ಏಕೀಕರಣೋತ್ತರ ಕರ್ನಾಟಕದಲ್ಲಿ ಕಾರ್ಮಿಕ ಹಾಗೂ ವಿದ್ಯಾರ್ಥಿ ಚಳುವಳಿಗಳು ತಮ್ಮ ಚಹರೆಗಳನ್ನು ಭಿನ್ನವಾಗಿ ದಾಖಲಿಸಿವೆ. ಕಾರ್ಮಿಕರು ಎಂದ ಕೂಡಲೇ ಅದೊಂದು ನಿರ್ಲಕಷಿತ ಸಮೂಹ ಎಂಬುದು ತಿಳಿಯುತ್ತದೆ. ದುಡಿಯುವ ಬಡಜನ ವರ್ಗದ ಕಾರ್ಮಿಕ ಚೌಕಟ್ಟಿನಲ್ಲಿ ಸಮಾಜದ ಅವಶ್ಯಕತೆಗಳನ್ನು ಹೀಡೆರಿಸುತ್ತಿರುತ್ತದೆ. ಒಂದು ನಾಡಿನ ಸೇವೆಯನ್ನು ಕಾರ್ಮಿಕರು ಹೊತ್ತಿರುತ್ತಾರೆ. ದಾಸ್ಯವು ಪರೋಕ್ಷವಾಗಿ ಕಾರ್ಮಿಕ ಸಮಾಜವನ್ನು ಸುತ್ತವರಿದಿರುತ್ತದೆ. ಬಡವರ ಹಕ್ಕುಗಳು ಮೂಲೆಗುಂಪಾಗಿರುತ್ತವೆ. ದಿಕ್ಕೆಟ್ಟು ಕಾರ್ಮಿಕರ ರಕ್ಷೆಣೆಗೆ ಸಮಾಜ ಮತ್ತು ಸರ್ಕಾರ ಎರಡೂ ಉಪೇಕ್ಷೆ ತಳೆದಿರುತ್ತವೆ. ಈ ವಾತಾವರಣದಲ್ಲಿ ಕಾರ್ಮಿಕ ಚಳುವಳಿಯು ತನ್ನ ಕನಿಷ್ಠ ಜೀವನಾಧಾರ ಸವಲತ್ತುಗಳನ್ನು ಪಡೆಯುವುದೇ ದುಸ್ತರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಏಕೀಕರಣೋತ್ತರ ಕರ್ನಾಟಕದಲ್ಲಿ ಅಸಂಘಟಿತ ಕಾರ್ಮಿಕರು ಎಚ್ಚೆತ್ತುಕೊಂಡದ್ದನ್ನು ಗಮನಿಸಬಹುದು. ಒಂದು ಶತಮಾನಗಳ ದೀರ್ಘ ಇತಿಹಾಸ ಕಾರ್ಮಿಕ ಚಳುವಳಿಗೆ ಇರುವುದಾದರೂ ಕಾರ್ಮಿಕ ಶಕ್ತಿಯು ಪರಿನಾಮಕಾರಿಯಾಗಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಬಂಡವಾಳಶಾಹಿ ವ್ಯವಸ್ಥೆಯು ಜಾತಿ ಮತ್ತು ವರ್ಗಗಳೆರಡರ ಶಕ್ತಿಯಿಂದ ರಾಜಕಾರಣವನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವುದರಿಂದ ಕಾರ್ಮಿಕರ ಶಕ್ತಿಯನ್ನು ಛಿದ್ರಿಸುವುದು ಹಾಗೂ ಖರೀದಿಸುವುದು ಸುಲಭವಾಗಿದೆ. ಬಂಡವಾಳಶಾಹಿ ಶಕ್ತಿಗಳು ಖಾಸಗೀವಲಯವಾದ್ದರಿಂದ ಅವನ್ನು ಸುಲಭವಾಗಿ ನಿಯಂತ್ರಿಸುವುದೂ ಕಷ್ಠ. ಸರ್ಕಾರ ಮತ್ತು ಖಾಸಗೀ ಶಕ್ತಿಗಳು ಸದಾ ಗುಪ್ತ ಒಪ್ಪಂದಗಳಲ್ಲಿ ದುಡಿವ ವರ್ಗವನ್ನು ಆಳುತ್ತಿರುತ್ತವೆ.

ಕರ್ನಾಟಕದಲ್ಲಿ ಏಕೀಕರಣದ ನಂತರ ಬಹಳ ದೊಡ್ಡ ಕಾರ್ಮಿಕ ಚಳುವಳಿಗಳು ಆಗಬೇಕಾದ ಅವಕಾಶವಿತ್ತು. ದಲಿತ, ರೈತ, ಹಿಂದುಳಿದ ವರ್ಗಗಳು ಚಳುವಳಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಲ್ಲಿ ಕರ್ನಾಟಕದ ಕಾರ್ಮಿಕ ಚಳುವಳಿಗಳು ಬದುಕಿಗಾಗಿ ಕೂಲಿ ಮತ್ತು ನ್ಯಾಯಯುತ ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದವು. ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಮಾತ್ರ ಕಾರ್ಮಿಕ ಚಳುವಳಿಗಳು ಸಫಲವಾದವೇ ಹೊರತು ಸಮಗ್ರ ನ್ಯಾಯಕ್ಕೆ ಬೇಕಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಆಗಲಿಲ್ಲ. ಕಾರ್ಮಿಕ ಚಳುವಳಿಗಳು ಅಖಂಡವಾಗಿರದೆ ಬಿಡಿಬಿಡಿಯಾಗಿದ್ದುದರಿಂದ ಇವನ್ನು ಎದುರಿಸಲು ಸರ್ಕಾರ ಮತ್ತು ಖಾಸಗೀ ಮಾಲೀಕರಿಗೆ ಕಷ್ಟವಾಗಲಿಲ್ಲ. ಅಸಂಘಟಿತ ಕೂಲಿ ಕಾರ್ಮಿಕರಿಗೆ ಕ್ರಾತಿಯ ಕನಸುಗಳೂ ಇರಲಿಲ್ಲ. ಆ ದಿನದ ಬದುಕಿನ ಅನ್ನ ಸಿಕ್ಕರೆ ಸಾಕು ಎಂಬ ಧೋರಣೆಯೂ ಇದ್ದಿದ್ದರಿಂದ ಬೃಹತ್ ಚಳುವಳಿ ರೂಪಿತವಾಗಲಿಲ್ಲ. ಕಾರ್ಮಿಕ ಚಳುವಳಿಯ ನಾಯಕರಿಗೆ ಸಾಮ್ರಾಜ್ಯಶಾಹಿ ಧೋರಣೆಯನ್ನು ಮಾತಲ್ಲಿ ಖಂಡಿಸುವುದು ಸಾಧ್ಯವಾಯಿತೇ ಹೊರತು ನಗರಗಳ ಅತಿ ನಿಕೃಷ್ಟ ಕಾರ್ಮಿಕರ ಬದುಕನ್ನು ಹಸನು ಮಾಡಲು ಆಗಲಿಲ್ಲ. ಕೊಳೆಗೇರಿ ನಿವಾಸಿಗಳು ಮತಬ್ಯಾಂಕಿಗೆ ಬಳಸಲ್ಪಟರೇ ವಿನಃ ಅವರಿಗೆ ರಾಜಕೀಯ ನ್ಯಾಯವೂ ಸಿಗಲಿಲ್ಲ. ಕಂತಿನ ಲೆಕ್ಕದಲ್ಲಿ ಚಳುವಳೀಯನ್ನು ಮಾಡುವಂತಿದ್ದ ಕೂಲಿಕಾರ್ಮಿಕರ ಬದುಕು ಕ್ರೂರ ಬಡತನದಲ್ಲಿತ್ತು. ಖಾಸಗೀಕರಣವು ಬಲಗೊಳ್ಳಲು ಬೇಕಾದ ಬೆಂಬಲ ಸರ್ಕಾರದಿಂದಲೇ ಆಗುತ್ತಾ ಬಂದಿದ್ದರಿಂದ ಕಾರ್ಮಿಕ ಶಕ್ತಿಯು ಕುಗ್ಗಿತು. ಅಲ್ಲದೆ ರಾಜಕೀಯ ಪಕ್ಷಗಳು ಕಾರ್ಮಿಕರನ್ನು ಪಕ್ಷ ರಾಜಕಾಣಕ್ಕೆ ಬಳಸಿಕೊಂಡು ಆ ನಾಯಕರನ್ನು ಒಳ ಒಪ್ಪಂದಕ್ಕೆ ಒಳಪಡಿಸಿಕೊಂಡವು. ಇಷ್ಟಿದ್ದರೂ ಕಾರ್ಮಿಕ ಚಳುವಳಿಯ ಮೂಲಕ ಉಂಟಾದ ಪರಿಣಾಮಗಳನ್ನು ಕೆಳಗಿನಂತೆ ಗುರುತಿಸಿಕೊಳ್ಳಬಹುದು.

೧. ಬಾಲಕಾರ್ಮಿಕ ಹಾಗೂ ಜೀತದಾಳು ಪದ್ಧತಿಯ ರದ್ಧತಿಯಾಗಿ ನಗರ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಮಕ್ಕಳಿಗೆ ವಿಮುಕ್ತಿ ದೊರಕಿ ಅಂತವರ ಮಕ್ಕಳು ಶಾಲೆಗೆ ಪ್ರವೇಶ ಪಡೆಯುವಂತಾಯಿತು.

೨. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಮನಹರಿಸಿ ಕಲ್ಯಾಣ ಕೇಂದ್ರಗಳನ್ನು ತೆರೆಯುವಂತಾಯಿತು.

೩. ಕಾರ್ಮಿಕರ ಸವಲತ್ತುಗಳನ್ನು ಜಾರಿಗೊಳಿಸುವ ಮೂಲಕ ಅವರಿಗೆ ಕನಿಷ್ಠ ಹಾಗೂ ಪ್ರಾಥಮಿಕ ಹಕ್ಕುಗಳನ್ನು ಒದಗಿಸಲಾಯಿತು. ಅವರ ಆರೋಗ್ಯ, ಶಿಕ್ಷಣ, ಉದ್ಯೋಗಗಳ ಕಡೆ ವಿಶೇಷ ಗಮನ ನೀಡಲಾಯಿತು.

೪. ಬಂಡವಾಳಶಾಹಿ ಶಕ್ತಿಗಳ ದಬ್ಬಾಳಿಕೆಗೆ ನಿಯಂತ್ರಣ ಹೂಡಲಾಯಿತು.

೫. ಅಸಂಘಟಿತ ಕಾರ್ಮಿಕ ವಲಯಕ್ಕೆ ಸಂಘಟಿತ ಶಕ್ತಿಯು ಬಂದು ರಾಜಕೀಯ ಸಾಮರ್ಥ್ಯವನ್ನು ಪಡೆದುಕೊಳ್ಳುವಂತಾಯಿತು.

೬. ಮಹಿಳಾ ಕಾರ್ಮಿಕರ ಕಲ್ಯಾಣ ಯೋಜನೆಗಳು ಜಾರಿಗೊಂಡವಲ್ಲದೆ ಸ್ತ್ರೀಯರ ಹಕ್ಕು ಬಾಧ್ಯತೆಗಳು ಎಚ್ಚರಗೊಂಡವು.

೭. ಮಾಲೀಕ ವರ್ಗದ ಸಾಮ್ರಾಜ್ಯಶಾಹಿ ಧೋರಣೆಯು ರೂಪಾಂತರಗೊಂಡು ಕೆಲವು ಅನಿವಾರ್ಯ ಒಪ್ಪಂದಗಳನ್ನು ಮಾಡಿಕೊಂಡು ಕೂಲಿ ಹಾಗೂ ಇತರೆ ಸೌಲಭ್ಯಗಳಲ್ಲಿ ನ್ಯಾಯದ ಧೋರಣೆಯನ್ನು ಅಳವಡಿಸಿಕೊಳ್ಳಬೇಕಾಯಿತು.

೮. ವಿಶೇಷವಾಗಿ ಕಾರ್ಮಿಕ ಕಾನೂನುಗಳು ಅಸ್ತಿತ್ವಕ್ಕೆ ಬಂದವು.

೯. ಬಲಾಢ್ಯ ಭೂಮಾಲೀಕರ ಮಾಲೀಕತ್ವಕ್ಕೆ ಪೆಟ್ಟು ಬಿದ್ದು ಪ್ಲಾಂಟರ್ ಹಾಗು ಉದ್ಯಮಿಗಳ ಶೋಷಣೆಯು ತಗ್ಗಿ ರೂಪಾಂಗರಗೊಂಡಿತು.

ಈ ಮೇಲಿನ ಅಂಶಗಳು ಸೌಲಭ್ಯದ ನೆಲೆಯ ಪರಿಣಾಮಗಳು. ಕರ್ನಾಟಕದಲ್ಲಿ ಅಖಂಡವಾದ ಕಾರ್ಮಿಕ ಚಳುವಳಿಯೇ ಇನ್ನೂ ತಕ್ಕುದಾಗಿ ಆಗಿಯೇ ಇಲ್ಲ. ಕಾರ್ಮಿಕ ಚಳುವಳಿಯು ಬಿಡಿ ಬಿಡಿಯಾದ ಘಟನೆಗಳಂತೆ ತೋರುತ್ತದೆ. ನಾಡಿನ ಅಖಂಡತೆಯ ಪ್ರಜ್ಞೆ ಇಂತಲ್ಲಿ ಬರಲಾಗದು. ಸೌಲಭ್ಯಗಳನ್ನು ಆಧರಿಸಿದ ಎಲ್ಲ ಚಳುವಳಿಗಳು ಬಹುದೂರ ಕ್ರಮಿಸಲಾರವು. ಸೌಲಭ್ಯ ಸಿಕ್ಕ ಕೂಡಲೇ ಅಥವಾ ಸೌಲಭ್ಯ ಸಾಧ್ಯವೇ ಇಲ್ಲ ಎಂದರೆ ಚಳುವಳಿಯು ದಿಕ್ಕು ತಪ್ಪುತ್ತದೆ. ಇಂತಲ್ಲಿ ಆ ಚಳುವಳಿಗಳ ನಾಯಕರ ದಾರಿ ತಪ್ಪಿಸಿದರೆ ಪ್ರತಿಭಟನೆಯು ಸೋಲುತ್ತದೆ. ಆಗ ನಾಡುನುಡಿಯ ನ್ಯಾಯದ ಗತಿಶೀಲತೆಯು ಹಿಂದೆ ಸರಿದು ವಂಚನೆಯ ಮೌಲ್ಯಗಳು ಬೇರುಬಿಡುತ್ತವೆ. ಕಾರ್ಮಿಕ ಚಳುವಳಿಗಳಲ್ಲೂ ಇದೇ ಆಗಿತ್ತು. ಎಪ್ಪತ್ತರ ದಶಕದ ನಂತರದ ಕಾರ್ಮಿಕ ಚಳುವಳಿಗಳೆಲ್ಲ ವ್ಯಕ್ತಿ ನೆಲೆಯಲ್ಲಿ ವಿಫಲವಾಗಿವೆ. ಹಾಗೆಯೇ ಸರ್ಕಾರ ಮತ್ತು ಉದ್ಯಮಿಗಳು ಕಾರ್ಮಿಕರನ್ನೆ ಖರೀದಿಸಿ ಅವರ ಇಚ್ಛಾಶಕ್ತಿಯನ್ನೆ ಮರೆ ಮಾಡಿವೆ. ಜೊತೆಗೆ ಕಾರ್ಮಿಕರ ನಾಯಕರ ವೈಪಲ್ಯಗಳೂ ಕಾರಣವಾಗಿವೆ. ನಾಯಕರು ಕಾರ್ಮಿಕರನ್ನು ಸ್ವಹಿತಾಶಕ್ತಿಗೆ ಬಳಸಿ ಉದ್ಯಮಿಗಳ ಜೊತೆ ಕೈಜೋಡಿಸಿದ್ದರಿಂದ ಕಾರ್ಮಿಕ ಚಳುವಳಿಗಳು ಈಗಂತು ನಿಂತೇ ಹೋಗಿವೆ. ಖಾಸಗೀಕರಣ ತೀವ್ರವಾಗಿ ಜಾಗತೀಕರಣ ಆವರಿಸಿರುವಲ್ಲಿ ಕಾರ್ಮಿಕ ಶಕ್ತಿಯು ದಿಕ್ಕೆಟ್ಟಿದೆ. ಯಾವ ಕಾಲ ಮಾನದಲ್ಲಿ ಕಾರ್ಮಿಕ ಚಳುವಳಿಯು ತೀವ್ರತೆಯನ್ನು ಮುಟ್ಟಬೇಕಿತ್ತೂ ಅದೇ ಈ ಅವಧಿಯಲ್ಲಿ ಕಾರ್ಮಿಕರು ಸ್ತಬ್ಧರಾಗಿದ್ದಾರೆ. ಅವರ ನಾಯಕರೂ ಮರೆಯಲ್ಲಿದ್ದಾರೆ ಏಕೀಕರಣೋತ್ತರ ಕರ್ನಾಟಕದಲ್ಲಿ ನಾಡಿನ ಭವಿಷ್ಯ ನಿರ್ಮಿಸುವ ಕಾರ್ಮಿಕರು ಜಗತ್ತಿನ ಮಾಯಾ ಜಾಲವಾದ ಮಾರುಕಟ್ಟೆಯಲ್ಲಿ ಕರಗಿ ಹೋಗುತ್ತಿದ್ದಾರೆ. ನಾಡು ನುಡಿಯ ಭವಿಷ್ಯದಲ್ಲಿ ಅವರ ಅವಶ್ಯಕತೆಯು ಹಿಂದೆಂದಿಗಿಂತಲೂ ಜರೂರಾಗಿದೆ.