ನವ್ಯ ಸಾಹಿತ್ಯ ಪಂಥವು ವಿಶೇಷವಾಗಿ ಪಶ್ಚಿಮದ ಜೊತೆಗೆ ಹಿತಶತ್ರುವಿನ ಸಂಬಂಧವನ್ನು ಸಾಧಿಸಿಕೊಂಡಿತ್ತು. ವ್ಯಕ್ತಿಯ ಸಾಧ್ಯತೆ ಒಂದು ಸಮಾಜದಲ್ಲಿ ಏನು? ಅದರ ಅನನ್ಯತೆಗೆ ಇರುವ ಸಾಧ್ಯತೆಗಳೇನು? ವ್ಯಕ್ತಿ ಮೊದಲೊ ಅವನ ಸುತ್ತಲ ಸಮಾಜ ಮೊದಲೊ ಎಂಬ ಸಂಕೀರ್ಣ ವ್ಯಕ್ತಿತ್ವದ ವಿಕಾಸದ ಕಡೆಗೆ ನವ್ಯ ಸಾಹಿತ್ಯ ಹೆಚ್ಚು ತನ್ಮಯತೆಯನ್ನು ತೋರಿತು. ನವೋದಯ ಲೇಖಕರ  ಪ್ರಜ್ಞೆಗೂ ನವ್ಯದವರ ಆಲೊಚನೆಗೂ ತೀವ್ರ ಅಂತರಗಳಿದ್ದವು. ವ್ಯಕ್ತಿಗಿಂತ ವ್ಯಕ್ತಿಯ ನೆಲೆಯಾದ ಸಮಾಜವೇ ಅವನ ನಾಡೇ ನವೋದಯದವರಿಗೆ ಮುಖ್ಯವಾಗಿತ್ತು. ಪ್ರಗತಿಶೀಲರು ನವೋದಯ ಪ್ರಜ್ಞೆಯನ್ನು ಪೂರ್ಣವಾಗಿ ಬಿಟ್ಟುಕೊಟ್ಟಿರಲಿಲ್ಲ. ವಸಾಹತುಶಾಹಿಯ ಮೂಲಕವೂ ಕಲಿಯುವುದಿತ್ತು ಎಂಬ ಭಾವನೆ ನವ್ಯರಿಗಿತ್ತು. ಇಂಗ್ಲೀಷ್ ಶಿಕ್ಷಣ ಮತ್ತು ಪಶ್ಚಿಮದ ಅರಿವಿನ ಪ್ರಭಾವ ನವ್ಯದ ಮೇಲೆ ಗಾಢವಾಗಿತ್ತು. ಸಾಹಿತ್ಯ ಸೃಷ್ಟಿಗೆ ಬೇಕಿದ್ದ ಹೊಸ ಪರಿಕರಗಳು ನವ್ಯರಿಗೆ ಪಶ್ಚಿಮದ ಮೂಲಕವೇ ದೊರೆತದ್ದು. ಈ ಅಂಶವನ್ನು ಉಲ್ಲೇಖಿಸಿದ್ದಕ್ಕೆ ನಾಡು ನುಡಿಯ ಸಂಬಂಧದ ವೈರುಧ್ಯ ಕಾರಣವಿದೆ. ಮುಂದೆ ಆ ಅಂಶವನ್ನು ಪ್ರಭುತ್ವ ಮತ್ತು ಸಮಾಜದ ಜೊತೆಗೆ ನವ್ಯ ಸಾಹಿತ್ಯ ಸಂವೇದನೆಯನ್ನು ಇಟ್ಟು ಪರಿಶೀಲಿಸುವ. ಈಗ ಹಿಡಿಯಾಗಿ ನವ್ಯ ಸಾಹಿತ್ಯ ಪಂಥವು ಒಳಗೊಂಡಿದ್ದ ತಾತ್ವಿಕತೆಯನ್ನು ಗುರುತಿಸಿಕೊಳ್ಳುವ

೧. ವ್ಯಕ್ತಿಯ ಅನನ್ಯತೆಯೆ ವಿಶಿಷ್ಟವಾದದ್ದು.

೨. ವ್ಯಕ್ತಿಯ ಅಸ್ತಿತ್ವವೇ ಅಂತಿಮವಾದುದು.

೩. ವ್ಯಕ್ತಿ ವಿಶಿಷ್ಠ ಕಾಣ್ಕೆಯೆ ಪರಮವಾದದ್ದು.

೪. ಭಾಷೆಯ ಮೂಲಕವೇ ಇಲ್ಲದ್ದನ್ನೆಲ್ಲ ಹುಡುಕಿಕೊಳ್ಳಲು ಹಾಗು ಇರುವುದನ್ನೆಲ್ಲ ಮೀರಲು ಸಾಧ್ಯವಾಗುವುದು.

೫. ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳು ಪರಂಪರೆಯನ್ನು ಮೀರಿ ಬೆಳೆಯಲು ದಾರಿ ತೋರುತ್ತವೆ.

೬. ಅನಾಥ ಪ್ರಜ್ಞೆಯ ನಿರೂಪಣೆಯಿಂದ ಅಂತರಂಗವನ್ನು ತೆರೆಯಬಹುದು.

೭. ಸಂಕೀರ್ಣ ಅಭಿವ್ಯಕ್ತಿಯು ವಿಶಿಷ್ಟವಾದುದು.

೮. ರೂಪಕ ಸಂಕೇತ ಪ್ರತಿಮೆಗಳು ವ್ಯಕ್ತಿ ಸತ್ಯದ ದರ್ಶನ.

೯. ಪಶ್ಚಿಮದ ಬಿಡುಗಡೆಯ ವಿಚಾರಗಳು ತನ್ನ ಸಮಾಜಕ್ಕೆ ಪೂರಕವಾದವು.

೧೦. ಸಮಾಜದ ವಕ್ರ ವಾಸ್ತವದ ವಸ್ತುಸ್ಥಿತಿಯನ್ನು ಮೀರಿ ಸೃಜನಶೀಲ ಧ್ಯಾನದಲ್ಲಿ ಲೇಖಕ ತನ್ನ ದಾರಿಯನ್ನು ಕಂಡುಕೊಳ್ಳಬೇಕು.

೧೧. ವ್ಯಕ್ತಿಯ ಇಹವೇ ಮುಕ್ತಿಯ ಕೇಂದ್ರ. ಆತನ ಪ್ರವೃತ್ತಿಗಳಾದ ಹಸಿವು ನಿದ್ದೆ ಆಸೆ ಆಕಾಂಕ್ಷೆ ಕಾಮನೆಗಳನ್ನು ನಿರ್ಬಂಧಿಸಿಕೊಳ್ಳಬಾರದು. ಲೌಕಿಕದ ಎಲ್ಲ ಸುಖಗಳಿಗೂ ವ್ಯಕ್ತಿಯೇ ತೆರೆದುಕೊಳ್ಳಬೇಕು. ಹಾಗೆಯೇ ಸಾಮಾಜಿಕ ಗಡಿಗಳನ್ನು ದಾಟಬೇಕು.

೧೨. ವಿಕ್ಷಿಪ್ತತೆ, ವಿಮುಖತೆ, ಅನ್ಯತೆ, ಭಗ್ನತೆ, ಸೃಜನಶೀಲತೆಗೆ ಒತ್ತಾಸೆಯಾದ ಸ್ವಭಾವಗಳು. ಅಂತರಂಗದ ಕುಲುಮೆಯಲ್ಲೆ ವ್ಯಕ್ತಿಯು ಬಹಿರಂಗದ ಅರ್ಥಗಳನ್ನು ಎರಕಗೊಳಿಸಿಕೊಳ್ಳಬೇಕು.

೧೩. ಶ್ರೇಷ್ಠ ಕಲಾತ್ಮಕ ಅಭಿವ್ಯಕ್ತಿಯೇ ಸಾಹಿತ್ಯದ ವಿಶಿಷ್ಟ ಸಾಧನೆ.

ಈ ಬಗೆಯ ನಂಬಿಕೆಯಲ್ಲಿ ನವ್ಯ ಸಾಹಿತ್ಯವು ಮೈದಾಳಿತು. ಈ ಸಂವೇದನೆಯ ಲೇಖಕರು ನಾಡು ನುಡಿಯ ಹೋರಾಟದ ಕಡೆಗೆ ವಿಶೇಷ ಗಮನಕೊಟ್ಟಿರಲಿಲ್ಲ. ತನ್ನ ಅನುಭವ ನಿಷ್ಠತೆಯಲ್ಲೆ ನವ್ಯ ಸಾಹಿತ್ಯವು ಸಮಾಜವನ್ನು ನೋಡುತ್ತಿತ್ತು. ಪ್ರಗತಿಶೀಲರ ಜನಪ್ರಿಯ ನಿರೂಪಣೆಯ ಕ್ರಮದಲ್ಲಿ ನವ್ಯರಿಗೆ ಗಮನವಿರಲಿಲ್ಲ. ಸಮಾಜದ ಉದ್ಧಾರ ಸಾಹಿತಯ ಕೆಲಸ ಅಲ್ಲ ಎಂಬ ನಿರ್ಧಾರ ಇವರದಾಗಿತ್ತು. ಕೃತಿನಿಷ್ಠ ವಿವೇಚನೆಯೆ ಈ ಕಾಲದ ಲೇಖಕರ, ವಿಮರ್ಶಕರ, ಚಿಂತಕರ ಸ್ವಭಾವವಾಗಿತ್ತು. ಸಾಹಿತ್ಯ ಪಠ್ಯವನ್ನು ಸಮಾಜ ಮತ್ತು ಲೇಖಕನ ಹೊರಗಿಟ್ಟು ತೀರ್ಮಾನಿಸುವ, ಓದುವ, ಸಮರ್ಥಿಸುವ ಗುಣವು ನವ್ಯ ಸಾಹಿತ್ಯ ಪಂಥಕ್ಕೆ ಹಿತವೆನಿಸಿತ್ತು. ಸಮಾಜದ ಕಣ್ಣಿಂದ ಅರ್ಥೈಸುವುದು ನವ್ಯರಿಗೆ ಬೇಕಿರಲಿಲ್ಲ. ಸಾಹಿತ್ಯ ಕೃತಿಯನ್ನು ಕೃತಿಯ ಅನುಭವದ ಒಳಗಿಂದಲೇ ನೋಡಬೇಕು ಎಂಬ ವಾದ ಅವರದಾಗಿತ್ತು. ಕೃತಿ, ಕೃತಿಕಾರ, ಸಮಾಜ ಈ ಮೂರನ್ನೂ ಬೇರ್ಪಡಿಸಿಯೇ ನೋಡಬೇಕು ಎಂದು ನವ್ಯ ಲೇಖಕರು ಪ್ರತಿಪಾದಿಸುತ್ತಿದ್ದರು. ಪರೋಕ್ಷವಾಗಿ ಅವರ ಸಮರ್ಥನೆಯಲ್ಲಿ ಸಮಾಜ ಬೇರೆ ಕೃತಿನಿಷ್ಠ ಅನುಭವ ಬೇರೆ ಎಂಬ ಅಂತರವಿತ್ತು.

ಲೇಖಕನನ್ನು ವರ್ತಮಾನದ ಸಾಮಾಜಿಕ ಅನಿಷ್ಠಗಳಿಂದ ಪ್ರತ್ಯೇಕಿಸುವ ಧೋರಣೆ ನವ್ಯರಲ್ಲಿ ದಟ್ಟವಾಗಿತ್ತು. ಹೀಗಾಗಿಯೇ ಆ ಕಾಲದ ಲೇಖಕರು ನಾಡು ನುಡಿಯ ವರ್ತಮಾನದ ಬಿಕ್ಕಟ್ಟುಗಳಿಗೆ ಸೂಕ್ತವಾಗಿ ಸ್ಪಂದಿಸಲು ಆಗದೇ ಹೋದದ್ದು. ಸೃಜನ ಶೀಲವಾದ ಅನನ್ಯತೆಯೇ ನವ್ಯರಿಗೆ ಮುಖ್ಯವಾಗಿತ್ತು. ಸಮಾಜದ ಕ್ಷುದ್ರತೆಗಳು ಅವರನ್ನು ವಿಶೇಷವಾಗಿ ಕಲಕಿರಲಿಲ್ಲ. ಪ್ರಗತಿಶೀಲರು ಸಮಾಜದ ಯಾವ ಅನಿಷ್ಠಗಳನ್ನು ವಸ್ತು ವಿಷಯವಾಗಿ ಸಾಹಿತ್ಯದಲ್ಲಿ ಬಳಸಿಕೊಂಡಿದ್ದರೂ ಅಂತಹ ಸಂಗತಿಗಳು ನವ್ಯರಿಗೆ ಸಪ್ಪೆ ಎನಿಸಿದ್ದವು. ಆದರೆ ಕಾಮನೆಗಳ ವಿಚಾರದಲ್ಲಿ ನವ್ಯರು ಉಳಿದೆಲ್ಲ ಸಾಹಿತ್ಯ ಪಂಥದವರಿಗಿಂತ ಹೆಚ್ಚು ಆಸಕ್ತರಾಗಿದ್ದುದು ವಿಚಿತ್ರವಾಗಿದೆ. ಪಶ್ಚಿಮದ ಬೆತ್ತಲೆ ತನವನ್ನು ಮೋಹಕವಾಗಿ ಕಂಡಿದ್ದ ನವ್ಯರು ಅದನ್ನು ತಮ್ಮ ಸಾಹಿತ್ಯ ಸಂದರ್ಭದಲ್ಲಿ ಅಳವಡಿಸಿಕೊಂಡಿದ್ದು ಫಲ ನೀಡಲಿಲ್ಲ. ತನ್ನ ನಾಡಿನ ಸಂಸ್ಕೃತಿ ಆಚಾರ ವಿಚಾರಗಳೆಲ್ಲವೂ ನವ್ಯರಿಗೆ ಆಪ್ತವಾಗಿರಲಿಲ್ಲ. ಇಂಗ್ಲೀಷ್ ಶಿಕ್ಷಣದ ಪ್ರಭಾವದಿಂದ ಅವರು ವ್ಯಕ್ತಿಯ ಬಿಡುಗಡೆಯ ಕಡೆಗೇ ಸಾಹಿತ್ಯವನ್ನು ಬಳಸಿಕೊಂಡರು.

ಕರ್ನಾಟಕದ ಮುಂದಿದ್ದ ಸಾಮಾಜಿಕ, ರಾಜಕೀಯ, ಆರ್ಥಿಕ ಸವಾಲುಗಳನ್ನು ಮೈ ಮೇಲೆ ಹಾಕಿಕೊಳ್ಳುವ ಹೊಣೆಗಾರಿಕೆ ನವ್ಯರಿಗೆ ಬಾರದೇ ಹೋದದ್ದು ಅವರ ಸಾಹಿತ್ಯ ಕಾಣ್ಕೆಯ ನಂಬಿಕೆಗಳಿಂದಲೇ. ನವೋದಯದವರಿಗಿದ್ದ ನಾಡು ನುಡಿಯ ಹೊಣೆಗಾರಿಕೆಯು ನವ್ಯರಿಗೆ ಪುರೋಗಾಮಿತನದ್ದು ಎನಿಸಿತ್ತು. ಹಾಗಾಗಿಯೇ ಬಿ.ಎಂ.ಶ್ರೀ. ಅಂತವರನ್ನೆ ನವ್ಯರು ವಿಚಿತ್ರವಾಗಿ ಗುಮಾನಿಸಿದ್ದರು. ರಾಜ ಸೇವಾಸಕ್ತ ಬಿ.ಎಂ.ಶ್ರೀ. ವಸಾಹತುಶಾಹಿಯ ಗುಪ್ತಭಕ್ತರಾಗಿದ್ದರು ಎಂಬ ಭಾವನೆಯನ್ನು ನವ್ಯಸಾಹಿತ್ಯದ ಪ್ರಮುಖರು ಆರೋಪಿಸುತ್ತಿದ್ದರು. ಕುವೆಂಪು ಎತ್ತುತ್ತಿದ್ದ ಪುರೋಹಿತಶಾಹಿ ವಿರುದ್ಧದ ದನಿಯ ಬಗ್ಗೆ ಒಳಗೊಳಗೆ ಅಸಮಧಾನ ಪಡುತ್ತಿದ್ದ ನವ್ಯ ಲೇಖಕರು ಆ ಕಾರಣಕ್ಕಾಗಿ ಕುವೆಂಪು ಅವರ ನಾಡು ನುಡಿಯ ಕಳಕಳಿಯನ್ನೂ ಒಟ್ಟಾರೆ ಅವರ ಸಾಹಿತ್ಯವನ್ನು ಕೀಳಾಗಿ ಕಾಣುತ್ತಿದ್ದುದು ಪೂರ್ವಾಗ್ರಹಗಳ ಫಲವಾಗಿತ್ತು. ನವೋದಯದ ಸಮಕಾಲೀನ ಲೇಖಕರ ಒಳಗೂ ಕುವೆಂಪು ಬಗ್ಗೆ ಇದ್ದ ವೈಷಮ್ಯ ಇದೇ ಬಗೆಯದು. ಒಂದು ನಾಡಿನ ಭಾಷೆ, ಸಾಹಿತ್ಯ, ಕಲೆ, ಧರ್ಮ, ಸಮಾಜಗಳ ಬಗ್ಗೆ ಇದ್ದ ಲೇಖಕರ ಭಿನ್ನಾಭಿಪ್ರಾಯಗಳು ಆರೋಗ್ಯಕರವಾಗಿದ್ದರೆ ಪರಂಪರೆ ಬೆಳೆಯುತ್ತದೆ. ಆ ವಿಚಾರಗಳನ್ನಿಲ್ಲಿ ಚರ್ಚಿಸಲು ಅವಕಾಶವಿಲ್ಲ. ಆದರೆ ನವ್ಯರಲ್ಲಿ ವಿಚಿತ್ರವಾದ ಪ್ರತಿಭೆ ಗಾಢವಾಗಿತ್ತು. ತಮ್ಮ ಪ್ರತಿಭೆಯಿಂದಲೇ ಪಶ್ಚಿಮದ ವಿವೇಕದ ಜೊತೆಗೆ ಕನ್ನಡದ ಅಭಿವ್ಯಕ್ತಿ ಸಾಧ್ಯತೆಯನ್ನು ವಿಸ್ತರಿಸಿದ್ದನ್ನು ಒಪ್ಪಲೇ ಬೇಕಾಗುತ್ತದೆ.

ನಮ್ಮ ಲೇಖಕರು ವಿಶೇಷವಾಗಿ ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಬಿ.ಸಿ.ರಾಮಚಂದ್ರ ಶರ್ಮ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಸುಮತೀಂದ್ರ ನಾಡಿಗ್, ಪೂರ್ಣಚಂದ್ರ ತೇಜಸ್ವಿ, ಟಿ.ಜಿ.ರಾಘವ, ಲಂಕೇಶ್, ರಾಮಚಂದ್ರ ದೇವ, ಎ.ಕೆ.ರಾಮಾನುಜನ್ ಮುಂತಾದವರು. ಪ್ರತಿಯೊಂದು ಸಾಹಿತ್ಯ ಪಂಥದಲ್ಲೂ ತುಂಬ ಪ್ರತಿಭಾವಂತರೆಂದು ಸಿಗುವವರು ಬೆರಳೆಣಿಕೆಯಷ್ಟು ಮಂದಿಯೇ. ಇದು ಒಂದೊಂದು ಕಾಲಘಟ್ಟಕ್ಕೆ ಸಂವೇದನೆಗೆ ಸೀಮಿತವಾಗಿರುವ ಪ್ರತಿಭೆಯ ಸಂಖ್ಯೆ. ಇವರ ಬರಹಗಳ ಹಿಂದೆ ಅನೇಕರಿರುತ್ತಾರೆ. ಪ್ರಾತಿನಿಧಿಕವಾಗಿ ಕೆಲವರನ್ನು ಗುರುತಿಸಿಕೊಂಡು ಅವರ ಬರಹಗಳ ನಾಡುನುಡಿ ಸಂಸ್ಕೃತಿ ಸಮಾಜ ಚರಿತ್ರೆಯನ್ನು ಅವಲೋಕಿಸುವುದು ಅನಿವಾರ್ಯ. ಇಂತವರ ನಡುವೆಯೇ ಯಾವ ಚೌಕಟ್ಟಿಗೂ ಸಿಲುಕದೆ ಭಿನ್ನವಾಗಿ ಉಳಿಯದ ಲೇಖಕರ ಲೆಕ್ಕ ಬೇರೆ. ಗದ್ಯದ ಈ ಮುಖ್ಯ ಲೇಖಕರು ಕಲಾತ್ಮಕತೆಗೆ ಹೆಚ್ಚು ಗಮನ ನೀಡುವ ಮೂಲಕ ಸಾಹಿತ್ಯದ ಜನಪ್ರಿಯ ಶೈಲಿಯನ್ನು ಮೀರಿದರು.

ಈ ಹಿನ್ನೆಲೆಯಲ್ಲಿ ನವ್ಯ ಸಾಹಿತ್ಯವು ಕನ್ನಡ ಭಾಷೆಯನ್ನು ಹೇಗೆ ಸೂಕ್ಷ್ಮಗೊಳಿಸಿ ಸಾಹಿತ್ಯದ ಒಟ್ಟು ಚಿಂತನೆಯನ್ನೆ ಬದಲಿಸಿತು ಎಂಬುದನ್ನು ಕೆಳಗಿನಂತೆ ಗುರುತಿಸಿ ಕೊಳ್ಳಬಹುದು.

೧. ಕನ್ನಡ ಭಾಷೆಯ ಅಭಿವ್ಯಕ್ತಿಗೆ ಆಧುನಿಕ ಸಂವೇದನೆಯನ್ನು ವ್ಯಕ್ತಿ ಕಾಣ್ಕೆಯ ಮೂಲಕ ತರಲಾಯಿತು.

೨. ವ್ಯಕ್ತಿ ವಿಮುಕ್ತಿಗೆ ಭಾಷೆಯ ಉತ್ಕಟ ಅಭಿವ್ಯಕ್ತಿಯೇ ಸಾಧನ ಎಂಬುದನ್ನು ತೋರಿಸಿಕೊಡಲಾಯಿತು.

೩. ಕನ್ನಡ ಭಾಷೆಯ ರೂಪಕ ಸಂಕೇತ ಪ್ರತಿಮೆಗಳಿಗೆ ಹೊಸ ಜೀವ ತುಂಬಲಾಯಿತು.

೪. ಸಮಾಜಗಳ ಸಂಕೀರ್ಣತೆಗಳನ್ನು ವ್ಯಕ್ತಿ ವಿಶಿಷ್ಠ ಭಾಷಿಕತೆಯಲ್ಲಿ ಹಿಡಿದಿಡುವ ಮೂಲಕ ಕನ್ನಡ ಭಾಷೆಯ ಅಭಿವ್ಯಕ್ತಿಯನ್ನು ಪುನರುಜ್ಜೀವನಗೊಳಿಸಲಾಯಿತು.

೫. ಇಂಗ್ಲೀಷ್ ಭಾಷೆಯ ಸಾಹಿತ್ಯದ ಮೂಲಕ ಕನ್ನಡ ಭಾಷೆಯ ಸಾಹಿತ್ಯ ಮತ್ತು ಅದರ ಭಾಷಿಕ ಸಾಮರ್ಥ್ಯವನ್ನು ಬಲಪಡಿಸಲಾಯಿತು.

೬. ಮನುಷ್ಯನ ಅನಾಥ ಭಾವನೆಯನ್ನು ಅನ್ಯವೆನ್ನುವ ವಿಷಾದ ಛಾಯೆಯನ್ನು ವಿಕ್ಷಿಪ್ತ ಸ್ವಭಾವವನ್ನು ಅಂದರೆ ಸುಪ್ತ ಪ್ರಜ್ಞೆಯ ಮಾನಸಿಕ ಸ್ಥಿತಿಯನ್ನು ಮೊದಲ ಬಾರಿಗೆ ಲೌಕಿಕದ ಧ್ಯಾನದಲ್ಲೆ ಬಿಂಬಿಸುವ ಮೂಲಕ ಕನ್ನಡ ಭಾಷೆಯ ಮನಸ್ಸಿನ ಒಂದು ಸ್ತರವನ್ನು ಅನಾವರಣಗೊಳಿಸಲಾಯಿತು.

೭. ಭಾಷೆಯ ವಾಕ್ಯ ವಿನ್ಯಾಸವನ್ನು ಆಧುನೀಕರಿಸಲಾಯಿತು.

೮. ಅಮೂರ್ತ ಸ್ವರೂಪವನ್ನು ಭಾಷೆಯಲ್ಲಿ ಸಮರ್ಥವಾಗಿ ವ್ಯಕ್ತಪಡಿಸುವ ಮೂಲಕ ಕನ್ನಡದ ಸಾಹಿತ್ಯ ಭಾಷೆಯನ್ನು ಸಂಕೀರ್ಣಗೊಳಿಸಲಾಯಿತು.

೯. ಅಸಂಗತತೆಯ ಮೂಲಕ ಅರ್ಥ ಸಂಬಂಧವನ್ನು ಬೆಸೆಯುವ ಭಾಷಿಕ ಸಂವಹನವನ್ನು ರೂಪಿಸಲಾಯಿತು.

೧೦. ಪದ್ಯಗದ್ಯ ನಿರೂಪಣೆಯಲ್ಲಿ ವಿಶಿಷ್ಟ ಭಾಷಿಕ ಮಾದರಿಯೊಂದನ್ನು ಕಂಡುಕೊಳ್ಳಲಾಯಿತು.

ಭಾಷೆಯನ್ನು ಹೊಳಪುಗೊಳಿಸುವ ಇಂತಹ ಸಾಧ್ಯತೆಗಳು ಕನ್ನಡ ನಾಡು ನುಡಿಯ ವಿಕಾಸಕ್ಕೆ ಮಹತ್ವದ ಕೊಡುಗೆ ನೀಡಿವೆ. ಭಾಷೆಯನ್ನು ಪಶ್ಚಿಮಾಕೃತಿಗೆ ರೂಪಾಂತರಿಸುವ ಕೆಲಸವೂ ಈ ಅವಧಿಯಲ್ಲಾದುದನ್ನು ಗಮನಿಸಬೇಕು. ಇದು ಅನುವಾದದ ರೀತಿಯಾಗಿರಲಿಲ್ಲ. ಪಶ್ಚಿಮದ ಆಲೋಚನೆಯನ್ನು ಕನ್ನಡ ಭಾಷೆಯಲ್ಲಿ ಅನ್ವಯಿಸುವಾಗ ಸಾಂಪ್ರದಾಯಿಕ ಅಭಿವ್ಯಕ್ತಿ ವಿನ್ಯಾಸವನ್ನೆ ಮಾರ್ಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಭಾರತೀಯ ಕಾವ್ಯಮೀಮಾಂಸೆಯ ನಿಲುವಿಗಿಂತಲೂ ಮಿಗಿಲಾಗಿ ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಗೆ ಹತ್ತಿರವಿದ್ದ ನವ್ಯರಿಗೆ ತಮ್ಮ ಆಲೋಚನೆಗೆ ತಕ್ಕುದಾದ ಭಾಷೆಯನ್ನೆ ಕಂಡುಕೊಳ್ಳಬೇಕಾಗಿತ್ತು. ಆದ್ದರಿಂದಲೇ ಅವರ ವೈಚಾರಿಕ ಗದ್ಯವಾಗಲಿ ಕಥನದ ಭಾಷೆಯಾಗಲಿ ಭಿನ್ನವಾಗಿ ಬೆಳೆಯಲು ಸಾಧ್ಯವಾದುದು. ಭಾಷೆಯ ಬಗೆಗೆ ಹೋರಾಟಕ್ಕಿಳಿಯದೆಯೇ ಸಾಹಿತ್ಯ ಸೃಷ್ಟಿಯ ಮೂಲಕವೇ ಕನ್ನಡ ಭಾಷೆಯ ಅನುಭವ ಜಗತ್ತನ್ನು ಅತ್ಯಂತ ಸೂಕ್ಷ್ಮ ರೂಪಕ ವಿನ್ಯಾಗಳಲ್ಲಿ ಪ್ರತಿಸೃಷ್ಟಿಸಿದ ನವ್ಯರ ಅಭಿವ್ಯಕ್ತಿ ಸಾಮರ್ಥ್ಯವು ಅಪರೂಪವಾದದ್ದು. ನಾಡು ನುಡಿಯ ಘೋಷಣೆಯ ಬದಲು ಆ ಯಾವ ಗುಂಗೂ ತನ್ನದಲ್ಲ ಎಂಬಂತೆ ಅನ್ಯವಾಗುತ್ತಲೇ ಅನನ್ಯವಾದ ಕನ್ನಡ ಭಾಷೆಯ ಸ್ವರೂಪಗಳನ್ನು ಬೆಳೆಸಿದ ಶ್ರೇಯಸ್ಸು ನವ್ಯರಿಗೆ ಸಲ್ಲಬೇಕು.

ಏಕೀಕರಣದ ಆಶಯವನ್ನು ಮರೆತಂತೆ ಸಾಹಿತ್ಯ ಸೃಷ್ಟಿಸುತ್ತಿದ್ದ ನವ್ಯರ ಈ ಬಗೆಯ ಸಾಮರ್ಥ್ಯವನ್ನು ತಾಳ್ಮೆಯಿಂದ ಪರಿಶೀಲಿಸಬೇಕಾಗುತ್ತದೆ. ಧ್ಯಾನಸ್ಥವಾಗಿ ಭಾಷೆಯ ಜೊತೆ ಸೃಜನಶೀಲ ಅನುಸಂಧಾನ ಮಾಡುವುದು ಸಂಸ್ಕೃತಿಯ ವಿಕಾಸಶೀಲ ಸ್ವಭಾವ. ಅದೇ ಭಾಷೆಯ ವರ್ತಮಾನದ ಬಿಕ್ಕಟ್ಟನ್ನು ಬಿಡಿಸಲು ತೊಡಗುವ ಕ್ರಿಯೆಯು ಸಾಮಾಜಿಕ ರಾಜಕಾರಣವಾಗಿರುತ್ತದೆ. ಚರಿತ್ರೆಯಲ್ಲಿ ಇವೆರಡೂ ಧಾರೆಗಳಿಗೆ ಮನ್ನಣೆಯಿದೆ. ನೃಪತುಂಗನು ಕನ್ನಡನಾಡಿನ ಗಡಿಯನ್ನು ರಾಜಕೀಯವಾಗಿ ಗುರುತಿಸಿಕೊಳ್ಳುವುದು ಹೇಗೆ ಅಭಿಮಾನದ್ದಾಗಿರುತ್ತದೆಯೋ ಹಾಗೆಯೇ ಪಂಪ ರನ್ನ ಜನ್ನ ತ್ರಿಯತ್ರರು ಕನ್ನಡ ಭಾಷೆಯನ್ನು ಸೃಜನಶೀಲ ಧ್ಯಾನದಲ್ಲಿ ವಿಸ್ತರಿಸುವುದೂ ಅಷ್ಟೇ ಮುಖ್ಯ. ಏಕೀಕರಣ ಚಳುವಳಿಯಾಗಲಿ ಏಕೀಕರಣೋತ್ತರ ಕಾಲದ ಕನ್ನಡ ಸ್ಥಿತಿಯ ಅಭಿವ್ಯಕ್ತಿಗಳಾಗಲಿ ಹೀಗಾಗಿ ಒಂದಕ್ಕೊಂದು ಸಾವಯವ ಸಂಬಂಧವನ್ನು ಪ್ರಭುತ್ವ ಮತ್ತು ಸಾಹಿತ್ಯ ಪಂಥಗಳ ಜೊತೆಗೆ ಅವಳಡಿಸಿಕೊಂಡಿರುತ್ತವೆ. ಪರಂಪರೆಯ ಬೇರೆ ಬೇರೆ ಕಾಲಘಟ್ಟಗಳು ವರ್ತಮಾನದ ಅಗತ್ಯಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತ ನಾಡು ನುಡಿಯ ನಡತೆಯನ್ನು ಧ್ವನಿಸುತ್ತಿರುತ್ತವೆ. ನವ್ಯ ಲೇಖಕರು ಇಂತಹ ಅವಿನಾಭಾವ ಸಂಬಂಧವನ್ನು ಭಾಷೆಯ ಜೊತೆಗೆ ಹೊಂದಿದ್ದರಿಂದಲೇ ಅವರಿಗೆ ಕನ್ನಡ ಭಾಷೆಯ ಪರಂಪರೆಯಲ್ಲಿ ತಮ್ಮ ಗುರುತುಗಗಳನ್ನು ಬೆಳೆಸಲು ಸಾಧ್ಯವಾದದ್ದು.

ಚಳುವಳಿಕಾರರ ರೀತಿಯಲ್ಲಿ ನವ್ಯ ಲೇಖಕರ ಭಾಷಿಕ ಸಂಬಂಧ ಇರದಿದ್ದರೂ ಮುಂದಿನ ಪೀಳಿಗೆಯ ಮೇಲೆ ಅವರು ಮಾಡಿದ ಸಾಹಿತ್ಯಿಕ ಪ್ರಭಾವಗಳನ್ನು ಹಲವು ವಿಚಾರಗಳ ಮೂಲಕ ಕಂಡುಕೊಳ್ಳಬಹುದು. ಸಾಹಿತ್ಯ ವಿಮರ್ಶೆಯಲ್ಲಿ ಈಗಾಗಲೇ ಅಂತಹ ಮೌಲ್ಯಮಾಪನ ನಡೆದಿದೆ. ನವ್ಯ ಸಾಹಿತ್ಯ ಪಂಥದ ಲೇಖಕರು ತುಂಬ ಸಂವೇದನಾ ಶೀಲರಾಗಿದ್ದರಿಂದಲೇ ಅವರು ಜನಪ್ರಿಯ ಧಾಟಿಯಲ್ಲಿ ಸಮಾಜದ ಜೊತೆ ಗುರುತಿಸಿಕೊಳ್ಳಲು ಆಗಲಿಲ್ಲ. ಸೂಕ್ಷ್ಮ ಸ್ವಭಾವದ ಅವರ ಸಾಹಿತ್ಯ ಸೃಷ್ಟಿಯಲ್ಲಿ ಅಂತರ್ ಮುಖಿಯ ಗುಣ ತೀವ್ರವಿದ್ದಂತೆಯೇ ಸಾಮಾಜಿಕತೆಯಲ್ಲು ಅದರ ಪ್ರಭಾವ ಕಾಣಿಸಿಕೊಂಡಿತ್ತು. ಸಮಾಜದ ಜೊತೆ ನೇರ ಸಂಪರ್ಕವೇ ಈ ಲೇಖಕರಿಗೆ ಇರಲಿಲ್ಲ ಎಂಬ ಆರೋಪಗಳೂ ಇದ್ದವು. ಆದರೆ ನವ್ಯರ ಬೌದ್ಧಿಕ ಆಯ್ಕೆಗಳು ಗಮನಾರ್ಹವಾಗಿದ್ದವು. ಪೂರ್ಣ ಪ್ರಮಾಣದಲ್ಲಿ ಅವರು ದಂತಗೋಪುರದಲ್ಲಿ ಕುಳಿತಿರಲಿಲ್ಲ. ಅವರಿಗೂ ಪ್ರಭುತ್ವ ಮತ್ತು ಸಮಾಜದ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳಿದ್ದವು. ಸಾಹಿತ್ಯ ಸೃಷ್ಟಿಯ ಸಂಬಂಧದಲ್ಲಿ ಅಂತರ್ ಮುಖಿಯಾಗುವುದು ಲೋಪವಿಲ್ಲ. ಸೃಜನಶೀಲತೆಗೆ ಅದು ಬಲನೀಡುವಂತದೇ.

ಕನ್ನಡ ಪರಂಪರೆಯ ಜೊತೆ ನವ್ಯರು ಸೃಜನಶೀಲ ರಾಜಕಾರಣವನ್ನು ಮಾಡಿದರು. ಇಂತದನ್ನು ಮಾಡಲು ನವ್ಯದವರಿಗೆ ಇದ್ದ ಆಸೆರೆ ಎಂದರೆ ಪಶ್ಚಿಮದ ಬಿಡುಗಡೆಯ ಕ್ರಾಂತಿಗಳ ಕಥನಗಳು. ನವೋದಯದವರು ಯುರೋಪಿನ ಪುನರುಜ್ಜೀವನದ ಚರಿತ್ರೆಯ ಕಥನಗಳನ್ನು ರಾಷ್ಟ್ರೀಯವಾದಿ ವಿಚಾರಗಳಿಗೆ ಬೆಂಬಲವಾಗಿ ಅಂತರ್ಗತಿಸಿಕೊಂಡದ್ದು ಒಂದು ಬಗೆಯಾದರೆ ನವ್ಯರ ರೀತಿಯು ಇದಕ್ಕಿಂತ ಭಿನ್ನವಾಗಿತ್ತು. ರಾಷ್ಟ್ರದ ಒಳಗಿನ ವ್ಯಕ್ತಿಯ ಬಿಡುಗಡೆಯು ರಾಷ್ಟ್ರ ನಿರ್ಮಾಣದ ನಿಜವಾದ ಗುರಿಯಾಗಬೇಕು ಎಂಬ ನಂಬಿಕೆ ನವ್ಯ ಲೇಖಕರ ಬರವಣಿಗೆಯಲ್ಲಿ ಪರೋಕ್ಷವಾಗಿ ಕಂಡುಬರುತ್ತದೆ. ಆದ್ದರಿಂದಲೇ ನವೋದಯ ಕಾದಂಬರಿಗಳು ಸಮಾಜಮುಖಿಯಾದರೆ ನವ್ಯಕಾದಂಬರಿಗಳು ಅಂತರ್ ಮುಖಿಯಾಗುವುದು. ಇವೆರಡೂ ಬಗೆಗಳು ನಾಡುನುಡಿಯ ವಿಭಿನ್ನ ಮುಖಗಳು. ನವ್ಯರು ನಾಡು ನುಡಿಯ ಬಗ್ಗೆ ಹೆಮ್ಮೆ ಪಟ್ಟು ಸಂಭ್ರಮಿಸಿ ಮಾತನಾಡುವ ಸ್ವಭಾವದವರಾಗಿರಲಿಲ್ಲ. ರಾಜ್ಯ, ರಾಷ್ಟ್ರ, ವ್ಯವಸ್ಥೆ ಮತ್ತು ಆಳುವ ಅಧಿಕಾರಶಾಹಿಯ ಬಗ್ಗೆ ನವ್ಯರಿಗೆ ತೃಪ್ತಿಯಿರಲಿಲ್ಲ. ಪ್ರಜಾಪ್ರಭುತ್ವದ ನೀತಿಯ ಜೊತೆಗಿದ್ದರೂ ನವ್ಯರ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳು ಪ್ರಗತಿಶೀಲರಿಗಿಂತಲೂ ಪ್ರಬುದ್ಧವಾಗಿದ್ದವು. ಆ ಅಂಶಗಳು ವ್ಯಾಪಕವಾಗಿ ಬೆಳೆಯದಿದ್ದರೂ ಎಡಪಂಥೀಯವಾದ ಆಲೋಚನಾ ಕ್ರಮವು ಮುಂದೆ ಬೇರೆ ಬಗೆಯ ಸ್ವರೂಪ ಪಡೆಯಲು ಸಹಾಯ ಮಾಡಿದವು. ಸಾಹಿತ್ಯ ಪಂಥವೊಂದು ಬೌದ್ಧಿಕವಾಗಿ ನಿರ್ವಹಿಸಬಹುದಾದ ರಾಜಕೀಯ ಹೊಣೆಗಾರಿಕೆ ನಾಡು ನುಡಿಯ ಭವಿಷ್ಯಕ್ಕೆ ವಿಶಿಷ್ಟವಾದುದು. ಅಂತಹ ಕನಸಿನ ವಿಚಾರಗಳನ್ನು ನವ್ಯ ಸಾಹಿತ್ಯದಲ್ಲೂ ಕಾಣಬಹುದು. ಸಾಹಿತ್ಯದ ಸೃಷ್ಟಿಯಲ್ಲಿ ನವ್ಯರ ಚಿಂತನೆಗಳು ಒಂದು ಬಗೆಯಲ್ಲಿದ್ದರೆ ಅವರ ವೈಚಾರಿಕ ರಾಜಕೀಯ ನಂಬಿಕೆಗಳು ಇನ್ನೊಂದು ರೀತಿಯಲ್ಲಿದೆ. ಅವನ್ನಿಲ್ಲಿ ಗಮನಿಸುವ.

೧. ಸಮಾಜವಾದಿ ಚಿಂತನೆಗಳು ಈ ನಾಡಿನ ಪ್ರಗತಿಗೆ ಸೂಕ್ತ. ಅದರ ತತ್ವಗಳ ಮೂಲಕ ಜನತೆಯ ರಾಜಕಾರಣವನ್ನು ರೂಪಿಸಬಹುದು.

೨. ವರ್ಗ ಹೋರಾಟದಿಂದ ಜಾತಿ ನಿರ್ಮೂಲನ ಮಾಡಬಹುದು.

೩. ಗಾಂಧಿ, ಮಾರ್ಕ್ಸ್, ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಆಲೋಚನೆಗಳಿಂದ ಸ್ಥಳೀಯ ಪರ್ಯಾಯ ರಾಜಕಾರಣವನ್ನು ನಿರ್ಮಾಣ ಮಾಡುವ ಮೂಲಕ ಕರ್ನಾಟಕವನ್ನು ಬಲಪಡಿಸಬಹುದು.

೪. ಪಶ್ಚಿಮದ ನಾಗರೀಕತೆಗಳ ವಿವೇಚನೆಯ ಮೂಲಕ ನಮ್ಮ ಸಂಸ್ಕೃತಿ, ಸಮಾಜ, ಧರ್ಮ ಮತ್ತು ಸಾಹಿತ್ಯವನ್ನು ನವೀಕರಿಸಿಕೊಳ್ಳಬಹುದು.

ಸ್ಥೂಲವಾಗಿದ್ದ ಈ ವೈಚಾರಿಕವಾದ ರಾಜಕೀಯ ನಂಬಿಕೆಗಳು ನವ್ಯ ಲೇಖಕರಲ್ಲಿ ಒಂದೇ ಪ್ರಮಾಣದಲ್ಲಿ ಇರಲಿಲ್ಲ. ಪ್ರಮುಖವಾಗಿ ಯು.ಆರ್. ಅನಂತಮೂರ್ತಿ, ಲಂಕೇಶ್, ತೇಜಸ್ವಿ ಅವರಲ್ಲಿ ಮಾತ್ರ ಇಂತಹ ನಂಬಿಕೆಗಳು ಪ್ರಧಾನವಾಗಿದ್ದವು. ಗೋಪಾಲಕೃಷ್ಣ ಅಡಿಗರು ‘ಕಟ್ಟುವೆವು ನಾವು ಹೊಸ ನಾಡೊಂದನ್ನು ರಸದ ಬೀಡೊಂದನ್ನು’ ಎಂದು ಚಂಡೆ ಮದ್ದಲೆಯನ್ನು ಬಾರಿಸಿದವರು ಪರಿಶುದ್ಧ ಕಾವ್ಯದ ಮೂಲಕವೇ ಬೆಳೆದು ಕೊನೆಗೆ ಬಲಪಂಥೀಯ ವೇದಿಕೆಗಳಲ್ಲಿ ಗುರುತಿಸಿಕೊಂಡು ವೈಚಾರಿಕ ದ್ವಂದ್ವದಲ್ಲಿ ಸಿಲುಕಿದರು. ಜನಸಂಘದ ಬೆಂಬಲದಲ್ಲಿ ಚುನಾವಣೆಗೆ ಧುಮುಕಿ ಸೋತು ಹೋದರು. ನವೋದಯದವರಲ್ಲು ಇಂತಹ ಸ್ಥಿತಿ ಬಂದೊಂದಗಿದ್ದು ಶಿವರಾಮ ಕಾರಂತರು ಬಲಪಂಥೀಯ ಶಕ್ತಿಗಳ ಜೊತೆ ಕೈಜೋಡಿಸಿ ಚುನಾವಣಾ ರಾಜಕೀಯದಲ್ಲಿ ಮುಗ್ಗರಿಸಿದರು. ನವೋದಯದ ಬಹುಪಾಲು ಹಿರಿಯ ಲೇಖಕರು ಬಲಪಂಥೀಯ ವಿಚಾರಗಳ ಜೊತೆ ಸೌಜನ್ಯದಿಂದಲೇ ಇದ್ದವರಾಗಿದ್ದರು. ಡಿ.ವಿ.ಗುಂಡಪ್ಪನಂತವರು ಸೌಂದರ್ಯ ತತ್ವದ ಮೂಲಕ ಹಿಂದೂ ವಾದದ ಪ್ರತಿಪಾದಕರಾಗಿದ್ದರು. ಆ ಬಗೆಯ ಲೇಖಕರಲ್ಲಿ ಕುವೆಂಪು ಮಾತ್ರ ವೈರುಧ್ಯದಂತಿದ್ದರು. ಇಂತಹ ಹಿನ್ನೆಲೆಯನ್ನು ದಾಟಿ ಬಂದಿದ್ದ ನವ್ಯರಲ್ಲಿ ಅನಂತ ಮೂರ್ತಿ, ಲಂಕೇಶ, ತೇಜಸ್ವಿ ಅವರುಗಳು ನಿರ್ವಹಿಸಿದ ರಾಜಕೀಯ ಸಂಸ್ಕೃತಿಯ ಪಾತ್ರ ವಿಭಿನ್ನವಾದುದು. ಕರ್ನಾಟಕದ ಸಮಕಾಲೀನ ಸಮಸ್ಯೆಗಳೆಲ್ಲವುಗಳ ಜೊತೆ ನಿರಂತರ ಮುಖಾಮುಖಿಯಾಗುತ್ತ ಬಂದ ಈ ಲೇಖರಗಳು ವಿಚಾರಗಳು ‘ಶುದ್ಧ ನವ್ಯ’ದ ಚೌಕಟ್ಟಿಗೆ ಒಳಪಡುವುದಿಲ್ಲ. ನವ್ಯ ಲೇಖಕರಲ್ಲಿ ಅತ್ಯಂತ ತೀವ್ರವಾಗಿ ಏಕಾಂಗಿಯಾಗಿ ಕರ್ನಾಟಕದ ಜೊತೆಗೆ ವಾಗ್ವಾದ ಮಾಡುತ್ತ ಬಂದ ಲಂಕೇಶರ ನಡತೆಯಲ್ಲಿ ಅನೇಕ ಏರುಪೇರುಗಳಿವೆ. ಹಾಗೆಯೇ ಕನ್ನಡ ನಾಡಿನ ವರ್ತಮಾನದ ಸವಾಲುಗಳಿಗೆ ಅನಂತಮೂರ್ತಿಯವರು ವಿಭಿನ್ನವಾಗಿ ಮುಖಾಮುಖಿ ಆಗುತ್ತಲೇ ಬಂದದ್ದು ವಿಶಿಷ್ಟವಾಗಿದೆ. ನವ್ಯ ಪಂಥದ ವಕ್ತಾರರಂತಿದ್ದ ಅನಂತಮೂರ್ತಿಯವರು ಬೇರೆ ಬೇರೆ ಕಾಲಘಟ್ಟಗಳಲ್ಲಿ ಬದಲಾಗುತ್ತಲೇ ಬಂದವರು. ಮೇಲೆ ಉಲ್ಲೇಖಿಸಿದ ನವ್ಯ ಪಂಥದ ವೈಚಾರಿಕ ರಾಜಕೀಯರ ಪರಿನಾಮ ಏನಾಯಿತೆಂಬುದನ್ನು ಗಮನಿಸುವ.

೧. ಕರ್ನಾಟಕದಲ್ಲಿ ವಿಶೇಷವಾಗಿ ಸಮಾಜವಾದಿ ರಾಜಕಾರಣಿಗಳು ಕರ್ನಾಟಕದ ರಾಜಕಾರಣದಲ್ಲಿ ಪ್ರವೇಶಗೊಂಡರು. ನವ್ಯ ಪಂಥದ ಲೇಖಕರು ಇದಕ್ಕೆ ಕಾರಣವಲ್ಲದಿದ್ದರೂ ಸಮಾಜವಾದಿ ಚಿಂತನೆಯ ಲೇಖಕರು, ಯುವ ರಾಜಕಾರಣಿಗಳು ಒಂದಾಗಿ ಕಾಂಗ್ರೆಸ್ ಪ್ರಣೀತ ಏಕಾಧಿಪತ್ಯವನ್ನು ಎದುರಿಸಲು ಸಹಾಯವಾಯಿತು.

೨. ತುರ್ತು ಪರಿಸ್ಥಿತಿಯ ರಾಜಕೀಯ ಸರ್ವಾಧಿಕಾರವನ್ನು ಸಂಘಟನಾತ್ಮಕವಾಗಿ ಪ್ರತಿರೋಧಿಸಿ ನಾಡು ನುಡಿಯ ಅಸ್ತಿತ್ವಕ್ಕೆ ಧ್ವನಿಯಾಗಲು ಸಾಧ್ಯವಾಯಿತು. ನವ್ಯಪಂಥದ ಲೇಖಕರ ನಡುವೆಯೇ ಇದ್ದ ಶೂದ್ರ ಪ್ರಜ್ಞೆಯ ಲೇಖಕರು ಇದರಿಂದ ಸ್ಪಷ್ಟಗೊಳ್ಳುತ್ತ ರಾಜಕೀಯ ಜಾಗೃತಿಯನ್ನು ಮೂಡಿಸಲು ಸಾಧ್ಯವಾಯಿತು.

೩. ಕಾಗೋಡು ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಡರೈತ ಹಾಗೂ ಕೂಲಿ ಕಾರ್ಮಿಕರ ಪರವಾದ ಹಕ್ಕೋತ್ತಾಯವನ್ನು ಸಾಧಿಸಲಾಯಿತು.

೪. ಎಡಪಂಥೀಯ ವಿಚಾರಗಳು ಸ್ಥಳೀಯ ಸಮಾಜಗಳ ಸಮಸ್ಯೆಗಳ ಜೊತೆಗೆ ಬೆರೆತು ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟವು.

೫. ಸ್ಥಳೀಯ ರಾಜಕೀಯ ಸಂಘಟನೆ ಹಾಗು ಪಕ್ಷಗಳು ರೂಪುಗೊಳ್ಳಲು ಸಾಧ್ಯವಾಯಿತು.

ಇಂತಹ ಸಕಾರಾತ್ಮಕ ಪರಿಣಾಮಗಳು ನವ್ಯ ಪಂಥದ ಸಮಾಜವಾದಿ ಧೋರಣೆಗಳಿಂದ ಉಂಟಾದವು. ನವ್ಯ ಲೇಖಕರಲ್ಲೆ ವೈವಿಧ್ಯತೆ ಇದ್ದುದು ಮುಂದೆ ನವ್ಯ ಪಂಥದ ಒಳಗಿಂದಲೇ ಭಿನ್ನ ದನಿಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತು. ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಪಾಟೀಲರು ನವ್ಯದ ವಿಚಾರದ ಭಾಗವಾಗಿದ್ದರೂ ಅವರು ಬೆಳೆದು ಬಂದ ಹಿನ್ನೆಲೆಯ ಕಾರಣವಾಗಿ ಸಾಹಿತ್ಯ, ಸಮಾಜ, ಪ್ರಭುತ್ವಗಳ ಮುಖಾಮುಖಿಯಲ್ಲಿ ಭಿನ್ನವಾದರು. ನವ್ಯ ಪಂಥದ ಎರಡನೆ ಹಂತದಲ್ಲಿ ಈ ಮೂವರೂ ಲೇಖಕರು ಪ್ರಧಾನ ಪಾತ್ರವಹಿಸಿದ್ದಾರೆ. ಇವರ ವಿಚಾರಗಳು ಪೂರ್ವನವ್ಯದ ಪಡಿಯಚ್ಚಿನಂತಿರಲಿಲ್ಲ. ಶೂದ್ರಪ್ರಜ್ಞೆಯು ಈ ಮೂವರಲ್ಲಿ ದಟ್ಟವಾಗಿತ್ತು. ನವ್ಯದ ಮೊದಲ ಹಂತದ ವಿಚಾರಗಳನ್ನು ಉಲ್ಲಂಘಿಸುವ ಛಾತಿ ಈ ಲೇಖಕರಲ್ಲಿ ವಿಶೇಷವಾಗಿತ್ತು. ಹಾಗಾಗಿಯೇ ಲಂಕೇಶ್, ತೇಜಸ್ವಿ, ಚಂಪಾ, ಕಾಳೇಗೌಡ ನಾಗವಾರ, ಬೆಸಗರಹಳ್ಳಿ ರಾಮಣ್ಣ, ಶಾಂತರಸ, ವೀರಭದ್ರ ಮುಂತಾದವರ ಪ್ರಭುತ್ವದ ಎದುರಿನ ಪ್ರತಿರೋಧವು ಸೌಮ್ಯಸ್ವರೂಪದ್ದಾಗಿರಲಿಲ್ಲ.  ವ್ಯವಸ್ಥೆಯನ್ನು ಖಂಡಿಸುವ ನಿಟ್ಟಿನಲ್ಲಿ ಲಂಕೇಶ್ ಮತ್ತು ಚಂಪಾರ ಅಭಿವ್ಯಕ್ತಿಯು ಅತ್ಯಂತ ಮೊನಚಾದುದಾಗಿತ್ತು. ಸಾಹಿತ್ಯ ಸೃಷ್ಟಿಯೆ ಇವರ ಅಂತಿಮ ಗುರಿಯಾಗಿರಲಿಲ್ಲ. ಸಮಾಜದ ಮೇಲೆ ಪ್ರಭುತ್ವದ ಶೋಷಣೆಯನ್ನು ಎದುರಿಸುವಲ್ಲಿ ಇವರು ನಿರ್ವಹಿಸಿದ ಸಾಹಿತ್ಯಿಕ ಹೊಣೆಗಾರಿಕೆ ಉಳಿದೆಲ್ಲ ನವ್ಯ ಲೇಖಕರಿಗಿಂತ ಭಿನ್ನವಾಗಿತ್ತು. ಈ ಭಿನ್ನತೆ ಯಾವ ಪ್ರಮಾಣದಲ್ಲಿ ಮುಂದುವರಿಯಿತು ಎಂದರೆ ನವ್ಯದ ಮೊದಲ ಹಂತದ ಲೇಖಕರ ಆಲೋಚನೆಗೂ ತಮಗೂ ಯಾವ ಸಂಬಂಧವೂ ಇಲ್ಲ ಎಂಬ ಸ್ಥಿತಿಗೆ ಹೋಗಿ ಬರಹಗಾರರ ಒಕ್ಕೂಟ ನಿರ್ಮಾಣಕ್ಕೆ ನಾಂದಿಯಾಯಿತು.

ನವ್ಯ ಲೇಖಕರ ಅತಿ ಸೂಕ್ಷ್ಮತೆ ನಾಡಿನ ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿಯಾಗಲು ಅಡ್ಡಿಯಾಗಿತ್ತು. ಸಾಹಿತ್ಯದ ಶ್ರೇಷ್ಠತೆಯ ಕಡೆಗೆ ವಾಲಿದ್ದ ನವ್ಯ ಲೇಖಕರ ಸಾಮಾಜಿಕತೆಯು ಬೌದ್ಧಿಕವಾಗಿತ್ತೇ ಹೊರತು ವಾಸ್ತವವಾಗಿರಲಿಲ್ಲ. ಅತಿ ಸೂಕ್ಷ್ಮವಾಗಿ ವೈದಿಕ ಮೌಲ್ಯಗಳು ನವ್ಯ ಲೇಖರ ಒಳಗೆ ಜಾಗೃತವಾಗಿದ್ದುದನ್ನು ಬರಹಗಾರರ ಒಕ್ಕೂಟವು ಸ್ಪೋಟಿಸಿತು. ಪೂರ್ವ ಮತ್ತು ಪಶ್ಚಿಮಗಳ ನವ್ಯ ಲೇಖಕರ ವಿಚಾರಗಳಲ್ಲಿ ಬ್ರಾಹ್ಮಣ್ಯವೇ ಹೆಚ್ಚಾಗಿದೆ ಎಂಬ ಆರೋಪಗಳನ್ನು ಶೂದ್ರ ಪ್ರಜ್ಞೆಯ ಲೇಖಕರು ಬಹಿರಂಗವಾಗಿ ಮಾಡಿದರು. ಇದರಿಂದಾಗಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಕರ್ನಾಟಕದ ಸಾಹಿತ್ಯ ಮತ್ತು ಸಮಾಜಗಳ ಮಧ್ಯೆ ಬರಹಗಾರರ ಒಕ್ಕೂಟದ ದನಿಯು ನವ್ಯೋತ್ತರ ಕಥನಗಳಿಗೆ ದಾರಿ ಮಾಡಿತು.

ಎಪ್ಪತ್ತರ ದಶಕದಲ್ಲಿ ಧ್ವನಿಯಾದ ಬರಹಗಾರರ ಒಕ್ಕೂಟದ ಪರಿಣಾಮವು ಕರ್ನಾಟಕದ ಮಟ್ಟಿಗೆ ಮರೆಯಲಾಗದ್ದು. ಇಲ್ಲಿಂದಲೇ ಕನ್ನಡ ನಾಡಿನ ಅಲಕ್ಷಿತ ಜಗತ್ತು ಅನಾವರಣಗೊಳ್ಳಲು ಅವಕಾಶವಾದದ್ದು. ಇದೇ ವೇಳೆಗೆ ದೇವರಾಜ ಅರಸು ಅವರ ರಾಜಕಿಯ ಪರ್ವವೂ ಆರಂಭವಾದದ್ದು ಕಾಕತಾಳೀಯ. ಅಲ್ಲದೆ ಸ್ಥಳೀಯ ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳಲು ಅವಕಾಶವಾದದ್ದು ಏಕೀಕರಣೋತ್ತರ ಕರ್ನಾಟಕದ ಗತಿಶೀಲತೆಯಲ್ಲಿ ಗಮನಾರ್ಹವಾದದ್ದು. ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಕನ್ನಡ ಕನ್ನಡಿಗ ಕರ್ನಾಟಕದ ಬಗೆಗೆ ಹಲವು ತೆರನ ಚಳುವಳಿಗಳು ಮೈದಾಳಿದ್ದು ಕೂಡ ಈ ಕಾಲಘಟ್ಟದಲ್ಲೆ. ಕರ್ನಾಟಕದ ಭವಿಷ್ಯ ಕುರಿತಂತೆ ಅನೇಕ ಬಗೆಯ ಹೋರಾಟಗಳು ಆರಂಭವಾದದ್ದು ಎಪ್ಪತ್ತರ ದಶಕದಲ್ಲೆ. ನವ್ಯ ಸಾಹಿತ್ಯ ಪಂಥವು ಹಿನ್ನೆಲೆಗೆ ಸರಿಯ ತೊಡಗಿದ್ದು ಕೂಡ ಈ ಕಾಲದಲ್ಲೆ. ಮೊದಲ ಬಾರಿಗೆ ಕಾರ್ಮಿಕರು ರೈತರು, ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳು ಮತ್ತು ದಲಿತರು ಎಚ್ಚೆತ್ತುಕೊಳ್ಳಲು ಮುಂದಾದದ್ದು ಇದೇ ಸಂದರ್ಭದಲ್ಲೆ. ಹೀಗಾಗಿ ಕರ್ನಾಟಕದ ನಾಡು ನುಡಿಯ ಚರಿತ್ರೆಯಲ್ಲಿ ಎಪ್ಪತ್ತರ ದಶಕವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಹೀಗಾಗಿ ಸಾಹಿತಿಗಳ ನಿಜವಾದ ಬರಹ ಮತ್ತು ಬದುಕು ಸಾಮಾಜಿಕವಾಗಿ ಒಂದೇ ಆಗಬೇಕೆಂಬ ಎಚ್ಚರ ತಂತಾನೆ ಮೂಡಿತು. ಇದನ್ನು ಲಂಕೇಶ್ ತೇಜಸ್ವಿ ಚಂಪಾ ಸಮರ್ಥವಾಗಿ ನಿರ್ವಹಿಸಿದ್ದನ್ನು ಗಮನಿಸಬೇಕಾಗುತ್ತದೆ. ತೇಜಸ್ವಿ ಪರಿಶುದ್ಧ ಸಾಹಿತಿಯಾಗುವುದು ತಪ್ಪು ಎಂಬ ರೀತಿಯಲ್ಲಿ ಸಾಹಿತ್ಯದ ಗುಂಪುಗಳನ್ನು ತ್ಯಜಿಸಿದರು. ವ್ಯಕ್ತಿಯಾಗಿದ್ದು ಕೊಂಡೇ ಸಮಾಜದ ವಿಕಾಸಕ್ಕೆ ಬೇಕಾದ ಸಾಹಿತ್ಯಿಕ ನಿರೂಪಣೆಗಳನ್ನು ಮಾಡತೊಡಗಿದರು. ಲೋಹಿಯಾ ವಾದವನ್ನು ಕನ್ನಡದ ಚಿಂತನೆಗೆ ಅಳವಡಿಸಿದರು. ಸಮಾಜವಾದಿ ರಾಜಕೀಯ ಸಿದ್ಧಾಂತಗಳನ್ನು ಪ್ರಚಾರಪಡಿಸಿದರು. ಬರಹಗಾರರ ಒಕ್ಕೂಟದ ಅಂತರಂಗದಲ್ಲೂ ಇಂತಹ ಸೈದ್ಧಾಂತಿಕ ಬೀಜಗಳಿದ್ದವು. ರೈತರ ಆಂದೋಲನಕ್ಕೆ ಬೇಕಾದ ತಿಳುವಳಿಕೆಯನ್ನು ವಿಸ್ತರಿಸುವ ಕೆಲಸವೂ ಈ ವೇಳೆಯಲ್ಲೆ ನಂಜುಂಡಸ್ವಾಮಿ ಅವರ ಮೂಲಕ ಆರಂಭವಾಯಿತು. ಮೊಟ್ಟ ಮೊದಲ ಬಾರಿಗೆ ಶೂದ್ರ ಜಗತ್ತು ಕನ್ನಡ ನಾಡಿನ ಒಳಗೆಯೇ ತನ್ನ ಅಸ್ತಿತ್ವಕ್ಕಾಗಿ ಬೃಹತ್ ಪ್ರಮಾಣದಲ್ಲಿ ಹೋರಾಟಕ್ಕೆ ಇಳಿದುದು ಚರಿತ್ರಾರ್ಹ. ಮಧ್ಯಕಾಲೀನ ಕನ್ನಡ ಸಮಾಜದಲ್ಲಿ ಊಳಿಗಮಾನ್ಯ ಅಧಿಕಾರಕ್ಕೆ ಭಾದ್ಯಸ್ಥರಾಗಿದ್ದ ವಕ್ಕಲು ಸಮುದಾಯಗಳು ಏಕೀಕರಣೋತ್ತರ ಕರ್ನಾಟಕದಲ್ಲಿ ರೂಪಾಂತರಗೊಂಡು ಅನೇಕ ಸಮಸ್ಯೆಗಳಿಗೆ ಸಿಕ್ಕಿ ಹಾಕಿಕೊಂಡಿದ್ದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಂಟಾದ ಎಲ್ಲ ಬದಲಾವಣೆಗಳ ನಡುವೆ ಸಿಲುಕಿದ ರೈತ ವರ್ಗಗಳು ವ್ಯವಸ್ಥೆಯ ವಿರುದ್ಧ ದಂಗೆ ಏಳಬೇಕಾದ ಅನಿವಾರ್ಯತೆ ಉಂಟಾಯಿತು. ರಾಷ್ಟ್ರ ಮತ್ತು ನಾಡಿನ ಹೊರೆ ಹೊತ್ತ ರೈತ ಸಮಾಜವನ್ನು ರಕ್ಷಿಸುವ ಹೊಣೆಗಾರಿಕೆ ಆ ಸಮಾಜದ ಪ್ರಜ್ಞಾವಂತರ, ಸಾಹಿತಿಗಳ ಚಿಂತಕರ, ಹೋರಾಟಗಾರರ ಹಾಗೂ ಪ್ರಾಮಾಣಿಕ ರಾಜಕಾರಣಿಗಳ ಕರ್ತವ್ಯ ಎಂಬ ಮನೋಭಾವನೆ ಎಪ್ಪತ್ತರ ದಶಕದಲ್ಲಿ ವಿಶೇಷವಾಗಿ ಉಂಟಾಯಿತು. ಇದೇ ಕಾಲದಲ್ಲಿ ಸಾಮಾಜಿಕ ನ್ಯಾಯದ ಭಾಗವಾಗಿ ಶ್ರೀಮತಿ ಇಂದಿರಾಗಾಂಧಿ ಅವರು ಇಪ್ಪತ್ತೊಂದು ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು ರೈತ ವರ್ಗಗಳಿಗೆ ನುಂಗಲಾರದ ಗಾಳವಾಗಿತ್ತು. ಉಳುವವನೇ ಭೂ ಒಡೆಯ ಎಂಬ ತತ್ವವು ಸಾಂಪ್ರದಾಯಿಕ ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವಾಗಿತ್ತು. ಇಂತಹ ಅನೇಕ ತೊಡಕುಗಳ ಮಧ್ಯೆ ನರಳುತ್ತಿದ್ದ ರೈತ ಸಮೂಹಗಳನ್ನು ಸಂಘಟಿಸಲು ದಾರಿ ತೋರಲು ಅವರ ಸಹಜ ಹಕ್ಕುಗಳನ್ನು ಸಾಧಿಸಲು ನೇತಾರನೊಬ್ಬ ಬೇಕಿತ್ತು. ಅದನ್ನು ನಂಜುಂಡಸ್ವಾಮಿ ತಕ್ಕ ಸಾಮರ್ಥ್ಯದಲ್ಲಿ ನಿರ್ವಹಿಸಿದರು.

ಇದರಿಂದ ದಿಕ್ಕು ತಪ್ಪಿದ ರೈತ ಸಮೂಹಕ್ಕೆ ಬಲಬಂದಿತ್ತು. ರೈತ ಸಂಘದ ಉದಯಕ್ಕೂ ಕರ್ನಾಟಕದ ನಾಡು ನುಡಿಯ ಹಾದಿಗೂ ಸಂಬಂಧವಿದೆ. ಕನ್ನಡದ ಬಡಪಾಯಿ ರೈತರನ್ನು ಉಳಿಸಿಕೊಳ್ಳುವ ಹೋರಾಟ ಕೂಡ ಕನ್ನಡ ಭಾಷೆ, ಸಂಸ್ಕೃತಿ, ಸಮಾಜದ ಬಹು ಆಯಾಮಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದಷ್ಟೇ ಮುಖ್ಯ. ನಂಜುಂಡಸ್ವಾಮಿ ಅವರು ಕುವೆಂಪು ಅವರ ಆಶಯದಂತೆ ನೇಗಿಲ ಯೋಗಿಗಳ ಆಂದೋಲನವನ್ನು ಕರ್ನಾಟಕದಲ್ಲಿ ಮಾಡಿದರು. ಇದಕ್ಕೆ ಬೆಂಬಲವಾಗಿ ನಿಂತದ್ದು ಎಪ್ಪತ್ತರ ದಶಕದ ಬಹುಪಾಲು ಎಲ್ಲ ಶೂದ್ರ ಲೇಖಕರು. ಅದರಲ್ಲು ತೇಜಸ್ವಿ ಅವರಂತು ರೈತ ಸಂಘದ ಅಂತರಂಗದ ಮಾರ್ಗಸೂಚಿಯಾಗಿದ್ದರು. ಅವರಿಗಿದ್ದ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮತ್ತು ಶಾಂತವೇರಿ ಗೋಪಾಲ ಗೌಡರ ಚಿಂತನೆಗಳ ಸಂಬಂಧವನ್ನು ಸೂಕ್ತವಾಗಿ ಕನ್ನಡ ನಾಡಿನ ರೈತ ಆಂದೋಲನಕ್ಕೆ ತೊಡಗಿಸಿದ್ದುದ ಸಾಹಿತ್ಯದ ಚೌಕಟ್ಟನ್ನು ಮೀರಿದ್ದಾಗಿತ್ತು. ಸಾಹಿತ್ಯ ಪಂಥವೊಂದು ಮಾಡಲಾಗದ್ದನ್ನು ಚಳುವಳಿಗಳು ಸಾಧಿಸುತ್ತವೆ. ಆದರೆ ಸಾಹಿತ್ಯ ಪಂಥಗಳೂ ಅಂತರಂಗದಲ್ಲಿ ನಾಡು ನುಡಿಯ ನಿರ್ಮಾಣದ ಸೌಮ್ಯ ಕ್ರಾಂತಿಯನ್ನು ಭಾಷಿಕವಾಗಿ ನಿರ್ವಹಿಸುತ್ತಿರುತ್ತವೆ. ಇದರಿಂದಾಗಿಯೇ ನವ್ಯ ಲೇಖಕರಲ್ಲಿ ಭಿನ್ನವಾಗಿದ್ದ ಲಂಕೇಶ್, ತೇಜಸ್ವಿ, ಚಂಪಾ ಇವರು ರೈತ ಚಳುವಳಿಯಲ್ಲಿ ಪರೋಕ್ಷವಾಗಿ ಸ್ಪಂದಿಸಿದ್ದರು. ಆದರೆ ಕರ್ನಾಟಕದ ನವ ನಿರ್ಮಾಣದ ಸಂದರ್ಭದಲ್ಲಿ ಈ ಮೂರು ಲೇಖಕರ ಜೊತೆಗೆ ರೈತ ನಾಯಕರಾಗಿದ್ದ ನಂಜುಂಡಸ್ವಾಮಿಯವರು ಸೂಕ್ತವಾಗಿ ಸಂಬಂಧ ಮಾಡಲಿಲ್ಲ. ಆರಂಭದಲ್ಲಿ ತೇಜಸ್ವಿಯವರ ಜೊತೆ ನಂಜುಂಡಸ್ವಾಮಿ ಅವರಿಗೆ ಸಖ್ಯವಿತ್ತಾದರೂ ಅದು ಮುಂದೆ ಕವಲಾಯಿತು.

ಎಪ್ಪತ್ತರ ದಶಕದ ವೈಚಾರಿಕ ಜಾಗೃತಿಯ ಕಾರಣವಾಗಿಯೇ ನವ್ಯ ಸಾಹಿತ್ಯ ಹಿಂದೆ ಸರಿದದ್ದು. ಆದರೆ ಅನಂತಮೂರ್ತಿಯವರು ಮಾತ್ರ ಸಮಕಾಲೀನ ಸಂವೇದನೆಗಳಿಗೆ ತೆತ್ತುಕೊಳ್ಳುತ್ತಲೇ ತಮ್ಮ ಮೂಲ ನವ್ಯ ಚಿಂತನೆಗಳನ್ನು ನವೀಕರಿಸಿಕೊಳ್ಳುತ್ತ ಬಂದವರು. ಇದೇ ಬಗೆಯಲ್ಲಿ ಪ್ರಗತಿಶೀಲ ಲೇಖಕರೆನಿಸಿಕೊಂಡಿದ್ದ ಚದುರಂಗರು ಕೊನೆ ಹಂತದಲ್ಲಿ ದಲಿತ ಬಂಡಾಯದ ಪರಿಧಿಗೆ ಬಂದು ಗುರುತಿಸಿಕೊಂಡಿದ್ದರು. ನಾಡಿನ ಬೇರೆ ಬೇರೆ ಅನುಭವಗಳ ಜೊತೆ ಒಂದಾಗುವ ಈ ಬಗೆಯು ಸಾಮಾಜಿಕ ಬದಲಾವಣೆಯ ಅನಿವಾರ್ಯತೆಯಿಂದ ಬಂದಿರುತ್ತದೆ. ಚದುರಂಗರು ಹೀಗಾಗಿಯೇ ಕೊನೆ ತನಕ ಕರ್ನಾಟಕದ ಎಲ್ಲ ಚಳುವಳಿಗಳಿಗೂ ಸಂಬಂಧ ತೋರಿದ್ದು.

ಅಂದರೆ ಕರ್ನಾಟಕದ ನವ ನಿರ್ಮಾಣದ ಆಶಯಕ್ಕೆ ಸ್ಪಂಧಿಸಿದ ಲೇಖಕರು ತಮ್ಮ ಕಾಲದ ಚಳುವಳಿಗೆ ವಿಮುಖರಾಗಿರಲಿಲ್ಲ. ಅನಂತಮೂರ್ತಿಯವರು ಭಾಷಾ ಚಳುವಳಿಗಳ ಬಗ್ಗೆ ವಿಮರ್ಶಾತ್ಮಕವಾಗಿದ್ದುದು ಕೂಡ ನಾಡಿನ ನಡತೆಯ ಬಗೆಗಿನ ಕಾಳಜಿಯೇ ಆಗಿತ್ತೆಂಬುದನ್ನು ಅಲ್ಲಗಳೆಯಲಾಗದು. ತೇಜಸ್ವಿ ಚಳುವಳಿಗಳಿಂದ ದೂರ ಸರಿದು ‘ಕಾಡು’ ಸೇರಿಕೊಂಡ ನಂತರದಲ್ಲಿ ಲಂಕೇಶ್ ಮತ್ತು ಚಂಪಾ ಅವರ ಪಾತ್ರವು ಕರ್ನಾಟಕದಲ್ಲಿ ಬೇರೊಂದು ರೂಪ ಪಡೆದುಕೊಂಡಿತು. ಚಳುವಳಿಗಳೇ ದೊಡ್ಡ ಹೊಣೆಯನ್ನು ನಿರ್ವಹಿಸಿದ್ದರಿಂದ ಸಾಹಿತ್ಯ ಪಂಥಗಳು ಕೂಡ ಚಳುವಳಿಯ ಗುಣವನ್ನೆ ಪಡೆದುಕೊಳ್ಳಬೇಕಾದದ್ದು ಎಪ್ಪತ್ತರ ದಶಕದ ಪ್ರಭಾವದ ಕಾರಣವಾಗಿಯೆ. ಕರ್ನಾಟಕದ ಭವಿಷ್ಯವನ್ನು ರೂಪಿಸುವ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಈ ಕಾಲದ ಎಲ್ಲ ಚಳುವಳಿಗಳಲ್ಲಿ ಕಂಡು ಬರುವ ಅಂಶ ಬಹಳ ಮುಖ್ಯವಾದುದು. ಆ ಅಂಶವೇ ಸಾಮಾಜಿಕ ನ್ಯಾಯ. ಕನ್ನಡಿಗರ ಅಸ್ತಿತ್ವಕಾಯುವ ಬಹುಮುಖಿ ಹುಡುಕಾಟ. ಇದರ ಭಾಗವಾಗಿಯೇ ದಲಿತ ಬಂಡಾಯ ಸಾಹಿತ್ಯ ಪಂಥಗಳು ಹುಟ್ಟಿಕೊಂಡದ್ದು.

ನವ್ಯ ಸಾಹಿತ್ಯ ಪಂಥವು ನವೋದಯ ಹಾಗೂ ಪ್ರಗತಿಶೀಲ ಸಾಹಿತ್ಯದಂತೆ ನಿರ್ದಿಷ್ಟ ಕಾಲಮಾನಕ್ಕೆ ಒಳಗಾದರೂ ಅದು ಬೇರೆ ಬೇರೆ ರೂಪಾಂತರಗಳಲ್ಲಿ ಈಗಲೂ ಜೀವಂತವಿದೆ. ಹಾಗಾಗಿ ಆ ಪಂಥದ ಅಧಿಕೃತ ವಕ್ತಾರರಾಗಿ ಯು.ಆರ್. ಅನಂತಮೂರ್ತಿ ಯವರು ಸಾಹಿತ್ಯ ಸೃಷ್ಟಿಯಲ್ಲಿದ್ದಾರೆ. ನವ್ಯ ಪಂಥವು ಮುಗಿದ ಅಭಿವ್ಯಕ್ತಿಯಲ್ಲ. ಸಮಕಾಲೀನ ಯುವ ಲೇಖಕರಲ್ಲಿ ನವ್ಯದ ರೂಪಾಂತರ ಮಾದರಿಗಳನ್ನು ಕಾಣಬಹುದು. ಆದರೆ ನವ್ಯ ಪಂಥದ ಜೀವಂತ ಸಂಧಿ ಕಾಲದಲ್ಲೆ ದಲಿತ ಬಂಡಾಯ ಅಭಿವ್ಯಕ್ತಿಗಳೂ ಪ್ರಧಾನ ಧನಿಯಾಗಿ ಮುನ್ನೆಲೆಗೆ ಬಂದುದು. ಎಪ್ಪತ್ತರ ದಶಕದ ಕರ್ನಾಟಕದ ಚಳುವಳಿಯ ಕಾವಿನಲ್ಲಿ ಶೂದ್ರರು ಮತ್ತು ದಲಿತರು ಎತ್ತಿದ ಸಾಹಿತ್ಯದ ಪ್ರಶ್ನೆಗಳಲ್ಲೆ ಕರ್ನಾಟಕದ ಸಾಮಾಜಿಕ ವ್ಯವಸ್ಥೆಯ ಪ್ರಶ್ನೆಗಳೂ ಸೇರಿದ್ದವು. ಬರಹಗಾರರ ಒಕ್ಕೂಟದಲ್ಲಿ ಪ್ರಧಾನ ಭಾಷಣ ಮಾಡಿದ್ದ ಕುವೆಂಪು ಅವರು ನೇರವಾಗಿ ವೈದಿಕಷಾಹಿಯ ಪುರೋಗಾಮಿ ತತ್ವಗಳ ವಿರುದ್ಧ ಸಮರ ಸಾರಿದ್ದರು. ಕುವೆಂಪು ಬಿತ್ತಿದ ಎಚ್ಚರವೆ ಮುಂದೆ ದಲಿತ ಬಂಡಾಯ ಸಾಹಿತ್ಯ ಚಳುವಳಿಗೆ ಕಾರಣವಾಯಿತು. ಅಲ್ಲದೆ ಅದೇ ಕಾಲಕ್ಕೆ ಬಸವಲಿಂಗಪ್ಪನವರ ಕ್ರಾಂತಿಕಾರಕ ‘ಭೂಸಾಸಾಹಿತ್ಯದ’ ಮಾತುಗಳು ದಲಿತ ಸಮುದಾಯವನ್ನು ಆಳವಾಗಿ ತಟ್ಟಿದ್ದವು. ಏಕಕಾಲಕ್ಕೆ ದಲಿತಬಂಡಾಯ ಚಿಂತನೆಗಳು ಹೋರಾಟದ ಸ್ವರೂಪ ಪಡೆದುಕೊಂಡವು.