ಜನಪ್ರಿಯ ಸಾಹಿತ್ಯ ಎಲ್ಲ ಭಾಷೆ ಮತ್ತು ಸಮಾಜಗಳ ಸಮೂಹ ಸ್ವಭಾವದ ಒಂದು ಅಭಿವ್ಯಕ್ತಿ ಪ್ರಕಾರ. ಜನತೆಯ ತಾತ್ಕಾಲೀನ ಅಗತ್ಯವನ್ನು ಜನಪ್ರಿಯ ಸಾಹಿತ್ಯವು ಒದಗಿಸುತ್ತದೆ. ಜನ ಯಾವತ್ತೂ ಗಂಭೀರ ಮನಸ್ಥಿತಿಯಲ್ಲೇ ಇರಲಾರರು. ಹಗುರಾದ ಸಾಮಾನ್ಯ ನಿರೂಪಣೆಗಳಿಂದ ಜನತೆಯ ಮನಸ್ಸಿಗೆ ಸುಲಭವಾದ ಅರ್ಥ ಸಂಬಂಧ ಉಂಟಾಗುತ್ತದೆ. ಹಾಗೆಯೇ ಸೃಜನಶೀಲವಾದ ಯತ್ನಗಳು ಯಾವತ್ತೂ ಗಾಂಭೀರ್ಯದಲ್ಲೇ ತೊಡಗಿರಲಾರವು. ಸಮಾಜದ ಗತಿಶೀಲತೆಯು ಸಾಹಿತ್ಯ ಸೃಷ್ಟಿಯನ್ನು ನಿರ್ಧರಿಸುತ್ತದೆ. ನವೋದಯ ಸಾಹಿತ್ಯದ ನಂತರದ ಕನ್ನಡ ಗದ್ಯದ ಸಂದರ್ಭದಲ್ಲಿ ಇದು ಸ್ಪಷ್ಟವಾಗಿದೆ. ಸಮಾಜದ ಅನೇಕ ಅವಶ್ಯಕತೆಗಳನ್ನು ಸದಾ ಸೈದ್ಧಾಂತಿಕವಾಗಿ, ಕಲಾತ್ಮಕವಾಗಿ, ಶ್ರೇಷ್ಠ ಮೌಲ್ಯಗಳ ಪ್ರತೀಕವಾಗಿಯೇ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಸಮಾಜದಲ್ಲಿ ಜನಪ್ರಿಯ ನಿರೂಪಣೆಗಳು ಹುಟ್ಟಿಕೊಳ್ಳುವುದು. ಕನ್ನಡ ಸಾಹಿತ್ಯದಲ್ಲಿ ಜನಪ್ರಿಯ ನಿರೂಪಣೆಗಳು ಆರಂಭದಿಂದಲೂ ಬೆಳೆದುಬಂದಿವೆ. ವಿಶೇಷವಾಗಿ ಪ್ರಗತಿಶೀಲ ಲೇಖಕರ ಕಾಲಾವಧಿಯಲ್ಲಿ ಜನಪ್ರಿಯ ಸಾಹಿತ್ಯವು ಪ್ರಧಾನವಾಗಿ ಕಾಣಿಸಿಕೊಂಡಿತು. ಏಕೀಕರಣೋತ್ತರ ಕರ್ನಾಟಕದ ಸಾಮಾಜಿಕತೆಯನ್ನು ಪ್ರತಿಫಲಿಸಿರುವುದು ಜನಪ್ರಿಯ ಕಾದಂಬರಿಗಳೇ. ಆದರೆ ಶುದ್ಧ ಸಾಹಿತ್ಯದ ನೆಲೆಯಲ್ಲಿ ಅವುಗಳನ್ನು ಗಂಭೀರವಾಗಿ ಚರ್ಚಿಸಲಾಗಿಲ್ಲ. ಜನಪ್ರಿಯ ಮತ್ತು ಗಂಭೀರ ಸಾಹಿತ್ಯಗಳೆರಡರ ನಡುವೆ ಒಳ್ಳೆಯ ಸಂಬಂಧವೂ ಸಾಧ್ಯವಾಗಿಲ್ಲ. ಪ್ರತಿ ಹಂತದಲ್ಲು ಇವೆರಡು ಮನೋಧರ್ಮಗಳ ನಡುವೆ ಅಂತರ ಹೆಚ್ಚುತ್ತಲೇ ಇದೆ. ಜನಪ್ರಿಯ ಕಾದಂಬರಿಕಾರರ ಸಂಖ್ಯೆ ಬಹಳ ಕಡಿಮೆ. ಇಂತವರ ಮೂಲಕವೇ ಕನ್ನಡ ಕಾದಂಬರಿ ಪ್ರಕಾರಗಳ ಬೆಳೆಯನ್ನು ಅಳತೆ ಮಾಡಲಾಗುತ್ತಿದೆ. ಜನಪ್ರಿಯ ಕಾದಂಬರಿಗಳು ಪುಟ್ಟ ಉದ್ಯಮದಂತೆ ಏಕೀಕರಣೋತ್ತರ ಕರ್ನಾಟಕದಲ್ಲಿ ಆವರಿಸಿಕೊಂಡಿವೆ. ಓದುಗರು ತಮ್ಮ ಸುತ್ತಲ ಕೇಡಿಂದಾದ ವರ್ತಮಾನದ ಒತ್ತಡಗಳನ್ನು ಮೀರಲು ಹಗುರವಾದ ಭ್ರಾಮಕ ಕಥಾನಕವನ್ನು ಬಯಸುವುದು ತಪ್ಪಲ್ಲ. ಯಾವ ಸಮಾಜವೂ ಜನಪ್ರಿಯ ಮನೋಧರ್ಮದಿಂದ ಮುಕ್ತವಾಗಿರಲು ಸಾಧ್ಯವಿಲ್ಲ. ಓದಿನ ಮನರಂಜನೆ ಕೂಡ ಮಾನಸಿಕ ಔಷಧ.

ದೃಶ್ಯ ಮಾಧ್ಯಮದಿಂದ ಶ್ರವ್ಯ ಮಾಧ್ಯಮದಿಂದ ಮನಸ್ಸು ಹೇಗೆ ನಿರಾಳ ಸ್ಥಿತಿಗೆ ಬರಲು ಸಾಧ್ಯವಿದೆಯೋ ಅಂತೆಯೇ ಅಂತದೇ ಓದಿನಿಂದಲೂ ಸ್ವಸ್ಥವಾಗಲು ಅವಕಾಶವಿದೆ. ಇದರಲ್ಲಿ ಒಳಿತು ಕೆಡುಕಿನ ನೈತಿಕ ಮೌಲ್ಯ ಎದುರಾಗುವುದಿದೆ ಆದರೂ ಭಾಷೆಯನ್ನು ಓದುಗರ ಮೂಲಕವೂ ಬೆಳೆಸುವಾಗ ಸರಿ ತಪ್ಪಿನ ಮಾನದಂಡಗಳನ್ನು ಹೇರುವುದು ಉಚಿತವಲ್ಲ. ಭಾಷೆಯ ವಿಕಾಸದ ಪ್ರಕ್ರಿಯೆಯಲ್ಲಿ ಏರು ಪೇರುಗಳು ಚಲನೆಯ ಲಕ್ಷಣವಷ್ಟೇ. ಜನಪ್ರಿಯಗೊಳಿಸಿದಂತೆಲ್ಲ ಒಂದು ಭಾಷೆಯ ರೂಪಕ ಗುಣ ತಗ್ಗುತ್ತದೆಂಬುದು ನಿಜವಿದ್ದರೂ ರೂಪಕಗಳು ಸರಳವಾದಂತೆಲ್ಲ ಅವುಗಳ ಬಳಕೆಯು ಸುಲಭವಾಗುತ್ತದೆ. ಭಾಷೆಯ ಸಂಕೀರ್ಣ ಅಭಿವ್ಯಕ್ತಿಯಿಂದ ಲಾಭವಿದೆ ಎನ್ನುವುದು ಬೇರೆ. ಆದರೆ ಜನಪ್ರಿಯ ಸಾಹಿತ್ಯದ ನಿರೂಪಣೆಗಳು ಭಾಷೆಯೊಂದು ತನ್ನ ಗಂಭೀರ ಸ್ವರೂಪದಿಂದ ಮೈ ಮೇಲೆ ಹಾಕಿಕೊಂಡ ಸಂಕೀರ್ಣತೆಯ ಹೊರೆಯನ್ನು ಒಂದಿಷ್ಟು ಸಮಯ ಇಳಿಸಿರುತ್ತವೆ. ಹಾಗೆ ಜನಪ್ರಿಯ ನಿರೂಪಣೆಯು ಅತಿಯಾದಾಗ ಗಂಭೀರವಾದ ಭಾಷಿಕ ನಿರೂಪಣೆಗಳು ಮತ್ತೆ ಮೈದಾಳುತ್ತವೆ. ಕನ್ನಡ ಸಾಹಿತ್ಯ ಪರಂಪರೆಯ ಉದ್ದಕ್ಕೂ ಇದು ನಡೆದು ಬಂದ ಹಾದಿಯೇ ಆಗಿದೆ.

ಈ ಹಿನ್ನೆಲೆಯಲ್ಲಿ ಜನಪ್ರಿಯ ಪತ್ತೆದಾರಿ ಕಾದಂಬರಿಗಳ ಭಾಷಿಕ ಸ್ವಭಾವವನ್ನು ಕನ್ನಡದಲ್ಲಿ ಈ ಕೆಲಸವನ್ನು ಏಕೀಕರಣದ ನಂತರ ನಿರ್ವಹಿಸಿರುವುದನ್ನು ಗುರುತಿಸಿಕೊಳ್ಳಬೇಕು. ಇಲ್ಲಿ ಗಮನಿಸಬೇಕಾದುದೇನೆಂದರೆ ಗದ್ಯದ ಶೈಲಿಯನ್ನಲ್ಲ. ಮುಖ್ಯವಾಗಿ ಆ ಗದ್ಯದ ಸ್ವಭಾವವನ್ನು. ಈ ಸ್ವಭಾವವು ಒಂದು ಸಮಾಜದ ಸ್ವಭಾವ. ಭಾಷೆಯ ರಾಚನಿಕ ಸ್ವರೂಪ ಬೇರೆ. ಅದನ್ನು ಶೈಲಿ ವಿನ್ಯಾಸಗಳಲ್ಲಿ ಕಂಡುಕೊಳ್ಳುವುದು ಬೇರೆ. ಭಾಷೆಯ ನಿರೂಪಣೆಯಲ್ಲಿರುವ ಸ್ವಭಾವವು ಆ ಕಾಲದ, ನಾಡಿನ ಸಾಮಾಜಿಕ ಮಾನಸಿಕ ಸ್ಥಿತಿಗಳನ್ನೂ ಬಿಂಬಿಸುತ್ತದೆ. ನರಸಿಂಹಯ್ಯ, ತ್ರಿವೇಣಿ, ಭೈರಪ್ಪ ಅವರ ಕಾದಂಬರಿಗಳ ಸ್ವಭಾವವು ಭಾಷೆಯ ಅಂತರಂಗಕ್ಕೂ ಸಂಬಂಧಿಸಿದ್ದಾಗಿದೆ. ಮಧ್ಯಮ ಸಮಾಜದ ಸ್ವಭಾವವು ಈ ಲೇಖಕರ ಕಾದಂಬರಿಗಳಲ್ಲಿ ವ್ಯಕ್ತವಾಗಿದೆ. ‘ಗಂಭೀರ’ ಓದುಗರ ಮೂಲಕ ವ್ಯಕ್ತವಾಗುವ ರೀತಿಗೂ ‘ಸಾಮಾನ್ಯ’ ಓದುಗರ ಮೂಲಕ ಬಿಂಬಿತವಾಗುವ ನೀತಿಗೂ ವೈರುಧ್ಯಗಳಿವೆಯಾದರೂ ಇವೆರೆಡೂ ಬಗೆಯ ಭಾಷಿಕ ಸ್ವಭಾವಗಳು ಮುಖ್ಯವಾಗುತ್ತವೆ. ಜನಪ್ರಿಯ ಸಾಹಿತ್ಯ ಮಧ್ಯಮ ವರ್ಗದ ಅವಶ್ಯಕತೆಯಾಗಿ ಬೆಳೆದಿದೆ. ಬಡವರು ಬಯಸುವ ಸಾಹಿತ್ಯವೇ ಬೇರೆ. ಅವರ ಬದುಕೇ ಬರ್ಬರವಾಗಿರುವಾಗ ತಣ್ಣನೆಯ ಕಲಾತ್ಮಕ ಕಥನ ಅವರನ್ನು ತಟ್ಟುವುದಿಲ್ಲ. ಗಂಭೀರ ಸಾಹಿತ್ಯ ಕೂಡ ಬಡ ಜನರ ಆಯ್ಕೆಯಲ್ಲ. ಸಾಹಿತ್ಯ ಪರಂಪರೆಗಳು ಹೀಗೆ ಸಮಾಜ ಮತ್ತು ಸಮುದಾಯಗಳ ವರ್ಗ ಜಾತಿ ಲಿಂಗ ಸಂಬಂಧಗಳ ಹಿನ್ನೆಲೆಯಲ್ಲೂ ವಿಕಾಸವಾಗಬೇಕಿರುತ್ತವೆ. ಇದು ಭಾಷೆಗೆ ಅನಿವಾರ್ಯ; ಅಂತೆಯೇ ಒಂದು ನಾಡಿಗೂ ಕೂಡ.

ಈ ಹಿನ್ನೆಲೆಯಲ್ಲಿ ತ್ರಿವೇಣಿ ಅವರು ಮಧ್ಯಮ ವರ್ಗದ ಓದುಗರನ್ನು ರೂಪಿಸಿದ್ದುದು ಗಮನಾರ್ಹ ಬೆಳವಣಿಗೆ. ಸುಶೀಕ್ಷಿತ ಹೆಣ್ಣು ಮಕ್ಕಳ ಕೌಟುಂಬಿಕ ನಿರ್ವಾತವನ್ನು ತುಂಬುವಲ್ಲಿ ತ್ರಿವೇಣಿ ಅವರು ಯಶಸ್ವಿಯಾದರು. ಭಾವನಾತ್ಮಕವಾದ ಒಳಲೋಕವು ಹೆಣ್ಣಿನಲ್ಲಿ ಗಾಢವಾಗಿರುತ್ತದೆ. ಆಕೆಯ ಸುತ್ತಲಿನ ಉಸಿರುಗಟ್ಟಿಸುವ ಸಾಂಸಾರಿಕ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಲೈಂಗಿಕ ಕಿರುಕುಳಗಳು ಪುರುಷ ಕಾಣ್ಕೆಯ ಮೂಲಕ ಅನಾವರಣಗೊಳ್ಳುವುದು ಸಾಧ್ಯವಿದೆಯಾದರೂ ಅದನ್ನೆಲ್ಲ ಒಬ್ಬ ಲೇಖಕಿಯೇ ವ್ಯಕ್ತಪಡಿಸಿದಾಗ ಅದು ದೊಡ್ಡ ಮಟ್ಟದ ಪರಿಣಾಮ ಮತ್ತು ಪ್ರಾಮಾಣಿಕತೆಯನ್ನು ಸಾಧಿಸುತ್ತದೆ. ‘ಮೂಕಜ್ಜಿಯ ಕಥೆ’ಗೂ ‘ಬೆಕ್ಕಿನ ಕಣ್ಣು’ ಕೃತಿಗೂ ಇದರಿಂದಲೇ ಅಂತರ ಕಾಣುವುದು. ಸೃಜನಶೀಲತೆಗೆ ಲಿಂಗ ಭೇದ ಇಲ್ಲ ಎಂದು ವಾದಿಸಬಹುದಾದರೂ ಅದು ಸಂವೇದನೆಯ ನ್ಯಾಯವಲ್ಲ. ತ್ರಿವೇಣಿ ಅವರು ಕುಟುಂಬ ಎಂಬ ದುರ್ಗಮ ಕೋಟೆಯ ಒಳಗಿನ ಸೆರೆಯಾಳು ಹೆಣ್ಣಿನ ಅಂತರಂಗವನ್ನು ಕನ್ನಡ ಭಾಷೆಗೆ ಬಿತ್ತಿದ್ದು ಸಾಧಾರಣ ಸಂಗತಿ ಅಲ್ಲ. ಸಾಹಿತ್ಯ ವಿಮರ್ಶೆಯಲ್ಲಿ ತ್ರಿವೇಣಿ ಅವರ ಬರಹಗಳನ್ನು ಶ್ರೇಷ್ಠವೆಂದು ಕರೆಯದಿದ್ದರೂ ಸಮಾಜ ವಿಜ್ಞಾನಗಳ ಮಹಿಳಾ ಸಂವೇದನೆಯ ಹಿನ್ನೆಲೆಯಲ್ಲಿ ಬಹುಮುಖ್ಯ ಪಠ್ಯ ಎಂದೇ ಪರಿಗಣಿಸಬೇಕಾಗುತ್ತದೆ.

ಇಂತಹ ಜನಪ್ರಿಯ ಕಥನಗಳಿಗೆ ಕಾಲ ಮಿತಿ ಇದ್ದರೂ ವಾಸ್ತವವನ್ನು ಮರೆತು ಭ್ರಾಮಕ ಮನರಂಜನೆಯಂತಿದ್ದರೂ ಮಹಿಳಾ ಸಾಹಿತ್ಯ ಚರಿತ್ರೆಯನ್ನು ನಿರ್ಮಿಸಿಕೊಳ್ಳುವಾಗ ಸಿದ್ಧ ತೀರ್ಮಾನಗಳಿಗೆ ಇವು ಬೇರೊಂದು ಅರ್ಥವನ್ನು ಸೂಚಿಸಬಲ್ಲವು. ಅಂತೆಯೇ ಮೇಲರಿಮೆಯ ಸಾಹಿತ್ಯದ ಯಾಜಮಾನಿತ ಮೌಲ್ಯಗಳನ್ನು ಪ್ರಶ್ನಿಸಬಲ್ಲವು. ಹೀಗಾಗಿಯೇ ಮುಚ್ಚಿಡಲ್ಪಟ್ಟಿರುವ ಮಹಿಳಾ ಸಮಾಜವನ್ನು ಅಂಜುತ್ತಲೇ ತನ್ನ ತಿಳಿವಿನ ನೆರವಿನಿಂದಲೇ ಅನಾವರಣಗೊಳಿಸುವ ತ್ರಿವೇಣಿ ಅವರು ಯಾವುದೇ ಶ್ರೇಷ್ಠ ಲೇಖಕರಿಗೂ ಕಡಿಮೆ ಇಲ್ಲದಂತೆ ಪರಂಪರೆಯ ಪರಿಶೀಲನೆಗೆ ಬೇಕಾಗುತ್ತಾರೆ. ಏಕೀಕರಣದ ಪುರುಷ ಪ್ರಧಾನ ನಾಡಿನ ಗೊಡವೆಗೆ ಹೋಗದೆ ಮನೆಯ ಒಳಗಿನ ಲೋಕವನ್ನು ಹೊರಜಗತ್ತಿಗೆ ತೋರಿದ್ದು ಚಾರಿತ್ರಿಕವಾದುದು. ಈ ಅರ್ಥದಲ್ಲಿ ಗಂಡಸರ ನೆಲೆಯ ನಾಡಿನ ಕಲ್ಪನೆಯೇ ಬೇರೆ. ಹಾಗೆಯೇ ಹೆಣ್ಣಿನ ನಾಡಿನ ಭಾವನೆಯೇ ಬೇರೆ. ಗಂಡಸರ ಸಮಾಜದಲ್ಲಿ ಹೆಣ್ಣಿನ ನಾಡುನುಡಿಯ ದನಿಗೆ ವಿಶೇಷ ಅವಕಾಶವಿರಲಿಲ್ಲ. ಮಾತೃಭಾಷೆ ಎಂದು ಕನ್ನಡಮ್ಮನ ನಾಡು ಎಂದು ಕರೆದುಕೊಂಡದ್ದು ಪುರುಷರೇ ಆಗಿದ್ದರೂ ಮಾತೃ ಸಂವೇದನೆಯ ಪ್ರಭುತ್ವವಾಗಲಿ ಅಂತಹ ಸಮಾಜವಾಗಲಿ ಸಾಧಿತವಾಗಲಿಲ್ಲ ಎಂಬುದನ್ನು ಗಮನಿಸಬೇಕು. ಇಂತಲ್ಲಿ ತ್ರಿವೇಣಿ ಅವರ ಕಾದಂಬರಿಗಳಿಗೆ ಮುಖ್ಯ ಸ್ಥಾನವಿದೆ. ಸುವರ್ಣ ಕರ್ನಾಟಕದ ಸಂದರ್ಭದಲಿ ಮಹಿಳಾ ಲೇಖಕಿಯರಿಗೆ ಕೊರತೆ ಇಲ್ಲದಿದ್ದರೂ ಏಕೀಕರಣ ಪ್ರಕ್ರಿಯೆಯಲ್ಲಿ ಮಹಿಳಾ ದನಿಗಳು ಇರಲಿಲ್ಲ. ಅಂತಹ ಕೊರತೆಯನ್ನು ನೀಗುವಂತೆ ತ್ರಿವೇಣಿ ಅವರು ಬರಹ ರೂಪಿಸಿದ್ದಾರೆ. ಪ್ರಗತಿಶೀಲ ಲೇಖಕರ ಅಬ್ಬರದಲ್ಲಿ ತ್ರಿವೇಣಿಯವರ ದನಿ ಹಿಂಜರಿದಂತಿದೆ. ನಿಜವಾಗಿಯೂ ತ್ರಿವೇಣಿ ಅವರು ಕನ್ನಡ ಭಾಷೆಯ ಸಾಧ್ಯತೆಯನ್ನು ಸ್ತ್ರೀವಾದಿನೆಲೆಯಲ್ಲಿ ರೂಪಿಸಿದ್ದಾರೆ. ಅವರ ಮುಂದಿದ್ದ ಪುರುಷ ಗದ್ಯದ ಮಾದರಿಯನ್ನು ಮೀರುವಲ್ಲಿ ಸ್ತ್ರೀ ಸಂವೇದನೆಯ ಸುಪ್ತ ಪ್ರಜ್ಞೆಯ ನಿರೂಪಣಾ ಕ್ರಮವನ್ನು ಅವರು ಕಂಡುಕೊಂಡದ್ದು ವಿಶೇಷ. ತ್ರಿವೇಣಿ ಅವರನ್ನು ಬಿಡಿಯಾಗಿಯೂ ನೋಡಲು ಈ ಅಂಶವು ದಾರಿ ಮಾಡುತ್ತದೆ. ಮನೋವೇದನೆಯ ಮಾನಸಿಕ ಸ್ಥಿತಿಯ ಅವರ ಗದ್ಯಕಥನವನ್ನು ಪ್ರಗತಿಶೀಲರ ಜನಪ್ರಿಯ ನಿರೂಪಣೆಗಿಂತಲೂ ಭಿನ್ನವಾದುದು.

ಏಕೀಕರಣೋತ್ತರ ಕನ್ನಡ ಸಮಾಜದ ಸ್ತ್ರೀ ಲೋಕವನ್ನು ಅನಾವರಣ ಮಾಡುವ ತ್ರಿವೇಣಿಯವರ ಕತೆ ಕಾದಂಬರಿಗಳು ಜನಪ್ರಿಯ ಶೈಲಿಯಲ್ಲೆ ಮುಳುಗಲಿಲ್ಲ. ಅತಿ ಸೂಕ್ಷ್ಮವಾದ ಸ್ತ್ರೀ ನಿಷ್ಠೆಯ ಗದ್ಯವು ಭಾಷೆಯ ಬೆಳವಣಿಗೆಗೆ ಪೂರಕ. ಯಾವ ಭಾಷೆಯು ಪುರುಷ ನಿರೂಪಣೆಯ ಚೌಕಟ್ಟಿಗೆ ಒಳಗಾಗಬಾರದು. ಭಾಷೆಯು ಬೆಳೆಯುವುದು ಸ್ತ್ರೀ ಪುರುಷ ಸಂವೇದನೆಗಳ ಸಮರಸದಿಂದಲೇ. ಕನ್ನಡ ಭಾಷೆಯು ಕನ್ನಡಿಗನಿಗೇ ಸಾಮ್ಯವಾಗುತ್ತ ಬಂದಿದೆಯೇ ಹೊರತು ಕನ್ನಡತಿ ಎಂಬುದಕ್ಕೆ ಸಮೀಪವಾಗಿಯೇ ಇಲ್ಲ. ಭಾಷೆಯ ಲಿಂಗಸಂಬಂಧಗಳು ಅಸಮತೋಲನವಾಗಿದ್ದಾಗ ಆ ಭಾಷೆಯು ಸೂಕ್ತವಾಗಿ ವಿಕಾಸವಾಗದು. ನವೋದಯ ಹಾಗೂ ಪ್ರಗತಿಶೀಲ ಭಾಷಿಕ ಸ್ವಭಾವಗಳೆಲ್ಲ ಪುರುಷ ರೂಪಿಯಾದವೇ ವಿನಃ ಸ್ತ್ರೀ ಸಂವೇದನೆಗೆ ಬದ್ಧವಾದವಲ್ಲ. ಏಕೀಕರಣದ ನಾಡುನುಡಿಯು ಪುರುಷ ಪ್ರಧಾನ ಧೋರಣೆಗೆ ಒಳಗಾಗಿದ್ದರಿಂದಲೇ ಕನ್ನಡನಾಡು ಎಂಬ ಪರಿಕಲ್ಪನೆಯು ಪುರುಷರ ಸಾಮ್ರಾಜ್ಯಶಾಹಿ ಅರ್ಥಕ್ಕೆ ಹೊಂದಿಕೆಯಾಗುತ್ತದೆ.

ಹೀಗಾಗಿಯೇ ಭಾಷೆಯ ನಿರೂಪಣೆಯಲ್ಲಿ ಲಿಂಗಸಂಬಂಧಗಳ ಅನುಭವಗಳು ಒಂದು ನಾಡಿನ ಭವಿಷ್ಯಕ್ಕೂ ಸಂಬಂಧಪಡುತ್ತವೆ. ತ್ರಿವೇಣಿ ಅವರ ಬರಹಗಳು ಅಖಂಡವಾದ ಸ್ತ್ರೀಲೋಕವನ್ನು ಒಳಗೊಳ್ಳದಿದ್ದರೂ ಅವರ ಗದ್ಯವು ಸ್ತ್ರೀ ಸಮಾಜದ ಒಂದು ಬಾಗಿಲು. ಅಸಂಖ್ಯಾತ ಕುಟುಂಬಗಳ ಒಂದೊಂದು ಮನದ ಒಳಬಾಗಿಲನ್ನು ತಮಗೇ ಅನನ್ಯವೆನಿಸುವ ಭಾಷೆಯಿಂದ ತೆರೆದರೆ ಆಗ ಅದು ಹಿಡಿಯಾಗಿ ಒಂದು ನಾಡಿನ ಭಾಷೆಯಾಗುತ್ತದೆ. ಇಲ್ಲದಿದ್ದರೆ ಕೇವಲ ಪುರುಷ ಸಮಾಜದ ಭಾಷೆ ಮಾತ್ರವಾಗಿ ಅದು ಏಕಮುಖ ವಿಕಾಸಕ್ಕೆ ಸಿಲುಕುತ್ತದೆ. ತ್ರಿವೇಣಿ ಅವರನ್ನು ಪ್ರಗತಿಶೀಲರಲ್ಲೇ ಶ್ರೇಷ್ಠ ಲೇಖಕಿ ಎಂದು ಗುರುತಿಸಬಹುದು. ಪ್ರಗತಿಶೀಲರಿಗೆ ಇದ್ದ ಜನಪ್ರಿಯತೆಯ ಮಿತಿ ತಿವೇಣಿ ಅವರಿಗೆ ನಕಾರಾತ್ಮಕವಾಗಿ ಅನ್ವಯಿಸದು. ಕನ್ನಡಿಗ ಎಂಬ ಪದವನ್ನು ಲಿಂಗ ವ್ಯತ್ಯಾಸವಿಲ್ಲದೆ ನೋಡಲು ಬರಲಾಗದಷ್ಟು ಅಂತರವಿದೆ. ಕನ್ನಡಿಗ ಎಂಬುದು ಪುರುಷವಾಚಕದಂತೆಯೇ ಇದೆ. ತ್ರಿವೇಣಿಯವರ ಗದ್ಯವನ್ನು ಪ್ರಭಾವಿಸಿ ತನ್ನ ಪುರುಷ ಸ್ವರೂಪವನ್ನು ತೋರಿರುವ ಕನ್ನಡ ಕಥನಗದ್ಯವು ಎಷ್ಟೇ ಸುಂದರ ಕಲಾತ್ಮಕವಾಗಿ ಮೋಹಕವಾಗಿದ್ದರೂ ಅದಕ್ಕಿರುವ ಪುರುಷಗುಣದ ಪಾರಮ್ಯವನ್ನು ಅನುಮಾನಿಸಲೇ ಬೇಕಿದೆ.

ಒಟ್ಟಿನಲ್ಲಿ ತ್ರಿವೇಣಿ ಅವರ ನೆಪದಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸುವುದ ಅನ್ಯವೆನಿಸದು. ಭಾಷೆಯ ಅಖಂಡತೆ ಸಾಮಾಜಿಕವಾಗಿ ಸಾಧಿತವಾಗುವುದು ಸ್ತ್ರೀಪುರುಷರಿಬ್ಬರೂ ಜೊತೆಗೂಡಿ ನಿರೂಪಣೆಯ ಕೌಶಲ್ಯವನ್ನು ಕಂಡುಕೊಂಡಾಗಲೇ. ಅಕ್ಕ ಮಹಾದೇವಿ ಒಬ್ಬಳೇ ವಚನ ಸಾಹಿತ್ಯದ ವಿಭಿನ್ನ ದನಿಯಾಗುವ ಮುಲಕ ಭಾಷೆಯ ಅಭಿವ್ಯಕ್ತಿ ವಿಕಾಸಕ್ಕಿರುವ ಸಾಧ್ಯತೆಗಳನ್ನು ತೋರಿಸಿಕೊಟ್ಟಳು. ದೇವರೇ ತನ್ನ ಗಂಡ ಎಂದು ಧ್ಯಾನಿಸಿ ಭಕ್ತಿ ರಚನೆಗಳನ್ನು ಮಾಡಿದ ಭಕ್ತಿ ಪಂಥದ ಕವಿಗಳು ಭಾಷೆಗಿರುವ ಪುರುಷಗರ್ವವನ್ನು ನೀಗಿಕೊಂಡರು. ಆದ್ದರಿಂದಲೇ ಹನ್ನೆರಡನೆ ಶತಮಾನದ ಕನ್ನಡ ಭಾಷೆಯು ತನ್ನ ಕಾಲದ ಸಮೂಹದ ಜೊತೆ ಸಲೀಸಾಗಿ ಸಂವಹನ ಮಾಡಿತು. ಗಂಡಸಿನ ಒಂದೇ ದಾಟಿಯ ವಿಚಾರದ ಏಕ ಮುಖತೆಯು ಭಾಷೆಯನ್ನು ಗೊಂದಲಕ್ಕೊಳಪಡಿಸುತ್ತದೆ. ಮುಕ್ತತೆಯನ್ನು ಅಮೂರ್ತಗೊಳಿಸುತ್ತದೆ. ಅಲ್ಲದೆ ಭಾಷೆಗೆ ವಿಚಿತ್ರವಾದ ಮೇಲರಿಮೆ ಮೇಲಧಿಕಾರವನ್ನು ತಂದು ಅನೇಕರನ್ನು ಸಂವಹನದ ಹೊರಗಿಡುತ್ತದೆ. ಇಂತಹ ಸಂದರ್ಭದಲ್ಲಿ ಜನಪ್ರಿಯದ ಭಾಷೆಯು ಜನಸಾಮಾನ್ಯರಿಗೆ ಸಮೀಪವಾಗುವುದು ಸಹಜ. ಈ ನಿಟ್ಟಿನಲ್ಲಿ ಎನ್.ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳ ಭಾಷಿಕ ನೆಲೆಯನ್ನು ಕನ್ನಡ ನಾಡಿಗರ ನೆಲೆಯಲ್ಲಿ ಪರಿಶೀಲಿಸುವ.

ಎನ್. ನರಸಿಂಹಯ್ಯ ಮೂಲತಃ ಪತ್ತೆದಾರಿ ಕಾದಂಬರಿಕಾರರು. ಪ್ರಗತಿಶೀಲ ಲೇಖಕರೆಂದು ಯಾರೂ ಅವರನ್ನು ಕರೆದಿಲ್ಲ. ಜನಪ್ರಿಯ ಸಾಹಿತ್ಯದ ನೆಲೆಯಲ್ಲಿ ಪ್ರಗತಿಶೀಲರಿಗೆ ನರಸಿಂಹಯ್ಯ ತುಂಬ ಹತ್ತಿರದವರು. ರಾಷ್ಟ್ರೀಯವಾದಿ ಕಾದಂಬರಿಕಾರರಾದ ಕಾರಂತ, ಕುವೆಂಪು, ಮಾಸ್ತಿಯ ಜೊತೆ ನರಸಿಂಹಯ್ಯನವರ ಕಾದಂಬರಿಗಳು ನಿಲ್ಲಲಾರವು. ಪ್ರಗತಿಶೀಲರ ಜನಪ್ರಿಯ ಸಾಮಾಜಿಕ ಕಥನಗಳ ಜೊತೆಯಲ್ಲಿ ನರಸಿಂಹಯ್ಯನವರ ಬರಹಗಳನ್ನು ಬೆರೆಸಲಾಗದು. ಪಾಶ್ಚಿಮಾತ್ಯ ಪತ್ತೇದಾರಿ ಕಥನಗಳ ನೆರಳಿನಲ್ಲಿ ಬೆಳೆದ ನರಸಿಂಹಯ್ಯನವರ ಕಾದಂಬರಿಗಳು ಮನರಂಜನೆಯ ಕಡೆಗೆ ಹೆಚ್ಚು ವಾಲಿದಂತವು. ಸಮಾಜದ ದುಷ್ಠತೆಯನ್ನು ಪತ್ತೆ ಮಾಡಿ ಅದನ್ನು ದಂಡಿಸುವ ರೋಚಕ ಕಥಾನಕವು ಮನೋಭೂಮಿಕೆಯಲ್ಲಿ ವಿಜೃಂಭಿಸುವಂತದ್ದು. ಅಪರಾಧಿಯ ಜಾಡು ಹಿಡಿದು ನಡೆವ ಕಥನದಲ್ಲಿಯೂ ಸಮಾಜದ ನೀತಿ ಇರುತ್ತದೆ. ನರಸಿಂಹಯ್ಯ ಅವರು “ಹೊಟ್ಟೆ ಪಾಡಿಗೆ ನಾನು ಇಂತಹ ಸಾಹಿತ್ಯ ರಚಿಸಬೇಕಾಯಿತು” ಎಂದು ಹೇಳಿಕೊಂಡದ್ದು ಕೂಡ ಸಾಮಾಜಿಕ ಸ್ಥಿತಿಯ ಮೇಲೆ ಬೆಳಕು ಚೆಲ್ಲುವಂತಿದೆ. ಮನರಂಜನೆ ನೀಡುತ್ತಲೇ ಅಪರಾಧಿ ನಡೆಯ ವಂಚನೆಯನ್ನು ಬಹಿರಂಗಪಡಿಸಿ ಭ್ರಾಮಕವಾಗಿಯಾದರೂ ಕೇಡನ್ನು ಗೆಲ್ಲುವುದು ಭಾಷೆಯ ಸಾರ್ಥಕತೆಯೇ ಆಗಿರುತ್ತದೆ.

ಜನಪದ ಕಥೆಗಳಲ್ಲೂ ಕೇಡಿನ ಕಳ್ಳನ ರಕ್ಕಸನ ಅಪರಾಧಿಯ ಜಾಡು ಹಿಡಿದು ಮಾಂತ್ರಿಕವಾಗಿ ಸದೆಬಡಿದು ಗೆಲ್ಲುವ ಅದ್ಭುತ ರಮ್ಯತೆಯಲ್ಲು ಭಾಷೆ ಮತ್ತು ಭಾವನೆಗಳು ವಿಕಾಸವಾಗಿರುವುದನ್ನು ಕಾಣಬಹುದು. ಮನರಂಜನೆಗಾಗಿ ನಿರೂಪಿತವಾದುದೆಲ್ಲ ಕನಿಷ್ಠವಾದದ್ದೆಂಬುದು ತರವಲ್ಲ. ರಾಮಾಯಣ ಮಹಾಭಾರತಗಳು ಜಗತ್ ಜನಪ್ರಿಯ ಹೇಗೊ ಅವು ಮನರಂಜನೆಯ ಭಾಗವೂ ಹೌದು ಆಚರಣೆಯ ಸಂಹಿತೆಯೂ ಹೌದು. ಆ ಮಟ್ಟಿಗೆ ನರಸಿಂಹಯ್ಯನವರ ಜನಪ್ರಿಯ ಪತ್ತೆದಾರಿ ಕಾದಂಬರಿಗಳನ್ನು ಹೋಲಿಸುತ್ತಿಲ್ಲವಾದರೂ ಮನರಂಜನೆ ಮತ್ತು ಭ್ರಾಮಕ ನಿರೂಪಣೆಗಳು ಒಂದು ಸಮಾಜಕ್ಕೆ ಅವಶ್ಯ ಎಂಬುದನ್ನು ಧ್ವನಿಸಲು ಪ್ರಸ್ತಾಪಿಸಬೇಕಾಗಿದೆ. ಕನ್ನಡ ಭಾಷೆಯು ಬೆಳೆಯುವುದೇ ಹೀಗೆ ನವೋದಯದವರು ಕನ್ನಡ ಗದ್ಯಭಾಷೆಯನ್ನು ಪುರಾಣ ಗುಣದಿಂದ ಬಿಡಿಸಿದರು. ಆಧುನಿಕ ಪಶ್ಚಿಮದ ಗದ್ಯಕಥನವನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವ ಮೂಲಕ ಗದ್ಯವನ್ನು ಲೌಖಿಕದ ನಿರೂಪಣೆಗೆ ನವ್ಯ ಸಾಹಿತಿಗಳು ಮತ್ತಷ್ಟು ಭಿನ್ನವಾಗಿ ಬಳಸಿದರು. ಪ್ರಾಚೀನ ಕನ್ನಡ ಭಾಷೆಯ ಬರಹಗದ್ಯವು ಪುರಾಣದ ವಿವರಣೆಗೆ ಸೀಮಿತವಾಗಿದ್ದುದನ್ನು ಗಮನಿಸಬೇಕು. ವೇದಗಳನ್ನು ಬಿಡಿಸಿ ಹೇಳುವುದಕ್ಕಾಗಿಯೇ ಗದ್ಯವು ಸೀಮಿತವಾಗಿತ್ತು. ತೋಂಡಿ ಪರಂಪರೆಯ ಗದ್ಯ ಕಥನಗಳು ಲೌಕಿಕವಾಗಿಯೇ ಇದ್ದವಾದರೂ ಬರಹ ಪರಂಪರೆಯ ಕನ್ನಡ ಗದ್ಯವು ಅಲೌಕಿಕವನ್ನು ವಿವರಿಸುವುದಕ್ಕಾಗಿಯೇ ಹೆಚ್ಚು ಬಳಕೆಯಾಗುತ್ತಿತ್ತು.

ಹೊಸ ಗನ್ನಡದ ಅರುಣೋದಯ ಕಾಲಕ್ಕೆ ಗದ್ಯವು ಮುದ್ದಣ್ಣನಿಂದ ಮುಕ್ತವಾದ ಗೃಹಾಂಗಳಕ್ಕೆ ಬಂತೆಂಬುದು ತಿಳಿದ ಸಂಗತಿಯೇ. ಅಂದರೆ ಲಿಖಿತ ಪರಂಪರೆಯ ಗದ್ಯವು ಇಪ್ಪತ್ತನೆಯ ಶತಮಾನದಲ್ಲಿ ಮಾತ್ರವೇ ತನ್ನ ಪುರಾಣ ಪ್ರವಚನ ಗುಣದಿಂದ ದೂರ ಸರಿದು ಮನುಷ್ಯ ಸ್ವಭಾವವನ್ನು ಪ್ರತಿನಿಧಿಸತೊಡಗಿದ್ದು. ಇದು ಜಗತ್ತಿನ ಬಹುಪಾಲು ಎಲ್ಲ ಭಾಷೆಗಳ ಗದ್ಯಕ್ಕೂ ಅನ್ವಯಿಸಬಹುದಾದ ಮಾತೆಂದು ಊಹಿಸಬಹುದು. ಪಶ್ಚಿಮದ ಗದ್ಯ ನಿರೂಪಣೆಗಳು ಕ್ರೈಸ್ತ ಧರ್ಮದಿಂದ ಬಿಡಿಸಿಕೊಂಡು ವೈಚಾರಿಕವಾದುದನ್ನೆಲ್ಲ ಹೇಳಿದ್ದನ್ನು ಗಮನಿಸಬೇಕು. ಗದ್ಯದ ಅಂತರಂಗದಲ್ಲಿದ್ದ ದೈವದ ರೂಪವು ಮರೆಯಾಗಿ ಅದೇ ಗದ್ಯದಲ್ಲಿ ಮನುಷ್ಯರ ರೂಪವು ಸೃಷ್ಟಿಯಾದದ್ದು ಭಾಗಶಃ ಎಲ್ಲ ಭಾಷೆಗಳ ಪಲ್ಲಟ. ನವೋದಯ ಲೇಖಕರು ಬೆಳೆಸಿದ ಗದ್ಯವು ಇಂತದೇ. ಈ ಗದ್ಯವನ್ನೆ ಪ್ರಗತಿ ಶೀಲರು ಮತ್ತಷ್ಟು ಜನರ ರೂಪಕ್ಕೆ ತಕ್ಕಂತೆ ವಿಸ್ತರಿಸಿದರು. ಈ ನಡುವೆ ತ್ರಿವೇಣಿ, ನರಸಿಂಹಯ್ಯ, ಭೈರಪ್ಪ ಅವರು ನಿರೂಪಣೆಯ ಸೊಗಸನ್ನು ಜನಪ್ರಿಯ ಶೈಲಿಯಲ್ಲಿ ವಿಸ್ತರಿಸುತ್ತ ಗದ್ಯವನ್ನು ಮತ್ತಷ್ಟು ಮನುಷ್ಯರ ಭಾವನೆಗಳಿಗೆ ಹೊಂದಿಸಿದರು.

ಅಂದರೆ ಭಾಷೆಯನ್ನು ಲೌಕಿಕಗೊಳಿಸಿದಂತೆಲ್ಲ ಅದು ಹೆಚ್ಚು ಹೆಚ್ಚು ಬೆಳೆಯುತ್ತದೆಯೇ ಹೊರತು ಅಳಿಯುವುದಿಲ್ಲ. ದೈವ ಸ್ವರೂಪವನ್ನೇ ನಂಬಿ ಭಾಷೆಯು ಬೆಳೆಯಲಾರದು. ಭಾಷೆಗಳು ಲೌಕಿಕದಲ್ಲೇ ಅನಂತತೆಯನ್ನು ಹುಡುಕಲು ಸಾಧ್ಯ. ಜನಪ್ರಿಯ ಭಾಷೆಯು ಇಂತಲ್ಲಿ ಒಂದು ಕಿರುಸಾಧ್ಯತೆ. ಆ ಕಿರು ದಾರಿಯಲ್ಲಿ ಎನ್. ನರಸಿಂಹಯ್ಯ ಅವರು ಕನ್ನಡ ಸಮಾಜದಲ್ಲಿ ಓದುಗ ಸಮೂಹವನ್ನು ಹೊಸದಾಗಿ ಸೃಷ್ಟಿಸಿದ್ದುದು ಸಾಧಾರಣವಾದ ಸಾಧನೆ ಅಲ್ಲ. ಕೇಡಿನ ಜಾಲದಲ್ಲಿ ಹಂತಕರ ಜಾಡು ಹಿಡಿದು ನಡೆದ ರೋಚಕ ನಿರೂಪಣೆಯೂ ಕನ್ನಡ ಭಾಷೆಯನ್ನು ಬೆಳೆಸಿದೆ. ಗಂಭೀರ ಗದ್ಯ ಸಾಕ್ಷಾತ್ಕಾರವು ನವೋದಯದವರಿಗೆ ದಿವ್ಯವಾಗಿತ್ತು. ಅದು ಒಂದು ಸಾಧ್ಯತೆ. ಈ ಹಾದಿಯಲ್ಲಿ ಜನಪ್ರಿಯ ಕಾದಂಬರಿಕಾರರೆಲ್ಲರೂ ತಮ್ಮ ತಮ್ಮ ನೆಲೆಯಲ್ಲಿ ಕನ್ನಡ ಭಾಷೆಯ ಗದ್ಯವನ್ನು ಸಾಮಾನಯರ ಅಂತರಂಗದಲ್ಲಿ ಬೆಳೆಸಿದ್ದಾರೆ. ಎಸ್. ನರಸಿಂಹಯ್ಯ  ಅವರ ಪತ್ತೆದಾರಿ ಕಾದಂಬರಿಗಳಿಂದ ಓದುವ ಅಭಿರುಚಿ ಬೆಳೆಯಿತು. ನಾಡಿನ ನಿರ್ಮಾಣದಲ್ಲಿ ಓದುಗರ ನಿರ್ಮಾಣವೂ ಮುಖ್ಯ. ಓದುಗರೇ ಕಡಿಮೆ ಆದರೆ ಓದುವ ಗ್ರಹಿಕೆಯಿಂದಾಗುವ ಭಾಷೆಯ ವಿಕಾಸವು ಸೂಕ್ತವಾಗಲಾರದು.

ಭಾಷೆಯನ್ನು ಮಾತನಾಡುವುದು ಮುಖ್ಯವಾದಂತೆಯೇ ಓದುವುದು ಕೂಡ ಅನಿವಾರ್ಯ. ಮೌಖಿಕತೆ ಒಂದೇ ಭಾಷೆಯ ಜೀವಾಳವಲ್ಲ. ಲಿಖಿತ ಪರಂಪರೆಯು ಓದುಗರ ಅನುಸಂಧಾನದಿಂದ ಹೆಚ್ಚು ಹೆಚ್ಚು ಸೃಜನಶೀಲಗೊಳ್ಳಬಲ್ಲದು. ಆದ್ದರಿಂದಲೇ ಓದುವ ಪ್ರವೃತ್ತಿಯು ಸೃಜನಶೀಲತೆಯ ಭಾಗವಾಗಿಯೇ ಬೆಳೆದುಬಂದಿದೆ. ಜನಪ್ರಿಯ ಸಾಹಿತ್ಯದ ಓದುಗ ವಲಯವು ತನ್ನ ಸಕಾಲಿಕ ಬೇಡಿಕೆಗಳ ಮೂಲಕವೇ ಭಾಷೆಯ ನಿರೂಪಣೆಯನ್ನೂ ನಿರ್ಧರಿಸಬಲ್ಲದು. ಜನಪ್ರಿಯ ಕಾದಂಬರಿಕಾರರು ಇದರಿಂದಲೇ ಸಮೂಹದ ಅಭಿರುಚಿಗಳನ್ನು ಮುಖ್ಯವೆಂದು ತಿಳಿಯುವುದು. ಪ್ರಗತಿಶೀಲ ಕಾದಂಬರಿಕಾರರ ನಡುವಿನ ಲೇಖಕ ಓದುಗ ಸಮಾಜಗಳ ಸಂಬಂಧವು ಇದೇ ಬಗೆಯಲ್ಲಿತ್ತು ಎಂಬುದನ್ನು ಗಮನಿಸಿ ಎನ್. ನರಸಿಂಹಯ್ಯ ಅವರ ಬರಹದಲ್ಲೂ ಇದೇ ಭಾವ ಸಂಬಂಧವನ್ನು ಗುರುತಿಸಬಹುದು. ಸಾಹಿತ್ಯವನ್ನು ಓದುವ ಬಗೆ ಹೇಗೆ ಎಂಬುದನ್ನು ಕಥನದ ಮೂಲಕ ನರಸಿಂಹಯ್ಯನವರು ಕಲಿಸಿದರು. ಲಘು ಸಾಹಿತ್ಯವೆಂದು ಹೇಳಬಹುದಾದರೂ ಇಂತಹ ನಿರೂಪಣೆಗಳನ್ನು ಓದಿದ ನಂತರವೇ ಕಾರಂತ, ಕುವೆಂಪು ಅಂತಹ ಕಾದಂಬರಿಕಾರರನ್ನು ಓದಿ ಅನುಭವಿಸಬಹುದು ಎಂಬ ಸಾಧ್ಯತೆಯನ್ನು ಜನಪ್ರಿಯ ಲೇಖಕರೇ ತೋರಿಸಿಕೊಟ್ಟರು.

ಈ ಸಂಗತಿಯಲ್ಲಿ ಎನ್. ನರಸಿಂಹಯ್ಯನವರ ಪಾತ್ರ ದೊಡ್ಡದು. ಓದುವ ಸ್ವಭಾವವನ್ನು ರೂಪಿಸಿದ ನರಸಿಂಹಯ್ಯನವರು ಸಾಹಿತ್ಯದ ಪ್ರತಿಷ್ಠಿತ ಮೌಲ್ಯಗಳನ್ನು ಅಲುಗಾಡಿಸಿದರು. ಶ್ರೇಷ್ಠ ಸಾಹಿತ್ಯದ ಅಹಂಮಿಕೆಯು ಅತಿ ಸೂಕ್ಷ್ಮವಾಗಿ ಮೇಲುಕೀಳಿನ ತಾರತಮ್ಯವನ್ನು ಉಂಟು ಮಾಡುತ್ತಿರುತ್ತದೆ. ಇದರಿಂದ ಸಾಹಿತ್ಯದ ಪೂರ್ವಾಗ್ರಹಗಳು ಬೆಳೆದು ಅಂತರ ಉಂಟಾಗುತ್ತದೆ. ನರಸಿಂಹಯ್ಯ ಅವರಿಗೆ ಇಂತಹ ಯಾವ ಅಪೂರ್ವ ತಾತ್ವಿಕತೆ ಇರದಿದ್ದರೂ ತಮ್ಮ ಪಾಡಿಗೆ ತಾವು ಹೊಟ್ಟೆಪಾಡಿಗೆ ಪತ್ತೆದಾರಿ ನಿರೂಪಣೆಗಳನ್ನು ನಿರ್ವಹಿಸುತ್ತಲೇ ಭಾಷೆಗೆ ಇರುವ ಪತ್ತೆದಾರಿ ಸ್ವಭಾವವನ್ನು ಕಂಡುಹಿಡಿದದ್ದು ಭಾಷಾ ವಿಜ್ಞಾನಿ ಮಾಡುವ ಕೆಲಸಕ್ಕಿಂತಲೂ ದೊಡ್ಡದು. ಸಮಾಜದ ತೀರ ಕೆಳಜಾತಿಯಿಂದ ಬಂದವರಾಗಿದ್ದ ಎನ್. ನರಸಿಂಹಯ್ಯ ಅವರು ತಮ್ಮ ಜಾತಿಯ ಗೋಳನ್ನು ಹೇಳಿಕೊಳ್ಳಲು ಮುಂದಾಗಲಿಲ್ಲ. ಪ್ರಗತಿಶೀಲರು ಹಾಗೆ ಬಡತನದ ಕಡುಕಷ್ಟವನ್ನು ಹೇಳಿಕೊಳ್ಳಲು ಬೇಕಾದ ಒಂದು ಸಿದ್ಧ ಮಾದರಿಯನ್ನು ಆಗಲೇ ಸೃಷ್ಟಿಸಿ ಆಗಿತ್ತು. ಚೋಮನ ದುಡಿಯಂತಹ ಕಾರಂತರ ಮಾದರಿಯೂ ಮುಂದಿತ್ತು. ಆದರೆ ನರಸಿಂಹಯ್ಯ ಅವರು ಆ ಎರಡೂ ಮಾದರಿಗಳ ಕಡೆ ನೋಡಲಿಲ್ಲ. ತ್ರಿವೇಣಿ ಅವರಂತೆ ಮಹಿಳಾ ಲೋಕದ ಸಂಕಟವನ್ನು ನಿರೂಪಿಸುವಂತೆ ತನ್ನ ಜಾತಿಯ ಒಡಲಾಳವನ್ನು ಹಾಡಲೂ ತೊಡಗಲಿಲ್ಲ. ಇದು ಸೃಜನಶೀಲತೆಯ ಆಯ್ಕೆಯಲ್ಲಿ ಕುತೂಹಲಕಾರಿಯಾದುದು. ದಲಿತಬಂಡಾಯದ ಆದ್ಯ ಲೇಖಕರಾಗಬಹುದಾಗಿದ್ದ ಅವಕಾಶವನ್ನು ಕೈಬಿಟ್ಟಿದ್ದು ವಿಚಿತ್ರವಾಗಿದೆ. ಅದಕ್ಕೆ ಕಾಲ ಪಕ್ವವಾಗಿರಲಿಲ್ಲ ಎಂದು ಹೇಳಬಹುದೇನೊ, ಒಟ್ಟಿನಲ್ಲಿ ಎನ್. ನರಸಿಂಹಯ್ಯ ಈ ಯಾವ ಗೊಡವೆಗೂ ಹೋಗದೆ ಪತ್ತೆದಾರಿ ಪ್ರಕಾರದಲ್ಲಿ ಗದ್ಯವನ್ನು ರೋಚಕವಾಗಿ ಬಿಂಬಿಸಿದ್ದುದು ಕನ್ನಡಕ್ಕೆ ಉಪಕಾರವೇ ಆಯಿತು.

ನವೋದಯದವರು, ಪ್ರಗತಿಶೀಲರು ದಲಿತ ಪಾತ್ರಗಳನ್ನು ಆರ್ದವಾಗಿ ಬಳಸಿಕೊಂಡರು. ಆ ಲೋಕವನ್ನು ಆಪ್ತವಾಗಿಯೇ ತೋರಿದರು. ಅವರ ಪರವಾದ ನ್ಯಾಯವನ್ನೂ ನೀಡಿದರು. ಎನ್.ನರಸಿಂಹಯ್ಯನವರು ದಲಿತರಾಗಿದ್ದರೂ ತಮ್ಮ ಲೋಕವನ್ನು ತಾವೇ ಯಾಕೆ ಕಾದಂಬರಿಗಳಲ್ಲಿ ತಂದುಕೊಳ್ಳಲಿಲ್ಲ ಎಂಬುದು ಕೇವಲ ವಿಮರ್ಶೆಯ ಪ್ರಶ್ನೆಯಲ್ಲ. ಅದು ಜಾತಿ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಕೇಳಬಹುದಾದ ಪ್ರಶ್ನೆ. ಸಾಹಿತ್ಯ ತತ್ವಗಳು, ಸಾಮಾಜಿಕ ಸ್ಥಾನಮಾನಗಳು, ಓದುಗ ಸಮಾಜದ ಅಪೇಕ್ಷೆಗಳು ಹಾಗೂ ಸಾಹಿತ್ಯವನ್ನು ತಲುಪಿಸುವ ವ್ಯವಹಾರಿಕ ಜಾಲ ಇವೆಲ್ಲವೂ ಪರೋಕ್ಷವಾಗಿ ನರಸಿಂಹಯ್ಯನವರ ಪತ್ತೆದಾರಿ ಬರಹವನ್ನು ನಿರ್ಧರಿಸಿರಬಹುದು. ಅಂದರೆ ಭಾಷೆ, ಅನುಭವ, ಬರಹ, ಸಾಮಾಜಿಕ ವಾಸ್ತವಗಳು ಕಾಣದ ಕೈಯ ನಿಯಂತ್ರಣಕ್ಕೂ ಒಳಪಡುತ್ತವೆ.

ಜನಪ್ರಿಯ ಸಾಹಿತ್ಯದ ಸಂದರ್ಭದಲ್ಲಿ ಈ ಚರ್ಚೆಯು ಅವಶ್ಯವಿರಲಿಲ್ಲ ಎನಿಸಬಹುದು. ಆದರೆ ಜನಪ್ರಿಯವಾಗಲು ಜಾತಿಯ ಶೋಷಣೆಯನ್ನು ಆಕ್ರಂಧನ ಧಾಟಿಯಲ್ಲೊ ಪ್ರತಿಭಟನೆಯ ರೀತಿಯಲ್ಲೊ ಮಂಡಿಸಿದಾಗ ಅದು ಮಧ್ಯಮ ವರ್ಗಕ್ಕೆ ಹಿತವಾಗುವುದಿಲ್ಲ. ಏಕೀಕರಣಾನಂತರದ ಸಾಮಾಜಿಕ ವಾಸ್ತವವು ಇದನ್ನೇ ಪರೋಕ್ಷವಾಗಿ ಧ್ವನಿಸುತ್ತಿದ್ದು ಭೈರಪ್ಪನಂತವರ ಬರಹಗಳೇ ಹೆಚ್ಚು ಬೇಡಿಕೆಯಲ್ಲಿವೆ. ಸಮಾಜದ ಒಪ್ಪಿತ ಜೀವನ ಕ್ರಮಗಳನ್ನು ನಿರಾಕರಿಸಿ ಬರೆದಾಗಲೆಲ್ಲ ಅದು ಜನಪ್ರಿಯವಾಗದು. ಆದ್ದರಿಂದಲೇ ದಲಿತ ಬಂಡಾಯದ ಬರಹಗಳು ಜನಪ್ರಿಯವಲ್ಲ. ಎನ್.ನರಸಿಂಹಯ್ಯ ಜಾತಿ ವಿನಾಶದ ಬಗ್ಗೆ ಕಾದಂಬರಿಗಳನ್ನು ಬರೆದಿದ್ದರೆ ಅವರು ಜನಪ್ರಿಯ ಲೇಖಕರಾಗುತ್ತಿರಲಿಲ್ಲ. ಮೇಲುಜಾತಿಯ ಲೇಖಕ ತನ್ನ ಜಾತಿಯನ್ನು ಸಮರ್ಥಿಸಿ ಬರೆದು ಜನಪ್ರಿಯ ಕಾದಂಬರಿಕಾರನಾಗಿ ಬಿಡಬಹುದು. ಅದೇ ಒಬ್ಬ ಕೆಳಜಾತಿಯ ಲೇಖಕ ಈ ಸ್ಥಿತಿಯನ್ನು ಮುಟ್ಟಲಾರ. ಜನಪ್ರಿಯ ಲೇಖಕರಾಗಿ ಯಶಸ್ವಿಯಾಗಬೇಕಾದರೆ ಸಾಮಾಜಿಕ ಬದ್ಧತೆ ಮುಖ್ಯವಾಗುವುದಿಲ್ಲ. ಯತಾಸ್ಥಿತಿಯನ್ನು ಸುಭದ್ರವಾಗಿ ಅದರ ಗತಸಮ್ಮೋಹಕತೆಯಲ್ಲಿ ಬಿಂಬಿಸಿ ಬರೆದಾಗ ಅಂತಹ ಬರಹವು ಸುಶೀಕ್ಷಿತ ಮಧ್ಯಮ ವರ್ಗಕ್ಕೂ ಅದರ ಅಚೀಚೆ ಇರುವ ಗುಂಪುಗಳಿಗೂ ಅಚ್ಚುಮೆಚ್ಚಾಗುತ್ತದೆ. ಇದು ಸಾಹಿತ್ಯದ ಒಟ್ಟು ಸೃಜನಶೀಲತೆಯನ್ನೆ ನಿರ್ಧರಿಸುವ ಅಂಶ. ಇದರಿಂದಲೇ ನರಸಿಂಹಯ್ಯ ಅವರು ಬಹಳ ಧೈರ್ಯದಿಂದ ತನ್ನ ನಿಜರೂಪವನ್ನು ಹೇಳಲಾಗದೆ ಪತ್ತೇದಾರಿ ನಿರೂಪಣೆಯಲ್ಲಿ ಅಪರಾಧಿಗಳ ಜಾಡು ಹಿಡಿವ ಶೂರ ಧೀರ ಕಿಲಾಡಿ ನಾಯಕನನ್ನು ಸೃಷ್ಟಿಸಿ ಅವನ ಮರೆಯಲ್ಲಿ ನಿಂತು ಸಮಾಜವನ್ನು ಇಣುಕಿ ನೋಡುವುದು.

ಎನ್. ನರಸಿಂಹಯ್ಯ ಅವರು ಓದುಗರನ್ನು ಬೆಳೆಸಿದರೇ ವಿನಃ ಸಾಹಿತ್ಯದ ಪರಂಪರೆಯನ್ನು ಬೆಳೆಸಲಿಲ್ಲ ಎಂದು ಯಾರಾದರೂ ದೂರಬಹುದು. ಓದುಗರನ್ನು ಬೆಳೆಸುವುದು ಎಂದರೆ ಲಿಖಿತ ಭಾಷೆಯ ಒಂದು ರೂಪದ ನಿರೂಪಣೆಯನ್ನು ಬೆಳೆಸಿದಂತೆಯೇ ಆಗುತ್ತದೆ. ಅನಕೃ ತರಾಸು ನಿರಂಜನರ ಏಕತಾನ ಗದ್ಯದಿಂದ ಬಿಡಿಸಿ ಪತ್ತೇದಾರಿ ನಿರೂಪಣೆಗೆ ಓದುಗ ವಲಯವನ್ನು ಸ್ಥಾನಾಂತರಿಸಿದ್ದು ದೊಡ್ಡದು. ಅವರ ಸಾಹಿತ್ಯವನ್ನು ಬಿಡಿಯಾಗಿ ವಿಮರ್ಶೆ ಮಾಡುವುದು ಬೇರೆ. ಆದರೆ ಜನಪ್ರಿಯ ಕಥನಗಳ ಸಂದರ್ಭದಲ್ಲಿ ಲೇಖಕನೊಬ್ಬನ ಸಾಮಾಜಿಕತೆಯನ್ನು ವಿಶ್ಲೇಷಿಸುವುದು ಬೇರೆ. ನಿರೂಪಣೆಯ ಪರಂಪರೆಗಳು ಒಂದು ಭಾಷೆಯ ಭಿನ್ನ ಕಾಲಘಟ್ಟಗಳಲ್ಲಿ ಹೇಗೆ ಬೇರೆ ಬೇರೆ ಅನುಸಂಧಾನಗಳನ್ನು ಬೆಳೆಸುತ್ತವೆ ಹಾಗೂ ಆ ಮೂಲಕ ಹೇಗೆ ಜನಪ್ರಿಯತೆಯು ನಿರ್ಧಾರವಾಗುತ್ತದೆ ಎಂಬುದನ್ನು ಈ ನೆಲೆಗಳಿಂದ ಪರಿಭಾವಿಸಬಹುದು. ನರಸಿಂಹಯ್ಯ ಅವರ ಜನಪ್ರಿಯತೆಯು ಸಾಮಾಜಿಕ ನ್ಯಾಯದ್ದಾಗಿರಲಿಲ್ಲ. ಸಂತೋಷಪಡಿಸುವ ಕಾಯಕ ಅವರ ಬರಹಗಳಲ್ಲಿ ಕಾಣುತ್ತದೆ. ಇದು ಕಡಿಮೆಯಾದುದೇನಲ್ಲ. ನ್ಯಾಯದನಿಯೆ ಸಾಹಿತ್ಯದ ಅಂತಿಮ ಉದ್ದೇಶವಲ್ಲ. ಭಾಷೆಯನ್ನು ಪ್ರತಿಭಟಿಸುವ ಒಂದೇ ನಾದಕ್ಕೆ ಹೊಂದಿಸುವುದು ಉಚಿತವಲ್ಲ. ಮನುಷ್ಯರ ಎಲ್ಲ ಬಗೆಯ ಸ್ವಭಾವಗಳಿಗೂ ಭಾಷೆಯಲ್ಲಿ ಸ್ಥಾನವಿದೆ. ಅದನ್ನೆಲ್ಲ ಒಟ್ಟಿಗೆ ಕೂಡಿಸಿದಾಗಲೇ ಒಂದು ಭಾಷೆಯ ಗದ್ಯದ ಗುಣವು ಬೆಳೆಯುವುದು. ಈ ಹಿನ್ನೆಲೆಯಲ್ಲಿ ಗಂಭೀರ ಸಾಹಿತ್ಯ ಜನಪ್ರಿಯ ಸಾಹಿತ್ಯ ಎಂಬ ವರ್ಗೀಕರಣಗಳೆರಡೂ ಕನ್ನಡ ಭಾಷೆಯನ್ನು ಬೆಳೆಸಿವೆ. ಈ ಬಗೆಯ ಭಾಷಿಕ ನಡತೆಯನ್ನು ಗುರುತಿಸಿಕೊಳ್ಳುವುದೇ ಇಲ್ಲಿ ಮುಖ್ಯವಾಗಿರುವುದರಿಂದ ತ್ರಿವೇಣಿ, ನರಸಿಂಹಯ್ಯ ಅವರ ಸಾಹಿತ್ಯದ ವಿಮರ್ಶೆಯನ್ನು ಮಾಡಲಾಗಿಲ್ಲ. ಭಾಷೆಯ ಸ್ವಭಾವ ಮತ್ತು ಆಯಾ ಕಾಲದ ಮನೋಭೂಮಿಕೆಗಳನ್ನು ತಿಳಿಯುವುದೇ ಸದ್ಯದ ಗುರಿ. ಇದೇ ರೀತಿಯಲ್ಲಿ ಎಸ್.ಎಲ್.ಬೈರಪ್ಪ ಅವರ ಕಾದಂಬರಿಗಳನ್ನೂ ಪರಿಶೀಲಿಸಬಹುದು.

ಜನಪ್ರಿಯ ಕಥನದ ವೇಳೆ ವರ್ತಮಾನದ ಓದುಗ ಸಮೂಹವನ್ನು ಬಿಟ್ಟು ವಿವೇಚಿಸಲು ಬರುವುದೇ ಇಲ್ಲ. ಹಾಗಾಗಿಯೇ ಇಲ್ಲಿ ಸಾಹಿತ್ಯದ ಮಾನದಂಡಗಳನ್ನು ಗಂಭೀರವಾಗಿ ಬಳಸಲಾಗದು. ಎಸ್.ಎಲ್. ಬೈರಪ್ಪ ಕನ್ನಡದ ಪ್ರಸಿದ್ಧ ಕಾದಂಬರಿಕಾರರು ಎನ್ನುವುದಕ್ಕಿಂತ ಅವರೊಬ್ಬ ಸನಾತನ ಮೌಲ್ಯಗಳ ಬರಹಗಾರ ಎಂದು ಆರೋಪಿಸಲಾಗುತ್ತದೆ. ಮತೀಯ ಭಾವನೆ ಒಂದು ಕಾಲದ ಭಾಷೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಭಾಷೆಯ ಭವಿಷ್ಯದ ಹಿನ್ನೆಲೆಯಲ್ಲಿ ಗಮನಿಸಬೇಕು. ಬೈರಪ್ಪ ಒಂದು ಜನವರ್ಗದ ಅನುಭವ ಲೋಕವನ್ನು ಆಧರಿಸಿ ಎಷ್ಟು ಬೇಕಾದರು ಬರೆಯಬಹುದು. ಅನುಭವಗಳು ಅವರವರು ಹುಟ್ಟಿ ಬಂದ ಪರಿಸರದ ಜೈವಿಕ ಸಂವೇದನೆ. ಅವನ್ನು ನಿರಾಕರಿಸಲಾಗದು. ಅವರವರ ನೆಲೆಯ ಅನುಭವಗಳು ಮನುಷ್ಯ ಸಮಾಜದ ಸಂಬಂಧಗಳಿಗಾಗಿ ಅವಶ್ಯಕ. ಆದರೆ ತನ್ನದೇ ಅನುಭವದ ಶ್ರೇಷ್ಠತೆಯಲ್ಲಿ ಪರರ ಮೇಲೆ ಮತೀಯ ಧಾರ್ಮಿಕ ಮೌಲ್ಯಗಳನ್ನು ಹೇರುವುದು ಭಾಷೆಯ ಮೂಲಕವೇ ಪೂರ್ವಾಗ್ರಹಗಳನ್ನು ಬಿತ್ತಿದಂತಾಗುತ್ತದೆ. ಎಲ್ಲ ಭಾಷೆಗಳೂ ಸ್ವನನ್ಯತೆಯಲ್ಲೆ ಅಖಂಡ ಮಾನವ ಸಮಾಜದ ಜೊತೆ ಮಾನವತ್ವವನ್ನು ಸಂವಹನ ಮಾಡುವುದು ನೈಸರ್ಗಿಕ ಪ್ರವೃತ್ತಿಯಿಂದ. ಭೈರಪ್ಪ ಅವರು ತತ್ವಶಾಸ್ತ್ರವನ್ನು ತಿಳಿದವರಾಗಿದ್ದರೂ ತನ್ನ ಮತಧರ್ಮದ ಹಾಗೂ ಬ್ರಾಹ್ಮಣದ ಅನುಭವವೇ ಅಂತಿಮ ಎಂಬಂತೆ ತಿಳಿಯುವುದು ಚೋದ್ಯವಾಗಿದೆ. ಈ ಅಂಶಕ್ಕೂ ಭೈರಪ್ಪನವರ ಕನ್ನಡ ಭಾಷೆಯ ಗದ್ಯ ನಿರೂಪಣೆಗೂ ಸಂಬಂಧವಿದೆ. ಬೈರಪ್ಪನವರ ಭಾಷೆಯು ಮತೀಯ ಅನುಭವಗಳಿಂದ ವ್ಯಕ್ತವಾಗುತ್ತಿದೆ.

ಹಿಂದೂ ಧರ್ಮದ ಶ್ರೇಷ್ಠತೆಯ ಅಂಶವೂ ಅದರಲ್ಲಿದೆ. ದೈವವನ್ನು ಆರಾಧಿಸುವ ಭಾಷೆಯಿಂದ ನಷ್ಠವಿಲ್ಲ. ಆದರೆ ಆ ದೈವದ ಹೆಸರಲ್ಲಿ ಅನ್ಯ ದೈವದವರನ್ನು ತೆಗಳುವ ಭಾಷೆಯಿಂದ ಮಾನವ ಸಂಬಂಧಗಳಿಗೆ ಧಕ್ಕೆ ಉಂಟಾಗುತ್ತದೆ. ಬೈರಪ್ಪ ಅವರು ಜನಪ್ರಿಯರಾಗಿರುವುದು ಕೇವಲ ಸಾಹಿತ್ಯದ ಕಾರಣಕ್ಕೇ ಎಂದು ಹೇಳುವುದು ಸಮಂಜಸವಾಗಲಾರದು. ಅವರ ಕಥನಗಳಲ್ಲಡಗಿರುವ ಹಿಂದುತ್ವದ ಗುಣದಿಂದ ಮಧ್ಯಮ ವರ್ಗಕ್ಕೆ ಅವರ ಬರಹಗಳು ತುಂಬ ಆಪ್ತವಾಗಿದೆ. ಒಪ್ಪಿತ ಸಾಮಾಜಿಕ ಮೌಲ್ಯಗಳನ್ನು ಸಮರ್ಥಿಸುವ ಕಾದಂಬರಿಕಾರ ಜನಪ್ರಿಯವಾಗುವುದು ಸುಲಭ. ಪ್ರಗತಿಶೀಲ ಕಾದಂಬರಿಕಾರರು ಸಮಾಜದ ಬಡವರ ಪರವಾದ ಕಥನ ರೂಪಿಸಿದಾಗಲೂ ಅವರು ಸಮಾಜವನ್ನು ಭಗ್ನಪಡಿಸಲು ಯತ್ನಿಸಿರಲಿಲ್ಲ. ಇದರಲ್ಲೂ ಮನರಂಜನೆಯ ಗುಣವಿತ್ತು. ಸಿನಿಮೀಯ ಭಾವನೆಗಳಿಂದ ಯಾರಿಗೂ ನೋವಾಗದು. ಬೇಕಿದ್ದರೆ ಅಂತಹ ಕಥನ ಪ್ರಸಂಗಗಳನ್ನು ಓದಿದರೆ, ನೋಡಿದರೆ ಸ್ವತಃ ಒಡೆಯನೇ ಮಿಡಿಯಬಲ್ಲ. ಇದು ಬಡವನ ಪರ ಸಿನಿಮಾ ನೋಡಿ ದುಃಖಿಸುವ ಶ್ರೀಮಂತ ಪ್ರೇಕ್ಷಕರ ಸ್ವಭಾವದ್ದು. ಮನರಂಜನೆಯ ಪ್ರದರ್ಶನ ಸಂದರ್ಭ ಮುಗಿದ ಮೇಲೆ ಆಳು ಆಳಾಗಿಯೇ ಒಡೆಯ ಒಡೆಯನಾಗಿಯೆ ಇರುವ ನಿಯಮ ಮುಂದುವರಿಯುತ್ತದೆ. ಪ್ರಗತಿಶೀಲರ ಬರಹದಲ್ಲೂ ಇಂತಹ ಪಾಲನೆ ಇತ್ತು. ನರಸಿಂಹಯ್ಯ ಇದನ್ನೇ ಬೇರೊಂದು ನೆಲೆಗೆ ವಿಸ್ತರಿಸಿದರು. ಅಪರಾಧಿಯನ್ನು ಪತ್ತೆ ಮಾಡುವುದರಲ್ಲೇ ಅವರು ಸಮಾಧಾನ ಪಟ್ಟುಕೊಳ್ಳಬೇಕಿತ್ತು. ತ್ರಿವೇಣಿ ಇವೆರಡೂ ಮಾದರಿ ಬಿಟ್ಟು ಸ್ತ್ರೀ ಲೋಕದ ಕಿಚ್ಚನ್ನು ಹಾಡಾಗಿ ನುಡಿಸಿದರು. ಬೈರಪ್ಪ ಇವರೆಲ್ಲರಿಗಿಂತ ಭಿನ್ನ. ಮೊದಲ ಬಾರಿಗೆ ಮತೀಯ ಮೂಲಭೂತವಾದಿ ಧೋರಣೆಯನ್ನು ಬರಹದಲ್ಲಿ ಗಾಢವಾಗಿ ಕಲಾತ್ಮಕವಾಗಿ ಅಳವಡಿಸಿಕೊಂಡರು. ಅವರ ಭಾಷೆಯು ಇದರಿಂದಲೇ ಆಪ್ತವಾಗಿ ಓದುಗರಿಗೆ ಮುಟ್ಟುವುದು. ಜನಪ್ರಿಯ ಕಥನವಾಗಲು ಬೇಕಾದ ಮತೀಯ ಔಷಧ ಭೈರಪ್ಪನವರಿಗೆ ದಕ್ಕಿದ್ದು ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿಯೇ ಎಂಬುದು ಕುತೂಹಲಕರವಾಗಿದೆ.

ಹೀಗಾಗಿ ಭೈರಪ್ಪನವರ ಹಿಂದುತ್ವದ ಭಾಷಿಕ ಗುಣವು ಅಸಲಿ ಕನ್ನಡದಲ್ಲ. ಪಂಪ ರನ್ನ ಜನ್ನರಂತಹ ಮಹಾ ಕವಿಗಳ ಭಾಷೆಯು ಮತೀಯವಾದುದಲ್ಲ. ಕನ್ನಡ ಸಾಹಿತ್ಯ ಪರಂಪರೆಯ ಎಲ್ಲ ಮಹತ್ವದ ಮಹನೀಯ ಲೇಖಕರು ಜಾತ್ಯತೀತ ಸಂವೇದನೆಗೆ ಬೇಕಾದ ಭಾಷೆಯನ್ನು ಕಂಡುಕೊಂಡರು. ಅನುಭವಗಳಲ್ಲಿ ಲೇಖಕರು ತಮ್ಮ ಮೂಲಕ್ಕೆ ನಿಷ್ಠವಾಗಿದ್ದರೂ ಅಖಂಡವಾದ ನೆಲೆಯಲ್ಲಿ ಕನ್ನಡ ಭಾಷೆಯನ್ನು ವಿಸ್ತರಿಸಿದರು. ಜೈನ ಕವಿಗಳಾಗಿದ್ದುಕೊಂಡೇ ಬೇರೆ ಭಾಷೆಗಳ ಜೊತೆ ಸಂಪರ್ಕವಿಟ್ಟುಕೊಂಡೇ ಪ್ರಾಚೀನ ಹಾಗೂ ಮಧ್ಯಯುಗೀನ ಕನ್ನಡ ಕವಿಗಳು ಮತೀಯತೆಯಿಂದ ಮುಕ್ತವಾಗುವ ಕನ್ನಡದ ಬಗೆಯನ್ನು ತೋರಿದರು. ಸ್ವತಃ ಶರೀಫರಂತಹ ಸಂತರು ಕನ್ನಡ ಭಾಷೆಯನ್ನು ಮತೀಯತೆಯ ಆಚೆಗೆ ವಿಸ್ತರಿಸಿದರು. ವಚನಕಾರರ ಭಾಷೆಯಾಗಲಿ, ಭಕ್ತಿಪಂಥದ ಕವಿಗಳ ಭಾಷೆಯಾಗಲಿ ಎಲ್ಲಿಯೂ ಕನ್ನಡ ಭಾಷೆಯನ್ನು ಮತ ಮೌಡ್ಯದ ನುಡಿಗಟ್ಟಿಗೆ ಸಿಲುಕಿಸಲಿಲ್ಲ. ಭೈರಪ್ಪರಂತಹ ಇಪ್ಪತ್ತನೆ ಶತಮಾನದ ಕಾದಂಬರಿಕಾರ ಕನ್ನಡ ಭಾಷೆಯ ಅಂತರಂಗದಲ್ಲಿ ಹಿಂದೂ ಬ್ರಾಹ್ಮಣ್ಯದ ನಂಬಿಕೆಯನ್ನು ಬೆರೆಸಿದ್ದುದು ನಾಡುನುಡಿಯ ವಿಕಾಸದಲ್ಲಿ ತಕ್ಕುದಾಗಿರಲಿಲ್ಲ. ನಂಬಿಕೆಗೂ ಭಾಷೆಗೂ ನೇರ ಸಂಬಂಧವಿದೆ. ನಂಬಿಕೆಗಳ ಮೇಲರಿಮೆಯೇ ಜಾತಿ, ಮತ, ಲಿಂಗ ಭೇದಗಳ ಮೂಲ. ಬೈರಪ್ಪನವರ ಯಾವುದೇ ಕಾದಂಬರಿಯನ್ನು ಎತ್ತಿಕೊಂಡು ಈ ಅಂಶಗಳನ್ನು ಪರಿಶೀಲಿಸಬಹುದು.

ಯಾವುದೇ ಒಂದು ಭಾಷೆ ಮತೀಯವಾದಷ್ಟೂ ಅದು ಪೂರ್ವಾಗ್ರಹಗಳ ಅರ್ಥಕೋಟೆಯಲ್ಲೆ ಕಲುಷಿತಗೊಳ್ಳುತ್ತದೆ. ಅನುಭವ ಕೂಡ ಇಂತಹ ಭಾಷೆಯಲ್ಲಿ ದುರುಪಯೋಗವಾಗುತ್ತದೆ. ಭಾಷೆಯು ಮನುಷ್ಯನ ಆಲೋಚನೆಗೆ ಇರುವ ಒಂದು ಸಂವಹನ ಮಾಧ್ಯಮ. ಅದನ್ನು ತಕ್ಕ ಕ್ರಮಗಳಲ್ಲಿ ಬೆಳೆಸಿಕೊಂಡಾಗಲೇ ಅನುಭವಗಳು ಅಖಂಡ ವಿಕಾಸದ ಭಾಗವಾಗುವುದು. ಜಾತಿಬದ್ಧವಾದಾಗಲೂ ಭಾಷೆಯು ಇದೇ ಇಕ್ಕಟ್ಟಿಗೆ ಒಳಪಡಬೇಕಾಗುತ್ತದೆ. ಆದ್ದರಿಂದಲೇ ಭಾಷೆಯು ಮುಕ್ತವಾದಂತೆಲ್ಲ ಅದು ಸರ್ವೋದಯದ ಕಡೆ ಚಲಿಸುವುದು. ಲಿಂಗ ತಾರತಮ್ಯ ಉಂಟಾದದ್ದು ಕೂಡ ಭಾಷೆಯನ್ನು ಮತೀಯ ಹಾಗೂ ಪುರುಷಾವಲಂಬಿ ರೀತಿಗೆ ಒಳಪಡಿಸಿದ್ದರಿಂದ. ಭೈರಪ್ಪ ನವರ ಭಾಷೆಯಲ್ಲಿರುವ ಮನೋಧರ್ಮ ಪೂರ್ವಗ್ರಹದ ಸಂವಹನವನ್ನೇ ಸ್ಥಾಪಿಸುತ್ತಿರುವುದು. ಇದರಿಂದ ಕನ್ನಡ ಸಮಾಜದ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಸಂಸ್ಕೃತ ಭಾಷೆಯು ತನ್ನ ಶ್ರೇಷ್ಠತೆಯ ಪೂರ್ವಾಗ್ರಹಗಳಿಂದಲೇ ನಶಿಸಿತು ಎಂಬುದನ್ನು ಇಂತಹ ಲೇಖಕರ ಸಂದರ್ಭದಲ್ಲಿ ಪ್ರಸ್ತಾಪಿಸಬೇಕು. ನಂಬಿಸುವ ಭಾಷೆಗಳೆಲ್ಲವೂ ಪರೋಕ್ಷವಾಗಿ ತಮ್ಮ ಮತಧರ್ಮದ ಯಜಮಾನಿಕೆಯನ್ನು ಹೇರುತ್ತಲೇ ಇರುತ್ತವೆ.

ನಂಬುವುದಕ್ಕೆ ಬೇಕಾದ ಆಪ್ತ ನೆನಪಿನ ಅನುಭವಗಳನ್ನು ಒಪ್ಪುವಂತೆ ಕಥನ ತಂತ್ರದಲ್ಲಿ ಬೈರಪ್ಪನವರು ನಿರೂಪಿಸುತ್ತಾರೆ. ಇದರಿಂದ ಮತೀಯ ಭಾವನೆಗಳು ಓದುಗರಲ್ಲಿ ಬೇರುಬಿಡುತ್ತವೆ. ಇದು ಬೈರಪ್ಪನವರ ಬರಹ ಪ್ರತಿಭೆಯ ಕಸುಬುಗಾರಿಕೆ. ಅಂದರೆ ಬೈರಪ್ಪನವರು ಹಿಂದೂ ಮತಧರ್ಮದ ಜೀವನ ಮೌಲ್ಯಗಳನ್ನು ಪ್ರತಿಪಾದಿಸಲು ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದ್ದಾರೆ. ನರಸಿಂಹಯ್ಯನವರಂತೆ ಪತ್ತೆದಾರಿ ಮನರಂಜನೆ ನೀಡುವುದು ಬೈರಪ್ಪನವರ ಉದ್ದೇಶವಲ್ಲ. ಇದರಿಂದಲೇ ಬಹುಸಂಖ್ಯಾತ ಹಿಂದೂ ಮೂಲಭೂತವಾದಗಳಲ್ಲಿ ಬೈರಪ್ಪನವರಿಗೆ ತೀವ್ರವಾದ ಆಸಕ್ತಿ. ಬಲಪಂಥೀಯ ಧೋರಣೆಯ ಅವರ ವಿಚಾರಗಳು ತತ್ವಶಾಸ್ತ್ರೀಯ ಶಿಸ್ತಿನವಲ್ಲ. ಹಿಂದೂ ಧರ್ಮದಲ್ಲಿ ಒಂದು ಜಾತಿಯ ಯಜಮಾನಿಕೆಯೇ ಅವರ ಆಲೋಚನೆಯಲ್ಲಿ ಪ್ರಧಾನವಾಗಿ ಕಾಣುತ್ತದೆ. ಜಾತಿನಿಷ್ಠ ಅನುಭವ ನಿರೂಪಣೆ ತಪ್ಪಲ್ಲ. ಆದರೆ ಆ ಜಾತಿಯ ಶ್ರೇಷ್ಠತೆಯನ್ನು ಸೃಜನಶೀಲ ನಿರೂಪಣೆಯಲ್ಲಿ ಸ್ಥಾಪಿಸಲು ತೊಡಗುವುದು ಜನಾಂಗದ ಭೇದ ಹಾಗೂ ಸಾಮ್ರಾಜ್ಯಶಾಹಿ ತತ್ವಗಳಿಗೆ ಸಮನಾದುದು. ಅನ್ಯ ಧರ್ಮೀಯ ವಿಚಾರಗಳ ವಿರುದ್ಧ ಕಾದಂಬರಿಗಳನ್ನು ಬರೆದ ಭೈರಪ್ಪನವರು ಧಾರ್ಮಿಕ ತತ್ವಗಳಿಗೆ ಬದ್ಧರಾಗಿದ್ದಾರೆಯೇ ವಿನಃ ಸಮಾಜದ ನೀತಿನಿಯಮ ಸೌಜನ್ಯಗಳಿಗೆ ಹೊಂದಿಕೊಂಡವರಲ್ಲ.

ಇದರಿಂದಾಗಿ ಏಕೀಕರಣಾ ನಂತರದ ಕನ್ನಡ ಸಾಹಿತ್ಯದ ನಾಡು ನುಡಿಯ ನಿರ್ಮಾಣದಲ್ಲಿ ಬೈರಪ್ಪನವರು ಪ್ರತ್ಯೇಕವಾದ ನಿಯಾಗಿಯೇ ಉಳಿಯುತ್ತಾರೆ. ಇಂತಹ ಲೇಖಕರಿಗೆ ರಾಜಕೀಯ ಪ್ರಭುತ್ವ ದೊಡ್ಡ ಗೌರವ ನೀಡುವುದು ವಿಪರ್ಯಾಸ. ಜಾತ್ಯತೀತತೆಯ ವಿರುದ್ಧ ಬರೆವ ಭೈರಪ್ಪ ಗದ್ಯಶೈಲಿಯನ್ನು ಜನಾಂಗ ಭೇದದ ನಿರೂಪಣೆಗೆ ಅತ್ಯಂತ ಸೂಕ್ಷ್ಮವಾಗಿ ಮಾರ್ಪಡಿಸಿದ್ದಾರೆ. ಈ ಅಂಶವನ್ನು ವಿವರಿಸಲು ಇತ್ತೀಚಿನ ಅವರ ಆವರಣ ಕಾದಂಬರಿಯನ್ನು ಗಮನಿಸಬಹುದು. ಮೂಲತಃ ಭಾಷೆ ಇರುವುದು ಮನುಷ್ಯ ಸಂಬಂಧಗಳ ವಿಸ್ತರಣೆಗೆ. ಸಂಸ್ಕೃತ ಭಾಷೆಯು ಅಂತಹ ಸಂಬಂಧಗಳಿಗೆ ಜಾತಿಯ ಕೋಟೆಗಳನ್ನು ಕಟ್ಟಿದ್ದರಿಂದಲೇ ಅದು ಅಳಿಯಬೇಕಾಯಿತು. ಕನ್ನಡ ಭಾಷೆಗೆ ಇಂತಹ ಮತೀಯ ಧೋರಣೆಯ ಜನಪ್ರಿಯ ಬರಹಗಳಿಂದ ಅಪಾಯವಿದೆ. ಭೈರಪ್ಪನವರ ಕಾದಂಬರಿಗಳಿಗೆ ಹೆಚ್ಚಿನ ಸಂಖ್ಯೆಯ ಓದುಗರಿದ್ದಾರೆ ಎಂದ ಮಾತ್ರಕ್ಕೆ ಓದಿನ ಕ್ರಿಯೆಯಿಂದ ಭಾಷೆಯ ಬಳಕೆ ಆಯಿತೆಂದುಕೊಂಡರೂ ಕೆಟ್ಟ ಓದು, ಪೂರ್ವಾಗ್ರಹದ ಓದು, ಮತೀಯವಾದ ಓದು ಮನುಷ್ಯರಲ್ಲಿ ದ್ವೇಷ ಬೆಳೆಸುತ್ತದೆ. ದ್ವೇಶದಿಂದಲ್ಲ ಭಾಷೆಯನ್ನು ಬೆಳೆಸುವುದು ಪ್ರೀತಿಯಿಂದಲೇ ಭಾಷೆಯು ಮಾನವ ಸಂಬಂಧಗಳನ್ನು ಕಂಡುಕೊಳ್ಳುವುದು. ನವೋದಯ ಕಾದಂಬರಿಕಾರರಿಗೆ ಈ ತೆರನ ಪ್ರೀತಿಯ ಆದರ್ಶವಾದಿ ಭಾಷೆ ಇದ್ದಿದ್ದರಿಂದಲೇ ರಾಷ್ಟ್ರನಿರ್ಮಾಣದಲ್ಲಿ ಅವರು ರೂಪಿಸಿದ ಗದ್ಯವು ಗಾಢವಾದುದಾಗಿತ್ತು. ಬೈರಪ್ಪ ಅವರು ಕಾದಂಬರಿಗಳು ಜನಪ್ರಿಯವಾಗಿರಲು ಈ ಕಾಲದ ಜನರ ಮನೋಧರ್ಮವೂ ಕಾರಣ. ರಾಜಕಾರಣದ ಪರೋಕ್ಷ ಬೆಂಬಲವೂ ಇದಕ್ಕಿದೆ. ಬಲಪಂಥೀಯ ವಿಚಾರಗಳು ವ್ಯವಸ್ಥಿತವಾಗಿ ಜಾಲ ರೂಪಿಸಿಕೊಂಡಿರುವುದರಿಂದ ಇಂತಹ ಬರಹಗಳಿಗೆ ಮನ್ನಣೆ ಹೆಚ್ಚು. ಜಾತಿ ವ್ಯವಸ್ಥೆಯ ಕೊಡುಗೆಯೂ ಇದರಲ್ಲಿದೆ.

ಅಂದರೆ ಏಕೀಕರಣೋತ್ತರ ರಾಜಕೀಯ ಪ್ರಭುತ್ವ, ಸಾಮಾಜಿಕ ವ್ಯವಸ್ಥೆ, ಸಾಹಿತ್ಯದ ನಿರೂಪಣೆ ಹಾಗೂ ಓದುಗ ವಲಯಗಳು ಹೆಚ್ಚು ಹೆಚ್ಚು ಮತೀಯವಾಗುತ್ತ ನಾಡನ್ನು ಅಂತಹ ನಂಬಿಕೆಗಳಿಂದಲೇ ಕಟ್ಟಬಹುದು ಎಂಬ ನಂಬಿಕೆಗೆ ಬಂದು ನಿಂತಿವೆ. ನವೋದಯ ಸಾಹಿತಿಗಳು ಇಂತಹ ನಂಬಿಕೆಗಳಿಗೆ ದೂರವಾಗಿದ್ದರು. ಸಂಕುಚಿತ ರಾಷ್ಟ್ರೀಯತೆಯ ನಿರೂಪಣೆಗಳು ಚರಿತ್ರೆಯ ಪೂರ್ವಾಗ್ರಹಗಳನ್ನೆ ಬಲಪಡಿಸುತ್ತವೆ. ಭೈರಪ್ಪನವರ ಕಾದಂಬರಿಗಳ ಮಂತ್ರವೂ ಇದೇ ಹೌದು. ಐತಿಹಾಸಿಕ ಘಟನೆಯನ್ನು ಆಧರಿಸಿ ಬರೆದ ತರಾಸು ಅವರೇ ಇಷ್ಟೊಂದು ಸಂಕುಚಿತವಾಗಿರಲಿಲ್ಲ. ಅವರಲ್ಲಿ ಭಾವನಾತ್ಮಕ ಕಥನದ ಸಂಬಂಧವಾದರೂ ಇತ್ತು. ಭೈರಪ್ಪ ಅವರು ಐತಿಹಾಸಿಕ ಘಟನೆಯನ್ನು ಆಯ್ದುಕೊಳ್ಳದಿದ್ದರೂ ಹಿಂದುತ್ವವನ್ನು ಸಾಧಿಸಿದ ಚಾರಿತ್ರಿಕ ಪ್ರಜ್ಞೆಯನ್ನು ವಸ್ತುವಾಗಿ ಗ್ರಹಿಸಿಕೊಳ್ಳುತ್ತಾರೆ. ಇದು ಸಂಕೀರ್ಣವಾದ ಮಾನಸಿಕ ಸ್ಥಿತಿ. ಚರಿತ್ರೆಯ ಘಟನೆ ಬೇರೆ. ಆದರೆ ಆ ಘಟನೆಯ ಪರಿಣಾಮ ರೂಪಾಂತರಗೊಂಡು ಜನರ ಮನಸ್ಸಿನಲ್ಲಿ ಬೇರೆ ಬಗೆಯ ಅಭಿಪ್ರಾಯಗಳನ್ನು ಬಿತ್ತಿರುತ್ತದೆ. ಭೈರಪ್ಪ ಈ ರೀತಿಯಲ್ಲಿಯೇ ಚರಿತ್ರೆಯ ಘಟನೆಗಿಂತಲೂ ಆ ಚರಿತ್ರೆಯ ಹಿಂದೂ ಪ್ರಜ್ಞೆಯನ್ನು ಬರಹದ ಬೇರನ್ನಾಗಿಸಿಕೊಂಡಿರುತ್ತಾರೆ. ಇದರಿಂದಲೇ ಅವರು ಬೆಳಸುವ ಕನ್ನಡಕ್ಕೆ ಮತೀಯ ಗುಣ ಬಂದಿರುವುದು. ಭಾಷಾ ವಿಜ್ಞಾನಿಗಳು ಮಾತ್ರ ಅದನ್ನು ಗುರುತಿಸಲು ಸುಲಭಸಾಧ್ಯ. ಓದುಗರಿಗೆ ಈ ಗುಣವು ಆಪ್ತವಾಗುವುದು ಮತೀಯ ಅಭಿರುಚಿಯಿಂದಲೇ.

ಭೈರಪ್ಪನವರಿಗೆ ವರ್ತಮಾನದ ಸಮಾಜದ ಬಗ್ಗೆ ವಿಶ್ವಾಸವಿಲ್ಲ. ಕೇವಲ ಹಿಂದೂ ವಿಚಾರಗಳ ಗತದಲ್ಲಿ ನಂಬಿಕೆಯಿದೆ. ಗತಕಾಲದಲ್ಲಿ ಶ್ರದ್ಧೆಯಿರಿಸಿಕೊಂಡ ಲೇಖಕ ಯಾವ ಉದ್ದೇಶಕ್ಕೆ ಅದನ್ನು ಬಳಸಿಕೊಳ್ಳುತ್ತಾನೆ ಎಂಬುದರ ಮೂಲಕ ಆ ಶ್ರದ್ಧೆಯನ್ನು ತೀರ್ಮಾನಿಸಬಹುದು. ಪೂರ್ವಾಗ್ರಹದ ಶ್ರದ್ಧೆಯು ದುರುದ್ದೇಶಕ್ಕೆ ಬಳಕೆಯಾದಾಗ ಅದು ನಾಡನ್ನು ಒಡೆಯುವಂತದಷ್ಟೇ ಆಗದೇ ಸಮಾಜದ ಸಮುದಾಯಗಳನ್ನು ಸೀಳುವಂತದಾಗಿರುತ್ತದೆ. ಬೈರಪ್ಪನವರ ಚಾರಿತ್ರಿಕ ಪ್ರಜ್ಞೆಯು ಈ ಪರಿಯಲ್ಲಿ ನಾಡು ನುಡಿಯನ್ನು ಗ್ರಹಿಸಿದೆ. ಇದರಿಂದಲೇ ಅವರಿಗೆ ಕನ್ನಡ ನಾಡಿಗಿಂತಲೂ ಮುಖ್ಯವಾದದ್ದು ಹಿಂದೂ ದೇಶವೇ. ಈ ಹಿಂದೂ ರಾಷ್ಟ್ರೀಯತೆಯ ಮೂಲಕ ಅವರ ಕಾದಂಬರಿಗಳು ಹಿಂದೂವಾದವನ್ನಲ್ಲದೆ ಬೇರೇನನ್ನೂ ಹೇಳಲು ಸಾಧ್ಯವಿಲ್ಲ. ಏಕೀಕರಣೋತ್ತರ ಕನ್ನಡ ನಾಡಿಗೆ ಇಂತಹ ಜನ ವಿರೋಧಿ ನೀತಿಯ ಕಥನಗಳ ಅವಶ್ಯಕತೆ ಇರಲಿಲ್ಲ. ವಿಚಿತ್ರ ಎಂದರೆ ಜನವಿರೋಧಿ ಎಂದು ತೀರ್ಮಾನಿಸಲ್ಪಟ್ಟ ಭೈರಪ್ಪನವರ ಕಾದಂಬರಿಗಳನ್ನು ಗಾಢವಾಗಿ ಮೈದುಂಬಿಕೊಳ್ಳಲು ನಿರ್ದಿಷ್ಟ ಜನ ವರ್ಗವೂ ಇದೆ. ಜನಪ್ರಿಯತೆ ವೈರುಧ್ಯ ಏನೆಂದರೆ ಅದು ತನ್ನ ಭವಿಷ್ಯವನ್ನೇ ಮರೆತು ವರ್ತಮಾನದ ಅನುಭೋಗದಲ್ಲಿ ಕಳೆದುಹೋಗುವುದು. ಹಿಂದೂ ಸಾಮ್ರಾಜ್ಯವನ್ನು ರಕ್ಷಿಸಲು ಹುಟ್ಟಿಕೊಂಡ ಸಾಮ್ರಾಜ್ಯಗಳಂತೆಯೇ ಜನಪ್ರಿಯ ಸಾಮ್ರಾಜ್ಯಶಾಹಿ ಸಾಹಿತ್ಯ ನಿರೂಪಣೆಗಳೂ ಕಾಲದ ಪರೀಕ್ಷೆಯಲ್ಲಿ ಕರಗಿ ಹೋಗುತ್ತವೆ. ಭೈರಪ್ಪ ಅವರ ಬರಹಗಳ ಜನಪ್ರಿಯತೆಯು ಇದಕ್ಕಿಂತ ಹೊರತಾದುದಲ್ಲ.

ಇಡೀ ಜನಪ್ರಿಯ ಸಾಹಿತ್ಯವೇ ಬೈರಪ್ಪನವರ ಬರಹದ ಗುಣಕ್ಕೇನು ಬದ್ಧವಲ್ಲ. ಯಾವ ವಿಚಾರವನ್ನು ಯಾವ ಉದ್ದೇಶದಿಂದ ಹೇಗೆ ಜನತೆಗೆ ತಲುಪಿಸಲಾಗುತ್ತದೆ ಎಂಬುದ ಮೇಲೆಯೂ ಜನಪ್ರಿಯತೆಯ ನಿರೂಪಣೆಗಳನ್ನು ನಿರ್ಧರಿಸಬಹುದು. ಮಾರ್ಕ್ಸ್‌ವಾದ ಕೂಡ ಜನಪ್ರಿಯವೇ. ಎಡಪಂಥೀಯ ಸರ್ಕಾರಗಳಿದ್ದ ರಾಷ್ಟ್ರಗಳಲ್ಲಿ ಇಡೀ ಸಾಹಿತ್ಯವು ತನ್ನ ವಿಚಾರಗಳನ್ನು ಮಂಡಿಸುವಲ್ಲಿ ಸಕಾರಾತ್ಮಕವಾದ ಜನಪ್ರಿಯತೆಯನ್ನು ಸಾಧಿಸಿದ್ದಿದೆ. ನಿರಂಜನ ಅವರು ಮಾರ್ಕ್ಸ್‌ವಾದಿ ಕಥನವನ್ನು ಮಾಡುವ ಮೂಲಕವೇ ಜನಪ್ರಿಯ ಕಾದಂಬರಿಕಾರರಾಗಿದ್ದರು. ಮಾರ್ಕ್ಸ್‌ವಾದಕ್ಕೆ ಸಂಬಂಧ ಪಡದ ಇತರೆ ಬೇರೆ ಬರಹಗಳೂ ಜನಪ್ರಿಯವಾಗಿರುವುದಕ್ಕೆ ಸಾಕಷ್ಟು ಆಧಾರಗಳಿವೆ. ನವ್ಯ ಕಾದಂಬರಿಗಳ ಪೈಕಿ ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿ ಅಂತವುಗಳಲ್ಲಿ ಒಂದು ರಾವ್ ಬಹದ್ದೂರ್ ಅವರ ಗ್ರಾಮಾಯಣ ಕಾದಂಬರಿಯೂ ಇಂತದೇ. ಅನುವಾದದ ಮೂಲಕ ಕನ್ನಡಕ್ಕೆ ಬಂದ ಅನೇಕ ಕಾದಂಬರಿಗಳು ಜನಪ್ರಿಯಗೊಂಡಿವೆ. ಅದರಿಂದ ಕನ್ನಡ ಭಾಷೆಗೆ ಆದ ಲಾಭ ನಷ್ಟವೇನು ಎಂದು ಪರಿಶೀಲಿಸುವುದು ಬೇರೆ. ಖಾಂಡೇಖರ್ ಅವರ ‘ಯಯಾತಿ’ ಕಾದಂಬರಿಯನ್ನು ವಿ.ಎಸ್. ಇನಾಂದಾರ್ ಅವರು ಕನ್ನಡಕ್ಕೆ ತರುವ ಮೂಲಕ ಆ ಕೃತಿಗೆ ದೊಡ್ಡ ಜನಪ್ರಿಯತೆಯನ್ನು ತಂದುಕೊಟ್ಟರು. ಅನುವಾದದ ಮೂಲಕ ಹೀಗೆ ವಿಚಿತ್ರವಾದ ಜನಪ್ರಿಯತೆಯು ಗಂಭೀರ ರಚನೆಗಳಲ್ಲಿ ಬರುವ ಸಾಧ್ಯತೆ ಕುತೂಹಲಕರವಾಗಿದೆ. ಆ ಚರ್ಚೆ ಇಲ್ಲಿ ಬೇಡ. ಆದರೆ ಬೈರಪ್ಪನವರ ಕಾದಂಬರಿಗಳು ಕನ್ನಡೇತರ ಭಾಷೆಗಳಲ್ಲಿ ತುಂಬ ಜನಪ್ರಿಯ ಎಂದು ಕೇಳೀದ್ದೇವೆ. ಯಂಡಮೂರಿಯಂತಹ ಲೇಖಕರೂ ಹೀಗೆ ಜನಪ್ರಿಯರಾಗಿದ್ದಿದೆ. ಇಂಗ್ಲೀಷಿನ ಸಾಧಾರಣ ಜನಪ್ರಿಯ ಕಾದಂಬರಿಕಾರರು ಕೂಡ ಕನ್ನಡದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ ಎಂಬ ಮಾತನ್ನು ಆ ಕ್ಷೇತ್ರದ ಪರಿಣಿತರು ಆರೋಪಿಸಿದ್ದೂ ಇದೆ. ಜನಪ್ರಿಯತೆಯ ತಾತ್ವಿಕತೆಯನ್ನು ಖಚಿತಪಡಿಸಿ ಹೇಳಲು ಅನೇಕ ತೊಡಕುಗಳಿವೆ. ಒಳ್ಳೆಯ ಹಾಗು ಕೆಟ್ಟ ಎರಡೂ ಬಗೆಯ ಬರಹಗಳು ಜನಪ್ರಿಯತೆಯನ್ನು ಸಾಧಿಸಿಕೊಳ್ಳುತ್ತವೆ. ಸಮೂಹ ಸನ್ನಿಯಂತಹ ಸ್ವಭಾವವು ನಿಯಂತ್ರಣ ಮೀರಿದ್ದು ಹಾಗೂ ಕ್ಷಣಿಕವಾದದ್ದು.

ಬೈರಪ್ಪನವರ ಕಾದಂಬರಿಗಳ ಬಗ್ಗೆ ಸಮೂಹ ಸನ್ನಿಯಂತಹ ಓದುಗ ವಲಯ ಇರಬಹುದು. ತರ್ಕಕ್ಕೆ ಸಿಲುಕದ ಈ ಬಗೆಯ ಪ್ರಜ್ಞೆಯು ಒಂದು ಭಾಷೆಗೆ ಮಿತಿಯೇ ಹೊರತು ಸಾಧ್ಯತೆ ಅಲ್ಲ. ಸಮೂಹ ಸನ್ನಿ ಓದಿಗಾಗಲಿ, ನೋಟಕ್ಕಾಗಲಿ, ಆಲಿಸುವಿಕೆಗಾಗಲಿ, ಅಭಿವ್ಯಕ್ತಿಗಾಗಲಿ ನೈತಿಕತೆ ಇರದು. ಹದ್ದು ಮೀರಿದ ವರ್ತನೆ ಮಾನವ ಸಹಜವಾದದ್ದಲ್ಲ. ಅಂತಹ ನಡತೆಗಳಿಂದ ನಾಗರೀಕತೆಗಳ ಇತಿಹಾಸದಲ್ಲಿ ಏನೇನು ಅನಾಹುತವಾಗಿದೆ ಎಂಬುದನ್ನು ಗಮನಿಸಬಹುದು. ಇಂತಹ ನಡತೆಗಳ ನಡುವೆ ಸಿಲುಕಿದ ಮಾನವ ಭಾಷೆಗಳು ಅಮಾನುಷವಾಗುತ್ತದೆ. ಭಾಷೆಯ ಸಹಜ ಮಾನವ ವರ್ತನೆಗಳು ನಿಯಂತ್ರಣ ತಪ್ಪುತ್ತವೆ. ಸರ್ವಾಧಿಕಾರಿ ವ್ಯಕ್ತಿ ಭಾಷೆಗಳು ಹುಟ್ಟುವುದೇ ಇಂತಲ್ಲಿ. ಸರ್ವಾಧಿಕಾರಿ ಧೋರಣೆಯ ಯಾವುದೇ ಧಾರ್ಮಿಕ ಪರಿಭಾಷೆಗಳು ಕೂಡ ಇಂತಲ್ಲಿಯ ಪ್ರಭುತ್ವ ಸ್ಥಾಪಿಸುತ್ತವೆ. ಭಾಷೆಯು ಆದೇಶಗಳಿಗೇ ಬಳಸಲ್ಪಟ್ಟರೆ ಸ್ವತಃ ಭಾಷೆಯೂ ಸರ್ವಾಧಿಕಾರಿಯಂತೇ ಮಾರ್ಪಟ್ಟು ಅಧಿಕಾರಯುತವಾಗಿ ಬಿಡುತ್ತದೆ. ಆಗ ಪ್ರಭುತ್ವ ಮತ್ತು ಭಾಷೆ ಒಂದನ್ನೊಂದು ಅನುಸರಿಸಿ ಸಮಾಜವನ್ನು ಆಳುತ್ತವೆ. ಸಂಸ್ಕೃತ ಭಾಷೆಯು ಒಂದು ಕಾಲಕ್ಕೆ ಹೀಗೆಯೇ ಆಳಿತ್ತು ಎಂಬುದನ್ನು ಮರೆಯಲಿಕ್ಕಾಗದು. ಈ ಕಾಲದಲ್ಲಿ ಜನಪ್ರಿಯ ರಾಜಕಾರಣ ಮಾಡುವವರು, ಜನಪ್ರಿಯ ಹಿಂದೂ ಅವತರಣಿಕೆಯನ್ನು ಪ್ರಚಾರ ಮಾಡುವವರು. ಭೈರಪ್ಪ ಹಾಗೂ ಚಿದಾನಂದಮೂರ್ತಿಗಳಂತವರನ್ನು ಅಂತರಂಗದಲ್ಲಿಟ್ಟು ಕೊಳ್ಳುವುದು ಇಂತಹ ಸಂಬಂಧಗಳಿಂದಲೇ. ಜಾತಿ ಭೇದ, ಲಿಂಗ ಭೇದ, ಜನಾಂಗ ಭೇದಗಳನ್ನು ಬಿತ್ತುವ ಭಾಷೆಯು ಸಮೂಹ ಸನ್ನಿ ಸ್ವಭಾವದ ಭಾಗವಾಗಿಯೇ ವಿಕಾಸವಾಗಿದೆ. ಆದ್ದರಿಂದಲೇ ಮತೀಯಗಲಭೆ, ಕೋಮುದ್ವೇಷ, ಜಾತಿಯ ಮೇಲಿನ ಹಲ್ಲೆಗಳು ಅವುಗಳ ಸಮರ್ಥನೆಗಳು ಆ ಬಗೆಗಿನ ಕಥನಗಳು ಬೃಹತ್ತಾಗಿ ಆವರಿಸಿಕೊಳ್ಳುವುದು. ಏಕೀಕರಣೋತ್ತರ ಸಂದರ್ಭದಲ್ಲಿ ಬೈರಪ್ಪನವರ ಕಾದಂಬರಿಗಳನ್ನು ಇಂತಹ ಹಿನ್ನೆಲೆಗಳಿಂದಲೂ ಪರಿಶೀಲಿಸಬಹುದು.

ತ್ರಿವೇಣಿ, ನರಸಿಂಹಯ್ಯ ಹಾಗೂ ಬೈರಪ್ಪನವರ ನಡುವಿನ ಜನಪ್ರಿಯತೆ ಹಾಗೂ ಅವರ ಕಥನಗಳ ನೆಲೆಯ ತಾತ್ವಿಕತೆ ಈ ಬಗೆಯದಾದರೆ; ಮತ್ತೆ ಕೆಲವು ಜನಪ್ರಿಯ ಲೇಖಕರ ಕೃತಿಗಳು ಬೇರೊಂದು ಆಯಾಮವನ್ನು ಪಡೆದಿವೆ. ಅಂತವರಲ್ಲಿ ನಾ.ಡಿಸೋಜ, ಕೆ.ಟಿ.ಗಟ್ಟಿ, ಪ್ರೇಮಾಭಟ್ಟ ಪ್ರಮುಖರು. ಜನಪ್ರಿಯ ಲೇಖಕರಿಗೆ ಕಾದಂಬರಿ ಪ್ರಕಾರವೇ ಅಚ್ಚುಮೆಚ್ಚು.  ಜನಪ್ರಿಯ ಕವಿ ಎಂದು ಗುರುತಿಸುವುದು ಕಷ್ಟ. ಕೆ.ಎಸ್.ನರಸಿಂಹಸ್ವಾಮಿ ಮಾತ್ರ ತುಂಬ ಜನಪ್ರಿಯರು. ಆದರೆ ಅವರ ಕಾವ್ಯ ಧೋರಣೆ, ಕಾವ್ಯಶೈಲಿ, ರಚನೆ, ಸಂಕೇತ, ಪ್ರತಿಮೆ, ರೂಪಕಗಳೆಲ್ಲವೂ ಕಾವ್ಯ ಶಿಸ್ತಿನ ಆಚೆಗೆ ಹೋಗಿರಲಿಲ್ಲ. ಪ್ರಗತಿ ಶೀಲರಿಂದ ಆರಂಭವಾದ ಜನಪ್ರಿಯ ನಿರೂಪಣೆಯು ಕಾದಂಬರಿ ಪ್ರಕಾರದಲ್ಲಿ ವಿಶಾಲವಾಗಿ ವ್ಯಾಪಿಸಿಕೊಂಡದ್ದು ಅಧ್ಯಯನ ಯೋಗ್ಯ ವಿಷಯ. ಬೇರೆ ಪ್ರಕಾರಗಳಲ್ಲಿ ಕಾಣದ ಈ ಪರಿಯ ಜನಪ್ರಿಯತೆಯು ಕಾದಂಬರಿಯ ಇಂತಹ ದೀರ್ಘ ನಿರೂಪಣೆಗಳಲ್ಲೇ ಯಾಕೆ ಬೆಳೆಯಿತು ಎಂಬುದು ಸಮಾಜದ ಮನಸ್ಥಿತಿಯ ಮೇಲೂ ಬೆಳಕು ಚೆಲ್ಲುತ್ತದೆ. ಮೇಲೆ ಹೇಳಿದ ನಾ.ಡಿಸೋಜ, ಕೆ.ಟಿ.ಗಟ್ಟಿ, ಪ್ರೇಮಾಭಟ್ ಅವರು ಕೂಡ ಕಾದಂಬರಿ ಪ್ರಕಾರದಲ್ಲೇ ಪ್ರಖ್ಯಾತರಾದವರು. ಆದರೆ ಈ ಮೂರೂ ಜನ ಲೇಖಕರ ಜನಪ್ರಿಯ ತಂತ್ರವು ಬೇರೆಯಾದುದು.  ಈ ಅಂಶಗಳನ್ನಿಲ್ಲಿ ಸ್ಥೂಲವಾಗಿ ಗಮನಿಸುವ.

ನಾ. ಡಿಸೋಜರ ಕಾದಂಬರಿಗಳು ಕತೆಗಳು ತುಂಬ ಆಪ್ತವಾಗಿ ಮನವ ತಟ್ಟುತ್ತವೆ. ಯಾವುದೇ ಒಂದು ಪಂಥಕ್ಕೆ ಕಟ್ಟುಬಿದ್ದ ಲೇಖಕರಲ್ಲ ಇವರು. ಕಾಲದ ಅವಶ್ಯಕತೆಗೆ ಬದ್ಧವಾಗಿ ಬರೆವ ಗುಣ ಇವರಿಗಿದೆ. ಆದರೂ ಸಾಹಿತ್ಯದ ಪರಂಪರೆಗಳನ್ನು ನಿರಾಕರಿಸಿ ಓದುಗರ ಭಾವಕ್ಕೆ ಮಾತ್ರ ಬೆಲೆಕೊಟ್ಟವರಲ್ಲ. ಸುಧಾರಣಾವಾದಿ ಧೋರಣೆಯೂ ಇವರಲ್ಲಿದ್ದು ಒಂದು ಸಮಾಜದ ಹಿತಕ್ಕಾಗಿ ಬೇಕಾಗುವ ಭಾವನಾತ್ಮಕ ನೆನಪುಗಳನ್ನು ಆಧರಿಸಿಯೇ ಕಾದಂಬರಿಗಳನ್ನು ಬರೆಯುತ್ತಾರೆ. ಡಿಸೋಜ ಅವರು ಕನ್ನಡ ಭಾಷೆಗಿರುವ ಭಾವನಾತ್ಮಕ ಗುಣವನ್ನೆ ನಂಬಿದವರು. ಭಾಷೆಯನ್ನು ಪ್ರತಿರೋಧ ತರ್ಕದಲ್ಲಿ ಒಡ್ಡುವ ರೀತಿಯನ್ನು ಅವರು ಆಯ್ಕೆ ಮಾಡಿಕೊಳ್ಳಲಿಲ್ಲ. ಕುಂ. ವೀರಭದ್ರಪ್ಪ ಆ ಬಗೆಯನ್ನು ಮಾಡಿದರು. ಕುಂ.ವೀ.ಕೂಡ ಜನಪ್ರಿಯ ಕಾದಂಬರಿಕಾರರೇ. ಜನಪ್ರಿಯತೆಗೆ ಬೇಕಾದ ಸೂತ್ರಗಳನ್ನು ಅನುಸರಿಸುವಲ್ಲಿ ನಾ.ಡಿಸೋಜರ ಜೊತೆ ಕುಂ.ವೀ. ಸಮನಾಗಿ ನಿಲ್ಲುತ್ತಾರೆ. ಬಂಡಾಯ ಸ್ವಭಾವದಲ್ಲಿ ಪಾತ್ರಗಳನ್ನು ವೈರುಧ್ಯವಾಗಿ ಕಟ್ಟಿ ಹೇಳುವ ಕಥನ ಮಾದರಿಯೂ ಜನಪ್ರಿಯವಾಗಬಲ್ಲದು. ಡಿಸೋಜ ಅವರು ನವುರಾಗಿ ಭಾವಗೀತದ ದಾಟಿಯಲ್ಲಿ ಸಾಂಸಾರಿಕ ಲೋಕದ ಸಂಬಂಧಗಳನ್ನು ನಿರೂಪಿಸುತ್ತಾರೆ. ಕಳೆದು ಹೋದ ಮಧುರ ಮಾನವ ಕ್ಷಣಗಳ ಕಡೆಗೇ ಡಿಸೋಜರು ಹೆಚ್ಚು ಒಲವು ತೋರುತ್ತಾರೆ. ಆ ಮೂಲಕ ಇರುವ ಸಂಬಂಧಗಳಿಗೆ ನೆನಪಿನ ಬೆಸುಗೆಯನ್ನು ಮಾಡುತ್ತಾರೆ. ಬೈರಪ್ಪ ಗತಕಾಲವನ್ನು ಅಪ್ಪಿಕೊಳ್ಳುವುದು ವರ್ತಮಾನದ ನಿರಾಕರಣೆಯ ಮೂಲಕವಾದರೆ ಡಿಸೋಜ ಅವರು ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರ ಪ್ರೀತಿಯೆ ನಾಡಿನ ಸಮತೆಯ ತತ್ವಕ್ಕೆ ಬೇಕಾದುದು ಎಂಬುದನ್ನು ನಂಬುತ್ತಾರೆ.

ನಾ. ಡಿಸೋಜರ ಕಾದಂಬರಿಗಳ ಕೃತಿ ವಿಮರ್ಶೆ ಬೇರೆ. ಅವರ ಭಾಷೆಯ ತಾತ್ವಿಕತೆಯೇ ಬೇರೆ. ಜನಪ್ರಿಯತೆಯ ದೃಷ್ಟಿಯಲ್ಲಿ ಭೈರಪ್ಪನವರ ಜನಪ್ರಿಯತೆಗಿಂತ ಡಿಸೋಜರ ಜನಪ್ರಿಯತೆಯು ತುಂಬ ಮುಖ್ಯ. ಮತೀಯ ಗದ್ಯಕ್ಕೆ ವಿರುದ್ಧವಾದದ್ದನ್ನು ಡಿಸೋಜರು ಆಯ್ದುಕೊಳ್ಳುತ್ತಾರೆ. ಆದ್ದರಿಂದಲೇ ಅವರ ನಿರೂಪಣೆಗೆ ಮುಕ್ತ ವಾತಾವರಣ ಇರುವುದು. ಸಮಾಜದ ಯಾರ ಮನಸ್ಸನ್ನೂ ನೋಯಿಸದೆ ಆದರೆ ಎಲ್ಲರ ಮನುಷ್ಯ ಸ್ವಭಾವವನ್ನು ಅರಿತು ಬರಹ ಮಾಡುವುದು ಸರಳವಾದ ಸಂಗತಿಯಲ್ಲ. ಅವರವರ ಅಭಿರುಚಿಗಳ ಗಡಿ ದಾಟಿ ಓದುಗ ಂತರಂಗ ಪ್ರವೇಶಿಸಬೇಕಾದರೆ ಲೇಖಕನಾದವನು ಯಾವ ಬಗೆಯ ಕಥನವನ್ನು ರೂಪಿಸಬೇಕು ಎಂಬುದು ವಯಕ್ತಿಕವಾದುದಲ್ಲ. ನರಸಿಂಹಯ್ಯನವರು ಆ ಬಗೆಯ ಕಥನ ಮಾಡಿದ್ದು ಬೇರೆ. ನಾ.ಡಿಸೋಜ ಅವರನ್ನು ಪತ್ತೆದಾರಿ ಕಾದಂಬರಿಕಾರರ ರೀತಿಯಲ್ಲಿ ವಿವೇಚಿಸಲಾಗದು. ಕೇವಲ ಮನರಂಜನಾ ಧೋರಣೆಯ ಚೌಕಟ್ಟಿಗೂ ಡಿಸೋಜರ ಕಾದಂಬರಿಗಳು ಸೀಮಿತವಾಗುವುದಿಲ್ಲ. ಪ್ರಗತಿಶೀಲರಂತೆ ಬಡವರ ಬಗ್ಗೆ ತೀರ ಭಾವನಾತ್ಮಕವಾಗಿ ಬರೆಯುವುದಕ್ಕೂ ಡಿಸೋಜ ಅವರು ನಿಂತು ಬಿಡುವುದಿಲ್ಲ. ಒಂದಿಷ್ಟು ಪ್ರಗತಿಶೀಲಗುಣ ಮತ್ತೊಂದಿಷ್ಟು ಜನಪ್ರಿಯ ಸಿನಿಮೀಯ ಗುಣ ಹಾಗೇಯೆ ಕಲಾತ್ಮಕ ಶೈಲಿಯ ಇನ್ನೊಂದಿಷ್ಟ ಶಿಸ್ತು ಅವರ ಕಾದಂಬರಿಗಳಿಗೆ ಭಿನ್ನತೆಯನ್ನು ತಂದಿವೆ. ಓದುಗರ ನಿಯಂತ್ರಣದಿಂದ ಬಿಡಿಸಿಕೊಂಡು ಬರೆವ ಶಕ್ತಿ ಡಿಸೋಜ ಅವರಿಗೆ ಇದ್ದ ಕಾರಣದಿಂದಲೇ ಗಂಭೀರ ಓದುಗರಿಗೂ ಅವರು ಆಪ್ತವಾಗುತ್ತಾರೆ. ಪ್ರಗತಿಶೀಲರು ನವೋದಯ ಕಾದಂಬರಿಗಳ ಬೃಹತ್ ರೂಪ ಮತ್ತು ಕಲಾತ್ಮಕತೆಯನ್ನು ಸರಳಗೊಳಿಸಿ ಜನಪ್ರಿಯಗೊಳಿಸಿದಂತೆಯೇ ಡಿಸೋಜ ಅವರು ನವ್ಯ ಕತೆ ಕಾದಂಬರಿಗಳ ಸಂಕೀರ್ಣ ಸ್ವಭಾವ ಮತ್ತು ವ್ಯಕ್ತಿ ವಿಶಿಷ್ಟ ಕಲಾತ್ಮಕತೆಯನ್ನು ಬಿಡಿಸಿ ರೂಪಾಂತರಿಸಿದರು. ಹೀಗೆ ಮಾಡುತ್ತಲೇ ಜನರಿಗೆ ಹಿತವಾಗುವ ಸರಳ ಶೈಲಿಯನ್ನು ರೂಢಿಸಿಕೊಂಡರು.

ನಿರೂಪಣೆಯ ಸಂಕೀರ್ಣತೆಯನ್ನು ಬಿಡಿಸಿದಾಗಲೆಲ್ಲ ತೀವ್ರತೆ ಕಡಿಮೆ ಆಗಬಲ್ಲದು. ಮೆಲೊಡ್ರಾಮಾದ ಗುಣ ಆಗ ಪ್ರಧಾನವಾಗಿ ಆವರಿಸಿಕೊಳ್ಳುತ್ತದೆ. ಬಹುಪಾಲು ಎಲ್ಲ ಜನಪ್ರಿಯ ಲೇಖಕರು. ಈ ಗುಣವನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ನಂಬಿಸಲು ಮೆಚ್ಚಿಸಲು ಕರಗಿಸಲು ಮೆಲೊಡ್ರಾಮಾದ ತಂತ್ರವು ಪರಿಣಾಮಕಾರಿ. ಕಾದಂಬರಿ ಪ್ರಕಾರದಲ್ಲೆ ಈ ಭಾಷಿಕ ಸ್ವಭಾವವು ಹೆಚ್ಚು ಬಳಕೆ ಆಗಿರುವುದು. ಡಿಸೋಜ ಅವರು ತೀರ ಭಾವಾಭಿನಯದಲ್ಲೇ ಓದುಗರನ್ನು ಮುಳುಗಿಸುವುದಿಲ್ಲ ಎಂಬುದೇ ಅವರ ಶಕ್ತಿ. ಕಣ್ಣೀರು ಖರ್ಚು ಮಾಡಿಸುವ ಕಾದಂಬರಿಕಾರ ಅಂತರ್ ದೃಷ್ಟಿಯನ್ನು ಮುಚ್ಚಿಸಿ ಬಿಡುತ್ತಾನೆ.  ಈ ಸದ್ಯ ಬರೆಯುತ್ತಿರುವ ಅನೇಕ ಮಹಿಳಾ ಕಾದಂಬರಿಕಾರರು ಇಂತಹ ವಿಫಲ ಬರಹಗಳಲ್ಲಿ ತೊಡಗಿರುವುದನ್ನು ಗಮನಿಸಿ ಈ ಹೇಳಿಕೆಯನ್ನು ಪರೀಕ್ಷಿಸಬಹುದು. ಡಿಸೋಜ ಅವರ ಜೊತೆಯಲ್ಲೆ ಬರೆಯುತ್ತಿರುವ ಮಹಿಳಾ ಕಾದಂಬರಿಕಾರ್ತಿಯರಾದ ಎಚ್.ಜಿ. ರಾಧಾದೇವಿ, ಸಾಯಿಸುತೆ, ಪಂಕಜ ನುಗ್ಗೆಹಳ್ಳಿ, ಈಚನೂರು ಶಾಂತ, ಸುಧಾ ನಾರಾಯಣ ಮೂರ್ತಿ ಮುಂತಾದವರ ಬರಹಗಳು ಸ್ತ್ರೀ ಲೋಕವನ್ನು ಒಳಗೊಂಡಿದ್ದರೂ ಅವು ಮನರಂಜನೆಯ ಸುತ್ತಲೇ ಸುತ್ತಿ ದುರಂತದಲ್ಲೊ ಸುಖಾಂತದಲ್ಲೊ ಸುಮ್ಮನಾಗಿ ಬಿಡುತ್ತವೆ. ಇದು ಪ್ರಗತಿಶೀಲ ಕಾದಂಬರಿಕಾರರನ್ನು ಅನುಕರಿಸಿದ್ದರ ಪರಿಣಾಮ. ಕೌಟುಂಬಿಕ ಜಗತ್ತಿನ ಒಳಗೇ ಸುತ್ತುವ ಇಂತಹ ಲೇಖಕಿಯರ ಬರಹ ವಿರಾಟ್ ಸ್ವರೂಪದಲ್ಲಿ ಸಮಾಜವನ್ನು ಗ್ರಹಿಸುವುದಿಲ್ಲ. ತಮ್ಮ ಕೌಟುಂಬಿಕ ಗಡಿಗಳಲ್ಲೆ ಲೋಕವನ್ನು ಗ್ರಹಿಸಲು ಸಾಧ್ಯವಿದೆಯಾದರೂ ಜನಪ್ರಿಯತೆಯ ಸಿದ್ಧಸೂತ್ರಗಳು ಈ ಲೇಖಕಿಯರನ್ನು ನಿಯಂತ್ರಿಸಿವೆ. ನಾ.ಡಿಸೋಜ ಅವರು ಇಂತಹ ಅಪಾಯದಿಂದ ಪಾರಾಗಿ ಮಧ್ಯಮ ಹಾದಿಯಲ್ಲಿ ಬರಹ ರೂಪಿಸಿಕೊಂಡಿದ್ದಾರೆ. ಅತ್ತ ಯಾರನ್ನೂ ತೆಗಳದೆ, ಯಾರ ಹಿತವನ್ನೂ ನೋಯಿಸದೆ ಇತ್ತ ಯಾವುದೇ ಭಗ್ನತೆಗೂ ತೊಡಗದೆ ಯಾವುದೇ ಆತ್ಯಂತಿಕ ಶೋಧಕ್ಕೂ ಇಳಿಯದೆ ಬರೆವ ರೀತಿಯು ಸಲೀಸಾಗಿ ಸಾಗುತ್ತದೆ. ಹೀಗೆ ಬರೆಯುವುದು ಬಹಳ ಕಷ್ಟದ್ದೇ. ಜಿ.ಎಸ್. ಶಿವರುದ್ರಪ್ಪನವರನ್ನು ಸಮನ್ವಯ ಕವಿ ಎಂದು ಕರೆಯಲಾಗುತ್ತದೆ. ಹಾಗೆಯೇ ನಾಡಿಸೋಜ ಅವರನ್ನು ಸಮನ್ವಯ ಕಾದಂಬರಿಕಾರ ಎಂದು ಗುರುತಿಸಬಹುದು.

ಸಮನ್ವಯ ತತ್ವದ ಭಾಷೆ, ನಿರೂಪಣೆ, ವಸ್ತು, ಆಶಯ ಇವೆಲ್ಲವನ್ನು ಗಮನಿಸಿ ಹೇಳುವುದಾದರೆ; ಇಂತಹ ರೀತಿ ನೀತಿಯು ಉದಾರ ಮಾನವತಾವಾದವನ್ನೆ ಮಂಡಿಸುವಂತದಾಗಿರುತ್ತದೆ. ಪ್ರಗತಿಶೀಲ ಹಾಗೂ ನವೋದಯ ಕಾದಂಬರಿಕಾರರ ಗುಣಗಳೆರಡನ್ನೂ ನಾಡಿಸೋಜ ರೂಪಾಂತರಿಸಿಕೊಂಡು ಅವೆರಡೂ ನಿರೂಪಣೆಗಳ ಸಮನ್ವಯವನ್ನು ಕಂಡುಕೊಂಡಿದ್ದಾರೆ. ಸಮನ್ವಯ ನಿರೂಪಣಾ ಕೌಶಲ್ಯವನ್ನು ಎಲ್ಲರಿಗೂ ಇಷ್ಟವಾಗುವಂತದೇ. ಆಪ್ತವಾದದ್ದನ್ನು ಮಾತ್ರ ಕೇಳುವ ಓದುಗ ಸಮಾಜವು ಸಮನ್ವಯ ನಿರೂಪನೆಗಳಿಂದ ಆನಂದಿಸುತ್ತಿರುತ್ತದೆ. ನಾಡಿಸೋಜರ ಕಾದಂಬರಿಗಳು ಇಂತಹ ಭಾವ ವ್ಯಾಪಾರವನ್ನು ಸಮರ್ಥವಾಗಿಯೇ ಮಾಡುತ್ತವೆ. ಈ ಮೊದಲು ಪ್ರಸ್ತಾಪಿಸಿದ ಸ್ತ್ರೀ ಕಾದಂಬರಿಕಾರೆಯರು ಅಪ್ಪಟ ಸ್ತ್ರೀವಾದಿ ಲೇಖಕಿಯರೂ ಅಲ್ಲ. ಆದರೆ ಇವರ ಬರಹಗಳ ನಿರಂತರತೆಯು ಅಚ್ಚರಿಯದು. ವೃತ್ತಿನಿರತ ಬರಹಗಾರರಂತೆ ಕಾಣುವ ಈ ಲೇಖಕಿಯರ ಪೈಕಿ ಸುಧಾ ನಾರಾಯಣ ಮೂರ್ತಿಯವರಿಗೆ ಕಾದಂಬರಿ ಬರೆಯುವುದು ವೃತ್ತಿಯಂತಲ್ಲವಾದರೂ ಬರಹ ಕ್ರಿಯೆಯು ಅವರಿಗೆ ಅಭ್ಯಾಸದಂತೆ ಕಂಡಿರಬಹುದು. ಈ ಯಾವ ಲೇಖಕಿಯರನ್ನೂ ವೃತ್ತಿ ಲೇಖಕಿಯರೆಂದು ಗುರುತಿಸಲಾಗದಿದ್ದರೂ ಅವರ ಬರಹ ರೀತಿಯು ವೃತ್ತಿ ಬರಹದ ಗುಣಕ್ಕೆ ತಕ್ಕುದಾಗಿದೆ. ಈ ಲೇಖಕಿಯರು ನಿರ್ದಿಷ್ಟ ಓದುಗರ ನಡುವೆ ತುಂಬ ಜನಪ್ರಿಯರು. ನಾಡಿಸೋಜರನ್ನೂ  ಜನಪ್ರಿಯರೆಂದು ಗುರುತಿಸಬಹುದಾದರೂ ಒಬ್ಬೊಬ್ಬರ ಜನಪ್ರಿಯತೆಯು ಬೇರೆಯದೇ.

ರವಿ ಬೆಳಗೆರೆ ಕೂಡ ತುಂಬ ಜನಪ್ರಿಯ ಲೇಖಕ. ಅವರ ಎಲ್ಲ ಬಗೆಯ ಬರಹಗಳನ್ನು ತೀವ್ರವಾಗಿ ಓದುವ ವರ್ಗವೊಂದಿದೆ. ರವಿ ಬೆಳಗೆರೆಯೇ ಅತ್ಯಂತ ಯಶಸ್ವಿ ವೃತ್ತಿ ಲೇಖಕ ಹಾಗೂ ಜನಪ್ರಿಯತೆಯನ್ನು ಸಮರ್ಥವಾಗಿ ಬಳಸಿಕೊಂಡ ಹೊಸ ಪೀಳಿಗೆಯ ಬರಹಗಾರ. ಆದರೆ ಇಲ್ಲಿ ಉಲ್ಲೇಖಿಸಿದ ಲೇಖಕಿಯರು ರೂಢಿಸಿಕೊಂಡಿರುವ ಜನಪ್ರಿಯ ವಿಧಾನವು ತುಂಬ ಸರಳವಾಗಿದ್ದು ಇದು ಯಾರನ್ನೂ ನೋಯಿಸದೆ ಅವರ ಸುಖದುಃಖಗಳ ಮೋಹದಲ್ಲಿ ಕೈ ಹಿಡಿದು ಮೈ ಮರೆಸುವಂತದ್ದು. ಮಧ್ಯಮ ವರ್ಗದ ಮುಗ್ದ ಮಹಿಳಾ ಓದುಗರನ್ನೆ ಹೆಚ್ಚಾಗಿ ಅವಲಂಭಿಸಿರುವ ಈ ಲೇಖಕಿಯರು ಅವರ ಭಾಔನೆಗಳ ಜೊತೆ ಆತ್ಮೀಯ ಸ್ನೇಹವನ್ನು ಸಾಧಿಸಿಕೊಂಡಿದ್ದಾರೆ. ಓದುವ ಮೂಲಕ ಕಂಡುಕೊಳ್ಳುವ ಪರಕಾಯ ಪ್ರವೇಶವು ವಿಚಿತ್ರವಾದುದು. ಜನಪ್ರಿಯ ಕಾದಂಬರಿಗಳ ಓದುವ ಸಮೂಹವು ಮೆಚ್ಚಿನ ಪಾತ್ರಗಳ ಕಲ್ಪಿತ ಲೋಕದಲ್ಲಿ ಗುರುತಿಸಿಕೊಳ್ಳುವ ಮೂಲಕ ಮನರಂಜನೆಯಂತಹ ನಿರಾಳತೆಯನ್ನು ಪಡೆಯುತ್ತದೆ. ಇದೊಂದು ಮನೋ ವಿಶ್ಲೇಷಣೆಗೆ ತಕ್ಕುದಾದ ಓದಿನ ವಿಧಾನ. ಪ್ರೇಮಾಭಟ್ ಅವರ ಕಾದಂಬರಿಗಳನ್ನೂ ಕೂಡ ಇದೇ ನಿಕಷಗಳಿಂದ ಪರಿಶೀಲಿಸಬಹುದು. ಮಹಿಳಾ ಕಾದಂಬರಿಕಾರ್ತಿಯರು ಪ್ರತಿಭೆಯಲ್ಲಿ ಹಿಂದಿದ್ದಾರೆಂದಾಗಲಿ, ಅವರಿಗೆ ಸಾಹಿತ್ಯದ ಸೂಕ್ಷ್ಮ ಸಂವೇದನೆ ಇಲ್ಲ ಎಂಬುದಾಗಲೀ ಕೇವಲ ಕೆಲವರ ಆರೋಪ ಮಾತ್ರ.

ಜನಪ್ರಿಯ ಕಾದಂಬರಿಕಾರರ ಪಟ್ಟಿಯು ಗಣನೀಯವಾಗಿದೆ. ಇವರಿಂದ ಕನ್ನಡ ಭಾಷೆಗೆ ಯಾವ ಒಳಿತು ಕೆಡುಕು ಉಂಟಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಚರ್ಚಿಸಬೇಕಾಗಿದೆ. ಶ್ರೇಷ್ಠತೆಯ ಮಾನದಂಡದಿಂದ ಗುರುತಿಸಿಕೊಳ್ಳುವ ಕಾದಂಬರಿಕಾರರಿಗಿಂತಲೂ ಮಿಗಿಲಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರಿಯ ಕಾದಂಬರಿಕಾರರಿದ್ದಾರೆ. ಸುಮ್ಮನೆ ಅಂದಾಜು ಮಾಡಿದರೂ ಇವರ ಸಂಖ್ಯೆ ಆಶ್ಚರ್ಯ ಹುಟ್ಟಿಸುತ್ತದೆ. ಅನಕೃ, ತರಾಸು, ನಿರಂಜನ, ಕಟ್ಟೀಮನಿ ಅವರ ಜೊತೆಯಲ್ಲೆ ದೇವುಡು, ಗೊರೂರು, ಕೆ.ವಿ.ಐಯ್ಯರ್, ವೀರ ಕೇಸರಿ ಸೀತಾರಾಮಶಾಸ್ತ್ರಿ, ಶ್ರೀನಿವಾಸರಾವ್ ಕೊರಟಿ, ಬಿ.ಪುಟ್ಟಸ್ವಾಮಯ್ಯ, ಚದುರಂಗ ಶ್ರೀರಂಗ, ರಾವ್ ಬಹದ್ದೂರ್ ಇವರೆಲ್ಲ ಪ್ರಗತಿಶೀಲ ಕಾದಂಬರಿಗಳ ಸುಗ್ಗಿಯ ಜನಪ್ರಿಯರು. ಕಾದಂಬರಿಕಾರ್ತಿಯರ ಪಟ್ಟಿ ಇನ್ನೂ ದೊಡ್ಡದಿದೆ. ತ್ರಿವೇಣಿ ಅವರಿಗೆ ಸಮನಾಗಿದ್ದ ಅನುಪಮಾ ನಿರಂಜನ, ಎಂ.ಕೆ.ಇಂದಿರಾ, ವಾಣಿ ಅವರ ಜೊತೆಗೆ ಆರ್ಯಂಭ ಪಟ್ಟಾಬಿ, ಪಂಕಜ, ನೀಳಾದೇವಿ, ತಪಸ್ವಿನಿ, ಮಲ್ಲಿಕಾ, ನಳನಿ, ಛಾಯದೇವಿ ನಂಜಪ್ಪ, ಎಂ.ಸಿ.ಪದ್ಮ, ಲಲಿತಾಂಬಾ ಚಂದ್ರಶೇಖರ್, ಎಚ್.ಆರ್.ಇಂದಿರಾ, ಎನ್. ಶಾರದಾ, ಎಂ.ಕೆ.ಜಯಲಕ್ಷ್ಮಿ, ಉಷಾದೇವಿ, ಕೆ.ಶಾರದಾ ಇನ್ನು ಮುಂತಾದ ಲೇಖಕಿಯರು ಬರೆದಿರುವ ಕಾದಂಬರಿಗಳ ಸಂಖ್ಯೆ ಬೆರಗು ಹುಟ್ಟಿಸುತ್ತದೆ. ಇವರ ನಡುವೆಯೇ ಬೈರಪ್ಪನವರ ಮಾದರಿಗಿಂತ ಹೊರತಾಗಿ ವ್ಯಾಸರಾಯ ಬಲ್ಲಾಳ, ಶೇಷನಾರಾಯಣ, ಸತ್ಯಕಾಮ, ಮ.ನ.ಮೂರ್ತಿ, ಅಶ್ವತ್ಥ, ಭಾರತೀಸುತ, ಬೀ.ಚಿ., ಸುದರ್ಶನದೇಸಾಯಿ, ಅನಂತರಾಮ್, ಕೌಂಡಿನ್ಯ, ಮನು, ತ.ಪು. ವೆಂಕಟರಾಮ್ ಮೊದಲಾದವರು ಕಾಣಿಸಿಕೊಳ್ಳುತ್ತಾರೆ. ಇಲ್ಲಿರುವ ಪಟ್ಟಿಯು ಅಪೂರ್ಣವೆ. ಅಂದರೆ ಅಷ್ಟೊಂದು ವಿಸ್ತೃತ ಪ್ರಮಾಣದಲ್ಲಿ ಜನಪ್ರಿಯ ಕಾದಂಬರಿಕಾರರಿದ್ದಾರೆ.

ವಾಸ್ತವ ಹೀಗಿದ್ದರೂ ಶ್ರೇಷ್ಠ ಕಾದಂಬರಿಕಾರರೆಂದು ಮಾನ್ಯತೆ ಪಡೆದಿರುವವರು ಕೇವಲ ಬೆರಳೆಣಿಕೆಯಷ್ಟು ಲೇಖಕರು ಮಾತ್ರ. ಜನಪ್ರಿಯ ಮತ್ತು ಗಂಭೀರ ಕಾದಂಬರಿಕಾರರ ನಡುವಿನ ಸಾಹಿತ್ಯಸೃಷ್ಟಿಯ ಗ್ರಹಿಕೆಗಳು ತುಂಬ ಭಿನ್ನವಾಗಿವೆ. ಈ ಹಿನ್ನೆಲೆಯಲ್ಲಿ ಸ್ತ್ರೀ ಸಂವೇದನೆಯ ಕಾದಂಬರಿ ಬರೆದ ಲೇಖಕರಿಯರ ಭಾಷೆಯನ್ನು ತಮ್ಮ ನೀತಿಯಲ್ಲಿ ಬಳಸಿರುವುದು ನಿಜವಿದ್ದರೂ ಭಾವನೆಗಳು ಹಗುರ ನಿರೂಪಣೆಯಿಂದ ಅವರು ಹೆಚ್ಚಿನದನ್ನು ಸಾಧಿಸಿಲ್ಲ. ಜನಪ್ರಿಯ ಕಾದಂಬರಿಗಳು ಓದುಗರನ್ನು ಬೆಳೆಸಿವೆಯೇ ವಿನಃ ಕನ್ನಡವನ್ನು ಬೆಳೆಸಿಲ್ಲ. ಸಾಹಿತ್ಯದ ಬೌದ್ಧಿಕ ವಿಸ್ತರಣೆಯೂ ಇದರಿಂದ ಸಾಧ್ಯವಾಗಿಲ್ಲ. ಜನಪ್ರಿಯ ಕಥನಗಳಿಂದ ಭಾಷೆಯು ಜಾಳಾಗಿದೆ. ಭಾವನೆಗಳು ಕೃತಕವಾಗಿವೆ. ಗ್ರಹಿಕೆಗಳು ಸೊರಗಿವೆ. ಮನುಷ್ಯರ ದುರಂತಗಳ ಮೂಲವನ್ನು ತಿಳಿಯುವಲ್ಲಿ ವಿಫಲವಾಗಿವೆ. ಸಾಮಾಜಿಕ ನ್ಯಾಯದ ಬದ್ಧತೆ ತೆಳುವಾಗಿದೆ. ರಂಜನೆಯೇ ಮೊದಲಾಗಿ ನೈತಿಕ ಪ್ರಜ್ಞೆಯು ಮಸುಕಾಗಿದೆ. ಸಾಂಸಾರಿಕ ಕೋಟೆಯ ಒಳಗೇ ಸುತ್ತುವಂತಾಗಿದೆ. ಮನುಷ್ಯರ ನಿತ್ಯಗೋಳಿನ ಮೇಲ್ ಪದರವನ್ನು ಮಾತ್ರ ಅಪ್ಪಿಕೊಳ್ಳಲಾಗಿದೆ. ಸಮಾಜದ ಅಖಂಡಭಾವ ಹಿಂದೆ ಸರಿದಿದೆ. ಸೃಜನಶೀಲತೆಯ ಉತ್ಕಟತೆಯು ವೃತ್ತಿ ಸ್ವರೂಪಕ್ಕೆ ತಿರುಗಿದೆ. ಸಿನಿಮೀಯ ಭಾವನೆಗಳು ಆಕ್ರಮಿಸಿವೆ. ಗಂಭೀರವಾದ ಯತ್ನಗಳು ಇಲ್ಲವಾಗಿವೆ. ಹೀಗೆ ಆರೋಪಗಳನ್ನು ಮಾಡಬಹುದಾಗಿದೆ. ಜನಪ್ರಿಯ ಕಾದಂಬರಿಗಳು ಸಾಮಾಜಿಕ ವ್ಯವಸ್ಥೆಯ ಪೂರ್ವಾಗ್ರಹಗಳನ್ನೇನು ಭಗ್ನಪಡಿಸಿಲ್ಲ.

ರಂಜನೆಗಾಗಿ ಸಾಮಾಜಿಕ ಒಪ್ಪಂದಗಳನ್ನು ಮೀರಿ ಕಥನದಲ್ಲಿ ಮೆಚ್ಚಿಸಿದ ಮಾತ್ರಕ್ಕೆ ಬದಲಾವಣೆ ಆಗದು. ಜನಪ್ರಿಯ ಲೇಖಕರಲ್ಲಿ ಬಹಳಷ್ಟು ಜನ ಸಿದ್ಧ ಮಾದರಿಗಳಲ್ಲೇ ಉಳಿಯುತ್ತಾರೆ. ಸಮಾಜದ ಸೂಕ್ಷ್ಮ ಸಂಗತಿಗಳನ್ನು ಮೈ ಮೇಲೆ ಹಾಕಿಕೊಳ್ಳುವುದಿಲ್ಲ. ಯತಾಸ್ಥಿತಿಗೆ ಸಮೀಪವಿರುವುದೇ ಸುರಕ್ಷಿತ ಎಂಬ ನಂಬಿಕೆ ಅವರಿಗಿದೆ. ಬೈರಪ್ಪನಂತವರು ಜನಪ್ರಿಯ ವೃತ್ತಿ ನಾಟಕ ಕಂಪನಿಗಳಂತೆ ತಮ್ಮ ಕಾದಂಬರಿಗಳ ಪ್ರದರ್ಶನಗಳನ್ನು ಓದುಗರಿಗೆ ಒದಗಿಸುತ್ತಲೇ ಪೂರ್ವಾಗ್ರಹಗಳನ್ನು ಜನಪ್ರಿಯವಾಗಿಯೇ ಬಿತ್ತುತ್ತಿರುತ್ತಾರೆ. ಇವನ್ನೆಲ್ಲ ಗಮನಿಸಿದರೆ ಜನಪ್ರಿಯ ಕಾದಂಬರಿ ಪ್ರಕಾರವು ಶುದ್ಧವಾಗಿ ಸಾಹಿತ್ಯ ಸಂವೇದನೆಯ ಮಾನದಂಡಗಳನ್ನು ಅನುಸರಿಸದೆ ಓದುಗ ಮತ್ತು ಕಾದಂಬರಿಕಾರರ ನಡುವಿನ ರಂಜನೀಯ ಒಪ್ಪಂದದ ಮೂಲಕ ಬೆಳೆದುಬಂದಿದೆ. ಇದು ಸೃಜನಶೀಲತೆಯ ವಿಕಾಸದ ಸೋಕ್ತ ನೀತಿ ಅಲ್ಲ. ಸಾಹಿತ್ಯ ಪರಂಪರೆಗಳಲ್ಲಿ ಜನಪ್ರಿಯ ನಿರೂಪಣೆಗಳು ನಿರ್ವಹಿಸಬೇಕಾದ ಸಾಮಾಜಿಕ ಬದ್ಧತೆಯಿಂದ ಅನೇಕ ಲಾಭಗಳಿವೆ. ಕನ್ನಡ ಜನಪ್ರಿಯ ಕಾದಂಬರಿಗಳ ಮೂಲಕ ಓದುಗರು ಬೆಳೆದಿದ್ದಾರೆ ಎಂಬದಕ್ಕೆ ತಕ್ಕ ಆಧಾರಗಳಿಲ್ಲ. ಓದಿನ ಮೊದಲ ಹಂತದಲ್ಲಿ ಜನಪ್ರಿಯ ಕಾದಂಬರಿಗಳ ಅವಶ್ಯಕತೆ ಇದೆ ಎಂಬುದನ್ನು ನಿರಾಕರಿಸಲಾಗದು. ಆದರೆ ಓದಿನ ಅಭಿರುಚಿಯಲ್ಲಿ ಇಂತಹ ನಿರೂಪಣೆಗಳು ಒಳ್ಳೆಯ ಕೆಟ್ಟ ಎರಡೂ ಪರಿಣಾಮವನ್ನು ಮಾಡಬಲ್ಲವು. ಒಟ್ಟಿನಲ್ಲಿ ಇಂತಹ ಸಾಹಿತ್ಯ ಸೃಷ್ಟಿಯಿಂದ ಜನಪ್ರಿಯ ನಿರೂಪಣೆಗಳು ವೃತ್ತಿ ಹಾಗೂಉದ್ಯಮಗಳ ಗುಣಗಳನ್ನು ತಂದುಕೊಳ್ಳುತ್ತವೆ. ಬದಲಾಗುವ ಸಮಾಜದಲ್ಲಿ ಇದು ಅನಿವಾರ್ಯ. ಆದರೆ ಎಲ್ಲ ಅನಿವಾರ್ಯತೆಗಳನ್ನು ಸಾಹಿತ್ಯ ಮೀರಿ ಸೃಷ್ಟಿಶೀಲವಾಗಬೇಕು ಎಂಬುದು ಬದಲಾವಣೆಗೆ ಮುಲ ಕಾರಣವಾದ ಅದೇ ಮನುಷ್ಯನ ಸ್ವಭಾವ. ಹಾಗಾಗಿ ಗಂಭೀರ ಸೃಷ್ಠಿ ಶೀಲತೆಯು ಪರಂಪರೆಯನ್ನು ಗಾಢವಾಗಿ ವಿಸ್ತರಿಸುತ್ತದೆ. ಜನಪ್ರಿಯ ನಿರೂಪಣೆಗಳು ಅಂತಹ ಆತ್ಯಂತಿಕ ಸೃಷ್ಟಿಯ ಪರಂಪರೆಗಳನ್ನು ಸರಳೀಕರಿಸಿ ಬಳಸುವಂತೆ ಮಾಡುತ್ತವೆ. ಬಳಸುವ ಪ್ರಕ್ರಿಯೆಗೂ ಬೆಳೆಸುವ ಪ್ರಕ್ರಿಯೆಗೂ ತುಂಬ ಅಂತರವಿದೆ. ಗಂಭೀರ ಸಾಹಿತ್ಯ ನಿರೂಪಣೆಗಳು ಪರಂಪರೆಗಳನ್ನು ಬೆಳೆಸಿವೆ. ಆ ಮೂಲಕ ಕನ್ನಡ ಭಾಷೆಯ ಮಾನವ ಸಂಬಂಧಗಳು ವಿಸ್ತರಿಸಿವೆ. ಚೋಮನದುಡಿ ಕಾದಂಬರಿಯಾಗಲಿ ಮಲೆಗಳಲ್ಲಿ ಮದುಮಗಳು ಕಾದಂಬರಿಯಾಗಲಿ ಇಂತಹ ಹಿನ್ನೆಲೆಯಲ್ಲೆ ಕನ್ನಡ ಸಾಹಿತ್ಯದ ನಿರೂಪಣೆಗಳಲ್ಲಿ ಗಾಢವಾಗಿ ಉಳಿದಿರುವುದು. ಇಂತಹ ನಿರೂಪಣೆಗಳು ಹೊಸ ಪೀಳಿಗೆಯನ್ನೂ ಸೃಷ್ಟಿಸಿವೆ. ಗಂಭೀರ ಬರಹಗಳು ಹೊಸ ಪೀಳಿಗೆಯನ್ನು ಸೃಷ್ಟಿಸಲು ಒತ್ತಾಸೆಯಾದರೆ ಜನಪ್ರಿಯ ಬರಹಗಳು ವಿಶೇಷವಾಗಿ ಓದುರನ್ನು ಬೆಳೆಸುತ್ತವೆ. ಹಾಗೆಯೇ ಬಳಕೆಯ ಭಾಗವಾಗಿ ಸಾಹಿತ್ಯದ ನಿರೂಪಣೆಗಳನ್ನು ಮಾಡುತ್ತವೆ.

ಒಟ್ಟಿನಲ್ಲಿ ಒಂದು ಭಾಷೆ ಮತ್ತು ಸಮುದಾಯ ಭಿನ್ನ ಕಾಲಘಟ್ಟಗಳಲ್ಲಿ ರೂಪಾಂತರ ಗೊಳ್ಳುತ್ತ ಸಾಗುವ ಪ್ರಕ್ರಿಯೆಯಲ್ಲಿ ಇಂತಹ ಕ್ರಿಯೆಗಳು ಸಹಜ. ಏಕೀಕರಣೋತ್ತರ ಸಮಾಜದಲ್ಲಿನ ಈ ಸಂಗತಿಗಳೆಲ್ಲ ಬದಲಾವಣೆಯ ಬೇರೆ ಬೇರೆ ಸ್ಥಿತಿಗಳನ್ನು ಸೂಚಿಸುತ್ತಿವೆ. ಜನಪ್ರಿಯ ಸಾಹಿತ್ಯ ಎಂದ ಕೂಡಲೇ ಕಾದಂಬರಿ ಪ್ರಕಾರವೇ ಯಾಕೆ ಎಷ್ಟು ವಿಸ್ತೃತ ಪ್ರಮಾಣದಲ್ಲಿ ರೂಪುಗೊಂಡಿದೆ ಎಂಬುದನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ತ್ರಿವೇಣಿ, ನರಸಿಂಹಯ್ಯ, ಬೈರಪ್ಪ ಅವರನ್ನು ಒಂದು ಮಾದರಿಯಾಗಿ ವಿಶ್ಲೇಷಿಸಿದಂತೆಯೇ ನಂತರದಲ್ಲಿ ನಾ.ಡಿಸೋಜ, ಕೆ.ಟಿ.ಗಟ್ಟಿ, ಪ್ರೇಮಭಟ್ ಅವರನ್ನು ಅದೇ ರೀತಿ ವಿಶ್ಲೇಷಿಸಲು ತೊಡಗಬಹುದು. ಆದರೆ ಅದು ಕೂಡ ಜನಪ್ರಿಯ ಕಾದಂಬರಿಕಾರರ ಬಹುರೂಪದಿಂದಾಗಿ ಸೂಕ್ತವಾಗಲಾರದು. ಕೆ.ಟಿ.ಗಟ್ಟಿ ಕೂಡ ನಾಡಿಸೋಜ ಅವರಂತೆಯೇ ಬರೆದ ಲೇಖಕ ಎಂದು ಹೇಳಬಹುದು. ಜನಪ್ರಿಯ ಕಾದಂಬರಿಕಾರರ ವಿಶಿಷ್ಟ ಮಾದರಿಗಳಲ್ಲಿ ಸತ್ಯಾಕಾಮ ಪ್ರತ್ಯೇಕವಾಗಿ ನಿಲ್ಲುವಂತಿದ್ದು ಅವರ ಬರಹಗಳನ್ನು ಗಂಭೀರವಾಗಿಯೂ ಪರಿಗಣಿಸಬೇಕಾಗುತ್ತದೆ. ವ್ಯಾಸರಾಯ ಬಲ್ಲಾಳರು ನಿರಂಜನರಂತೆ ಕಂಡುಬರುತ್ತಾರೆ. ಪ್ರೇಮಾಭಟ್ ಅವರು ಸಿನಿಮೀಯವಾಗಿ ಸ್ತ್ರೀ ಸಮಾಜವನ್ನು ನಿರೂಪಿಸುತ್ತಾರೆ. ಆಪ್ತವಾದ ಕೌಟುಂಬಿಕ ವಲಯದ ವಿವರಗಳಲ್ಲಿ ಅವರು ವಾಸ್ತವ ಸಮಾಜದ ಬಿರುಕುಗಳನ್ನು ಮರೆಯುತ್ತಾರೆ.

ಸಾಹಿತ್ಯ ಸೃಷ್ಟಿಯ ವೃತ್ತಿ ಸ್ವಭಾವವು ಸಮಾಜದ ವೇಷಗಳನ್ನು ನಿಷ್ಠೆಯಿಂದ ಮುಖಾಮುಖಿ ಮಾಡಲು ಬಿಡುವುದಿಲ್ಲ ಎಂಬ ನಂಬಿಕೆಯು ಇಂತಹ ಕಾದಂಬರಿಕಾರ್ತಿಯರ ಸಂದರ್ಭದಲ್ಲಿ ನಿಜ ಎನಿಸುತ್ತದೆ. ಹೀಗಾಗಿ ಇಲ್ಲಿನ ಎಲ್ಲ ಕಾದಂಬರಿಕಾರರನ್ನು ಬಿಡಿಯಾಗಿ ವಿಶ್ಲೇಷಿಸಿದರೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣದು. ಕನ್ನಡ ಭಾಷೆಯ ಏಕೀಕರಣೋತ್ತರ ನೆಲೆಯ ಚರಿತ್ರೆಯ ಸಂದರ್ಭದಲ್ಲಿ ಕನ್ನಡ ಓದುಗರಿಗೆ ಬೇಕಾದ ಕೆಲವೊಂದು ಸಾಂಸಾರಿಕ, ಚಾರಿತ್ರಿಕ, ಸಾಮಾಜಿಕ ನಿರೂಪಣೆಗಳನ್ನು ಮಾಡಿರುವುದು ಗಮನಾರ್ಹವಾಗಿದೆ. ಇದರಿಂದ ಕನ್ನಡ ಸಮಾಜದ ಹಲವು ಅನುಭವಗಳು ರಂಜನೀಯವಾಗಿಯೂ ಪ್ರತಿಫಲಿಸಿವೆ. ವಿಶೇಷ ಎಂದರೆ ಜನಪ್ರಿಯ ಕಾದಂಬರಿಗಳಿಗೂ ಜನಪ್ರಿಯ ಸಿನಿಮಾಗಳಿಗೂ ಪ್ರೇಕ್ಷಕರಿಗೂ ಒಂದು ಒಳ್ಳೆಯ ಸಂಬಂಧ ಉಂಟಾಗಿದೆ. ಜನಪ್ರಿಯ ಕಾದಂಬರಿ ಬರೆದವರ ನಿರೂಪಣೆಗಳು ಸಿನಿಮೀಯವಾಗಿರುವುದೂ ಕೂಡ ಈ ಸಂಬಂಧಕ್ಕೆ ಪೂರಕವಾಗಿದೆ. ಕಲೆ, ಸಾಹಿತ್ಯ, ಸಮಾಜ, ಭಾಷೆ, ಭಾವನೆ, ಬದಲಾವಣೆ ಇವೆಲ್ಲ ಒಂದಕ್ಕೊಂದು ಬೆರೆತು ಜನಪ್ರಿಯವಾಗುವ ವಿಷಯಗಳು ಒಂದು ನಾಡಿನ ಕಾಲದ ನಡತೆಯನ್ನು ಬಿಂಬಿಸಬಲ್ಲವು. ಹೀಗಾಗಿಯೇ ಜನಪ್ರಿಯ ಸಾಹಿತ್ಯದಲ್ಲಿ ಬಿಂಬಿತವಾಗುವ ಏಕೀಕರಣೋತ್ತರ ಕನ್ನಡ ಸಮಾಜವು ಬಹುಪಾಲು ಭ್ರಾಮಕವಾದುದು. ರಂಜನೀಯವಾದುದು. ವಾಸ್ತವದ ಹುಳುಕುಗಳನ್ನು ಮುಚ್ಚಿಟ್ಟುಕೊಂಡು ಅಲಂಕಾರಿಕವಾಗಿ ವೇಷ ಹಾಕಿಕೊಳ್ಳುವಂತದೂ ಆಗಿದೆ. ಈ ಹಿನ್ನೆಲೆಗಳಿಂದ ಜನಪ್ರಿಯ ಕನ್ನಡ ಕಥನಗಳನ್ನು ನೋಡಿದರೆ ಭವಿಷ್ಯದ ಕನ್ನಡ ಕಥನಗಳು ಮತ್ತಷ್ಟು ರಂಗಾಗಿರಬಲ್ಲವೆಂದು ಊಹಿಸಬಹುದು. ಒಂದು ನಾಡಿನ ಭಾಷೆ ಮತ್ತು ಸಮುದಾಯಗಳು ಬದುಕುವುದು ವೇಷಗಳಿಂದಲ್ಲ, ವೇಷಾರ್ಥಗಳು ಭಾಷೆ ಮತ್ತು ಸಮಾಜದ ನಿಜಾರ್ಥಗಳಲ್ಲ. ಹೊಸ ಕಾಲದಲ್ಲಿ ಗಂಭೀರ ಸಾಹಿತ್ಯವೂ ಅಲ್ಲದ ಜನಪ್ರಿಯ ಸಾಹಿತ್ಯವೂ ಅಲ್ಲದ ಮಧ್ಯಮ ಸಾಹಿತ್ಯದ ಅವಶ್ಯಕತೆ ಇಂದು ಹೆಚ್ಚಾಗಿದೆ.