ಚರಿತ್ರೆಯ ನಿನ್ನೆಯ ತೀರ್ಮಾನದಲ್ಲಿ ಅವುಗಳ ಮೌಲ್ಯಗಳು ವರ್ತಮಾನದ ಸಾಮಾಜಿಕ ರಾಜಕೀಯ ವ್ಯವಸ್ಥೆಗಳನ್ನು ತೀರ್ಮಾನಿಸಬಲ್ಲವು. ಏಕೀಕರಣದ ನಂತರದ ಎಲ್ಲ ಪರಿಣಾಮಗಳಿಗೂ ಈ ಹಿಂದಿನ ಘಟನೆಗಳು ಪರೋಕ್ಷವಾಗಿ ಕಾರಣವಾಗಿರುತ್ತವೆ. ಚರಿತ್ರೆಯಲ್ಲಿ ಇದರಿಂದಲೇ ಗತ ಹಾಗೂ ವರ್ತಮಾನಗಳು ಒಂದನ್ನೊಂದು ಹೊಂದಿಸಿಕೊಂಡೇ ಭವಿಷ್ಯವನ್ನು ಕಂಡುಕೊಳ್ಳುವುದು. ಐವತ್ತು ವರ್ಷಗಳ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಸಾಹಿತ್ಯ ಸಮಾಜ ಪ್ರಭುತ್ವದ ಅಂತರ್ ಸಂಬಂಧಗಳನ್ನು ಈ ಹಿಂದಿನ ಅಧ್ಯಾಯಗಳಲ್ಲಿ ಚರ್ಚಿಸಿ ಆಗಿದೆ. ವರ್ತಮಾನದ ಪ್ರಜ್ಞೆಯ ಮೂಲಕ ಏಕೀಕರಣೋತ್ತರ ಕಾಲವನ್ನು ವಿಶ್ಲೇಷಿಸಿದ್ದರೂ ಭವಿಷ್ಯದ ಹಿನ್ನೆಲೆಯಿಂದಲೂ ವರ್ತಮಾನವನ್ನು ಗ್ರಹಿಸಬಹುದು ಸಮಕಾಲೀನ ಕನ್ನಡ ನಾಡಿನ ವಾಗ್ವಾದಗಳು, ರಾಜಕೀಯ ಸ್ಥಿತಿಗತಿಗಳು, ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜಗಳ ಪಲ್ಲಟಗಳು ಅತಿ ವೇಗದಲ್ಲಿ ಸಾಗುತ್ತಿವೆ. ವರ್ತಮಾನದ ಪರಿಸ್ಥಿತಿಯನ್ನು ಅವಲೋಕಿಸಿ ಭವಿಷ್ಯವನ್ನು ಈ ಅಧ್ಯಾಯದಲ್ಲಿ ಪರಿಶೀಲಿಸುವ. ವರ್ತಮಾನದ ಕನ್ನಡ ಸಾಹಿತ್ಯ, ವರ್ತಮಾನದ ಕನ್ನಡ ಸಂಸ್ಕೃತಿ, ವರ್ತಮಾನದ ಕನ್ನಡ ಸಮಾಜ, ವರ್ತಮಾನದ ಆರ್ಥಿಕ ವ್ಯವಸ್ಥೆ, ವರ್ತಮಾನದ ಕನ್ನಡ ರಾಜಕಾರಣ ಈ ಅಂಶಗಳನ್ನು ಮುಖ್ಯವಾಗಿ ಸಂಕ್ಷಿಪ್ತವಾಗಿ ವಿಶ್ಲೇಷಿಸುತ್ತ ಭವಿಷ್ಯದ ಕನ್ನಡ ನಾಡನ್ನು ನಿರೂಪಿಸಬಹುದು. ಈ ಹಿಂದಿನ ಬರಹಗಳಲ್ಲಿ ಈ ಅಂಶಗಳು ಅಲ್ಲಲ್ಲಿ ಕಾಣುತ್ತವೆಯಾದರೂ ಮುನ್ನೋಟದಲ್ಲಿ ವಿವೇಚಿಸೋಣ.

. ವರ್ತಮಾನದ ಕನ್ನಡ ಸಾಹಿತ್ಯ

ದಲಿತ ಬಂಡಾಯ ಸಾಹಿತ್ಯದ ನಂತರಕ್ಕೆ ಕನ್ನಡ ಸಾಹಿತ್ಯದ ರೀತಿನೀತಿಗಳು ತುಂಬ ಭಿನ್ನವಾಗಿ ಅಭಿವ್ಯಕ್ತಿಯ ನೆಲೆಯನ್ನು ಹುಡುಕಿಕೊಳ್ಳುತ್ತಿವೆ. ಸಾಹಿತ್ಯ ಪಂಥಗಳ ಸ್ವಭಾವ ಈ ಕಾಲದಲ್ಲಿಲ್ಲ. ಹೊಸ ಪೀಳಿಗೆಯು ಭಿನ್ನ ಕಾಲದಲ್ಲಿ ವಿಭಿನ್ನ ಸಾಮಾಜಿಕ ಅವಕಾಶಗಳಲ್ಲಿ ತನ್ನ ಅಭಿವ್ಯಕ್ತಿಯ ರೀತಿನೀತಿಗಳನ್ನು ವ್ಯಕ್ತಪಡಿಸುತ್ತಿದೆ. ಈ ಹಂತದಲ್ಲಿ ವಿಶೇಷವಾಗಿ ಕಂಡುಬರುತ್ತಿರುವ ಸಾಹಿತ್ಯಿಕ ನಿರೂಪಣೆಗಳಲ್ಲಿ ಸ್ತ್ರೀ ಸಂವೇದನೆಯು ಅತಿಮುಖ್ಯವಾದುದು. ಮತ್ತೊಂದು ಬಗೆಯ ಸಂವೇದನೆ ಎಂದರೆ ದಲಿತ ಬಂಡಾಯೋತ್ತರ ನಿರೂಪಣೆಗಳು. ಇವೆರಡೂ ಅಭಿವ್ಯಕ್ತಿಯ ನೆಲೆಗಳು ಈ ಹಿಂದೆ ಗಮನಿಸಿದ ಪಂಥಗಳಿಗಿಂತ ಬೇರೆಯೇ ಆಗಿ ಕನ್ನಡ ನಾಡುನುಡಿಯನ್ನು ನಿರೂಪಿಸುತ್ತಿವೆ. ಕಾಲದ ವೇಗ ಸಾಮಾಜಿಕ ಒತ್ತಡಗಳನ್ನು ಸಂಕೀರ್ಣಗೊಳಿಸುತ್ತಿರುವುದರಿಂದ ಅನುಭವಗಳು ಗಾಢವಾದ ಸಂಬಂಧಗಳನ್ನು ಮಾಡಲಾರವು. ಬರಹಗಾರ ಮತ್ತು ಸಮಾಜದ ಮಧ್ಯೆ ಭಾಷೆಯು ಇಂತಲ್ಲಿ ಯಾವ ಬಗೆಯ ಅಭಿವ್ಯಕ್ತಿ ಸಾಧ್ಯತೆಯನ್ನು ಕಂಡುಕೊಳ್ಳುತ್ತದೆ ಎಂಬುದು ಭವಿಷ್ಯದ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ. ಕಾಲದ ವೇಗ ಮತ್ತು ತಂತ್ರಜ್ಞಾನದ ಸಹಯೋಗವು ಜೀವನ ವಿಧಾನವನ್ನು ಮಾತ್ರ ವ್ಯತ್ಯಯಗೊಳಿಸದೆ ಸ್ವತಃ ಭಾಷೆಯನ್ನೆ ವ್ಯತ್ಯಯಕ್ಕೆ ಒಳಪಡಿಸುತ್ತದೆ. ಸಮಕಾಲೀನ ಲೇಖಕರಿಗೆ ಈ ಸಮಸ್ಯೆ ಇದೆ. ತೀವ್ರವಾಗಿ ಚಲಿಸುವ ಸಾಮಾಜಿಕ ಮೌಲ್ಯಗಳು ಅವುಗಳ ಅನುಸರಣೆ, ಅನುಕರಣೆ, ಅನ್ವಯಗಳು ಭಾಷೆಯ ಸಂವಹನವನ್ನು ನಿರ್ಧರಿಸುವುದರ ಜೊತೆಯಲ್ಲೆ ಸೃಜನಶೀಲತೆಯನ್ನು ನಿಯಂತ್ರಿಸಬಲ್ಲವು.

ದಲಿತ ಬಂಡಾಯೋತ್ತರ ಸಾಹಿತ್ಯದ ನಿರೂಪಣೆಗಳಲ್ಲಿ ವೈವಿಧ್ಯತೆಯಿದೆ. ಬಂಡಾಯದ ಅಬ್ಬರ ದಲಿತರ ಆಕ್ರಂಧನ ಎರಡೂ ಕೂಡ ತಮಗೆ ತಾವೇ ಮಾಗುವ ಕಡೆ ಸಾಗುತ್ತಿದ್ದು ಬಹುಪಾಲು ಈ ಸಂವೇದನೆಗಳು ಮುಂದಿನ ಹೊಸ ಪೀಳಿಗೆಗೆ ಅವಕಾಶ ಬಿಟ್ಟುಕೊಟ್ಟಿರುವುದರಿಂದ ವರ್ತಮಾನದ ಸಾಹಿತ್ಯದಲ್ಲಿ ನಿರ್ದಿಷ್ಟ ಪಂಥ ಗುಣ ಇಲ್ಲವಾಗಿದೆ. ಚಳುವಳಿಗಳ ಭಾಗವಾಗಿ ಬೆಳೆದ ದಲಿತ ಬಂಡಾಯ ಚಳುವಳಿಗಳು ರೂಪಾಂತರಗೊಂಡಂತೆ ಅವುಗಳ ಸಾಹಿತ್ಯ ಸ್ವರೂಪವು ಬದಲಾಗಿದೆ. ಬದಲು ಎನ್ನುವುದಕ್ಕಿಂತ ಕ್ರಿಯಾಶೀಲತೆ ಕಡಿಮೆ ಆಗಿದೆ. ಈ ಹಂತದಲ್ಲಿ ಬರೆಯ ತೊಡಗಿದ ಯುವ ಪೀಳಿಗೆ ವೈಯಕ್ತಿಕ ಪ್ರತಿಭೆಯ ಮೂಲಕ ವಿಶಿಷ್ಠ ಮಾದರಿಗಳನ್ನು ನಿರ್ಮಿಸಿರುವುದು ಮಹತ್ವದ್ದಾಗಿದೆ. ಈ ಪೀಳಿಗೆಯ ಬಹುಮುಖ್ಯ ಲೇಖಕರಲ್ಲಿ ಜಯಂತ ಕಾಯ್ಕಿಣಿ, ಮೊಗಳ್ಳಿಗಣೇಶ್, ವಿವೇಕ ಶಾನಭಾಗ್, ಅಬ್ದುಲ್ ರಶೀದ್, ನಟರಾಜ ಹುಳಿಯಾರ್, ಸುಬ್ಬು ಹೊಲೆಯಾರ್, ರಾಜಶೇಖರ ಹತಗುಂದಿ, ಆನಂದ ಋಗ್ವೇದಿ, ವಿಕ್ರಮ ವಿಸಾಜಿ, ಪೀರ್‌ಬಾಷಾ, ಮಲ್ಲಿಕಾರ್ಜುನ ವಣೇನೂರ, ಬಂಜಗೆರೆ ಜಯಪ್ರಕಾಶ್, ಅಮರೇಸ ನುಗಡೋಣಿ, ನಾಗವೇಣಿ, ಎಂ.ಎಸ್.ವೇದ, ಎನ್.ಕೆ.ಹನುಮಂತಯ್ಯ, ವಡ್ಡಗೆರೆ ನಾಗರಾಜಯ್ಯ, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ, ಜಿ.ಕೆ. ರವೀಂದ್ರಕುಮಾರ್, ವಸಂತ ಬನ್ನಾಡಿ, ಕೇಶವ ಮಳಿಗಿ, ಜೋಗಿ, ರವಿ ಬೆಳಗೆರೆ, ಕೃಷ್ಣಮೂರ್ತಿ ಬೆಳಗೆರೆ, ಎಚ್.ಎಲ್.ಪುಷ್ಪ, ಚ.ಹ. ರಘುನಾಥ್, ಗಂಗಾಧರಯ್ಯ ಎಸ್., ವಸುದೇಂದ್ರ, ಅಶೋಕ ಹೆಗಡೆ, ಕೇಶವರೆಡ್ಡಿ ಹಂದ್ರಾಳ, ಸ.ರಘುನಾಥ್‌, ಕೆ.ವೈ.ನಾರಾಯಣಸ್ವಾಮಿ, ಬಾಲಸುಬಮಣ್ಯ ಕಂಜರ್ಪಣೆ, ಎಸ್. ಮಂಜುನಾಥ, ರಂಜಾನ್‌ ದರ್ಗಾ, ಮೂಡ್ನಾಕೂಡು ಚಿನ್ನಸ್ವಾಮಿ, ಕೆ.ಬಿ.ಸಿದ್ದಯ್ಯ, ಅಗ್ರಹಾರ ಕೃಷ್ಣಮೂರ್ತಿ, ಹನೂರು ಕೃಷ್ಣಮೂರ್ತಿ, ಶಂಕರಕಟಗಿ,  ಪ್ರಹ್ಲಾದ್  ಅಗಸನಕಟ್ಟೆ, ಜಿ.ಪಿ.ಬಸವರಾಜು ಮುಂತಾದ ಲೇಖಕರು ಕಂಡುಬರುತ್ತಾರೆ. ಇವರನ್ನೊರತುಪಡಿಸಿ ತಮ್ಮ ಚಹರೆಗಳನ್ನು ರೂಪಿಸಿಕೊಳ್ಳಲು ಯತ್ನಿಸುತ್ತಿರುವ ಕಿರಿಯ ಬರಹಗಾರರ ದೊಡ್ಡ ಪಟ್ಟಿಯೇ ಇದೆ. ಅವರನ್ನೆಲ್ಲ ಇಲ್ಲಿ ಪಟ್ಟಿ ಮಾಡಲಾಗದು. ವರ್ತಮಾನದಲ್ಲಿ ಬರೆಯುತ್ತಿರುವ ಲೇಖಕರ ಸಂವೇದನೆಯನ್ನು ನಿರ್ದಿಷ್ಟಪಡಿಸಿ ಹೇಳುವುದು ಸೂಕ್ತವಲ್ಲ. ಆದಾಗ್ಯೂ ಈ ಕಾಲದ ಹೊಸ ಪೀಳಿಗೆಯ ಲೇಖಕರ ನಾಡುನುಡಿಯ ನಿರೂಪಣಾ ಸಂಬಂಧವನ್ನು ಕೆಳಗಿನಂತೆ ಗುರುತಿಸಿಕೊಳ್ಳಬಹುದು.

೧. ಕಲಾತ್ಮಕ ಬದ್ಧತೆಯಷ್ಟೇ ಮುಖ್ಯವಾದದ್ದು ಸಾಮಾಜಿಕ ಬದ್ಧತೆ ಕೂಡ. ಕಲೆ ಮತ್ತು ಸಮಾಜಗಳ ಸೃಜನಶೀಳ ಸಂಬಂಧವು ಮಾನವೀತೆಯ ನ್ಯಾಯದ ಕಡೆಗೇ ವಿಕಾಶವಾಗಬೇಕು.

೨. ಬಹುರೂಪಿಯಾದ ಸಾಂಸ್ಕೃತಿಕ ಅನುಭವಗಳಿಂದಲೇ ಅಖಂಡವಾದ ಕನ್ನಡ ಸಂವೇದನೆಯನ್ನು ನಿರ್ಮಣ ಮಾಡಬೇಕು. ಸಾಹಿತ್ಯ ಪ್ರಕಾರಗಳ ಸಿದ್ದ ಮಾದರಿಗಳ ಹೊರ ಬಂದು ಸಂವೇದನೆಯ ಸಮಷ್ಠಿ ಸಾರದಿಂದಲೇ ಸಮಾಜವನ್ನು ಪುನರ್ ಭಾವಿಸಬೇಕು.

೩. ವರ್ತಮಾನದ ರಾಜಕೀಯ ಆರ್ಥಿಕ ಹಾಗೂ ತಾಂತ್ರಿಕ ಬೆಳವಣಿಗೆಗಳನ್ನು ಗ್ರಹಿಸಿಯೆ ಸಂವೇದನೆಯ ವಿಭಿನ್ನ ನೆಲೆಗಳನ್ನು ಕನ್ನಡ ಭಾಷೆಯ ಧ್ವನಿಶಕ್ತಿಯಾಗಿಸಿಕೊಳ್ಳಬೇಕು. ಹೊರಜಗತ್ತಿನ ಅನುಸಂಧಾನವು ತನ್ನ ಅನನ್ಯತೆಗೆ ಪುಷ್ಠಿ ನೀಡುವಂತಾಗಬೇಕು. ಸಂವೇದನೆಯ ಒಳ ಹೊರಗಿನ ಸಂಬಂಧಗಳನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗಬೇಕು. ಪೂರ್ವ ಪಶ್ಚಿಮಗಳ ವೈರುಧ್ಯವನ್ನು ಮೀರಿ ಸ್ವಂತದ್ದರ ಅಸ್ತಿತ್ವವನ್ನು ಕಾಯ್ದುಕೊಳ್ಳಬೇಕು.

೪. ಸಂಸ್ಕೃತಿ ಚಿಂತನೆಯ ಮೂಲಕವೇ ವೈಚಾರಿಕವಾದ ಪ್ರಜ್ಞೆಯನ್ನು ರೂಪಿಸಿಕೊಳ್ಳಬೇಕು. ಸಮಾಜ ವಿಜ್ಞಾನಗಳ ಆನ್ವಯಿಕತೆ ಸಾಹಿತ್ಯ ಸಂವೇದನೆಯ ಜೊತೆಗೆ ಮಿಳಿತವಾಗಬೇಕು. ಸಾಹಿತ್ಯ ಪ್ರಕಾರಗಳಷ್ಟೇ ಪ್ರಮುಖವಾಗಿ ಸಮಾಜ ವಿಜ್ಞಾನಗಳ (ಮಾನವಿಕ ಶಾಸ್ತ್ರಗಳ) ಬರಹಗಳು, ವಿಶ್ಲೇಷಣೆಗಳು, ಅಧ್ಯಯನ ವಿಧಾನಗಳು, ಸಂಶೋಧನಾ ಕ್ರಮಗಳು, ವಿಭಿನ್ನ ಬೌದ್ಧಿಕ ಸೂತ್ರಗಳು, ಪರಿಕಲ್ಪನೆಗಳು, ಪ್ರಮೇಯಗಳು, ಪ್ರತಿ ಚಿಂತನೆಗಳು ಬಹುರೂಪಿಯಾಗಿ ಅಂತರ್ ಶಿಸ್ತೀಯವಾಗಿ ಬೆಳವಣಿಗೆಯಾಗಬೇಕು. ಆ ಮೂಲಕ ಸಮಾಜ ಶಾಸ್ತ್ರೀಯವಾದ, ಮಾನವ ಶಾಸ್ತ್ರೀಯವಾದ ಸಂಸ್ಕೃತಿ ಬರಹಗಳು ಸಾಹಿತ್ಯದ ಜೊತೆ ಸಂಬಂಧ ಸಾಧಿಸಿಕೊಳ್ಳುವಂತಾಗಬೇಕು.

೫. ತನ್ನ ಸಮುದಾಯದ ಸಾಮಾಜಿಕ ಸಾಂಸ್ಕೃತಿಕ ಚರಿತ್ರೆಯನ್ನು ವರ್ತಮಾನಕ್ಕೆ ನವೀಕರಿಸಿ ಕೊಳ್ಳಬೇಕು. ಸ್ಥಳೀಯ ಅನನ್ಯತೆಯ ಮೂಲಕವೇ ಜಾಗತಿಕ ನೆಲೆಯ ಶಕ್ತಿಗಳ ಜೊತೆ ಮುಖಾಮುಖಿಯಾಗುವ ನಿರೂಪಣೆಗಳನ್ನು ಸಾಧಿಸಿಕೊಳ್ಳಬೇಕು. ಸ್ವಂತ ಅನುಭವಗಳಿಂದ ಪರಕೀಯ ಅನುಭವಗಳನ್ನು ಅಂತ್ಗತಿಸಿಕೊಳ್ಳಬೇಕು. ತನ್ನ ಸ್ವನಾಡಿನ ತಡಿಯಿಂದಲೇ ಜಗತ್ತಿನ ಜೊತೆ ಅನುಸಂಧಾನವನ್ನು ರೂಪಿಸಿಕೊಳ್ಳಬೇಕು.

೬. ಅಲಕ್ಷಿತರಾಗಿ ಈ ತನಕ ಪ್ರಧಾನಧಾರೆಗೆ ಬಾರದಿದ್ದವರ ಪ್ರಜ್ಞೆಯನ್ನು ಉತ್ತೇಜಿಸಬೇಕು. ಅಬಲ ಮಹಿಳೆಯರ, ಅಲೆಮಾರಿ ಸಮುದಾಯಗಳ, ಆದಿವಾಸಿಗಳ ಜೀವನಾನುಭವವನ್ನು ಸಾಮಾಜಿಕ ಚಲನಶೀಲತೆಯಲ್ಲಿ ತಂದುಕೊಂಡು ಅವರ ಜ್ಞಾನಪರಂಪರೆಗಳನ್ನು ಕನ್ನಡ ಭಾಷೆಯ ಕೇಂದ್ರಕ್ಕೆ ಸೇರಿಸಿಕೊಳ್ಳಬೇಕು ಹಾಗೆಯೇ ಅಂತವರ ಬದುಕಿನ ನಿರೂಪಣೆಗಳನ್ನು ದಾಖಲಿಸಿಕೊಳ್ಳಬೇಕು. ಅಭಿವೃದ್ಧಿಯ ನ್ಯಾಯದಲ್ಲಿ ಅವರಂತವರೆಲ್ಲರನ್ನು ಅಖಂಡ ಮಾನವ ಒಪ್ಪಂದಕ್ಕೆ ರೂಪುಗೊಳಿಸಬೇಕು.

೭. ಸಾಹಿತ್ಯ ಪ್ರಕಾರಗಳ ಸಿದ್ಧ ಮಾದರಿಗಳ ಹಂಗು ಕಳೆದುಕೊಂಡು ಸಾಹಿತ್ಯದ ಪಾವಿತ್ರ‍್ಯವನ್ನು ಮೀರಿ ಭಾಷೆಯ ಜೊತೆ ಬಹುರೂಪಿ ಮಾನವತೆಯನ್ನು ವ್ಯಕ್ತಪಡಿಸಬೇಕು.

ಇಂತಹ ಒಲವು ನಿಲುವು ಯತ್ನಗಳು ವರ್ತಮಾನದ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿವೆ. ಜಾಗತಿಕ ಮಾನವ ಪ್ರೇಮದ ಪ್ರಭಾವವೂ ಇಲ್ಲಿದೆ. ಹಾಗೆಯೇ ಆತ್ಯಂತಿಕವಾದ ಸ್ಥಳೀಯತೆಯ ಒತ್ತಡವೂ ಇದೆ. ಏಕಕಾಲಕ್ಕೆ ಪರಂಪರೆ ಮತ್ತು ಆಧುನಿಕೋತ್ತರ ಸಂಘರ್ಷವೂ ವಿಶೇಷವಾಗಿ ಮುಖಾಮುಖಿಯಾಗುತ್ತಿದೆ. ದಲಿತರು, ಹಿಳೆಯರು, ಹಿಂದುಳಿದ ವರ್ಗದವರು, ಆದಿವಾಸಿ ಅಲೆಮಾರಿಗಳು ಕೂಡಿ ಕರ್ನಾಟಕದ ಬೃಹತ್ ನಿರೂಪಣೆಗೆ ತೊಡಗುತ್ತಿರುವ ಈ ಕಾಲವು ಅತ್ಯಂತ ಮಹತ್ವದ ಕಾಲಘಟ್ಟ. ನ್ಯಾಯದ ಧ್ವನಿ, ಅಸ್ತಿತ್ವದ ಆಕ್ರೋಶ, ಕಲಾತ್ಮಕ ಅಭಿವ್ಯಕ್ತಿ, ಚಹರೆಯ ಹುಡುಕಾಟ, ಜಾತಿಕ ಸಂಪರ್ಕಗಳ ಜಾಲ, ಜಾಗತೀಕರಣದ ಅಭಿವೃದ್ಧಿಯ ಹಸಿವು, ರಾಜಕಾರಣದ ಅಪವಿತ್ರ ದಿಗ್ವಿಜಯ, ತಂತ್ರಜ್ಞಾನದ ತೀವ್ರವೇಗ, ಅನುಭೋಗದ ಉದ್ಯಮ, ಗ್ರಾಮ ಸಮಾಜಗಳ ರೂಪಾಂತರ, ಸರ್ಕಾರಗಳೆಂಬ ಉದ್ಯಮ ವ್ಯವಸ್ಥೆ, ವಿರಾಟ್ ಸ್ವರೂಪದ ಲಂಚಕೋರತನ, ಬೃಹತ್ತಾದ ಭ್ರಷ್ಟತೆ, ಪ್ರತಿ ಹಂತದಲ್ಲೂ ಹೆಚ್ಚುತ್ತಿರುವ ಭಯೋತ್ಪಾದಕ ಪ್ರವೃತ್ತಿ, ಗೊತ್ತು ಗುರಿ ಇಲ್ಲದೆ ಖಾಸಗೀಕರಣದಿಂದ ರೂಪಾಂತರಗೊಳ್ಳುತ್ತಿರುವ ನಗರಗಳು, ಪೇಟೆ ಪಟ್ಟಣಗಳು, ಸಣ್ಣಪುಟ್ಟ ಹಳ್ಳಿಗಳು, ಈ ಕಾಲದ ಬರಹಗಾರರ ಮೇಲೆ ಬೆಟ್ಟ ಕುಸಿದು ಜಾತಿ ಬಂದಂತೆ ಎದುರಾಗುತ್ತಿವೆ. ಮತೀಯವಾದಿ, ಮೂಲಭೂತವಾದಿ ಸಂತಿಗಳು ಕೂಡ ಮತಧರ್ಮಗಳ ಹೆಸರಿನಲ್ಲಿ ಹಿಂಸೆಯನ್ನು ಒಂದು ಮೌಲ್ಯವನ್ನಾಗಿ, ಆಯುಧವನ್ನಾಗಿ, ಒಂದು ಆಲೋಚನೆಯನ್ನಾಗಿ ಮಾರ್ಪಡಿಸುತ್ತಿರುವ ಯತ್ನದ ನಡುವೆಯೇ ಹಿಂಸೆಯನ್ನು ಪ್ರತಿಪಾದಿಸುವಂತಹ ನಕ್ಸಲ್ ಚಟುವಟಿಕೆಗಳು ಕೂಡ ವರ್ತಮಾನದ ಸಾಹಿತ್ಯದ ಮೇಲೆ ಗೆರೆ ಎಳೆಯುತ್ತಿವೆ.

ಇಂತಹ ಸಂಗತಿಗಳಿಗೆಲ್ಲ ಎದುರಾಗದೇ ಸುಮ್ಮನಿರಲು ಸಾಧ್ಯವಿಲ್ಲ ಎಂಬ ಒತ್ತಡವಿದೆ. ಸಾಹಿತ್ಯ ಪ್ರಕಾರಗಳ ಒಳಗೆ ಇವನ್ನೆಲ್ಲ ತಕ್ಕ ರೂಪದಲ್ಲಿ ನಿರೂಪಿಸಲು ಆಗದು ಎಂಬ ಪರಿಸ್ಥಿತಿ ಇದೆ. ಇದರಿಂದಾಗಿಯೇ ಸಾಹಿತ್ಯದ ಸಾಂಪ್ರದಾಯಿಕ ರೂಪ, ಪ್ರಕಾರಗಳು ಈ ಬಗೆಯ ಸಂವೇದನೆಗಳನ್ನು ಸಮರ್ಥವಾಗಿ ಬಿಂಬಿಸಲಾರವು ಎಂಬ ಅಭಿಪ್ರಾಯ ಮೂಡುತ್ತಿರುವುದು. ಸಾಹಿತ್ಯ ಪ್ರಕಾರಗಳಿಗಿರುವ ಮಿತಿಯಿಂದಾಗಿಯು ಈ ಸಮಸ್ಯೆ ಕಾಣಿಸುತ್ತಿರಬಹುದು. ಪ್ರಕಾರಗಳ ಸಾಹಿತ್ಯಿಕ ಮಾನದಂಡಗಳು ತುಂಬ ಹಳೆಯ ಕಾಲದವು. ವರ್ತಮಾನದ ಸಮಾಜಗಳ ಅನುಭವ ಸಂಕೀರ್ಣತೆಯನ್ನು ಬಿಂಬಿಸಲು ಆ ಹಳೆಯ ಮಾನದಂಡಗಳು ಅಡ್ಡ ಬರುತ್ತವೆ. ಸಾಹಿತ್ಯ ಪ್ರಕಾರಗಳಿಗಿಂತಲೂ ಸಾಮಾಜಿಕ ಅನುಭವವೇ ಮುಖ್ಯ. ಹೀಗಾಗಿಯೇ ಕನ್ನಡ ಸಾಹಿತ್ಯದ ಸಮಕಾಲೀನ ನಿರೂಪಣೆಗಳಲ್ಲಿ ಪ್ರಕಾರಗಳ ಚೌಕಟ್ಟಿಗೆ ಮಹತ್ವವಿಲ್ಲವಾಗುತ್ತಿರುವುದು. ಒಂದೇ ಪ್ರಕಾರದಲ್ಲಿ ಉಳಿದೆಲ್ಲ ಪ್ರಕಾರಗಳ ಅಭಿವ್ಯಕ್ತಿಯ ಗುಣಗಳನ್ನು ಮೇಳೈಸಿಕೊಳ್ಳುತ್ತಿರುವುದನ್ನು ಗಮನಿಸಬಹುದು.

ಭಾಗಶಃ ಪ್ರಕಾರಗಳು ಇಂತಹ ಚೌಕಟ್ಟನ್ನು ಮೀರುವಾಗಲು ಕೂಡ ಆತ್ಯಂತಿಕವಾದ ನಿರೂಪಣೆಗಳು ಸಾಧ್ಯವಾಗದೆಯೂ ಇರಬಹುದು. ವರ್ತಮಾನದ ಸಾಹಿತ್ಯಕ ಅಭಿವ್ಯಕ್ತಿಗಳು ತಕ್ಕುದಾದ ನಿರೂಪಣೆಯ ರೂಪಕ್ಕಾಗಿ ಈಗಿನ್ನೂ ಹುಡುಕಲು ಆರಂಭಿಸಿರುವುದರಿಂದ ಭವಿಷ್ಯ ಇನ್ನೂ ಅಸ್ಪಷ್ಟವಾಗಿದೆ. ತಮ್ಮ ತಮ್ಮ ಚಹರೆಗಳಿಗಾಗಿ ಪೈಪೋಟಿ ಆರಂಭವಾದರೆ ತಪ್ಪಿಲ್ಲ. ಆದರೆ ಸ್ವ ಅನನ್ಯತೆಯನ್ನು ಸ್ಥಾಪಿಸಿಕೊಳ್ಳುವಾಗ ಪೂರ್ವಾಗ್ರಹಗಳಿಂದ ರೂಪಾಂತರಗೊಳ್ಳುತ್ತ ಸಾಗಿರುವ ಭಾರತೀಯ ಸಮಾಜಗಳ ಅನನ್ಯತೆಯೇ ಅನೇಕ ಬಾರಿ ಪ್ರಶ್ನಾರ್ಹವಾಗಿರುತ್ತದೆ. ವ್ಯಕ್ತಿ ಮತ್ತು ಸಮುದಾಯ ಎರಡನ್ನೂ ಜೊತೆಗಿಟ್ಟೇ ನೋಡುವ ಸ್ವಭಾವ ಸಮಾಜದಲ್ಲಿ ರೂಢಿಯಾಗಿರುವುದರಿಂದ ವ್ಯಕ್ತಿ ಮತ್ತು ಸಮಾಜಗಳ ಬಂಧವನ್ನು ಮೀರಿ ನಿರೂಪಣೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಭಾಷೆ ಮತ್ತು ಸಂಸ್ಕೃತಿಯ ಸಾಮುದಾಯಿಕ ಅನನ್ಯತೆಯು ಭಾರತದ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿರದೆ ದೂರವನ್ನೂ, ಅನನ್ಯತೆಯನ್ನೂ ಭಗ್ನತೆಯನ್ನೂ ಕೂಡ ಸ್ಥಾಪಿಸಲು ಬಳಕೆಯಾಗುತ್ತದೆ. ಇವೆಲ್ಲವೂ ವರ್ತಮಾನದ ಕನ್ನಡ ಸಾಹಿತ್ಯದ ಓದಿನಲ್ಲೂ, ಅಧ್ಯಯನದಲ್ಲೂ, ಚರಿತ್ರೆಯಲ್ಲೂ ಹಾಗೆ ಬಳಕೆಯಾಗುತ್ತಿವೆ.

ಸಾಹಿತ್ಯ ಸಂವೇದನೆಯಲ್ಲೂ ಪ್ರತ್ಯೇಕತಾ ಭಾವನೆ ಬೆಳೆಯುತ್ತಿದೆ. ಇದು ದಲಿತ ಬಂಡಾಯ ಕಾಲದಲ್ಲೆ ಉಂಟಾದ ಸ್ವಭಾವ. ನಾವು ಬರೆದದ್ದು ನಮ್ಮದು. ಅವರು ಬರೆದದ್ದು ಅವರದು ಎಂಬ ಧೋರಣೆ ಈಗಲೂ ಬಲವಾಗಿದೆ. ಜಾತಿ ಶ್ರೇಣಿಗೆ ತಕ್ಕಂತೆಯೂ ಸಾಹಿತ್ಯ ಪರಿಸರ ಗುಪ್ತವಾಗಿದೆ. ದಲಿತರು ಬರೆದದ್ದೇ ಬೇರೆ, ಶೂದ್ರರು ಬರೆದದ್ದೇ ಬೇರೆ, ಮಹಿಳೆಯರದೇ ಮತ್ತೊಂದು, ವೈದಿಕರದೇ ಇನ್ನೊಂದು, ಅಲ್ಪಸಂಖ್ಯಾತ ಮುಸ್ಲಿಮರದೇ ಬೇರೊಂದು ಎಂಬ ಪ್ರತ್ಯೇಕತಾ ಭಾವನೆ ಸಾಹಿತ್ಯದಲ್ಲಿದೆ. ಓದುವುದರಲ್ಲೂ ಇಂತದೇ ಪ್ರತ್ಯೇಕ ಮನೋಧರ್ಮವಿದೆ. ಬಹುರೂಪಿ ಅನನ್ಯತೆ ಎಂದು ಗುರುತಿಸಿಕೊಳ್ಳುವುದು ಬೇರೆ. ಆದರೆ ಹೀಗೆ ಬಿಡಿಯಾದ ಅನ್ಯತೆಯ ನಿರೂಪಣೆಗಳು ಅಖಂಡ ಮಾನವತಯೆನ್ನು ನುಡಿಸಲಾರವು. ಒಂದು ನಾಡಿನ ಪ್ರತ್ಯೇಕತಾ ಭಾವನೆಗಳ ಹಾಗೆಯೇ ಸಾಹಿತ್ಯ ನಿರೂಪಣೆಯಲ್ಲೂ ಸಾಹಿತ್ಯ ಸೃಷ್ಟಿಯ ಪ್ರತ್ಯೇಕತಾ ಭಾವನೆಗಳನ್ನು ಗಮನಿಸಬಹುದು. ದಲಿತ ಬಂಡಾಯ ಸಾಹಿತ್ಯವನ್ನು ಹೀಗೆಯೇ ಕಾಣಲಾಯಿತು ಮತ್ತು ಅದರಂತೆಯೇ ಸೃಷ್ಟಿಸಲಾಯಿತು. ಇದರ ಪರಿಣಾಮ ಗ್ರಾಮ್ಯ ಮತ್ತು ನಗರ ಸಂವೇದನೆಗಳ ದಾಖಲೆಯಲ್ಲೂ ಕಂಡಿತು. ಜಾತಿಗಳ ಅನುಭವಗಳು ಆಳದಲ್ಲಿ ಇಂತಹ ಪ್ರತ್ಯೇಕತಾ ನಿರೂಪಣೆಗಳಿಗೂ ಕಾರಣವಾಗಿರುತ್ತವೆ.

ಇಂತಹ ವಿಭಿನ್ನ ನಿರೂಪಣೆಗಳನ್ನು ವೈವಿಧ್ಯ ಎಂದು ಒಪ್ಪಬಹುದಾದರೂ ಗುಪ್ತವಾಗಿ ಅನ್ಯ ಸ್ವಭಾವ ಇರುವುದನ್ನು ನಿರಾಕರಿಸಲಾಗದು. ಇಂತಲ್ಲಿನ ಪ್ರತ್ಯೇಕತಾ ಭಾವನೆಯು ವಿಶಿಷ್ಠವಾಗಿರಬಹುದಾದರೂ ಸಾಹಿತ್ಯದ ಅಧ್ಯಯನ, ಓದಿನ ಅನುಸಂಧಾನಗಳಲ್ಲಿ ಬೇರೆಯೇ ಆಗಿ ಧ್ವನಿತವಾಗುತ್ತಿರುತ್ತದೆ. ಸಾಹಿತ್ಯ ವಿಮರ್ಶೆಯ ಮಾನದಂಡಗಳಲ್ಲಿ ಉಂಟಾಗುವ ಒಡಕಿನಲ್ಲಿ ಇದನ್ನು ಗಮನಿಸಬಹುದು. ತನ್ನ ಸಮುದಾಯದ ಅನುಭವಗಳು ದಾಖಲಾಗಿಲ್ಲ; ಅದನ್ನು ಸ್ಥಾಪಿಸಬೇಕು ಎಂಬ ಧೋರಣೆಯು ಸಾಹಿತ್ಯದ ನಿರೂಪಣೆಗಳಲ್ಲಿ ಆಗಾಗ ಕೇಳಿಬರುತ್ತಲೆ ಇರುತ್ತದೆ. ಪರೋಕ್ಷವಾಗಿ ಸಾಹಿತ್ಯದ ಅವಕಾಶದಲ್ಲಿ ಹಕ್ಕು ಚಲಾಯಿಸುವ ದಾರಿಗಳು ಕೂಡ ಇಂತಲ್ಲಿ ಸೃಷ್ಟಿಯಾಗುತ್ತವೆ. ಸ್ವತಃ ಸಾಹಿತ್ಯ ಅಕಾಡಮಿ ಹಾಗೂ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈ ಬಗೆಯ ’ನ್ಯಾಯದ ಅವಕಾಶ’ಗಳನ್ನು ಒದಗಿಸುವುದನ್ನು ಗಮನಿಸಬಹುದು. ಇಂತಹ ಬಗೆಗಳೆಲ್ಲವೂ ಮುಂದೆ ಕಟ್ಟ ಪರಿಣಾಮವನ್ನೆ ಮಾಡಬಲ್ಲವು. ಸಾಹಿತ್ಯದ ಮೂಲ ಆಶಯವು ಹೀಗಾಗಿಯೇ ರೂಪಾಂತರಗೊಂಡು ತನ್ನದಲ್ಲದೆ ಹೊಣೆಗಾರಿಕೆಯನ್ನೆಲ್ಲ ತಾನೆ ನಿರ್ವಹಿಸಲು ಮುಂದಾಗಿರುವುದು. ವರ್ತಮಾನದ ವಿಮರ್ಶಕರು ಇಂತಹ ಇಕ್ಕಟ್ಟಿಗೆ ಸಿಲುಕಿಯೇ ಭವಿಷ್ಯವನ್ನು ಪರಿಭಾವಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಈ ಅಂಶಗಳ ಹಿನ್ನೆಲೆಯಲ್ಲೆ ಮಹಿಳಾ ಸಾಹಿತ್ಯವನ್ನೂ ಗಮನಿಸಬಹುದು. ಮಹಿಳೆಯರ ಶುದ್ಧ ಸಾಹಿತ್ಯ ಬೇರೆ. ಮಹಿಳಾವಾದವೇ ಬೇರೆ. ಜನಪ್ರಿಯ ಕಾದಂಬರಿ ಬರೆವ ಸ್ತ್ರೀ ಲೇಖಕರಿಯರು ಸಂಖ್ಯೆಯಲ್ಲಿ ಗಣನೀಯವಾಗಿದ್ದಾರೆ. ಸ್ತ್ರೀ ಸಾಹಿತ್ಯ ಎನ್ನುವುದನ್ನು ಖಚಿತವಾಗಿ ನಿರ್ಧರಿಸಲಾಗದು. ಅಂತಿಮವಾಗಿ ಸಾಹಿತ್ಯದಲ್ಲಿ ಪುರುಷ ಸಾಹಿತ್ಯ-ಸ್ತ್ರೀ ಸಾಹಿತ್ಯ ಎಂಬುದು ಇಲ್ಲ. ನಮ್ಮ ವಾಗ್ವಾದಗಳ ಅನುಕೂಲಕ್ಕೆ ವಿಂಗಡನೆ ತಾತ್ಕಾಲಿಕವಾಗಿ ಬೇಕಾಗಬಲ್ಲದು. ವರ್ತಮಾನದಲ್ಲಿ ಸ್ತ್ರೀ ಸಂವೇದನೆ ದಟ್ಟವಾಗಿ ಕಾಣಿಸಿಕೊಳ್ಳುತ್ತಿರುವುದು ಭಾಷೆ ಮತ್ತು ಸಮಾಜದ ವಿಸ್ತರಣೆಯ ದೃಷ್ಟಿಯಿಂದ ಸ್ವಾಗತಾರ್ಹವಾದುದು. ಪುರುಷ ಭಾಷೆಯ ಪೂರ್ವಾಗ್ರಹ ಅಳಿಯಲು ಸ್ತ್ರೀ ನಿರೂಪಣೆಗಳು ಬೇಕೇ ಬೇಕು. ವರ್ತಮಾನದಲ್ಲಿ ಸ್ತ್ರೀ ಸಾಹಿತ್ಯಕ್ಕಿಂತ ಸ್ತ್ರೀವಾದವೇ ಪ್ರಧಾನವಾಗಿದೆ. ಸ್ತ್ರೀಯರ ಶೋಷಣೆಯ ವಿರುದ್ಧದ ಕಥನಗಳು ಸಾಹಿತ್ಯದ ಸೌಂದರ್ಯಕ್ಕಿಂತಲೂ ಚಾರಿತ್ರಿಕವಾದವು. ದಲಿತರು ನ್ಯಾಯ ಕೇಳಿದ ಧಾಟಿಯಲ್ಲಿ ಮಹಿಳೆಯರು ತಮ್ಮ ವಾದಗಳನ್ನು ಮಂಡಿಸುತ್ತಿಲ್ಲ. ಸ್ತ್ರೀ ಸಹಜ ನೈಸರ್ಗಿಕ ಸ್ವಭಾವಗಳಲ್ಲಿ ಮಹಿಳೆಯರು ತಮ್ಮ ಅನನ್ಯತೆಯನ್ನು ಬೌದ್ಧಿಕವಾಗಿ ಮಂಡಿಸುತ್ತಿರುವುದು ಹೆಗ್ಗಳಿಕೆಯಾಗಿದೆ. ಏಕಕಾಲಕ್ಕೆ ತಮ್ಮ ಪರವಾದ ಬೌದ್ಧಿಕ ನಿರ್ವಚನ ಮತ್ತು ಸೃಜನಶೀಲ ಅಭಿವ್ಯಕ್ತಿ ಎರಡನ್ನೂ ಸಮನಾಗಿ ಮಾಡುತ್ತಿರುವ ಮಹಿಳಾ ಸಾಹಿತ್ಯದ ರೀತಿನೀತಿಯು ಪುರುಷ ಸಮಾಜದ ಪರಿವರ್ತನೆಗೆ ತಕ್ಕುದಾದ ಆವರಣವನ್ನು ನಿರೂಪಿಸುತ್ತಿದೆ. ಸ್ತ್ರೀವಾದಿ ಚಿಂತನೆಗಳ ಪ್ರಮುಖ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು.

೧.  ಪುರುಷಾಧಿಪತ್ಯದ ಲಿಂಗ ರಾಜಕಾರಣವನ್ನು ಬೆತ್ತಲೆಗೊಳಿಸುವುದು.

೨. ಪುರುಷ ಪ್ರಧಾನ ಮತಧರ್ಮಗಳ ತಾರತಮ್ಯವನ್ನು ನಿರೂಪಿಸುವುದು.

೩. ಲೈಂಗಿಕ ಶೋಷಣೆಯ ಬಲೆಯನ್ನು ಬಿಡಿಸುವುದು.

೪. ಸಾಮಾಜಿಕ ನಿರ್ಬಂಧ ನಿಷೇಧಗಳನ್ನು ಹೋಗಲಾಡಿಸುವುದು.

೫. ಆರ್ಥಿಕ ಅವಕಾಶಗಳನ್ನು ಕಂಡುಕೊಳ್ಳುವುದು.

೬. ಕೌಟುಂಬಿಕ ಸಂಬಂಧಗಳ ಮಿತಿಯನ್ನು ಸುಧಾರಿಸುವುದು.

೭. ಲಿಂಗ ತಾರತಮ್ಯದ ಪೂರ್ವಾಗ್ರಹಗಳನ್ನು ಪರಿಹರಿಸುವುದು.

೮. ರಾಜಕೀಯ ಪ್ರಾತಿನಿಧ್ಯವನ್ನು ಸಾಧಿಸಿಕೊಳ್ಳುವುದು.

೯. ಹೆಣ್ಣು ಗಂಡಿನ ಸಮಾನತೆಯನ್ನು ಎಲ್ಲ ನೆಲೆಗಳಲ್ಲು ಸ್ಥಾಪಿಸುವುದು.

೧೦. ಆಧುನಿಕತೆಯ ನ್ಯಾಯದ ಅವಕಾಶಗಳನ್ನು ಪಡೆದುಕೊಳ್ಳುವುದು.

೧೧.  ಸ್ತ್ರೀ ಸಂವೇದಿ ಮೌಲ್ಯಗಳನ್ನು ಬೆಳೆಸುವುದು.

೧೨. ತನ್ನ ಆಸ್ಮಿತೆಯ ನಿರೂಪಣೆಗಳನ್ನು ಅಭಿವ್ಯಕ್ತಿಸುವುದು.

೧೩. ಅಖಂಡವಾಗಿ ಮಹಿಳಾ ಸಮಾಜವನ್ನು ಸಬಲೀಕರಿಸಿಕೊಳ್ಳುವುದು.

೧೪. ಹೆಣ್ಣುಗಂಡಿನ ಭೇದವಿಲ್ಲದ ಮಾನವ ಸಂಸ್ಕೃತಿಯನ್ನು ಕಟ್ಟುವುದು.

ಈ ಹಿನ್ನೆಲೆಯಲ್ಲಿ ಮಹಿಳಾವಾದ ಹಾಗೂ ಅದರ ಸಾಹಿತ್ಯವು ವರ್ತಮಾನದಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಈಗ ತಾನೆ ಬರೆಯುತ್ತಿರುವ ಯುವ ಪೀಳೀಗೆಯ ಬರಹವು ಮಹಿಳಾ ಸಾಹತ್ಯದ ಜೊತೆ ತನ್ನ ಸಂಬಂಧವನ್ನು ರೂಪಿಸಿಕೊಳ್ಳುತ್ತಿಲ್ಲ. ಭಿನ್ನ ಸಮೂಹಗಳು, ಸಾಹಿತ್ಯದ ಗುಂಪುಗಳು, ಅಭಿವ್ಯಕ್ತಿಯ ವೈವಿಧ್ಯತೆಗಳು ಅವರವರ ನೆಲೆಯಲ್ಲೇ ಇರುವುದರಿಂದ ಪ್ರಧಾನವಾದ ಒಂದು ಚಹರೆ ಕಾಣುತ್ತಿಲ್ಲ. ಇದರ ಅವಶ್ಯಕತೆ ಇಲ್ಲ ಎನ್ನಬಹುದಾದರೂ ಪರಂಪರೆಯ ಜೊತೆಗಿನ ಪಯಣದಲ್ಲಿ ಅದರ ಅನಿವಾರ್ಯತೆ ಇದೆ. ಈ ಕಾಲದ ಒಟ್ಟು ಸಾಹಿತ್ಯದಲ್ಲೆ ’ವೇಗದ’ ಅಂಶವು ದಟ್ಟವಾಗಿದೆ. ಆಧುನಿಕೋತ್ತರ ಸಮಾಜಗಳಿಗೆ ಸಮಯವೇ ಒಂದು ದೊಡ್ಡ ಸಮಸ್ಯೆ. ಬಿಡುವಿಲ್ಲದ, ಒತ್ತಡದ ಶೀಘ್ರ ಪರಿಹಾರದ, ತತ್‌ಕ್ಷಣದ ಕ್ಷಣಿಕ ನಿವಾರಣೆಯ ಮಾನದಂಡಗಳಿಂದ ಅಭಿವ್ಯಕ್ತಿ ಕೂಡ ಕ್ಷಣಿಕವಾಗುತ್ತಿದೆ.

ಸಮೂಹ ಮಾಧ್ಯಮಗಳ ವೇಗ ಕೂಡ ಇದಕ್ಕೆ ಪೂರಕವಾಗಿ ಸಾಹಿತ್ಯವನ್ನು ಬಳಸಿಕೊಳ್ಳುತ್ತಿದೆ. ಸಾಹಿತ್ಯ ಸೃಷ್ಟಿಯ ಸೂಕ್ಷ್ಮ ವಿಕಾಸಕ್ಕೆ ಇದರಿಂದ ಪೆಟ್ಟಾಗುತ್ತದೆ. ಸಂವೇದನೆಗಳು ಯಾಂತ್ರಿಕವಲ್ಲ. ಅವುಗಳ ಚಲನೆಯು ನಿಸರ್ಗನಿಷ್ಠವಾದುದು. ಉತ್ಪಾದನೆಯ ವೇಗದಂತೆ ರೀತಿ ನೀತಿಯಂತೆ ಸಾಹಿತ್ಯ ಸೃಷ್ಟಿಯ ವೇಗವನ್ನು ಅಳೆಯಲಾಗದು. ಸಾಹಿತ್ಯ ಸೃಷ್ಟಿಯು ಯಾವತ್ತೂ ವಿಕಾಸದ ಕ್ರಮದಲ್ಲಿದ್ದರೆ ಮಾತ್ರ ಅಂತಹ ಸಾಹಿತ್ಯಕ್ಕೆ ಕಾಲಾತೀತ ಸ್ವಭಾವವಿರುತ್ತದೆ. ಇಪ್ಪತ್ತೊಂದನೆ ಶತಮಾನದ ಬದಲಾವಣೆಯ ವೇಗ ವಿಪರೀತವಾಗಿದೆ. ವೇಗ ಮತ್ತು ವಿಕಾಸ ಒಂದೇ ಹಾದಿಯಲ್ಲಿ ಚಲಿಸಲಾಗುದ. ವಿಕಾಸದ ವೇಗಕ್ಕೂ ಬದಲಾವಣೆ ಮತ್ತು ಅಭಿವೃದ್ಧಿಯ ವೇಗಕ್ಕೂ ತುಂಬಾ ಅಂತರವಿದೆ. ಸಾಹಿತ್ಯ ಸಂವೇದನೆಯು ತೀವ್ರ ವೇಗದ ಜೊತೆ ಬೆಳೆಯಲಾರದು. ಮನುಷ್ಯರ ವಿಶಿಷ್ಠ ಸಂವೇದನೆಗಳು ಪ್ರವೃತ್ತಿಯ ಭಾಗವಾಗಿದ್ದು ನಿಸರ್ಗದ ನೀತಿಗೆ ಒಳಪಟ್ಟಿರುತ್ತವೆ. ಸಾಹಿತ್ಯ ಸೃಷ್ಟಿಯಲ್ಲಿ ಅನುಭೋಗಿ ಸ್ವಭಾವ ಹೆಚ್ಚಿದಂತೆಲ್ಲ ಒಟ್ಟು ಸಾಹಿತ್ಯ ಕ್ರಿಯೆಯೇ ಉದ್ಯಮದ ಸ್ವರೂಪಕ್ಕೆ ಹೋಗಿ ತಲುಪಬೇಕಾಗುತ್ತದೆ. ಪುಸ್ತಕೋದ್ಯಮವು ಬಂಡವಾಳಶಾಹಿ ಉತ್ಪಾದನಾ ರೀತಿಗೆ ಒಳಪಡುತ್ತಿದೆ. ಸಮೂಹ ಮಾಧ್ಯಮಗಳು ಸಾಹಿತ್ಯವನ್ನು ಉಪರುಚಿಯಾಗಿ ಉಣಿಸುತ್ತಿವೆ. ಪತ್ರಿಕೋಧ್ಯಮವು ಸಾಹಿತ್ಯವನ್ನು ಹಿಂದೆ ಪರಂಪರೆಯ ಭಾಗವಾಗಿ ಬೆಳೆಸುತ್ತಿದ್ದುದು ಈ ತಪ್ಪಿ ಮಾರುಕಟ್ಟೆಯ ಸರಕನ್ನಾಗಿ ಮಾರ್ಪಡಿಸುತ್ತಿರುವುದನ್ನು ಗಮನಿಸಬಹುದು. ಸಾಹಿತ್ಯದ ಸ್ಪರ್ಧೆಗಳು, ಹಣದ ಆಮಿಷಗಳು, ಮಾಧ್ಯಮದ ಆಕರ್ಷಣೆಗಳು ಯುವ ಲೇಖಕರನ್ನು ಸಾಹಿತ್ಯ ಮಾರುಕಟ್ಟೆಗೆ ಹೊಂದಿಸುತ್ತಿವೆ. ಹೀಗಾದಾಗಲ್ಲೆಲ್ಲ ಭಾಷೆ ಮತ್ತು ಭಾವನೆಗಳ ಸೂಕ್ಷ್ಮ ವಿಕಾಸವು ಕುಂಠಿತವಾಗುತ್ತದೆ.

ಇದಲ್ಲದೆ ಸಾಹಿತ್ಯ ಸೃಷ್ಠಿಯೇ ವೇಗದ ಜಾಯಮಾನಕ್ಕೆ ಒಳಗಾಗುತ್ತಿದೆ. ಅಲ್ಲೆ ಬರೆದು ಅಲ್ಲೇ ಪ್ರಕಟವಾಗಿ ಅಲ್ಲೇ ಓದಿ ಮುಗಿಸಿಬಿಡುವ ಅವಸರ ಕ್ರಮವು ಎಲ್ಲೆಡೆ ವ್ಯಾಪಿಸುತ್ತಿದೆ. ಇಂಟರ್‌ ನೆಟ್ ಸಾಹಿತ್ಯವನ್ನು ಇಲ್ಲಿ ಗಮನಿಸಬಹುದು. ಸಾಹಿತ್ಯವು ರೂಪುಗೊಳ್ಳುವ, ತಲುಪುವ, ಅಂತರಂಗಕ್ಕೆ ಇಳಿಯುವ, ಬೆಳೆಯುವ ರೀತಿಯೇ ಅಂತರ್ ಜಾಲ ಸಾಹಿತ್ಯ ಮಾಧ್ಯಮದಲ್ಲಿ ಬದಲಗಿದೆ. ದಿಢೀರ್ ನಿರೂಪಣೆಯು ಈ ಕಾಲದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಸಮಯವಿದ್ದಷ್ಟರಲ್ಲಿ ರೂಪಿಸಬೇಕು. ಸಮಯ ಸಿಕ್ಕಷ್ಟರಲ್ಲಿ ನೋಡಿದಂತೆ ಓದಿ ಮುಗಿಸಬೇಕು. ಹಾಗೆಯೇ ಪುಟವಕಾಶವಿದ್ದಷ್ಟಕ್ಕೆ ಮಾತ್ರ ಬರೆದು ಮುಗಿಸಬೇಕು. ಇದು ಓದುವ ರೀತಿಯಲ್ಲಿ ಕೂಡ ಕೆಟ್ಟ ಪರಿಣಾಮ ಮಾಡಬಲ್ಲದು. ಬರೆವ ರೀತಿಯಲ್ಲೂ ಅಸಹಜ ಬೆಳವಣಿಗೆಯನ್ನು ಮಾಡಬಲ್ಲದು. ಎಷ್ಟು ಬೇಗ ಸಾಹಿತ್ಯ ಹುಟ್ಟುವುದೊ ಅಷ್ಟು ಬೇಗ ಅದು ಅಳಿಯುವುದಕ್ಕೆ ಸಿದ್ಧವಾಗಿರುತ್ತದೆ. ಸಾಯಲೆಂದೇ ರೂಪುಗೊಳ್ಳುವ ಇಂತಹ ದಿಢೀರ್ ನಿರೂಪಣೆಗಳು ಭಾಷೆಯನ್ನು ಬಳಿಸಿ ಬಿಸಾಡುತ್ತವೆಯೇ ಹೊರತು ಭಾಷೆಯ ಜೀವವಾದ ಜನತೆಯನ್ನು ಗಾಢವಾಗಿ ಬೆಳೆಸುವುದಿಲ್ಲ.

ಹೊಸಪೀಳಿಗೆಯು  ಅವಸರದ ನಿರೂಪಣೆಗಳಲ್ಲೇ ತೊಡಗಿದೆ. ಸೃಷ್ಟಿಯು ಅವಸರದ್ದಾದರೆ ಅದು ಅಸಹಜ. ಸಾಹಿತ್ಯ ಸೃಷ್ಟಿಯು ಯಾವತ್ತೂ ಅವಸರಕ್ಕೆ ಒಳಗಾಗದು. ಒಂದು ವೇಳೆ ನಾಗರೀಕತೆಗಳ ವಿಪರೀತ ವೇಗದಲ್ಲಿ ಅದನ್ನು ಮನುಷ್ಯ ಸಾಧಿಸಿಕೊಂಡರೂ ಬದುಕುಳಿಯುವಲ್ಲಿ ಸಫಲವಾಗದು. ಸಾಹಿತ್ಯದ ನಿರೂಪಣೆಗಳು ವೇಗಕ್ಕಿಂತಲೂ ಮಿಗಿಲಾಗಿ ವಿಕಾಸದ ಚಲನೆಯನ್ನೇ. ಅನುಸರಿಸಬೇಕು. ನಾಡುನುಡಿಯ ಅಂತರಾಳವು ಮನುಷ್ಯತ್ವ ಕಥನವಾಗುವುದು ಇಂತಹ ಚಲನೆಯಲ್ಲೇ. ವೇಗವು ಮಿತಿ ಮೀರಿದರೆ ಭಾಷೆ ಕೂಡ ಲಯ ತಪ್ಪುತ್ತದೆ. ಸಾಹಿತ್ಯದ ಹುಡುಕಾಟ ಮನುಷ್ಯನ ಪ್ರವೃತ್ತಿಗಳನ್ನು ಅವಲಂಬಿಸುತ್ತದೆ. ಈ ಕಾಲದಲ್ಲಿ ಹುಡುಕಾಟಗಳು ಕ್ಷಣಿಕವಾದವು. ಆದರೆ ಇವುಗಳ ವೇಗ ಮಾತ್ರ ತೀವ್ರವಾದದ್ದು. ಹೆಚ್ಚು ವೇಗವಾದದ್ದು ಹೆಚ್ಚು ದೂರ ಕ್ರಮಿಸಲಾರದು. ಸಾಹಿತ್ಯ ಸಂವೇದನೆಗೂ ಇದು ಅನ್ವಯಿಸುತ್ತದೆ. ನಿಧಾನವಾಗಿ ಸೃಷ್ಟಿಯ ನಿಯಮಗಳಲ್ಲಿ ಸಾಗಿದ ಪಯಣವು ಗುರಿ ತಲುಪಬಲ್ಲದು.

ನವೋದಯ ಸಾಹಿತ್ಯಕ್ಕೆ ಇಂತಹ ಗುಣವಿತ್ತು. ಹಾಗಾಗಿಯೇ ಆ ಸಾಹಿತ್ಯಕ್ಕೆ ಇಂದಿಗೂ ದಟ್ಟ ಸಾಮಾಜಿಕತೆ ಹಾಗೂ ನಾಡಿನ ಆತ್ಮಕಥನದ ಶಕ್ತಿ ಇರುವುದು. ದಲಿತ ಬಂಡಾಯದ ನಿರೂಪಣೆಗಳು ತಟ್ಟನೆ ವ್ಯಕ್ತವಾದರೂ ಅವುಗಳ ಕಾಯ್ದುಕೊಂಡಿದ್ದ ಗತಕಾಲದ ಮೌನವು ದಿಢೀರ್‌ ತನಕ್ಕಿಂತ ಬೇರೆಯಾದುದು. ಈ ಹೊತ್ತಿನ ಯುವ ಬರಹಗಾರರಲ್ಲಿ ಭಾವನೆಗಳು ವೇಗವಾಗಿ ತೇಲಿ ಹೋಗುತ್ತಿವೆ. ನಮ್ಮ ಮನದಂಗಳದಲ್ಲಿ ಅವು ತಂಗುವುದಿಲ್ಲ. ಸಂಬಂಧ ಬೆಳೆಸುವುದಿಲ್ಲ. ಇದು ಅಭಿವ್ಯಕ್ತಿಯ ಸಮಸ್ಯೆ. ಗ್ರಹಿಕೆಯ ತೊಡಕು. ಅನುಭವಗಳ ಕೊರತೆ. ಧ್ಯಾನದ ವೈಫಲ್ಯ. ವೇಗದ ತರಾತುರಿ. ಈ ಸ್ಥಿತಿಗೆ ಮಾಧ್ಯಮಗಳ ಕೆಟ್ಟ ಆಕರ್ಷಣೆ ಕೂಡ ಕಾರಣವಾಗುತ್ತದೆ. ಬದಲಾಗುತ್ತಿರುವ ಕಾಲದಲ್ಲಿ ಮನುಷ್ಯ ಸ್ವಭಾವಗಳು ಕೂಡ ಸಂಕುಚಿತವಾಗುತ್ತಿವೆ. ಇಲ್ಲವೆ ಹಳೆಯ ಸ್ವರೂಪ ಬಿಟ್ಟು ಹೊಸ ತಲೆಮಾರಿನ ಅವಕಾಶಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿವೆ. ಔದ್ಯಮಿಕ ಜೀವನ ಕ್ರಮ ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ ಅನುಭವಗಳು, ಅಭಿವ್ಯಕ್ತಿಗಳು ಕಲುಷಿತ ಗೊಳ್ಳುತ್ತಿವೆ. ಹೊಸ ಪೀಳೀಗೆಯ ಲೇಖಕರು ಪರಂಪರೆಯ ಜೊತೆ ವಿಹರಿಸಲು ಸಮಯವನ್ನೆ ಉಳಿಸಿಕೊಳ್ಳುತ್ತಿಲ್ಲ. ತಮ್ಮ ಕಾಲದ ಲೇಖಕರನ್ನು ಕೂಡ ಗಾಢವಾಗಿ ಓದಿಕೊಳ್ಳುತ್ತಿಲ್ಲ. ಓದುವ ಪರಂಪರೆಯೇ ಇಳಿಮುಖವಾಗುತ್ತಿದ್ದು ಕೇವಲ ನೋಡುವ, ಕೇಳಿಸಿಕೊಳ್ಳುವ ಸ್ವಭಾವಗಳೇ ಮುಂದಾದಾಗ ಭಾಷೆಯ ನಿರೂಪಣಾ ಸಾಮರ್ಥ್ಯವು ಹಿಂದೆ ಸರಿಯಬೇಕಾದ ಇಕ್ಕಟ್ಟು ಎದುರಾಗುತ್ತದೆ. ಬರಹ ಪರಂಪರೆ ಹೆಚ್ಚು ಶಕ್ತಶಾಲಿಯಾಗಬೇಕಾದರೆ ಓದುವ ಪರಂಪರೆಯೂ ಗಾಢವಾಗಿ ಬರಹಗಳ ಜೊತೆ ಅನುಸಂಧಾನವನ್ನು ಮಾಡಬೇಕು. ಇವೆರಡೂ ಬೇರೆ ಅಲ್ಲ. ಒಂದನ್ನೊಂದು ಅನುಸರಿಸಿಕೊಂಡೇ ಲಿಖಿತ ಭಾಷೆಯು ಬೆಳೆಯುವುದು. ತಂತ್ರಜ್ಞಾನದ ಬಳಕೆ ಹೆಚ್ಚಿದಂತೆಲ್ಲ ಭಾಷೆಯ ಸ್ವರೂಪ ಬದಲಾಗುವುದು ಅನಿವಾರ್ಯ. ಆದರೆ ಜೀವನ ಕ್ರಮವೇ ದಾರಿ ತಪ್ಪಿದರೆ ಭಾಷೆಯ ನೀತಿಯೂ ಅಡ್ಡದಾರಿ ಹಿಡಿಯುತ್ತಿದೆ. ಸಮಕಾಲೀನ ಯುವ ಪೀಳಿಗೆಯ ಜೀವನ ವಿಧಾನವು ಬದಲವಣೆಯ ವೇಗಕ್ಕೆ ಸಿಲುಕಿರುವುದರಿಂದ ಅವರ ನಿರೂಪಣೆಗಳಲ್ಲಿ ವಿಕಾಸದ ಸೌಂದರ್ಯವಿಲ್ಲ. ಕೃತಕವಾದ ಅಲಂಕಾರವು ತಾಂತ್ರಿಕವಾಗಿದ್ದು ಅವರಲ್ಲಿ ಜೀವನ ದರ್ಶನ ಕಾಣುತ್ತಿಲ್ಲ. ಜೀವನ ದರ್ಶನ ಎನ್ನುವುದು ಅರಿವಿನ ಉನ್ನತ ಸ್ಥಿತಿ. ಮಾನವ ಸಮಾಜದ ಚೈತನ್ಯದ ಹುಡುಕಾಟವೇ ದರ್ಶನದ ರೀತಿ. ಇದು ಎಲ್ಲ ಬರಹಗಾರರಲ್ಲೂ ಇರಬೇಕಾದ ಸ್ವಭಾವ ಹಾಗು ಅಂತಿಮಶಕ್ತಿ. ಹಿರಿ ಕಿರಿಯ ಬರಹಗಾರರೆಲ್ಲರಲ್ಲೂ ಇದರ ಅಂಶ ಇದ್ದೇ ಇರುತ್ತದೆ. ಆದರೆ ಈ ಚೈತನ್ಯದ ಹಸಿವಿಲ್ಲದಂತಿರುವ ಈ ಕಾಲದಲ್ಲಿ ಯುವ ಪೀಳೀಗೆಯು ಬರಿಯ ಕೃತಕ ಹಸಿವಿನಲ್ಲಿ ಅಭಿವೃದ್ಧಿ ಎಂಬ ಹುಸಿಯ ಬದಲಾವಣೆಯಲ್ಲಿ ಮಾತ್ರವೇ ಹೆಚ್ಚು ತೊಡಗಿದಂತಿದೆ. ಅನುಭಾವಿ ಸಂವೇದನೆಯ ಯತ್ನಗಳೇ ಇಲ್ಲವೆಂದೇನಿಲ್ಲ. ಅಂತಹ ಯತ್ನಗಳು ಕೆಲವರಾದರೂ ಮುಖ್ಯ ಬರಹಗಾರರಲ್ಲಿ ಇರುವುದನ್ನು ಈ ಕಾಲಘಟ್ಟದಲ್ಲಿ ಗುರುತಿಸಬಹುದು.

ಒಟ್ಟಿನಲ್ಲಿ ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಚಳುವಳಿಯ ಗುಣಗಳಿಲ್ಲ. ವಿಶೇಷವಾಗಿ ರಾಜಕೀಯ ಪ್ರಜ್ಞೆ ಇದೆ. ವೈಚಾರಿಕ ಜಾಗೃತಿಯು ಹೆಚ್ಚಿದೆ. ಜಾಗತಿಕ ಜಾಲವೂ ಸಾಧ್ಯವಾಗಿದೆ. ಸಾಹಿತ್ಯದ ಕೆಲವೇ ಪ್ರಕಾರಗಳ ಪ್ರಾಬಲ್ಯವು ಕಡಿಮೆಯಾಗಿ ಶುದ್ಧ ಸೃಜನಶೀಲ ಸಾಹಿತ್ಯ ಪ್ರಕಾರಗಳಿಗಿಂತಲೂ ಹೆಚ್ಚಾಗಿ ಸಾಹಿತ್ಯೇತರ ಬರಹಗಳು ಪ್ರಧಾನವಾಗಿ ವಿಸ್ತರಿಸಿಕೊಳ್ಳುತ್ತಿವೆ. ಜಗತ್ತಿನ ಸಂಗತಿಗಳನ್ನೆಲ್ಲ ತಿಳಿಯಬೇಕು ಎಂಬ ಒತ್ತಡದಲ್ಲಿ ಜಾಗತಿಕ ವಿದ್ಯಮಾನಗಳ ಮಾನವಿಕ ವಿಚಾರಗಳ ಬರಹಗಳು ಹೆಚ್ಚಿವೆ. ಸ್ವತಃ ಪೂರ್ಣಚಂದ್ರ ತೇಜಸ್ವಿ ಅವರೇ ’ಮಿಲೇನಿಯಂ ಸೀರೀಸ್‌’ನ ಬರಹಗಳನ್ನು ಇಂತಹ ಹಿನ್ನೆಲೆಯಲ್ಲಿ ರೂಪಿಸಿದ್ದಿದೆ. ವಿಜ್ಞಾನ, ತಂತ್ರಜ್ಞಾನ, ಮಾಹಿತಿ ವಿಜ್ಞಾನದಂತಹ ಪರಿಚಯಾತ್ಮಕ ಬರಹಗಳು ಜನಪ್ರಿಯ ನಿರೂಪಣೆಯಲ್ಲಿ ಪ್ರಕಟವಾಗುತ್ತಿರುವುದು ಕನ್ನಡ ಭಾಷೆಯ ವಿಸ್ತರಣೆಯಲ್ಲಿ ಗಮನಾರ್ಹವಾದುದಾಗಿದೆ. ಅಂತರ್‌ಜಾಲದಲ್ಲಿ ಬರಹ ಮಾಡುತ್ತಿರುವ ಯುವ ಪೀಳಿಗೆಯ ಗ್ರಹಿಕೆ ಅನುಭವ ನಿರೂಪಣೆಯು ಅಚ್ಚರಿಹುಟ್ಟಿಸುವಂತೆ ಪರಿಷ್ಕಾರಗೊಂಡಿದೆ. ಮಾಹಿತಿ ತಂತ್ರಜ್ಞಾನದ ನೆಲೆಯು ಭಾಷೆಯ ಸಂವಹನ ಸಾಧ್ಯತೆಯನ್ನೆ ವಿಚಿತ್ರವಾಗಿ ಪಳಗಿಸುತ್ತಿದೆ. ಬದಲಾಗುತ್ತಿರುವ ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಸಾಹಿತ್ಯೇತರ ಬರಹಗಳು ಸಮೂಹ ಮಾಧ್ಯಮಗಳಲ್ಲಿ ಮುಖ್ಯ ಅವಕಾಶವನ್ನು ಪಡೆದುಕೊಳ್ಳುತ್ತಿರುವುದು ಕನ್ನಡ ನಾಡಿನ ಭವಿಷ್ಯಕ್ಕೆ ಅನಿವಾರ್ಯವಾಗಿದೆ. ಈಗ ತಾನೆ ಬಹುಬಗೆಯ ಜ್ಞಾನ ಪ್ರಕಾರಗಳ ಹುಡುಕಾಟ ಆರಂಭವಾಗಿದ್ದು ಸಾಹಿತ್ಯ ನಿರೂಪಣೆಗಳ ಪಾಲಿಗಿಂತಲೂ ಮಿಗಿಲಾಗಿ ಅನ್ಯ ಶಿಸ್ತುಗಳ ಬರಹಗಳು ವ್ಯಾಪಿಸಿಕೊಳ್ಳುತ್ತಿವೆ. ಸಂಶೋಧನಾ ಬರಹಗಳು ಮತ್ತೊಂದು ದಿಕ್ಕಿನಿಂದ ಕನ್ನಡ ನಾಡು ನುಡಿಯನ್ನು ತಡಕಾಡುತ್ತಿದ್ದು ವಿಶೇಷವಾಗಿ ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಜ್ಞಾನಗಳ ಬರಹಗಳು ಗಮನ ಸೆಳೆಯುತ್ತಿವೆ. ಈ ಬಗೆಯ ಸಂಶೋಧಿತ ಬರಹಗಳಿಗೆ ಓದಿನ ಅವಕಾಶ ಕಡಿಮೆ ಇದ್ದರೂ ಸೈದ್ಧಾಂತಿಕವಾದ ನಿರೂಪಣೆಗಳ ಪ್ರಮಾಣ ಹೆಚ್ಚಾಗಿಯೇ ಇದೆ.

ಹೀಗಾಗಿಯೇ ಶುದ್ಧ ಸಾಹಿತ್ಯ ಪ್ರಕಾರಗಳ ಆಚೆಗಿನ ಗದ್ಯ ನಿರೂಪಣೆಗಳೆ ಈ ಕಾಲದಲ್ಲಿ ಹೆಚ್ಚು ವಾಗ್ವಾದ ಚರ್ಚೆಗಳಿಗೆ ಕಾರಣವಾಗುತ್ತಿವೆ. ಇಂತಹ ಓದಿನ ಕಡೆಗೆ ಜನಸಾಮಾನ್ಯರೂ ಮುಖ ಮಾಡಿದ್ದಾರೆ. ಸೃಜನಶೀಲವೆಂದು ಗುರುತಿಸಿಕೊಂಡ ಯಜಮಾನ್ಯ ಪ್ರಕಾರಗಳಾದ ಕತೆ ಕಾದಂಬರಿ, ಕಾವ್ಯ ಪ್ರಕಾರಗಳ ಸಾಹಿತ್ಯವನ್ನು ಓದುವವರಿಗಿಂತ ಸಾಹಿತ್ಯೇತರ ಬರಹಗಳನ್ನು ಓದುವವರೇ ಹೆಚ್ಚಿದ್ದಾರೆ. ಪುಸ್ತಕೋಧ್ಯಮ ಮಾಹಿತಿ ಉದ್ಯಮ ಇವೆರಡೂ ಸೇರಿ ಸಾಮಾನ್ಯ ಓದುಗರನ್ನು ಸೆಳೆದುಕೊಂಡಿವೆ. ಸೃಜನಶೀಲ ಸಾಹಿತ್ಯ ಪ್ರಕಾರಗಳಷ್ಟೇ ಪ್ರಬಲವಾಗಿ ಸಾಹಿತ್ಯೇತರ ಸಂಗತಿಗಳ ನಿರೂಪಣೆಗಳು ಸ್ಥಾನ ಪಡೆದುಕೊಂಡಿವೆ. ಇದು ಒಳ್ಳೆಯದೇ. ಕಥೆ, ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ ಇವು ಸಾಹಿತ್ಯ ಪ್ರಕಾರದಲ್ಲಿ ಯಜಮಾನರಂತೆ ಅಭಿವ್ಯಕ್ತಿಯ ಬಹುಪಾಲು ಅವಕಾಶವನ್ನು ಅಲಂಕರಿಸಿಕೊಂಡಿದ್ದವು. ಈ ಯಜಮಾನ ಪ್ರಕಾರಗಳ ಏಕತಾನತೆಯು ಓದುಗರಿಗೆ ಭಾರವೆನಿಸಿರಬೇಕು. ಸಾಹಿತ್ಯೇತರ ಓದಿನ ಸಮೂಹವು ಕನ್ನಡ ನಾಡುನುಡಿಯ ಬೇರೊಂದು ಕಥನದ ಜೊತೆ ಅನುಸಂಧಾನಕ್ಕೆ ಸಜ್ಜಾಗಿದೆ. ಆ ನಿಟ್ಟಿನಲ್ಲಿ ಮುಂದಿನ ಬರಹಗಳು ರೂಪ ಪಡೆದುಕೊಳ್ಳಬೇಕಾಗಿದ್ದಿದೆ.