ನವೋದಯ ಸಾಹಿತ್ಯ ಪರಂಪರೆಯು ಮೌನವಹಿಸುತ್ತಿದ್ದಂತೆಯೇ ಪ್ರಗತಿಶೀಲ ಸಂವೇದನೆಯು ಧ್ವನಿ ಮಾಡಿತು. ನಾಡಿನ ನಿರ್ಮಾಣಕ್ಕಿಂತ ಸಮಾಜದ ನಿರ್ಮಾಣ ಮುಖ್ಯ ಎಂಬ ತಿಳುವಳಿಕೆಯು ಪ್ರಗತಿಶೀಲರಲ್ಲಿ ವ್ಯಕ್ತವಾಯಿತು. ಬಡವರ ಪರವಾದ ಸಾಹಿತ್ಯಿಕ ನಿರೂಪಣೆಗಳು ಕಾಣಿಸಿಕೊಂಡವು. ಎಡಪಂಥೀಯ ವಿಚಾರಗಳಲ್ಲಿ ತೀವ್ರವಾದ ವಿಶ್ವಾಸವಿಟ್ಟುಕೊಂಡಿದ್ದ ನಿರಂಜನ ಅವರ ಸಾಹಿತ್ಯಿಕ ಧೋರಣೆಯು ವಿಶೇಷವಾಗಿದ್ದವು. ಅನಕೃ, ಕಟ್ಟೀಮನಿ, ತ.ರಾ.ಸು, ಆನಂದ ಮತ್ತು ಚದುರಂತ ಅವರ ಗದ್ಯ ಕಥನಗಳು ನವೋದಯದ ರಮ್ಯ ರಾಷ್ಟ್ರೀಯತೆಯ ದಿವ್ಯತೆಯ ಆಚೆಗಿದ್ದವು. ವಾಸ್ತವವಾದಿ ಕಥನದ ಮೂಲಕ ವರ್ತಮಾನದ ಸಾಮಾಜಿಕ ಬಿಕ್ಕಟ್ಟುಗಳನ್ನು ಈ ಲೇಖಕರು ತುಂಬ ಆರ್ದ್ರವಾಗಿಯೂ ಜನಪ್ರಿಯವಾಗಿಯೂ ನಿರೂಪಿಸತೊಡಗಿದರು. ಸಾಹಿತ್ಯದ ಜೊತೆಗೆ ಕನ್ನಡ ಭಾಷೆಯ ಪರಮ ಅಭಿಮಾನವನ್ನು ಪ್ರಗತಿಶೀಲರು ಗಾಢವಾಗಿಟ್ಟುಕೊಂಡಿದ್ದರು. ಕನ್ನಡ ಚಳುವಳಿಯಲ್ಲಿ ಮುಂದಾಗಿದ್ದ ಇವರ ನಿಲುವಿನಲ್ಲಿ ಕನ್ನಡ ಭಾಷೆ ಪರಿಪೂರ್ಣವಾಗಿ ಮುಕ್ತವಾಗಿಲ್ಲ ಎಂಬುದು ಧ್ವನಿತವಾಗಿದ್ದು ತಕ್ಕ ಸ್ಥಾನಮಾನ ಕನ್ನಡಕ್ಕೆ ದೊರಕದ ಹೊರತು ಏಕೀಕರಣಕ್ಕೆ ಯಾವ ಘನತೆಯೂ ಇಲ್ಲ ಎಂಬುದನ್ನು ಸೂಚಿಸುವಂತಿತ್ತು. ಆ ಕಾಲದ ಕನ್ನಡ ಪರ ಚಳುವಳಿಯಲ್ಲಿ ಮುಖ್ಯವಾಗಿ ಭಾಗವಹಿಸುತ್ತಿದ್ದ ಅನಕೃ, ತರಾಸು, ಕಟ್ಟೀಮನಿ ಅವರ ಬರಹಗಳಲ್ಲಿ ಇದ್ದ ಕಥನವು ಸುಶೀಕ್ಷಿತವಾದುದಾಗಿತ್ತು. ಬಹಿರಂಗ ಭಾಷಣಗಳಲ್ಲಿ ಈ ಲೇಖಕರು ಕನ್ನಡದ ಕಹಳೆಯನ್ನು ಮೊಳಗಿಸುತ್ತಿದ್ದರಾದರೂ ತಮ್ಮ ಕಾದಂಬರಿಗಳಲ್ಲಿ ತೋರುತ್ತಿದ್ದ ಸಾಮಾಜಿಕ ಲೋಕವು ಕನ್ನಡದ ದೇಶೀಯ ಚೌಕಟ್ಟನ್ನು ಮೀರಿತ್ತು. ತರಾಸು, ಅವರು ಗತ ಚರಿತ್ರೆಯ ಕಥನದ ಮೂಲಕ ಕನ್ನಡ ನಾಡನ್ನು ತೋರಿಸುವಾಗಲೂ ಭಾವುಕ ಗತ ಕಥನಕ್ಕೇ ಹೆಚ್ಚು ಅವಲಂಬಿತರಾಗುತ್ತಿದ್ದರು. ಸುಶೀಕ್ಷಿತ ನಿರೂಪಣೆಯಲ್ಲೆ ಅಪಾರ ಭಾವನಾತ್ಮಕತೆಯನ್ನು ನಾಟಕೀಯವಾಗಿ ಮಂಡಿಸುತ್ತಿದ್ದ ಪ್ರಗತಿಶೀಲರ ಕಾದಂಬರಿಗಳು ಪರೋಕ್ಷವಾಗಿ ಕನ್ನಡ ಭಾಷೆಯ ಭಾವತೀವ್ರತೆಯನ್ನು ಆ ಭಾಷಿಗರಾದ ಕನ್ನಡಿಗರ ಭಾವಾವೇಶವನ್ನೂ ಸುಂದರವಾಗಿ ಪ್ರತಿ ಫಲಿಸಿದವು. ಒಂದು ಭಾಷೆಗೆ ಇರುವ ಭಾವನಾತ್ಮಕತೆಯನ್ನು ನವೋದಯ ಕವಿಗಳು ಕಾವ್ಯದ ಮೂಲಕ ನಿರೂಪಿಸಿದ್ದರು. ಕುವೆಂಪು, ಬೇಂದ್ರೆ, ಪುತಿನ ಅವರ ಕಾವ್ಯದಲ್ಲಿದ್ದ ಭಾವಗೀತಾತ್ಮಕ ತನ್ಮಯತೆಯು ಕನ್ನಡ ಭಾಷೆಯನ್ನು ಬೆಳೆಸಿತು. ಪ್ರಗತಿಶೀಲರು ಕವಿಗಳೇ ಅಲ್ಲವಾದರೂ ಅವರು ಕಾವ್ಯದ ಸಮ್ಮೋಹಕತೆ, ಭಾವಗೀತಾತ್ಮಕ ಭಾವತೀವ್ರತೆಗಳನ್ನು ಕಾದಂಬರಿಗಳ ಗದ್ಯಭಾಷೆಯಲ್ಲಿ ವ್ಯಕ್ತಪಡಿಸಿದರು.

ಸಾಹಿತ್ಯ ವಿಮರ್ಶೆಯಲ್ಲಿ ಪ್ರಗತಿಶೀಲರು ಜನಪ್ರಿಯ ಲೇಖಕರು ಎಂಬ ಹೇಳಿಕೆಗೆ ಒಳಗಾದರು. ಕನ್ನಡ ಭಾಷೆ ಮತ್ತು ಸಮಾಜವನ್ನು ಕೂಡ ಇವರು ಜನಪ್ರಿಯ ಶೈಲಿಯಲ್ಲೆ ಭಾವಿಸಿದರು. ಅಖಂಡವಾದ ಚಾರಿತ್ರಿಕ ಪ್ರಜ್ಞೆಯನ್ನು ವರ್ತಮಾನಕ್ಕೆ ಕರೆತರುವಲ್ಲಿ ಪ್ರಗತಿಶೀಲರು ಮಾರ್ಕ್ಸ್‌ವಾದಿ ಚಿಂತನೆಯನ್ನು ಮರೆತಂತೆ ಕಾಣುತ್ತಾರೆ. ನಿರಂಜನರೊಬ್ಬರು ಮಾತ್ರ ಚಾರಿತ್ರಿಕ ಭೌತವಾದವನ್ನು ಪಾಲಿಸಿದ್ದರು. ವರ್ಗಕ್ರಾಂತಿಯ ಕಥನದಲ್ಲಿ ನಿರಂಜನರ ಭಾಷೆಯು ಜನಪರವಾಗಿತ್ತು. ಆದರೆ ಉಳಿದಂತೆ ಅನಕೃ, ತರಾಸು ಅವರಲ್ಲಿ ಈ ಗುಣ ಇರಲಿಲ್ಲ. ಕಟ್ಟೀಮನಿ ತುಂಬ ವಿಜೃಂಭಣೆಯಿಂದ ಜನಪ್ರಿಯ ಬಂಡಾಯ ಕಥನಗಳನ್ನು ಮನರಂಜನೆಯ ಧಾಟಿಯಲ್ಲೆ ಬರೆದರು. ತರಾಸು ಅವರು ಗತಕಥನದಲ್ಲಿ ನಿಸ್ಸೀಮರೆನಿಸಿದರು. ಚದುರಂಗರು ಸಾಮಾಜಿಕ ವಾಸ್ತವದ ಭಾವನಾತ್ಮಕ ಕಥನದಲ್ಲಿ ಗ್ರಾಮದ ಸಮಾಜವನ್ನು ಗ್ರಹಿಸಿದರು. ಇಲ್ಲಿ ಹೇಳಬೇಕಾದುದೇನೆಂದರೆ; ಪ್ರಗತಿಶೀಲರಿಗೆ ಇದ್ದ ಮಾರ್ಕ್ಸ್‌ವಾದಿ ಚಿಂತನೆಯು ಸಹಜವಾಗಿರಲಿಲ್ಲ. ಗಾಢವಾಗಿ ಆ ಚಿಂತನೆಯು ಅವರಲ್ಲಿ ಬೆಳೆದಿರಲಿಲ್ಲ. ಬರಹಕ್ಕೆ ಆ ವಾದವನ್ನು ತಕ್ಕುದಾಗಿಯೂ ಅಳವಡಿಸಿಕೊಂಡಿರಲಿಲ್ಲ. ಮಾರ್ಕ್ಸ್‌ವಾದಿ ಆಲೋಚನೆಗೆ ಸಮೀಪವಾದಂತೆಯೂ ಇವರ ನಿರೂಪಣೆಗಳು ಇರಲಿಲ್ಲ. ನಿರಂಜನರು ಇವರ ಮಧ್ಯೆ ಒಂದು ಅಪವಾದ. ಹೀಗಾಗಿ ಪ್ರಗತಿಶೀಲರು ಮುಖ್ಯವಾಗಿ ಸಾಹಿತ್ಯವನ್ನು ಜನಪ್ರಿಯಗೊಳಿಸಿದರೇ ವಿನಃ ಸಾಹಿತ್ಯ ಸೃಷ್ಟಿಯಲ್ಲಿ ಮಹತ್ವದ ಪಲ್ಲಟವನ್ನೇನು ಮಾಡಲಿಲ್ಲ. ಗದ್ಯವನ್ನು ಜನಸಾಮಾನ್ಯರ ಅಭಿರುಚಿಗೆ ತಕ್ಕಂತೆ ಬೆಳೆಸಿದ್ದು ಅವರ ಸಾಧನೆ ಎಂಬುದನ್ನು ಒಪ್ಪಬಹುದು.

‘ಪ್ರಗತಿಶೀಲ’ ಲೇಖಕರೆಂಬ ಚಹರೆಯೆ ಸೂಕ್ತವಾದದ್ದಲ್ಲ. ಚರಿತ್ರೆಯ ವಿಕಾಸವನ್ನು ಬಂಡವಾಳಶಾಹಿ ಆಳುವ ಸಮಾಜದ ವಿಕಾಸದ ಜೊತೆಗಿಟ್ಟು ನೋಡುವ ರೀತಿಯಲ್ಲೆ ಪ್ರಗತಿಶೀಲರು ಅಸಹಜವಾಗಿದ್ದಾರೆ. ಚಾರಿತ್ರಿಕ ಭೌತಿಕವಾದವನ್ನು ತಮ್ಮ ಸೃಜನಶೀಲತೆಯಲ್ಲಿ ಅನ್ವಯಿಸಿಕೊಳ್ಳುವ ಪರಿಯೆ ಈ ಲೇಖಕರಿಗೆ ಸಾಧ್ಯವಾಗಿಲ್ಲ. ಮಾರ್ಕ್ಸ್‌ವಾದವು ಪ್ರಗತಿಶೀಲ ಲೇಖಕರಿಗೆ ತಲಹದಿಯಾಗಿತ್ತು ಎಂಬ ವಿಮರ್ಶಕರ ತೀರ್ಮಾನವೂ ಸರಿಯಿಲ್ಲ. ತ.ರಾ.ಸು, ಅನಕೃ ಅವರ ಬರಹಗಳಲ್ಲಿ ಮತೀಯವಾದಕ್ಕೆ ಒತ್ತುಕೊಡುವ ಭಾವನಾತ್ಮಕ ನಿರೂಪಣೆಗಳು ಸಾಕಷ್ಟಿವೆ. ಯಾವ ಮಾರ್ಕ್ಸ್‌ವಾದಿ ನೆಲೆಯ ಲೇಖಕನೂ ಮತೀಯ ಭಾವವನ್ನು ಮೈದುಂಬಲಾರ. ಮಾರ್ಕ್ಸ್‌ವಾದಿ ಚಾರಿತ್ರಿಕ ಪ್ರಜ್ಞೆಯು ಉದಾರವಾಗಿಯೂ ಇರಲಾರದು. ಚರಿತ್ರೆಯ ಶೋಷಣೆಯನ್ನು ಸದಾ ನೆನಪಿಟ್ಟುಕೊಳ್ಳುವ ಎಡಪಂಥೀಯ ಸೃಜನಶೀಲತೆಯು ಭಾವುಕವಾಗಿ ಕಥನ ಕರ್ಮದಲ್ಲೆ ಮೈ ಮರೆಯುವುದಿಲ್ಲ. ಈ ಅಂಶವನ್ನು ಮನಗಂಡು ನೋಡಿದರೆ ಪ್ರಗತಿಶೀಲರು ಯಾವ ಬಗೆಯ ಪ್ರಗತಿಯನ್ನು ಧ್ಯಾನಿಸುವರೆಂಬುದನ್ನು ಹುಡುಕಿದರೆ ಸ್ಪಷ್ಟವಾಗಲಾರದು.

ಆದರೆ ಜನಪ್ರಿಯತೆಯಲ್ಲಿ ಪ್ರಗತಿಶೀಲರು ಮುಂದು. ಬಡವರ ಬಗ್ಗೆ ಬರೆದರೆ ಅಂತವರು ಮಾರ್ಕ್ಸ್‌ವಾದಿ ನೆಲೆಯವರೆಂದು ಹೇಳಲಾಗದು. ಹಾಗೆ ನಂಬಿದರೆ ಮಾಸ್ತಿಯೂ ಪ್ರಗತಿಶೀಲ ಕತೆಗಾರರೆಂದಾಗುತ್ತದೆ. ನಿರಂಜನರು ಮಾತ್ರವೇ ಮಾರ್ಕ್ಸ್‌ವಾದವನ್ನು ನಂಬಿದ್ದವರಾಗಿದ್ದರು. ಹಾಗೆಯೇ ಬರೆದರು. ಹೆಚ್ಚು ಕಡಿಮೆ ಹಾಗೆಯೇ ಬದುಕಿದರು. ಉಳಿದ ಲೇಖಕರು ಅಪ್ಪಟ ಪ್ರಗತಿಶೀಲರಲ್ಲ. ಬರೆಯುವುದೇ ಪ್ರಗತಿ ಅಲ್ಲ. ಬರಹದಲ್ಲಿ ಬಡವರ ಪರವಾಗಿದ್ದರೂ ಅದು ಪ್ರಗತಿ ಆಗಲಾರದು. ಇಡಿ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಯಾವ ಕೃತಿಯೂ ಚಳುವಳಿಯೂ ಪ್ರಗತಿಶೀಲರಿಂದ ಸಾಧ್ಯವಾಗಲಿಲ್ಲ. ವಿಶೇಷವಾಗಿ ಈ ಲೇಖಕರು ಜನಪ್ರಿಯರು. ಜನಪ್ರಿಯ ಸಾಹಿತ್ಯವನ್ನು ರಚಿಸಿದ್ದರಿಂದ ಕನ್ನಡ ಭಾಷೆಗೆ ಆದ ಲಾಭನಷ್ಟಗಳು ಏನು ಎಂಬುದನ್ನು ಪರಿಶೀಲಿಸಬಹುದು. ನವೋದಯ ಲೇಖಕರು ರೂಪಿಸಿದ್ದ ಗಂಭೀರ ಕಥನ ಗದ್ಯವನ್ನು ಪ್ರಗತಿಶೀಲರು ಸರಳೀಕರಿಸಿದರು. ಇವರು ಮಧ್ಯಮ ವರ್ಗದ ಸುಶೀಕ್ಷಿತ ಕುಟುಂಬಗಳ ಮಹಿಳೆಯರಿಗೆ ತಕ್ಕುದಾದ ಕಾದಂಬರಿಗಳನ್ನು ಬರೆದರು. ಆದರೆ ಹಿಡಿಯಾಗಿ ಇಡೀ ಕನ್ನಡ ನಾಡಿನ ಬಡವರ ಬಗ್ಗೆ, ನೊಂದ ಸಮುದಾಯಗಳ ಬಗ್ಗೆ ಗಾಢವಾದ ಮಾನವ ಸಂಬಂಧಗಳ ದುರಂತದಿಂದೇನೊ ಇವರು ಮಹಾ ಕಥನಗಳನ್ನು ಗಾರ್ಕಿಯ ‘ತಾಯಿ’ ಕಾದಂಬರಿಯಂತೆ ಸೃಷ್ಟಿಸಲಿಲ್ಲ. ಲಘುವಾದ ಬರಹ ಒಂದು ಸಮಾಜದ ಅವಶ್ಯಕತೆ ನಿಜ. ಆದರೆ ಅದೇ ಅಂತಿಮವಲ್ಲ. ಪ್ರಗತಿಶೀಲರು ನವೋದಯ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಲಿಲ್ಲ. ಕಥೆ ಹೇಳುವುದರಲ್ಲೇ ಪ್ರಗತಿಶೀಲರು ಮೈಮರೆತರು. ತಮ್ಮ ಕಾಲದ ರೂಪಾಂತರಗಳ ಕಡೆಗೆ ಇವರಿಗೆ ಲಕ್ಷ್ಯವಿದ್ದಂತಿರಲಿಲ್ಲ. ಏಕೀಕರಣೋತ್ತರ ಸಮಾಜಕ್ಕೆ ಬೇಕಿದ್ದ ಬೌದ್ಧಿಕ ಎಚ್ಚರವನ್ನು ಬೆಳೆಸುವಲ್ಲಿ ಇವರು ಮುಂದಾಗಲಿಲ್ಲ. ಅದನ್ನು ನವೋದಯ ಲೇಖಕರಾಗಿ ಮೌನ ವಹಿಸದ್ದ ಕುವೆಂಪು ಅವರೇ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಕಹಳೆಯನ್ನು ಬರಹಗಾರರ ಒಕ್ಕುಟದಲ್ಲಿ ಮೊಳಗಿಸುವ ಮೂಲಕ ಕರ್ನಾಟಕದಲ್ಲಿ ಬೇರೊಂದು ಸಾಹಿತ್ಯ ಸಂವೇದನೆಯು ಮೂಡಲು ಕಾರಣರಾದರು. ಪ್ರಗತಿಶೀಲರ ಕಾಲಾವಕಾಶವು ಕಿರಿದಾಗಿತ್ತು. ಹಾಗೆಯೇ ಈ ವೇಳೆಯ ಲೇಖಕರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಾಢವಾಗಿ ತೊಡಗಿರಲಿಲ್ಲ.

ಅತ್ತ ನವೋದಯದ ರೂಪವೂ ಇಲ್ಲದೆ ಇತ್ತ ಮಾರ್ಕ್ಸ್‌ವಾದಿ ಬಂಡಾಯ ಧೋರಣೆಯೂ ಇಲ್ಲದೆ ಇವೆರಡರ ಕ್ರಮವನ್ನು ಜನಪ್ರಿಯವಾಗಿ ಅಂಗೀಕರಿಸಿದ್ದ ಪ್ರಗತಿಶೀಲರು ಕನ್ನಡ ನಾಡುನುಡಿಯನ್ನು ಬಹುದೂರ ಕೊಂಡೊಯ್ಯಲಿಲ್ಲ. ಹಈಗಿದ್ದರೂ ಪ್ರಗತಿಶೀಲರನ್ನು ಬಿಟ್ಟು ಪರಂಪರೆಯನ್ನು ವಿವರಿಸಲು ಬರಲಾರದು. ಒಂದು ಸಾಹಿತ್ಯ ಪಂಥದ ಮಿತಿಗಳೇ ಮತ್ತೊಂದು ಸಾಹಿತ್ಯ ಸಂದರ್ಭಕ್ಕೆ ಅವಕಾಶ ಕಲ್ಪಿಸುತ್ತದೆ. ಪ್ರಭುತ್ವದ ಜೊತೆ ಮಾರ್ಕ್ಸ್‌ವಾದಿ ಕ್ರಾಂತಿಯನ್ನು ಪ್ರಗತಿಶೀಲರು ರೂಪಿಸಲಿಲ್ಲ ಎಂದು ಆರೋಪಿಸುವುದು ಸುಲಭ. ಆದರೆ ಅಂತಹ ಚಾರಿತ್ರಿಕ ಪಲ್ಲಟಕ್ಕೆ ಮುಖ್ಯವಾಗಿ ಆ ಸಮಾಜವೇ ಇಡಿಯಾಗಿ ಒಳಗಾಗಬೇಕಿರುತ್ತದೆ. ಅಂತಹ ಸಂದರ್ಭದಲ್ಲಿ ಈ ಲೇಖಕರು ಇರಲಿಲ್ಲ. ಅವರ ವ್ಯಾಪ್ತಿಯ ಒಳಗೆ ಅವರು ಮಾಡಿದ ಸಾಹಿತ್ಯದ ನೆಲೆಗಳನ್ನು ಕೆಳಕಂಡಂತೆ ಗುರುತಿಸಬಹುದು.

೧. ಬಡವರ ಬದುಕೇ ಸಾಹಿತ್ಯ ನಿರೂಪಣೆಗೆ ಮುಖ್ಯ.

೨. ಶ್ರೀ ಸಾಮಾನ್ಯರನ್ನೇ ಲೇಖಕನಾದವನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

೩. ಜನಪ್ರಿಯ ಶೈಲಿಯಿಂದ ಎಲ್ಲ ವರ್ಗದ ಓದುಗರನ್ನು ಸೆಳೆಯಬಹುದು.

೪. ಕನ್ನಡ ಭಾಷೆ ಮತ್ತು ಸಮಾಜ ಲೇಖಕನ ಮೂಲಕವೂ ಸುಧಾರಣೆಗೆ ಒಳಗಾಗಬಲ್ಲುದು ಹಾಗೂ ಕನ್ನಡಕ್ಕಾಗಿ ಬೀದಿ ಚಳುವಳಿಗೂ ಲೇಖಕರು ಬದ್ಧರಾಗಬೇಕು.

೫. ಸಮಾನತೆಯ ಸಮಾಜಕ್ಕಾಗಿ ಸಾಹಿತ್ಯವನ್ನು ಬಳಸಿಕೊಳ್ಳಬೇಕು.

೬. ಪ್ರಭುತ್ವವು ನೊಂದವರ ಪರವಾಗಿ ನ್ಯಾಯ ಪರಿಪಾಲಿಸಬೇಕು.

೭. ವಂಚಕ ಸಮಾಜದ ಮುಖವಾಡಗಳನ್ನು ಬಯಲು ಮಾಡಬೇಕು.

೮. ಸಾಹಿತ್ಯ ಮತ್ತು ಸಮಾಜಗಳ ಸಂಬಂಧವು ಜನಪ್ರಿಯವಾಗಿರಬೇಕು.

೯. ಎಲ್ಲ ಬಗೆಯ ಶೋಷಣೆಗಳಿಎ ಒಲಗಾದವರ ಪರವಾಗಿಯೇ ಸಾಹಿತ್ಯ ಸೃಷ್ಟಿಯಾಗಬೇಕು.

ಈ ಬಗೆಯ ಆಶಯಗಳಿಗೆ ಬದ್ಧವಾಗಿ ಬರೆದ ಪ್ರಗತಿಶೀಲ ಲೇಖಕರು ಮಧ್ಯಮ ವರ್ಗದ ಸುಶೀಕ್ಷಿತ ಪ್ರಜ್ಞೆಯಲ್ಲಿ ಸಾಹಿತ್ಯವನ್ನು ಸೃಷಟಿಸಿದರು. ಜನರ ನಡುವಿನ ಸಾಮಾನ್ಯ ಪಾತ್ರಗಳನ್ನೆ ಜನರ ಎದಿರು ಅಲಂಕಾರಿಕವಾಗಿ ನಿರೂಪಿಸಿದರು. ಭೂಮಾಲೀಕರ ಅಟ್ಟಹಾಸವನ್ನು ಸಾಹಿತ್ಯದ ಮೂಲಕ ದಂಡಿಸಿ ಬಡವರ ಪರವಾದ ನ್ಯಾಯವನ್ನು ಧ್ವನಿಸಿ ಬಡಜನತೆಯ ನಾಡಿನ ಸಾಮಾಜಿಕ ನ್ಯಾಯವನ್ನು ವೈಭವೀಕರಿಸಿ ದಾಖಲಿಸಿದರು. ವಿಶೇಷವಾಗಿ ಸಾಹಿತ್ಯದ ನಿರೂಪಣೆಯ ಕ್ರಮಕ್ಕೆ ಇದ್ದ ಗಾಂಭೀರ್ಯವನ್ನು ಸಡಿಲಿಸಿದರು. ಕುವೆಂಪು, ಮಾಸ್ತಿ, ಕಾರಂತರು ರೂಪಿಸಿದ್ದ ಕನ್ನಡ ಸಮಾಜದ ಕಥನಕ್ಕಿದ್ದ ಸಂಕೀರ್ಣತೆ, ಸಮೃದ್ಧತೆ, ಸೂಕ್ಷ್ಮತೆ ಹಾಗೂ ಕಲಾತ್ಮಕ ಬಹು ವರ್ಣನೆಗಳನ್ನು ತಗ್ಗಿಸಿ ಓದುಗರಿಗೆ ಸಲೀಸಾಗಬಹುದಾದ ಜನಪ್ರಿಯ ಮಾದರಿಯೊಂದನ್ನು ಒದಗಿಸಿಕೊಟ್ಟರು. ಸಾಹಿತ್ಯವು ಜನರ ಬದುಕಿನ ಭಾಗವಾಗಬೇಕು ಎಂಬ ಗುರಿ ಇಲ್ಲಿ ಈ ಬಗೆಯ ಅಭಿವ್ಯಕ್ತಿಗೆ ಕಾರಣವಾಗಿದೆ.

ಪ್ರಗತಿಶೀಲರ ಕೇಂದ್ರ ಸಮಾಜವೇ ಆಗಿತ್ತು. ನವೋದಯದವರ ಹಾಗೆ ಭವ್ಯ ನಾಡಿನ ಕನಸು ಅವರಿಗೆ ಇರಲಿಲ್ಲ. ಅಂತಹ ಕನಸು ಅನಾರೋಗ್ಯಗೊಂಡಿರುವ ಸಮಾಜದಲ್ಲಿ ತಕ್ಷಣದ ತುರ್ತಲ್ಲ ಎಂಬ ನಂಬಿಕೆ ಅವರಿಗಿದ್ದು, ವರ್ಗ ಸಂಘರ್ಷದ ಆಲೊಚನೆಯಲ್ಲಿ ಅವರ ಸಾಹಿತ್ಯವು ಹಾತೊರೆದಿತ್ತು. ಹೀಗಾಗಿ ಏಕೀಕರಣದ ಚಳುವಳಿಯ ಭಾಗವಾಗಿ ಈ ಲೇಖಕರು ಇದ್ದರಾದರೂ ಅವರ ಸಾಹಿತ್ಯದ ಅಭಿವ್ಯಕ್ತಿಯು ಏಕೀಕರಣದ ಚೌಕಟ್ಟನ್ನು ಮೀರಿದ್ದಾಗಿತ್ತು. ಈ ಪಂಥದವರಲ್ಲಿ ವಿಶೇಷವಾಗಿದ್ದ ಅಂಶವೇನೆಂದರೆ ನಗರಿಕರಣಗೊಳ್ಳುತ್ತಿದ್ದ ಕರ್ನಾಟಕದ ಸಮಾಜಗಳ ಕೌಟುಂಬಿಕ ತಾಕಲಾಟಗಳನ್ನು ಮಧ್ಯಮ ವರ್ಗದ ಒಳ್ಳೆಯತನದಲ್ಲಿ ನಿರೂಪಿಸಿದ್ದುದು. ಹೀಗಾಗಿಯೇ ಈ ಲೇಖಕರು ಹೆಚ್ಚು ಜನಪ್ರಿಯರಾಗಿದ್ದರು. ಆದರೆ ಜನತೆಯ ಮೆಚ್ಚುಗೆಗೆ ಒಳಗಾಗುವಂತೆ ಬರೆಯುತ್ತ ಹೊರಟ ಲೇಖಕ ಕೂಡ ತಂತಾನೆ ಸೀಮಿತಗೊಳ್ಳುತ್ತಾನೆ. ಜನಪ್ರಿಯವಾದದ್ದು ಯಾವತ್ತೂ ಸತ್ಯ ನಿಷ್ಠವಾದದ್ದು ಎಂದು ಹೇಳಲಿಕ್ಕೆ ಬರುವುದಿಲ್ಲ. ಮುಂಗಾಣ್ಕೆಯ ಯಾವ ಲೇಖಕನೂ ವರ್ತಮಾನದ ಜನಪ್ರಿಯತೆಗೆ ಅಂಟಿಕೊಳ್ಳಲಾರ. ಹೀಗಾದಾಗಲೆಲ್ಲ ಸಾಹಿತ್ಯದ ಉದ್ದೇಶವೇ ಕಿರಿದಾಗಿಬಿಡುತ್ತದೆ. ಸೃಜನಶೀಲತೆಯ ಸಾಧ್ಯತೆ ಕ್ಷಣಿಕವಾಗತೊಡಗುತ್ತದೆ. ತತ್ ಕ್ಷಣದ ಸಂಭ್ರಮಕ್ಕೆ ಸ್ಪಂದಿಸುವ ಸಾಹಿತ್ಯ ದೀರ್ಘಕಾಲೀನ ನಾಡು ನುಡಿಯನ್ನು ಧ್ವನಿಸಲಾರದು. ಪರಂಪರೆಯ ಜೊತೆ ಧ್ಯಾನಸ್ಥ ಅವಲೋಕನ ಇದರಿಂದ ಸಾಧ್ಯವಾಗುವುದಿಲ್ಲ. ಜನಪ್ರಿಯ ಭಾವನೆಗಳು ಯಾವತ್ತೂ ಖಚಿತ ಚಹರೆಯನ್ನು ಪ್ರತಿಸೃಷ್ಟಿಸಲಾರವು. ಚರಿತ್ರೆಯ ಅನುಭವಗಳಿಂದ ಈ ಹೇಳಿಕೆಯನ್ನು ಪರಿಶೀಲಿಸಬಹುದು. ಸಮೂಹ ಸ್ವಭಾವವು ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುವಂತದ್ದು. ಆದ್ದರಿಂದಲೇ ಲೇಖಕನಾದವನು ಕಲ್ಪಿತ ಕಥನದಲ್ಲೆ ಕಳೆದುಹೋಗುವುದು. ಇಂತಲ್ಲಿ ನಾಡು ನುಡಿಯ ಹಾಗೂ ಪ್ರಭುತ್ವದ ವಾಸ್ತವ ಚಿತ್ರಣ ಇರುವುದಿಲ್ಲ. ಹೀಗಾದಾಗಲೆಲ್ಲ ಪ್ರಭುತ್ವಕ್ಕೆ ಪ್ರತಿರೋಧವನ್ನು ಎದುರಿಸುವ ಬಿಕ್ಕಟ್ಟುಗಳೆ ಎದುರಾಗುವುದಿಲ್ಲ.

ಲೇಖಕ ಮತ್ತು ಪ್ರಭುತ್ವ ಆಗ ಬೇರೆಯಾಗಿಯೇ ಉಳಿದುಕೊಳ್ಳುತ್ತವೆ. ಇವೆರಡರ ನಡುವಿನ ಸಮಾಜವು ಪಡೆದುಕೊಳ್ಳಬಹುದಾದದ್ದು ಮತ್ತೆ ಹಿಂದಕ್ಕೆ ಸರಿಯುತ್ತದೆ. ಸಾಮ್ರಾಜ್ಯಗಳು ಗತಕಾಲದಲ್ಲಿ ಇಂತಹ ವಾತಾವರಣದ ಅನುಕೂಲತೆಯನ್ನು ಪಡೆದೇ ಸಾಮ್ರಾಜ್ಯದ ದಿಗ್ವಿಜಯದ ಕಥನಗಳನ್ನು ಉಲ್ಲೇಖಿಸಿಕೊಳ್ಳಲು ಸಾಧ್ಯವಾದದ್ದು. ಪ್ರಗತಿಶೀಲ ಸಾಹಿತ್ಯ ಘಟ್ಟದ ಕರ್ನಾಟಕದ ರಾಜಕಾರಣವು ಸಂಕ್ರಮಣ ಸ್ಥಿತಿಯಲ್ಲಿದ್ದುದನ್ನು ವಿಶೇಷವಾಗಿ ಗಮನಿಸಬೇಕು. ಮೊದಲ ಬಾರಿಗೆ ಕರ್ನಾಟಕದ ಅಖಂಡ ಪ್ರಜ್ಞೆಯು ಪ್ರಗತಿಶೀಲ ರಾಜಕಾರಣವನ್ನು ಅನುಸರಿಸಲು ಆರಂಭಿಸಿತ್ತು. ಪರೋಕ್ಷವಾಗಿ ನೆಹರು ಪ್ರಣೀತ ಪಂಚವಾರ್ಷಿಕ ಯೋಜನೆಗಳ ಹಸಿರುಕ್ರಾಂತಿ ಹಾಗೂ ಕೈಗಾರಿಕೋದ್ಯಮದ ಪ್ರಗತಿ ಮುನ್ನೆಲೆಗೆ ಬರತೊಡಗಿದ್ದವು. ಪ್ರಗತಿಶೀಲ ರಾಜಕಾರಣದ ಕನಸುಗಳಿಗೂ ಪ್ರಗತಿಶೀಲ ಸಾಹಿತ್ಯದ ಆಂತರಿಕ ಕನಸುಗಳಿಗೂ ಅವ್ಯಕ್ತವಾದ ಸಂಬಂಧಗಳಿದ್ದವು. ರಾಷ್ಟ್ರೀಯವಾದಿ ನವೋದಯದವರ ರಾಷ್ಟ್ರನಿರ್ಮಾಣದ ಕನಸಿಗೆ ಗಾಂಧಿಯ ಭಾವನೆಗಳಿದ್ದರೆ ಪ್ರಾಂತೀಯ ಪ್ರಗತಿಶೀಲ ಸಾಹಿತಿಗಳಿಗೆ ನೆಹರು ಪ್ರಣೀತ ಚಿಂತನೆಗಳ ಜೊತೆಗೆ ಸೌಮ್ಯ ಎಡಪಂಥೀಯ ವಿಚಾರಗಳು ಹಿನ್ನೆಲೆಯಾಗಿದ್ದುದು ವಿಚಿತ್ರ ಸಮಾಗಮದಂತೆ ತೋರುತ್ತದೆ.

ಇದರಿಂದಾದ ಪರಿಣಾಮವೇನೆಂಬುದನ್ನು ಗಮನಿಸಬೇಕು. ಪ್ರಗತಿಶೀಲ ಸಾಹಿತಿಗಳು ಸಾಹಿತ್ಯಸೃಷ್ಠಿಯ ಮಹತ್ವದ ಕಡೆಗೇ ಪ್ರಧಾನ ಗಮನ ಹರಿಸಿದರು. ತಮಗಿದ್ದ ಸೀಮಿತ ಅನುಭವಗಳನ್ನೆ ನಾಡಿನ ನಿಜವಾದ ಸಾಮಾಜಿಕ ಸತ್ಯ ಎಂಬಂತೆ ಬಿಂಬಿಸತೊಡಗಿದರು. ನವೋದಯ ಲೇಖಕರಿಗಿಂತ ತಾವು ಭಿನ್ನ ಎಂಬುದನ್ನು ಅವರು ಸಾಧಿಸಬೇಕಿತ್ತು. ಜನಪ್ರಿಯತೆಗೆ ಒಪ್ಪಂದ ಮಾಡಿಕೊಂಡ ಕೂಡಲೇ ಲೇಖಕನ ಅಸ್ಮಿತೆಯೂ ಕಳೆದುಹೋಗುತ್ತದೆ. ಅಂತಲ್ಲಿ ಲೇಖಕ ಕೇವಲ ವಾಹಕ ಮಾತ್ರ ಆಗಬೇಕಾದ ದುಸ್ಥಿತಿ ಎದುರಾಗುತ್ತದೆ. ಅನಕೃ ಅವರು ಕನ್ನಡ ನಾಡು ನುಡಿಯ ಬಗ್ಗೆ ತೀವ್ರವಾಗಿ ಮತ್ತದೇ ಕನ್ನಡದ ಜನಪ್ರಿಯ ಅಭಿವ್ಯಕ್ತಿಯಾಗಿ ತೊಡಗಿದರೂ ಅದು ವಿಸ್ತರಿಸಲು ಬೇಕಾದ ಚೈತನ್ಯವನ್ನು ಧಾರಣ ಮಾಡಿಕೊಂಡಿರಲಿಲ್ಲ. ಪ್ರಗತಿಶೀಲ ಸಾಹಿತ್ಯವು ಹಿಡಿಯಾಗಿ ಒಂದು ಕಾಲಘಟ್ಟದ ಕನ್ನಡ ಸಾಹಿತ್ಯ ಪರಂಪರೆಯ ಒಟ್ಟು ಪ್ರಾತಿನಿಧ್ಯದ ದನಿಯಾಗಿ ಇತ್ತೇ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಅಲ್ಪಾವಧಿಯ ಈ ಸಾಹಿತ್ಯ ಪಂಥವು ಕಥೆ ಕಾದಂಬರಿಗಳಿಗೆ ಹೆಚ್ಚು ಅಂಟಿಕೊಂಡದ್ದು ಕೂಡ ಮಿತಿಯಂತೆ ಕಾಣುತ್ತದೆ.

ಯಾವತ್ತೂ ಒಂದು ಸಮಾಜಕ್ಕೆ ‘ಕಥೆ’ ಸಾಕಾಗುವುದಿಲ್ಲ. ಕಥೆಯ ಕಥೆ ಹಾಗೇ ಉಳಿದಿರುತ್ತದೆ. ಕಥೆ ಹೇಳುವ ಮೂಲಕವೇ ಲೇಖಕನಾದವನು ಸಮಾಜದ ಅನೇಕ ಕಹಿ ವಿಚಾರಗಳನ್ನು ಹೇಳುವುದರಿಂದ ತಪ್ಪಿಸಿಕೊಳ್ಳುತ್ತಿರುತ್ತಾನೆ. ಅದನ್ನು ಪಾತ್ರಗಳ ಮೂಲಕ ರೂಪಕದ ಚಹರೆಯಲ್ಲಿ ನಿರೂಪಿಸುವುದು ಸುಲಭ. ಆ ಬಗೆಯ ನಿರೂಪಣೆಗಳು ಕಲಾತ್ಮಕ ಆಕೃತಿಗಳಾಗಿಯೇ ಉಳಿದು ಬಿಡಬಲ್ಲವು. ವಾಸ್ತವದ ಪ್ರಶ್ನೆಗಳಾಗಿ ಅವು ಎದ್ದು ನಿಲ್ಲಬೇಕಾದುದಿಲ್ಲ. ವಿಷಾದ ಎಂದರೆ ಆ ಕಥನವು ನಾಡಿನ ಕಥನವಾಗದೇ ಕೇವಲ ಸಾಹಿತ್ಯದ ಅಭಿವ್ಯಕ್ತಿಯಾಗಿಯೇ ಗತಕಾಲದಲ್ಲಿ ಕಣ್ಮರೆಯಾಗಬಲ್ಲದು. ಪ್ರಗತಿಶೀಲ ಸಾಹಿತ್ಯವು ಬಹುಪಾಲು ವೇಳೆ ಕಥೆಯ ಏಕತಾನತೆಯಲ್ಲೆ ಮೈ ಮರೆತಿದ್ದೂ ಇದೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಗಾಢವಾಗಿ ತೊಡಗಿಕೊಳ್ಳದ ಪ್ರಗತಿಶೀಲರು ಗದ್ಯ ಕಥನದ ಮೂಲಕ ನಿರೂಪಿಸಿದ ಕನ್ನಡ ಸಮಾಜವು ಆತ್ಯಂತಿಕವಾದುದಾಗಿರಲಿಲ್ಲ. ರಂಜನೆಯ ಮಟ್ಟದಲ್ಲಿ ಮೈದುಂಬಿಕೊಳ್ಳುತ್ತಿದ್ದ ಈ ಕಾಲದ ಲೇಖಕರು ಅಪ್ರಮಾಣಿಕರೇನಾಗಿರಲಿಲ್ಲ. ಆದರೆ ಅವರ ಸಾಹಿತ್ಯ ಸೃಷ್ಟಿಯು ವೃತ್ತಿ ಸ್ವರೂಪದ್ದಾಗಿರುವಂತೆಯೂ ಕಾಣುತ್ತದೆ. ಇದರಿಂದ ಸಾಹಿತ್ಯದ ಗಂಭೀರ ಪಯಣಕ್ಕೆ ತಡೆ ಉಂಟಾಯಿತು. ಇವರಲ್ಲಿ ವಿಶೇಷವಾಗಿ ಕಂಡಿದ್ದ ತ.ರಾ.ಸು. ಅವರು ಐತಿಹಾಸಿಕ ಕಾದಂಬರಿಗಳನ್ನು ಬರೆದದ್ದು ಕೂಡ ಚರಿತ್ರೆಯ ಸಿದ್ಧ ಮಾದರಿಗಳನ್ನು ಅನುಸರಿಸಿಯೆ. ನವೋದಯದ ಸಂಶೋಧಕರು ಕರ್ನಾಟಕದ ಚರಿತ್ರೆಯ ಶೋಧನೆಯ ಮೂಲಕ ಅದರ ರಚನೆಗೆ ತೊಡಗಿದ್ದರೆ ಪ್ರಗತಿಶೀಲರಲ್ಲಿ ಮುಖ್ಯವಾಗಿದ್ದ ತ.ರಾ.ಸು. ಅವರು ಅದೇ ಚರಿತ್ರೆಯನ್ನು ತಮ್ಮ ಕಥಾ ನಿರೂಪಣೆಗೆ ವಸ್ತುವಾಗಿಸಿಕೊಂಡದ್ದು ಗಮನಾರ್ಹ ಸಂಗತಿ. ಆದರೆ ಚರಿತ್ರೆಯನ್ನು ತರಾಸು ಭಾವಿಸಿದ್ದ ರೀತಿಗೂ ಇವತ್ತಿನ ಕನ್ನಡ ನಾಡಿನ ವಾಸ್ತವಕ್ಕೂ ಅನೇಕ ವೈರುಧ್ಯಗಳಿವೆ.

ಪ್ರಗತಿಶೀಲ ಸಾಹಿತ್ಯಿಕ ಪ್ರಜ್ಞೆಯು ಪ್ರಭುತ್ವದ ಜೊತೆ ಸಾಮಾಜಿಕ ಮುಖಾಮುಖಿಯನ್ನು ಸಾಹಿತ್ಯ ಕೃತಿಗಳ ಮೂಲಕ ಮಾಡಿದ್ದುದೇ ಹೆಚ್ಚುಗಾರಿಕೆ. ಈ ಕಾಲದ ಲೇಖಕರಲ್ಲಿ ಕಟ್ಟೀಮನಿ ಅವರು ಮಾತ್ರವೇ ಮಠಮಾನ್ಯಗಳ ವಿರುದ್ಧ ಬಂಡಾಯ ಧೋರಣೆಯಲ್ಲಿ ಮಾತನಾಡುತ್ತಿದ್ದುದು. ಇನ್ನು ನಿರಂಜನ ಅವರು ವರ್ಗ ಹೋರಾಟದ ಮಾರ್ಕ್ಸ್‌ವಾದಿ ಧಾಟಿಯಲ್ಲಿ ಆಳುವ ವ್ಯವಸ್ಥೆಯನ್ನು ಸೃಜನಶೀಲ ಬರಹಗಳ ಮೂಲಕ ಮುಖಾಮುಖಿಯಾದದ್ದು ವಿಶೇಷವಾದುದೇ ಸರಿ. ಹಿಡಿಯಾಗಿ ಪ್ರಗತಿಶೀಲ ಲೇಖಕರೆಲ್ಲ ಕನ್ನಡ ಭಾಷೆಯ ಸ್ಥಾನಮಾನಕ್ಕಾಗಿ ಬೀದಿಗಿಳಿದು ಹೋರಾಟಕ್ಕೆ ಬದ್ಧರಾಗಿದ್ದುದನ್ನು ಮರೆಯುವಂತಿಲ್ಲ. ಚದುರಂಗರು ಮಾತ್ರಪ್ರಗತಿಶೀಲರಾಗಿದ್ದುಕೊಂಡೇ ನವೋದಯ ಮತ್ತು ದಲಿತ ಬಂಡಾಯದ ಮನೋಧರ್ಮವನ್ನು ತಮ್ಮ ಬರಹದಲ್ಲಿ ಪುನರ್ ರೂಪಿಸಿಕೊಂಡಿದ್ದುದು ವಿಭಿನ್ನ ಮಾದರಿಯಾಗಿತ್ತು.

ಸಾಹಿತ್ಯ ಸೃಷ್ಟಿಯಲ್ಲಿ ಪ್ರಗತಿಶೀಲರ ಗದ್ಯ ಕಥನಗಳನ್ನು ತೀರ್ಮಾನಿಸಲು ಸಾಹಿತ್ಯ ವಿಮರ್ಶೆಯ ಮಾನದಂಡಗಳಿವೆ. ಅವುಗಳ ಮೂಲಕ ಏಕೀಕರಣೋತ್ತರ ಕನ್ನಡ ನಾಡಿನ ಪ್ರಭುತ್ವ ಸಂಬಂಧವನ್ನು ನಿರ್ಧರಿಸುವುದು ಸೂಕ್ತವಲ್ಲ. ಸಮಾಜ ಮತ್ತು ಪ್ರಭುತ್ವದ ಮಧ್ಯೆ ಸಾಕ್ಷಿ ಪ್ರಜ್ಞೆಯಾಗಿ ನಿಂತ ಲೇಖಕರನ್ನು ಚರಿತ್ರೆಯ ಮಾಪನಗಳಿಂದ ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ಪ್ರಗತಿಶೀಲರು ಏಕೀಕರಣೋತ್ತರ ಸಾಮಾಜಿಕ ಹಾಗು ಪ್ರಭುತ್ವದ ಜೊತೆ ಸ್ಪಂದಿಸಿದ್ದನ್ನು ಈ ಕೆಳಗಿನಂತೆ ಗುರುತಿಸಿಕೊಳ್ಳಬಹುದು.

೧. ಮೂಲತಃ ಪ್ರಗತಿಶೀಲರು ಸಾಹಿತ್ಯಸೃಷ್ಟಿಯ ಉಪಾಸಕರಾಗಿದ್ದರೇ ಹೊರತು ಚರಿತ್ರೆಯ ವಿರೂಪವನ್ನು ನಿರಾಕರಿಸಿರಲಿಲ್ಲ.

೨. ಬಡವರ ನೋವಿನ ಅನುಭವಗಳು ಈ ಲೇಖಕರಿಗೆ ಭಾವನಾತ್ಮಕ ಸರಕಾಗಿದ್ದವು.

೩. ಪ್ರಗತಿಶೀಲರು ಪ್ರಭುತ್ವದ ಪ್ರತಿರೋಧ ದನಿಯಾಗಿರಲಿಲ್ಲ. ಸಾಹಿತ್ಯದಲ್ಲಿ ಅಂತಹ ಧ್ವನಿ ಬಿಂಬಿತವಾಗಿದ್ದರೂ ವಾಸ್ತವ ವ್ಯವಸ್ಥೆಯ ಜೊತೆ ಸುರಕ್ಷಿತ ದೂರವನ್ನೆ ಸಾಧಿಸಿಕೊಂಡಿದ್ದರು.

೪. ಸಮಾಜದ ಅನಿಷ್ಠ ಪದ್ಧತಿಗಳ ಬಗೆಗೆ ಗಮನವಿದ್ದರೂ ಅವುಗಳ ವಿನಾಶಕ್ಕೆ ಬೇಕಾದ ಹೊಣೆಗಾರಿಕೆ ಈ ಲೇಖಕರಿಗೆ ಇರಲಿಲ್ಲ.

೫. ಸಾಹಿತ್ಯ ಸೃಷ್ಟಿಯನ್ನು ಸರಳಗೊಳ್ಳಿಸಿಕೊಂಡಿದ್ದರು.

೬. ವರ್ತಮಾನದ ಜನಪ್ರಿಯ ಅವಶ್ಯಕತೆಗಳಿಗೆ ಮುಖ್ಯ ಗಮನ ನೀಡಿದ್ದರು.

ಹೀಗಾಗುವುದಕ್ಕೆ ತೀವ್ರವಾದ ವೈಚಾರಿಕ ಮತ್ತು ವಿಮುಕ್ತಿಯ ಒತ್ತಡಗಳು ಈ ಲೇಖಕರಿಗೆ ಇಲ್ಲದೇ ಇದ್ದುದು ಕಾರಣವಿರಬಹುದು. ಹಾಗೆಯೇ ಅವರಿಗಿದ್ದ ಸಾಮಾಜಿಕ ಅನುಭವಗಳ ಸಾಂದ್ರತೆಯ ಪ್ರಮಾಣದ ಕೊರತೆಯೂ ಹಿನ್ನೆಲೆಯಾಗಿರಬಹುದು. ಜೊತೆಗೆ ಜನಪ್ರಿಯತೆಯು ಅವರಿಗಿದ್ದ ಸಾಧ್ಯತೆಗಳನ್ನು ತುಂಡು ಮಾಡಿರಬಹುದು. ಒಟ್ಟಿನಲ್ಲಿ ಪ್ರಗತಿಶೀಲ ಸಾಹಿತಿಗಳು ಒಂದು ಸಾಹಿತ್ಯ ಪಂಥಕ್ಕೆ ಬೇಕಾಗಬಹುದಾದ ದೀರ್ಘ ಆಗೂ ವೈವಿಧ್ಯ ಜೀವನಾನುಭವವನ್ನು ನಿರೂಪಿಸಲಿಲ್ಲ. ನಾನು ನುಡಿಯ ನಿರ್ಮಾಣದ ಹೊಣೆಗಾರಿಕೆಯು ಈ ವೇಳೆಗೆ ತೆಳುವಾಗತೊಡಗಿತ್ತು. ಮತ್ತು ಅದು ಹೆಚ್ಚು ರಾಜಕೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿತ್ತು. ಆ ನಡುವೆ ಆ.ನ.ಕೃ. ಮೂಲಕವೂ ಕನ್ನಡ ಪರ ಸಂಘಟನೆಗಳು ಜಾಗೃತವಾಗತೊಡಗಿದ್ದವು. ಇದರ ಪರಿಣಾಮದಿಂದಾಗಿ ಮುಂದೆ ಗೋಕಾಕ್ ಚಳುವಳಿಯು ಬೇರೆ ಆಯಾಮ ಪಡೆದುಕೊಂಡುದನ್ನು ಗಮನಿಸಬಹುದು. ಸಾಹಿತ್ಯ ಸೃಷ್ಟಿಯ ಆಚೆಗಿನ ಇಂತಹ ಘಟನೆಗಳು ಚಾರಿತ್ರಿಕವಾದುದಾಗಿದ್ದವು. ಅವುಗಳನ್ನಿಲ್ಲಿ ವಿಸ್ತರಿಸಲು ಅವಕಾಶವಿಲ್ಲ. ಆದರೆ ನಿಜವಾಗಿಯೂ ಏಕೀಕರಣೋತ್ತರ ಕಾಲಘಟ್ಟದ ಕನ್ನಡ ಪರ ಚಳುವಳಿಗಳು ಭಾಷೆಯ ಜೊತೆಗೆಯೇ ಕನ್ನಡಿಗರ ಸ್ಥಿತಿಗತಿಗಳನ್ನು ಸುಧಾರಿಸಲು ಮಾಡಿದ ಹೋರಾಟವು ವಿಶಿಷ್ಟವಾದುದಾಗಿತ್ತು. ಈ ಬಗೆಗಿನ ವಿಶೇಷ ಅಧ್ಯಯನವನ್ನು ವಿವರವಾಗಿ ಅನೇಕ ಹೊಸ ತಲೆಮಾರಿನಲ್ಲಿ ಮಾಡಿದವರಿದ್ದೂ ಅವರಲ್ಲಿ ಡಾ.ಸಿ.ಆರ್.ಗೋವಿಂದರಾಜು ಅವರ ಏಕೀಕರಣ ಹಾಗೂ ಕನ್ನಡ ಸಂಬಂಧಿ ಚಳುವಳಿಗಳ ಬರಹಗಳು ವಿಶೇಷವಾಗಿದ್ದು ಅವನ್ನು ಹಿನ್ನೆಲೆಯಾಗಿ ಗಮನಿಸಬಹುದು. ಪಂಥ ಭೇದವಿಲ್ಲದೆ ಎಲ್ಲ ಪೀಳಿಗೆಯ ಲೇಖಕರು ಒಂದಲ್ಲ ಒಂದು ರೂಪದಲ್ಲಿ ಕನ್ನಡಿಗರ ಅಸ್ತಿತ್ವವನ್ನು ಸಾಧಿಸುವ ನೆಲೆಯಲ್ಲಿ ಹೋರಾಟಕ್ಕೆ ಧುಮುಕಿದ್ದುದು ಸಾಹಿತ್ಯೇತರ ಒತ್ತಡಗಳಿಂದ.

ಈ ಬಗೆಯ ಒತ್ತಡ ಸಂಕ್ರಮಣ ಸ್ಥಿತಿಯದು. ಕನ್ನಡ ಭಾಷೆ ಮತ್ತು ಅದರ ಸಮಾಜವನ್ನು ರಾಜಕೀಯ ಇಚ್ಛಾಶಕ್ತಿಗೆ ಒಳಪಡಿಸುವುದು ಇದರ ಹಿಂದಿದ್ದ ಗುರಿ. ಹಾಗೆಯೇ ಕನ್ನಡದ ಸ್ಥಳೀಯ ರಾಜಕಾರಣವನ್ನು ರಾಷ್ಟ್ರೀಯ ರಾಜಕಾರಣದ ಮುಂದೆ ಪ್ರತಿಷ್ಠಾಪಿಸಿ ಕೊಳ್ಳಬೇಕಾದ ಒತ್ತಡವೂ ಇತ್ತು. ಆರ್ಥಿಕ ರಾಜಕಾರಣದ ಅಂಶವೂ ಇಲ್ಲಿ ಕೆಲಸ ಮಾಡಿತ್ತು. ಆಡಳಿತ ಭಾಷೆಯಾಗಿಸುವ ನಿಟ್ಟಿನಲ್ಲಿ ಕನ್ನಡಿಗರ ದೈನಂದಿನ ಸಂಬಂಧವನ್ನು ಪ್ರಭುತ್ವದ ಜೊತೆ ಬೆಸೆಯುವ ಗುರಿಯೂ ಇದರಲ್ಲಿತ್ತು. ಸ್ಥಳೀಯವಾದ ಕನ್ನಡದ ಸಮಸ್ಯೆಗಳ ಜೊತೆಯಲ್ಲೆ ಕೇಂದ್ರ ಸರ್ಕಾರದ ಮೂಲಕ ಉಂಟಾಗುತ್ತಿದ್ದ ಅಭಿವೃದ್ಧಿಯ ತಾರತಮ್ಯದ ವಿರುದ್ಧವಾಗಿಯು ಕನ್ನಡದ ಪರ ಸಂಘಟನೆಗಳು ಬೀದಿಗಿಳಿದವು. ಇದು ಏಕೀಕರಣ ಪ್ರಕ್ರಿಯೆಯ ನಂತರದ ಮತ್ತೊಂದು ರೂಪ. ಸ್ವತಂತ್ರ ಅಸ್ತಿತ್ವವನ್ನು ಪಡೆದು ಕೊಂಡ ನಾಡಿಗೆ ಉಂಟಾಗುತ್ತಿದ್ದ ಅನ್ಯಾಯಗಳ ವಿರುದ್ಧ ಬಂಡೇಳುವ ಆಂತರಿಕ ಶಕ್ತಿಯು ಇಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿದ್ದುದು ಸಾಹಿತ್ಯ ಪಂಥಗಳ  ಮಿತಿಯನ್ನು ಮೀರುವಂತದಾಗಿತ್ತು. ಬಡಪಾಯಿ ಕನ್ನಡಿಗರು ಈ ಕ್ರಿಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗಿಯಾದುದು ಗೋಕಾಕ್ ಚಳುವಳಿಯ ತೀವ್ರ ಭಾವವನ್ನು ಈಗಲೂ ಉಂಟುಮಾಡುವಂತದ್ದಾಗಿದೆ.

ಆದರೆ ಈ ಬಗೆಯ ಎಚ್ಚರವು ಒಂದು ಪಂಥವಾಗಿ ವಿಸ್ತರಿಸಿಕೊಳ್ಳಲಿಲ್ಲ. ಸಮೂಹದ ಭಾಗವಹಿಸುವಿಕೆಯ ಹಿಂದೆ ಕನ್ನಡ-ಕರ್ನಾಟಕದ ಭಾವನಾತ್ಮಕತೆಯೇ ಮುಖ್ಯವಾಗಿದ್ದು, ಅದರ ತೀವ್ರತೆಯ ನಿರಂತರವಾದುದಾಗಿರಲಿಲ್ಲ. ಸಮೂಹದ ಸಮ್ಮೋಹಕ ಚಳುವಳಿಯು ಯಾವತ್ತೂ ಕ್ಷಣಿಕವಾದುದಾಗಿರುತ್ತದೆ. ಅದರ ಉದ್ದೇಶ ತತ್‌ಕ್ಷಣದ ಭಾವಾವೇಶದ ಪ್ರದರ್ಶನವಾಗಿರುತ್ತದೆ. ಹೀಗಾಗಿಯೇ ಇಂತಹ ಕನ್ನಡ ಚಳುವಳಿಗಳು ಒಂದು ಪಂಥವಾಗಿ, ಸಂಘಟನೆಯಾಗಿ, ತತ್ವವಾಗಿ ಸಾರ್ವಕಾಲಿಕ ಪ್ರತಿರೋಧ ಶಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಾಗದೇ ಹೋಗುವುದು. ಹೀಗಾಗಿಯೇ ಈ ತನಕ ಕರ್ನಾಟಕದಲ್ಲಿ ಅಪ್ಪಟ ಕನ್ನಡ ನಾಡು ನುಡಿಯ ಪ್ರಾದೇಶಿಕ ರಾಜಕಾರಣವಾಗಲಿ ರಾಜಕೀಯ ಪಕ್ಷವಾಗಲಿ ಸಾಧ್ಯವಾಗದಿರುವುದು.

ಪ್ರಭುತ್ವದ ಅಧಿಕಾರ ಲಾಲಸೆಯೇ ಮುಖ್ಯವಾದಾಗ ನಾಡುನುಡಿಯ ರಾಜಕಾರಣವಾಗಲಿ ಅಂತಹ ಪಕ್ಷವಾಗಲಿ ಆ ಬಗೆಯ ರಾಜಕಾರಿಣಿಗಳಾಗಲಿ ಸಿಗುವುದು ಕಷ್ಟ. ಏಕೀಕರಣೋತ್ತರ ಕರ್ನಾಟಕದಲ್ಲಿ ಅರ್ಧಶತಮಾನದಿಂದಲೂ ಇದೇ ಭಾವನೆ ಮುಂದುವರಿಯುತ್ತ ಬಂದಿದೆ. ಕನ್ನಡ ಚಳುವಳಿಯ ಹಲವು ಧಾರೆಗಳು ಈ ಸ್ಥಿತಿಯನ್ನು ಮೀರಿ ಕರ್ನಾಟಕದ ನಿಜವಾದ ಏಕೀಕರಣದ ಆಶಯಗಳನ್ನು ನಿರ್ವಹಿಸಬಹುದಿತ್ತು. ರಾಷ್ಟ್ರಿಯ ರಾಜಕೀಯ ಪಕ್ಷಗಳು ಕೂಡ ಈ ಬಗೆಯ ಶಕ್ತಿಗಳನ್ನು ನಿಯಂತ್ರಿಸಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ತಂತ್ರವೂ ಇದೆ. ಸದ್ಯಕ್ಕೆ ಈ ಅಂಶಗಳನ್ನು ಮುಂದೂಡಿ ಪ್ರಗತಿಶೀಲ ಸಾಹಿತ್ಯದ ನಂತರ ಬೆಳೆದುಬಂದ ನವ್ಯ ಸಾಹಿತ್ಯದ ಸಮಾಜ ಮತ್ತು ಪ್ರಭುತ್ವದ ಸಂಬಂಧಗಳು ಹೇಗೆ ಅತಿ ಸೂಕ್ಷ್ಮವಾಗಿದ್ದವು ಎಂಬುದನ್ನು ಮುಖ್ಯವಾಗಿ ಗಮನಿಸಬಹುದು. ಭಾಷೆಯ ಮಾಂತ್ರಕ ಶಕ್ತಿಯ ಬಗ್ಗೆ ಗಾಢ ವಿಶ್ವಾಸವಿದ್ದ ನವ್ಯರ ಭಾಷೆಯ ಬಗೆಗಿನ ಮೋಹವು ಭಿನ್ನವಾದುದಾಗಿತ್ತು. ಭಾಷೆ ಮತ್ತು ಸಂಸ್ಕೃತಿ, ಸಾಹಿತ್ಯ, ಸಮಾಜ ಮತ್ತು ಭವಿಷ್ಯದ ಅವರ ನಂಬಿಕೆಗಳು ಕೇವಲ ಭಾಷೆಯ ಹೊರಮೈಗೆ ಸಂಬಂಧಿಸಿರಲಿಲ್ಲ. ಭಾಷೆಯ ಅಖಂಡ ಮಾನವ ಸಂಬಂಧಗಳ ಕಡೆಗೆ ನವ್ಯರ ಒಲವಿತ್ತು. ಆ ಅಂಶಗಳನ್ನು ಮುಂದೆ ಪರಿಶೀಲಿಸುವ, ಪ್ರಗತಿಶೀಲರು ಕನ್ನಡವನ್ನು ನಂಬಿದ್ದರಾದರೂ ಕನ್ನಡ ಭಾಷೆಯ ಭೌತಿಕತೆಯನ್ನೆ ಅವರು ಹೆಚ್ಚಾಗಿ ನಂಬಿದ್ದರು. ಭಾಷೆಯ ಜೊತೆಗಿನ ಆಡಳಿತಾತ್ಮಕ ಸಂಬಂಧವನ್ನು ಸಾಮಾಜಿಕವಾಗಿ ವಿಸ್ತರಿಸಬೇಕು ಎಂಬ ಸಂಕಲ್ಪದಲ್ಲಿ ಪ್ರಗತಿಶೀಲರು ಮುಂದಿದ್ದರು. ಭಾಷೆಯ ಹೊರಮೈಯ ವಾಸ್ತವದ ಅಸ್ತಿತ್ವ ಕೂಡ ತುಂಬ ಮುಖ್ಯ. ದಲಿತ ಬಂಡಾಯದವರು ಬಂದಾಗ ಇಂತಹ ಅಂಶಗಳನ್ನು ನಂಬಲಿಲ್ಲ. ಭಾಷೆಯಿಂದ ಸಮಾಜ ಬದಲಾಗುತ್ತವೆ ಎಂಬುದರಲ್ಲಿ ದಲಿತರಿಗೆ ವಿಶ್ವಾಸ ಇರಲಿಲ್ಲ. ಭಾಷೆ ಮತ್ತು ಪೂರ್ವಾಗ್ರಹ, ಭಾಷೆ ಮತ್ತು ಅಧಿಕಾರ, ಭಾಷೆ ಮತ್ತು ಜಾತಿ ನೀತಿ ಒಂದೇ ಆಗಿವೆ ಎಂಬುದು ದಲಿತರ ಗಾಢ ನಂಬಿಕೆ ಆಗಿತ್ತು. ಆದ್ದರಿಂದಲೇ ಪ್ರಗತಿಶೀಲರು ಭಾವಿಸಿದ್ದ ಭಾಷೆಯ ಭಾವನಾತ್ಮಕತೆಯು ದಲಿತ ಬಂಡಾಯದವರಿಗೆ ವಿಶೇಷವೆನಿಸಿರಲಿಲ್ಲ. ಆದರೆ ಬಂಡಾಯದ ಕೆಲ ಲೇಖಕರಿಗೆ ಭಾಷಾ ವಿಚಾರಗಳು ಬಂಡವಾಳ ಆಗಿದ್ದವು. ಚಂಪಾ ಅವರಿಗೆ ಕನ್ನಡ ಭಾಷೆ ದಲಿತರಿಗೆ ಕಂಡಂತೆ ಕಾಣಲು ಸಾಧ್ಯವಿರಲಿಲ್ಲ. ಒಟ್ಟಿನಲ್ಲಿ ಪ್ರಗತಿಶೀಲ ಲೇಖಕರಿಂದ ಜನಪ್ರಿಯ ಸಾಹಿತ್ಯವು ವಿಶೇಷವಾಗಿ ಕನ್ನಡ ಭಾಷೆಯನ್ನು ರೂಪಿಸಿತು. ಕನ್ನಡದ ಓದುಗರ ಸಂಖ್ಯೆಯು ವಿಸ್ತರಿಸಿತು. ಅಲ್ಲದೆ ಜನಪ್ರಿಯ ಸಾಹಿತ್ಯವೇ ಪ್ರತ್ಯೇಕವಾಗಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿತು. ಯಾವುದೇ ಸಾಹಿತ್ಯ ಪಂಥಕ್ಕೂ ಒಳಪಡದೇ ಜನಪ್ರಿಯ ಮನೋಧರ್ಮವೇ ಒಂದು ಬರಹ ಪರಂಪರೆಯಾಗಿ ಏಕೀಕರಣೋತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಆವರಿಸಿಕೊಂಡಿತು. ಆ ಬಗೆಯ ಜನಪ್ರಿಯ ಕಾದಂಬರಿ ಪ್ರಕಾರದ ಕೆಲವು ಲೇಖಕರನ್ನು ಮಾದರಿಯಾಗಿಟ್ಟುಕೊಂಡು ಈ ಮುಂದೆ ಜನಪ್ರಿಯ ಕಥನಗಳನ್ನು ಚರ್ಚಿಸುವ.