ಶ್ರೀಮತಿ ಇಂದಿರಾಗಾಂಧಿಯವರು ಎಲ್ಲ ಎಡಪಂಥೀಯರ ಪ್ರತಿರೋಧವನ್ನು ತಡೆಯಲು ಒಂದು ವಿಶಿಷ್ಟ ಸಂವಿಧಾನ ತಿದ್ದುಪಡಿಯನ್ನು ಜಾರಿಗೊಳಿಸಿದರು. ‘ಸಮಾಜವಾದಿ ಗಣರಾಜ್ಯ’ಗಳ ಕಲ್ಪನೆಯನ್ನು ಸಂವಿಧಾನಕ್ಕೆ ಸೇರಿಸುವ ಮೂಲಕ ಕಾಂಗ್ರೆಸ್ ಪಕ್ಷವು ಕೂಡ ಕ್ರಾಂತಿಕಾರಿ ಕನಸಿನ ಸಮತಾ ಸಮಾಜವನ್ನು ರೂಪಿಸಬಯಸುತ್ತದೆ ಎಂದು ಸಾರಿದರು. ಇದಕ್ಕೆ ಪೂರಕವಾಗಿ ನೆಹರೂ ಅವರೇ ಈ ಬಗೆಯ ಆಲೋಚನೆಯನ್ನು ತಮ್ಮ ಆಡಳಿತಾವಧಿಯಲ್ಲಿ ಸಿದ್ಧಪಿಡಿದ್ದರು. ಅದರ ಭಾಗವಾಗಿಯೇ ಇಂದಿರಾಗಾಂಧಿ ಅವರು ಆರ್ಥಿಕ ಸುಧಾರಣೆಗಳಲ್ಲಿ ವಿಶೇಷವಾಗಿ ಬಹುಸಂಖ್ಯಾತ ಕೆಳಜಾತಿಗಳಿಗೆ ಕಾರ್ಮಿಕರಿಗೆ ಅನುಕೂಲವಾಗುವಂತಹ ನಿಯಮಗಳನ್ನು ಅಳವಡಿಸಿದರು. ಇಪ್ಪತ್ತೊಂದು ಅಂಶಗಳ ಕಾರ್ಯವಾಗಲಿ, ಉಳುವವನೇ ಭೂ ಒಡೆಯ ಎಂಬ ಕಾನೂನೆ ಆಗಲಿ ಈ ನಿಯಮಗಳ ಭಾಗವಾಗಿ ಜಾರಿಯಾದವು.

ಇದರ ಪ್ರಭಾವವು ಕರ್ನಾಟಕದಲ್ಲಿ ವಿಶೇಷವಾಗಿ ಆಗಿದೆ. ರಾಜಕೀಯ ನೀತಿಯಲ್ಲು ಸಮಾಜವಾದಿ ತತ್ವವನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ ಸಾಂಪ್ರದಾಯಿಕ ಕಾಂಗ್ರೆಸ್ ಪಕ್ಷಕ್ಕೆ ಅದು ಸುಲಭವಾಗಿರಲಿಲ್ಲ. ಆ ಬಗೆಯ ಕಾರ್ಯಕ್ರಮ ರೂಪಿಸುವುದೇ ಬೇರೆ. ಅಂತಹ ರಾಜಕೀಯ ತತ್ವವನ್ನು ಪಕ್ಷದಲ್ಲಿ ಅನುಷ್ಠಾನಗೊಳಿಸುವುದೇ ಬೇರೆ. ಇಂದಿರಾಗಾಂಧಿ ಅವರು ಎಡಪಂಥೀಯ ರಾಜಕೀಯ ಪಕ್ಷಗಳಿಗೆ ಹೊಡೆತ ಕೊಡಬೇಕಿದ್ದರಿಂದ ಮಾಡಿ ‘ಸಮಾಜವಾದಿ’ ಕಾರ್ಯಸೂಚಿಗಳೆಲ್ಲ ನಿಜವಾದ ಕಾಳಜಿಯಿಂದ ರೂಪುಗೊಳ್ಳಲಿಲ್ಲ. ಹಾಗಿದ್ದರೂ ದೇವರಾಜ ಅರಸು ಅವರ ವಿಶೇಷ ಯತ್ನದಿಂದಾಗಿ ಕರ್ನಾಟಕದಲ್ಲಿ ಸಮಾಜವಾದಿ ರಾಜಕೀಯ ಚಟುವಟಿಕೆಗಳು ಬೆಳೆದದ್ದು ಗಮನಾರ್ಹ. ಇದೇ ಕಾಲದಲ್ಲಿ ಇಂದಿರಾಗಾಂಧಿ ವಿರುದ್ಧದ ರಾಜಕೀಯ ಅಲೆ ಎದ್ದಿತ್ತು. ಎಪ್ಪತ್ತರ ದಶಕದ ತುರ್ತುಪರಿಸ್ಥಿತಿಯ ಪರಿಣಾಮವು ಪರ್ಯಾಯ ರಾಜಕೀಯ ವ್ಯವಸ್ಥೆಗೆ ದಾರಿ ಮಾಡಿತ್ತು. ಕೇಂದ್ರದಲ್ಲಿ ಚಂದ್ರಶೇಖರ್, ಚರಣಸಿಂಗ್, ವಿ.ಪಿ.ಸಿಂಗ್ ರಂತಹ ಮೇಧಾವಿಗಳು ಸಮಾಜವಾದಿ ನೆಲೆಯ ರಾಜಕೀಯ ತತ್ವಗಳನ್ನು ಮೊಳಗಿಸಿದ್ದರು. ಇವರ ನೇತಾರರಂತಿದ್ದ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣಕ್ರಾಂತಿಯ ಕಹಳೆಯನ್ನು ದೇಶದ ಎಲ್ಲೆಡೆ ಪ್ರತಿಧ್ವನಿಸಿದ್ದರು. ಲೋಹಿಯಾವಾದವೂ ಪ್ರಭಾವಿಯಾಗಿ ವ್ಯಾಪಿಸಿತ್ತು. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿದ್ದವು. ಪರಿಣಾಮವಾಗಿ ಕರ್ನಾಟಕದಲ್ಲು ಸಮಾಜವಾದಿ ಚಿಂತನೆಗಳು ಮೊಳಕೆಯೊಡೆದಿದ್ದವು. ಹಿಂದುಳಿದ ವರ್ಗಗಳಿಂದ ಬಂದ ಯುವ ರಾಜಕಾರಿಣಿಗಳಿಗೆ ಸಮಾಜವಾದವು ಸಮೀಪವಾಗಿತ್ತು. ಅಲ್ಲದೆ ಸಾಹಿತ್ಯ ವಲಯದಲ್ಲಿ ಎರಡಪಂಥೀಯ ಮತ್ತು ಸಮಾಜವಾದಿ ಆಲೋಚನೆಗಳು ಸಮಾಜವಾದಿ ರಾಜಕಾರಣಕ್ಕೆ ಒತ್ತಾಸೆಯಾಗಿದ್ದವು. ಈ ಕಾಲದಲ್ಲೇ ಶಾಂತವೇರಿ ಗೋಪಾಲಗೌಡರು ಕಾಗೋಡು ಸತ್ಯಾಗ್ರಹವನ್ನು ರೂಪಿಸಿದ್ದು ಅದಕ್ಕೆ ನೈತಿಕ ಜಯ ಸಂದಿತ್ತು. ಯು.ಆರ್. ಅನಂತಮೂರ್ತಿ ತೇಜಸ್ವಿ, ಲಂಕೇಶ್‌, ನಂಜುಂಡಸ್ವಾಮಿ ಯಂತವರು ಸಮಾಜವಾದಿ ಯುವಸಭಾಗಳನ್ನು ಜಾಗೃತಗೊಳಿಸಿದ್ದಲ್ಲದೆ ಅಂತಹ ಯುವ ಜನಾಂಗದ ಪ್ರಜ್ಞೆ ಕೂಡ ಆಗ ಬೆಳೆದಿತ್ತು. ಇವುಗಳಿಂದಾಗಿ ಕಾಂಗ್ರೇಸ್ ಪ್ರಣೀತ ರಾಜಕಾರಣಕ್ಕೆ ಪರ್ಯಾಯ ರಾಜಕಾರಣವು ಕನಾಕದಲ್ಲಿ ಸಾಧ್ಯವಾಯಿತು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್.ಪಟೇಲ್, ಎಸ್.ಬಂಗಾರಪ್ಪ, ನಜೀರ್ ಸಾಬ್, ಜಾರ್ಜ್‌ಫರ್ನಾಡೀಸ್, ಎಂ.ಪಿ. ಪ್ರಕಾಶ್‌ರಂತಹ ಸಮಾಜವಾದಿ ಆಲೋಚನೆಯ ರಾಜಕೀಯ ವ್ಯಕ್ತಿಗಳು ಎಪ್ಪತ್ತರ ದಶಕದ ರಾಜಕಾರಣದಲ್ಲಿ ವಿಶೇಷವಾಗಿ ಕಾಣಿಸಿಕೊಂಡರು. ಮುಂದೆ ಇವರೆಲ್ಲ ಬೇರೆ ಪಕ್ಷಗಳಲ್ಲಿ ಕಳೆದು ಹೋದರಾದರೂ ಮೂಲತಃ ಇವರು ಸಮಾಜವಾದಿ ರಾಜಕಾರಣವನ್ನು ಆರಂಭಿಸಿವರಾಗಿದ್ದರು.

ಈ ಮೇಲಿನ ಎಲ್ಲ ನಾಯಕರಿಗೂ ಕನ್ನಡ ಸಾಹಿತ್ಯ ಸಂಸ್ಕೃತಿ ನಾಡು ನುಡಿಯ ಬಗ್ಗೆ ವಿಭಿನ್ನ ಸಂಬಂಧಗಳಿದ್ದವು. ಜನತೆಯ ಪ್ರತೀಕವಾಗಿ ಪ್ರಭುತ್ವ ಇರಬೇಕೆಂಬ ಬದ್ಧತೆ ಇವರಿಗೆಲ್ಲ ಮೊದಲು ಇತ್ತು. ಹೀಗಾಗಿ ದೇಶದ ಉದ್ದಕ್ಕೂ ಇಂದಿರಾಗಾಂಧಿ ವಿರುದ್ಧದ ರಾಜಕೀಯ ಸಿದ್ಧತೆಗಳು ನಡೆದಿದ್ದಾಗ ಕರ್ನಾಟಕದ ಸ್ಥಿತಿಯು ಬಹಳ ವಿಶ್ವಾಸದಿಂದ ಸಮಾಜವಾದಿ ವಿಚಾರಗಳನ್ನು ಎತ್ತಿ ಹಿಡಿದಿತ್ತು. ಇಂದಿರಾಗಾಂಧಿ ಅವರ ದಲಿತ ಪರ ಕಾರ್ಯಸೂಚಿಗಳು ಹುಸಿ ಎಂಬ ವಿಚಾರವೂ ಇದೇ ಕಾಲದಲ್ಲಿ ಬಿಂಬಿತವಾಯಿತು. ವಿಶೇಷ ಎಂದರೆ ಒಂದೆಡೆ ಸಮಾಜವಾದಿ ರಾಜಕಾರಣವು ಬೆಳೆಯುತ್ತಿದ್ದಂತೆಯೇ ಸಿಪಿಎಂ ಮತ್ತು ಸಿಪಿಐನ ಮಾರ್ಕ್ಸ್‌‌ವಾದಿ ರಾಜಕಾರಣವು ಟ್ರೇಡ್‌ಯೂನಿಯನ್‌ಗಳ ಮೂಲಕ ತಮ್ಮ ರಾಜಕೀಯ ನೆಲೆಗಳನ್ನು ಭದ್ರಪಡಿಸಿಕೊಳ್ಳಲು ವಿಫಲ ಯತ್ನ ಮಾಡುತ್ತಿದ್ದವು. ಸಮಾಜವಾದಿ ರಾಜಕೀಯ ಪಕ್ಷವೊಂದು ಪ್ರಾದೇಶಿಕವಾಗಿ ರೂಪುಗೊಳ್ಳದೇ ಹೋದದ್ದು ವಿಪರ್ಯಾಸಕರ. ಅಂತಹ ಸಮರ್ಥ ರಾಜಕಾರಿಣಿಗಳಿದ್ದರೂ ಅದು ಸಾಧ್ಯವಾಗಲಿಲ್ಲ. ಜನತಾ ಪಕ್ಷದ ವ್ಯಾಪ್ತಿಯಲ್ಲಿ ಕೂಡಿದ ಕಾಂಗ್ರೆಸ್ ವಿರೋಧಿ ರಾಜಕಾರಣಿಗಳೆಲ್ಲ ಮುಂದೆ ಛಿದ್ರವಾಗಿ ಹೋದದ್ದು ಕಾಂಗ್ರೆಸ್ ಪಕ್ಷಕ್ಕೆ ಮರು ಜೀವ ಬಂತು. ಸಮಾಜವಾದಿ ಎನಿಸಿಕೊಂಡಿದ್ದವರೇ ಕಾಂಗ್ರೆಸ್ ಸೇರುವಂತಾಯಿತು. ಆದಿಕಾರದ ಅಮಲು ದಾರಿಯಲ್ಲಿ ನಡೆದ ಪ್ರಗತಿಪರ ರಾಜಕಾರಣಿಗಳು ತಮ್ಮ ಮೂಲ ಸಮಾಜವಾದಿ ವಿಚಾರಗಳನ್ನು ಪಕ್ಷಾಂತರಿಸಿಕೊಂಡರು.

ಈ ಹಿನ್ನೆಲೆಯಲ್ಲಿ ಗಮನಿಸಿದರೆ ಪ್ರಾದೇಶಿಕವಾದ ರಾಜಕೀಯ ಯತ್ನಗಳನ್ನೆಲ್ಲ ತಂತ್ರದಿಂದ ರಾಷ್ಟ್ರೀಯ ಪಕ್ಷಗಳು ಹೊಡೆದುರುಳಿಸುತ್ತಲೇ ಬಂದಿವೆ. ವಿಶೇಷವಾಗಿ ಕರ್ನಾಟಕದ ಮೇಲೆ ಸಮಾಜವಾದಿ ರಾಜಕಾರಣದ ಪ್ರಭಾವವನ್ನು ಗಮನಿಸಬೇಕು. ಮೊದಲ ಬಾರಿಗೆ ರಾಜಕಾರಣದ ಮತೀಯ ಹಾಗೂ ಜಾತಿವಾರು ಸೂತ್ರಗಳಿಗೆ ಸಮಾಜವಾದಿ ರಾಜಕಾರಣದಿಂದ ಪೆಟ್ಟಾಯಿತು. ಕಾಂಗ್ರೆಸಿನ ಆರ್ಭಟಕ್ಕೆ ಸೋಲುಂಟಾಯಿತು. ಅಲ್ಪಸಂಖ್ಯಾತ ಸಮುದಾಯಗಳು ರಾಜಕೀಯ ಆಯ್ಕೆಯಲ್ಲಿ ಕಾಂಗ್ರೆಸ್ಸೇತರರ ಕಡೆಗೆ ಗಮನ ಕೊಡುವಂತಾಯಿತು. ಕಾಂಗ್ರೆಸ್ಸಿನ ಸಾಂಪ್ರದಾಯಿಕ ದಲಿತ ಓಟುಗಳು ಬದಲಾವಣೆಯ ಕಡೆಗೆ ಯತ್ನಿಸುವಂತಾಯಿತು. ಸ್ಥಳೀಯ ರಾಜಕೀಯ ನೆಲೆಗಳಲ್ಲಿ ಹೊಸತನ ಮೂಡಿತು. ಹಿಂದುಳಿದ ವರ್ಗಗಳು ವಿಶೇಷವಾಗಿ ಸಮಾಜವಾದಿ ನ್ಯಾಯದ ಕಡೆಗೆ ವಾಲಿದವು. ಅಲ್ಲದೆ ಎಡಪಂಥೀಯ ಶಕ್ತಿಗಳು ನಾಡು ನುಡಿಯ ನಿರ್ಮಾನದಲ್ಲಿ ಪ್ರಮುಖವಾಗಿ ತೊಡಗುವಂತಾಯಿತು. ಯುವ ಜನಾಂಗದ ಸಮಾಜವಾದ ಒಲವು ಬೆಳೆಯಿತಾದರೂ ಅದು ದೀರ್ಘ ಕಾಲೀನ ಪರಿಣಾಮ ಮಾಡಲಿಲ್ಲ. ಒಟ್ಟಿನಲ್ಲಿ ಇಂದು ಜಾತ್ಯತೀತ ಜನತಾದಳ ಎಂದು ಕರೆಸಿಕೊಳ್ಳುವ ರಾಜಕಾರಣವೂ ಇದೆ. ಸಮಾಜವಾದಿ ಮುಖವಾಡ ಧರಿಸಿರುವ ಇದು ಅಪ್ಪಟ ಕೌಟುಂಬಿಕ ಜಾತಿವಾದದ ಒಂದು ಪಕ್ಷ. ಒಟ್ಟಿನಲ್ಲಿ ಏಕೀಕರಣೋತ್ತರ ಕರ್ನಾಟಕದಲ್ಲಿ ರೂಪುಗೊಂಡ ಸಮಾಜವಾದಿ ರಾಜಕೀಯ ಪ್ರಭಾವವು ಪ್ರಮುಖವಾದ ಘಟನೆ. ಸಾಮಾಜಿಕ ನ್ಯಾಯದ ಭಾಗವಾಗಿ ಅಖಂಡ ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ಹುಟ್ಟಿಕೊಂಡ ಇಂತಹ ಚಿಂತನೆಗಳು ಇಂದು ಮರೆಯಾಗಿವೆ. ವರ್ತಮಾನದ ಕರ್ನಾಟಕದಲ್ಲಿ ಸಮಾಜವಾದಿ ನೆಲೆಗಳು ಇಂದು ಮರೆಯಾಗಿವೆ. ವರ್ತಮಾನದ ಕರ್ನಾಟಕದಲ್ಲಿ ಸಮಾಜವಾದಿ ವಿವೇಕವು ಹಿಂದುಳಿದ ವರ್ಗಗಳ ಮೂಲಕವೇ ಮತ್ತೊಮ್ಮೆ ನಿರ್ಮಾಣವಾಗಬೇಕಾಗಿದ್ದು ಕಾಲ ಪಕ್ವವಾಗಬೇಕಿದೆ.