಎಂದುಕೊಂಡರೂ ಮೂಲತಃ ಅಭಿವೃದ್ಧಿ ಎಂಬ ನಂಬಿಕೆಯೇ ಕೆಟ್ಟ ನಂಬಿಕೆಯಾಗಿರುತ್ತದೆ. ಕನ್ನಡ ಸಮಾಜದ ಚಲನಶೀಲತೆಯು ಹೀಗಾಗಿಯೇ ಕೆಟ್ಟ ನಂಬಿಕೆಯಾಗಿರುವುದು. ಉಗ್ರವಾದಿ ಸ್ವಭಾವವೂ ಮೆಲ್ಲಗೆ ಕನ್ನಡ ಸಮಾಜಕ್ಕೆ ಕಾಲಿಟ್ಟಿದೆ. ಕೆಟ್ಟದ್ದನ್ನೆ ಕಾಣುವ, ಮಾಡುವ ನೋಡುವ ಹೇಳುವ ತಿಳಿಯುವ ಭಾವಿಸುವ ಯೋಚಿಸುವ ಬಯಸುವ ಈ ಕಾಲಮಾನವು ಒಳಿತಿನ ದಾರಿಗೆ ಬರಲೇಬೇಕು. ಅದು ನಿಸರ್ಗ ತತ್ವ ಹಾಗೆಯೇ ಎಲ್ಲ ಸಮಾಜಗಳ ಅನಿವಾರ್ಯ ಅಂತಿಮ ಸ್ಥಿತಿ. ಕನ್ನಡ ಸಮಾಜಕ್ಕೆ ಅಂತಹ ಸಾಮರ್ಥ್ಯವಿದೆ. ಈ ಕಾಲಮಾನವು ಅತ್ಯಂತ ಸೂಕ್ಷ್ಮವಾದ ಘಟ್ಟ. ಒಳಿತು ಕೆಡುಕು ಸಮನಾಗಿ ಸಾಗುತ್ತಲೇ ಸಮಾಜಗಳು ಸೂಕ್ತ ಸ್ಥಿತಿಯನ್ನು ಕಂಡುಕೊಳ್ಳುತ್ತಿರುವಾಗ ನಿರ್ಣಾಯಕವಾಗಿ ಏನನ್ನೂ ಹೇಳಲಾಗದು.

ಪರಿಶುದ್ಧವಾದ ಸಮಾಜ ಎಂಬುದು ಎಲ್ಲೂ ಇಲ್ಲ. ಹಾಗೊಂದು ವೇಳೆ ಅಂತಹ ಆದರ್ಶ ಸಮಾಜ ಇದ್ದಿದ್ದರೆ ನಿಯಂತ್ರಿಸಲೆಂದೇ ರೂಪಿತವಾಗಿರುವ ಯಾವ ವ್ಯವಸ್ಥೆಗಳ ಅನಿವಾರ್ಯತೆಯೂ ಇರುತ್ತಿರಲಿಲ್ಲ. ಏಕೀಕರಣೋತ್ತರ ಕನ್ನಡ ಸಮಾಜವು ನಾಡನ್ನು ಕಟ್ಟುವುದಕ್ಕಿಂತಲೂ ಮಿಗಿಲಾಗಿ ತಮ್ಮ ವ್ಯಕ್ತಿ ನೆಲೆಯ ಅವಕಾಶಗಳನ್ನು ಬಲಪಡಿಸಿ ಕೊಳ್ಳುತ್ತಿರುವುದರಿಂದ ಮಾದರಿ ಸಮಾಜದ ಯತ್ನಗಳು ಹಿಂದೆ ಬಿದ್ದಿವೆ. ಸಮಾಜದ ನೈತಿಕ ಬಲಹೆಚ್ಚಿಸಬೇಕಿದ್ದ ಮತಧರ್ಮಗಳ ಮಹತ್ವದ ಸಂಸ್ಥೆಗಳು ಮಠಗಳು ವಿದ್ಯಾ ಮಂದಿರಗಳು ಬೀದಿ ಜಗಳದಲ್ಲಿ ನಿರತವಾಗಿರುವುದು ನಿಷಾದಕರ. ಹಳೆಯ ಮೌಲ್ಯಗಳನ್ನು ಎಲ್ಲ ಸಮಾಜಗಳ ಉಪೇಕ್ಷೆಯಿಂದ ಕಾಣುವುದು ಸಾಮಾನ್ಯವಾಗಿದೆ. ಹೊಸ ಮೌಲ್ಯ ಹಳೆ ಮೌಲ್ಯಗಳೆರಡರ ಸಂಘರ್ಷದಲ್ಲಿ ಮೂರನೆ ಆಯಾಮ ಸೃಷ್ಟಿಸಿಕೊಳ್ಳುವಲ್ಲಿ ಕನ್ನಡ ಸಮಾಜ ಎಡವುತ್ತಿದೆ. ಈ ನಡುವೆಯೇ ಮತಧರ್ಮಗಳ ಶ್ರದ್ಧೆಯು ಲಘುವಾಗುತ್ತಿದೆ. ಮತಾಂತರಗಳು ಒಟ್ಟು ಸಮಾಜದ ಅಂಗವೇ. ಆದರೆ ಹಿಂದೂ ಧರ್ಮದ ತಾರತಮ್ಯದಿಂದ ಬೌದ್ಧ ಧರ್ಮದ ಕಡೆಗೆ ಅಲಕ್ಷಿತ ದಲಿತ ಸಮಾಜವು ಆಕರ್ಷಿತವಾಗುತ್ತಿರುವುದು ವಿಶೇಷವಾಗಿದೆ. ಕನ್ನಡ ಸಮಾಜ ಹೀಗಾಗಿಯೇ ಹೇಳಲು ಏಕರೂಪಿಯಾಗಿದ್ದರೂ ಅದು ಕಾಣಲು ನೂರಾರು ರೀತಿಯಲ್ಲಿದೆ. ಕನ್ನಡ ರೀತಿಗಳು ಎಷ್ಟಿವೆಯೋ ಅಷ್ಟು ಕನ್ನಡ ಸಮಾಜಗಳಿವೆ ಎನ್ನುವುದಕ್ಕಿಂತಲೂ ಎಷ್ಟು ಜಾತಿ, ಧರ್ಮ, ಲಿಂಗ, ವರ್ಗಗಳಿವೆಯೊ ಅಷ್ಟು ಕನ್ನಡ ಸಮಾಜಗಳಿವೆ. ಇವನ್ನೆಲ್ಲ ಸಮಷ್ಠಿ ಮಾನವ ಒಪ್ಪಂದಕ್ಕೆ ಬೆಸುಗೆ ಮಾಡುವ ಆಂದೋಲನವೇ ಆಗಬೇಕಿದ್ದು, ಅಂತಹ ವಿರಾಟ್ ಯತ್ನಗಳಿಂದ ಭವಿಷ್ಯದ ಕನ್ನಡನಾಡನ್ನು ಕಟ್ಟಿಕೊಳ್ಳಬಹುದಾಗಿದೆ. ಶತಮಾನಗಳಿಂದಲೂ ವಿಶ್ವಾಸವಿಲ್ಲದೆ ಲೋಲುಪತೆಯನ್ನು ಒಳಗೊಂಡು ಲೋಭಿಯೂ ಆಗಿ ಆಸೆ ಬುರುಕ ಮೌಲ್ಯಗಳನ್ನು ರೂಢಿಸಿಕೊಂಡು ಜಾತಿ ಆಧಾರದಲ್ಲಿ ದಾಸ್ಯ ತತ್ವದಲ್ಲಿ ಬೆಳೆದುಬಂದ ಸಮಾಜಗಳನ್ನು ಕೆಲವೇ ವರ್ಷಗಳಲ್ಲಿ ಬದಲಿಸಲಾಗದು. ಕಾಲದ ಹಲವು ಆಂದೋಲನಗಳು ಸಮಾಜಗಳನ್ನು ಮುರಿದು ಕಟ್ಟಬೇಕಾಗುತ್ತದೆ. ಒಂದೇ ಬದಲಾವಣೆ, ಖಾನೂನು, ನೀತಿ, ನಿಯಂತ್ರಣ ಜಾತಿನಿಷ್ಠ ಸಮಾಜಗಳಿಗೆ ಸಾಕಾಗುವುದಿಲ್ಲ. ಮತ್ತೆ ಮತ್ತೆ ಸಮಾಜಗಳು ಇಪ್ಪತ್ತೊಂದನೆ ಶತಮಾನದ ಕಡೆಗೆ ಚಲಿಸುತ್ತಿವೆ. ಏಕೀಕರಣಾನಂತರದ ಕನ್ನಡ ನಾಡಿನ ಭವಿಷ್ಯವು ಜಾಗತಿಕ ತೀರ್ಮಾನಗಳಿಂದಲೂ ನಿರ್ಧರಿಸಲ್ಪಡಬೇಕಾದುದಿದೆ. ಸಮಾಜಗಳು ಏಕೀಕರಣವಾಗದೆ ಬರಿಯ ನಾಡಿನ ಏಕೀಕರಣಕ್ಕೆ ಹೆಚ್ಚಿನ ಅರ್ಥವಿಲ್ಲ. ಈಗ ಆಗಬೇಕಾದದ್ದು ಬಹು ರೂಪಿ ಸಮಾಜಗಳ ಸಮಷ್ಠಿ ಏಕೀಕರಣ. ಆ ನಿಟ್ಟಿನ ಯತ್ನವೇ ದೊಡ್ಡದು ಹಾಗು ನಾಡಿಗೆ ಬಲ ತರುವಂತದ್ದಾಗಿದೆ.