ಕನ್ನಡ ಸಾಹಿತ್ಯದ ಭಾಗವಾಗಿಯೇ ಕನ್ನಡ ರಂಗಭೂಮಿಯು ಬೆಳೆದಿದೆ. ಏಕೀಕರಣೋತ್ತರ ಕಾಲಘಟ್ಟದಲ್ಲಿ ಕನ್ನಡ ರಂಗಭೂಮಿಯಲ್ಲಾದ ಬದಲಾವಣೆಗಳು ದಲಿತ ಬಂಡಾಯ ಚಳುವಳಿಗೆ ಪೂರಕವಾಗಿದ್ದವು. ಅಂತೆಯೇ ಎಪ್ಪತ್ತರ ದಶಕದಲ್ಲಾದ ಕಾರ್ಮಿಕ ಚಳುವಳಿಗೂ ಮತ್ತು ರಾಜಕೀಯ ಸ್ಥಿತ್ಯಂತರಗಳಿಗೂ ಪ್ರತಿಕ್ರಿಯೆಯಾಗಿ ರಂಗಭೂಮಿಯು ಜನತೆಯ ಕಡೆಗೆ ಹೊರಟಿತು. ಚೌಕಟ್ಟಿನ ರಂಗ ಭೂಮಿಯು ಬಯಲನ್ನು ಆಶ್ರಯಿಸಿದ್ದು ಸಮುದಾಯ ರಂಗ ಚಳುವಳಿಯಿಂದ. ಮನರಂಜನೆಗೆ ಇದ್ದ ಅರ್ಥವನ್ನೆ ಬದಲಿಸಿದ ಸಮುದಾಯ ರಂಗ ಪ್ರಯೋಗಗಳು ಸಾಮಾಜಿಕ ನ್ಯಾಯವನ್ನು ಒತ್ತಾಯಿಸಿದವು. ಏಕಕಾಲಕ್ಕೆ ಸಾಹಿತ್ಯ ಮತ್ತು ರಂಗ ಭೂಮಿಯ ಸಿದ್ಧ ಮಾದರಿಗಳು ಇದರಿಂದ ಭಗ್ನಗೊಂಡವು. ಸಮಾಜವಾದಿ ಮತ್ತು ಮಾರ್ಕ್ಸ್‌‌ವಾದಿ ಚಿಂತನೆಗಳು ಇದೇ ವೇಳೆಯಲ್ಲಿ ಸಾಹಿತ್ಯದಲ್ಲಿ ಕಾಣಿಸಿಕೊಂಡಿದ್ದರಿಂದ ಎಡಪಂಥೀಯ ರಂಗಭೂಮಿಯು ಕರ್ನಾಟಕದ ಜನಜೀವನವನ್ನು ಬೇರೊಂದು ರೀತಿಯಲ್ಲಿ ತೋರಿಸುತ್ತಾ ಜನಜಾಗೃತಿಗೆ ಮಹತ್ವದ ಗಮನ ಹರಿಸಿತು. ಜ್ಞಾನ ವಿಜ್ಞಾನ ಜಾಥಾ ಕೂಡ ಇದರ ಅಂಗವಾಗಿ ಚಾಲ್ತಿಗೆ ಬಂತು. ಮುಂದೆ ಇದರ ವಿಸ್ತರಣೆಯು ಸಾಕ್ಷರತಾ ಆಂದೋಲನಗಳ ಬೀದಿ ನಾಟಕದವರೆಗೂ ಬೆಳೆಯಿತು. ವಿಚಾರವಾದಿ ಒಕ್ಕೂಟಗಳು ಕೂಡ ಸಮುದಾಯ ರಂಗಭೂಮಿಗೆ ತಾತ್ವಿಕ ಒತ್ತಾಸೆಯಾಗಿ ನಿಂತವು. ಮೂಢನಂಬಿಕೆಗಳನ್ನು ಬಯಲು ಮಾಡುವ ಹಾಗೂ ವಿಜ್ಞಾನದ ಅರಿವನ್ನು ಪ್ರಚಾರ ಮಾಡುವಯತ್ನಗಳು ನಡೆದವು. ರಂಗಭೂಮಿಯ ಮಡಿ ಮೈಲಿಗೆಗಳನ್ನು ಕಿತ್ತೊಗೆದ ಸಮುದಾಯ ರಂಗಭೂಮಿಯು ಸಮಾಜವನ್ನೇ ತನ್ನ ರಂಗಕ್ಷೇತ್ರವನ್ನಾಗಿ ಮಾರ್ಪಡಿಸಿಕೊಂಡಿತು. ಇದರಿಂದಾಗಿ ನಾಟಕ ಸಾಹಿತ್ಯದ ರೂಪವೇ ಬದಲಾಯಿತು. ರಂಗ ಪ್ರಯೋಗದ ಭಾಷೆ, ಭಾವನೆ ಅಭಿನಯ ತಂತ್ರಗಳಲ್ಲಿ ಹೊಸತನ ಕಂಡುಬಂತು. ಏಕಕಾಲಕ್ಕೆ ಎಪ್ಪತ್ತರ ದಶಕದಲ್ಲಿ ರಂಗ ಭೂಮಿಯ ಬೇರೆ ಬೇರೆ ಸಾಧ್ಯತೆಗಳು ಕವಲೊಡೆದಿದ್ದವು. ವೃತ್ತಿರಂಗಭೂಮಿಗಳು ಹಳಸಲು ಮನರಂಜನೆಯಲ್ಲೇ ಜಡ್ಡುಗಟ್ಟಿದ್ದವು. ಪ್ರಜ್ಞಾವಂತ ರಂಗಕರ್ಮಿಗಳು ಪ್ರವೇಶಗೊಂಡಿದ್ದರಿಂದ ಜಾತ್ಯತೀತವಾದ ರಂಗಪರಿಸರವು ನಿರ್ಮಾನವಾಯಿತು. ಆದರೂ ಕೂಡ ರಂಗಭೂಮಿಯ ವೈಶಿಷ್ಟ್ಯತೆಯನ್ನು ಮೆರೆಯವು ಪ್ರಯತ್ನಗಳೂ ಬಲವಾಗಿದ್ದವು. ಅಂತಹಯತ್ನದಿಂದ ಬೇರೊಂದು ಬಗೆಯ ಲಾಭವು ರಂಗಭೂಮಿಗೆ ಆಗಿದ್ದಿದೆ. ಸಿನಿಮಾ ಮತ್ತು ರಂಗಭೂಮಿಗೆ ಬೇಕಾದ ಒಡನಾಟವೂ ಇದೇ ಅವಧಿಯಲ್ಲಿ ಬೆಳೆಯಿತು. ಜನಪರವಾದ ರಂಗಸಾಹಿತ್ಯವು ಕನ್ನಡ ಸಾಹಿತ್ಯವನ್ನು ಮತ್ತುಷ್ಟು ವಿಸ್ತರಿಸಿತು. ಹೋರಾಟದ ಹಾಡುಗಳು ಇಲ್ಲಿ ವಿಶೇಷವಾಗಿ ಮೈದಳೆದವು. ಸಮುದಾಯದ ಬಹುತೇಕ ಕಲಾವಿದರಿಗೆ ದಲಿತ ಬಂಡಾಯ ಚಳುವಳಿಯಲ್ಲಿ ಭಾಗವಹಿಸುವ ಸಂಬಂಧ ಇತ್ತಾದ್ದರಿಂದ ಕಲಾಜಾಥ ಮತ್ತು ಬೀದಿ ನಾಟಕಗಳು ಕೂಡ ವಿಶೇಷವಾಗಿ ಬೆಳೆದವು. ಹೋರಾಟದ ಹಾಡುಗಳಿಂದ ರಂಗಸಂಗೀತವು ಬದಲಾಯಿತು. ಹೋರಾಟವೇ ವಿರಾಟ್ ರಂಗಭೂಮಿಯಾದದ್ದು ದಲಿತ ಕಲಾಜಾಥಗಳಿಂದ ಮತ್ತು ಅವರ ಹೋರಾಟದಿಂದ. ಸಮುದಾಯ ರಂಗಭೂಮಿಯು ಇದರಿಂದಲೇ ದಲಿತರ ಹಾಗೂ ಕಾರ್ಮಿಕರ ಮೇಲಿನ ದೌರ್ಜನ್ಯಗಳ ವಿರುದ್ಧದ ಕಥನಗಳನ್ನು ರಂಗದ ಮೇಲೆ ತರಲು ಸಾಧ್ಯವಾದದ್ದು. ನ್ಯಾಯದ ಸೊಲ್ಲು ಎಲ್ಲೆಡೆ ಪ್ರತಿಧ್ವನಿಸಿತು.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ ಬಂಡಾಯದ ಲೇಖಕರಿಗೂ ಸಮುದಾಯದ ರಂಗ ಕಲಾವಿದರಿಗೂ ಮತ್ತು ದಲಿತ ಚಳುವಳಿಗೂ ಅವಿನಾಭವ ಸಂಬಂಧ ಇದ್ದದ್ದು. ಹೀಗಾಗಿಯೆ ಕರ್ನಾಟಕದ ನಾಡು ನುಡಿಯಿಂದ ಈ ಬಗೆಯ ಸಾಹಿತಿ ಕಲಾವಿದರು ಜನತೆಯನ್ನು ಎಚ್ಚರಿಸಲು ಸಾಧ್ಯವಾದದ್ದು. ಜೊತೆಗೆ ಇದೇ ಕಾಲದಲ್ಲಿ ಜೀವಂತವಿದ್ದ ಅನೇಕ ಹಿರಿಯ ತಲೆಮಾರಿನ ಲೇಖಕರು ದಲಿತ ಬಂಡಾಯ ಸಮುದಾಯದ ಆಶೋತ್ತರಗಳಿಗೆ ಬೆಂಬಲವಾಗಿದ್ದರು. ಬಸವಲಿಂಗಪ್ಪನಂತಹ ರಾಜಕಾರಣಿಯು ಇದೇ ಕಾಲದಲ್ಲಿ ಮಲಹೊರುವ ಪದ್ಧತಿಯನ್ನು ಕಿತ್ತು ಹಾಕಲು ಯಶಸ್ವಿಯಾದದ್ದು. ಅಂತೆಯೇ ದಲಿತ ಕೇರಿಗಳ ಮೇಲಿನ ಆಕ್ರಮಣಗಳ ವಿರುದ್ಧ ಸ್ವತಃ ದಲಿತರೇ ಗುಡುಗಲು ಸಾಧ್ಯವಾದದ್ದು. ಇದಕ್ಕೆಲ್ಲ ಸಮುದಾಯ ರಂಗ ಚಳುವಳಿಯ ಗಾಢವಾದ ಸಂಬಂಧವಿತ್ತು. ಆ ವೇಳೆಗೆ ನವ್ಯ ಸಾಹಿತ್ಯವ ಸುಮ್ಮನೆ ಕೂತಿರಲಿಲ್ಲ. ಸಿನಿಮಾ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಅದು ಪರೋಕ್ಷವಾಗಿ ಪೈಪೋಟಿ ನೀಡುತ್ತ ಕಲಾತ್ಮಕವಾದ  ನಿರೂಪಣೆಗಳ ಕಡೆಗೆ ಗಮನ ನೀಡಿತ್ತು. ಇದೇ ವೇಳೆಗೆ ಪಶ್ಚಿಮದ ಸಾಹಿತ್ಯ ಮತ್ತು ರಂಗಭೂಮಿಯ ಪ್ರಭಾವವೂ ಕನ್ನಡ ರಂಗಭೂಮಿಯ ಮೇಲಾಗಿತ್ತು. ಆ ಮೊದಲು ಕರ್ನಾಟಕದಲ್ಲಿದ್ದ ರಂಗನಂಬಿಕೆಗಳು ಹೆಚ್ಚು ಕಡಿಮೆ ರಾಷ್ಟ್ರೀಯವಾದಿ ಹಿನ್ನೆಲೆಯಲ್ಲೆ ಇದ್ದವು. ಪ್ರತಿಷ್ಠಿತ ರಂಗ ಭೂಮಿಗಳಂತು ಶ್ರೇಷ್ಠತೆಯ ಪ್ರದರ್ಶನಕ್ಕೆ ಸೀಮಿತವಾಗಿದ್ದವು. ಸ್ವಾತಂತ್ರ‍್ಯ ಚಳುವಳಿಯಲ್ಲಿ ವಸಾಹತುಶಾಹಿ ವಿರುದ್ಧ ಜಾಗೃತಿ ಉಂಟು ಮಾಡುವಂತಹ ಹೊಣೆ ಹೊತ್ತಿದ್ದ ಅಂತಹ ವೃತ್ತಿ ರಂಗಭೂಮಿಯು ಏಕೀಕರಣೋತ್ತರ ಸಂದರ್ಭದಲ್ಲಿ ಅಳಿವಿನ ಅಂಚಿನಲ್ಲಿದ್ದವು. ‘ಪರಿಶುದ್ಧ’ ರಂಗಭೂಮಿಯಂತೂ ಗೋಡೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿತ್ತು. ಅಂತಲ್ಲಿ ಪುರಾಣ ಪುಣ್ಯ ಸ್ಮರಣೆಯ ಗೀತ ಕಥನಗಳು ಶ್ರದ್ಧಾ ಭಕ್ತಿಯ ಸಂದೇಶವನ್ನು ಸಾರುತ್ತಿದ್ದವು. ಆನಡುವೆ ಎಲ್ಲೊ ಕುವೆಂಪು ಅವರ ಶೂದ್ರ ಪ್ರಜ್ಞೆಯ ನಾಟಕಗಳು ತೇಲಿ ಹೋಗುತ್ತಿದ್ದವು. ಇಂತಹ ಸ್ಥಿತಿಯಲ್ಲಿ ಪ್ರಧಾನವಾಗಿ ಎರಡು ಬಗೆಯ ರಂಗಸ್ಥಿತ್ಯಂತರಗಳು ಘಟಿಸಿದವು.

ಮೊದಲನೆಯದು ನವ್ಯ ಪ್ರಜ್ಞೆಯ ರಂಗಪಲ್ಲಟ. ಎರಡನೆಯದು ದಲಿತ ಬಂಡಾಯ ಪ್ರಜ್ಞೆಯ ಸಮುದಾಯ ರಂಗಚಳುವಳಿ. ಇವೆರಡೂ ಏಕೀಕರಣೋತ್ತರ ಕರ್ನಾಟಕದ ರಂಗಭೂಮಿಯನ್ನು ಗಾಢವಾಗಿ ವಿಸ್ತರಿಸಿವೆ. ನವ್ಯ ಪ್ರಜ್ಞೆಯ ರಂಗಭೂಮಿಗೆ ಪಶ್ಚಿಮದ ಅಸಂಗತವಾದದ ಪ್ರೇರಣೆಯಿತ್ತು. ಸ್ಯಾಮ್ಯುಯಲ್ ಬೆಕೆಟ್‌ರಂತಹ ಅಸಂಗತ ನಾಟಕಕಾರರು ಕನ್ನಡದ ಅಸಂಗತ ನಾಟಕಾರರಿಗೆ ಮಾದರಿಯಾಗಿದ್ದರು. ಯುರೋಪಿನಲ್ಲಿ ಎರಡನೇ ಮಹಾಯುದ್ಧದ ನಂತರ ಉಂಟಾಗಿದ್ದ ಸೂತಕ ವಾತಾವರಣದಲ್ಲಿ ಮನುಷ್ಯನ ದುರಂತಗಳನ್ನು ಅಸಂಗತ ಘಟನಾವಳಿಗಳನ್ನು ರೂಪಕ ನಿರ್ಮಿತಿಯಲ್ಲಿ ತೋರಿಸುವ ಮೂಲಕ ಅತಾರ್ಕಿಕವಾಗಿದ್ದರೂ ತಾರ್ಕಿಕ ಅರ್ಥವನ್ನು ಹೊರಡಿಸುವ ಪ್ರಯೋಗವು ಪಶ್ಚಿಮದಲ್ಲಿ ಪರಿಣಾಮಕಾರಿಯಾಗಿತ್ತು. ಹೇಯ ಮಾನವಹತ್ಯೆಯ ಹಿಂಸೆಯನ್ನು ಕಣ್ಣಾರೆ ಕಂಡಿದ್ದ ಯುರೋಪಿನ ಮನಸ್ಸು ಅಂತಹ ಅಸಂಗತ ದೃಶ್ಯಾವಳಿ ಮತ್ತು ಮಾತಿನ ಸಂಯೋಜನೆಯಿಂದ ವಿಶೇಷ ಅರ್ಥವನ್ನು ತನ್ನೊಳಗೇ ಕಟ್ಟಿಕೊಳ್ಳುತ್ತಿತ್ತು. ಅದರ ವಿಚಿತ್ರ ಸಂಯೋಗ ಸಂವೇದನೆಯನ್ನು ನವ್ಯ ಪ್ರಜ್ಞೆಯ ರಂಗಲೇಖಕರು ಆವಾಹಿಸಿಕೊಳ್ಳುವ ಮೂಲಕ ಕನ್ನಡದಲ್ಲಿ ಅಸಂಗತ ನಾಟಕಗಳನ್ನು ಬರೆದರು. ನ.ರತ್ನ, ಚಂದ್ರಕಾಂತ ಕುಸನೂರರಂತವರು ಅಸಂಗತ ನಾಟಕಗಳಲ್ಲಿ ನಾಡಿನ ಅಸಂಗತತೆಯನ್ನು ಹೇಳಲು ಯತ್ನಿಸಿದರು. ಮೈಸೂರು ಬೆಂಗಳುರು ನಗರಗಳಲ್ಲಿ ಅಂತಹ ರಂಗ ಪ್ರಯೋಗಗಳು ವಿಶೇಷವಾಗಿ ಆದವು. ಸ್ವಾತಂತ್ರ್ಯ ಪಡೆದ ನಂತರದ ದೇಶದ ಒಳಗಿನ ನಡತೆ ಹೇಗೆ ದುರಂತದತ್ತ ಸಾಗುತ್ತಿದೆ ಎಂಬ ವಿಷಾದ ಇಂತಹ ಪ್ರಯೋಗಗಳಲ್ಲಿ ಬಿಂತಿತವಾದದ್ದು ವಿಶೇಷವಾಗಿತ್ತು. ಆದರೆ ಪೂರ್ಣ ಪ್ರಮಾಣದ ಅಸಂಗತ ನಿರೂಪಣೆಗೆ ಹೋಗದಂತೆಯೂ ಆ ಕಾಲದಲ್ಲಿ ನಾಟಕ ಬರೆಯುವ ಸ್ವಭಾವ ಇತ್ತು. ಪೂರ್ಣ ಚಂದ್ರ ತೇಜಸ್ವಿ ಅವರ ‘ಯಮಳ ಪ್ರಶ್ನೆ’ ಆ ಬಗೆಯದಾಗಿತ್ತು. ಚಂಪಾ ಅವರ ‘ಅಪ್ಪ’ ನಾಟಕ ಕೂಡ ಅಂತದೇ ಸ್ವಭಾವವನ್ನು ಹೊಂದಿತ್ತು. ಆದರೆ ಲಂಕೇಶರ ಏಕಾಂಕಗಳು ಅತ್ತ ನವ್ಯವೂ ಅಲ್ಲದ ಇತ್ತ ಅಸಂಗತವೂ ಅಲ್ಲದ ಮಧ್ಯಮ ಹಾದಿಯ ಪ್ರತಿರೋಧ ಸ್ವಭಾವದ ಆದರೆ ಅನಾಥ ಪ್ರಜ್ಞೆಯ ರಚನೆಗಳಾಗಿದ್ದವು. ಬಹುಪಾಲು ಲಂಕೇಶರ ನಾಟಕಗಳೆಲ್ಲವೂ ಪ್ರಭುತ್ವದ ವಿರುದ್ಧ ಎಚ್ಚರ ಮೂಡಿಸುವಂತಿದ್ದುದನ್ನು ಮರೆಯಲಾಗದು. ಸಮಾಜದ ಕೇಡಿನ ಮುಖವಾಡಗಳನ್ನು ತೆರೆಯುವ ಮತ್ತೊಂದು ವಿಶಿಷ್ಠ ರಂಗ ಸಾಧ್ಯತೆಯನ್ನೂ ಇಲ್ಲೇ ನೆನೆಯಬೇಕು. ಚಿ. ಶ್ರೀನಿವಾಸ ರಾಜು ಅವರ ಮೂಕ ನಾಟಕಗಳು ಕನ್ನಡ ಸಮಾಜದ ರೂಪದಲ್ಲೇ ಆದರೆ ನಗರ ಕೇಂದ್ರಿತ ದೃಷ್ಟಿಯಲ್ಲೇ ರಂಗ ಭೂಮಿಯಲ್ಲಿ ಹೊಸದೊಂದು ಸಾಧ್ಯತೆಯನ್ನು ತೆರೆದವು.

ಅಸಂಗತ ನಾಟಕಗಳು ಸಾಹಿತ್ಯ ಸಂವೇದನೆಯ ಭಾಗವಾಗಿದ್ದವು. ಶುದ್ಧ ಸಾಹಿತ್ಯ ರಚನೆಯ ಧೋರಣೆಯೂ ಇವುಗಳಲ್ಲಿತ್ತು. ಸೂಕ್ಷ್ಮ ಸಂವೇದನೆಯ ಹುಡುಕಾಟ ಈ ನಾಟಕಗಳಲ್ಲಿತ್ತು. ಅಂತರ್‌ಮುಖಿಯ ಸ್ವಭಾವದಲ್ಲಿ ಸಮಾಜವನ್ನು ಮುಖಾಮುಖಿಯಾಗುವ ಭಾವವೇ ಇಲ್ಲಿ ಮುಖ್ಯವಾಗಿತ್ತು. ವ್ಯಗ್ರಗೊಂಡ ಯುವ ಜನಾಂಗದ ತಲ್ಲಣ, ವಿಷಾದ, ಖಿನ್ನತೆಗಳನ್ನು ಈ ಕಾಲದ ನಾಟಕಗಳು ಪ್ರಚುರಪಡಿಸುತ್ತವೆ. ಲಂಕೇಶರ ಬಹುಪಾಲು ನಾಟಕಗಳು ವಾಸ್ತವ ಸಮಾಜದ ಕೆಡುಕಿನ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತವೆ. ಇದು ನವ್ಯ ಪ್ರಜ್ಞೆಯ ಪ್ರಭಾವ. ಒಟ್ಟಿನಲ್ಲಿ ನವ್ಯ ಪ್ರಜ್ಞೆಯ ನಾಟಕಗಳು ಕನ್ನಡ ನಾಡು ಹೇಗೆ ಆಧುನಿಕ ಸಮಾಜದ ಕಡೆ ಚಲಿಸುವ ಸಂಕ್ರಮಣ ಸ್ಥಿತಿಯಲ್ಲಿ ವ್ಯಕ್ತಿ ಸಂಬಂಧಗಳು ಭಗ್ನಗೊಂಡಿವೆ ಎಂಬ ರೀತಿಯನ್ನುತೋರುತ್ತವೆ. ಇದೇ ಸಂದರ್ಭದಲ್ಲಿ ಬಹುಮುಖ್ಯ ನಾಟಕಕಾರಾಗಿದ್ದ ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರನ್ನು ಪ್ರತ್ಯೇಕವಾಗಿ ಗಮನಿಸಬೇಕಾಗುತ್ತದೆ.ಕಂಬಾರರು ‘ನಾರ್ಸಿಸಸ್’ ಎಂಬ ಅಸಂಗತ ನಾಟಕ ರಚಿಸಿದರಾದರೂ ಅಂತಹ ಯತ್ನವನ್ನು ಮುಂದುವರಿಸಲಿಲ್ಲ. ಅಸಂಗತ ನಾಟಕ ರಚನೆಗಳ ಸಂದರ್ಭದಲ್ಲೆ ಈ ಇಬ್ಬರೂ ನಾಟಕಕಾರರು ಭಿನ್ನವಾಗುಳಿಯುತ್ತಾರೆ. ಇವರ ಸಾಮಾಜಿಕ ಹೊಣೆಗಾರಿಕೆಯು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಗಿರೀಶ್ ಕಾರ್ನಾಡ್ ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಂತವರು. ಕಂಬಾರರೂ ಅದೇ ಸಾಲಿನಲ್ಲಿರುವವರು. ಕಾರ್ನಾಡರು ಪುರಾಣಗಳನ್ನು ಅನುಸರಿಸಿ ಚರಿತ್ರೆಯ ಗತವನ್ನು ತಮ್ಮ ಸೃಜನಶೀಲತೆಗೆ ಆಧಾರವಾಗಿಸಿಕೊಳ್ಳುತ್ತಾರೆ.ವರ್ತಮಾನದ ಸಮಾಜದ ಕಡೆಗೆ ಅವರು ಆಕಸ್ತಕರಲ್ಲ. ಕಂಬಾರರದೂ ಹೆಚ್ಚು ಕಡಿಮೆ ಇದೇ ಬಗೆ. ಜಾನಪದ ಪರಂಪರೆಗಳನ್ನು ಆಶ್ರಯಿಸಿ ನಾಟಕ ಬರೆದ ಕಂಬಾರರು ಹಳ್ಳಿಯ ಮುಗ್ಧ ರಮ್ಯ ಲೋಕವನ್ನು ಅದರ ಸಾಂಪ್ರದಾಯಿಕ ಕ್ರಮಗಳಲ್ಲಿ ಪ್ರತಿಧ್ವನಿಸುತ್ತಾರೆ. ‘ಜೈಸಿದ ನಾಯ್ಕ’ ನಾಟಕ ಆ ಮಟ್ಟಿಗೆ ಭಿನ್ನವಾದ ರಚನೆ. ಜನಪದ ರಂಗಭೂಮಿಯ ಗುಣ ಕಂಬಾರರು ಅಂತರಂಗದಲ್ಲಿ ಸಾಂಪ್ರದಾಯಿಕ ಜೀವನ ಮೌಲ್ಯಗಳ ವ್ಯಾಮೋಹಿ. ಇವರಲ್ಲಿ ಕೂಡ ಗತಕಾಲದ ಜಾನಪದ ಲೋಕವೇ ತೆರೆದುಕೊಳ್ಳುತ್ತದೆ. ತನ್ನ ಸುತ್ತಲಿನ ವರ್ತಮಾನದ ಸಮಾಜದಲ್ಲಿ ಘಟಿಸುವ ಸಂಕಟಗಳ ಜೊತೆಗೂಡದೆ ದೂರ ಸರಿದಂತೆ ಈ ಇಬ್ಬರೂ ನಾಟಕಕಾರರು ಕಾಣುತ್ತಾರೆ.

ಜಗತ್ತಿನ ಕ್ರಾಂತಿಗಳ ವೇಳೆಯಲ್ಲಿ ರಂಗಭೂಮಿಯು ಹೇಗೆ ನಡೆದುಕೊಂಡಿದೆ ಎಂಬುದನ್ನು ಚರಿತ್ರೆಯಲ್ಲಿ ಕಂಡಿದ್ದೇವೆ. ರಷ್ಯಾದ ಕ್ರಾಂತಿಯ ಕಾಲದಲ್ಲಿ ಸೃಷ್ಟಿಯಾದ ಸಾಹಿತ್ಯದ ಬಗ್ಗೆಯೂ ಸಾಕಷ್ಟು ತಿಳುವಳಿಕೆ ಇದೆ. ಎಪ್ಪತ್ತರ ದಶಕದಲ್ಲಿ ಇಂತಹ ವಿಚಾರಗಳು ವಿಶೇಷವಾಗಿ ಪ್ರಚಾರವಾಗುತ್ತಿದ್ದವು. ಇಂತಹ ಕಾಲಘಟ್ಟದಲ್ಲಿದ್ದ ಈ ಇಬ್ಬರೂ ಲೇಖಕರು ಕ್ರಾಂತಿಯ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳದೇ ಹೋದದ್ದು ಕುತೂಹಲಕರವಾಗಿದೆ. ವ್ಯಕ್ತಿಕೇಂದ್ರಿತ ತಿಳುವಳಿಕೆಯ ಮೂಲಕ ಸಮಾಜವನ್ನು ನೋಡುವ ನವ್ಯರ ಗುಣ ಈ ಇಬ್ಬರೂ ನಾಟಕಕಾರರಲ್ಲಿ ಭಿನ್ನವಾಗಿ ಕಂಡುಬರುತ್ತದೆ. ಸಮಾಜದ ತಿಳುವಳಿಕೆಯ ಮೂಲಕವೇ ಸಾಹಿತ್ಯ ಸೃಷ್ಟಿಯಾಗಬೇಕು; ಆ ಮೂಲಕ ಸಮುದಾಯ ಮತ್ತು ನಾಡು ನುಡಿ ಬಿಡುಗಡೆ ಹೊಂದಬೇಕು ಎಂಬ ದಲಿತ ಬಂಡಾಯದ ಚಿಂತನೆ ಈ ನಾಟಕಕಾರರಲ್ಲಿ ಇರದಿದ್ದುದು ವಿಪರ್ಯಾಸ. ಈ ನಾಟಕಕಾರರು ಇದ್ದ ಕಾಲದಲ್ಲೆ ದಲಿತ ಬಂಡಾಯ ಚಳುವಳಿ ತೀವ್ರವಾಗಿತ್ತು. ಸಾಹಿತ್ಯವು ಬೀದಿಯಲ್ಲಿ ಚಲಿಸುವಾಗ ಇವರು ರಂಗ ಭೂಮಿಯ ತೆರೆಮರೆಯಲ್ಲಿ ಗತಕಾಲದ ಚರಿತ್ರೆಯನ್ನೂ ಜಾನಪದವನ್ನೂ ಅಭಿನಯಿಸುತ್ತಿದ್ದುದು ನಾಟಕೀಯವಾಗಿದೆ. ಹಾಗೆಂದು ಇವರ ರಂಗಸಾಹಿತ್ಯವನ್ನು ಯಾವ ರೀತಿಯಿಂದಲೂ ಅಗೌರವಿಸಲಾಗದು. ಕನ್ನಡ ರಂಗಭೂಮಿಯ ವಿಸ್ತರಣೆಯಲ್ಲಿ ಇವರ ಪಾತ್ರ ಅಮೂಲ್ಯವಾದದು. ಹೊಸ ಸಂವೇದನೆಗೆ ಇಬ್ಬರೂ ನಾಟಕಕಾರರು ಜೀವ ತಂದುಕೊಟ್ಟರು. ಸಾಮಾಜಿಕ ಅಭಿವ್ಯಕ್ತಿಯಲ್ಲಿ ಹಿಂದಿದ್ದರೂ ನಾಟಕ ಪ್ರಕಾರದ ಸಾಹಿತ್ಯದ ನೆಲೆಯಲ್ಲಿ ಗಿರೀಶ್ ಕಾರ್ನಾಡ್ ಮತ್ತು ಕಂಬಾರರ ಕೊಡುಗೆ ದಟ್ಟವಾಗಿದೆ. ಮೊದಲ ಬಾರಿಗೆ ರಂಗಭೂಮಿಯ ನವೀನ ಪ್ರಯೋಗಗಳು ಇವರ ನಾಟಕಗಳ ಮೂಲಕ ಆದದ್ದು ರಾಷ್ಟ್ರೀಯ ಮಟ್ಟದ ರಂಗಸಾಧನೆಗಳಿಗೆ ಕಾರಣವಾಯಿತು. ಇದೇ ವೇಳೆಯಲ್ಲಿ ಬಿ.ವಿ.ಕಾರಂತರು ರಂಗಭೂಮಿಯಲ್ಲಿ ಹೊಸ ವಾತಾವರಣವನ್ನುಉಂಟು ಮಾಡಿದರು. ಅಲ್ಲದೆ ಕೆ.ವಿ. ಸುಬ್ಬಣ್ಣ ಅವರು ನಿನಾಸಂ ರಂಗ ಸಮಾಜವನ್ನು ತೆರೆಯುವ ಮೂಲಕ ರಂಗ ಸಂಚಲನ ಉಂಟಾಯಿತು.

ಸಾಹಿತ್ಯ ಮತ್ತು ಸಮಾಜದಲ್ಲಿ ಉಂಟಾಗುತ್ತಿದ್ದ ತೀವ್ರ ಬದಲಾವಣೆಗಳಂತೆಯೇ ರಂಗಭೂಮಿಯಲ್ಲು ಆದದ್ದು ಸಹಜವಾಗಿತ್ತು. ಬಿ.ವಿ. ಕಾರಂತ ಮತ್ತು ಕೆ.ವಿ. ಸುಬ್ಬಣ್ಣ ನವರಷ್ಟೇ ಸಮರ್ಥವಾಗಿ ಆದರೆ ವಿಭಿನ್ನವಾಗಿ ಪ್ರಸನ್ನ ಹಾಗು ಸಿ.ಜಿ.ಕೆ ಅವರು ಇದೇ ಕಾಲದಲ್ಲಿ ರಂಗಭೂಮಿಯಲ್ಲಿ ಹೊಸದನಿಯಾಗಿ ಕಾಣಿಸಿಕೊಂಡರು. ಸಿ.ಜಿ.ಕೆ. ಪ್ರಸನ್ನ ಇಬ್ಬರೂ ಇಡೀ ಸಮಾಜ ಮತ್ತು ಅದರ ಸಮುದಾಯವನ್ನೆ ರಂಗಭೂಮಿ ಯನ್ನಾಗಿಸಿ ಕೊಂಡರು. ಕಂಬಾರ ಕಾರ್ನಾಡರ ನಾಟಕಗಳನ್ನು ಪ್ರಯೋಗ ಮಾಡುವುದಕ್ಕಿಂತಲೂ ಮಿಗಿಲಾದದ್ದು ಬೇರೆ ಇದೆ ಎಂಬುದನ್ನು ತೋರಿಸಿಕೊಟ್ಟರು. ನಾಲ್ಕು ಗೋಡೆಗಳ ಮಧ್ಯೆ ಸಜ್ಜನ ಪ್ರೇಕ್ಷಕರ ಮುಂದೆ ಹೇಳಬೇಕಾದುದಕ್ಕಿಂತಲೂ ಜನರ ಮಧ್ಯೆ ಅವರದೆ ಹಾಡು ಪಾಡಿನ ಜೊತೆ ಅವರದೇ ರೀತಿ ನೀತಿಯಲ್ಲಿ ಅಭಿನಯಿಸುತ್ತ ಅವರನ್ನು ಎಚ್ಚರಿಸುವುದೇ ನಿಜವಾದ ರಂಗಕ್ರಾಂತಿ ಎಂದು ಈ ಇಬ್ಬರೂ ರಂಗ ನಿರ್ದೇಶಕರು ತಿಳಿದರು. ಆದ್ದರಿಂದಲೇ ಸಿ.ಜಿ.ಕೆ ಅವರು ದಲಿತರ ಹಾಗು ಕಾರ್ಮಿಕರ ಮೇಲಿನ ಹಲ್ಲೆ ದೌರ್ಜನ್ಯ ಹೇಯ ಹಿಂಸೆಯ ವಸ್ತು ವಿಷಯವನ್ನೆ ರಂಗಕೃತಿಯನ್ನಾಗಿ ಮಾರ್ಪಡಿಸಿ ದಲಿತ ಬಂಡಾಯದ ಹೋರಾಟದ ಭಾಗವಾಗಿ ರಂಗಭೂಮಿಯನ್ನು ಜನರೆಡೆಗೆ ಕೊಂಡೊಯ್ದರು. ಇದಕ್ಕೆ ತಕ್ಕಂತೆ ಸಮುದಾಯ ರಂಗ ಚಳುವಳಿಯನ್ನು ರೂಪಿಸಿದರು.

ಕರ್ನಾಟಕದ ಉದ್ದಕ್ಕೂ ಸಮುದಾಯದ ಕಲಾ ತಂಡಗಳು ಕಲಾ ಜಾಥವನ್ನು ಆಯೋಜಿಸುವ ಮೂಲಕ ಜನಜಾಗೃತಿಯನ್ನು ಉಂಟು ಮಾಡಿದವು. ಭೂ ಮಾಲೀಕರ ದರ್ಪವನ್ನು ಖಂಡಿಸುವ ಹಾಗು ಹಿಂದೂ ಧರ್ಮದ ಮತಮೌಢ್ಯಗಳನ್ನು ಧಿಕ್ಕರಿಸುವ ರಂಗ ಚಟುವಟಿಕೆಗಳು ಇದರಿಂದಾದವು. ಇದರ ಬೆನ್ನಲ್ಲೆ ವಿಚಾರವಾದಿ ಒಕ್ಕೂಟಗಳು ಹುಟ್ಟಿಕೊಂಡವು. ಬೂದಿ ಬಾಬಾಗಳ ನಾಟಕವನ್ನು ಬಯಲು ಮಾಡಲಾಯಿತು. ಕಲಾ ಜಾಥಾಗಳು ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ದಲಿತ ಬಂಡಾಯ ಚಳುವಳಿಗಳ ಜೊತೆ ಕೈಜೋಡಿಸಿದವು. ಬೀದಿ ನಾಟಕಗಳು ವ್ಯಾಪಿಸಿದವು. ಹೋರಾಟದ ಹಾಡುಗಳು ಪ್ರತಿಧ್ವನಿಸಿದವು. ಆಂಧ್ರದ ಗದ್ದರ್ ಪ್ರಭಾವವೂ ಬೀದಿ ನಾಟಕಗಳಲ್ಲಿ ಕಾಣಿಸಿಕೊಂಡಿತು. ಸಮುದಾಯವು ಎಲ್ಲ ನೊಂದವರ ಪರವಾದ ನ್ಯಾಯದ ದನಿಯನ್ನು ಮೂಡಿಸಿತು. ಹೀಗಾಗಿ ಆ ತನಕ ಇದ್ದ ರಂಗಭೂಮಿಯ ನಂಬಿಕೆಗಳು ನುಚ್ಚು ನೂರಾದವು. ಇದು ಅನಿವಾರ್ಯವಾಗಿತ್ತು. ಬೀದಿ ನಾಟಕಗಳು ಜನರ ತುರ್ತಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದವು. ಈ ಸ್ಥಿತಿಯಲ್ಲಿ ಗಿರೀಶ್‌ಕಾರ್ನಾಡ್, ಚಂದ್ರಶೇಖರ ಕಂಬಾರ, ಲಂಕೇಶ್ ಗಂಭೀರ ನಾಟಕಗಳ ರಚನೆಯಲ್ಲಿದ್ದರು. ಸಮುದಾಯವು ಅತ್ಯುತ್ತಮ ರಂಗ ಪ್ರತಿರೋಧದ ವೇದಿಕೆಯಾಗಿತ್ತೇ ಹೊರತು ನಾಟಕ ಸಾಹಿತ್ಯದ ಕಲಾತ್ಮಕತೆಯ ಕಡೆಗೆ ವಿಶೇಷ ಗಮನವಿರಲಿಲ್ಲ.

ಸಮುದಾಯ ರಂಗ ಚಳುವಳಿಯ ಪರಿಣಾಮ ಮಹತ್ವದ್ದು. ಏಕೀಕರಣೋತ್ತರ ಕರ್ನಾಟಕದ ರಂಗಭೂಮಿಯು ಜನಪರವಾಗಿರಬೇಕೇ ಹೊರತು ಅದು ಮನರಂಜನೆಗೆ ಸೀಮಿತವಾಗಬಾರದು ಎಂಬ ಕರೆಯನ್ನು ನೀಡಿತು. ಅಷ್ಟೇ ಅಲ್ಲ ಅದನ್ನು ಸಾಧಿಸಿತು. ಸಮುದಾಯದ ಈ ಬಗೆಯ ರಂಗ ಪಲ್ಲಟದ ಜೊತೆ ಪೈಪೋಟಿ ಮಾಡಿದಂತೆ ಕೆ.ವಿ.ಸುಬ್ಬಣ್ಣ ಅವರ ನಾಟಕಶಾಲೆ ‘ನಿನಾಸಂ’ ಬೇರೊಂದು ಆಯಾಮದಲ್ಲಿ ಕೆಲಸ ಮಾಡಲು ತೊಡಗಿತು. ಶ್ರೇಷ್ಠ ನಾಟಕ ಸಾಹಿತಯ ಹಾಗು ರಂಗ ಪ್ರಯೋಗಗಳನ್ನು ಬೆಳೆಸುವ ಮತ್ತು ರಂಗ ಕಲಾವಿದರನ್ನು ರೂಪಿಸುವ ಯೋಜನೆಗಳನ್ನು ಹಾಕಿಕೊಂಡು ಕರ್ನಾಟಕದ ರಂಗ ಸಾಧ್ಯತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದರು. ಎರಡು ವಿಭಿನ್ನ ರಂಗ ಸಾಧ್ಯತೆಗಳು ಏಕಕಾಲಕ್ಕೆ ಆದದ್ದು ಆ ಕಾಲದಲ್ಲಿ ಉಂಟಾಗುತ್ತಿದ್ದ ಸಾಹಿತ್ಯಿಕ ಹಾಗೂ ಸಾಮಾಜಿಕ ಚಳುವಳಿಗಳ ಸಹಯೋಗದೊಂದಿಗೆ ಎಂಬುದನ್ನು ನೆನೆಯಲೇ ಬೇಕು. ಇದೇ ಕಾಲದ ದಲಿತ ಬಂಡಾಯ ಸಮುದಾಯ ಕಲಾ ತಂಡಗಳು ಕಟ್ಟಿದ ಹೋರಾಟದ ಹಾಡುಗಳನ್ನು ಗುರುತಿಸಬೇಕು. ಸ್ವಾತಂತ್ರ‍್ಯ ಸಂಗ್ರಾಮ ಹಾಗೂ ಏಕೀಕರಣದಲ್ಲಿ ಹುಟ್ಟಿದ್ದ ಲಾವಣಿಗಳಿಗಿಂತ ಹೋರಾಟದ ಹಾಡುಗಳು ಭಿನ್ನವಾಗಿದ್ದವು. ನಾಡನ್ನು ಕುರಿತು ಹಾಡುವುದಕ್ಕಿಂತ ನಾಡಿನ ನಾಡಿ ಬಡಿತದಂತಿದ್ದ ಬಡವರ ಬಗ್ಗೆ ಹಾಡುವುದು ಏಕೀಕರಣೋತ್ತರ ಕರ್ನಾಟಕದ ಎಚ್ಚೆತ್ತ ಸಮುದಾಯಗಳ ಕೊರಳಿಗೆ ಅನಿವಾರ್ಯವಾಗಿತ್ತು. ಈ ಹಾಡುಗಳ ದಲಿತರ ಆಕ್ರಮಧನವು ವಿಧಾನ ಸೌಧದ ಅಂಗಳಕ್ಕೆ ತಾಕಿ ವ್ಯವಸ್ಥೆಯ ಕುರ್ಚಿಗಳು ಕಂಪಿಸಿದವು. ಇದರಿಂದ ದಲಿತ ಬಂಡಾಯ ಕಾವ್ಯಕ್ಕೂ ಅನುಕೂಲವಾಯಿತಲ್ಲದೆ ಹೋರಾಟಕ್ಕೆ ತಕ್ಕಂತೆ ಕಾವ್ಯ ರಚನೆ ಸಾಧ್ಯವಾಯಿತು.

ಇಂತಹ ಅಭಿವ್ಯಕ್ತಿಗಳಿಗೆ ಸಾಮಾಜಿಕ ನ್ಯಾಯದ ಒತ್ತಡವಿದ್ದಂತೆಯೇ ಸಾಂಸ್ಕೃತಿಕವಾದ ಎಚ್ಚರವೂ ಕಾರಣವಾಗಿತ್ತು. ದಲಿತ ಸಮಾಜದ ಎಚ್ಚೆತ್ತ ವರ್ಗವು ತನ್ನ ಮೌಖಿಕ ಪರಂಪರೆಯ ಕಲೆ ಮತ್ತು ಸಾಹಿತ್ಯದ ಗುಣಗಳನ್ನು ತಮ್ಮ ಕಾಲದ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡರು. ಬೀದಿನಾಟಕಗಳಲ್ಲಿ ಈಅಂಶಗಳು ವ್ಯಕ್ತವಾದವು. ಸಮಾಜವನ್ನು ಎಚ್ಚರಿಸಲು ಆ ಬಗೆಯ ಸಾಂಸ್ಕೃತಿಕ ಪ್ರತಿರೋಧಗಳು ಬಳಕೆಯಾದವು. ಚೌಕಟ್ಟಿನ ರಂಗ ಪರಂಪರೆಗೆ ಇದರಿಂದ ಅಘಾತವೇ ಅಯಿತೆನ್ನಬೇಕು. ಆದರೆ ಕರ್ನಾಟಕದ ಸಾಮಾಜಿಕ ವ್ಯವಸ್ಥೆಯ ನ್ಯಾಯದ ನೆಲೆಯಲ್ಲಿ ಒಳ್ಳೆಯದೇ ಆಗಿತ್ತು. ಒಟ್ಟಾರೆಯಾಗಿ ಸಮುದಾಯ ರಂಗ ಚಳುವಳಿಯ ಕಾಲವು ಅಳಿಸಲಾಗದ ಪರಿಣಾಮಗಳನ್ನು ಸಾಹಿತ್ಯ ಸಂಗೀತ ಕಲೆ ರಂಗಾಭಿನಯಗಳಲ್ಲಿ ಮಾಡಿದ್ದನ್ನು ಚಾರಿತ್ರಿಕವಾಗಿ ಪರಿಗಣಿಸಲೇಬೇಕು. ಒಂದೇ ಕಾಲಾವಧಿಯಲ್ಲಿ ಕರ್ನಾಟಕದ ರಂಗಭೂಮಿಯಲ್ಲಿ ತೀವ್ರಗತಿಯ ಬದಲಾವಣೆಗಳು ಆದದ್ದು ಅಚ್ಚರಿ ಮೂಡಿಸುವಂತಿದೆ. ರಂಗ ಪಠ್ಯ, ರಂಗ ಪ್ರಯೋಗ, ರಂಗ ತಂತ್ರ, ರಂಗ ವಿನ್ಯಾಸ, ರಂಗ ಸಂಗೀತ, ರಂಗ ವಿಸ್ತರಣೆಯಂತಹ ಮಹತ್ವದ ನೆಲೆಗಳಲ್ಲಿ ಹೊಸ ರೀತಿ ನೀತಿಗಳು ಬೆಳೆದವು. ಜೊತೆಗೆ ರಂಗ ಕಲಾವಿದರ ದೊಡ್ಡ ಪಡೆಯ ಬೆಳೆಯಿತು. ಹೊಸ ಬಗೆಯ ನಿರ್ದೇಶಕರು ನಟರು ರಂಗ ತಂತ್ರಜ್ಞರು, ನಾಟಕಕಾರರು ಬೆಳಕಿಗೆ ಬಂದರು. ಅಲ್ಲದೆ ನಾಟಕ ಸಾಹಿತ್ಯವು ವೃದ್ದಿಯಾಗಿ ಪ್ರತ್ಯೇಕವಾದ ಕರ್ನಾಟಕ ನಾಟಕ ಅಕಾಡಮಿ ಹುಟ್ಟಿಕೊಳ್ಳುವುದಕ್ಕೂ ದಾರಿಯಾಯಿತು. ಇದು ಎಪ್ಪತ್ತರ ದಶಕದ ರಂಗ ಚಳುವಳಿಯ ಬಹುರೂಪಿ ರೂಪಾಂತರಗಳಿಗೆ ಪಲ್ಲಟಗಳಿಗೆ ಸಿಕ್ಕಿದ ಫಲ ಕೂಡ. ಆದರೆ ಇದೇ ಸ್ಥಿತಿಯು ಮುಂದಿನ ದಶಕಗಳಲ್ಲಿ ಕರಗಿ ಬೇರೆ ಆಯಾಮಗಳಿಗೆ ಅವಕಾಶ ಕಲ್ಪಿಸಿತು.

* * *