ದಲಿತ ಸಂಘರ್ಷ ಸಮಿತಿಯು ಚಾರಿತ್ರಿಕವಾದುದಾಗಿದ್ದರೂ ದಲಿತ ಸಾಹಿತ್ಯ ಮತ್ತು ಸಂಘಟನೆಗಳಿಂದ ಆದ ಎಚ್ಚರ ದೀರ್ಘಕಾಲೀನವಾದುದಾಗಿರಲಿಲ್ಲ ಎಂಬುದು ವಿಷಾದಕರ. ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆ ಆದದ್ದು ಸಂಘಟನೆಯ ಧ್ವನಿಶಕಿಯಿಂದ ಎಂಬುದು ನಿಜವಾದರೂ ಅದೇ ವೇಳೆಯಲ್ಲಿ ಶೋಷಿತ ಶಕ್ತಿಗಳು ಕೂಡ ರಾಜಕೀಯವಾಗಿ ಬಲಗೊಂಡಿವೆ. ಪ್ರಭುತ್ವದ ವಿರುದ್ಧ ದಂಗೆ ಎದ್ದ ದಲಿತ ಸಂಘರ್ಷ ಸಮಿತಿಯು ತನ್ನ ಪ್ರತಿರೋಧವನ್ನು ನಿರಂತವಾಗಿ ವೃದ್ಧಿಸಿಕೊಳ್ಳಲಿಲ್ಲ. ರಾಜಕೀಯವಾದ ನಿರ್ಧಾರಗಳಲ್ಲಿ ದ.ಸಂ.ಸ.ವು. ದುಡುಕಿತು. ಸಾಮಾಜಿಕ ಚಳುವಳಿಯನ್ನು ರೂಪಿಸಿದಷ್ಟು ಸುಲಭವಾಗಿ ರಾಜಕೀಯ ಜಾಗೃತಿಯನ್ನು ಬೆಳೆಸುವುದು ಸಂಘಟನೆಗೆ ಸಾಧ್ಯವಾಗಲಿಲ್ಲ. ಬಲಿಷ್ಠ ಜಾತಿಗಳ ರಾಜಕೀಯ ಹುನ್ನಾರಗಳ ಜೊತೆಯೇ ದಲಿತ ನಾಯಕರು ರಾಜಕೀಯ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾದದ್ದು ವೈರುಧ್ಯವಾಗಿತ್ತು.

ಒಂದು ನಾಡಿನ ಪುನರುಜ್ಜೀವನದಂತಿದ್ದ ಎಪ್ಪತ್ತರ ದಶಕದ ಕನಸುಗಳೆಲ್ಲ ಕಾಲಾನಂತರದ ನಿರ್ವಹಣೆಯಲ್ಲಿ ವಿಫಲವಾಗಿವೆ. ಆರಂಭ ಮಾತ್ರ ಪುನರುಜ್ಜೀವನದ ದನಿಯನ್ನೇ ಮೊಳಗಿಸಿದ್ದರೂ ಅವು ಮುಟ್ಟಿದ ಕೊನೆಯು ಪುನರುಜ್ಜೀವನ ದರ್ಶನಕ್ಕೆ ವಿರುದ್ಧವಾದುದಾಗಿತ್ತು. ದಲಿತ ಬಂಡಾಯ ಸಾಹಿತ್ಯದ ಚಳುವಳಿಯ ಸಾಧನೆ ಮತ್ತು ವೈಫಲ್ಯಗಳೇ ದಲಿತ ಸಂಘರ್ಷ ಸಮಿತಿಗೂ ಅನ್ವಯಿಸುತ್ತವೆ. ಆದರೆ ಸಾಹಿತ್ಯ ಮಾಡಬಹುದಾದ ಪರಿಣಾಮಕ್ಕಿಂತಲೂ ಹೆಚ್ಚಿನ ದಲಿತ ಸಂಘರ್ಷ ಸಮಿತಿಯ ಹೋರಾಟಗಳು ಮಾಡಿದವು. ದಲಿತ ಸಮೂಹ ಇದರಿಂದ ಸಾಕಷ್ಟು ಎಚ್ಚೆತ್ತುಕೊಂಡಿತು. ಸಾಹಿತ್ಯ ಸಂವೇದನೆಯನ್ನೆ ನಿರ್ಧರಿಸುವ ಮಟ್ಟಕ್ಕೆ ದಲಿತ ಹೋರಾಟಗಳು ಪ್ರಭಾವ ಮಾಡಿದವು. ಸವರ್ಣೀಯರೆನಿಸಿಕೊಂಡವರ ಮನಸ್ಸಿನ ಪರಿವರ್ತನೆಯಲ್ಲು ದಲಿತ ಸಂವೇದನೆಯ ಹೋರಾಟಗಳು ಕೆಲಸ ಮಾಡಿವೆ. ಅಷ್ಟೇ ಅಲ್ಲದೇ; ಪ್ರಭುತ್ವವನ್ನು ಬೆದರಿಸುವ, ತಿದ್ದುವ, ಪ್ರತಿಭಟಿಸುವ ದೊಡ್ಡ ಶಕ್ತಿಯಾಗಿಯೂ ದಸಂಸ ಪರಿಣಾಮಕಾರಿಯಾಗಿತ್ತು. ಒಟ್ಟು ಸಮಾಜದ ಸುಧಾರಣೆಗೆ ಆಕ್ರಂಧಿಸಿದ ದಸಂಸ ಪರೋಕ್ಷವಾಗಿ ರೈತ ಸಂಘದ ಹೋರಾಟಗಳಿಗೂ ಪ್ರೇರೇಪಣೆ ನೀಡಿತು. ಭೂಮಾಲೀಕ ಜಾತಿಗಳ ನ್ಯಾಯದ ಮುಖವಾಣಿಯಂತಿದ್ದ ರೈತ ಸಂಘವು ದಲಿತ ಸಮೂಹಗಳ ಜೊತೆ ಕೈ ಜೋಡಿಸಬೇಕಾದ ಅನಿವಾರ್ಯತೆಯು ದಸಮಸದ ಪ್ರಭಾವವಾಗಿತ್ತು. ವರ್ತಮಾನದ ದಲಿತ ಸಂಗಟನೆಗಳ ಸ್ಥಿತಿ ಬೇರೆ. ಆದರೆ ಆರಂಭದ ದಲಿತ ಪ್ರಭಾವವು ಹಿಡಿಯಾಗಿ ಕರ್ನಾಟಕದ ಸುತ್ತ ಆವರಿಸಿ ದೇಶದ ಮಟ್ಟದಲ್ಲಿ ಕೂಗಿತು. ರೈತ ಸಂಘದ ಆಶೋತ್ತರಗಳನ್ನು ದಲಿತ ಸಂಘರ್ಷಗಳ ಜೊತೆ ಬೆರೆಸಲಾಗದು. ದಲಿತರ ಪಾಲಿಗೆ ಎಪ್ಪತ್ತರ ದಶಕವು ನಿಜಕ್ಕೂ ಪುನರುಜ್ಜೀವನ ಕಾಲವೇ ಹೌದು. ಇಲ್ಲಿ ಗಮನಿಸಬಹುದೇನೆಂದರೆ ನ್ಯಾಯದ ಕನಸುಗಳನ್ನು ಬಿತ್ತಲ್ಪಟ್ಟದ್ದು. ಅವು ಸಾಕಾರಗೊಳ್ಳುವಲ್ಲಿ ಉಂಟಾದ ವೈಪರೀತ್ಯಗಳು ಬೇರೆ. ದಸಂಸವು ಉಂಟು ಮಾಡಿದ ಒಟ್ಟು ಪರಿಣಾಮಗಳನ್ನು ಈ ಕೆಳಗಿನ ಅಂಶಗಳಲ್ಲಿಗುರುತಿಸಿಕೊಳ್ಳಬಹುದು.

೧. ದಲಿತರಲ್ಲಿ ಸ್ವಾಭಿಮಾನ ಮೊಳೆಯಿತು. ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿತು. ಹೋರಾಟದ ಸ್ವಭಾವ ಬೆಳೆಯಿತು.

೨. ಕನ್ನಡ ಸಾಹಿತ್ಯದ ಮೇಲೆ ತೀವ್ರತ ಪ್ರಭಾವ ಸಾಧ್ಯವಾಯಿತು. ಜಾತಿಯ ಒಳ ಲೋಕದ ಅನುಭವ ವಿವರಗಳು ತೆರೆದುಕೊಂಡವು.

೩. ಕನ್ನಡ ಭಾಷೆಯ ಬಹುರೂಪವು ಅಭಿವ್ಯಕ್ತವಾಯಿತು. ಹಾಗೆಯೆ ಸಾಹಿತ್ಯದ ಮಾನದಂಡಗಳು ಬದಲಾದವು.

೪. ರಾಜಕೀಯ ಪ್ರಜ್ಞೆ ವಿಸ್ತರಿಸಿತು. ನ್ಯಾಯದ ಕೂಗು ಸಮಾಜದಲ್ಲಿ ಪ್ರತಿಧ್ವನಿಸಿತು. ರಾಜಕೀಯ ಅಧಿಕಾರದ ಕಡೆಗೆ ದಲಿತರು ಕನಸುವಂತಾಯಿತು.

೫. ಭೂಮಾಲಿಕ ಶಕ್ತಿಗಳ ಆರ್ಭಟ ತಗ್ಗಿತು. ನೌಕರಶಾಹಿಯ ಶೋಷಣೆಯು ನಯವಾಯಿತು. ಮತಾಂಧ ಶಕ್ತಿಗಳು ತಾತ್ಕಾಲಿಕವಾಗಿ ಹಿಂದೆ ಸರಿದವು.

೬. ಜಾತಿವ್ಯವಸ್ಥೆಯ ಕ್ರೂರ ಹಿಡಿತ ಸಡಿಲವಾಯಿತು. ಗ್ರಾಮೀಣ ಕರ್ನಾಟಕದಲ್ಲಿ ದಲಿತರಿಗೆ ಪ್ರಶ್ನಿಸುವ ಧೈರ್ಯ ಬಂತು.

೭. ಶಿಕ್ಷಣ, ಸಂಘಟನೆ ಉದ್ಯೋಗ ನೆಲೆಗಳಲ್ಲಿ ದಲಿತರು ಸ್ವಲ್ಪ ಮಟ್ಟಿಗಾದರೂ ಅವಕಾಶ ಪಡೆಯುವಂತಾಯಿತು. ನಗರ ಪ್ರದೇಶದ ದಲಿತರ ಪ್ರಜ್ಞೆಯು ಮತ್ತಷ್ಟು ಎಚ್ಚರವಾಯಿತು.

೮. ಭೂ ಹೋರಾಟಗಳಿಂದಾಗಿ ಕನಿಷ್ಠ ಪ್ರಮಾಣದ ನ್ಯಾಯವಾದರೂ ದಲಿತರಿಗೆ ಸಿಗುವಂತಾಯಿತು. ಜೊತೆಗೆ ಇಪ್ಪತ್ತೊಂದು ಅಂಶಗಳ ಕಾರ್ಯಕ್ರಮವು ಜಾರಿಗೆ ಬರಲು ಸುಲಭವಾಯಿತು.

೯. ಅಂಬೇಡ್ಕರ್ ವಾದವು ಸಮಾಜದಲ್ಲಿ ಪ್ರಭಾವ ಬೀರುವಂತಾಗಿ ಪ್ರಗತಿಪರರು ಅಂಬೇಡ್ಕರ್ ಚಿಂತನೆಗಳನ್ನು ಒಪ್ಪುವಂತಾಯಿತು. ಹಾಗೆಯೇ ಸಾಹಿತ್ಯ ಮತ್ತು ರಾಜಕೀಯದಲ್ಲಿ ಅದರ ಪ್ರಭಾವ ಹೆಚ್ಚಾಯಿತು.

೧೦. ಅಸ್ಪೃಷ್ಯತೆಯ ಆಚರಣೆಯು ತಗ್ಗಿತಲ್ಲದೆ ಜೀತ ಪದ್ಧತಿಯು ಕಡಿಮೆ ಆಗಿ ಅಮಾಯಕ ದಲಿತರಿಗೆ ಸ್ವಲ್ಪಮಟ್ಟಿಗಿನ ರಕ್ಷಣೆ ದೊರೆಯಿತು.

೧೧. ಸಾರ್ವಜನಿಕ ಪ್ರವೇಶಗಳಲ್ಲಿದ್ದ ನಿಷೇದಗಳನ್ನು ಕಾನೂನು ರೀತ್ಯ ಹಿಂತೆಗೆದು ಕೊಳ್ಳುವಂತೆ ಮಾಡಲಾಯಿತು. ಜಆತಿ ಭೇದಕ್ಕೆ ದಂಡನೆಯನ್ನು ನಿಗಧಿಪಡಿಸಲಾಯಿತು. ಅಲ್ಲದೆ ಅಮಾನಷವಾದ ಜಾತಿ ಹೆಸರಿನ ಬೆತ್ತಲೆ ಸೇವೆಯನ್ನೂ ಮಲ ಹೊರುವ ಪದ್ಧತಿಯನ್ನು ನಿಷೇಧಿಸಲಾಯ್ತು.

೧೨. ವಿಶ್ವವಿದ್ಯಾಲಯಗಳಲ್ಲಿ ದಲಿತರ ಪ್ರವೇಶವು ಗಣನೀಯವಾಗಿ ಹೆಚ್ಚಿತು. ದಲಿತ ವಿದ್ಯಾರ್ಥಿ ಚಳುವಳಿಯು ತನ್ನ ಸಮಾಜದ ಪರವಾದ ನ್ಯಾಯಕ್ಕೆ ದನಿಗೂಡಿಸಿತು ಜೊತೆಗೆ ಬೇರೆ ಬೇರೆ ಪ್ರಗತಿಪರ ಸಂಘಟನೆಗಳಲ್ಲಿ ಕೈ ಜೋಡಿಸಿ ಜಾಗೃತಿಗೆ ಕಾರಣವಾಯಿತು.

೧೩. ಮತ ಮೌಡ್ಯಗಳ ವಿರುದ್ಧ ಬಂಡಾಯವೆದ್ದು ವಿಚಾರವಾದಿ ಒಕ್ಕೂಟಗಳ ಬೆಳೆಯಲು ದಸಂಸದಿಂದ ಪ್ರೇರಣೆಯಾಯಿತು. ಸಮಾಜದಲ್ಲಿ ಬೂದಿಬಾಬಾಗಳ ಬಣ್ಣ ಬಯಲಾಯಿತು. ವಿಜ್ಞಾನ ತಂತ್ರಜ್ಞಾನಗಳ ವೈಜ್ಞಾನಿಕ ಮನೋಧರ್ಮ ಜಾಗೃತವಾಯಿತು.

೧೪. ಹಿಂದುಳಿದ ವರ್ಗಗಳು ತಮ್ಮ ಅಸ್ತಿತ್ವವನ್ನು ಹುಡುಕಿಕೊಳ್ಳಲು ದಾರಿಯಾಯಿತು. ಅಲ್ಪಸಂಖ್ಯಾತ ಹಾಗೂ ಆದಿವಾಸಿ ಸಮುದಾಯಗಳಿಗೆ ನೈತಿಕ ಬಲ ವೃದ್ಧಿಸಿತು. ಪರೋಕ್ಷವಾಗಿ ದಲಿತರ ಜೊತೆ ಇವರು ಗುರುತಿಸಿಕೊಳ್ಳಲು ಸಹಾಯವಾಯಿತು.

೧೫. ಮೀಸಲಾತಿಯು ಜಾರಿಗೊಳ್ಳುವಲ್ಲಿ ತೀವ್ರತರ ಒತ್ತಡಗಳು ಉಂಟಾದವು. ಹಾಗೆಯೇ ಅಂತರ್‌ಜಾತಿ ಮತ್ತು ಸರಳವಿವಾಹಗಳು ಗಣನೀಯವಾಗಿ ಉಂಟಾಗಿ ಜಾತಿ ವಿನಾಶದ ಯತ್ನಗಳು ನಡೆದವು.

ಹೀಗೆ ಹತ್ತಾರು ನಿಟ್ಟಿನಿಂದ ದಸಂಸದ ಹೋರಾಟಗಳು ಏಕೀಕರಣೋತ್ತರ ಕರ್ನಾಟಕದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಯಿತು. ಹನ್ನೆರಡನೆ ಶತಮಾನದ ಬಸವಣ್ಣನವರ ಚಳುವಳಿಯ ನಂತರದಲ್ಲಿಯೂ ಇಷ್ಟೊಂದು ಸಾಮಾಜಿಕ ನ್ಯಾಯ ಘಟಿಸಿರಲಿಲ್ಲ. ಅಂತಹ ಚಾರಿತ್ರಿಕ ಆದರ್ಶದ ಬಸವಣ್ಣನನ್ನು ದಸಂಸವು ತನ್ನ ಹೋರಾಟದ ಚಿಂತನೆಯ ಭಾಗವಾಗಿ ಸ್ವೀಕರಿಸಿದ್ದುದು ಜಾತ್ಯತೀತ ಸಂಘರ್ಷದ ಪ್ರತೀಕವಾಗಿತ್ತು. ಆದರೆ ದಸಂಸದ ಇಂತಹ ಗಂಭೀರ ಯತ್ನಗಳು ಬಹಳ ಬೇಗನೇ ಛಿದ್ರಗೊಂಡದ್ದು ಭಾರತೀಯ ಸಮಾಜದ ಜಾತಿಯ ಮೂಲಕವೇ ಎಂಬುದು ಮನಗಾಣಬೇಕಾದ ಸಂಗತಿ. ದಲಿತರು ಯಾವ ಸಮಸ್ಯೆಯಿಂದ ಬಿಡುಗಡೆ ಪಡೆಯಬೇಕು ಎಂದು ಸಂಘಟಿತರಾದರೊ ಅದೇ ಜಾತಿ ವ್ಯವಸ್ಥೆಯೆ ಅವರ ಸಂಘಟನಾ ಶಕ್ತಿಯೂ ಭಗ್ನಗೊಳ್ಳುವುದಕ್ಕೆ ಕಾರಣವಾಯಿತು. ಮೇಲು ಜಾತಿಗಳು ಜಾತಿಗಳನ್ನು ಒಡೆದು ಆಳುವುದು ಒಂದು ಬಗೆಯಾದರೆ ಸ್ವತಃ ಸ್ವಜಾತಿಗಳೇ ಭಗ್ನಗೊಂಡು ತಮ್ಮ ತಮ್ಮ ವಿರುದ್ಧವೇ ಬಡಿದಾಡಿಕೊಳ್ಳುವುದು ಮತ್ತೊಂದು ದುರಂತ. ದಲಿತ ಸಂಘರ್ಷ ಸಮಿತಿಯ ಒಳಗಿದ್ದ ಅನೇಕ ‘ದಲಿತ’ ಜಾತಿಗಳು ಬಹಳ ದೂರದ ಒಪ್ಪಂದಗಳನ್ನು ಮಾಡಿಕೊಂಡಿರಲಿಲ್ಲ. ನಾಯಕರಿಗೂ ಅಂತಹ ತಕ್ಕ ಸಿದ್ಧತೆಗಳಿರಲಿಲ್ಲ. ಹಾಗೆಯೇ ಮೇಲುಜಾತಿಗಳು ಯಾವತ್ತೂ ಜಾಗೃತವಾಗಿರುತ್ತವೆ. ಆದ್ದರಿಂದಲೇ ಮೇಲಜಾತಿಗಳು ಕೆಳಜಾತಿಗಳನ್ನು ಛಿದ್ರೀಕರಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿರುವುದಿಲ್ಲ ದಸಂಸದ ಚಳುವಳಿಯಿಂದ ಕನ್ನಡ ನಾಡು ನುಡಿಗೆ ಏನಾಯಿತು ಎಂಬುದು ಇಲ್ಲಿ ಮುಖ್ಯ. ಮೇಲೆ ಗುರುತಿಸಿದ ಅನೇಕ ಅಂಶಗಳು ನಾಡು ನುಡಿಯನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ.