ಯಾವುದೇ ಒಂದು ನಾಡಿನ ಅರ್ಧ ಶತಮಾನವು ಚಾರಿತ್ರಿಕ ವಿಶ್ಲೇಷಣೆಗೆ ತಕ್ಕುದಾದ ಕಾಲಮಾನ. ಸಮಾಜ ಸಂಸ್ಕೃತಿ ಸಾಹಿತ್ಯ ಭಾಷೆಗಳನ್ನು ಪರಿಶೀಲಿಸುವ ಇಷ್ಟು ಕಾಲಾವಧಿಯಲ್ಲಿ ಸಾಕಷ್ಟು ಬದಲಾವಣೆಗಳು ಘಟಿಸಿರುತ್ತವೆ. ಏಕೀಕರಣೋತ್ತರ ಕನ್ನಡ ಸಮಾಜದ ಒಳಗೆ ಅನೇಕ ಬಗೆಯ ಪಲ್ಲಟಗಳು ಘಟಿಸಿವೆ. ಚರಿತ್ರೆಗೆ ಸೂಕ್ತವಾದ ಸಂಗತಿಗಳೆಂದು ಈ ಕಾಲ ಘಟ್ಟದಲ್ಲಿ ಗುರುತಿಸಿಕೊಳ್ಳಲು ವಿಫುಲ ಅವಕಾಶವಿದೆ. ಸಾಂಪ್ರದಾಯಿಕ ಚರಿತ್ರೆಕಾರರಿಗೆ ವಸ್ತುವಿಷಯ ಮತ್ತು ಘಟನೆಗಳಲ್ಲಿ ನಿರ್ದಿಷ್ಟ ಆಯ್ಕೆಗಳಿರುತ್ತವೆ. ಮಹತ್ವದ ಸಂಗತಿಯೇ ಅಂತವರಿಗೆ ಮುಖ್ಯ. ಸಾಮಾನ್ಯ ಬಿಡಿ ವಿವರಗಳು ಚರಿತ್ರೆಗೆ ವಿಷಯವಾಗಲಾರವು ಎಂಬ ರೂಢಿ ಹಿಂದಿನಿಂದಲೂ ಬಂದಿದೆ. ಏಕೀಕರಣದ ಪೂರ್ವದ ಕನ್ನಡ ಚರಿತ್ರೆಯಲ್ಲಿ ಅಂತಹ ಘನತೆಯ ಹಿರಿದಾದ ಹೆಮ್ಮೆಯ ಸಂಗತಿಗಳೇ ಚರಿತ್ರೆಯಲ್ಲಿ ಮಾನ್ಯವಾಗಿವೆ.

ಮಾನ್ಯವಾದುದೆಲ್ಲ ಮನುಷ್ಯ ಸಮಾಜದ ಏಳಿಗೆಗೆ ಸಂಬಂಧಿಸಿದ್ದೇ ಆಗಿರುತ್ತದೆ ಎಂದು ಹೇಳಲಾಗದು. ಮಹಾಶೂರನಾದ ರಾಜನು ಸಾವಿರಾರು ಜನರನ್ನು ಯುದ್ಧದಲ್ಲಿ ಕೊಂದ ಎಂದದ್ದು ಘನತೆಯಲ್ಲ. ಮಹಾ ಮಾಂಡಲೀಕನೊಬ್ಬ ನೂರು ಹೆಂಗಸರನ್ನು ಏಕಕಾಲಕ್ಕೆ ವಿವಾಹವಾದನೆಂದು ಶಾಸನ ಹಾಕಿಸಿಕೊಳ್ಳುವುದು ವಿಕ್ರಮ ಎನಿಸದು. ಹಾಗೆಯೇ ಪಾಳೆಯಗಾರನೊಬ್ಬ ನೆರೆಯ ಹಳ್ಳಿಯ ಮೇಲೆ ದಾಳಿ ಮಾಡಿ ಅವನ ಬಂಟರು ಲೂಟಿ ಮಾಡಿ ದನಕರುಗಳನ್ನು ಅಟ್ಟಿಕೊಂಡು ಹೋದರೆಂಬುದು ಪರಾಕ್ರಮದ ದಿಗ್ವಿಜಯ ಆಗಲಾರದು. ಅಂತೆಯೇ ಸಾಮ್ರಾಟನ ಆಸ್ಥಾನದಲ್ಲಿ ಸಾವಿರ ಭಜನೆಗಳನ್ನು ಹಾಡಿದನೆಂದ ಕಾರಣಕ್ಕೆ ಈ ವಿದುಷಿಯು ಚರಿತ್ರೆಗೆ ಬೇಕಾದುದನ್ನು ಸಾಧಿಸಿದನೆಂದು ತೀರ್ಮಾನಿಸಲಾಗದು. ಅಲ್ಲದೆ ಕವಿಯೊಬ್ಬ ಆಸ್ಥಾನ ಪಂಡಿತನಾಗಿ ಕಲಾಕೋವಿದನಾಗಿ ಸಹಸ್ರನಾಮ ಪುರಾಣ ರಚನೆಗಳನ್ನು ರಾಜನಿಗಾಗಿ ರಚಿಸಿಕೊಟ್ಟನು ಎಂಬುದು ಜನತೆಯ ಪ್ರತೀಕವಾಗದೆ ಹೊಗಳುಭಟ್ಟನ ಸ್ಥಾನಕ್ಕೆ ಮಾತ್ರ ಸೀಮಿತವಾಗಬಲ್ಲದು.

ಈ ಮಾತುಗಳನ್ನು ಏಕೀಕರಣಾನಂತರದ ಕಾಲಘಟ್ಟದಲ್ಲಿ ಒತ್ತಿ ಹೇಳಬೇಕಾಗಿದೆ. ನಮ್ಮ ಸಮಾಜಗಳ ದನಿಯಾಗಿ ಚರಿತ್ರೆಯನ್ನು ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳ ಮೂಲಕ ನಿರ್ವಚಿಸುವಾಗ ಚರಿತ್ರೆಗೆ ಒಳಪಡುವ ವಸ್ತು ವಿಷಯದ ಕ್ರಮದಲ್ಲೇ ಎಚ್ಚರ ತೋರಬೇಕಾಗುತ್ತದೆ. ಸಾಹಿತ್ಯ ಮತ್ತು ಸಾಮಾಜಿಕ ಸಂಘರ್ಷಗಳಲ್ಲಿ ವ್ಯಕ್ತವಾಗುವ ಅನುಭವವು ರೂಪಕ ನಿರೂಪಣೆಗಳಲ್ಲೂ ಪ್ರತಿರೋಧದ ಘರ್ಷಣೆಯಲ್ಲೂ ಇರುತ್ತದೆಂಬುದು ತಿಳಿದ ಸಂಗತಿಯೇ. ಆದರೆ ಇಂತಹ ದಾಖಲೆ ಕೂಡ ಚರಿತ್ರೆಯ ನಿರೂಪಣೆಗೆ ತಕ್ಕ ಆಕರವೇ ಆಗಿರುತ್ತದೆ. ಸಾಹಿತ್ಯ ವಿಮರ್ಶೆ ಮೂಲತಃ ಚರಿತ್ರೆಯ ರಚನೆಗೆ ಬೇಕಾದ ಒಳನೋಟವನ್ನು ಕೊಡುವಂತದ್ದು. ಸಾಹಿತ್ಯದ ನಿರೂಪಣೆ ಅನುಭವಕ್ಕೆ ಸೌಂದರ್ಯದ ವಿನ್ಯಾಸವನ್ನು ತೊಡಿಸುತ್ತದೆ. ಹಾಗೆಯೇ ಸಾಮಾಜಿಕ ಘಟನೆಗಳಿಗೆ ಸಮಷ್ಠಿಯಾದ ಧ್ವನಿಶಕ್ತಿಯನ್ನು ತಂದುಕೊಡುತ್ತದೆ. ಹಾಗಾಗಿ ಸಾಹಿತ್ಯದ ಸೌಂದರ್ಯ ಮತ್ತು ಭಾವನಾತ್ಮಕ ಗುಣವು ಚರಿತ್ರೆಯ ವರದಿಯ ಕ್ರಮದಲ್ಲಿ ಇರಲಾರದು. ಆದರೆ ಚರಿತ್ರೆ ಕೂಡ ಕಲಾತ್ಮಕವಾಗಿ ದಾಖಲಾಗಬಲ್ಲದು.  ಏಕೀಕರಣಾನಂತರದ ಕನ್ನಡ ಸಾಹಿತ್ಯ ಮತ್ತು ಸಮಾಜಗಳ ಅನುಸಂಧಾನವನ್ನು ಕಲಾತ್ಮಕ ವಿಶ್ಲೇಷಣೆಯಲ್ಲಿ ನಿರ್ವಚಿಸಲು ಸಾಧ್ಯ.

ಯಾವುದೇ ಕಾಲದಲ್ಲೂ ಕೂಡ ಪ್ರಭುತ್ವದ ಶಕ್ತಿಗಳು ಚರಿತೆಯಲ್ಲಿ ತನಗೆ ಬೇಕಾದ ಅಂಶಗಳನ್ನೆ ಆಯ್ದುಕೊಂಡು ತನ್ನ ಕಾಲದ ಸಾಧನೆ ಇಂತಿಂತಹದ್ದು ಎಂದು ರೂಪಿಸಿಕೊಳ್ಳುತ್ತದೆ. ಆದರೆ ಯಾವತ್ತೂ ಕೂಡ ಪ್ರಭುತ್ವ ಅಂತಹ ಚರಿತ್ರೆಯ ನಿರೂಪಣೆಯ ಯಜಮಾನ್ಯಕ್ಕೆ ಸಿಕ್ಕಿ ಹಾಕಿಕೊಂಡು ಸ್ವಹಿತ ವರದಿಯನ್ನು ಮಾಡುವುದರಲ್ಲೇ ಹೆಚ್ಚಿನ ಶ್ರಮವನ್ನು ಹಾಕುತ್ತಿರುತ್ತದೆ. ಇಂತಲ್ಲಿ ಪ್ರಭುತ್ವ ಮತ್ತು ಜ್ಞಾನ ಬೇರೆಯಾಗಿರಲು ಆಗದು. ಭಾಷೆಯ ನಿರೂಪಣೆಯೂ ಇಲ್ಲಿ ರಾಜಕೀಯ ಪ್ರಭುತ್ವದ ಜೊತೆ ಸಂದಾನ ಮಾಡಿಕೊಂಡಿರುತ್ತದೆ. ವಿದ್ವತ್ ವಲಯವು ಪ್ರಭುತ್ವದ ಜೊತೆ ಕೈಜೋಡಿಸಿದಾಗ ರಚಿಸಲ್ಪಡುವ ಇತಿಹಾಸವು ಸಾಮಾಜಿಕ ವಾಸ್ತವವನ್ನು ಮುಂದಿಟ್ಟುಕೊಂಡು ವಿಶ್ಲೇಷಿಸುವುದಿಲ್ಲ. ಜ್ಞಾನ ಮತ್ತು ಪ್ರಭುತ್ವ ಒಂದಾದಲ್ಲಿ ಜನತೆಯ ಅಭಿಪ್ರಾಯಗಳು ಮತ್ತಷ್ಟು ಕುಗ್ಗಿ ಹೋಗುತ್ತವೆ. ಜನಸಾಮಾನ್ಯರ ಪ್ರತಿನಿಧಿಗಳೆಂದರೆ  ಆ ನಾಡಿನ ಲೇಖಕರು, ಚಿಂತಕರು, ಚಳುವಳಿಕಾರರು, ಪ್ರಜ್ಞಾವಂತರು, ಇವರೇ ಪ್ರಭುತ್ವದ ಮಾತಿಗೆ ಪೂರಕವಾಗಿ ತಮ್ಮ ಪ್ರತಿರೋಧವನ್ನು ಬೌದ್ಧಿಕ ವ್ಯಾಪಾರದಲ್ಲಿ ಮಾರಿಕೊಂಡಾಗ ಜನಸಾಮಾನ್ಯರ ಮಾತುಗಳು ಕಳೆದು ಹೋಗುತ್ತವೆ. ಚರಿತ್ರೆಯನ್ನು ನಿರೂಪಿಸುವಾಗ ಈ ಬಗೆಯ ಸ್ಥಿತಿಯು ಲೆಕ್ಕಕ್ಕೇ ಬರದಂತಾಗುತ್ತದೆ. ಕರ್ನಾಟಕದ ಚರಿತ್ರೆ ರಚನೆಯ ಉದ್ದಕ್ಕೂ ಹೆಚ್ಚು ಕಡಿಮೆ ಇದೇ ಬಗೆಯ ಸ್ವಭಾವವು ಬೆಳೆದುಕೊಂಡು ಬಂದಿದೆ. ಏಕೀಕರಣೋತ್ತರ ಕನ್ನಡ ಸಾಹಿತ್ಯ ಸಮಾಜ ರಾಜಕಾರಣಗಳ ಚರಿತ್ರೆಯನ್ನು ನಿರ್ಧರಿಸುವಾಗ ಪ್ರಜಾಪ್ರಭುತ್ವವಾದಿ ಅಂಶಗಳನ್ನು ನೆನಪಿಟ್ಟುಕೊಂಡು ವರ್ತಮಾನದ ಮೂಲಕ ಗತವನ್ನು ಗ್ರಹಿಸಬೇಕು. ಸಾಹಿತ್ಯ ಪರಂಪರೆಗಳ ಮೂಲಕ ಚರಿತ್ರೆಯನ್ನು ನಿರೂಪಿಸುವಾಗಲೆಲ್ಲ ಈ ಮಾತನ್ನು ಆತ್ಯಂತಿಕವಾಗಿಯೆ ಭಾವಿಸಬೇಕು. ಸಾಹಿತ್ಯ ಚಳುವಳಿಗಳು ವರ್ತಮಾನದ ಮೂಲಕ ಗತವನ್ನು ಗ್ರಹಿಸಿರುತ್ತವೆ. ಸಾಹಿತ್ಯ ಕೃತಿಯಾದರೂ ರೂಪುಗೊಳ್ಳುವುದು ವರ್ತಮಾನದ ಜಾಗೃತಿಯಿಂದ ಮತ್ತು ಗತಕಾಲದ ಅನುಭವಗಳಿಂದ. ಸೃಜನಶೀಲತೆಯು ಇಲ್ಲಿ ವರ್ತಮಾನದಿಂದ ಗತವನ್ನು ಮರುಸೃಷ್ಟಿಗೆ ಒಳಪಡಿಸುತ್ತಿರುತ್ತದೆ. ಈ ಬಗೆಯಲ್ಲಿ ಸೃಷ್ಟಿಯಾದ ಸಾಹಿತ್ಯವು ಚರಿತ್ರೆಗೆ ಆಕರವಾಗುವಾಗ ಚರಿತ್ರೆಯ ಭಾಷೆ ಕೂಡ ಸೃಜನಶೀಲವಾಗಿ ವರ್ತಮಾನದಿಂದಲೇ ವಿವೇಚಿಸಬೇಕಾಗುತ್ತದೆ. ಈ ದಾರಿಯಲ್ಲಿ ಚರಿತ್ರೆಯನ್ನು ನಿರೂಪಿಸಲು ಹೊರಟಾಗ ಇತಿಹಾಸದ ಆಕರಗಳು, ಘಟನೆಗಳು, ಸಾಕ್ಷ್ಯಗಳು ಹಿಂದೆ ಸರಿದು ಅವುಗಳ ಮಾನಸಿಕ ಸ್ಥಿತಿಯನ್ನು ಆಧರಿಸಿ ಸೃಜನಶೀಲವಾದ ಕಥನವು ವರ್ತಮಾನದಿಂದ ಸೃಷ್ಟಿಯಾಗುತ್ತದೆ.

ಏಕೀಕರಣಾನಂತರದ ಕನ್ನಡ ಸಾಹಿತ್ಯದ ಸಮಾಜವು ಬಹು ಬಗೆಯ ಸಾಮಾಜಿಕತೆಯನ್ನು ಧ್ವನಿಸಿದೆ. ಏಕ ಕಾಲಕ್ಕೆ ಹಲವು ಆಲೋಚನೆಗಳು, ಸಂಘರ್ಷಗಳು, ಹೋರಾಟಗಳು, ಪ್ರತಿ ಚಿಂತನೆಗಳು ತೀವ್ರವಾಗಿ ಘಟಿಸಿವೆ. ಸಾಹಿತ್ಯ ಮತ್ತು ಸಮಾಜಗಳೆರಡೂ ಒಂದಾಗಿ ತನ್ನ ಕಾಲದ ಪ್ರಭುತ್ವದ ಜೊತೆ ಮುಖಾಮುಖಿಯಾಗಿವೆ. ಇದು ಸಮಾಜದ ಗತಿಶೀಲತೆಯ ಜೊತೆಗೆ ಕನ್ನಡಿಗರ ಸ್ಥಿತಿಯಲ್ಲಾದ ಪಲ್ಲಟ. ಭಾಷೆಯೂ ಇವುಗಳ ಭಾಗವೇ. ಐದು ದಶಕಗಳ ಕಾಲಾವಧಿಯ ಕನ್ನಡ ಸಾಹಿತ್ಯ ಮತ್ತು ಸಮಾಜವನ್ನು ನವೋದಯದ ಕನ್ನಡನಾಡು, ಪ್ರಗತಿಶೀಲರ ಕನ್ನಡ ನಾಡು, ಜನಪ್ರಿಯ ಸಾಹಿತ್ಯದ ಕನ್ನಡನಾಡು, ನವ್ಯ ಸಾಹಿತ್ಯದ ಕನ್ನಡ ನಾಡು, ದಲಿತ ಬಂಡಾಯದ ಕನ್ನಡ ನಾಡು ಹಾಗೂ ಆಧುನೀಕೋತ್ತರ ಕನ್ನಡ ನಾಡು ಎಂದು ವಿಂಗಡಿಸಿಕೊಂಡು ಚಾರಿತ್ರಿಕ ವಿಶ್ಲೇಷಣೆಯನ್ನು ವಿಸ್ತರಿಸಬಹುದು. ಈ ಒಂದೊಂದು ಸಾಹಿತ್ಯದ ಪ್ರಭೇದಗಳ ಹಿನ್ನೆಲೆಯಲ್ಲಿ ಈ ಮುಂದೆ ಕನ್ನಡನಾಡನ್ನು ಚರ್ಚಿಸುವ.