ಎಲ್ಲ ಎಡಪಂಥೀಯ ಹಾಗು ಮಾನವೀಯ ಚಿಂತನೆಗಳು ಜಾತಿ ವಿನಾಶಕ್ಕೆ ಒತ್ತು ಕೊಟ್ಟವೇ ಆಗಿವೆ. ನಾಡು ನುಡಿಗೆ ಜಾತಿಯ ಶಾಪ ತೊಡಕು ಎಂದು ಪ್ರತಿಭಟಿಸಿವೆ.  ಏಕೀಕರಣೋತ್ತರ ಕರ್ನಾಟಕದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧದ ಆಲೋಚನೆಗಳು ಗಾಢವಾಗಿ ವಿಸ್ತರಿಸಿವೆ. ಎಪ್ಪತ್ತರ ದಶಕದಲ್ಲಿಯೆ ಜಾತಿ ವಿನಾಶದ ಪ್ರತಿರೋಧಗಳು ಮೊಳಗಿದ್ದುದು. ಹಿಂದುಳಿದ ಜಾತಿಗಳು ಕೂಡ ಈ ಬಗೆಯ ಆಲೋಚನೆಗೆ ಒಳಪಟ್ಟವು. ದಲಿತ ಸಂಘರ್ಷ ಸಮಿತಿಯು ಜಾತಿ ವಿನಾಶವನ್ನು ಪ್ರಥಮ ಆದ್ಯತೆಯನ್ನಾಗಿ ಮಾಡಕೊಂಡು ಚಳುವಳಿಗೆ ಇಳಿಯಿತು. ಅಸ್ಪಶ್ಯತೆಯ ವಿರುದ್ಧದ ದಲಿತರ ಹೋರಾಟವು ಹೊಸ ಸಂಚಲವನ್ನು ಸೃಷ್ಟಿಸಿತು. ಇದರಿಂದಾಗಿ ಪ್ರಗತಿಪರ ಚಿಂತಕರು ಅಂಬೇಡ್ಕರ್ ವಾದದ ಮೂಲಕ ಸಾಮಾಜಿಕ ರಚನೆಯ ಜಾತಿ ಕೋಟೆಗಳನ್ನು ಅರ್ಥೈಸಲು ಸಾಧ್ಯವಾಯಿತು. ವಿಚಾರವಾದಿ ಒಕ್ಕೂಟಗಳು ಕೂಡ ಹುಟ್ಟಿಕೊಂಡು ಜಾತಿ ಆಧಾರಿತ ಮೂಢನಂಬಿಕೆಗಳನ್ನು ಪರಿಶೀಲಿಸುವಂತೆ ಮಾಡಿತು. ಏಕೀಕರಣೋತ್ತರ ಸಮಾಜದ ವಿವಿಧ ಹೋರಾಟಗಳೆಲ್ಲವೂ ಜಾತಿಯ ಹೊಡೆತವನ್ನು ಮನಗಂಡು ಸಮಾಜ ಸುಧಾರಣೆಯು ಜಾತಿಯನ್ನು ಕಿತ್ತು ಹಾಕುವುದರ ಮೂಲಕವೇ ಆಗಬೇಕೆಂದು ಸಮರ್ಥಿಸುವಂತಾಯಿತು. ಎಪ್ಪತ್ತರ ದಶಕದಲ್ಲಾದ ಎಡಪಂಥೀಯ ಹಾಗು ದಲಿತ ಹೋರಾಟಗಳಿಂದ ಜಾತಿ ಮತ್ತು ಮೀಸಲಾತಿ ಎರಡೂ ಸಂಗತಿಗಳು ಪ್ರಧಾನ ಧಾರೆಗೆ ಬಂದವು.

ಜಾತಿಯ ಶೋಷಣೆಯನ್ನು ನಿರಾಕರಿಸುತ್ತಲೇ ಆ ಬಗೆಯ ಜಾತಿಯ ಹಿಂಸೆಗೆ ಒಳಗಾಗಿ ತುಳಿತಕ್ಕೀಡಾದವರನ್ನು ರಕ್ಷಿಸಲು ಮೀಸಲಾತಿಯು ಒಂದು ನಾಡಿನ ಜವಾಬ್ದಾರಿ ಎಂಬ ಧ್ವನಿಯು ವಿಶೇಷವಾಗಿ ಮೊಳಗಿತು. ಮೀಸಲಾತಿ ಚಳುವಳಿಗಳು ನ್ಯಾಯದ ಆಕ್ರಂಧನವೇ ಆಗಿದ್ದವು. ಚರಿತ್ರೆಯಲ್ಲಾದ ಅನ್ಯಾಯ ಸರಿಪಡಿಸಿಲು ಸಂವಿಧಾನ ಬದ್ಧವಾದ ಮೀಸಲಾತಿ ಸೌಲಭ್ಯವನ್ನು ಸರ್ಕಾರಗಳು ಪಾಲಿಸಲು ಒತ್ತಡ ಉಂಟಾಯಿತು. ಜಾತಿಯನ್ನು ಕಳೆದುಕೊಳ್ಳಲು ಮೀಸಲಾತಿಯು ಒಂದು ಸಾಮಾಜಿಕ ಪ್ರಕ್ರಿಯೆ ಎಂದು ಭಾವಿಸಲಾಯಿತು. ಮೇಲು ಜಾತಿಗಳ ಹಿಡಿತದಿಂದ ಬಿಡಿಸಿಕೊಳ್ಳಲು ಮೀಸಲಾತಿ ಸೌಲಭ್ಯವನ್ನು ವಿಶೇಷವಾಗಿ ದಲಿತರು ಒತ್ತಾಯಿಸಿದರು. ದೇವರಾಜ ಅರಸು ಅವರು ಮೀಸಲಾತಿ ನ್ಯಾಯವನ್ನು ಹಿಂದುಳಿದ ವರ್ಗಗಳಿಗೂ ಅಲ್ಪಸಂಖ್ಯಾತರಿಗೂ ವಿಸ್ತರಿಸಿದರು. ಮೊದಲಬಾರಿಗೆ ನಾಡಿನ ಅನೇಕ ಸಮುದಾಯಗಳನ್ನು ಮೀಸಲಾತಿಯ ಚೌಕಟ್ಟಿಗೆ ಒಳಪಡಿಸಲಾಯಿತು. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚನ್ನಪ್ಪರೆಡ್ಡಿ, ಆಯೋಗಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಅಗತ್ಯತೆ ಮತ್ತು ಅರಿವನ್ನು ಮೂಡಿಸಿದವು.

ಕರ್ನಾಟಕದ ದಲಿತ ಹಾಗೂ ಹಿಂದುಳಿದ ವರ್ಗಗಳು ಮೀಸಲಾತಿಯ ತತ್ವವನ್ನೆ ಸೂಕ್ತವಾಗಿ ಗ್ರಹಿಸಿದಂತಿಲ್ಲ. ಮೀಸಲಾತಿಯು ಒಂದುಪುಟ್ಟ ಅವಕಾಶವಾಗಿದ್ದರೂ ಸರ್ಕಾರಗಳು ಆದಷ್ಟನ್ನು ಕೂಡ ಸರಿಯಾಗಿ ಜಾರಿಗೊಳಿಸಿದೆ ಇರುವುದರಿಂದ ಜಾತಿ ವಿನಾಶದ ಆಶಯವು ಹಾಗೆ ಉಳಿದಿದೆ. ಸಮಾಜವಾದಿ ಚಿಂತಕರು, ಹೋರಾಟಗಾರರು ಲೇಖಕರು ಜಾತಿಯ ಕೇಡನ್ನು ವಿರೋಧಿಸಿದ್ದು ಮಹತ್ವದ್ದಾಗಿದೆ. ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಯು.ಆರ್. ಅನಂತಮೂರ್ತಿ, ಕೆ. ರಾಮದಾಸ್ ರಂತಹ ಚಿಂತಕ ಲೇಖಕರ ನಿಲುವು ವಿಭಿನ್ನವಾಗಿದ್ದರೂ ಜಾತಿ ವಿನಾಶ ಆಂದೋಲನದಲ್ಲಿ ಇವರ ಪಾತ್ರ ಅಮೂಲ್ಯವಾದದ್ದು. ದಲಿತ ಸಂಘಟನೆಗಳಲ್ಲಿ ಈ ಚಿಂತಕರು ಒಂದಾಗದಿದ್ದರೂ ಜಾತಿಯ ಕೇಡನ್ನು ವಿಮರ್ಶಿಸುವಲ್ಲಿ ಪ್ರಭಾವಿಯಾಗಿದ್ದರು. ಅದರಲ್ಲೂ ಕೆ.ರಾಮದಾಸ್ ಅವರು ಜಾತಿ ವ್ಯವಸ್ಥೆಯ ಉಗ್ರ ವಿರೋಧಿಯಾಗಿದ್ದರು. ವಿಚಾರವಾದವನ್ನು ಪ್ರತಿಪಾದಿಸುತ್ತಿದ್ದ ರಾಮದಾಸ್ ಕುವೆಂಪು ಅವರ ವೈಚಾರಿಕ ಕ್ರಾಂತಿಯ ಆಶಯಗಳನ್ನು ಮೈಗೂಡಿಸಿ ಕೊಂಡವರಾಗಿದ್ದರು. ಜಾತಿ ವಿನಾಶ ಹಾಗು ಮೀಸಲಾತಿ ಚಳುವಳಿಗಳಿಗೆ ಮುಖ್ಯ ಶಕ್ತಿಯಾಗಿದ್ದ ವಿದ್ಯಾರ್ಥಿ ಸಮೂಹವನ್ನು ಸಜ್ಜುಗೊಳಿಸುವಲ್ಲಿ ರಾಮದಾಸ್ ಅವರಿಗೆ ಸರಿಸಮನಾದ ಮತ್ತೊಬ್ಬ ವೈಚಾರಿಕ ಗುರು ಸಿಗಲಾರರು. ಜಾತಿವಿನಾಶ ಸಮ್ಮೇಳನ ಹಾಗು ಮೀಸಲಾತಿ ವಿಚಾರ ಸಂಕಿರಣಗಳನ್ನು ಆಯೋಜಿಸಿದ ವಿಚಾರವಾದಿಗಳು, ಲೇಖಕರು ಮಾಡಿದ ಪ್ರಭಾವವು ಒಂದು ಚಳುವಳಿಯು ಮಾಡಬಹುದಾಗಿದ್ದ ಪರಿಣಾಮದಷ್ಟೇ ಆಗಿತ್ತು. ಇದೇ ಕಾಲದಲ್ಲಿ ಜಾತಿ ವಿನಾಶ ಸಮ್ಮೇಳನದಲ್ಲಿ ಬಸವಲಿಂಗಪ್ಪನವರು ‘ಬೂಸಾ ಸಾಹಿತ್ಯ’ದ ಕ್ರಾಂತಿಕಾರಕ ಭಾಷಣ ಮಾಡಿ ಸಾಹಿತ್ಯ, ಜಾತಿ, ಕನ್ನಡ ಭಾಷೆ, ಕನ್ನಡ ಜನವರ್ಗಗಳು ಹೇಗೆ ಬೂಸಾ ಸೃಷ್ಟಿಗೆ ಕಾರಣವಾಗಿವೆ ಎಂದು ವಿಚಾರ ಕಹಳೆ ಮೊಳಗಿಸಿದ್ದರು. ಜಾತಿ ವಿನಾಶದ ಸುತ್ತ ರೂಪುಗೊಂಡ ವಿಚಾರ ಮಂಥನಗಳಿಂದ ಉಂಟಾದ ಪರಿಣಾಮಗಳನ್ನು ಹೀಗೆ ಪಟ್ಟಿಮಾಡಬಹುದು.

೧. ಜಾತಿಯ ಕೀಳರಿಮೆ ತಗ್ಗಿತು. ಸ್ವಾಭಿಮಾನ ಮೂಡಿತು. ಜಾತಿಯ ವಿನಾಶಕ್ಕೆ ಬೇಕಾದ ಜಾಗೃತಿ ಬೆಳೆಯಿತು.

೨. ಮೀಸಲಾತಿ ನ್ಯಾಯದ ಪ್ರಜ್ಞೆಯು ವಿಸ್ತರಿಸಿತು.

೩. ಪ್ರಗತಿ ಪರ, ವಿಚಾರವಾದಿ ಹಾಗು ವೈಜ್ಞಾನಿಕ ಭಾವನೆಯ ಮನೋಧರ್ಮದಿಂದ ಸಾಮಾಜಿಕ ಅಸಮಾನತೆಯನ್ನು ಬಿಡಿಸಲು ಯುವ ಜನಾಂಗದಲ್ಲಿ ವಿವೇಕ ಮೂಡಿತು.

೪. ಜಾತಿ ಮತ ಧರ್ಮ ವರ್ಗಗಳ ಅಂತರ್ ಸಂಬಂಧಗಳನ್ನು ತಿಳಿದು ಸಮಾನತೆಯ ಸಮಾಜಕ್ಕೆ ಬೇಕಾದ ನ್ಯಾಯ ಶೀಲತೆಯನ್ನು ಪ್ರತಿಪಾದಿಸಲು ಸಾಧ್ಯವಾಯಿತು.

೫. ಜಾತಿ ವ್ಯವಸ್ಥೆಯನ್ನು ಆಳವಾಗಿ ವಿಶ್ಲೇಷಿಸುವ ಹಾಗೆಯೇ ಸಮಾಜದಲ್ಲಿ ಅದರ ವಿರೂಪವನ್ನು ಸಾರುವ ಜಾಗೃತಿ ಮೇಳಗಳು, ಕಮ್ಮಟಗಳು, ವಿಚಾರ ಸಂಕಿರಣಗಳು ಶಿಬಿರಗಳು ರೂಪುಗೊಂಡವು.

೬. ವಿಶೇಷವಾಗಿ ದಲಿತ ಬಂಡಾಯ ಸಾಹಿತ್ಯ ಪ್ರಕಾರಗಳು ಜಾತಿಯ ವಿಕೃತ ಲೋಕವನ್ನು ದಾಖಲಿಸುವಂತಾಯಿತು.

೭. ಸಮಾಜ ವಿಜ್ಞಾನಗಳ ಅಧ್ಯಯನಗಳ ಮೇಲೂ ಜಾತಿವಿನಾಶ ಹಾಗು ಮೀಸಲಾತಿ ಹಕ್ಕಿನ ವಿಚಾರಗಳು ಪ್ರಭಾವ ಮಾಡಿದವು. ಸಾಂಪ್ರದಾಯಿಕ ಸಮಾಜಶಾಸ್ತ್ರದ ರೀತಿಗಳನ್ನು ಬದಲಿಸಿಕೊಂಡು ಜನ ಮುಖಿಯಾದ ಅಧ್ಯಯನಗಳು ಆರಂಭವಾಗಲು ಸಾಧ್ಯವಾಯಿತು.

೮. ಮೀಸಲಾತಿಯ ಬಗೆಗಿನ ಪೂರ್ವಗ್ರಹಗಳು ಒಂದಿಷ್ಟಾದರು ಬದಲಾಗಲು ಹಾಗು ಎಲ್ಲ ಜಾತಿಗಳಿಗೂ ಜನಸಂಖ್ಯಾನು ಸಾರವಾಗಿ ಮೀಸಲಾತಿಯನ್ನು ಹಂಚಲ್ಪಟ್ಟಿದೆ ಎಂಬ ಅಂಶಗಳು ಪ್ರಚಾರಗೊಂಡವು. ಹಾಗೆಯೇ ಮೇಲಜಾತಿಗಳು ಕೂಡ ತಮ್ಮ ಪಾಲಿನ ಮೀಸಲಾತಿಯನ್ನು ಪಡೆದುಕೊಳ್ಳಲು ಮುಂದಾದವು.

ಹೀಗೆ ಹತ್ತು ಹಲವು ದಾರಿಗಳಲ್ಲಿ ಪುರಾತನ ಜಾತಿ ವ್ಯವಸ್ಥೆಯ ಬಗ್ಗೆ ಪ್ರತಿರೋಧ ಚಿಂತನೆಯನ್ನು ನಡೆಸಿದ್ದುದು ಏಕೀಕರಣೋತ್ತರ ಕರ್ನಾಟಕದಲ್ಲಿ ಒಂದು ಚಾರಿತ್ರಿಕವಾದ ಸಂಗತಿ. ಘಟನೆಯು ಕಾಣಿಸಿಕೊಂಡ ರೀತಿಯು ಕಿರಿದಾಗಿದ್ದರೂ ಅದರೆ ಪರಿಣಾಮ ಮಾತ್ರ ಗಂಭೀರವಾಗಿತ್ತು. ಹೀಗಾಗಿ ಜಾತಿವಿನಾಶ ಚಳುವಳಿಯು ಮೀಸಲಾತಿಯ ನ್ಯಾಯವನ್ನೂ ಒಳಗೊಂಡಂತೆ ಕರ್ನಾಟಕದ ನೊಂದ ಸಮುದಾಯಗಳಿಗೆ ದಿಕ್ಸೂಚಿಯಂತೆ ಕಾರ್ಯ ನಿರ್ವಹಿಸಿದ್ದುದನ್ನು ಚಾರಿತ್ರಿಕ ಸಂಗತಿಯಾಗಿಯೆ ಪರಿಗಣಿಸಬೇಕಾಗುತ್ತದೆ. ಜಾತಿಯು ಪ್ರತಿಹಂತದಲ್ಲಿ ಎಲ್ಲ ಪ್ರತಿಭಟನೆಗಳಿಗೂ ತಡೆಯಾಗುವ ವಿಚಿತ್ರವಿದೆ. ಜಾತಿಯನ್ನು ಜಾತಿಯ ಮುಳ್ಳಿನಿಂದಲೇ ಕೀಳಬೇಕು ಎಂಬ ತತ್ವು ಕೆಲವು ಬಾರಿ ಉಪಕಾರಿಯಾದರೂ ಹಲವು ಸಾರಿ ಅಪಾಯಕಾರಿಯಾಗಿಯೂ ಪರಿಣಮಿಸಬಲ್ಲದು.

ಏಕೀಕರಣೋತ್ತರ ಕರ್ನಾಟಕದಲ್ಲಿ ಜಾತಿಯನ್ನೊಂದು ‘ಜಾಗೃತಿ’ಯ ವಿಷಯವಾಗಿಸಿಕೊಂಡದ್ದು ಜಾತಿವಿನಾಶದ ಬೇರೊಂದು ಆಯಾಮದಿಂದಲೂ ಪರಿಶೀಲಸಬಹುದು. ತಳಜಾತಿಗಳು ಜಾತಿ ವಿನಾಶಕ್ಕೆ ತೊಡಗಿದಂತೆಲ್ಲ ಭೂಮಾಲೀಕ ಜಾತಿಗಳು ತಮ್ಮ ಜಾತಿಯ ಸ್ಥಾನಗಳನ್ನು ಎಲ್ಲ ಹಂತಗಳಲ್ಲು ಕಾಯ್ದುಕೊಂಡವು. ಮೀಸಲಾತಿ ಪದವಿರೋಧಿ ರಾಜಕೀಯ ತೀರ್ಮಾನಗಳು  ರಾಜ್ಯದಲ್ಲಿ ಘಟಿಸಿದ್ದುದು ಈ ಬಗೆಯಿಂದಲೇ. ಭೂಮಾಲೀಕ ಜಾತಿಗಳು ಸಂಘಟಿತವಾಗದೆಯೇ ಜಾತಿ ವ್ಯವಸ್ಥೆಯನ್ನು ಬಲಪಡಿಸಿಕೊಂಡವು. ಅನೂಚಾನವಾಗಿ ಬಂದ ಜಾತಿಪದ್ಧತಿಯನ್ನು ಅನುಸರಿಸುವುದೇ ದೊಡ್ಡ ಸಂಘಟಿತ ಆಚರಣೆ. ಸಂಘಟಿತ ಆಚರಣೆಗಳನ್ನು ನಿಯಂತ್ರಿಸಬಹುದೇ ವಿನಃ ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಬರುವುದಿಲ್ಲ. ಇಂತಲ್ಲಿ ಜಾತಿಯ ಮೇಲಿನ ಅಪನಂಬಿಕೆ, ಪೂರ್ವಾಗ್ರಹ, ದ್ವೇಷ, ಪೈಪೋಟಿ, ಮೇಲು ಕೀಳಿನ ವಿಚಾರಗಳು ಮತ್ತಷ್ಟು ಬಲಿಯುತ್ತವೆ. ಈ ಬಗೆಯ ಮಾನಸಿಕ ಸ್ಥಿತಿಯನ್ನು ಮೀರುವುದು ತುಂಬ ಕಷ್ಟ. ಹೀಗಾಗಿಯೆ ಜಾತಿ ವಿನಾಶ ಚಳುವಳಿಯು ದೊಡ್ಡದಾಗಿ ವಿಸ್ತರಿಸಿಕೊಳ್ಳಲಿಲ್ಲ. ಆದರೆ ಪರೋಕ್ಷವಾಗಿ ತಳಜಾತಿಗಳು ಜಾಗೃತರಾಗುತ್ತಿದ್ದಂತೆಯೇ ಮೇಲು ಜಾತಿಗಳು ಚಾಣಾಕ್ಷತೆಯನ್ನು ಮತ್ತಷ್ಟರೂಢಿಸಿಕೊಂಡು ಊಳಿಗಮಾನ್ಯ ರಾಜಕಾರಣವನ್ನು ಪ್ರಜಾಪ್ರಭುತ್ವದ ಮುಖವಾಡಗಳಲ್ಲೆ ಮುಂದುವರಿಸಲು ಸಾಧ್ಯವಾಯಿತು. ಎದುರಾಳಿಯು ಜಾಗೃತನಾದಂತೆಲ್ಲ ಪ್ರತಿ ವ್ಯಕ್ತಿಯು ಮತ್ತಷ್ಟು ತಂತ್ರಗಳನ್ನು ಕಂಡುಕೊಳ್ಳುವುದು ಜಾತಿ ಸಮಾಜದ ಮೂಲ ಗುಣ. ಎಪ್ಪತ್ತರ ದಶಕದಲ್ಲು ಇದೇ ಆಯಿತು. ಜಾತಿ ವಿನಾಶದ ಆಶಯವು ಜಾತಿಗಳು ಬಲಿಯುವುದಕ್ಕೂ ದಾರಿ ಮಾಡಿತು. ಹೀಗಾಗಿ ಏಕೀಕರಣೋತ್ತರ ಸಮಾಜದಲ್ಲಿ ಜಾತಿಯ ಮೂಲ ಮಾನವೇ ಎಲ್ಲೆಡೆ ಅಂತಿಮ ನಿರ್ಣಾಯಕ ಶಕ್ತಿ ಎಂಬ ಸ್ಥಿತಿ ಬಂದೊಂದಗಿದೆ. ಭವಿಷ್ಯದ ನಾಡು ನುಡಿಯಲ್ಲಿ ಇದು ತುಂಬ ಅಪಾಯಕಾರಿಯಾದುದು.