ಕನ್ನಡ ನಾಡಿನ ಅರುಣೋದಯದ ಭಾಗವಾಗಿಯೆ ನವೋದಯ ಸಾಹಿತ್ಯವು ರೂಪುಗೊಂಡಿರುವುದು. ಏಕೀಕರಣ ಚಳುವಳಿಯಲ್ಲಿ ನೇರವಾಗಿ ತೊಡಗಿದ ಲೇಖಕರೇ ನವೋದಯ ಸಾಹಿತ್ಯ ಪಂಥವನ್ನು ಬೆಳೆಸಿದರು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕನ್ನಡ ಸಾಹಿತ್ಯವು ತಲೆ ಎತ್ತಬೇಕಾದ ಒತ್ತಡವು ತೀವ್ರವಾಗಿತ್ತು. ನವೋದಯದ ಲೇಖಕರು ಗಾಢವಾದ ರಾಷ್ಟ್ರೀಯ ಭಾವನೆಯಲ್ಲಿ ಕನ್ನಡನಾಡು ನುಡಿಯನ್ನು ಕನ್ನಡಿಗರನ್ನೂ ಪ್ರತಿನಿಧಿಸಿದರು. ಗಾಂಧೀಜಿಯ ಪ್ರಭಾವ ಎಲ್ಲ ಪ್ರಾಂತೀಯ ಭಾಷೆಗಳ ಮೇಲೂ ಗಾಢವಾಗಿತ್ತು. ಸ್ವತಃ ಕನ್ನಡ ಸಮಾಜವೂ ತನ್ನ ಹೊಸ ಜೀವನ ಶೋಧಕ್ಕೆ ಅಣಿಯಾಗಿತ್ತು. ಸಾಹಿತ್ಯದ ಮೂಲಕ ನಾಡಿನ ಘನತೆಯನ್ನು ಕಾಯುವಲ್ಲಿ ನವೋದಯ ಸಾಹಿತ್ಯದ ಪಾತ್ರ ಹಿರಿದಾದುದು. ಕನ್ನಡ ನಾಡಿನ ಚರಿತ್ರೆಯ ಗತವು ಈ ಲೇಖಕರಿಂದ ಪ್ರತಿಧ್ವನಿಸಿತು. ನವೋದಯ ಕಾಲಘಟ್ಟವು ಕರ್ನಾಟಕದ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಹಂತ. ನಾಡು ನುಡಿಯ ಪುನರ್ ನಿರ್ಮಾಣದ ಹೊಣೆಗಾರಿಕೆಯನ್ನು ನವೋದಯ ಕಾಲದ ಲೇಖಕರು, ಚಿಂತಕರು, ಚಳುವಳಿಗಾರರು ಹೊತ್ತಂತೆ ಉಳಿದ ಸಾಹಿತ್ಯ ಪಂಥದ ಲೇಖಕರು ಹೊರಲು ಸಾಧ್ಯವಿರಲಿಲ್ಲ. ಅಖಂಡ ಭಾರತದ ಬೃಹತ್ ವ್ಯವಸ್ಥೆ ಒಳಗಿದ್ದುಕೊಂಡೇ ತಮ್ಮ ಪ್ರಾಂತೀಯ ಕುರುಹುಗಳನ್ನು ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕವೇ ಪುನರ್ ಸ್ಥಾಪಿಸಿಕೊಳ್ಳಬೇಕಾದ ಒತ್ತಡ ನವೋದಯ ಲೇಖಕರಿಗೆ ಇತ್ತು. ಅದರಿಂದಲೇ ತಮ್ಮದೇ ಪ್ರಭುತ್ವ, ತಮ್ಮದೇ ಸಮಾಜ ಹಾಗೆಯೇ ತಮ್ಮದೇ ದೇಶೀಯ ಸಾಹಿತ್ಯದ ಬೇರುಗಳ ಮೂಲಕ ಉದಾರ ಮಾನವತಾ ಮೌಲ್ಯಗಳನ್ನು ಸಾಕಾರಗೊಳಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ನವೋದಯ ಲೇಖಕರು ಜನಸಾಮಾನ್ಯರ ನಾಡು ನುಡಿಯ ನಾಡಿ ಬಡಿತವನ್ನು ಗ್ರಹಿಸಿ ಹೊಸ ನಾಡಿನ ಹಾಡನ್ನು ರೂಪಿಸಿದರು. ನವೋದಯ ಕಾಲದ ಒಟ್ಟು ಸಂವೇದನೆಯನ್ನು ಈ ಕೆಳಗಿನಂತೆ ಗುರುತಿಸಬಹುದು.

೧. ಭವ್ಯವಾದ ದಿವ್ಯ ನಾಡು ನುಡಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಸಂಪತ್ತನ್ನು ಜರೂರಾಗಿ ಸಂರಕ್ಷಿಸಿ ಪುನರ್ರಚಿಸಿಕೊಳ್ಳಬೇಕು.

೨. ದೇಶೀಯ ಪರಂಪರೆಗಳನ್ನು ಪ್ರಧಾನ ಸಂಸ್ಕೃತಿಗಳ ಜೊತೆಗೆ ವಿಲೀನಗೊಳಿಸಿಕೊಳ್ಳಬೇಕು.

೩. ಕನ್ನಡ ಜನತೆಯ ಏಳಿಗೆಗೆ ಬೇಕಾದ ಹಕ್ಕೊತ್ತಾಯಗಳನ್ನು ಹೊರಡಿಸಬೇಕು.

೪. ಸಾಹಿತ್ಯ ಮತ್ತು ಪ್ರಭುತ್ವದ ನಡುವೆ ಸಾಮರಸ್ಯವಿರಬೇಕಿದ್ದು ಪ್ರಭುತ್ವವನ್ನು ಕ್ರಿಯಾಶೀಲಗೊಳಿಸಬೇಕು.

೫. ಸಾಹಿತ್ಯ ಸಂವೇದನೆಯ ಮೂಲಕ ಸರ್ವೋದಯವನ್ನು ಸ್ಥಾಪಿಸಬೇಕು.

೬. ಜನತೆಯ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಜತನವಾಗಿ ಸಂಗ್ರಹಿಸಿ ದಾಖಲಿಸಿ ಕಾಪಾಡಬೇಕು.

೭. ಪ್ರಾಚೀನ ಶಾಸ್ತ್ರಗ್ರಂಥಗಳನ್ನಾಗಲಿ ಮರೆಯಾಗಿರುವ ಸಾಹಿತ್ಯ ಗ್ರಂಥಗಳನ್ನಾಗಲಿ ಶೋಧಿಸಿ ಪರಿಷ್ಕರಿಸಿ ಪ್ರಕಟಿಸಬೇಕು.

೮. ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಮತಧರ್ಮ ಹಾಗೂ ಸಮಾಜಗಳ ಚರಿತ್ರೆಯನ್ನು ಪುನರ್ರಚಿಸಿಕೊಳ್ಳಬೇಕು.

೯. ಪ್ರಾಚೀನ ಸಂಸ್ಕೃತ ಭಾಷೆಯ ಜೊತೆಗೆ ಕನ್ನಡದ ಅಸ್ಮಿತೆಯನ್ನು ಗುರುತಿಸಿಕೊಳ್ಳುತ್ತಲೇ ಪ್ರಾಚೀನ ಸಂಸ್ಕೃತ ಸಾಹಿತ್ಯ ಮೀಮಾಂಸೆಯ ಗುಣಗಳನ್ನು ಕನ್ನಡಕ್ಕೆ ತಂದುಕೊಳ್ಳಬೇಕು.

೧೦. ಪಶ್ಚಿಮದ ಸಾಹಿತ್ಯ ಪರಂಪರೆಗಳ ಜೊತೆಗೆ ಕನ್ನಡವು ಅನುಸಂಧಾನ ಮಾಡಿಕೊಳ್ಳುವಂತಾಗಿ ಕನ್ನಡ ಸಾಹಿತ್ಯವನ್ನು ಸಂವರ್ಧಿಸಿಕೊಳ್ಳಬೇಕು.

೧೧. ದಿವ್ಯವಾದ ಸೌಂದರ್ಯಾನುಭೂತಿಯಲ್ಲಿ ಸತ್ಯದ ಸಾಕ್ಷಾತ್ಕಾರದ ಜೊತೆಗೆ ಸಮಾಜಕ್ಕೆ ಮುಕ್ತಿ ಮಾರ್ಗವನ್ನು ನಿರೂಪಿಸಬೇಕು.

೧೨. ಕನ್ನಡ ನಾಡಿನ ಮೂಲಕವೇ ಭರತ ಭೂಮಿಯನ್ನು ಬಲಪಡಿಸಬೇಕು.

ಈ ಬಗೆಯ ಆಶಯಗಳು ನವೋದಯ ಸಾಹಿತ್ಯ ಪಂಥದ ಕೇಂದ್ರ ಕಾಳಜಿಯಾಗಿದ್ದುದನ್ನು ಗಮನಿಸಬಹುದು. ನವೋದಯದ ಲೇಖಕರು ಗಾಂಧಿ ಪ್ರಣೀತ ಚಿಂತನೆಗಳಲ್ಲಿ ವಿಶ್ವಾಸವಿಟ್ಟಿದ್ದು, ಭರತ ಖಂಡದ ಪರಿಕಲ್ಪನೆಯಲ್ಲಿ ಕಾಳಜಿ ಇಟ್ಟಿದ್ದವರು. ಸಮಾಜದ ಎಲ್ಲರ ಉದ್ದಾರವೇ ನಿಜವಾದ ನಾಡುನುಡಿಯ ಉದ್ಧಾರ ಎಂಬ ಭಾವನೆ ಬಹುಪಾಲು ಎಲ್ಲ ನವೋದಯದವರಿಗೆ ಇತ್ತು. ಆದ್ದರಿಂದಲೇ ನವೋದಯ ಲೇಖಕರು ಕೇವಲ ಸಾಹಿತ್ಯದ ದಂತಗೋಪುಗಳಲ್ಲಿ ಉಳಿಯದೆ ಕನ್ನಡ ನಾಡಿನ ಅರುಣೋದಯಕ್ಕೆ ದುಡಿದವರಾಗಿದ್ದರು. ಬಿ.ಎಂ.ಶ್ರೀ. ಅವರು ಹಾಕಿಕೊಟ್ಟ ಇಂತಹ ಮಾರ್ಗದರ್ಶನವು ಅಖಂಡ ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕೃತಿಗಳ ಲೋಕವನ್ನೆ ಹುಡುಕಿ ಚರಿತ್ರೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಆದ್ದರಿಂದಲೇ ಪ್ರತಿಯೊಬ್ಬ ನವೋದಯ ಲೇಖಕರು ನಾಡುನುಡಿಯ ಕುರಿತಂತೆ ಗಾಢವಾದ ಅಭಿವ್ಯಕ್ತಿ ಸಂಬಂಧವನ್ನು ಸಾಧ್ಯವಾಗಿಸಿಕೊಂಡದ್ದು.

ಗಮನಿಸಬೇಕಾದ ಅಂಶವೆಂದರೆ ನವೋದಯ ಲೇಖಕರ ಆಶೋತ್ತರಗಳಿಗೂ ಆ ಕಾಲಕ್ಕೆ ರಾಜ್ಯದ ರಾಜಕಾರಣವನ್ನು ನಿರ್ವಹಿಸಿ ಪ್ರಭುತ್ವದ ಭಾಗವಾಗಿದ್ದ ರಾಜಕಾರಣಿಗಳಿಗೂ ಆಳದಲ್ಲಿ ನಾಡುನುಡಿಯ ಬಗ್ಗೆ ಒಂದೇ ಭಾವನೆ ಇದ್ದದ್ದು. ಕನ್ನಡ ನಾಡನ್ನು ಕಟ್ಟುವ ರಾಜಕಾರಣಿಗಳಲ್ಲಿ ಅನೇಕರು ಗಾಂಧೀಜಿಯ ಸ್ವಾತಂತ್ರ್ಯ ಚಳುವಳಿಯಲ್ಲಿ ನೇರ ಅಥವಾ ಪರೋಕ್ಷವಾಗಿ ಭಾಗವಹಿಸಿದವರಾಗಿದ್ದರು. ನಾಡನ್ನು ಕಟ್ಟುವ ಉತ್ಸಾಹ ಮತ್ತು ಯೋಗ್ಯ ಆಲೋಚನೆಯಿದ್ದವರೆ ಆ ಕಾಲದಲ್ಲಿ ರಾಜಕಾರಣದಲ್ಲಿ ವಿಶೇಷವಾಗಿದ್ದರು. ಇದರಿಂದಾಗಿ ನವೋದಯ ಲೇಖಕರ ಆಶಯಗಳು ಪ್ರಭುತ್ವಕ್ಕೆ ಸಹಕಾರಿಯಾಗಿದ್ದವು. ಹಾಗಿದ್ದರೂ ನವೋದಯ ಲೇಖಕರೆಲ್ಲ ಪ್ರಭುತ್ವದ ಅಳತೆಗನುಗುಣವಾಗಿಯೇ ಇದ್ದರೆಂದಲ್ಲ. ಪ್ರಭುತ್ವದ ಜೊತೆ ಸದೂರದಲ್ಲಿದ್ದುಕೊಂಡೆ ಪ್ರಭುತ್ವಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ನವೋದಯ ಲೇಖಕರಿಗಿತ್ತು. ವೈರುಧ್ಯ ಸಂಬಂಧಗಳು ಕಾಣುವಂತಿರಲಿಲ್ಲ. ಸಾಹಿತ್ಯ ಸೃಷ್ಟಿಯ ನಿಷ್ಠೆಯಲ್ಲಿ ಮುಳುಗಿದ್ದ ನವೋದಯ ಲೇಖಕರು ಕರ್ನಾಟಕದ ಅಂತರಂಗದಲ್ಲಿ ಬಚ್ಚಿಟ್ಟು ಹೋಗಿದ್ದ ಅನೇಕ ಸಂಗತಿಗಳನ್ನು ಹೊರತೆಗೆದರು. ಆ ಮೂಲಕ ಕನ್ನಡ ನಾಡಿನ ಚರಿತ್ರೆಯು ಒಂದು ನಿಶ್ಚಿತ ರೂಪಕ್ಕೆ ಒಳಗಾಯಿತು.

ನವೋದಯ ಕಾಲದ ಕವಿಗಳು ನಾಡನ್ನು ರೂಪಕ ಭಾಷೆಯಲ್ಲಿ ನಿರೂಪಿಸುವ ಕೆಲಸ ಮಾಡುತ್ತಿದ್ದ ಹಂತದಲ್ಲೆ ಮತ್ತೊಂದು ಮಹತ್ವದ ಹೊಣೆಗಾರಿಕೆಯನ್ನು ಶಾಸ್ತ್ರಕಾರರು ಮಾಡಿದ್ದನ್ನು ಯಾವತ್ತೂ ನೆನೆಯಲೇಬೇಕು. ಸಾಹಿತ್ಯ ಸಂಶೋಧನೆಯ ಮೂಲಕವೇ ಕನ್ನಡ ಭಾಷೆಯ ಚರಿತ್ರೆ, ಕನ್ನಡ ನಾಡಿನ ಸಾಮ್ರಾಜ್ಯಗಳ ಚರಿತ್ರೆ, ಕನ್ನಡ ಸಮುದಾಯಗಳ ಸಾಮಾಜಿಕ ಸಂಬಂಧಗಳ ಕುರಿತಂತೆ ಗಾಢವಾದ ಸಂಶೋಧನೆಗಳು ಈ ಕಾಲದಲ್ಲೇ ನಡೆದದ್ದು. ಕನ್ನಡ ನಾಡಿನ ಗತ ಕಾಲವನ್ನು ಪುನರ್ರಚಿಸುವ ಕರ್ತವ್ಯದಲ್ಲಿ ಬಿ.ಎಂ.ಶ್ರೀ., ಎ.ಆರ್. ಕೃಷ್ಣಶಾಸ್ತ್ರಿ, ಶಂಭಾ ಜೋಷಿ, ಫ.ಗು. ಹಳಕಟ್ಟಿ, ಶ್ರೀಕಂಠಶಾಸ್ತ್ರಿ, ಎಸ್.ಎಸ್. ಭೂಸನೂರುಮಠರಂತಹ ಅನೇಕ ಹಿರಿಯರ ಸಂಶೋಧನೆಯ ವಿಚಾರಗಳಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ಇಂತವರ ಬರಹ ಶುದ್ಧ ಸಾಹಿತ್ಯ ಮೂಲದ್ದಲ್ಲ. ವಿಶೇಷವಾಗಿ ಅದು ಸಂಸ್ಕೃತಿ ಮತ್ತು ಚರಿತ್ರೆಗೆ ನೇರವಾಗಿ ಸಂಬಂಧಿಸುವ ಸಂಗತಿ. ನವೋದಯ ಕಾಲದ ವಿದ್ವಾಂಸರು ಕರ್ನಾಟಕದ ಏಕೀಕರಣದ ಆಶಯಕ್ಕೆ ಬದ್ಧವಾದಂತೆಯೇ ಕೆಲಸ ಮಾಡಿದರು. ಅವರ ಆಲೋಚನೆ ಸಂಶೋಧನೆ ಅಧ್ಯಯನಗಳ ಸ್ವರೂಪವನ್ನು ಈ ಕೆಳಗಿನಂತೆ ಗುರುತಿಸಬಹುದು.

೧. ಕನ್ನಡ ಸಂಸ್ಕೃತಿಯ ವಿಶಿಷ್ಟತೆಯನ್ನು ಶೋಧಿಸುವುದು. ಅದರ ಮೂಲ ಬೇರುಗಳನ್ನು ಸಮರ್ಥಿಸಿಕೊಳ್ಳುವುದು. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಪತ್ತೆ ಮಾಡಿ ದಾಖಲಿಸುವುದು.

೨. ಕನ್ನಡ ನಾಡು ಮತ್ತು ಅದರ ಸಮಾಜವನ್ನು ಗುರುತಿಸಿಕೊಳ್ಳುವುದು. ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯುತ್ತಲೇ ಸಮಾಜಗಳಿಗೂ ಇರುವ ಚಹರೆಗಳನ್ನು ಕನ್ನಡ ಅಸ್ಮಿತೆಯಲ್ಲಿ ಬಿಂಬಿಸುವುದು.

೩. ಗತಕಾಲದ ಕನ್ನಡ ಸಾಮ್ರಾಜ್ಯದ ಪ್ರಭುತ್ವವನ್ನು ಅಭಿಮಾನದಿಂದ ಪುನರ್ರಚಿಸುವುದು ಹಾಗೂ ರಾಜಕೀಯ ಇತಿಹಾಸಕ್ಕೆ ಬೇಕಾದ ಎಲ್ಲ ಬಗೆಯ ಆಕರಗಳನ್ನು ಕ್ರೂಢೀಕರಿಸುವುದು.

೪. ಭಾರತೀಯ ದರ್ಶನಗಳನ್ನು ಕಂಡುಕೊಳ್ಳುವುದು ಮತ್ತು ಸಂಸ್ಕೃತ ಮೂಲವನ್ನು ಅಭಿಮಾನಿಸುವುದು. ಅದರ ತಿಳುವಳಿಕೆಯನ್ನು ಕನ್ನಡಕ್ಕೆ ಅನ್ವಯಿಸಿಕೊಳ್ಳುವುದು.

೫. ಮತಧರ್ಮಗಳ ಆಕರಗಳನ್ನು ಸಂರಕ್ಷಿಸಿ ಅವನ್ನು ವಿಸ್ತರಿಸುವುದು.

೬. ಪಶ್ಚಿಮದ ಓರಿಯಂಟಲ್ ಧೋರಣೆಗೆ ಪರೋಕ್ಷವಾಗಿ ಸ್ನೇಹದಿಂದಿರುತ್ತಲೇ ಸ್ಥಳೀಯ ವಾಗಿಯೂ ಕನ್ನಡ ನಾಡಿನ ಬಗ್ಗೆ ಅಭಿಮಾನದ ಶೋಧವನ್ನು ಕೈಗೊಳ್ಳುವುದು.

೭. ಹಲವು ಒಳನಾಡಿನ ಚರಿತ್ರೆ ಮತ್ತು ಸಂಸ್ಕೃತಿಗಳನ್ನು ರಾಷ್ಟ್ರೀಯ ಮಾದರಿಯ ಏಕಾಕೃತಿಯ ಚರಿತ್ರೆಗೆ ಸಮೀಕರಿಸುವುದು. ಆ ಮೂಲಕ ಕನ್ನಡದ ಏಕಶ್ರೇಣಿಯ ಗುರುತನ್ನು ಸ್ಥಾಪಿಸುವುದು.

ಇಂತಹ ಚಿಂತನೆಗಳ ನೆಲೆಯಲ್ಲಿ ನವೋದಯ ವಿದ್ವಾಂಸರು ಕನ್ನಡ ನಾಡನ್ನು ನಿರೂಪಿಸಿದ್ದಾರೆ. ಪ್ರಭುತ್ವಕ್ಕೆ ಬೇಕಾಗಿದ್ದುದು ಕೂಡ ಇಂತಹ ಆಲೋಚನೆನೆಯ. ಪ್ರಭುತ್ವ ಮತ್ತು ನವೋದಯ ಸಂಶೋಧಕರ ಪ್ರಜ್ಞೆಗಳು ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಕೆಲಸ ಮಾಡಿವೆ. ಗತಕಾಲದ ಪ್ರಭುತ್ವವನ್ನು ನಿರಾಕರಿಸಿ ನವೋದಯ ಸಂಶೋಧಕರು ನಾಡನ್ನು ನಿರೂಪಿಸಿರಲಿಲ. ಗತಕಾಲದ ಭವ್ಯ ನಾಡನ್ನು ಪುನರ್ರಚಿಸುವ ನಿಟ್ಟಿನಲ್ಲಿ ನವೋದಯ ಚಿಂತಕರ ಸಂಶೋಧನೆಗಳು ನಡೆದಿವೆ. ಜನಪೀಡಕ ಪ್ರಭುತ್ವವನ್ನು ಪ್ರಶ್ನಿಸುವ ಅನಿವಾರ್ಯತೆ ನವೋದಯ ವಿದ್ವಾಂಸರಿಗೆ ಇದ್ದಂತಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಆಶಯ ಹಾಗೂ ಏಕೀಕರಣದ ಅಪೇಕ್ಷೆ ಹೆಚ್ಚು ಕಡಿಮೆ ಒಂದಕ್ಕೊಂದು ಪೂರಕವಾಗಿ ಇದ್ದುದರಿಂದ ಪ್ರಭುತ್ವವನ್ನು ನಿರ್ವಹಿಸುವವರಿಗೂ ಸಾಹಿತ್ಯ, ಸಮಾಜ, ಸಂಸ್ಕೃತಿ ಹಾಗೂ ಚರಿತ್ರೆಯನ್ನು ನಿರೂಪಿಸುವವರಿಗೂ ದೊಡ್ಡ ಅಂತರ ಉಂಟಾಗಿರಲಿಲ್ಲ. ಹೀಗಾಗಿಯೇ ನವೋದಯದ ಅನೇಕ ಲೇಖಕರಿಗೂ ಸಂಶೋಧಕರಿಗೂ ವೈರುಧ್ಯಗಳು ಉಂಟಾಗಲಿಲ್ಲ. ಏಕಕಾಲಕ್ಕೆ ಆ ಅವಧಿಯ ಸಮಾಜ ಕೂಡ ಪ್ರಭುತ್ವದ ಜೊತೆ ಕೈಜೋಡಿಸಿಯೇ ಭವಿಷ್ಯದ ಕರ್ನಾಟಕವನ್ನು ಕಟ್ಟಿಕೊಳ್ಳಬೇಕು ಎಂಬ ಆಶಯವನ್ನು ಇಟ್ಟುಕೊಂಡಿತ್ತು. ಪ್ರಭುತ್ವ ಸಮಾಜ ಸಾಹಿತ್ಯ ಈ ತ್ರಿವಳಿಗಳು ಒಂದುಗೂಡಿದ್ದರಿಂದಲೇ ಅಖಂಡ ಕರ್ನಾಟಕದ ಕನಸು ಸ್ಪಷ್ಟವಾಗಿ ಭೌಗೋಳಿಕ ಹಾಗು ರಾಜಕೀಯ ನಕಾಶೆಯನ್ನು ಅಧಿಕೃತಗೊಳಿಸಿಕೊಳ್ಳಲು ಸಾಧ್ಯವಾದದ್ದು. ಕಟ್ಟುವ ಉಮೇದು ವಿಶೇಷವಾಗಿದ್ದಾಗ ಹೊಂದಾಣಿಕೆಯ ಪಾತ್ರ ಮುಖ್ಯವಾಗುತ್ತದೆ. ಗಾಂಧಿವಾದದ ದಟ್ಟ ಪ್ರಭಾವ ಇದ್ದ ಆ ಕಾಲದಲ್ಲಿ ಈ ಮೂರು ಸ್ಥಿತಿಗಳು ಒಂದೇ ಆಗಿರಬೇಕಿತ್ತು.

ನವೋದಯ ವಿದ್ವಾಂಸರ ಇತಿಹಾಸದ ನಿರೂಪಣೆಯು ಆರಂಭದ ಸ್ಥಿತಿಯಾದ್ದರಿಂದ ಅವರಿಗೆ ವಿಮರ್ಶಾತ್ಮಕ ಅವಕಾಶವಿರಲಿಲ್ಲ. ಇತಿಹಾಸದ ಅನುಭವವನ್ನು ವರ್ತಮಾನದ ಜೊತೆಗಿಟ್ಟು ವಿಶ್ಲೇಷಿಸಿದಾಗಲೇ ಚರಿತ್ರೆಯ ರಚನಾ ವಿಧಾನವು ಬದಲಾಗುವುದು. ಸಾಹಿತ್ಯ ಪರಂಪರೆಯ ಭಿನ್ನ ನೆಲೆಗಳು ಇಂತದ್ದರ ಭಾಗವಾಗಿಯೇ ಹೊಸ ರೂಪವನ್ನು ಧರಿಸುವುದು. ಒಂದು ಕಾಲ ಘಟ್ಟದಲ್ಲಾದ ಘಟನೆಗಳ ಸಾಕ್ಷಿಗಳ ಜೋಡಣೆಯೆ ಇತಿಹಾಸವಲ್ಲ. ಇತಿಹಾಸದ ವರದಿಯೇ ಬೇರೆ ಹಾಗೆ ಬಂದ ವರದಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಅರಿವಿನ ನಿರೂಪಣೆಯೆ ಬೇರೆ. ಈ ಅರಿವಿನ ನಿರೂಪಣೆಯು ಯಾವತ್ತೂ ಕೂಡ ವರ್ತಮಾನದ ಸಮಾಜದ ಪರವೇ ಹೊರತು ಗತಕಾಲದ ಪೂರ್ವಾಗ್ರಹಗಳ ಪರವಲ್ಲ. ಅಷ್ಟೇ ಅಲ್ಲದೆ ಅದು ಪ್ರಭುತ್ವದ ಮುಖವಾಣಿಯೂ ಆಗಲಾರದು. ಜನವಾಣಿಯು ಇತಿಹಾಸವನ್ನು ಗ್ರಹಿಸುವುದರ ಮೂಲಕ ಪ್ರತಿಧ್ವನಿಸುತ್ತದೆ. ಅಂತಹ ಪ್ರತಿಧ್ವನಿಯು ಸಾಕ್ಷಿಯನ್ನು ಮೀರಿದ್ದು ಹಾಗೂ ಹೆಚ್ಚು ಬಾರಿ ಮೌನದಲ್ಲಿ ಉಳಿದಿರುವಂತದ್ದು. ಈ ಬಗೆಯಲ್ಲಿ ಕರ್ನಾಟಕದ ಏಕೀಕರಣೋತ್ತರ ಸಂದರ್ಭವನ್ನು ಅವಲೋಕಿಸಬೇಕಾಗಿದೆ.

ಪ್ರಸ್ತುತ ಚಾಲನೆಯಲ್ಲಿರುವ ಪ್ರಭುತ್ವಕ್ಕೂ ಗತಕಾಲದ ಪ್ರಭುತ್ವಕ್ಕೂ ಬಹಳ ದೊಡ್ಡ ವ್ಯತ್ಯಾಸವೇನು ಇಲ್ಲ. ನಾಡು ಸ್ವಾತಂತ್ರ್ಯ ಪಡೆದು ಏಕೀಕರಣಗೊಂಡಿದ್ದರೂ ನಾಡಿನ ಮೇಲಿನ ಒಡೆತನ ಬದಲಾಗಿಲ್ಲ. ಯಾಜಮಾನ್ಯ ಗುಣವು ಕುಂದಿಲ್ಲ. ಆಳುವ ರೀತಿ ನೀತಿಗಳು ಹೊಸ ವೇಷ ಧರಿಸಿವೆ. ಸಾಮ್ರಾಜ್ಯಶಾಹಿ ಧೋರಣೆಗಳು ಪ್ರಜಾಪ್ರಭುತ್ವದ ತಂತ್ರ ಮಂತ್ರಗಳನ್ನು ಸ್ವರೂಪೀಕರಿಸಿಕೊಂಡಿವೆ. ಹೀಗಿರುವ ಸಾಮಾಜಿಕ ವಾಸ್ತವದಲ್ಲಿ ನವೋದಯ ಲೇಖಕರು ನಿರೂಪಿಸಿದ ನಾಡಿನ ಕಥನಗಳೆಲ್ಲವೂ ಬೇರೆ ಬೇರೆ ರೀತಿಯಲ್ಲಿ ದುರುಪಯೋಗಗೊಂಡಿವೆ. ಹೀಗಾಗಿಯೇ ನವೋದಯ ಸಾಹಿತ್ಯದ ನಾಡು ನುಡಿಯ ಸಾಹಿತ್ಯಕ ನಂಬಿಕೆಗಳೇ ವರ್ತಮಾನದ ದೃಷ್ಟಿಯಲ್ಲಿ (ಬ್ಯಾಡ್ ಫೆಯಿತ್) ಕೆಟ್ಟ ನಂಬಿಕೆಯಾಗಿ ಕಾಣಲ್ಪಡುತ್ತಿರುವುದು. ಚರಿತ್ರೆಯಲ್ಲಿ ಆದ ಭಾವನಾತ್ಮಕ ಘಟನೆಗಳು ಕೆಟ್ಟ ನಂಬಿಕೆಯಾಗುವ ಕ್ರಮವು ವ್ಯವಸ್ಥೆ ಅಥವಾ ಸಮಕಾಲೀನ ಪ್ರಭುತ್ವದ ನಡತೆಯಿಂದಲೇ ನಿರ್ಧರಿಸಲ್ಪಡುತ್ತದೆ.

ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ಇವೆಲ್ಲವೂ ತುಂಬ ಸುಂದರವಾದವು ಎಂಬುದು ಒಳ್ಳೆಯ ನಂಬಿಕೆಯೇನೊ ಸರಿ. ಆದರೆ ಈ ನಂಬಿಕೆ ವರ್ತಮಾನದ ಸಮಾಜದ ಮೇಲೆ ಯಾವ ಬಗೆಯ ಅಧಿಕಾರವನ್ನು ಹೇರುತ್ತದೆ ಎಂಬುದನ್ನು ನ್ಯಾಯೋಚಿತವಾಗಿ ಪರಿಶೀಲಿಸದೆ ಹಾಗೇ ಒಪ್ಪಿಕೊಳ್ಳುವುದು ಕೆಟ್ಟ ನಂಬಿಕೆಯಾಗುತ್ತದೆ. ನವೋದಯದರ ಒಳ್ಳೆಯ ನಂಬಿಕೆ ಪ್ರಭುತ್ವದ ಮೂಲಕವೇ ಏಕೀಕರಣೋತ್ತರ ಕರ್ನಾಟಕದಲ್ಲಿ ಕೆಟ್ಟನಂಬಿಕೆಯಾಗಿ ಮಾರ್ಪಟ್ಟಿದೆ. ಪ್ರಭುತ್ವವನ್ನು ಚರಿತ್ರೆಯಿಂದ ತಿದ್ದಲಿಕ್ಕಾಗುವುದಿಲ್ಲ ಎಂಬುದು ಚರಿತ್ರೆಯ ಅನುಭವದಿಂದಲೇ ವೇದ್ಯವಾಗಿದೆ. ಅಂದರೆ ಪ್ರಭುತ್ವವು ಯಾವಾಗಲೂ ತನ್ನ ಸ್ವಾರ್ಥ ಸಾಧನೆಗಾಗಿ ಗತಕಾಲವನ್ನು ಹಕ್ಕನಾಗಿ ಪರಿವರ್ತಿಸಿಕೊಳ್ಳುತ್ತಿರುತ್ತದೆ. ಆದ್ದರಿಂದಲೇ ಅದು ಗತ ಚರಿತ್ರೆಯ ಉತ್ಸವಗಳನ್ನು ಅದ್ದೂರಿಯಾಗಿ ನಾಡುನುಡಿಯ ಹಿತಕಾಯುವ ಮುಖವಾಡದಲ್ಲಿ ಆಚರಿಸುವುದು. ಏಕೀಕರಣೋತ್ತರ ಕರ್ನಾಟಕದಲ್ಲಿ ಚಾಲ್ತಿಗೆ ಬಂದಿರುವ ಕದಂಬೋತ್ಸವ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ತರದ ಚರಿತ್ರೆಯ ಉತ್ಸವಗಳು ಸಮಕಾಲೀನ ರಾಜಕಾರಣದ ಪ್ರಭುತ್ವದ ಉತ್ಸವವೇ ಆಗಿಬಿಟ್ಟಿರುವುದನ್ನು ಗಮನಿಸಬಹುದು. ಇಂತವುಗಳನ್ನು ಪರಂಪರೆಯ ಭಾಗವಾಗಿ ಜನೋತ್ಸವ ಎಂದು ಕರೆದುಕೊಳ್ಳುವುದು ಕೂಡ ರಾಜಕೀಯ ದುರುದ್ದೇಶದ ವ್ಯವಸ್ಥೆಯ ತಂತ್ರವಾಗಿರುತ್ತದೆ.

ಹಾಗೆ ನೋಡಿದರೆ ಏಕೀಕರಣೋತ್ತರ ಕರ್ನಾಟಕದ ರಾಜಕೀಯ ವರ್ತಮಾನದಲ್ಲಿ ಕರ್ನಾಟಕದ ಭವಿಷ್ಯ ಅಲಂಕಾರಿಕವಾದುದು. ಕರ್ನಾಟಕದ ನಿಜವಾದ ಅಸ್ತಿತ್ವವು ದಶಕದಿಂದ ದಶಕಕ್ಕೆ ಕರಗುತ್ತ ಬರುತ್ತಿದೆ. ಕೇಂದ್ರ ಸರ್ಕಾರದ ಪಾತ್ರವೂ ಇಲ್ಲಿ ನಿರ್ಣಾಯಕವಾಗುತ್ತಿದೆ. ದೊಡ್ಡ ಪ್ರಭುತ್ವವು ತನ್ನ ಕೆಳಗಿನ ಪ್ರಭುತ್ವಗಳನ್ನು ತನ್ನ ಅಳತೆಗೆ ಒಗ್ಗಿಸಿಕೊಳ್ಳುತ್ತಲೇ ಬಂದಿರುವುದು ಕೂಡ ಸಾಮ್ರಾಜ್ಯಶಾಹಿ ಪರಂಪರೆಗಳು ಈಗಲೂ ಜೀವಂತವಿರುವುದರಿಂದ. ಈ ಬಗೆಯ ಪರಿಸರದಲ್ಲಿ ಅನೇಕ ವೇಳೆ ನಮ್ಮದೆಂದು ಕರೆದುಕೊಂಡ ನಮ್ಮ ಚರಿತ್ರೆಗಳೇ ಕೆಟ್ಟ ನಂಬಿಕೆಗಳಾಗಿವೆ. ಏಕೀಕರಣದ ಚರಿತ್ರೆ ಘನವಾದುದಾದರೂ ಅದರ ನಿರೀಕ್ಷೆಗಳು ಹುಸಿಯಾಗಿರುವುದರಿಂದ ಈಗದು ಕೆಟ್ಟ ನಂಬಿಕೆಯಾಗಿರುವುದು ವಿಪರ್ಯಾಸ. ನವೋದಯ ಪಂಥದ ಕಾಳಜಿಗಳು ನಿರಂತರವಾಗಿ ಮುಂದುವರಿಯದೆ ಬಲಹೀನವಾಗಲು ಇಂಥ ಸ್ಥಿತಿಗಳೇ ಕಾರಣ. ನವೋದಯ ಕವಿಗಳಲ್ಲಿ ಅಗ್ರಗಣ್ಯರಾಗಿದ್ದ ಕುವೆಂಪು ಅವರು ಮುಂಗಾಣ್ಕೆಯ ಗ್ರಹಿಕೆಯಿಂದ ಪ್ರಭುತ್ವದ ಮೂಲ ಗುಣವನ್ನು ಕವಿತೆಯ ಮೂಲಕ ಹೀಗೆ ದಾಖಲಿಸುತ್ತಾರೆ.

“ಕತ್ತಿಯು ಪರಕೀಯರದಾದರೆ ಮಾತ್ರ ನೋವೆ?
ನಮ್ಮವರೆ ಹದ ಹಾಕಿ ತಿವಿದರೆ ಅದು ಹೂವೆ?”

ಪ್ರಭುತ್ವದ ಜೊತೆ ಇಷ್ಟು ತೀವ್ರವಾಗಿ ಆರ್ದ್ರ ಭಾವದಲ್ಲಿ ನುಡಿವ ಕುವೆಂಪು ಮೂಲತಃ ಯಾವ ಪ್ರಭುತ್ವದ ಬಗೆಗೂ ವಿಶ್ವಾಸವಿಟ್ಟಿರಲಿಲ್ಲ. ಚರಿತ್ರೆಯು ಹೇಗೆ ಕೆಟ್ಟ ನಂಬಿಕೆಯಾಗಿ ಬೇರೆ ಬೇರೆ ಅಸ್ತ್ರಗಳ ಆಕಾರ ತಾಳಿ ಜನರೆದೆಯನ್ನು ಇರಿಯುತ್ತದೆ ಎಂಬುದನ್ನು ಶ್ರೇಷ್ಠ ದಾರ್ಶನಿಕ ಕವಿ ಮಾತ್ರ ಕಂಡುಕೊಳ್ಳಬಲ್ಲ. ಮಾರ್ಮಿಕವಾಗಿ ಕುವೆಂಪು ಅವರು ‘ಎಲ್ಲರೂ ನಮ್ಮ ನೆತ್ತರು ಕುಡಿವ ಜಿಗಣೆಗಳೆ’ ಎಂದು ಎಚ್ಚರಿಸುತ್ತಾರೆ. ಕವಿಯ ಒಳಗಿನ ನಾಡಿನ ಸಂಬಂಧಗಳೇ ವಿಚಿತ್ರವಾಗಿರುತ್ತವೆ ಹಾಗೂ ನಿಷ್ಠೂರವಾಗಿರುತ್ತವೆ. ‘ಪಂಪನಿಲ್ಲಿ ಮುಖ್ಯಮಂತ್ರಿ’ ಎಂದು ಸಾರಿಕೊಳ್ಳುವ ಕುವೆಂಪು ಅವರೊಳಗಿನ ಸಾತ್ವಿಕ ಪ್ರತಿರೋಧವು ನಿಜವಾದ ನಾಡುನುಡಿಯ ಪ್ರತೀಕ. ಕುಮಾರವ್ಯಾಸ, ಬಸವಣ್ಣ, ಸರ್ವಜ್ಞರಂತವರು ಇರುವ ಕನ್ನಡ ನಾಡು ನುಡಿಯ ಮಂತ್ರಿ ಮಂಡಲದಲ್ಲಿ ನಾನೊಬ್ಬ ಕೊನೆ ಸಾಲಿನಲ್ಲಿ ನಿಂತಿರುವುದೇ ಒಂದು ಘನತೆ ಎಂದು ಅಭಿಮಾನಪಡುತ್ತಲೇ ಆ ಬಗೆಯ ಕನ್ನಡ ಪರಂಪರೆಯಲ್ಲಿ ಗುರುತಿಸಿಕೊಳ್ಳುತ್ತಾರೆ. ಹಿಂದೂ ಧರ್ಮದ ದಿವ್ಯತೆಯಲ್ಲಿ ಸಮಾಜವನ್ನು ಸುಧಾರಿಸಲು ಮುಂದಾಗಿದ್ದ ಅನೇಕ ಹಿರಿಯ ಸಮರ್ಥ ಕವಿಗಳ ಮುಂದೆ ಕುವೆಂಪು ಅವರ ಈ ಬಗೆಯ ಪ್ರಭುತ್ವ ವಿರೋಧಿ ನಿಲುವು ಜನಪರವಾದುದು. ಪುರೋಹಿತಶಾಹಿ ಮತ್ತು ಪ್ರಭುತ್ವ ಎರಡನ್ನೂ ಒಂದೇ ಗುರಿಯಲ್ಲಿ ಎದುರಿಸಿದ ಕುವೆಂಪು ಅವರ ನವೋದಯದ ಪ್ರಜ್ಞೆಯು ಅಲಕ್ಷಿತ ಸಮಾಜಗಳ ಬಿಡುಗಡೆಯ ದಾರಿಯಲ್ಲಿ ರೂಪುಗೊಂಡುದಾಗಿತ್ತು. ಆದ್ದರಿಂದಲೇ ಕನ್ನಡ ನಾಡಿನ ಅನಾಥ ಸಮುದಾಯಗಳ ರೂಪಕವಾಗಿದ್ದ ಏಕಲವ್ಯ, ಜಲಗಾರ, ಶಂಭೂಕರಂತವರನ್ನು ನಾಡಿನ ಎಚ್ಚರಕ್ಕಾಗಿ ಸೃಷ್ಟಿಸಿದ್ದುದು ಚರಿತ್ರೆಯ ಕೆಟ್ಟ ನಂಬಿಕೆಯನ್ನು ಸರಿ ನೀತಿಗೆ ಒಳಪಡಿಸುವಂತಾಗಿತ್ತು. ಈ ಬಗೆಯ ದಾರಿಯಲ್ಲಿ ಚರಿತ್ರೆಯನ್ನು ಒಡೆದು ಪ್ರತಿ ಚರಿತ್ರೆಯನ್ನು ನಿರೂಪಿಸುವ ಪ್ರತಿಯೊಬ್ಬ ಲೇಖಕನೂ ಪ್ರತಿನಾಡನ್ನು ಪ್ರತಿ ಪ್ರಭುತ್ವವನ್ನು ಕನಸುತ್ತಲೇ ಸಾಹಿತ್ಯದ ಮೂಲಕ ಅವನ್ನು ರೂಪಿಸಿಕೊಳ್ಳುತ್ತಿರುತ್ತಾನೆ.

ಹೀಗೆ ನವೋದಯ ಸಾಹಿತ್ಯವು ರಾಷ್ಟ್ರ ಮತ್ತು ನಾಡಿನ ನಿರ್ಮಾಣದಲ್ಲಿ ಉದಾರ ರಾಷ್ಟ್ರೀಯತೆಯನ್ನು ತೋರಿದೆ. ಆದರೆ ಇಲ್ಲೇ ಗಮನಿಸಬೇಕಾದ ಅಂಶವೇನೆಂದರೆ ಕನ್ನಡ ಸಮಾಜದ ಒಳಗಿನ ಜಾತಿ ವ್ಯವಸ್ಥೆಯ ಯಾಜಮಾನ್ಯದ ಬಗ್ಗೆ ನವೋದಯ ಲೇಖಕರು ಪ್ರತಿರೋಧ ಒಡ್ಡಲಿಲ್ಲ. ‘ದನಿಯರ ಸತ್ಯನಾರಾಯಣ’, ‘ಮೋಚಿ’ಯಂತಹ ಕತೆಗಳಲ್ಲಿ ಅಂತಹ ಅಂಶ ವ್ಯಕ್ತವಾಗಿತ್ತಾದರೂ ನವೋದಯ ಸಾಹಿತ್ಯದ ಒಟ್ಟು ಸಂವೇದನೆಯು ಬ್ರಾಹ್ಮಣ ಸಮುದಾಯದ ಅನುಭವಗಳಿಗು ಅಲ್ಲಿನ ವೈದಿಕ ಚಿಂತನೆಗಳಿಗೂ ಹತ್ತಿರವಾಗಿತ್ತು. ಕುವೆಂಪು ಮಾತ್ರ ಇಂತಹ ನಿಲುವಿಗೆ ವಿರುದ್ಧವಾಗಿದ್ದರು. ಪುರೋಹಿತಶಾಹಿ ವ್ಯವಸ್ಥೆಯನ್ನು ಆ ಕಾಲಕ್ಕೆ ವಿರೋಧಿಸಿದ ಏಕೈಕ ಲೇಖಕ ಇವರೊಬ್ಬರೇ. ಚರಿತ್ರೆ ಮತ್ತು ಸಾಹಿತ್ಯಗಳೆರಡರಲ್ಲು ನಿರ್ಣಾಯಕವಾಗಿದ್ದ ಹಿಂದೂ ಧರ್ಮದ ಕಂದಾಚಾರಗಳನ್ನು ಪ್ರಶ್ನಿಸಿದ ಕುವೆಂಪು ಅವರಿಗೆ ವೈಚಾರಿಕ ಕ್ರಾಂತಿಯ ಕನ್ನಡನಾಡು ಮುಖ್ಯವಾಗಿತ್ತು. ಹಾಗೆಯೇ ಅವರು ತಮ್ಮ ಕೊನೆಗಾಲದ ಹಂತದಲ್ಲಿ ಎಲ್ಲ ಎಲ್ಲೆಗಳನ್ನು ಮೀರಿದ ವೈಚಾರಿಕ ಆಧ್ಯಾತ್ಮದ ವಿಶ್ವಮಾನವ ಪ್ರಜ್ಞೆಯನ್ನು ಸಾರಿದ್ದು ಗಮನಾರ್ಹವಾಗಿದೆ. ಏಕೀಕರಣೋತ್ತರ ಕನ್ನಡ ನಾಡಲ್ಲಿ ಕುವೆಂಪು ಅವರ ಕೊನೆಯ ಸಂದೇಶ ಇದೇ ಆಗಿತ್ತು. ಅದು ಚರಿತ್ರೆಯ ಆದರ್ಶದಿಂದ ಬಂದ ತಿಳುವಳಿಕೆಯಾಗಿತ್ತು. ಹಾಗೆಯೇ ವರ್ತಮಾನದ ವಿವಕ್ಷೆಯಿಂದ ಕಂಡ ಕಾಣ್ಕೆಯಾಗಿತ್ತು. ಆದ್ದರಿಂದಲೇ ಅವರು ವೈದಿಕ ಮೌಲ್ಯಕ್ಕೆ ಬದ್ದವಾದ ಮಾವ ಮಠಗಳಿಗೂ ತಲೆಬಾಗಲಿಲ್ಲ. ಆಧ್ಯಾತ್ಮವಾದಿಯಾಗಿದ್ದ ಕುವೆಂಪು ಅವರು ಯಾವುದೇ ನಾಡಿನ ಹಿರಿಮೆ ಮತ್ತು ಭವ್ಯತೆಗೆ ಆಧ್ಯಾತ್ಮವೂ ಮುಖ್ಯ ಎಂದು ಭಾವಿಸಿದ್ದರು. ಸ್ವಾತಂತ್ರ್ಯವನ್ನು ತಂದುಕೊಟ್ಟ ಗಾಂಧಿಗೂ ಇದೇ ನಂಬಿಕೆ ಇತ್ತು. ಗಾಂಧೀಜಿ ಅವರ ಸಪ್ತ ಸೂತ್ರಗಳಾಗಲಿ ಸಾಮಾಜಿಕ ಶಾಪಗಳಾಗಲಿ ಕೊನೆಗೆ ಸಮಾಜ ವ್ಯಕ್ತಿ ನಾಡು ಈ ಮೂರನ್ನೂ ಬಲವಾಗಿ ಕಟ್ಟುವ ಕನಸಿನದಾಗಿದ್ದವು.

ಪರೋಕ್ಷವಾಗಿ ನವೋದಯ ಸಾಹಿತ್ಯದ ದೃಷ್ಟಿಯಲ್ಲಿ ಈ ಬಗೆಯ ತಿಳುವಳಿಕೆ  ಪ್ರತಿಬಿಂಬಿತವಾಗಿದೆ. ನವೋದಯದವರ ನೈತಿಕತೆಯು ಆಳವಾದುದಾಗಿತ್ತು. ಅನುಭವದಲ್ಲಿ ವೈವಿಧ್ಯತೆ ಇಲ್ಲದಿದ್ದರೂ ನಾಡಿನ ಏಳಿಗೆಯ ವಿಚಾರದಲ್ಲಿ ನವೋದಯದವರ ಶ್ರದ್ಧೆಯು ಪ್ರಶ್ನಾತೀತವಾದಂತೆ ಕಾಣುತ್ತದೆ. ಇದರಿಂದಲೇ ಮುಂದಿನವರ ಸಾಹಿತ್ಯ ಸೃಷ್ಟಿಯಲ್ಲಿ ಭಿನ್ನ ವೈಚಾರಿಕತೆಯೂ ಪ್ರತಿಧ್ವನಿಸಲು ಸಾಧ್ಯವಾಯಿತು. ನವೋದಯದವರ ಮೂಲಕ ಕಾಣುವ ಕನ್ನಡ ಸಮಾಜವು ಸ್ವಾಭಿಮಾನಿಯಾದುದು. ತನ್ನ ನೆಲೆಯನ್ನು ಸಾಧಿಸಿಕೊಳ್ಳುವ ಕನಸಿನದು. ಕನ್ನಡಕ್ಕಾಗಿ ಕೈ ಎತ್ತು ಎಂದು ಹೇಳುತ್ತಲೆ ಆ ಮುಲಕ ಕಲ್ಪವೃಕ್ಷವಾಗಲಿ ಎಂದು ಹರಸುವಂತದ್ದು. ಕನ್ನಡ ನಾಡಿನ ಎಲ್ಲ ಸಮಾಜಗಳನ್ನು ಒಂದು ನೀತಿಗೆ ಒಳಪಡಿಸಲು ಸಾಧ್ಯ ಎಂಬ ವಿಶ್ವಾಸ ಈ ಕಾಲದ ನಿರೂಪಣೆಗಳಲ್ಲಿ ಕಂಡುಬರುತ್ತದೆ.

ಕನ್ನಡ ಸಮಾಜದ ಸಾತ್ವಿಕ ಚರಿತ್ರೆಯು ಇಲ್ಲಿ ಪ್ರತಿಧ್ವನಿಸುತ್ತದೆ. ಪರಂಪರೆ ಮತ್ತು ವರ್ತಮಾನಗಳು ಸಂಗಮಿಸುವುದು ನವೋದಯ ಸಾಹಿತ್ಯಪರ್ವದಲ್ಲಿ ವಿಶೇಷವಾಗಿದೆ. ಕನ್ನಡಿಗರು ಭಾರತದ ಸಾರ್ವಭೌಮತ್ವದಲ್ಲಿ ಯಾವ ರೀತಿಯಲ್ಲೂ ಯಾರಿಗೂ ಕಡಿಮೆ ಇಲ್ಲ ಎಂಬ ಧಾಟಿಯು ವ್ಯಕ್ತವಾಗುತ್ತದೆ. ರಾಜಕೀಯ ಪ್ರಭುತ್ವದ ಸಹಕಾರವು ಈ ಭಾವನೆಯ ಜೊತೆಗಿತ್ತು. ಮುರಿದು ಬಿದ್ದಿರುವ ಗತನಾಡಿನ ಹಿರಿಮೆಯನ್ನು ಪುನರ್ ಸ್ಥಾಪಿಸುವ ಕರೆಯು ಎಲ್ಲ ಹಂತದಲ್ಲಿ ಧ್ವನಿತವಾಗುವುದು ಈ ಲೇಖಕರ ಬರಹಗಳಲ್ಲಿ ಕಾಣುತ್ತದೆ. ಇದು ಒಂದು ಬಗೆಯಲ್ಲಿ ಸಂಭ್ರಮದ ಮೂಲಕ ಗತದ ಎಲ್ಲ ರೂಪ ವಿರೂಪವನ್ನು ವರ್ತಮಾನಕ್ಕೆ ತಂದುಕೊಳ್ಳುವ ಬಯಕೆ. ಇಂತಹ ಬಯಕೆಯನ್ನು ಅಸಮಾನತೆಯ ಕಡೆಗೆ ವಿಶೇಷ ಎಚ್ಚರ ವಹಿಸಲು ಸಾಧ್ಯವಾಗದು. ಅದು ಸಮಾನತೆಯನ್ನು ಮಾತ್ರ ಹೇಳುವ ಕಾಲವಾಗಿರಲಿಲ್ಲ. ಇದನ್ನು ಮುಂದಿನ ಸಾಹಿತ್ಯ ಪರಂಪರೆಗಳು ಕೈಗೆತ್ತಿಕೊಂಡವು. ಒಂದೇ ಸಾಹಿತ್ಯ ಪಂಥದಿಂದ ಎಲ್ಲವನ್ನು ನಿರೀಕ್ಷಿಸಬಾರದು. ಕನ್ನಡ ಸಮಾಜದ ನಿರೂಪಣೆಯಲ್ಲಿ ನವೋದಯ ಲೇಖಕರು ಅಖಂಡತೆಯನ್ನು ಧ್ವನಿಸುತ್ತಿದ್ದರು. ಹೀಗಾಗಿಯೇ ನವೋದಯ ಪ್ರಜ್ಞೆಯ ಕನ್ನಡ ನಾಡು ಗತ ಸ್ಮರಣೆಯಲ್ಲಿ ದಿವ್ಯತೆಯನ್ನು ಮೈದುಂಬಿಕೊಳ್ಳುವುದು. ವ್ಯಕ್ತಿಯ ಕಾಣ್ಕೆಗೂ ಅವನ ಮುಕ್ತಿಗೂ ಸಂಬಂಧ ಬೆಸೆಉತ್ತಲೇ ನಾಡಿನ ಕರ್ಮವೂ ದೊಡ್ಡದು ಎಂಬ ನೀತಿ ಭೋದಿಸುವಂತದಾಗಿತ್ತು. ಅದು ಪರೋಕ್ಷವಾಗಿ ಸಮಾಜದ ಕರ್ತವ್ಯ. ಇವೆರಡೂ ನೆಲೆಗಳಿಂದ ಕುಟುಂಬವೂ ಸುಖಕರವಾಗಿರುತ್ತದೆ ಎಂಬ ಧೋರಣೆ ನವೋದಯ ಲೇಖಕರ ತಾತ್ವಿಕತೆಯಾಗಿತ್ತು. ಇದನ್ನು ಅವರು ಸಾಧಿಸಿದರು ಕೂಡ. ವ್ಯಕ್ತಿ, ಸಮಾಜ, ನಾಡು ನುಡಿ ಕುಟುಂಬ ಮತ್ತು ದೇಶ ಇವುಗಳನ್ನೆಲ್ಲ ಒಂದೇ ಬಂಧದಲ್ಲಿ ನೇಯ್ದ ಶ್ರೇಯಸ್ಸು ನವೋದಯದವರದ್ದು.  ಹೀಗಾಗಿ ಏಕೀಕರಣೋತ್ತರ ನವೋದಯ ಪಂಥದ ಸೃಜನಶೀಲ ಕಾಣ್ಕೆಯು ಅನನ್ಯವಾದದ್ದು.