ಏಕೀಕರಣೋತ್ತರ ಕರ್ನಾಟಕದಲ್ಲಿ ರೈತ ಅಂದೋಲಗಳಿಗೆ ಮಹತ್ವದ ಸ್ಥಾನವಿದೆ. ದಸಂಸದ ಸಾಮಾಜಿಕ ನ್ಯಾಯ ಒಂದು ಕಡೆಗಾದರೆ ರೈತ ಸಂಘದ ಹಕ್ಕೊತ್ತಾಯಗಳು ಬೇರೊಂದು ಸಂಚಲವನ್ನು ಸೃಷ್ಟಿಸಿದವು. ವಕ್ಕಲು ಸಮುದಾಯಗಳ ಸಮಸ್ಯೆಗಳಿಗೆ ಜಾತಿಯ ಶಾಪ ಅಷ್ಟಾಗಿ ಅಂಟಿಕೊಂಡಿರುವುದಿಲ್ಲ. ವರ್ಗ ಹೋರಾಟದಿಂದಲೂ ರೈತರ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಿರಲಿಲ್ಲ. ಮಾರ್ಕ್ಸ್‌ವಾದ, ಅಂಬೇಡ್ಕರ್ ವಾದ ಎರಡರಿಂದಲೂ ಭಿನ್ನವಾಗಿ ರ್ಹೋಟವನ್ನು ರೂಪಿಸಿಕೊಂಡ ರೈತ ಸಂಘಕ್ಕೆ ಸಮಾಜವಾದಿ ಧೋರಣೆ ಸೂಕ್ಷ್ಮವಾಗಿತ್ತು. ಕರ್ನಾಟಕದ ರೈತ ಸಂಘಗಳಲ್ಲಿ ಭಿನ್ನ ಗುಂಪುಗಳಿದ್ದರೂ ವಿಶೇಷವಾಗಿ ಪ್ರೊ.ನಂಜುಂಡಸ್ವಾಮಿ ಅವರು ರೂಪಿಸಿದ ರೈತ ಸಂಘರ್ಷಗಳು ಕರ್ನಾಟಕದ ರೈತ ಸಮುದಾಯಗಳ ಪಾಲಿಗೆ ದೊಡ್ಡ ಸಾಧ್ಯತೆಯಾಗಿ ಕಂಡವು. ಮಾರ್ಕ್ಸ್‌ವಾದಿ ನೆಲೆಯಲ್ಲಿ ಸಂಘಟಿತವಾಗಿದ್ದ ರೈತ ಚಳುವಳಿಗಳು ದೀರ್ಘಕಾಲೀನ ಪರಿಣಾಮಕ್ಕೆ ಮುಂದಾಗಲಿಲ್ಲ. ನಂಜುಂಡಸ್ವಾಮಿ ಅವರ ಯತ್ನದಲ್ಲಿ ಕರ್ನಾಟಕದಾದ್ಯಂತ ರೈತ ಸಂಚಲನ ತೀವ್ರವಾಗಿ ತಟ್ಟಿತಲ್ಲದೆ ಪ್ರಭುತ್ವವನ್ನೆ ಅಲುಗಾಡಿಸಿತು. ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘಗಳು ಏಕಕಾಲದಲ್ಲಿ ತಮ್ಮ ನೆಲೆಯ ಸಾಮಾಜಿಕ ಜಾಗೃತಿ ಮತ್ತು ಹಕ್ಕೊತ್ತಾಯಗಳನ್ನು ನಿರ್ವಹಿಸಿದ್ದುದು ಗಂಭೀರವಾಗಿದೆ.

ವಾಸ್ತವದಲ್ಲಿ ದಲಿತ ಬಂಡಾಯ ಸಾಹಿತಿಗಳು ಈ ಎರಡೂ ದಲಿತ ರೈತ ಸಮೂಹಗಳ ಸಮಸ್ಯೆಗಳ ಭಾಗವಾಗಿ ತೊಡಗಿದ್ದುದು ಗಮನಾರ್ಹವಾದುದು. ಪ್ರತಿಭಟನೆಗೆ ಬೇಕಾದ ಸಾಹಿತ್ಯ ಮತ್ತು ಕಲಾ ಪ್ರಕಾರಗಳು ಅವರವರ ಚಳುವಳಿಯ ಭಾಗವಾಗಿ ಅನಾವರಣಗೊಂಡಿದ್ದರಿಂದ ಶೂದ್ರ ಸಂವೇಧನೆಯ ಸಾಂಸ್ಕೃತಿಕ ಗುಣಗಳು ರೈತ ಆಂದೋಲನದಲ್ಲಿ ಪ್ರತಿಫಲಿಸಿದವು. ಹೋರಾಟದ ಹಾಡುಗಳು, ಜಾಥಾಗಳು, ಬೀದಿ ನಾಟಕಗಳು, ಪ್ರತಿಭಟನೆಯ ಹೊಸ ರೂಪಕಗಳು ಸೃಷ್ಟಿಯಾದವು. ಇದರಿಂದ ಕನ್ನಡ ಭಾಷೆಗೆ ವಕ್ಕಲು ಸಮುದಾಯಗಳ ದನಿಯು ಭಿನ್ನವಾಗಿ ಬೆರೆತುಕೊಂಡಿತು. ದಲಿತ ಸಮುದಾಯಗಳು ಗ್ರಾಮಮಟ್ಟದಲ್ಲಿ ಹೋರಾಡಬೇಕಿದ್ದುದು ಭೂಮಾಲೀಕ ಜಾತಿಗಳ ವಿರುದ್ಧವೇ. ಆದರೆ ದಸಂಸವು ತನ್ನ ಸಹ ಜೀವಿಗಳಾದ ರೈತರ ವಿರುದ್ಧ ದಂಗೆ ಏಳಲಿಲ್ಲ. ರಾಜಕೀಯ ಪ್ರಭುತ್ವ ಮತ್ತು ಸಮಾಜದ ಒಟ್ಟು ವಸ್ಯಥೆಯ ವಿರುದ್ಧ ಸಮರ ಸಾರಿದರು. ಹಳ್ಳಿಯ ಭೂಮಾಲೀಕರ ವಿರುದ್ಧ ಅಷ್ಟು ಸುಲಭವಾಗಿ ದಲಿತರು ಹೋರಾಡುವುದೂ ಸಾಧ್ಯವಿರಲಿಲ್ಲ. ಅದ್ದರಿಂದಲೇ ನಗರಕೇಂದ್ರಿತವಾಗಿರುವ ಪ್ರಭುತ್ವದ ವಿರುದ್ಧ ಬಂಡೆದ್ದರೆ ಹಿಡಯಾಗಿ ಎಲ್ಲ ಶಕ್ತಿಗಳ ಮೇಲೆ ತಿರುಗಿ ಬೀಳಲು ಸುಲಭ ಎಂಬ ಅರಿವು ದಸಂಸಕ್ಕೆ ಇತ್ತು. ಇದು ಜಾತಿನಿಷ್ಠ ಸಮಾಜದ ವಿಪರ್ಯಾಸ. ನೇರವಾಗಿ ಶೋಷಕರ ವಿರುದ್ಧ ಹೋರಾಡಲು ಭಾರತೀಯ ಸಮಾಜದಲ್ಲಿ ಅವಕಾಶವೇ ಇಲ್ಲ. ಬಹಳ ನಿಗೂಢ ಸ್ಥಿತಿಯಂತೆ ಸಾಮಾಜಿಕ ನಿಯಂತ್ರಣಗಳು ಕೆಲಸ ಮಾಡುತ್ತಿರುತ್ತವೆ. ಅಲ್ಲದೆ ಆಯಾ ಸಮಾಜದ ಕಣ್ಣಿಂದಲೇ ಉಳಿದ ಸಮುದಾಯಗಳನ್ನು ನೋಡಬೇಕಾದ ಸ್ಥಿತಿಯಿದೆ. ಅಂತಾದ್ದರಲ್ಲಿ ದಲಿತ ಸಮುದಾಯಗಳು ತನ್ನ ಮೇಲಿರುವ ಸಾಮಾಜಿಕ ಒತ್ತಡಗಳನ್ನು ನಿರ್ವಹಿಸುವಾಗ ಹೊಂದಾಣಿಕೆ ಮಾಡಿಕೊಂಡೆ ಸಂಘರ್ಷಕ್ಕಿಳಿಯಬೇಕು. ಭಾಗಶಃ ಯಾವ ವರ್ಗ ವರ್ಣ ಸಮಾಜಗಳಲ್ಲು ಇಂತಹ ವೈಪರೀತ್ಯ ದ್ವಂದ್ವ ಇರಲಾರದು. ರೈತ ಸಂಘದ ಜೊತೆ ದಲಿತ ಸಂಘವು ಕೈಜೋಡಿಸಲು ಪೂರ್ಣವಾಗಿ ಸಾಧ್ಯವಾಗದೇ ಹೋದದ್ದು ಇದರಿಂದಲೇ. ಒಟಿನಲ್ಲಿ ರೈತ ಸಂಘದ ಹೋರಾಟಗಳು ಏಕೀಕರಣೋತ್ತರ ಕನ್ನಡ ನಾಡುನುಡಿಗೆ ಹೊಸ ಬಗೆಯ ಶಕ್ತಿಯನ್ನು ತಂದುಕೊಟ್ಟವು. ಅವನ್ನಿಲ್ಲಿ ಗುರುತಿಸುವ.

೧. ವಕ್ಕಲು ಸಮುದಾಯಗಳಿಗೆ ಸಾಂಘಿಕವಾದ ಬಲ ಮತ್ತು ಚಹರೆ ಸಾಧ್ಯವಾಯಿತು.

೨. ಕೃಷಿ ನೀತಿಯ ತಾರತಮ್ಯಕ್ಕೆ ತಕ್ಕ ಪ್ರತಿರೋಧವನ್ನು ಒಡ್ಡಲಾಯಿತು.

೩. ಸಣ್ಣ ಪ್ರಮಾಣದ ರೈತರಿಗೆ ವಿಶ್ವಾಸ ಹೆಚ್ಚಾದಂತೆಯೇ ಅವರ ಸಾಲಗಳ ಹೊರೆಯನ್ನು ಇಳಿಸಲು ಅವಕಾಶವಾಯಿತು. ಹಾಗೆಯೇ ದೊಡ್ಡ ಪ್ರಮಾಣದ ಶ್ರೀಮತ ರೈತರಿಗೆ ಸರ್ಕಾರದ ಮೇಲಿನ ಹಿಡಿತವೂ ಸಾಧ್ಯವಾಯಿತು.

೪. ಕೃಷಿ ಸಮುದಾಯಗಳಲ್ಲಿ ವಿಶೇಷವಾದ ರಾಜಕೀಯ ಜಾಗೃತಿ ಬೆಳೆಯಿತು ಹಾಗೂ ರೈತ ಸಂಘವೇ  ‘ಕನ್ನಡ ದೇಶ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸುವಂತಾಯಿತು.

೫. ನೌಕರಶಾಹಿಯ ವಿರುದ್ಧ ಬಂಡೇಳುವ ಹಾಗೂ ರಾಜಕಾರಣಿಗಳನ್ನು ರೈತ ಪರ ನಿಲುವಿಗೆ ಒಳಪಡಿಸುವ ಒತ್ತಡ ಉಂಟಾಯಿತು.

೬. ಬಡ್ಡಿ ಸಾಲದ ದಲ್ಲಾಳಿಗಳನ್ನೂ ಖಾಸಗೀ ಹಣಕಾಸು ಸಂಸ್ಥೆಗಳನ್ನೂ ನಿಯಂತ್ರಿಸಲು ಸಾಧ್ಯವಾಯಿತು.

೭. ಮಾರುಕಟ್ಟೆಯ ದಲ್ಲಾಳಿ ಜಾಲದ ಮೇಲೆ ದಂಗೆ ಎದ್ದು ಬಡರೈತರ ಬೆಳೆಗೆ ರಕ್ಷಣೆ ನೀಡುವಂತಾಯಿತು. ಜೊತೆಗೆ ಗ್ರಾಮೀಣ ಉತ್ಪನ್ನಗಳಿಗೆ ತಕ್ಕುದಾದ ಬೆಲೆ ನಿಗಧಿಪಡಿಸುವಂತಹ ಹೋರಾಟಗಳು ಬೆಳೆದವು.

೮. ರೈತ ಪರ ಸಹಕಾರಿ ಸಂಘಗಳು ವಿಶೇಷವಾಗಿ ವಿಸ್ತರಿಸಿದವು. ರೈತರ ಹಿತ ಕಾಯುವ ಯೋಜನೆಗಳನ್ನು ಸ್ಥಳೀಯವಾಗಿ ರೂಪಿಸಿಕೊಂಡವು.

೯. ವಕ್ಕಲು ಸಮುದಾಯಗಳು ರಾಜಕೀಯೇತರ ರಂಗಗಳಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಬೇಕಾದ ಎಚ್ಚರ ಮತ್ತು ತಂತ್ರಗಳು ಬೆಳೆದವು. ವಿಶೇಷವಾಗಿ ಖಾಸಗೀ ವಲಯಗಳಲ್ಲಿ ತಮ್ಮ ಬೇರುಗಳನ್ನು ಬಿಡಲು ಪರೋಕ್ಷವಾದ ಬೆಂಬಲ ಉಂಟಾಯಿತು.

೧೦. ವಕ್ಕಲು ಸಮುದಾಯಗಳಲ್ಲಿ ಪ್ರಬಲವಾದ ಲಿಂಗಾಯುತ ಹಾಗೂ ಗೌಡ ಸಮುದಾಯಗಳು ರಾಜಕೀಯವಾಗಿ ಪ್ರಬಲವಾಗಲು ಬೇಕಾದ ಅವಕಾಶಗಳನ್ನು ರೈತ ಚಳುವಳಿಗಳನ್ನು ಬಳಸಿಕೊಳ್ಳುವ ಮೂಲಕ ಪಡೆಯಲಾಯಿತು.

೧೧. ಭೂಮಿಯ ಮೇಲಿನ ವಿವಿಧ ಕಂದಾಯಗಳನ್ನು ನಿಯಂತ್ರಿಸಲು ಸಾಧ್ಯವಾಯಿತಲ್ಲದೆ ರೈತರ ಮೇಲಿನ ಸರ್ಕಾರಗಳ ಹಿಡಿತವನ್ನು ತಪ್ಪಿಸಿದಂತಾಯಿತು.

೧೨. ರೈತರ ಹಿತಕಾಯುವ ಕಾನೂನುಗಳನ್ನು ಪರಿಶೀಲಿಸಿ ಸಮಗ್ರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬೇಕಾದ ನೀತಿಗಳನ್ನು ಒತ್ತಾಯಿಸಲಾಯಿತು.

೧೩. ಗ್ರಾಮೀಣ ಸಂಪನ್ಮೂಲಗಳನ್ನು ಲೂಟಿ ಮಾಡುವ ಮಧ್ಯವರ್ತಿ ವ್ಯವಸ್ಥೆಯನ್ನು ನಿಯಂತ್ರಿಸಲಾಯಿತು. ಹಾಗು ವೈಜ್ಞಾನಿಕ ಬೆಲೆಗೆ ಒತ್ತಾಯಿಸಲಾಯಿತು.

೧೪. ರೈತ ಮಕ್ಕಳಿಗೆ ಶೈಕ್ಷಣಿಕ ವಲಯದಲ್ಲಿ ಅಕವಾಶ-ಮೀಸಲು-ಕಲ್ಪಿಸಲಾಯಿತಲ್ಲದೆ ಉದ್ಯೋಗದಲ್ಲೂ ತಕ್ಕ ಅವಕಾಶ ಉಂಟಾಯಿತು.

೧೫. ನಗರೀಕರಣ, ವಾಣಿಜ್ಜೀಕರಣ ಹಾಗೂ ಕೃಷೀಕರಣಗಳ ನಡುವಿನ ಅಂತರಗಳನ್ನು ಹೋಗಲಾಡಿಸಲು ಮತ್ತು ಕೃಷಿ ಉದ್ಯಮದಿಂದ ತಮ್ಮ ಇರುವಿಕೆಯನ್ನು ಮರುಸ್ಥಾಪಿಸಿಕೊಳ್ಳಲು ಸಾಧ್ಯವಾಯಿತು.

ಈ ಮೇಲಿನ ಎಲ್ಲ ಸಾಧನೆಗಳು ನಾಡುನುಡಿಯ ಭಾಗವಾಗಿಯೇ ರೂಪಿಸಲ್ಪಟ್ಟುವೆಂಬುವದನ್ನು ಗಮನಿಸಬೇಕು. ಏಕೀಕರಣೋತ್ತರ ಕನ್ನಡ ಸಮಾಜದ ಚರಿತ್ರೆಯಲ್ಲಿ ದಲಿತ ಮತ್ತು ರೈತ ಹೋರಾಟಗಳನ್ನು ಸೂಕ್ಷ್ಮವಾಗಿಯೇ ನಿರ್ಧರಿಸಬೇಕು. ಒಡೆಯ ಮತ್ತು ಜೀತಗಾರ ಇಬ್ಬರೂ ಒಟ್ಟಿಗೇ ಎಚ್ಚರಗೊಂಡರೆ ಏನಾಗಬಹುದೊ ಅದೇ ರೈತ ಮತ್ತು ದಲಿತ ಹೋರಾಟಗಳಲ್ಲೂ ಉಂಟಾಗಿದೆ. ಇವೆರಡೂ ನ್ಯಾಯಗಳು ಒಂದೇ ಅಲ್ಲ. ಕರ್ನಾಟಕದಲ್ಲಿ ನಿರ್ಣಾಯಕವಾದ ಭೂಮಾಲೀಕ ಶಕ್ತಿಗಳೆಂದರೆ ಲಿಂಗಾಯತ ಹಾಗೂ ಒಕ್ಕಲಿಗ ಜಾತಿಗಳೇ. ಇವರಿಬ್ಬರ ದಲಿತ ವಿರೋಧಿ ಶಕ್ತಿಗಳೇ ಈ ಎರಡು ಪ್ರಬಲ ಕೋಮುಗಳು. ಈ ಭೂಮಾಲೀಕ ಸಮುದಾಯಗಳ ವಿರುದ್ಧ ಆತ್ಯಂತಿಕವಾದ ಪ್ರತಿರೋಧ ಈ ತನಕ ಕರ್ನಾಟಕದಲ್ಲಿ ಆಗಿಯೇ ಇಲ್ಲ. ವಿಚಿತ್ರ ಎಂದರೆ ರೈತರ ಜೊತೆಗೂಡಿ ಹೋರಾಟ ರೂಪಿಸಲು ದ.ಸಂ.ಸವು ಅನೇಕ ಬಾರಿ ಯತ್ನಿಸಿ ವಿಫಲವಾಗಿದೆ. ಇವರಿಬ್ಬರ ಸಮಸ್ಯೆಗಳು ಪೂರಕವಾದವಲ್ಲ. ವೈರುಧ್ಯಗಳ ನಡುವೆ ಪ್ರತ್ಯೇಕವಾಗಿ ತಮ್ಮ ಹಿತವನ್ನು ಈ ಎರಡೂ ಸಂಘಟನೆಗಳು ಕಾಯ್ದುಕೊಂಡಿವೆ.

ಭೂಮಿಯ ಪ್ರಶ್ನೆಯೆ ದಲಿತರ ಮೂಲ ಅಸ್ತಿತ್ವವನ್ನು ಕುರಿತಾದದ್ದು. ಆದರೆ ಭೂಮಿಯ ಒಡೆತನದಲ್ಲಿ ಹಕ್ಕು ಸ್ಥಾಪಿಸಿಕೊಂಡಿರುವ ಮೇಲು ಜಾತಿಗಳು ರೂಪಿಸುವ ಹೋರಾಟವು ಪರೋಕ್ಷವಾಗಿ ದಲಿತರ ಅಸ್ತಿತ್ವವನ್ನು ಉಲ್ಲಂಘಿಸುವಂತದ್ದು. ದಲಿತ-ರೈತ ಒಂದಾದರೆ ಇಬ್ಬರ ಶಕ್ತಿಯಿಂದಾಗಿ ರಾಜ್ಯಾಧಿಕಾರವನ್ನು ಪಡೆಯಬಹುದು ಎಂಬ ಆಲೋಚನೆಯೇ ಕೃತಕವಾಗಿದೆ. ಪ್ರಾಮಾಣಿಕವಾದ ಹೋರಾಟ ಹಾಗೂ ಹಂಚಿಕೆ ಇವರಿಬ್ಬರ ನಡುವೆ ಸಾಧ್ಯವಾಗದು. ಈಗಲೂ ಇಂತಹ ಹೊಂದಾಣಿಕೆಯ ಯತ್ನ ನಡೆಯುತ್ತಲೇ ಇರುವುದು ಚೋದ್ಯವಾಗಿದೆ. ಒಟ್ಟಾರೆಯಾಗಿ ರೈತ ಸಂಘದ ನ್ಯಾಯೋಚಿತ ರೈತ ಹಕ್ಕುಗಳು ಕರ್ನಾಟಕದ ಸಮಾಜದಲ್ಲಿ ಒಂದಿಷ್ಟಾದರೂ ನ್ಯಾಯ ಒದಗಿಸಿವೆ. ಆದರೆ ರೈತ ಸಂಘದ ಪಯಣ ಅರ್ಧಧಾರಿಯದು ಎಂಬಂತೆ ಅದರ ಸಮಷ್ಟಿ ಶಕ್ತಿಯು ಇಂದು ಕುಂದಿದೆ. ಕರ್ನಾಟಕದ ರೈತ ಸಮುದಾಯಗಳಲ್ಲು ಲಿಂಗಾಯಿತ ಹಾಗೂ ಗೌಡ ಜಾತಿಗಳ ಒಳ ಬಣಗಳಿವೆ. ಅಂತೆಯೇ ಎಡಪಂಥೀಯರು, ಬಲಪಂಥೀಯರು ಸಹ ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬಡರೈತರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಶ್ರೀಮಂತ ರೈತರು  ಕೂಡ ಬಂಡವಾಳಶಾಹಿ ಧೋರಣೆಯ ಚಿಂತನೆಯಲ್ಲಿ ರೈತ ಶಕ್ತಿಯನ್ನು ಸೀಮಿತ ಮಾಡಿ ತಮ್ಮ ಹಿತಕ್ಕಾಗಿ ಬಲಿ ಕೊಟ್ಟಿರುವುದೂ ಉಂಟು. ನಂಜುಂಡಸ್ವಾಮಿ ಅವರ ರೈತ ಸಂಘ ಮಾತ್ರ ದೊಡ್ಡ ಪ್ರಮಾಣದಲ್ಲಿ ರಾಷ್ಟ್ರ ವ್ಯಾಪಿ ಪರಿಣಾಮವನ್ನು ಉಂಟು ಮಾಡಿತು. ಸ್ವತಃ ನಂಜುಂಡಸ್ವಾಮಿ ಅವರು ಸಮಾಜವಾದಿ ರೈತ ಚಿಂತಕರಾಗಿದ್ದರೂ ಕೂಡ ಅವರಲ್ಲೂ ಸಹ ದಲಿತ ಸಂಘಟನೆಗಳ ಜೊತೆಗೆ ಅಖಂಡವಾಗಿ ನ್ಯಾಯ ಕೇಳಲು ಸಾಧ್ಯವಾಗಲಿಲ್ಲ. ವ್ಯಕ್ತಿ ಪ್ರತಿಷ್ಠೆಯಲ್ಲಿ ಅವರು ರೈತ ಸಂಘದ ಇಬ್ಬಾಗಕ್ಕೆ ಕಾರಣರಾದರು. ಅವರ ರಾಜಕೀಯ ನಿರೀಕ್ಷೆಗಳು ಪಕ್ವ ಸಮಯದಲ್ಲಿ ಹುಟ್ಟಿರಲಿಲ್ಲ.

ಆದರೂ ಇಲ್ಲಿನ ಮುಖ್ಯಾಂಶವೇನೆಂದರೆ, ಗ್ರಾಮೀಣ ರೈತ ಕರ್ನಾಟಕವು ತನ್ನ ಮೇಲಿನ ಸರ್ಕಾರದ ಹಿಡಿತವನ್ನು ತಪ್ಪಿಸಿಕೊಳ್ಳಲು ಸಾಂಘಿಕವಾದ ಯತ್ನವನ್ನು ಮಾಡಿದ್ದುದು. ರೈತ ಸಮುದಾಯ ಕೂಡ ಕನ್ನಡ ನಾಡಿನ ಪ್ರಮುಖ ಶಕ್ತಿ. ಅದರ ಆಧಾರದ ಮೇಲೆಯೆ ಕನ್ನಡ ನಾಡು ಬೆಳೆದಿರುವುದು. ದಲಿತ-ರೈತ ಹೋರಾಟಗಳಲ್ಲಿ ಹೊಂದಾಣಿಕೆ ಇರದಿದ್ದರೂ, ತಾತ್ವಿಕವಾಗಿ ಅದು ಅಸಾಧ್ಯವಾಗಿದ್ದರೂ ಕನ್ನಡ ಗ್ರಾಮೀಣ ಲೋಕದ ಸುಧಾರಣೆಗೆ ರೈತ ಆಂದೋಲನಗಳು ಅನಿವಾರ್ಯವಾಗಿದ್ದವು. ಜನಪ್ರಿಯ ಕನ್ನಡ ಹೋರಾಟಗಳ ಆಚೆಗಿದ್ದ ರೈತ ಸಂಘದ ಆಶಯಗಳು ಮಣ್ಣಿನ ಮಕ್ಕಳ ಅಸ್ತಿತ್ವವನ್ನು ಕಾಯುವಂತದಾಗಿತ್ತು. ಈ ಹೊಣೆಗಾರಿಕೆಯನ್ನು ದಲಿತರು ನಿರ್ವಹಿಸಲು ಸಾಧ್ಯವಿರಲಿಲ್ಲ. ಅಂತೆಯೇ ದಲಿತರ ನ್ಯಾಯವನ್ನು ರೈತರು ಕೇಳಲು ಸಾಧ್ಯವಿರಲಿಲ್ಲ. ಅನ್ಯಾಯದಲ್ಲಿ ಪಾಲುಗೊಂಡಿದ್ದ ರೈತ ಸಮುದಾಯವು ದಲಿತರನ್ನು ರಕ್ಷಿಸುವುದು ಕೇವಲ ಕನಸಾಗಿತ್ತು. ಬೇಕಾದರೆ ರೈತರ ಕೂಲಿಯಾಳುಗಳಾಗಿ ದಲಿತರು ರೈತರ ಪರವಾಗಿ ನ್ಯಾಯ ಕೇಳುವುದಿತ್ತು. ಅಂತಹ ಯತ್ನಗಳಲ್ಲಿ ದಸಂಸವು ಅನೇಕ ಬಾರಿ ಚಳುವಳಿಗಳಲ್ಲಿ ಬೆಂಬಲಿಸಿದ್ದಿದೆ. ಇದು ಈಗಲೂ ದೇವನೂರು ಮಹದೇವರ ಮೂಲಕ ಅನೇಕ ವಿಪರ್ಯಾಸ ಮತ್ತು ಗೊಂದಲಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಮೂಲಕ ಆಗುತ್ತಿದೆ. ಇದು ಗಾಂಧಿವಾದದ ಪ್ರಭಾವವಿದ್ದಂತೆಯೇ ಅಂಬೇಡ್ಕರ್ ವಾದವನ್ನು ವಿಸ್ತರಿಸಿಕೊಳ್ಳುವ ಪರಿ.

ರೈತ ಸಂಘದ ರಾಜಕೀಯ ಪರಿಣಾಮಗಳು ಕೂಡ ಪಕ್ಷ ರಾಜಕಾರಣದ ಹುನ್ನಾರಗಳಲ್ಲಿ ವಿಫಲವಾಯಿತು. ಜಾತಿಗಳು ಒಟ್ಟಾಗಿ ರಾಜಕಾರಣ ಮಾಡಿದರೂ ಪ್ರತಿಷ್ಠಿತ ರಾಜಕೀಯ ನಿರ್ಧರಿಸುವಲ್ಲಿ ದಲಿತ ಸಂಘಕ್ಕೂ ರೈತ ಸಂಘಕ್ಕೂ ಸಾಧ್ಯವಾಗದೇ ಹೋದದ್ದು ಆಳವಾದ ಚಿಂತನೆಗೆ ದಾರಿ ಮಾಡುತ್ತದೆ. ದೇವರಾಜ ಅರಸು ಅರು ಬಲಿಷ್ಠ ಜಾತಿಗಳನ್ನು ನಿಯಂತ್ರಿಸಲು ಮಾಡಿದ ರಾಜಕಾರಣ ಒಂದು ರೀತಿಯಲ್ಲಿ ಯಶಸ್ವಿಯಾಗುವುದಾದರೆ ಸ್ವತಃ ದಲಿತ ಹಾಗು ಹಿಂದುಳಿದ ವರ್ಗಗಳು ಒಗ್ಗೂಡಿ ರಾಜಕೀಯ ಮಾಡಿ ಗೆಲ್ಲದಲ್ಲಿ ದಲಿತ ಹಾಗೂ ರೈತ ಸಂಘಗಳ ನಿರ್ಣಾಯಕ ಪಾತ್ರವು ವರ್ತಮಾನದಲ್ಲಿ ಕುಂಟಿತವಾಗಿದ್ದರೂ ಅವು ರೂಪಿಸಿರುವ ಪರೋಕ್ಷ ಪರಿಣಾಮಗಳು ಬೇರೆ ರೂಪಗಳಲ್ಲಿ ಈಗಲೂ ಜೀವಂತವಾಗಿವೆ. ಕಾಲದ ಪ್ರವಾಹ ಮತ್ತು ಪರೀಕ್ಷೆಯಲ್ಲಿ ಅವು ಕನ್ನಡನಾಡಿ ಹೊಣೆಗಾರಿಕೆಯನ್ನು ಜಾಗತೀಕರಣದ ಕಾಲಘಟ್ಟದಲ್ಲಿಗಂಭೀರವಾಗಿ ಹೊರಬೇಕಾಗಿದೆ.