ದಲಿತ ಬಂಡಾಯ ಸಾಹಿತ್ಯ ಸಂವೇದನೆಯು ಸಾಮಾಜಿಕ ಚಳುವಳಿಯ ಭಾಗವಾಗಿ ರೂಪುಗೊಂಡಿತು. ಸಾಹಿತ್ಯವು ಸಮಾಜದ ಬದಲಾವಣೆಗೆ ಸೃಷ್ಟಿಯಾಗಬೇಕೇ ಹೊರತು ಅದು ಓದುಗರಿಗೆ ಸುಖ ನೀಡುವ ಅಭಿವ್ಯಕ್ತಿ ಮಾಧ್ಯಮವೂ ಅಲ್ಲ ಹಾಗೆಯೇ ವ್ಯಕ್ತಿ ಶ್ರೇಷ್ಠತೆಯನ್ನು ಸ್ಥಾಪಿಸಿಕೊಳ್ಳಲು ಇರುವ ವೇದಿಕೆಯೂ ಅಲ್ಲ ಎಂಬ ಖಚಿತ ನಿಲುವನ್ನು ದಲಿತ ಬಂಡಾಯ ಮನೋಧರ್ಮವು ಅಲಕ್ಷಿತ ಸಮುದಾಯಗಳ ಪರವಾದ ದನಿಯನ್ನು ಮೊದಲಿಗೆ ಎತ್ತಿತು. ಪಂಪನಿಂದ ಆರಂಭವಾಯಿತೆನ್ನಲಾಗುವ ಲಿಖಿತ ಪರಂಪರೆಯ ಸಾಹಿತ್ಯ ಸೃಷ್ಟಿಯ ಹಾದಿಯಲ್ಲಿ ದಲಿತರ ದನಿಯ ವಿಭಿನ್ನವಾಗಿ ಮೊದಲಿಗೆ ಅರ್ಥ ಹೊರಡಿಸಿತು. ಪ್ರಭುತ್ವ ಮತ್ತು ಸಮಾಜಗಳೆರಡನ್ನೂ ಏಕಕಾಲಕ್ಕೆ ಪ್ರಶ್ನಿಸಿತು. ಪ್ರತಿಷ್ಠಿತ ಸಾಹಿತ್ಯ ಮೌಲ್ಯಗಳನ್ನೂ ಭಗ್ನಪಡಿಸಿತು. ಮತಧರ್ಮಗಳ ಮೇಲೆ ದಂಗೆ ಸಾರಿತು. ಜಾತಿ ನಿರ್ಮೂಲನಕ್ಕಾಗಿ ಆಕ್ರಂಧನ ದನಿಯಲ್ಲಿ ಕಹಳೆ ಮೊಳಗಿಸಿತು. ಮಾನವತಾ ವಾದವನ್ನು ಅಂಬೇಡ್ಕರ್ ವಾದದ ಮೂಲಕ ಅಭಿವ್ಯಕ್ತಿಸಲು ತನಗೇ ವಿಶಿಷ್ಟವಾದ ಹೋರಾಟದ ಮಾರ್ಗವನ್ನು ದಲಿತ ಬಂಡಾಯ ಮನೋಧರ್ಮಗಳು ಕಂಡುಕೊಂಡವು. ಅದರಲ್ಲಿ ದಲಿತ ಪ್ರಜ್ಞೆಯು ಗಾಢವಾದ ಚಾರಿತ್ರಿಕ ನೆನಪುಗಳಿಂದ ವ್ಯವಸ್ಥೆಯ ವಿರುದ್ಧ ಯುದ್ಧ ಸಾರಿತು. ಸಾಂಸ್ಕೃತಿಕವಾದ ದಲಿತರ ಹೋರಾಟಗಳಲ್ಲಿ ಸಮಾನತೆಯ ಕನಸು ದಟ್ಟವಾಗಿತ್ತು.

ಇಂತಲ್ಲಿ ಕನ್ನಡ ಭಾಷೆ ಅದರ ಸಂಸ್ಕೃತಿ, ಧರ್ಮ, ಮತಮೌಢ್ಯ ಕಂದಾಚಾರ ಹಾಗೂ ಸಾಮಾಜಿಕ ಅನಿಷ್ಠಗಳನ್ನೆಲ್ಲ ಏಕಕಾಲಕ್ಕೆ ಮುಖಾಮುಖಿಯಾಗುವಾಗ ಸಾಹಿತ್ಯಕ್ಕಿಂತಲೂ ಮಿಗಿಲಾದ ಮಾನವ ಹೊಣೆಗಾರಿಕೆ ಎದುರಾಗುತ್ತದೆ. ಏಕೀಕರಣೋತ್ತರ ಕನ್ನಡ ನಾಡಿನಲ್ಲಿ ಮೊದಲಿಗೆ ದಲಿತರ ಆಕ್ರಂಧನವು ವಿಶೇಷ ಅರ್ಥಗಳನ್ನು ಮೊಳಗಿಸಿತು. ಕೇವಲ ಕನ್ನಡ ಭಾಷೆಯ ರಕ್ಷಣೆಯೇ ದಲಿತರ ಮೊದಲ ಆದ್ಯತೆ ಆಗಿರಲಿಲ್ಲ. ದಲಿತರು ಕನ್ನಡ ಭಾಷೆಯ ಜೊತೆಯಲ್ಲೆ ಅನೇಕ ಬಗೆಯ ತಮ್ಮ ಮನೆ ಒಳಗಿನ ಬಹುರೂಪಿ ಭಾಷೆಗಳನ್ನು ಉಳಿಸಿ ಕೊಂಡು ತಮ್ಮ ಸಾಮಾಜಿಕತೆಯ ಭಾಗವಾಗಿಸಿಕೊಂಡಿದ್ದರು.  ಏಕೀಕರಣಗೊಂಡಿದ್ದ ನಾಡಿನ ಸಾಮಾಜಿಕ ಶ್ರೇಣಿಯಲ್ಲೆ ದಲಿತರು ನ್ಯಾಯ ಕೇಳಬೇಕಾದ ಅನಿವಾರ್ಯತೆ ಇತ್ತು. ಏಕೀಕರಣ ಚಳುವಳಿಯಲ್ಲಿ ದಲಿತರು ಭಾಗವಹಿಸಿ ತಮ್ಮ ನಾಡಿಗೆ ಸ್ವಾತಂತ್ರ್ಯ ಹಾಗೂ ಪ್ರತ್ಯೇಕ ಚಹರೆ ಬೇಕು ಎಂದು ಹಕ್ಕೊತ್ತಾಯ ಮಾಡುವಷ್ಟು ಸುರಕ್ಷಿತ ಸ್ಥಿತಿಯಲ್ಲಿ ಇರಲಿಲ್ಲ. ದಲಿತ ಸಮಾಜ ಆಗಿನ್ನೂ ಎದ್ದು ನಿಲ್ಲಲು ಯತ್ನಿಸುತ್ತಿತ್ತು. ‘ಬಹಿಷ್ಕೃತ ಭಾರತ’ದ ಅಂಬೇಡ್ಕರ್ ಪ್ರಶ್ನೆಯಲ್ಲಿ ಜಾಗೃತರಾಗುತ್ತಿದ್ದ ದಲಿತರ ಪಾಲಿಗೆ ನಾಡುನುಡಿಯ ದಿವ್ಯತೆಯು ಅಷ್ಟಾಗಿ ತಟ್ಟಿರಲಿಲ್ಲ. ನಾಡುನುಡಿಯಿಂದ ತಮ್ಮ ಮುಕ್ತಿ ಸಾಧ್ಯ ಎಂದು ನಂಬುವಂತೆಯೂ ಇರಲಿಲ್ಲ. ಹೀಗಾಗಿ ದಲಿತ ಸಾಹಿತ್ಯ ಕನ್ನಡ ಭಾಷೆಯ ಜನಪ್ರಿಯ ಹೋರಾಟಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ದಲಿತ ಬಂಡಾಯ ಸಾಹಿತ್ಯ ಚಳುವಳಿಗಳು ಸಾಮಾಜಿಕ ನ್ಯಾಯದ ಕನ್ನಡ ದನಿಯನ್ನು ಗಾಢವಾಗಿ ವಿಸ್ತರಿಸಿದವು. ಕನ್ನಡಿಗರಾಗಿದ್ದು ಕನ್ನಡ ಭಾಷೆಗಿಂತಲೂ ತಮ್ಮ ಪ್ರಾಣ ಉಳಿಸಿಕೊಳ್ಳುವುದೇ ಮುಖ್ಯ ಎಂಬ ಜೀವನ್ ಮರಣದ ಸಾಮಾಜಿಕ ಸ್ಥಿತಿ ದಲಿತರಿಗೆ ಇತ್ತು. ಇದರಿಂದಾಗಿಯೇ ಮೊದಲ ಬಾರಿಗೆ ದಲಿತ ಸಾಹಿತ್ಯವು ತನ್ನ ಅಸ್ತಿತ್ವದ ಆಕ್ರಂಧನವನ್ನು ಕನ್ನಡ ಭಾಷೆಯಲ್ಲೇ ಘನವಾಗಿ ಅಭಿವ್ಯಕ್ತಿಸಿತು. ಭಾಷಾ ಚಳುವಳಿಗಿಂತಲು ಆ ಭಾಷೆಯ ಬೇರಿನಂತಿರುವ ಸಮುದಾಯಗಳ ಉಳಿವೇ ಅಂತಿಮ ಎಂದು ದಲಿತರು ಸಾರಿದರು. ಹೀಗಾಗಿಯೇ ದಲಿತ ಬಂಡಾಯ ಕಾವ್ಯವು ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾಗಲು ಸಾಧ್ಯವಾದದ್ದು. ಸಾಹಿತ್ಯದ ಸುಧಾರಣೆಗಿಂತಲು ಸಮಾಜದ ಬದಲಾವಣೆಯೆ ನ್ಯಾಯೋಚಿತ ಎಂಬ ದಲಿತ ಬಂಡಾಯದ ತೀರ್ಮಾನವು ಸಾಹಿತ್ಯ ಮತ್ತು ಸಮಾಜಗಳ ನಡುವೆ ಹೊಸ ಒಪ್ಪಂದಗಳನ್ನು ಮಾಡಿತು.

ಭಾಷೆ ಉಳಿಯುವುದು ಆ ಭಾಷೆಯ ತಳದಂತಿರುವ ಸಮುದಾಯಗಳು ಬದುಕಿದಾಗಲೇ. ಆದ್ದರಿಂದಲೇ ಒಂದು ಸಮುದಾಯದ ಮೇಲಿನ ಅನ್ಯಾಯವು ಭಾಷೆಯ ಮೇಲಿನ ಅನ್ಯಾಯವೂ ಆಗಬಲ್ಲದು. ಒಂದು ಜಾತಿಯ ಆಕ್ರಮಣ ಶೀಲತೆಯ ಕೂಡ ಒಟ್ಟು ಮಾನವ ಭಾಷೆಯ ಬೆಳವಣಿಗೆಗೆ ಮಾರಕವೇ. ಜಾತಿನಿಷ್ಠ ಸಮಾಜದಲ್ಲಿ ಭಾಷಿಕ ನಿರ್ಬಂಧಗಳು ಸಮಾಜದ ಸಂವಹನವನ್ನು ನಿಯಂತ್ರಿಸಿರುತ್ತವೆ. ಜಾತಿ ಶ್ರೇಣಿಯ ನಿಯಮಗಳು ಭಾಷೆಗೂ ಅನ್ವಯಿಸುತ್ತವೆ. ಜಾತಿಗಳಿಗೆ ದತ್ತಕವಾದ ಊಳಿಗಮಾನ್ಯ ಅರ್ಥಾಧಿಕಾರಗಳು ಸಮಾಜದ ಪ್ರಗತಿಯ ಮೇಲೆ ಅಧಿಕಾರ ಚಲಾಯಿಸುತ್ತವೆ. ಜಾತಿಯ ಗುಣಾವಗುಣಗಳನ್ನು ಆಧರಿಸಿ ಉಪಭಾಷೆಗಳು ತೀರ್ಮಾನವಾಗಿರುತ್ತವೆ. ಭಾಷೆಯ ಆರ್ಥಾಧಿಕಾರಕ್ಕೂ ಸಮಾಜದ ಆರ್ಥಿಕತೆಗೂ ಸಂಬಂಧವಿರುತ್ತದೆ. ಆದ್ದರಿಂದಲೇ ಊಳಿಗಮಾನ್ಯ ಜಾತಿಗಳ ಆರ್ಥಿಕ ರಚನೆಗೂ ಅವರ ಸಾಮಾಜಿಕ ಸಂಬಂಧಗಳ ಗತಿಶೀಲತೆಗೂ ಸಂಬಂಧವಿರುವುದು. ಕನ್ನಡ ನಾಡಿನ ಭಾಷಿಕ ಪ್ರಭೇದಗಳ ಅಂತರಾಳದಲ್ಲಿ   ಈ ಬಗೆಯ ಚಾರಿತ್ರಿಕ ವೈರುಧ್ಯಗಳಿವೆ. ಏಕೀಕರಣೋತ್ತರ ಕನ್ನಡ ಸಮಾಜಗಳನ್ನು ಈ ಗಣನೆಗಳಿಂದ ಪ್ರತ್ಯೇಕಿಸಿ ನೋಡಲು ಬರುವುದೇ ಇಲ್ಲ. ಆದ್ದರಿಂದಲೇ ದಲಿತ ಬಂಡಾಯ ಸಂವೇದನೆಗಳ ಸಾಹಿತ್ಯಕ ಭಾಷೆಯು ಏಕೀಕರಣದ ಆಶಯಗಳ ಆಚೆಗಿನ ವಾಸ್ತವ ಭವಿಷ್ಯಗಳನ್ನು ಚಳುವಳಿಯ ಭಾಗವಾಗಿ ಗ್ರಹಿಸಿದ್ದು. ಇದರಿಂದ ಭಾಷೆಯ ಸಾವಯವ ಶಕ್ತಿಯಾದ ಸಮುದಾಯಗಳ ಅಸ್ತಿತ್ವದ ಪ್ರಶ್ನೆಗಳು ವ್ಯಕ್ತವಾಗಲು ಅವಕಾಶವಾಯಿತು. ದಲಿತ ಸಮಾಜದ ಒಳಗಿನ ಕುರುಹುರಹಿತ ಸಮುದಾಯಗಳ ಭಾಷಿಕ ಅಭಿವ್ಯಕ್ತಿಗೆ ಇದರಿಂದ ದಾರಿಯಾಯಿತು. ಕುವೆಂಪು ಅವರು ಈ ಮೊದಲೇ ಪ್ರತಿಧ್ವನಿಸಿದ್ದ ಪುರೋಹಿತ ಶಾಹಿ ನೆಲೆಯ ಆಚಾರವಿಚಾರಗಳ ವಿರುದ್ಧ ಬಂಡೇಳಲು ಇದರಿಂದ ಸಾಧ್ಯವಾಯಿತು.

ಕನ್ನಡ ಭಾಷೆಗೆ ರಾಜ್ಯಾಧಿಕಾರ ಮುಖ್ಯವೊ ಅದನ್ನು ಶತಮಾನಗಳಿಂದ ಕಾಯ್ದುಕೊಂಡು ಬಂದ ಸಮುದಾಯದ ಮುಕ್ತಿ ಮುಖ್ಯವೊ ಎಂಬ ವಿಚಾರ ಇದರಿಂದ ಉದ್ಭವಿಸಿತು. ಈ ಪ್ರಶ್ನೆ ಈಗಲೂ ಪರಿಹಾರಗೊಂಡಿಲ್ಲ. ದಲಿತ ಬಂಡಾಯ ಸಂವೇದನೆಗಳೇ ಹಿಂದೆ ಸರಿಯುತ್ತಿರುವ ಕಾಲದಲ್ಲೆ ಕನ್ನಡ ಭಾಷೆ ಮತ್ತು ಅನ್ಯಭಾಷೆಗಳ ಕೊಡುಕೊಳ್ಳುವಿಕೆಯ ಸಂಘರ್ಷಮಯ ವಿಚಾರಗಳು ಚಾಲ್ತಿಯಲ್ಲಿವೆ. ದಲಿತರಿಗೆ ಇಂಗ್ಲೀಷ್ ಭಾಷೆ ಬೇಕೊ ಕನ್ನಡ ಭಾಷೆಯೇ ಭವಿಷ್ಯದ ಭಾಷೆಯೋ ಎಂಬ ಜಿಜ್ಞಾಸೆಗಳು ಈ ಐವತ್ತು ವರ್ಷಗಳ ತರುವಾಯದಲ್ಲು ಮುಖ್ಯ ನೆಲೆಗೆ ಬಂದು ಭಿನ್ನಾಭಿಪ್ರಾಯಗಳ ಸಂತೆಯು ಗಂಭೀರವಾಗಿಯೇ ಸಾಗಿದೆ. ದಲಿತ ಸಮುದಾಯಗಳು ಕನ್ನಡ ಭಾಷೆಯ ಭಾಗವಾಗಿಯೇ ಬಾಳಿವೆ. ಆದರೆ ಹಾಗೆ ಬಾಳಿದ ಸಮಾಜಗಳು ವರ್ತಮಾನದಲ್ಲಿ ಎಲ್ಲಿ ಹೇಗೆ ಅಸ್ತಿತ್ವ ಸ್ಥಾಪಿಸಿಕೊಳ್ಳಬೇಕು ಎಂಬುದಕ್ಕೆ ಒಮ್ಮತದ ಅಭಿಪ್ರಾಯಗಳು ರೂಢಿಯಾಗಿಲ್ಲ. ಭಾಷೆಯನ್ನೆ ಪ್ರದಾನ ಮಾಡಿದರೆ ಜಾತಿ ಹಾಗೂ ಲಿಂಗ ತಾರತಮ್ಯಗಳಿಂದ ಆಗುವ ಅನ್ಯಾಯಗಳನ್ನು ಅದುಮಿಟ್ಟು ಕೊಳ್ಳಬೇಕಾಗುತ್ತದೆ. ದಲಿತರಿಗೆ ಇಂಗ್ಲೀಷ್ ಮಾಧ್ಯಮ ಬೇಕು ಎಂಬ ವಿಚಾರದಲ್ಲಿ ಕೆಲವು ಪ್ರತಿಷ್ಠಿತ ಕನ್ನಡ ವ್ಯಕ್ತಿಗಳು ಅಡ್ಡಗಾಲು ಹಾಕುವುದು ಯೋಗ್ಯವಲ್ಲ. ಇಲ್ಲಿ ಇಂಗ್ಲೀಷ್ ಭಾಷೆಯ ಪರವಾಗಿ ದಲಿತರು ಇಲ್ಲ.

ಮುಖ್ಯವಾಗಿ ಕಲಿಯುವ, ತಿಳಿಸುವ ವ್ಯವಹಾರಿಕ ಸಂವಹನ ಮಾಧ್ಯಮವಾಗಿ ಇಂಗ್ಲೀಷ್ ಭಾಷೆಯ ಕಡೆಗೆ ದಲಿತರು ವಾಲುತ್ತಿದ್ದಾರೆ. ಇದು ಮಾಧ್ಯಮದ ಅವಶ್ಯಕತೆಯನ್ನು ಹೇಳುತ್ತಿದೆಯೇ ವಿನಃ ಇಂಗ್ಲೀಷ್ ಭಾಷೆಯ ಗುಲಾಮಗಿರಿಯ ಕಡೆಗಿನ ಆಸಕ್ತಿಯನ್ನಲ್ಲ. ಭಾಷಿಕ ಮಾಧ್ಯಮ ಬೇರೆ ಹಾಗೆಯೇ ಭಾಷೆಯ ಆಯ್ಕೆ ಬೇರೆ. ಹಿನ್ನೆಲೆಯಿಂದ ನೋಡಿದರೆ ದಲಿತ ಬಂಡಾಯ ಸಾಹಿತ್ಯದ ವೈಚಾರಿಕತೆಯಲ್ಲೆ ವೈರುಧ್ಯಗಳಿವೆ. ಬದುಕುವ ಅಸ್ತಿತ್ವಕ್ಕಾಗಿ ದಲಿತರು ಹೊರಗಿನ ಇನ್ನೊಂದು ಭಾಷೆಯನ್ನು ಅಪೇಕ್ಷಿಸುವುದು ತನ್ನ ಮುಲ ಭಾಷೆಯ ಮೇಲಿನ ದ್ವೇಷದಿಂದಿಲ್ಲ. ತನ್ನ ಮೂಲ ಭಾಷೆಯ ಮೂಲಕವೇ ಇನ್ನೊಂದು ಭಾಷೆಯನ್ನು ತನ್ನದಾಗಿಸಿಕೊಂಡು ಒಂದು ಸಾಮಾಜಿಕ ವರ್ತಮಾನದಲ್ಲಿ ತಾನು ಅಸ್ತಿತ್ವ ಪಡೆದುಕೊಳ್ಳಲು ಅನ್ಯ ಭಾಷೆಯನ್ನು ಅಪೇಕ್ಷಿಸಲಾಗುತ್ತಿದೆಯೇ ಹೊರತು ತನ್ನ ಭಾಷೆಯನ್ನು ನಿರಾಕರಿಸುವ ರೀತಿಯಿಂದ ಇದು ಶೋಷಣೆಗೆ ಈಡಾದ ಸಮುದಾಯಗಳ ಸೂಕ್ಷ್ಮ ಆಯ್ಕೆ. ಚಂಪಾ ಅವರಂತಹ ಕನ್ನಡಸಾಹಿತ್ಯ ಪರಿಷತ್ತಿನ ಮಂದಿಯು ಇದನ್ನು ತಪ್ಪಾಗಿ ಗ್ರಹಿಸಬಾರದು. ದಲಿತರು ಕನ್ನಡ ಭಾಷೆಯ ವಿರೋಧಿಗಳಲ್ಲ. ನಿಜವಾಗಿಯೂ ಕನ್ನಡ ಭಾಷೆಯು ದಲಿತರಿಂದ ಅಪಾರವಾಗಿ ಪಡೆದಿದೆಯೇ ಹೊರತು ಪ್ರತಿಯಾಗಿ ಆ ಸಮುದಾಯಗಳಿಗೆ ಕನ್ನಡದಿಂದ ಸಿಗಬಹುದಾದದ್ದು ಸೂಕ್ತವಾಗಿ ದಕ್ಕಿಲ್ಲ. ಕನ್ನಡ ನಾಡಿನ ಭಾಷೆಗೆ ಸಾಂಸ್ಕೃತಿಕ ಶಕ್ತಿಯನ್ನು ತಂದುಕೊಟ್ಟವರೇ ದಲಿತರು. ಇದನ್ನು ಜನಾಂಗೀಯವಾಗಿ ಪರಿಭಾವಿಸಬೇಕಾದ್ದಿಲ್ಲ. ಮೌಖಿಕ ಪರಂಪರೆಗಳ ಬಗ್ಗೆ ತಕ್ಕುದಾಗಿ ತಿಳಿದ ಯಾರಿಗಾದರೂ ಇದು ವೇದ್ಯವಾಗುತ್ತದೆ. ಕನ್ನಡ ಭಾಷೆಯನ್ನು ರೂಪಿಸಲು ದೊಡ್ಡ ಹೊಣೆ ಹೊತ್ತ ದಲಿತ ಸಮುದಾಯಗಳು ಮೌಖಿಕ ಪರಂಪರೆಯ ಮೂಲಕ ಪ್ರಾಚೀನ ಕವಿಗಳಿಗೂ ಮಿಗಿಲಾಗಿ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಿದಿದ್ದಾರೆ. ಪ್ರಗತಿಶೀಲ ಕಾದಂಬರಿಕಾರರಗಿಂತಲೂ ಇದು ಮಿಗಿಲಾದ ಜನಪ್ರಿಯ ಮೌಖಿಕ ಪರಂಪರೆ. ಇದನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕಾಗಿದ್ದಿದೆ.

ಈ ಸದ್ಯ ದಲಿತ ಬಂಡಾಯ ಸಾಹಿತ್ಯ ಸಂವೇದನೆಯು ಅಖಂಡವಾಗಿ ಭಾವಿಸಿದ್ದ ಮೌಲ್ಯಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಕನ್ನಡ ನಾಡು ನುಡಿಯನ್ನು ಪರಿಶೀಲಿಸಬಹುದು. ವರ್ತಮಾನದ ಸಾಮಾಜಿಕ ಬಿಕ್ಕಟ್ಟುಗಳನ್ನೆ ಆಧರಿಸಿ ಸಮಾಜ ಮತ್ತು ಸಮಾಜದ ಚಳುವಳಿಗಳನ್ನು ರೂಪಿಸಿದ ದಲಿತ ಬಂಡಾಯ ಲೇಖಕರು ನವ್ಯ ಲೇಖಕರಿಗಿಂತ ವಿಭಿನ್ನವಾಗಿದ್ದರು. ಸಾಮಾಜಿಕ   ಹಿನ್ನೆಲೆಯೇ ಇಲ್ಲಿ ಅಧಿಕೃತವಾಗಿದ್ದುದು ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಲಿತ ಬಂಡಾಯದ ಆಲೋಚನೆಗಳನ್ನು ಈಗ ಗಮನಿಸುವ.

೧. ಎಲ್ಲ ತಳ ಸಮುದಾಯಗಳ ಬಿಡುಗಡೆಯೆ ಇನ್ನೂ ಉಂಟಾಗಿಲ್ಲ. ದೇಶ ಸ್ವಾತಂತ್ರ್ಯ ಪಡೆದು ನಾಡು ಏಕೀಕರಣಗೊಂಡಿದ್ದರು ಶೋಷಣೆಗೆ ಒಳಗಾದವರಿಗೆ ಈ ಸಮಾಜದಲ್ಲಿ ನಿಜವಾದ ಅಸ್ತಿತ್ವವೇ ಸಾಧ್ಯವಾಗಿಲ್ಲ. ಹೀಗಾಗಿ ಈ ಬೃಹತ್ ಸಮಾಜದ ಹೊರೆ ಹೊತ್ತಿರುವ ಎಲ್ಲ ಕೆಳಜಾತಿಗಳು ತಮ್ಮ ಬಿಡುಗಡೆಗಾಗಿ ಹೋರಾಟಕ್ಕೆ ಇಳಿಯಬೇಕು. ಅದಕ್ಕೆ ಪೂರಕವಾಗಿ ಸಾಹಿತ್ಯ ಸೃಷ್ಟಿ ನಡೆಯಬೇಕು.

೨. ಪುರೋಹಿತಶಾಹಿ ವ್ಯವಸ್ಥೆಯು ಸರ್ವನಾಶವಾಗದೆ ನಾಡು ಸುಭದ್ರವಾಗಲಾರದು. ಹಿಂದೂ ಸಾಮ್ರಾಜ್ಯಶಾಹಿ ನೀತಿಯು ಸಮಾಜವನ್ನು ಛಿದ್ರೀಕರಿಸಿರುವುದರಿಂದ ಅದರ ವಿರುದ್ಧ ಸಂಘಟಿತರಾಗಬೇಕು. ಹಾಗೆಯೇ ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾಗಿ ಸಾಹಿತ್ಯವು ಜನರೆಡೆಗೆ ನಡೆಯಬೇಕು. ಜನತೆಯ ನಾಡಿ ಬಡಿತವನ್ನು ಧ್ವನಿಸುವ ಭಾಷೆಯ ಭಾವವೇ ಅರ್ಥವೇ ಸಾಹಿತ್ಯದ ಪ್ರಧಾನ ದನಿಯಾಗಬೇಕು. ಶುಷ್ಕ ಪಾಂಡಿತ್ಯದ ಪಶ್ಚಿಮದ ನಕುಲ ವಿಚಾರಗಳನ್ನು ಬಿಟ್ಟು ನಮ್ಮ ನೆಲದ ವಿಚಾರಗಳ ಮೂಲಕವೇ ಅರಿವನ್ನು ವಿಸ್ತರಿಸಿಕೊಳ್ಳಬೇಕು.

೩. ಸಾಮಾಜಿಕ ಅನಿಷ್ಠಗಳ ವಿರುದ್ಧ ದಂಗೆ ಏಳಬೇಕು.  ಜಾತಿ ವಿನಾಶವು ಸಾಹಿತ್ಯದ ಪ್ರಧಾನ ಕಾಳಜಿಯಾಗಬೇಕಿದ್ದು ಸಮತಾರಾಜ್ಯವನ್ನು ಕಟ್ಟಬೇಕು. ಕಾವ್ಯವು ಬೀದಿಯಲ್ಲಿ ಗಲ್ಲಿಯಲ್ಲಿ ಪಾಳುಬಿದ್ದ ಜನರ ಊರು ಕೇರಿ ಮನೆಗಳಲ್ಲಿ ಪ್ರತಿಸ್ಪಂದಿಸುವಂತಾಗಬೇಕು. ಲೇಖಕನಿಗೆ ಸಮಾಜದ ಏಳಿಗೆ ಮುಖ್ಯವೇ ಹೊರತು ಆತ ನಂಬಿದ ಸಾಹಿತ್ಯದ ಅಭಿವ್ಯಕ್ತಿಯ ಕಲಾತ್ಮಕತೆ ಅಂತಿಮವಲ್ಲ.

೪. ಎಲ್ಲ ಕೆಳಜಾತಿಗಳ ಸ್ವಾಭಿಮಾನದ ಎಚ್ಚೆತ್ತ ದನಿಯಾಗಿ ಸಾಹಿತ್ಯವು ಮೊಳಗಬೇಕು. ಸಾಹಿತ್ಯಕ್ಕಿಂತಲೂ ಸಮಾಜ ದೊಡ್ಡದು. ಹಾಗೆಯೇ ಸಮಾಜಕ್ಕಿಮತಲೂ ಒಂದೊಂದು ಸಮುದಾಯದ ಅಸ್ತಿತ್ವವೂ ಅತಿ ಮುಖ್ಯವಾದದ್ದು. ಸಮುದಾಯಗಳ ಚಹರೆಯನ್ನು ಬದಲಾದ ಕಾಲದಲ್ಲಿ ಪುನರ್ ರೂಪಿಸಬೇಕು. ಅಂತೆಯೇ ಸಾಮಾಜಿಕ ನ್ಯಾಯದ ದನಿಯೇ ಲೇಖಕನ ಅಂತಿಮ ಕಾಣ್ಕೆಯಾಗಬೇಕು.

೫. ಸಾಹಿತ್ಯದ ಸಿದ್ಧ ಮಾದರಿಗಳನ್ನು ತೊರೆಯಬೇಕು. ಅನುಭವದ ದಾಖಲೆ ಮುಖ್ಯವೇ ವಿನಃ ಸಾಹಿತ್ಯದ ತಂತ್ರ ಮಂತ್ರ ಕೌಶಲ್ಯವೇ ಮೊದಲಾಗಬಾರದು. ಸಾಹಿತ್ಯವನ್ನು ಸಮಾಜ ಸುಧಾರಣೆಗಾಗಿ ಬಳಸಬೇಕು. ಸಾಹಿತಿಯಾದವನು ತನ್ನ ಸಮಾಜದ ಸಮಷ್ಠಿ ದನಿಯನ್ನು ಪ್ರತಿನಿಧಿಸಬೇಕು.

೬. ವ್ಯವಸ್ಥೆಯ ವಿರುದ್ಧ ಬಂಡಾಯ ಮಾಡಬೇಕು. ಪ್ರಭುತ್ವವು ಯಾವತ್ತೂ ಶೋಷಕರ ಪರವೇ ಹೊರತು ಆ ಶೋಷಣೆಗೆ ಈಡಾದವರ ಪರವಲ್ಲ. ಹಾಗಾಗಿ ಪ್ರಭುತ್ವ ನಮ್ಮದಾದರೂ ಅದರ ಅಧಿಕಾರ ನಮ್ಮದಲ್ಲ. ಆಳುವ ಶಕ್ತಿಗಳು ಜಾತಿ ಬಲದಿಂದ ನೊಂದ ಸಮುದಾಯಗಳನ್ನು ನಿಯಂತ್ರಿಸುತ್ತಲೇ ಬಂದಿರುವುದರಿಂದ ಪ್ರಭುತ್ವದ ಪ್ರತಿರೋಧ ಶಕ್ತಿಯಾಗಿಯೇ ಲೇಖಕ ಮತ್ತು ಆತನ ಸಾಹಿತ್ಯ ಒಟ್ಟಾಗಿಯೇ ಎದುರಾಗಬೇಕು. ಜೊತೆಗೆ ತನ್ನ ಬೆನ್ನ ಹಿಂದೆ ನಿಂತಿರುವ ಸಮುದಾಯಗಳನ್ನು ಅಂತಹ ಸಂಘರ್ಷದ ಪ್ರತಿರೋಧಕ್ಕೆ ಸಜ್ಜುಗೊಳಿಸಬೇಕು.

೭. ತಿರಸ್ಕೃತರಿಗೆ ಸಾಮಾಜಿಕ ಆರ್ಥಿಕ ರಾಜಕೀಯ ಸ್ವಾತಂತ್ರ್ಯಗಳನ್ನು ತಂದುಕೊಡುವ ಜವಾಬ್ದಾರಿ ಲೇಖಕರದಾಗಿರಬೇಕು. ಸಂವಿಧಾನದ ಮೂಲಭೂತ ಹಕ್ಕುಗಳು ನ್ಯಾಯೋಜಿತವಾಗಿ ಜಾರಿಯಾಗಲು ಹಾಗೂ ಮೀಸಲಾತಿಯಂತಹ ಸೌಲಭ್ಯಗಳು ಪರಿಣಾಮಕಾರಿಯಾಗಿ ತಲುಪಲು ಹೋರಾಟವೊಂದೇ ಇರುವ ದಾರಿ. ಈ ನಿಟ್ಟಿನಲ್ಲಿ ದಂತ ಬಂಡಾಯದ ರಾಜಕೀಯ ಹೋರಾಟವು ಮಾರ್ಕ್ಸ್ ಮತ್ತು ಅಂಬೇಡ್ಕರ್ ಪ್ರಣೀತ ಚಿಂತನೆಗಳ ಮೂಲಕ ಅಖಂಡ ಕರ್ಣಾಟಕದ ಎಲ್ಲ ಅಲಕ್ಷಿತರ ಪ್ರತಿನಿಧಿಯಾಗಿ ಹೋರಾಟಕ್ಕಿಳಿಯಬೇಕು. ವ್ಯವಸ್ಥೆಯ ವಿರುದ್ಧದ ನ್ಯಾಯದ ದಂಗೆಯೇ ಸಾಹಿತ್ಯ ಚಳುವಳಿಯ ಮುಖ್ಯ ಆಶಯವಾಗಿರಬೇಕು. ಆ ಮೂಲಕ ವರ್ಗ ಹೋರಾಟಕ್ಕೂ ಜಾತ್ಯಾತೀತ ಸಮಾಜದ ನಿರ್ಮಾಣಕ್ಕೂ ಎಲ್ಲರೂ ಒಂದಾಗಬೇಕು.

೮. ಗ್ರಾಮೀಣ ಸಮಾಜದ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಹೋರಾಟ ರೂಪಿಸಬೇಕು. ಬಂಡವಾಳಶಾಹಿ ವರ್ಗವನ್ನು ಹತ್ತಿಕ್ಕಬೇಕು. ಸಾಮ್ರಾಜ್ಯಶಾಹಿ ನೀತಿಗಳನ್ನು ಖಂಡಿಸಬೇಕು. ಭೂ ಹಂಚಿಕೆಯ ಹೋರಾಟಗಳಿಂದ ದಲಿತರಿಗೆ ಭೂಮಿ ಸಿಗುವಂತಾಗಬೇಕು. ದಲಿತರ ಮಕ್ಕಳಿಗೆ ಸೂಕ್ತ ಶಿಕ್ಷಣ ಲಭ್ಯವಾಗಬೇಕು. ಪ್ರತಿ ಹಳ್ಳಿಗಳಲ್ಲಿ ದಲಿತ ಚಳುವಳಿಯ ಸಂಘಟನೆಗಳು ಅಸ್ತಿತ್ವಕ್ಕೆ ಬರಬೇಕು.

೯. ಚಳುವಳಿಯ ನೊಂದ ಸಮುದಾಯಗಳ ಮೇಲಾದ ಶೋಷಣೆಯ ಗಾಯಗಳು ರೂಪಕ ಪ್ರತಿಭಟನೆಯಿಂದಲೇ ನಾಡನ್ನು ಎಚ್ಚರಿಸುವಂತಾಗಬೇಕು. ಸಾಂಸ್ಕೃತಿಕ ಪ್ರತಿಭಟನೆಯ ಮೂಲಕ ತುಳಿತಕ್ಕೊಳಗಾದವರ ಅಂತರಂಗದಲ್ಲಿರುವ ನೋವಿನ ವಿಸ್ತಾರವನ್ನು ಸಾರುವಂತಾಗಬೇಕು. ತಮಟೆ ಚಳುವಳೀ, ಅರೆಬೆತ್ತಲೆ ಚಳುವಳಿ, ಪಾದಯಾತ್ರೆಯಂತಹ ವಿಶಿಷ್ಠ ಪ್ರತಿಭಟನೆಗಳ ಮೂಲಕವೇ ಅಹಿಂಸಾ ಚಳುವಳಿಯನ್ನು ಸಾಧಿಸಬೇಕು.

ಮೇಲಿನ ಈ ಅಂಶಗಳು ನಿಜವಾಗಿಯೂ ಕನ್ನಡ ನಾಡಿನ ಸಮಗ್ರ ಬದಲಾವಣೆಯ ಕನಸುಗಳ ಮೂಲಕ ಮಾಡಿದ್ದವೆಂಬುದನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಅನೇಕ ಶೂದ್ರ ಲೇಖಕರು ಬಂಡಾಯ ಸಾಹಿತ್ಯದ ಮುಂಚೂಣಿಯಲ್ಲಿದ್ದರು. ದಲಿತ ಬಂಡಾಯದ ಎರಡೂ ಸಂವೇದನೆಗಳಿಗೆ ಸಾಮಾಜಿಕ ನ್ಯಾಯದ ದನಿಯಿತ್ತಾದರೂ ತಾತ್ವಿಕ ಭಿನ್ನಾಭಿಪ್ರಾಯ ತಲೆದೋರಿದ್ದು ಸಹಜವಾಗಿತ್ತು. ದಲಿತ ಸಾಹಿತ್ಯದ ಜೊತೆಗೆ ಬಂಡಾಯ ಸಾಹಿತ್ಯದ ಅಭಿವ್ಯಕ್ತಿಯಲ್ಲಿ ಸಾಮ್ಯತೆ ಇತ್ತಾದರೂ ದಲಿತರ ಸಮಸ್ಯೆಗಳ ನಿರ್ವಹಣೆಯಲ್ಲಿ ಇಬ್ಬರ ನಡುವೆ ಅಂತರಗಳಿದ್ದವು. ಶೂದ್ರ ಪ್ರಜ್ಞೆಯು ಬಂಡಾಯದವರ ದನಿಯಾಗಿದ್ದರೆ ದಲಿತರದು ಅಪ್ಪಟ ದಲಿತರ ಜಾಗೃತಿಯಾಗಿತ್ತು. ಕರ್ನಾಟಕದ ಮಧ್ಯಕಾಲೀನ ಊಳಿಗಮಾನ್ಯ ಜಾತಿ ವ್ಯವಸ್ಥೆಯ ಸಾಮಾಜಿಕ ಸಂಬಂಧಗಳು ಪೂರ್ಣವಾಗಿ ನಶಿಸಿರಲಿಲ್ಲ. ಶೂದ್ರ ಪ್ರಜ್ಞೆ ಅಖಂಡವಾಗಿದ್ದರೆ ದಲಿತ ಪ್ರಜ್ಞೆಯು ಚಾರಿತ್ರಿಕ ಅನಿವಾರ್ಯತೆಯಿಂದ ಬಿಡಿ ಬಿಡಿಯಾಗಿಯೇ ವ್ಯವಸ್ಥೆಯ ಜೊತೆ ಹೋರಾಟಕ್ಕಿಳಿಯಬೇಕಾಗಿತ್ತು. ಇದರಿಂದಾಗಿ ದಲಿತ ಸಂಘರ್ಷ ಸಮಿತಿಯು ಪ್ರತ್ಯೇಕವಾಗಿ ದಲಿತ ಸಾಹಿತ್ಯ ಚಳುವಳಿಯನ್ನು ತನ್ನ ಹೋರಾಟದ ಭಾಗವಾಗಿ ರೂಪಿಸಿಕೊಂಡಿತು. ಇಲ್ಲಿನ ಮಹತ್ವವೇನೆಂದರೆ ತುಳಿತಕ್ಕೆ ಒಳಗಾಗಿದ್ದ ಕೆಳಜಾತಿಗಳು ತಮ್ಮ ಹಕ್ಕೊತ್ತಾಯದ ದನಿಯನ್ನು ಆರಂಭಿಸಿದ್ದುದು. ಸ್ವಾತಂತ್ರ್ಯ ಹೊಂದಿ ಏಕೀಕರಣಗೊಂಡ ಕರ್ನಾಟಕದ ಒಳಗೆಯೇ ಸಾಮಾಜಿಕ ಬಿಡುಗಡೆಯ ಚಳುವಳಿಗಳು ಆತ್ಯಂತಿಕವಾಗಿ ಮೈದಾಳಿದ್ದು ಚಾರಿತ್ರಿಕವಾದುದು. ಏಕೀಕರಣ ಚಳುವಳಿಯು ಎತ್ತಲಾಗದ ಪ್ರಶ್ನೆಗಳನ್ನು ದಲಿತ ಬಂಡಾಯ ಸಂವೇದನೆಗಳು ಪ್ರತಿಧ್ವನಿಸಿದವು. ಆವರೆಗೆ ಯಾವ ಸಾಹಿತ್ಯ ಪಂಥವು ಈ ಬಗೆಯಲ್ಲಿ ಪ್ರಭುತ್ವದ ಜೊತೆ ಹೋರಾಟಕ್ಕಿಳಿದಿರಲಿಲ್ಲ. ಜಾತಿ ವಿನಾಶ ಚಳುವಳಿಯನ್ನು ಏಕೀಕರಣದ ಚಳುವಳಿಕಾರರ ರೂಪಿಸಲು ಕಾಲ ಪಕ್ವವಾಗಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಳುವಳಿಕಾರರು ಎದುರಿಸಿದ ಸಮಸ್ಯೆಗಳನ್ನೆ ಏಕೀಕರಣದ ಚಳುವಳಿಕಾರರು ಎದುರಿಸಬೇಕಾಗಿತ್ತು. ನಾಡಿನ ಸ್ವಾತಂತ್ರ್ಯ ಮೊದಲು ಎಂಬಂತೆ ನಾಡಿನ ಏಕೀಕರಣವು ಪ್ರಧಾನವಾಗಿದ್ದರಿಂದಲೇ ಏಕೀಕರಣ ಚಳುವಳಿಗೂ ಮಿತಿಗಳಿದ್ದವು. ಏಕೀಕರಣೋತ್ತರ ಕರ್ನಾಟಕದಲ್ಲಿ ಮಾತ್ರವೇ ಅಲಕ್ಷಿತ ಸಮುದಾಯಗಳು ತಮ್ಮ ಅಸ್ತಿತ್ವದ ತಕರಾರುಗಳನ್ನು ಒಡ್ಡಬೇಕಾದ ಪರಿಸ್ಥಿತಿ ಇತ್ತು. ಹೀಗಾಗಿ ದಲಿತ ಬಂಡಾಯದ ಚಳುವಳಿಗಳ ಏಕೀಕರಣೋತ್ತರ ಹೊಣೆಗಾರಿಕೆಯು ಕೇವಲ ಭಾಷೆ ಮತ್ತು ಸಾಹಿತ್ಯದ ಸಂಗತಿಗಳಿಗೆ ಮೀಸಲಾಗಿರಲಿಲ್ಲ. ಇವೆರಡೂ ಸಂವೇದನೆಗಳು ಕರ್ನಾಟಕದ ನವ ನಿರ್ಮಾಣದಲ್ಲಿ ತೊಡಗಿದ್ದರೂ ಇವೆರಡೂ ಅಭಿವ್ಯಕ್ತಿಗಳ ಒಳಗೆ ವೈರುಧ್ಯಗಳೂ ಇದ್ದವು. ಜಾತಿ ಮತ್ತು ವರ್ಗ ಸಂಬಂಧಿ ಸಾಮಾಜಿಕ ರಚನೆಯ ವಿವೇಚನೆಯಲ್ಲಿ ದಲಿತ ಬಂಡಾಯದ ಆಲೋಚನೆಗಳಲ್ಲಿ ಬಿರುಕಿತ್ತು. ಆ ಅಂಶಗಳನ್ನಿಲ್ಲಿ ಕ್ರೂಢೀಕರಿಸಿ ಕೆಳಕಂಡಂತೆ ಹೇಳಬಹುದು.

೧. ಜಾತಿ ಶ್ರೇಣಿಯ ತಳದಲ್ಲಿರುವ ದಲಿತರ ಹಕ್ಕೊತ್ತಾಯಗಳ ವಿವೇಕದ ಜೊತೆ ಸೂಕ್ತವಾಗಿ ನ್ಯಾಯೋಚಿತವಾಗಿ ಶೂದ್ರ ಪ್ರಜ್ಞೆಯು ಸಹಯೋಗ ಮಾಡಲಾರದು.

೨. ಸಾಮಾಜಿಕ ನ್ಯಾಯವನ್ನು ಸಾಹಿತ್ಯದಲ್ಲಿ ಪ್ರತಿಪಾದಿಸುವುದೇ ಬೇರೆ ಹಾಗೆಯೇ ಅಂತಹ ನ್ಯಾಯಕ್ಕಾಗಿ ಹೋರಾಟ ಮಾಡುವ ಹೊಣೆಗಾರಿಕೆಯೇ ಬೇರೆ. ಸಂಘರ್ಷದ ತಳದಲ್ಲೇ ಹೀಗಾಗಿ ವೈರುಧ್ಯಗಳಿವೆ.

೩. ದಲಿತ ಸಂವೇದನೆಯನ್ನು ಬಂಡಾಯ ಸಂವೇದನೆಯಲ್ಲಿ ವಿಲೀನಗೊಳಿಸಲು ಬರುವುದಿಲ್ಲ. ಜಾತಿಯ ಅನುಭವಗಳಿಗೂ ಅಭಿವ್ಯಕ್ತಿಯ ಭಿನ್ನತೆಗಳಿಗೂ ಚಾರಿತ್ರಿಕ ಅಂತರಗಳಿವೆ.

೪. ವರ್ಗ ಮತ್ತು ಜಾತಿಗಳೆರಡೂ ಬೇರೆ ಬೇರೆ. ಮಾರ್ಕ್ಸ್‌ವಾದಕ್ಕಿಂತಲೂ ಅಂಬೇಡ್ಕರ್ ವಾದವೇ ದಲಿತ ಸಮಸ್ಯೆಗಳಿಗೆ ತಕ್ಕ ಪರಿಹಾರ.

೫. ಜಾತಿಯ ಯಜಮಾನಿಕೆಯು ವರ್ಗ ಸಮಾಜದಲ್ಲಿ ರೂಪಾಂತರಗೊಂಡು ತನ್ನ ಅಸ್ತಿತ್ವವನ್ನು ಸಾಧಿಸಿಕೊಳ್ಳುತ್ತದೆ. ಹಾಗೆಯೆ ಪುರೋಹಿತಶಾಹಿ ಶಕ್ತಿಗಳು ಪ್ರಭುತ್ವದ ಪರವಾಗಿಯೇ ಇರುತ್ತವೆ. ಈ ಸ್ಥಿತಿಯಲ್ಲಿ ದಲಿತರ ಹೋರಾಟಗಳನ್ನು ರೂಪಿಸಲು ಪ್ರತ್ಯೇಕ ದಾರಿ ಅನಿವಾರ್ಯ.

೬.  ದಲಿತರ ಅನುಭವಗಳನ್ನು ದಲಿತರು ಸಮರ್ಥವಾಗಿ ಬಿಂಬಿಸುವುದೇ ಬೇರೆ. ಹಾಗೆಯೇ ಅದೇ ಅನುಭವವನ್ನು ಉಳಿದ ಜಾತಿ ಮೂಲದಿಂದ ಬಂದವರು ದಾಖಲಿಸುವುದೇ ಬೇರೆ. ಇವೆರಡೂ ಅಭಿವ್ಯಕ್ತಿಗಳನ್ನು ಒಂದೇ ಎಂದು ಪರಿಗಣಿಸಬಾರದು.

೭. ದಲಿತರು ಪ್ರಭುತ್ವದ ಜೊತೆ ಸಂಘರ್ಷ ಮಾಡುವುದು ತನ್ನ ಮೇಲಿರುವ ಎಲ್ಲ ಜಾತಿಗಳನ್ನು ನಿರಾಕರಿಸುತ್ತಲೇ. ಒಂದೇ ಹಂತದಲ್ಲಿ ಎಲ್ಲ ಜಾತಿ ಪ್ರಭುತ್ವದ ಶ್ರೇಣಿಯನ್ನೂ ಹಾಗೆಯೇ ರಾಜಕೀಯ ಪ್ರಭುತ್ವದ ದಮನಕಾರಿ ನೀತಿಯನ್ನು ಎದುರಿಸುವುದು ಎಲ್ಲ ಜಾತಿಗಳಿಗೂ ಒಂದೇ ಪ್ರಮಾಣದಲ್ಲಿ ಸಾಧ್ಯವಾಗುವುದಿಲ್ಲ. ಹೀಗಾಗಿ ದಲಿತ ಅನನ್ಯತೆಯ ಅನಾವರಣಕ್ಕೆ ಬೇರೆಯದೇ ಆದ ಸ್ವರೂಪವಿದೆ.

ಈ ಬಗೆಯ ಅತಿಸೂಕ್ಷ್ಮ ಅಂತರವನ್ನು ದಲಿತ ಬಂಡಾಯದ ಚಳುವಳಿಕಾರರು ಇಟ್ಟುಕೊಂಡೆ ಒಟ್ಟಿಗಿದ್ದಂತೆ ಇದ್ದರು. ಆದರೆ ಬಹುಬೇಗನೆ ಇವೆರಡೂ ಪ್ರತ್ಯೇಕವಾದವು. ಜಾತಿಯ ಪಾತ್ರವೇ ಇಲ್ಲಿ ಪ್ರಧಾನವಾಯಿತು. ಜಾತಿ ಶ್ರೇಣಿಯು ಚಳುವಳಿಗಳಲ್ಲೂ ಬಿಂಬಿತವಾಯಿತು. ಮಾರ್ಕ್ಸ್‌ವಾದದ ಕಾರ್ಮಿಕ ಚಳುವಳಿಯಲ್ಲು ಜಾತಿಯ ಯಜಮಾನಿಕೆ ಇದ್ದುದನ್ನು ಗಮನಿಸಬಹುದು. ಜಾತಿ ವಿಷಯವನ್ನು ಪ್ರತ್ಯೇಕಗೊಳಿಸಿ ಏಕೀಕರಣೋತ್ತರ ಕರ್ನಾಟಕವನ್ನು ಭಾವಿಸುವುದಕ್ಕೆ ಸಾಧ್ಯವೇ ಇಲ್ಲ. ಏಕೀಕರಣಕ್ಕೆ ಭಾಷೆಯ ಮೂಲಕ ‘ಕನ್ನಡಿಗ’ ಎಂಬ ರೂಪಕ ಹೇಗೆ ನಿರ್ಣಾಯಕವಾಗಿತ್ತೊ ಅದಕ್ಕು ಮಿಗಿಲಾಗಿ ಏಕೀಕರಣೋತ್ತರ ಕರ್ನಾಟಕದಲ್ಲಿ ಜಾತಿ ಪ್ರಧಾನವಾಗಿ ಆವರಿಸಿಕೊಂಡಿದೆ. ದಲಿತರ ಬಂಡಾಯದ ಒಳಗಿನ ವೈಚಾರಿಕ ತಿಳುವಳಿಕೆಯಲ್ಲು ಜಾತಿಯು ವಿವಿಧ ಪಾತ್ರಗಳಲ್ಲಿ ಪ್ರಭಾವಿಸಿದೆ. ‘ಕನ್ನಡಿಗ’ ಎಂಬ ಸಮಷ್ಠಿ ರೂಪಕವು ಏಕೀಕರಣೋತ್ತರ ಕರ್ನಾಟಕದಲ್ಲಿ ವಿವಿಧ ಜಾತಿಗಳಾಗಿ ಒಡೆದು ಹೋಗಿದೆ. ಭಾಷೆಗಿಂತಲೂ ಆ ಭಾಷೆಯ ಒಳಗಿರುವ ಜಾತಿಗಳನ್ನು ಉಳಿಸಿಕೊಳ್ಳುವ ಹೋರಾಟ ಬೆಳೆದದ್ದು ಅತಿ ಸಂಕೀರ್ಣವಾಗಿದೆ. ಏಕೀಕರಣ ಚಳುವಳೀಯು ದಲಿತರ ಮಹಿಳೆಯರ ಮೂಲ ಸಮಸ್ಯೆಗಳನ್ನು ಎತ್ತಿಕೊಂಡು ಕರ್ನಾಟಕವನ್ನು ರೂಪಿಸುವುದಕ್ಕೆ ಮುಂದಾಗಿರಲಿಲ್ಲ ಎಂಬ ಆರೋಪವಿದೆ. ಇದು ವಾಸ್ತವವಾಗಿದ್ದರು ಏಕೀಕರಣೋತ್ತರ ಕಾಲಘಟ್ಟದಲ್ಲಿ ಜಾತಿಯ ಪ್ರಶ್ನೆ ರೂಪ ವಿರೂಪ ಎರಡನ್ನೂ ಒಟ್ಟಿಗೆ ಬೆಳೆಸಿದ್ದು ವಿಪರ್ಯಾಸ.

ಭೂಮಾಲೀಕ ಮಧ್ಯಮ ಜಾತಿಗಳು ಕರ್ನಾಟಕದಲ್ಲಿ ಒಂದು ಕಡೆ ಬಲಗೊಳ್ಳುತ್ತಿದ್ದರೆ ಅದೇ ವೇಳೆಗೆ ಹಿಂದುಳಿದ ವರ್ಗಗಳು ಏನು ಮಾಡಬೇಕೆಂದು ತೋಚದೆ ಪರೋಕ್ಷವಾಗಿ ಎಚ್ಚೆತ್ತುಕೊಳ್ಳುತ್ತ ರಾಜಕೀಯ ವ್ಯೂಹದಲ್ಲಿ ಸೇರ್ಪಡೆಯಾಗುತ್ತಿದ್ದವು. ಏಕೀಕರಣ ಚಳುವಳಿಯ ಕಾಲದಲ್ಲಿದ್ದ ಹಳೆ ಮೈಸೂರಿನ ಸಂಸ್ಥಾನದ ಮೇಲರಿಮೆಯ ಒತ್ತಾಯವು ಮತ್ತಷ್ಟು ಪ್ರಬಲವಾಗಿ ಹೈದ್ರಾಬಾದ್ ಕರ್ನಾಟಕದ ಮೇಲೆ ಪರೋಕ್ಷ ನಿಯಂತ್ರಣವನ್ನು ಸಾಧಿಸಿಕೊಂಡಿತು. ಗಮನಿಸಬೇಕಾದ ಅಂಶವೇನೆಂದರೆ; ಹಳೆ ಮೈಸೂರಿನ ಒಕ್ಕಲಿಗ ಜಾತಿಯು ಕರ್ನಾಟಕದ ರಾಜಕಾರಣದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಪರಿಣಮಿಸಿದ್ದುದು. ಇದಕ್ಕೆ ಪೈಪೋಟಿಯುತವಾಗಿ ಹೈದ್ರಾಬಾದ್ ಕರ್ನಾಟಕದಲ್ಲಿ ಲಿಂಗಾಯತ ಜಾತಿಯು ಅಷ್ಟೇ ಪ್ರಮಾಣದಲ್ಲಿ ರಾಜಕೀಯ ಸಮೂಹವಾಗಿ ಮಾರ್ಪಾಟಾಯಿತು. ಆದರೆ ಗಡಿನಾಡಿನ ಭಾಗದ ಸಮುದಾಯಗಳ ಪಾಡು ಹಾಗೆ ಉಳಿಯಿತು. ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತುಳು ಕೊಂಕಣಿ ಕೊಡವ ಹಾಗೆಯೇ ಅನೇಕ ಬುಡಕಟ್ಟು ಭಾಷಿಕ ಸಮುದಾಯಗಳು ಪ್ರತ್ಯೇಕ ಭಾವನೆಯನ್ನು ಉಳಿಸಿಕೊಳ್ಳಲು ಮುಂದಾದವು. ಇದರಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಎಂಬ ಚಳುವಳಿಯೂ ಘಟಿಸಿತು. ಈ ಭಾವನೆಗಳಲ್ಲೂ ಕೂಡ ಜಾತಿ ಜನಾಂಗದ ಚಹರೆಗಳಿವೆ.

ಯಾವ ಭಾಷೆಯ ಮೂಲಕ ಕನ್ನಡಿಗನೆಂಬ  ರೂಪಕ ಬೆಳೆದಿತ್ತೊ ಅದು ಭಗ್ನವಾದದ್ದು ಜಾತಿಯ ರಾಜಕಾರಣದಿಂದಲೇ. ಜಾತಿಯನ್ನೊಂದು ಏಕೀಕರಣೋತ್ತರ ಕರ್ನಾಟಕದ ಶಕ್ತಿಯನ್ನಾಗಿ ಬಳಸಿಕೊಳ್ಳಲು ಮುಂದಾದದ್ದು ಅನೇಕ ತೊಡಕುಗಳನ್ನು ಹುಟ್ಟು ಹಾಕಿತು. ಇದರಿಂದ ಪ್ರಭುತ್ವಕ್ಕೆ ಲಾಭವಾಯಿತೆ ಹೊರತು ಕರ್ನಾಟಕಕ್ಕೆ ಒಳಿತಾಗಲಿಲ್ಲ. ಅನೇಕ ಅಂಚಿನ ಸಮುದಾಯಗಳು ದುರ್ಬಳಕೆಯಾಗತೊಡಗಿದವು. ಈ ಪರಿಸ್ಥಿತಿಯಲ್ಲಿ ದಲಿತ ಬಂಡಾಯದ ಹೊಣೆಗಾರಿಕಯ ನಿರೀಕ್ಷಿತ ಮಟ್ಟದಲ್ಲಿ ಫಲಕಾಣಲು ಸಾಧ್ಯವಾಗಲಿಲ್ಲ. ಮೇಲೆ ಹೇಳಿದ ಜಾತಿ ರಾಜಕಾರಣದ ವಿವರಣೆಗೂ ದಲಿತ ಬಂಡಾಯದ ವೈರುಧ್ಯಗಳಿಗೂ ದೂರದ ಸಂಬಂಧವಿದೆ. ದಲಿತ ಬಂಡಾಯದ ಚಳುವಳಿಗಳು ಅಖಂಡ ಕರ್ನಾಟಕದ ನಿರ್ಮಾಣವನ್ನೇನು ಭಾವಿಸಿರಲಿಲ್ಲ. ಇರುವ ಸಾಮಾಜಿಕ ರಾಜಕೀಯ ಆರ್ಥಿಕ ಹಾಗೂ ಧಾರ್ಮಿಕ ವಲಯಗಳಲ್ಲಿ ತಮ್ಮ ಹಕ್ಕು ಬಾಧ್ಯತೆಗಳನ್ನು ಉಳಿಸಿಕೊಳ್ಳುವ ಮಟ್ಟಿಗೆ ದಲಿತ ಬಂಡಾಯದ ಹಕ್ಕೊತ್ತಾಯವು ಆತ್ಯಂತಿಕವಾಗಿತ್ತು. ಆದರೆ ಅದೇ ವೇಳೆಗೆ ಮಗುಮ್ಮಾಗಿ ಜಾತಿ ವ್ಯವಸ್ಥೆಯು ಹೇಗೆ ಏಕೀಕರಣೋತ್ತರ ಕರ್ನಾಟಕದ ಆಧಿಪತ್ಯವನ್ನು ತಮ್ಮದಾಗಿಸಿ ಕೊಳ್ಳುತ್ತಿದೆ ಎಂಬುದನ್ನು ನಿಯಂತ್ರಿಸುವ ಶಕ್ತಿ ಈ ಎರಡೂ ಚಳುವಳಿಗಳಿಗೆ ಇರಲಿಲ್ಲ. ಸಾಮಾಜಿಕ ನ್ಯಾಯದ ಆಕ್ರಂಧನದಲ್ಲಿ ದಲಿತ ಸಾಹಿತ್ಯ ಮತ್ತು ಸಂಘಟನೆಯು ಒಂದೇ ಸಮನೆ ‘ವಿಧಾನಸೌಧಕ್ಕೆ’ ಲಗ್ಗೆ ಹಾಕಿತೇ ಹೊರತು ಪೂರ್ಣ ಪ್ರಮಾಣದಲ್ಲಿ ದಲಿತ ಸಮಾಜವನ್ನು ಎಚ್ಚರಿಸಲು ಸಾಧ್ಯವಾಗಲಿಲ್ಲ. ಅಂದರೆ ದಲಿತ ಸಮಾಜದ ಬೆಳಕಿನಿಂದಾದರೂ ಅಖಂಡ ಕರ್ನಾಟಕದ ಭವಿಷ್ಯವನ್ನು ರೂಪಿಸುವ ದೂರದೃಷ್ಟಿ ಉಂಟಾಗಲಿಲ್ಲ. ಇದಕ್ಕೆ ಕಾರಣವೂ ಇತ್ತು. ಆ ವೇಳೆಗೆ ಪ್ರಬಲ ರಾಜಕೀಯ ಕೋಮುಗಳಾಗಿ ನೆಲೆಯೂರಿದ್ದ ಒಕ್ಕಲಿಗ ಮತ್ತು ಲಿಂಗಾಯತ ಜಾತಿಗಳ ಪ್ರಭುತ್ವವನ್ನು ಮೀರಿ ಬೆಳೆಯುವುದು ಸುಲಭವಾಗಿರಲಿಲ್ಲ.

ಇದೇ ಹಂತದಲ್ಲಿ ಖಚಿತ ಚಹರೆಯೆ ಇರದಿದ್ದ ಅನೇಕ ಅದೃಶ್ಯ ಸಮುದಾಯಗಳು ದಲಿತ ಬಂಡಾಯದ ಚಳುವಳಿಯಲ್ಲಿ ಭಾಗವಹಿಸಿದ್ದವಾದರೂ ಕೂಡ ಇಲ್ಲು ಸಹ ಅದೃಶ್ಯ ಸಮುದಾಯಗಳ ದನಿ ಮುಂದಿದ್ದವರ ದನಿಯಲ್ಲಿ ಕರಗಿಹೋಯಿತು. ಏಕೀಕರಣೋತ್ತರ ಕರ್ನಾಟಕದಲ್ಲಿ ಇಂದಿಗೂ ಅದೃಶ್ಯ ಸಮುದಾಯಗಳ ಬವಣೆ ಹಾಗೇ ಇದೆ. ದಲಿತ ಬಂಡಾಯ ಚಳುವಳಿಗಳು ಇಂತಹ ಅನಾಥ ಸಮುದಾಯಗಳನ್ನು ಮುಂದು ಮಾಡಲಿಲ್ಲ. ಹಾವನೂರು ವರದಿಯಲ್ಲಿ ದಾಖಲಾದ ಸಮುದಾಯಗಳು ವಾಸ್ತವ ಕರ್ನಾಟಕದ ಪಾಲಿನಲ್ಲಿ ಪಡೆಯಬಹುದಾದ್ದನ್ನು ಹೊಂದಲಾಗಲಿಲ್ಲ. ಆದಿವಾಸಿ ಅಲೆಮಾರಿ ಸಮುದಾಯಗಳ ಸೂಕ್ತ ಸಮೀಕ್ಷೆ ಕೂಡ ಈತನಕ ಆಗಿಯೇ ಇಲ್ಲ. ಆದರೆ ಇಂತಹ ಅದೃಶ್ಯ ಸಮುದಾಯಗಳನ್ನು ಕೂಡ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಮೊದಲೇ ಹೇಳಿದ ಜಾತಿಸೂತ್ರದ ಪರಿಣಾಮದಿಂದ. ಜಾತಿಯ ಚೌಕಟ್ಟಿಗೆ ಒಳಪಡದಿದ್ದ ಆದಿವಾಸಿ ಅಲೆಮಾರಿಗಳನ್ನು ಜಾತಿಶ್ರೇಣಿಗೆ ಒಳಪಡಿಸುವ ಕೆಲಸವು ಮುಂದೆ ಅನೇಕ ಬಗೆಯ ಸವಾಲುಗಳನ್ನು ಹುಟ್ಟು ಹಾಕುವಂತದ್ದು. ಜಾತಿಯ ಮೂಲಕ ಸಂಘಟಿತರಾಗುವ ದಲಿತರನ್ನು ಪ್ರಭುತ್ವದ ರಾಜಕಾರಣವು ಚಾಣಾಕ್ಷತೆಯಲ್ಲಿ ದುರುಪಯೋಗಪಡಿಸಿ ಕೊಳ್ಳುತ್ತದೆ. ಪ್ರತಿರೋಧ ಒಡ್ಡಿದ ಶಕ್ತಿಯನ್ನೆ ಛಿದ್ರೀಕರಿಸುವ ಸೂತ್ರ ಜಾತಿಯ ಮೂಲಕವೇ ಹುಟ್ಟಿಕೊಳ್ಳುತ್ತದೆ. ಜಾತಿಯ ವಿನಾಶಕ್ಕಾಗಿ ದಲಿತ ಬಂಡಾಯ ಮುಂದಾದರೆ ಅದೇ ಜಾತಿಗಳನ್ನು ಪ್ರಧಾನವಾಗಿಟ್ಟುಕೊಂಡು ವ್ಯವಸ್ಥೆಯು ಜಾತಿಗಳನ್ನು ಮುದ್ದಾಗಿ ಸಾಕುತ್ತಿರುತ್ತದೆ. ಇದರಿಂದ ಏಕೀಕರಣೋತ್ತರ ಕರ್ನಾಟಕದ ಭವಿಷ್ಯಕ್ಕೆ ಏನಾಗುತ್ತದೆ ಎಂಬುದನ್ನು ಗಮನಿಸಬೇಕು.

ಈ ಹಿಂದೆ ಚರ್ಚಿಸಿದ್ದ ಅಂಶಗಳಿಗೆ ಹಿಂತಿರುಗೋಣ. ಅದು ದಲಿತ ಬಂಡಾಯದ ಚಿಂತನೆಗಳ ವೈರುಧ್ಯಕ್ಕೆ ಸಂಬಂಧಿಸಿದ್ದು. ಸೂಕ್ಷ್ಮವಾಗಿ ಗಮನಿಸಿದರೆ ಅವರಿಬ್ಬರ ನಡುವಿನ ಅಂತರ, ಬಿರುಕು, ವೈರುಧ್ಯ ಜಾತಿ ಮೂಲದ್ದು. ಹಾಗಾಗಿಯೆ ಅವರಿಬ್ಬರೂ ಅದೃಶ್ಯ ಸಮುದಾಯಗಳ ನಿಜವಾದ ಕಾಳಜಿಯನ್ನು ಬಿಂಬಿಸಲು ಸಾಧ್ಯವಾಗದೇ ಹೋದದ್ದು. ಹಾಗೆಯೇ ಹಿಂದುಳಿದ ವರ್ಗಗಳು ಇವರಿಬ್ಬರ ಮಧ್ಯೆ ನಿಂತು ಅತಂತ್ರತೆಯನ್ನು ಭಾವಿಸಿದವು. ಊಳಿಗಮಾನ್ಯ ಜಾತಿಯ ಮೇಲಿನವರ ಜೊತೆ ಗುರುತಿಸಿಕೊಳ್ಳಲಿಕ್ಕೂ ಆಗದೆ ತನ್ನ ಕೆಳಗಿನ ಸಾಮಾಜಿಕ ದನಿಗಳಲ್ಲಿ ತನ್ನ ಮಾತನ್ನು ವ್ಯಕ್ತ ಪಡಿಸಲಾರದೆ ಯಥಾಸ್ಥಿತಿಯ ಭಾಗವೇ ಆಗಿ ಉಳಿದದ್ದರ ಪರಿಣಾಮವು ಸಮಾಜದ ಗತಿಶೀಲತೆಯನ್ನು ತಪ್ಪಿಸಿತು. ಇದರಿಂದ ಮೇಲುಜಾತಿಗಳಿಗೆ ಲಾಭವಾಯಿತು. ಈ ನಡುವೆ ಬ್ರಾಹ್ಮಣ  ಜಾತಿಗಳು ಯಾವುದೇ ಖಚಿತ ನಿಲುವನ್ನು ಪ್ರಭುತ್ವದ ವಿರುದ್ಧ ಮಾಡಲಿಲ್ಲ ಎಂಬುದು ಗಮನಾರ್ಹ. ಸಾಮಾಜಿಕ ಬದಲಾವಣೆಯ ಸವಾಲುಗಳು ಎದುರಾದಾಗಲೆಲ್ಲ ಬ್ರಾಹ್ಮಣ ಸಮಾಜವು ಮೌನವಹಿಸುವುದು ಹಿಂದಿನಿಂದಲೂ ಬಂದ ಪದ್ಧತಿ. ಬ್ರಾಹ್ಮಣ ಜಾತಿಗಳ ಇಂತಹ ಸೌಜನ್ಯ ಸ್ವಭಾವವು ಹೊಣೆಗಾರಿಕೆಯಿಂದ ದೂರ ಸರಿಯುವಂತದ್ದು. ಆದರೆ ಸಾಮಾಜಿಕ ವ್ಯವಸ್ಥೆಯ ಮೇಲೆ ಬ್ರಾಹ್ಮಣ್ಯದ ನಿಯಂತ್ರಣವು ಧಾರ್ಮಿಕವಾಗಿ ಇದ್ದೇ ಇರುತ್ತದೆ. ಊಳಿಗಮಾನ್ಯ ಜಾತಿಗಳಿಗೆ ಜಾತಿಬದ್ಧ ಅಧಿಕಾರದ ರುಚಿ ಗೊತ್ತಾದದ್ದೇ ಬ್ರಾಹ್ಮಣ್ಯದ ಮೂಲಕ. ಏಕೀಕರಣೋತ್ತರ ಕರ್ನಾಟಕದಲ್ಲಿ ದಲಿತ ಬಂಡಾಯದ ಎಚ್ಚೆತ್ತ ಪ್ರಜ್ಞೆಯ ಜೊತೆಯಲ್ಲೆ ಪ್ರಬಲ ಜಾತಿಗಳೂ ಕೂಡ ಎಚ್ಚೆತ್ತುಕೊಂಡದ್ದರ ಪರಿಣಾಮದಿಂದಾಗಿ ರಾಜ್ಯಾಧಿಕಾರವು ಜಾತಿಸೂತ್ರಕ್ಕೆ ಒಳಗಾಯಿತು. ಹಾಗೆಯೇ ಮುಂದೆ ಇದು ಮೂಲಭೂತ ಮತೀಯ ಕೋಮುವಾದದಂತಹ ಆಲೋಚನೆಗಳಿಗೆ ದಾರಿ ಮಾಡಿಕೊಟ್ಟಿತು. ಇಂತಹ ಹಿನ್ನೆಲೆಗಳಿಂದಲೇ ಕರ್ನಾಟಕದಲ್ಲಿ ಪ್ರಬಲಜಾತಿಗಳು ತಮ್ಮ ಮಠಗಳನ್ನು ರಾಜಕೀಯವಾಗಿ ಪ್ರತಿಷ್ಠಾಪಿಸಿಕೊಳ್ಳಲು ಸಾಧ್ಯವಾದದ್ದು.

ಈ ಅಂಶಗಳನ್ನೆಲ್ಲ ದಲಿತ ಬಂಡಾಯದ ಪ್ರಜ್ಞೆಯ ಜೊತೆಗಿರಿಸಿಯೇ ವಿಶ್ಲೇಷಿಸಬೇಕಾಗುತ್ತದೆ. ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ಬಹುರೂಪಿ ಚಳುವಳಿಗಳು ಒಂದಕ್ಕೊಂದು ಸಂಬಂಧವನ್ನು ಇರಿಸಿಕೊಂಡಿದ್ದವು. ಹಾಗೆಯೆ ಅಂತರಗಳನ್ನೂ ಉಳಿಸಿಕೊಂಡಿದ್ದವು. ಆದರೆ ಏಕೀಕರಣೋತ್ತರ ಕರ್ನಾಟಕದ ಎಪ್ಪತ್ತರ ದಶಕವನ್ನು ಸ್ಥಳೀಯ ಸಮಾಜಗಳ ಪುನರುಜ್ಜೀವನದ ಕಾಲವೆಂದೇ ಕರೆಯಬೇಕಾಗುತ್ತದೆ. ಈ ಕಾಲದಲ್ಲಿ ಮಾತ್ರವೇ ಸಮಾಜದ ಎಲ್ಲ ವಲಯಗಳಿಂದ ಬದಲಾವಣೆ ಆರಂಭವಾದದ್ದು. ದಲಿತ ಬಂಡಾಯ ಸಂವೇದನೆಯ ಭಾಗವಾಗಿ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ರೈತ ಸಂಘಗಳು ಪ್ರತ್ಯೇಕ ಅನನ್ಯತೆಯನ್ನು ರೂಪಿಸಿಕೊಂಡು ಕರ್ನಾಟಕದ ಪಲ್ಲಟಗಳಿಗೆ ಕಾರಣವಾದವು.

ಒಟ್ಟಿನಲ್ಲಿ ದಲಿತ ಬಂಡಾಯದ ಚಳುವಳಿಗಳು ಮಾಡಿದ ಪರಿಣಾಮಗಳನ್ನು ಕೆಳಕಂಡಂತೆ ಗುರುತಿಸಿಕೊಳ್ಳಬಹುದು.

೧. ಮೊದಲ ಬಾರಿಗೆ ದಲಿತ ಸಮುದಾಯಗಳು ಧ್ವನಿ ಮಾಡಿದವು.

೨. ಶೂದ್ರ ಪ್ರಜ್ಞೆಯು ಜಾಗೃತವಾಯಿತು.

೩. ಸಾಹಿತ್ಯದ ಮಾನದಂಡಗಳು ಬದಲಾದವು.

೪. ರಾಜಕೀಯ ಪ್ರವೇಶ ಸಾಧ್ಯವಾಯಿತು.

೫. ಅಸಮಾನತೆಯ ವಿರುದ್ಧದ ಹೋರಾಟಗಳು ಬೆಳೆದವು.

೬. ಕೆಳಜಾತಿಗಳಿಗೆ ಸಂಘಟನಾತ್ಮಕ ಶಕ್ತಿ ಬಂತು.

೭. ಭೂ ಹೋರಾಟಗಳು ಕಾಣಿಸಿಕೊಂಡವು.

೮. ಮತ ಮೌಢ್ಯಗಳನ್ನು ಬಯಲು ಮಾಡಲಾಯಿತು.

೯. ಸಾಂಸ್ಕೃತಿಕ ಪ್ರತಿರೋಧವನ್ನು ಒಡ್ಡಲಾಯಿತು.

೧೦. ಅಲಕ್ಷಿತರ ಅಭಿವ್ಯಕ್ತಿಗೆ ಅವಕಾಶವಾಯಿತು.

೧೧. ಪ್ರಭುತ್ವ ಮತ್ತು ಆಡಳಿತಷಾಹಿಗೆ ಎಚ್ಚರಿಕೆಯಾಯಿತು.

೧೨. ಹಿಂದುಳಿದ ವರ್ಗಗಳು ಚಹರೆಗಾಗಿ ಹುಡುಕಾಟ ನಡೆಸಿದವು.

೧೩. ದಲಿತಾನುಭವವು ಸಾಹಿತ್ಯದಲ್ಲಿ ದಾಖಲಾಗಿ ಪ್ರಭಾವ ಸೃಷ್ಟಿಸಿತು.

೧೪. ಸಮಾಜ ಸುಧಾರಣೆಯ ವೈಚಾರಿಕ ಬರಹಗಳು ಬೆಳೆದು ಸಮುದಾಯಗಳ ಚರಿತ್ರೆ, ಸಂಸ್ಕೃತಿ, ಪರಂಪರೆಗಳನ್ನು ಅಧ್ಯಯನಕ್ಕೆ ಒಳಪಡಿಸುವಂತಾಯಿತು.

೧೫. ಪರ್ಯಾಯ ಚಿಂತನೆಗಳು ಹುಟ್ಟಿಕೊಂಡು ಬಹುರೂಪಿ ನಿರೂಪಣೆಗಳು ಸಾಮಾಜಿಕವಾಗಿ ವಿಕಾಸಗೊಂಡವು.

ಹೀಗೆ ದಲಿತ ಬಂಡಾಯದ ಚಳುವಳಿಯ ಸಾಧನೆಗಳನ್ನು ಗಮನಿಸಬಹುದು. ಆದರೆ ದಲಿತ ಬಂಡಾಯದ ಚಳುವಳಿಯು ತನ್ನ ಆಶಯಗಳನ್ನು ಪೂರ್ಣವಾಗಿ ಈಡೇರಿಸಿಕೊಳ್ಳುವಲ್ಲಿ ವಿಫಲವಾದವು. ಬೃಹತ್ ಸಾಂಘಿಕ ಶಕ್ತಿ ಎರಡೂ ಬಣಗಳಿಂದ ಸಾಧ್ಯವಾಗಲಿಲ್ಲ. ಸರಿಸುಮಾರು ಎರಡೂವರೆ ದಶಕಗಳ ಕಾಲದ ಈ ಸಂವೇದನೆಗಳು ಕಾಲಾನುಗತಿಯಲ್ಲ ತಮ್ಮ ಸಾಮರ್ಥ್ಯವನ್ನು ತಮ್ಮಿಂದಲೇ ಕುಗ್ಗಿಸಿಕೊಂಡವು. ವ್ಯವಸ್ಥೆ ಕೂಡ ಇದಕ್ಕೆ ಕಾರಣವಾಯಿತು. ಮೊದಲಿಗೆ ದಲಿತ ಚಳುವಳಿಯೇ ಹಲವು ರೆಂಬೆ ಕೊಂಬೆಗಳಲ್ಲಿ ಕವಲಾಯಿತು. ಒಳಜಾತಿಗಳ ಸ್ಥಾನಮಾನದಲ್ಲಿ ಬಿರುಕು ಉಂಟಾದವು. ಬಂಡಾಯ ಚಳುವಳಿಯು ವ್ಯಕ್ತಿಕೇಂದ್ರಿತ ಸಮಸ್ಯೆಯಲ್ಲಿ ಸಿಲುಕಿತು. ಅದರ ಮುಂಚೂಣಿ ನಾಯಕರು ತಮ್ಮ ಪ್ರಭಾವಗಳಿಗಾಗಿ ಚಳುವಳಿಯ ಬಲವನ್ನು ದುರುಪಯೋಗ ಪಡಿಸಿಕೊಂಡರು. ಪ್ರಭುತ್ವದ ರಾಜಕೀಯ ಹುನ್ನಾರಗಳಿಗೆ ಮುಂಚೂಣಿ ಬಂಡಾಯ ಲೇಖಕರು ಬಲಿಯಾದರು. ವಿಧಾನಸೌಧದ ಹಿಂಬಾಗಿಲಲ್ಲಿ ಅಂತಹ ಲೇಖಕರು ನುಸುಳಿ ಪ್ರಭುತ್ವದ ಭಾಗವಾದರು. ಈ ವಿಚಾರದಲ್ಲಿ ದಲಿತ ಬಂಡಾಯದ ಲೇಖಕರು ಸಮಾನ ಪೈಪೋಟಿ ನೀಡಿ ರಾಜಕೀಯ ಪಕ್ಷಗಳ ನೀತಿಗೆ ತಕ್ಕಂತೆ ತಮ್ಮ ಮೂಲ ತಾತ್ವಿಕತೆಯನ್ನು ತಿದ್ದುಪಡಿ ಮಾಡಿಕೊಂಡರು. ಪ್ರಭುತ್ವದ ವಿರುದ್ಧ ಸಮರ ಸಾರಿದ್ದ ಲೇಖಕರೇ ಪ್ರಭುತ್ವದ ಗುಪ್ತ ಸಂಬಂಧ ಮಾಡಿ ಸಮುದಾಯಗಳ ನೈತಿಕ ನ್ಯಾಯಿಕ ಪ್ರತಿರೋಧವನ್ನು ಮಾರಿಕೊಂಡದ್ದು ಚರಿತ್ರೆಯ ವ್ಯಂಗ್ಯ. ಇದರಿಂದಾಗಿಯೇ ಜಾತಿ ವಿನಾಶದ ಪಣತೊಟ್ಟ ಲೇಖಕರು ಜಾತಿಯನ್ನೂ ಉಳಿಸಿಕೊಳ್ಳುವ ಭ್ರಷ್ಟರೂ ಆದದ್ದು. ರಾಜ್ಯಾಧಿಕಾರವನ್ನು ಹಿಡಿಯುವುದು ಎಲ್ಲ ದಲಿತ ಸಮುದಾಯಗಳ ಅಂತಿಮ ಗುರಿಯಾಗಬೇಕು ಎಂದು ಸಮರ್ಥಿಸಿದ್ದ ಅಂಬೇಡ್ಕರ್ ಅವರ ಚಿಂತನೆಯು ಇಲ್ಲಿ ದುರುಪಯೋಗವಾಯಿತು. ಸಮುದಾಯ ನಿಷ್ಠ ರಾಜಕೀಯ ಪ್ರಾತಿನಿಧ್ಯವನ್ನು ನಿರ್ವಹಿಸುವಲ್ಲಿಯು ಆ ಬಗೆಯ ಲೇಖಕ ನಾಯಕರು ವಿಫಲರಾದರು. ಅಧಿಕಾರ ದಾಹ ಬಹುಪಾಲು ಎಲ್ಲ ದಲಿತ ಬಂಡಾಯದ ಮುಂಚೂಣಿ ಲೇಖಕರಲ್ಲಿ ಇದ್ದಿದ್ದರಿಂದಲೇ ಪ್ರಭುತ್ವವು ಅವರನ್ನು ಖರೀದಿಸಿ ತನ್ನ ಅಗತ್ಯಕ್ಕೆ ತಕ್ಕಂತೆ ಪ್ರತಿಕ್ರಿಯಿಸಲು ಇಟ್ಟುಕೊಂಡದ್ದು.

ಈ ಚಳುವಳಿಗಳು ಹುಟ್ಟಿಕೊಂಡ ಚಾರಿತ್ರಿಕ ಆಶಯಕ್ಕೂ ನಂತರ ಅವು ಕ್ರಮಿಸಿದ ದಾರಿಯ ಪರಿಣಾಮಕ್ಕೂ ತುಂಬ ವೈರುಧ್ಯಗಳಿವೆ. ಪ್ರಭುತ್ವವು ಸದಾ ಕಾಲದಲ್ಲು ನೈತಿಕ ಶಕ್ತಿಗಳನ್ನು ಒಡೆದು ಆಳುವಲ್ಲಿ ತಂತ್ರ ರೂಪಿಸುತ್ತಲೇ ಇರುತ್ತದೆ ಎಂಬ ಪ್ರಮೇಯವು ಎಚ್ಚರಿಕೆಯ ಘಂಟೆಯಂತಿರಬೇಕಾದಲ್ಲಿ ಆ ಗಂಟೆಯ ಶಬ್ದವನ್ನೇ ನಿಲ್ಲಿಸುವಂತಾಗುವುದು ದೊಡ್ಡ ದುರಂತ. ಕರ್ನಾಟಕದ ಎಪ್ಪತ್ತರ ದಶಕದ ಬಹುಪಾಲು ಎಲ್ಲ ಬಹುರೂಪಿ ಚಳುವಳಿಗಳನ್ನು ಪ್ರಭುತ್ವವು ಸದ್ದಡಗಿಸಿರುವ ರೀತಿಯು ಅತ್ಯಂತ ಚಾಣಾಕ್ಷತನದ್ದು. ಅದು ಸಂವಿಧಾನದ ಸಾಮಾಜಿಕ ನ್ಯಾಯದ ಪ್ರಜಾಪ್ರಭುತ್ವವಾದಿ ತಂತ್ರಗಳಿಂದಲೇ ಈ ಕೃತ್ಯವನ್ನು ಮಾಡಿದೆ. ಚಳುವಳಿಗಳ ಬೃಹತ್ ಶಕ್ತಿಯನ್ನು ನಿಶ್ಕ್ರಿಯಗೊಳಿಸಲು ಇಡೀ ಆ ಸಮುದಾಯದ ಮೇಲೆ ಪ್ರಯೋಗ ಮಾಡಬೇಕಾಗಿಲ್ಲ. ಆ ಚಳುವಳಿಯ ನಾಯಕರ ಮೇಲೆ ಪ್ರಭುತ್ವವು ಕಣ್ಣಿಟ್ಟರೆ ಸಾಕು; ಮುಂದಿನ ದಾರಿ ಸುಲಭ. ಒಮ್ಮೆ ನಾಯಕರನ್ನು ಭ್ರಷ್ಠಗೊಳಿಸಿದರೆ ಆಮೇಲೆ ಇಡೀ ಆ ಚಳುವಳಿಯನ್ನೆ ಭ್ರಷ್ಠಗೊಳಿಸಬಹುದು. ಒಮ್ಮೆ ಮಾತ್ರ ಒಬ್ಬ ನಾಯಕನನ್ನು ಖರೀದಿಸಿದರೆ ಅನಂತರ ಅದರ ಉಳಿದೆಲ್ಲ ನಾಯಕರನ್ನು ಸ್ಥಾನಮಾನಗಳಿಗೆ ತಕ್ಕಂತೆ ಸಾರಾಸಗಟಾಗಿ ಖರೀದಿಸಬಹುದು. ಅಲ್ಲಿಗೆ ನಿಜವಾದ ಪ್ರತಿರೋಧ ಶಕ್ತಿಯನ್ನು ಛಿದ್ರಗೊಳಿಸಿದಂತಾಗುತ್ತದೆ. ಅಲ್ಲದೆ ಆ ಜನಶಕ್ತಿಯ ಇಚ್ಛಾಶಕ್ತಿಯನ್ನೆ ಮೊಂಡು ಮಾಡಿ ಜಾಗೃತಿಯೆ ಅಜಾಗೃತವಾಗುವಂತೆ ಮಾಡಲು ಕಷ್ಟಪಡಬೇಕಾಗಿಲ್ಲ. ಎಲ್ಲ ಕೆಳಜಾತಿಗಳ ನಾಯಕತ್ವಕ್ಕೂ ಪ್ರಭುತ್ವ ಇದೇ ಮದ್ದನ್ನು ಹಾಕುತ್ತದೆ. ಸಮುದಾಯದ ಕಣ್ಣಿಗೆ ಮಣ್ಣೆರಚಿ ಆ ಸಮುದಾಯದ ನಾಯಕರ ಕಣ್ಣಿಗೆ ಎಣ್ಣೆ ಹಚ್ಚುವ ಈ ಕ್ರಮವು ಜಾತಿ ವ್ಯವಸ್ಥೆಯನ್ನು ಬಲಪಡಿಸುವುದಕ್ಕೇ ಬಳಕೆಯಾಗುತ್ತಿರುತ್ತದೆ. ಕರ್ನಾಟಕದ ಎಲ್ಲ ಕೆಳಜಾತಿಗಳ ಜಾಗೃತಿಯಲ್ಲು ಪ್ರಭುತ್ವದ ಪಾತ್ರವು ಕಣ್ಣಿಗೆ ಕಾಣದಂತಿರುವುದನ್ನು ಗಮನಿಸಬೇಕು. ದಲಿತ ಬಂಡಾಯದ ಲೇಖಕರನ್ನು ಸರ್ಕಾರಗಳು ಕೊಂಡುಕೊಂಡದ್ದು ಏಕೀಕರಣೋತ್ತರ ಕರ್ನಾಟಕದ ಭವಿಷ್ಯದ ಕಾರಣದಿಂದಲ್ಲ. ಸುವರ್ಣ ಕರ್ನಾಟಕದ ಈ ಕಾಲದಲ್ಲಿ ದಲಿತ ಬಂಡಾಯದ ನಾಯಕರು ವ್ಯವಸ್ಥೆಯ ಚಿಲ್ಲರೆ ಆಮಿಷಗಳಿಗೆ ಮುಂದಾಗುವುದನ್ನು ಗಮನಿಸಿದರೆ ಇವರ ಸಮಾಜದ ಬದ್ಧತೆಗೂ ಸಾಹಿತ್ಯದ ನೀತಿಗೂ ಯಾವ ನೈತಿಕತೆಯೂ ಉಳಿದಿಲ್ಲ ಎಂಬುದು ಮೇಲು ನೋಟಕ್ಕೇ ಕಾಣುತ್ತದೆ.

ಹೀಗಾಗಿ ದಲಿತ ಬಂಡಾಯ ಚಳುವಳಿಗಳು ಎಷ್ಟು ಸಾಧನೆಗಳನ್ನು ಕರ್ನಾಟಕದ ಭವಿಷ್ಯದ ಭಾಗವಾಗಿ ಮಾಡಿದ್ದರೂ ಅಷ್ಟೇ ಪ್ರಮಾಣದ ಪ್ರಮಾದಗಳನ್ನು ಕೂಡ ಪ್ರಭುತ್ವದ ಜೊತೆಗೂಡಿ ಮಾಡಿದ್ದಾರೆ. ಬಂಡಾಯ ಲೇಖಕರು ಬಡವರ ಪರ ಹೋರಾಡುತ್ತಲೇ ರಾಜಕೀಯದ ಭವ್ಯ ಬಂಗಲೆಗಳಲ್ಲಿ ವಿರಮಿಸಿ ಪ್ರಭುತ್ವ ನೀಡಿದ ಐಷಾರಾಮ ಕಾಂಟೆಸ್ಸಾ ಕಾರಿನಲ್ಲಿ ಕುಳಿತು ಕಾವ್ಯ ಬರೆದದ್ದು ಸಮಾಜಿಕ ದ್ರೋಹವೇ ಹೊರತು ಅದು ಸಮುದಾಯ ಪರ ಸಾಮಾಜಿಕ ನ್ಯಾಯವಲ್ಲ. ದಲಿತ ಬಂಡಾಯದ ಪ್ರಮುಖ ಸಂಕೇತಗಳಾದ ಸಿದ್ಧಲಿಂಗಯ್ಯ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ ಅವರುಗಳು ಏಕೀಕರಣೋತ್ತರ ಕರ್ನಾಟಕದ ಪ್ರಭಾವಿ ವ್ಯಕ್ತಿಗಳು. ಇವರ ಸಾಹಿತ್ಯಿಕ ಸೇವೆ ಮುಖ್ಯವಾದದ್ದೆಂಬುದರಲ್ಲೂ ಹಲವಾರು ತೊಡಕುಗಳಿವೆ. ಇವರ ಸಾಮಾಜಿಕ ರಾಜಕೀಯ ಹೊಣೆಗಾರಿಕೆಯು ದಲಿತ ಬಂಡಾಯದ ಘನತೆಯನ್ನೆ ಕಿರಿದುಗೊಳಿಸಿತು. ಪ್ರಭುತ್ವವು ನಾಯಕರನ್ನು ಅಪ್ರಮಾಣಿಕರನ್ನಾಗಿಸಿದ ಕೂಡಲೇ ಸಂಘಟನೆಗಳು ಕ್ಷೀಣಿಸಿದವು. ತಮ್ಮೊಳಗೆ ಭಿನ್ನಾಭಿಪ್ರಾಯಗಳು ಬೆಳೆದವು. ಸಾಂಘಿಕ ಯತ್ನ ತುಂಡಾಯಿತು. ಅಪನಂಬಿಕೆಗಳು ಹೆಚ್ಚಾದವು. ಒಳಜಾತಿಗಳ ಸಂಬಂಧಗಳು ಕೆಟ್ಟವು. ಸಂಘಟನೆಗಳು ಇಬ್ಬಾಗವಾಗಿ ತಮ್ಮಲ್ಲೆ ಅನೇಕ ಹೋಳುಗಳಾಗಿ ವೈರುಧ್ಯವನ್ನು ಸೃಷ್ಟಿಸಿಕೊಂಡವು. ಸ್ಥಳೀಯ ಗ್ರಾಮಮಟ್ಟದ ಸಂಘಟನಾತ್ಮಕದಲ್ಲಿ ಅರಾಜಕತೆ ಉಂಟಾಗಿ ಸಂಘಟನೆಯೇ ಸ್ವಹಿತಾಶಕ್ತಿಗಳಿಗೆ ಬಳಕೆಯಾಗತೊಡಗಿತ್ತು. ತಮ್ಮ ಅನುಕೂಲಕ್ಕೆ ತಕ್ಕಂತೆ ಬದ್ಧತೆಯನ್ನು ಬದಲಾಯಿಸಿಕೊಳ್ಳುವ ಅವಕಾಶವಾದಿ ಗುಣ ರೂಢಿಯಾಯಿತು. ಇದರಿಂದ ಬಲಪಂಥೀಯ ಶಕ್ತಿಗಳಿಗೆ ಅನುಕೂಲವಾಯಿತು. ಪ್ರತಿಭಟನೆಯ ಕಾವ್ಯ ತಣ್ಣಗಾಯಿತು. ಸಾಹಿತ್ಯ ಮತ್ತು ಹೋರಾಟಗಳ ಅಂತ್ ಸಂಬಂಧ ಇಲ್ಲವಾಯಿತು. ಬರಹಕ್ಕೂ ಬದುಕಿಗೂ ವೈರುಧ್ಯಗಳು ಕಾಣಿಸಿಕೊಂಡವು. ಸಾಹಿತ್ಯ ಸೃಷ್ಟಿಯಲ್ಲಿ ಅಪ್ರಮಾಣಿಕತೆ ತಲೆದೋರಿತು. ಅಲ್ಲದೆ ಸೃಜನ ಶೀಲತೆಯಲ್ಲಿ ಏಕತಾನತೆ ಉಂಟಾಗಿ ಸಾಹಿತ್ಯದ ಅನನ್ಯತೆಯೆ ಕಲುಷಿತವಾಗಿತು. ತಾವು ಬರೆದು ಹೋರಾಟ ಮಾಡಿದ್ದನ್ನೆ ಪ್ರಭುತ್ವದಿಂದ ಸಿಗುವ ಸ್ಥಾನಮಾನಗಳಿಗಾಗಿ ಬಂಡವಾಳ ಮಾಡಿಕೊಳ್ಳುವ ಧೋರಣೆ ಉಂಟಾಯಿತು. ಇದು ಬಂಡವಾಳಶಾಹಿ ಮನೋಧರ್ಮಕ್ಕೆ ಸಾಮ್ಯವಾಗುವ ಪ್ರಕ್ರಿಯೆ. ಜನತೆಯ ಅನುಭವವನ್ನೆ ಬರೆದು ಬಂಡವಾಳ  ಮಾಡಿಕೊಳ್ಳುವ ಕ್ರಮವು ಸಾಹಿತ್ಯಿಕ ಬಂಡವಾಳಶಾಹಿ ಎನಿಸುತ್ತದೆ. ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲರಂತಹ ಹಿರಿಯ ಲೇಖಕರು ಇಂತಹ ಕ್ರಮದಲ್ಲಿ ಜನತೆಯ ಆಶೋತ್ತರಗಳನ್ನು ಮರೆತದ್ದು ವಿಷಾದನೀಯ.

ಪ್ರಗತಿಶೀಲ ಲೇಖಕರು ವರ್ಗಕ್ರಾಂತಿಯ ಕಥನಗಳನ್ನು ಮಾಡಿದ್ದವರಾದರೂ ಈ ಬಗೆಯಲ್ಲಿ ನೈತಿಕತೆಯನ್ನು ಸರಳೀಕರಿಸಿಕೊಂಡಿರಲಿಲ್ಲ. ನವೋದಯ ಲೇಖಕರು ಪ್ರಭುತ್ವದ ಮುಂದೆ ತಲೆಬಾಗಿರಲಿಲ್ಲ. ನವ್ಯ ಲೇಖಕರು ಸಾಹಿತ್ಯದ ಅಟ್ಟದಲ್ಲಿ ಕುಳಿತು ತಮ್ಮ ಏಕಾಂತಗಳನ್ನು ಹಾಡಿಕೊಂಡರೇ ಹೊರತು ಬಹಿರಂಗದಲ್ಲಿ ಹೆಸರು ಕೆಡಿಸಿಕೊಳ್ಳಲಿಲ್ಲ. ಕ್ರಾಂತಿಯ ಭಾಷಣಗಳನ್ನು ಹರಾಜು ಹಾಕಲಿಲ್ಲ. ಬಂಡಾಯದ ರೂಪಕಗಳನ್ನು ಅಡವಿಡಲಿಲ್ಲ. ನೊಂದವರ ಕನಸುಗಳ ವಿಧಾನಸೌಧದ ಅಂಗಳದಲ್ಲಿ ಸುಡಲಿಲ್ಲ. ಅದೇ ವಿಧಾನಸೌಧದ ಮುಂದೆ ತಮಟೆ ಚಳುಳಿ ಮಾಡುವ ಮೂಲಕ ಪ್ರಭುತ್ವದ ಗುಂಡಿಗೆಯನ್ನು ನಡುಗಿಸಿದ್ದವರ ದನಿಯು ಸದನದಲ್ಲಿ ‘ಸದಸ್ಯ’ರಾಗುವ ಮೂಲಕ ಹೇಗೆ ಕರಗಿ ಹೋಯಿತೆಂಬುದನ್ನು ಮರೆಯಲಾಗದು. ಹೀಗಾಗಿಯೇ ದಲಿತ ಬಂಡಾಯ ಚಳುವಳಿಗಳು ಸಮಷ್ಠಿ ಇಚ್ಛೆಯಿಂದ ಹುಟ್ಟಿಕೊಂಡರೂ ಕೊನೆಗೂ ಅವು ವ್ಯಕ್ತಿ ಹಿತಾಸಕ್ತಿಯಲ್ಲಿ ಲೀನವಾಗಿ ತಮ್ಮ ಆರಂಭದ ಘನತೆಯನ್ನು ತಾವೇ ಕಳೆದುಕೊಂಡವು.

ಹೀಗಾದದ್ದಕ್ಕೆ ಮುಖ್ಯವಾಗಿ ರಾಜಕೀಯ ಪ್ರಭುತ್ವದ ಆಮಿಷವನ್ನೇ ಆರೋಪಿಸುವುದು ಸೂಕ್ತವಲ್ಲ. ಹೀಗೆ ಮಾಡುವುದು ಅದರ ಜಾಯಮಾನ. ಸಂಘಟನೆಗಳೂ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ. ದಲಿತೆ ಸಾಹಿತಿಗಳು ಹಾಗು ಬಂಡಾಯ ಸಾಹಿತಿಗಳು ತೆಗೆದುಕೊಂಡ ರಾಜಕೀಯ ತೀರ್ಮಾನಗಳು ಸಕಾಲಿಕವಾಗಿರಲಿಲ್ಲ. ಮುಖ್ಯವಾಗಿ ಈ ಸಂಘಟನೆಗಳು ರಾಜಕೀಯ ಶಕ್ತಿಯಾಗಿ ಬೆಳೆದಿರಲಿಲ್ಲ. ಸಾಂಪ್ರದಾಯಿಕ ಮತದಾನ ಪದ್ಧತಿಯ ವಿಚಾರವಾಗಿ ಜಾಗೃತಿ ಮೂಡಿಸಿರಲಿಲ್ಲ. ರಾಜಕಾರಣದಲ್ಲಿ ಮತದಾನದ ರಾಜಕರಾಣವು ಚಳುವಳಿಯ ಯಶಸ್ವಿಗಿಂತಲೂ ಮಿಗಿಲಾದದು. ಭಾರತದ ಪ್ರಜಾಪ್ರಭುತ್ವದಲ್ಲಿ ಮತದಾರರನ್ನು ಜಾಗೃತಗೊಳಿಸದ ಹೊರತು ರಾಜಕೀಯ ಕ್ರಾಂತಿಯನ್ನು ಮಾಡಲಾಗದು. ಸಾಮಾಜಿಕ ಚಳುವಳಿಗಳಿಗೂ ರಾಜಕೀಯ ಕ್ಷೇತ್ರದ ಮತದಾನದ ಸೂಕ್ಷ್ಮ ಮನಸ್ಥಿತಿಗೂ ಸಂಪರ್ಕವನ್ನೆ ಈ ಚಳುವಳಿಗಳು ಕಂಡಕೊಂಡಿರಲಿಲ್ಲ. ಜಾತಿಧರ್ಮ ಮತೀಯತೆಯ ಆಧಾರದ ಮೇಲೆ ಚಾಣಾಕ್ಷ ರಾಜಕಾರಣವನ್ನು ರೂಪಿಸಿಕೊಂಡಿದ್ದ ಕನ್ನಡ ಪ್ರಭುತ್ವ ಅರ್ಥಾತ್ ಜಾತಿ ಪ್ರಭುತ್ವಗಳ ಎದಿರು ತಕ್ಕ ಪರ್ಯಾಯ ರಾಜಕಾರಣವನ್ನು ಮಾಡುವುದು ಪ್ರತಿಭಟನೆ ಮಾಡಿದಷ್ಟು ಸಲೀಸಾಗಿರಲಿಲ್ಲ. ಚಳುವಳಿಯ ಸಾಂಘಿಕ ಶಕ್ತಿಯನ್ನೆ ಜಾತಿ ರಾಜಕಾರಣವು ಚಾಣಾಕ್ಷತೆಯಲ್ಲಿ ಖರೀದಿಸುವಷ್ಟು ಬೆಳೆದಿತ್ತು. ದಲಿತ ಬಂಡಾಯ ಸಾಹಿತ್ಯ ಚಳುವಳಿ ತಾತ್ಕಾಲಿಕವಾಗಿ ಯಶಸ್ವಿಯಾದರೂ ಅದರ ರಾಜಕೀಯ ಹೋರಾಟಗಳು ನೆಲಕ್ಕಚ್ಚಿದವು. ವರ್ತಮಾನದ ಕರ್ನಾಟಕದಲ್ಲಿ ಆ ಕೊರತೆಯನ್ನು ನಿವಾರಿಸಲು ಬಿಎಸ್‌ಪಿ ರಾಜಕರಾಣವು ದಲಿತ ಸಂವೇದನೆಯ ಮೂಲಕ ಹೆಜ್ಜೆ ಇಟ್ಟಿರುವುದು ಮುಂದೆ ತೀರ್ಮಾನವಾಗಬೇಕಾಗಿದೆ. ನವ್ಯ ಲೇಖಕರು ಸಾಹಿತ್ಯದ ವ್ಯಸನದಲ್ಲಿದ್ದಾಗಲೇ ದಲಿತ ಬಂಡಾಯದ ಲೇಖಕರು ಬೇರೊಂದು ದಿಕ್ಕಿಗೆ ಮುಖ ಮಾಡಿದ್ದರು. ಪ್ರಗತಿಶೀಲರ ರಾಜಕಾರಣವೂ ಜನಪ್ರಿಯ ಶೈಲಿಯಲ್ಲಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಹಿತ್ಯ ಮತ್ತು ರಾಜಕಾರಣಕ್ಕೆ ಬೇಕಾದ ಸಿದ್ಧತೆಗಳನ್ನು ದಲಿತ ಬಂಡಾಯದವರು ಸಮಾಜವಾದಿ ಚಿಂತನೆಗಳಿಗೆ ಹೊರತಾಗಿ ಮಾಡಿಕೊಳ್ಳಬೇಕಾಗಿತ್ತು. ಈ ಹಿನ್ನೆಲೆಗಳಲ್ಲಿ ದಲಿತ ಬಂಡಾಯ ಲೇಖಕರು ಹಾದಿ ತಪ್ಪಿದ್ದು ದುರಂತ. ಅಂಬೇಡ್ಕರ್ ವಾದದ ಬೆಳಕಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಮಾಜ ರಾಜಕಾರಣವನ್ನು ಗ್ರಹಿಸಿದ ದಲಿತ ಸಾಹಿತಿಗಳು ಏಕೀಕರಣೋತ್ತರ ಕರ್ನಾಟಕದಲ್ಲಿ ಸಾಧಿಸಿದ ಸಮುದಾಯ ಪ್ರಗತಿಯು ದೊಡ್ಡದೇನಲ್ಲ. ಸಮುದಾಯಗಳು ಯಾವ ಕಾರಣಕ್ಕೆ ಸಂಘಟಿತವಾದವೊ ಅದೇ ನೆಲೆಯಿಂದಲೇ ಅವು ಭಗ್ನವಾದ ದುರಂತ ಚಾರಿತ್ರಿಕವಾಗಿ ಉಳಿದುಕೊಂಡಿದೆ. ಇದೇ ಪರಿಣಾಮದ ಮೂಲಕ ದಲಿತ ಬಂಡಾಯ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳು ಈಗ ಒಂದು ನಿಲುಗಡೆಗೆ ಬಂದು ನಿಂತಿವೆ. ಕನ್ನಡದ್ದೇ ರಾಜಕೀಯ ಪಕ್ಷ ಹಾಗೂ ಸರ್ಕಾರ ನಿರ್ಮಾಣವಾಗಬೇಕು ಎಂಬ ಆಶಯಗಳು ದಲಿತಬಂಡಾಯದ ಮುಖ್ಯ ಗುರಿಯಾಗಿರುವುದು ವಿಶೇಷವಾಗಿದೆ.