ಏಕೀಕರಣಾನಂತರ ಕಾಲದಲ್ಲೇ ಸಂಸ್ಕೃತಿ ಚಿಂತನೆಯ ಹಲವು ಸಾಧ್ಯತೆಗಳ ಚರ್ಚೆಗಳು ಆಗಿರುವುದು. ಈ ಮೊದಲಿನ ನವೋದಯ ಸಾಹಿತಿಗಳು ಮಾತ್ರ ಸಂಸ್ಕೃತಿ ಕುರಿತು ಉದಾರವಾದಿ ಚಿಂತನೆಗಳನ್ನು ಮಾಡಿದ್ದರು. ನವ್ಯದವರಲ್ಲಿ ಅನಂತ ಮೂರ್ತಿ ಅವರಿಗೆ ಮತ್ತು ಸುಬ್ಬಣ್ಣನವಿರಗೆ ಭಿನ್ನ ಆಲೋಚನೆಗಳಿದ್ದವು. ಕುರ್ತಕೋಟಿ ಅವರು ಸುದ್ಧ ಭಾರತೀಯ ಕಾವ್ಯ ಮೀಮಾಂಸೆಯ ತರ್ಕಗಳನ್ನು ಸಾಹಿತ್ಯ ವಿಮರ್ಶೆಯಲ್ಲಿ ಮಂಡಿಸುತ್ತಿದ್ದರೇ ವಿನಃ ಸಂಸ್ಕೃತಿ ಚಿಂತಕರಾಗಿರಲಿಲ್ಲ. ಬಂಡಾಯದವರ ನಡುವೆ ಬರಗೂರು ರಾಮ ಚಂದ್ರಪ್ಪ ಉಪಸಂಸ್ಕೃತಿ ಟಿಪ್ಪಣಿಗಳನ್ನು ಮಂಡಿಸಿದರು. ಡಿ.ವಿ.ಜಿ. ಅವರ ಸಂಸ್ಕೃತಿ ವ್ಯಾಖ್ಯೆಯ ಮುಂದೆ ಬರಗೂರರ ವಿಚಾರಗಳೇ ಹೊಸದಾಗಿ ಕಂಡವು. ಆದರೆ ಬರಗೂರರು ಸಾಂಸ್ಕೃತಿಕ ಮಾನವ ಶಾಸ್ತ್ರಜ್ಞರ ಮೂಲಕ ಹೇಳಿಕೆಗಳನ್ನು ಓದಿ ಟಿಪ್ಪಣಿ ಮಾಡಿಕೊಂಡು ವಿಶೇಷ ವಿದ್ವಾಂಶರ ಚಿಂತನೆಗಳನ್ನು ಕನ್ನಡ ಸಂಸ್ಕೃತಿಗಳಿಗೆ ಡಬ್ಬಿಂಗ್ ಮಾಡಿದರು. ಒಬ್ಬ ಅಧ್ಯಾಪಕರಾಗಿ ಅವರ ಈ ಯತ್ನ ಮೆಚ್ಚಬಹುದಾದದ್ದು. ಬರಗೂರರ ಸಂಸ್ಕೃತಿ ಚಿಂತನೆಗಳು ಎಡಪಂಥೀಯ ಚಿಂತನೆಗಳಿಂದ ಪ್ರೇರಿತವೂ ಆದವಾಗಿದ್ದರು ಗಮನಾರ್ಹ. ಶೋಷಣೆಗೆ ಒಳಗಾದವರ ಸಂಸ್ಕೃತಿ ವಿವರಗಳನ್ನು ದಾಖಲಿಸಿ ಆ ಮೂಲಕ ಅವರವರ ಸಂಸ್ಕೃತಿ ಚರಿತ್ರೆಯನ್ನು ದಾಖಲಿಸಬೇಕೆಂಬುದು ಪ್ರಾಮಾಣಿಕ ಯತ್ನವಾಗಿತ್ತು. ದಲಿತ ಬಂಡಾಯ ಲೇಖಕರು ಆರಂಭದಲ್ಲಿ ಸಂಸ್ಕೃತಿ ಚಿಂತನೆಗೆ ತೊಡಗುವ ಬದಲು ತಮ್ಮ ಸಂಸ್ಕೃತಿಯ ಅನುಭವಗಳಿಂದಲೇ ಭಿನ್ನ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದರು. ಮುಂದೆ ಇದು ಸಂಸ್ಕೃತಿ ಮತ್ತು ಸಾಹಿತ್ಯ ವಿಮರ್ಶೆಯ ಬೇರೆ ಬೇರೆ ದಾರಿಗಳಿಗೆ ಅವಕಾಶವನ್ನು ಸೃಷ್ಟಿಸಿತು.

ತೊಂಬತ್ತರ ದಶಕದಿಂದ ಕನ್ನಡ ಸಂಸ್ಕೃತಿ ನಿರ್ವಚನವು ತೀವ್ರವಾಗಿ ನಡೆಯುತ್ತಲೇ ಬಂದಿದೆ. ನವೋದಯ ಕಾಲದ ಸಂಶೋಧಕರ ಸಂಸ್ಕೃತಿ ಅಧ್ಯಯನಗಳನ್ನೆಲ್ಲ ಈಗ ಪರಿಶೀಲಿಸಲಾಗುತ್ತಿದ್ದು ಆಧುನಿಕೋತ್ತರ ಬೌದ್ಧಿಕ ಕಥನಗಳು ಒಟ್ಟಿಗೇ ಸಾಗುತ್ತಿವೆ. ವಸಾಹತುಷಾಹಿ ಹಂಗಿನಿಂದ ಹೊರಬಂದ ಕನ್ನಡ ಪ್ರಜ್ಞೆಯು ತನ್ನ ನಾಡುನುಡಿಯ ಅರಿವಿನ ಹುಡುಕಾಟದಲ್ಲಿ ಆಯಾ ಸಂಸ್ಕೃತಿಗಳ ಸಮುದಾಯಗಳ ಚಹರೆಯನ್ನು ಆಧುನಿಕ ಭಾರತದಲ್ಲಿ ರಾಜಕೀಯವಾಗಿಯೂ ಸಂಘಟಿಸಿಕೊಳ್ಳುತ್ತಿದೆ. ಆದ್ದರಿಂದಲೇ ಸಂಸ್ಕೃತಿ ಚಿಂತನೆಯ ಭಾಗವಾಗಿಯೇ ರಾಜಕೀಯಾರ್ಥಿಕ ಹಾಗು ಸಾಮಾಜಿಕ ಸಂಗತಿಗಳು ಸಂಸ್ಕೃತಿಯೊಳಗೆ ಸೇರಿಕೊಳ್ಳುತ್ತಿರುವುದು. ಸಂಸ್ಕೃತಿ ಚಿಂತನೆಯಲ್ಲೆ ಹತ್ತಾರು ಮಾದರಿಗಳಿವೆ. ಸಾಂಘಿಕ ನಿರೂಪಣೆಗಳು ಇಲ್ಲದ ಕಾರಣ ಸಂಸ್ಕೃತಿ ಚಿಂತನೆಯ ಮಾನದಂಡಗಳು ಖಚಿತವಾಗಿಲ್ಲ. ಜಾತಿ ಮತ್ತು ಲಿಂಗ ಹಾಗೂ ಧರ್ಮಗಳೇ ಇಲ್ಲೂ ಕೂಡ ನಿರ್ಣಾಯಕ ಪಾತ್ರ ವಹಿಸುತ್ತಿವೆ. ದೇಶೀಯ ಮೌಲ್ಯಗಳ ಮೂಲಕ ಸಂಸ್ಕೃತಿ ನಿರ್ವಚನ ಮಾಡುವಾಗಲೂ ಬಹು ಬಗೆಯ ಗೊಂದಲಗಳು ಸೃಷ್ಟಿಯಾಗಿವೆ. ಭಾಗಶಃ ಕನ್ನಡ ಸಂಸ್ಕೃತಿಯು ಜಾತಿ ವ್ಯವಸ್ಥೆಯ ಆಚೆಗಿನದು ಎಂದು ಕೊಂಡರೂ ಸಂಸ್ಕೃತಿಗಳ ಮೇಲೆ ಮತಧರ್ಮಗಳ ದಬ್ಬಾಳಿಕೆಯಿಂದ ಕನ್ನಡ ಹಲವು ಸಂಸ್ಕೃತಿಗಳಲ್ಲೂ ಕೂಡ ಜಾತಿ ಮತ್ತು ಲಿಂಗ ತಾರತಮ್ಯ ಬೆರೆತುಹೋಗಿದೆ. ಈ ಸ್ಥಿತಿಯಿಂದ ಸಂಸ್ಕೃತಿ ಅರ್ಥಾತ್‌ ಸಮುದಾಯಗಳನ್ನು ಪ್ರತ್ಯೇಕಿಸಿ ಜಾತ್ಯತೀತ ಸಂಸ್ಕೃತಿ ನಿರ್ವಚನವನ್ನು ಮಾಡಲು ಸಾಧ್ಯವೇ ಇಲ್ಲವೇನೊ ಎಂಬ ಗೊಂದಲ ಉಂಟಾಗಿದೆ. ಪ್ರತಿಯೊಂದು ಜಾತಿಯೂ ತನಗೇ ಅನನ್ಯವೆನಿಸುವ ಸಂಸ್ಕೃತಿಯನ್ನು ಹೊಂಧಿದೆ ಎಂದು ಅಭಿಮಾನದಲ್ಲಿ ತೊಡಗುವುದು ಸಂಸ್ಕೃತಿ ಚಿಂತನೆಯನ್ನು ಬಹುರೂಪಿ ಅನನ್ಯತೆಯಲ್ಲಿ ಮತ್ತಷ್ಟು ಬಿಡಿ ಬಿಡಿ ಮಾಡಿ ಅಖಂಡತೆಯೇ ಉಳಿಯದಂತೆ ಮಾಡಿದೆ.

ಗಾಢವಾದ ಸಂಸ್ಕೃತಿ ಚಿಂತನೆಗಳ ಜೊತೆಯೆ ಜನಪ್ರಿಯ ಸಂಸ್ಕೃತಿ ಚಿಂತನೆಯೂ ವರ್ತಮಾನದಲ್ಲಿ ನಡೆದಿದೆ. ಪ್ರಗತಿಶೀಲರು ಸಮಾಜದ ವ್ಯಾಮೋಹದಲ್ಲಿ ಕಾದಂಬರಿಗಳನ್ನು ಹೇಗೆ ಜನಪ್ರಿಯವಾಗಿ ಬರೆದರೊ ಅದೇ ರೀತಿಯಲ್ಲಿ ಸಮುದಾಯಗಳ ವ್ಯಾಮೋಹದಲ್ಲಿ ಸಂಸ್ಕೃತಿಯ ಜನಪ್ರಿಯ ಕಥನಗಳು ದಲಿತ ಬಂಡಾಯೋತ್ತರ ವೇಳೆಯಲ್ಲಿ ಹುಟ್ಟಿಕೊಂಡಿವೆ. ಇದರಿಂದಲೇ ಸಾಹಿತ್ಯ ವಿಮರ್ಶೆ ಮರೆಗೆ ಸರಿದು ಜನಪ್ರಿಯ ಶೈಲಿಯಲ್ಲಿ ಸಂಸ್ಕೃತಿಗಳ ಪರವಾದ ವಕಾಲತ್ತಿನ ಚಿಂತನೆಗಳು ಬೆಳೆದುದು. ಅಲಕ್ಷ್ಯಕ್ಕೆ ಒಳಗಾಗಿದ್ದ ಸಮುದಾಯಗಳಿಗೆ ನ್ಯಾಯ ನೀಡುತ್ತಿದ್ದೇವೆ ಎಂಬ ಧಾಟಿಯ ಸಂಸ್ಕರತಿ ಕಥನಗಳು ಸಾರಾಸಗಟಾಗಿ ಸಂಸ್ಕೃತಿಯ ಹೆಸರಿನಲ್ಲಿ ಎಲ್ಲವನ್ನೂ ಸಮರ್ಥಿಸಿಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿವೆ. ಕೆಳಜಾತಿಗಳ ಜಾತಿಸ್ಥಿತಿಯನ್ನು ಸಮರ್ಥಿಸಿಕೊಂಡು ಆ ಮೂಲಕ ಪರೋಕ್ಷವಾಗಿ ಜಾತಿವಾದವನ್ನು ಒಪ್ಪುವ ಸಂಸ್ಕೃತಿ ನಿರೂಪಣೆಗಳು ಹೆಚ್ಚಾಗುತ್ತಿವೆ. ಇಂತಲ್ಲಿ ಸಂಸ್ಕೃತಿಯ ಖಚಿತವಾದ ವೈಚಾರಿಕವಾದ ತಿಳುವಳಿಕೆಯು ಹಿಂದಕ್ಕೆ ಸರಿಯುತ್ತದೆ. ಡಿ.ಆರ್. ನಾಗರಾಜ್ ರೂಪಿಸಲು ಯತ್ನಿಸಿದ ಸಂಸ್ಕೃತಿ ಚಿಂತನೆಗೆ ಪರಂಪರೆಯ ವಿರಾಟ್ ಸಂಬಂಧವಿರುತ್ತಿತ್ತು. ಈ ಮಟ್ಟಿಗೆ ಡಿ.ಆರ್. ನಾಗರಾಜ್ ಮತ್ತು ಯು.ಆರ್. ಅನಂತಮೂರ್ತಿ ಅವರ ಸಂಸ್ಕೃತಿ ವಿಶ್ಲೇಷಣೆಗಳು ಗಾಢವಾಗಿವೆ. ಅಖಂಡವಾದ ಸಂಸ್ಕೃತಿ ಪ್ರಜ್ಞೆಯು ನಾಡಿನ ನಿರ್ಮಾಣಕ್ಕೆ ಅವಶ್ಯಕ. ಬಿಡಿ ವಿವರಗಳ ದಾಖಲೆಗಳಿಂದ ದೊಡ್ಡದನ್ನು ನಿರೂಪಿಸಲಾಗದು. ವರ್ತಮಾನದ ಚಾರಿತ್ರಿಕ ಪ್ರಜ್ಞೆ ಕೂಡ ಇಂತಹ ಒತ್ತಡದ ಬರೆಹಗಳಿಗೆ ಕಾರಣವಾಗಬಲ್ಲದು. ಸಂಸ್ಕೃತಿ ಚಿಂತನೆಯ ವರ್ತಮಾನದ ಮುಖ್ಯ ಅಂಶಗಳನ್ನು ಕೆಳಗಿನಂತೆ ಗುರುತಿಸಿಕೊಳ್ಳಬಹುದು.

೧. ಯಜಮಾನ ಸಂಸ್ಕೃತಿಯ ಏಕರೂಪವನ್ನು ನಿರಾಕರಿಸುವುದು. ಆ ಮೂಲಕ ಬಹು ಸಂಸ್ಕೃತಿಗಳ ಅನನ್ಯತೆಯನ್ನು ಸ್ಥಾಪಿಸುವುದು.

೨. ಸಾಂಸ್ಕೃತಿಕ ಚರಿತ್ರೆಯನ್ನು ಮೌಖಿಕ ಪರಂಪರೆಗಳ ಮುಲಕ ರಚಿಸಿಕೊಳ್ಳುವುದು.

೩. ಜಾತ್ಯತೀತ ಸಂಸ್ಕೃತಿಯ ಅಂಶಗಳನ್ನು ಎತ್ತಿ ಹಿಡಿಯುವುದು.

೪. ತಿರಸ್ಕೃತ ಜೀವನ ಮೌಲ್ಯಗಳನ್ನು ದಾಖಲಿಸುವುದರ ಜೊತೆಗೆ ಕಳೆದು ಹೋಗಿರುವ ಜ್ಞಾನ ಪರಂಪರೆಗಳನ್ನು ಹುಡುಕಿಕೊಳ್ಳುವುದು.

೫. ಜಾತಿ ಮತ್ತು ಲಿಂಗ ಭೇದಗಳ ನಡವಳಿಕೆಗಳನ್ನು ಬಿಡಿಸುವುದು.

೬. ಸಂಸ್ಕೃತಿ ವಿಕಾಸದ ಹಂತಗಳನ್ನು ಸ್ಥಳೀಯವಾಗಿ ಸಮುದಾಯಗಳ ಸಾಮಾಜಿಕ ರಚನೆಯಿಂದ ಅರ್ಥೈಸುವುದು.

೭. ಸಾಂಸ್ಕೃತಿಕ ವೀರರ ಮೌಖಿಕ ಚರಿತ್ರೆಯನ್ನು ಶೋಧಿಸಿಕೊಳ್ಳುವುದು ಹಾಗೂ ಆ ಮೂಲಕ ಸಮುದಾಯಗಳನ್ನು ಪ್ರತಿನಿಧಿಸುವುದು.

೮. ಒಂದೇ ನಾಡಿನ ಒಳಗಿನ ಸಾಂಸ್ಕೃತಿಕ ಬಹುರೂಪಗಳನ್ನು ಗುರುತಿಸಿಕೊಳ್ಳುವುದರ ಮೂಲಕ ಅಖಂಡ ಸಾಂಸ್ಕೃತಿಕ ಸಂಬಂದಗಳನ್ನು ಹಿಡಿಯಾಗಿ ಸ್ಥಾಪಿಸುವುದು.

೯. ದೇಶೀಯ ಜ್ಞಾನ ಪರಂಪರೆಗಳನ್ನು ಆಧುನಿಜ ಜಗತ್ತಿನ ಸವಾಲುಗಳ ಜೊತೆ ಮುಖಾಮುಖಿ ಮಾಡುವುದು ಹಾಗೂ ಗತಕಾಲವನ್ನು ವರ್ತಮಾನಕ್ಕೆ ನವೀಕರಿಸಿಕೊಳ್ಳುವುದು.

೧೦. ಸಾಂಸ್ಕೃತಿಕ ಪ್ರತಿರೋಧ ಶಕ್ತಿಯನ್ನು ಸಂಚಯ ಮಾಡಿಕೊಳ್ಳುವುದು. ಆ ಮೂಲಕ ಆಧುನಿಕೋತ್ತರ ಜೀವನ ಕ್ರಮಗಳನ್ನು ಸರಿಪಡಿಸಿಕೊಳ್ಳುವುದು.

೧೧. ಸಮುದಾಯಗಳಿಗೆ ಸಾಂಸ್ಕೃತಿಕ ನ್ಯಾಯಾವಕಾಶವನ್ನು ಸಮರ್ಥಿಸಿಕೊಳ್ಳುವುದು.

೧೨. ಸಮಕಾಲೀನ ರಾಜಕೀಯ ಅವಕಾಶಕ್ಕೆ ಸಮುದಾಯಗಳ ಸಾಂಸ್ಕೃತಿಕ ಲೋಕವನ್ನು ಅನ್ವಯಿಸುವುದು.

೧೩. ಅಲಕ್ಷಿತ ಸಂಸ್ಕೃತಿಗಳ ಪುನರುಜ್ಜೀವನಗೊಳಿಸುವುದು.

೧೪. ತಾತ್ವಿಕವಾದ ಸೈದ್ಧಾಂತಿಕ ಪ್ರಮೇಯಗಳನ್ನು ಸಂಶೋಧನೆಯಲ್ಲಿ ಕಂಡುಕೊಳ್ಳುವುದು.

೧೫. ಮತೀಯ ಮೂಲಭೂತವಾದಕ್ಕೆ ಪರ್ಯಾಯ ಸಾಂಸ್ಕೃತಿಕ ನಿರ್ವಚನೆಗಳನ್ನು ಕಂಡುಕೊಳ್ಳುವುದು ಹಾಗೂ ಹಿಂದೂ ಸಾಮ್ರಾಜ್ಯಷಾಹಿ ನೀತಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು.

೧೬. ಜಾಗತೀಕರಣದ ಏಕರೂಪಿ ಸಾಮ್ರಾಜ್ಯಷಾಹಿ ಆರ್ಥಿಕ ನೆಲೆಗಳಿಗೆ ತಡೆ ಒಡ್ಡುವುದು ಮತ್ತು ದೇಶೀಯ ಜೀವನ ಕ್ರಮಗಳನ್ನು ಉಳಿಸಿಕೊಳ್ಳುತ್ತಲೇ ನಾಡುನುಡಿಯ ಸಾಂಸ್ಕೃತಿಕ ಸ್ಮೃತಿಗಳನ್ನು ಜೀವಂತಗೊಳಿಸುವುದು.

ಈ ಅಂಶಗಳಲ್ಲಿ ವರ್ತಮಾನದ ಕನ್ನಡ ಸಂಸ್ಕೃತಿಯ ನಿರ್ವಚನಗಳು ಸಾಗಿವೆ. ಹಾಗೆಯೆ ಸಮುದಾಯಗಳ ಅಧ್ಯಯನಗಳು ಈ ನಡೆಯಲ್ಲೆ ಸಾಗಿವೆ. ನವೋದಯ ಕಾಲದ ವಿದ್ವಾಂಸರು ಶಾಸ್ತ್ರಕಾರರಾಗಿದ್ದರು. ಅಖಂಡತೆಯಲ್ಲೆ ಎಲ್ಲವನ್ನು ಭಾವಿಸುತ್ತಿದ್ದರು. ರಾಷ್ಟ್ರೀಯತೆಯೇ ಅವರ ಮಾನದಂಡವಾಗಿತ್ತು. ಏಕರೂಪಿ ರಾಷ್ಟ್ರೀಯತೆಗೆ ಪೂರಕವಾಗಿ ಸಂಸ್ಕೃತಿಯ ಎಲ್ಲ ಧಾರೆಗಳನ್ನು ಜೊತೆಗೂಡಿಸುತ್ತಿದ್ದರು. ಬಿಡಿಯಾಗಿ ನೋಡುವ ಪ್ರಮೇಯವೇ ಅವರಿಗಿರಲಿಲ್ಲ. ಗಾದೆಯ ಒಂದು ಮಾತನ್ನೂ ಶಾಸನದ ಒಂದು ನುಡಿಯನ್ನೂ ಮಹಾಕಾವ್ಯದ ಒಂದು ನಿರೂಪಣೆಯನ್ನೂ ಒಟ್ಟಾಗಿಯೇ ಕಟ್ಟಿಕೊಳ್ಳುವ ಸ್ವಭಾವ ಅವರಲ್ಲಿತ್ತು. ಶಂಭಾ ಜೋಷಿಯವರ ಸಂಸ್ಕೃತಿ ಚಿಂತನೆಯು ಇಂತದ್ದೇ ಆಗಿದ್ದು ಕನ್ನಡ ನಾಡನ್ನು ಅದರ ಪ್ರತೀಕವಾಗಿ ಭಾವಿಸುತ್ತಿತ್ತು. ಸಮಕಾಲೀನ ಸಂಸ್ಕೃತಿ ಅಧ್ಯಯನಗಳ ವಿಧಾನಗಳೀಗ ಬದಲಾಗಿವೆ.

ಅಖಂಡತೆಯಿಂದಲೇ ಸಂಸ್ಕೃತಿಯೊಂದನ್ನು ನಿರೂಪಿಸಬೇಕಾದ್ದಿಲ್ಲ ಎಂಬ ವಿಚಾರಗಳೀಗ ಮುಂಚೂಣಿಯಲ್ಲಿವೆ. ಬಿಡಿ ಅನನ್ಯತೆಯನ್ನು ಪ್ರತಿಪಾದಿಸುವುದರಿಂದ ಆ ಒಂದು ಅನನ್ಯತೆಗೆ ನ್ಯಾಯ ಒದಗಿಸಿದಂತಾಗುತ್ತದೆ. ಹಲವು ದನಿಗಳನ್ನೆಲ್ಲ ನುಂಗಿಕೊಂಡು ತನ್ನ ಒಂದು ದನಿಯನ್ನು ಮಾತ್ರ ವ್ಯಕ್ತಪಡಿಸುವ ಯಾಜಮಾನ್ಯ ನೀತಿಯು ಇದರಿಂದ ತಪ್ಪುತ್ತದೆ. ತಿರಸ್ಕೃತ ಮೌಲ್ಯಗಳನ್ನು ಪುನರ‍್ರಚಿಸಿಕೊಳ್ಳಲು ಅವಕಾಶವಾಗುತ್ತದೆ. ಧರ್ಮದ ದಬ್ಬಾಳಿಕೆಯು ಸಂಸ್ಕೃತಿ ಮತ್ತು ಸಮುದಾಯಗಳ ಮೇಲೆ ಹೇಗೆ ಆಗಿದೆ ಎಂಬುದನ್ನು ಚಾರಿತ್ರಿಕವಾಗಿ ವಿಶ್ಲೇಷಿಸಲು ಸಾಧ್ಯವಾಗುತ್ತದೆ. ಪೂರ್ವಾಗ್ರಹ, ತಾರತಮ್ಯ, ಅಸಮಾನತೆಗಳು ಸಂಸ್ಕೃತಿಯ ನೆಪದಲ್ಲಿ ಹೇಗೆ ಸಾಮಾಜಿಕವಾಗಿ ಬೆರೆತಿವೆ ಎಂದು ಬಹಿರಂಗಪಡಿಸಲು ಇದರಿಂದ ದಾರಿಯಾಗುತ್ತದೆ. ಸಂಸ್ಕೃತಿ ಚಿಂತನೆಗಳಲ್ಲಿ ಇದುವೇ ಮುಖ್ಯ ಆಶಯವಾಗಿರುವುದನ್ನು ಈ ಕಾಲದ ನಿರೂಪಣೆಗಳಲ್ಲೆಲ್ಲ ಗುರುತಿಸಬಹುದು.

ಆದರೆ ಸಂಸ್ಕೃತಿಯ ಹೆಸರಿನ ಅನೇಕ ಅಧ್ಯಯನಗಳು ಸೀಮಿತವಾಗಿಯೂ ಇವೆ. ಸಂಸ್ಕೃತಿಯನ್ನು ಸಮರ್ಥಿಸುವ ಅಬ್ಬರದಲ್ಲಿ ಉಳಿದ  ಜೀವನ ಮೌಲ್ಯಗಳನ್ನು ಉಪೇಕ್ಷೆಯಿಂದ ಕಾಣುವಂತಾಗಿದೆ, ತನ್ನ ಜಾತಿಯ ಸಂಸ್ಕೃತಿಯೇ ಮುಖ್ಯ ಎಂಬ ಜನಾಂಗೀಯ ಭಾವನೆಯೂ ಇಂತಲ್ಲಿ ಸುಳಿಯದೇ ಇರದು. ಸಮುದಾಯಗಳ ಸ್ವಮರುಕ ಮತ್ತು ಆತ್ಮರತಿಯು ಬೇರೆ ಬೇರೆ ಸಮಾಜಗಳನ್ನು ಸಮನ್ವಯದಿಂದ ಕಾಣಲು ಆಗದಂತೆ ಮಾಡುತ್ತದೆ. ಸಂಸ್ಕೃತಿ ಚಿಂತನೆಗೆ ತಕ್ಕುದಾದ ಸಮನ್ವಯ ಸೂತ್ರಗಳೇ ರೂಪಿತವಾಗಿಲ್ಲ. ಸಮುದಾಯಗಳ ಸಂಸ್ಕೃತಿಯನ್ನೆ ವರ್ತಮನದ ಕಲುಷಿತ ರಾಜಕಾರಣಕ್ಕೆ ನವೀಕರಿಸುತ್ತಿರುವುದರಿಂದ ಸಂಸ್ಕರತಿಗಳ ಅಪಮೌಲ್ಯೀಕರಣವೂ ಆಗುತ್ತಿದೆ. ಆದ್ದರಿಂದಲೆ ರಾಜ್ಯಸರ್ಕಾರವು ಪ್ರತಿ ಬಜೆಟ್‌ನಲ್ಲೂ ಅಲಕ್ಷಿತ ಸಮುದಾಯಗಳ ಸಾಂಸ್ಕೃತಿಕ ನೆನಪುಗಳಿಗೆ ಸಂಕೇತಗಳಿಗೆ ಸ್ಥಳ ಮಹಿಮೆಗಳಿಗೆ ಹಾಗೂ ಆಯಾಯ ಸಾಂಸ್ಕೃತಿಕ ವೀರರಿಗೆ ಸಂಬಂಧಿಸಿದಂತೆ ಪ್ಯಾಕೇಜ್ ಕಾರ್ಯಕ್ರಮಗಳಿಗೆ ಹಣವನ್ನು ನಿಗಧಿಪಡಿಸುತ್ತಿರುವುದು. ಇದಲ್ಲದೆ ಪ್ರತಿ ಜಿಲ್ಲೆ ತಾಲೂಕುಗಳಿಗೂ ಸಾಂಸ್ಕೃತಿಕ ಉತ್ಸವಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನಡೆಸುತ್ತಿದ್ದು ಆ ಮೂಲಕ ಸಮುದಾಯಗಳ ಸಂಸ್ಕೃತಿಯನ್ನೆ ರಾಜಕೀಯ ಕಾರ್ಯಸೂಚಿಗಳಿಗೆ ಒಳಪಡಿಸಿಕೊಳ್ಳಲಾಗುತ್ತಿದೆ. ಇನ್ನು ದೊಡ್ಡ ಪ್ರಮಾಣದ ದಸರ, ಹಂಪಿ, ಲಕ್ಕುಂಡಿ, ಕಿತ್ತೂರುರಾಣಿ ಚನ್ನಮ್ಮ, ಕದಂಬದಂತಹ ಉತ್ಸವಗಳು ರಾಜಕೀಯ ಸಂಸ್ಕೃತಿಯ ಪ್ರತೀಕಗಳೇ ಆಗಿವೆ. ಇದರಿಂದ ಸಂಸ್ಕೃತಿಗಳು ಮತ್ತು ಸಮುದಾಯಗಳು ಏನನ್ನು ಪಡೆದಂತಾಗುತ್ತದೆ. ಇಂತವುಗಳಿಂದ ಸಂಸ್ಕೃತಿಗಳು ಪುನರುಜ್ಜೀವನಗೊಳ್ಳಬಲ್ಲವೆ? ದೇಶೀ ಪರಂಪರೆಗಳು ಮತ್ತೆ ಜೀವಂತಗೊಳ್ಳಬಲ್ಲವೆ? ಜನಪದರ ಮೌಖಿಕ ನಿರೂಪಣೆಗಳು ಪುನರ್ ಸೃಷ್ಟಿಗೆ ಒಳಗಾಗಬಲ್ಲವೆ? ಎಂದು ಕೇಳಿಕೊಂಡರೆ ಸಕಾರಾತ್ಮಕ ಉತ್ತರ ಸಿಗಲಾರದು.

ಪ್ರಭುತ್ವ ನಾಡಿನ ಸಂಸ್ಕೃತಿಯನ್ನು ರಾಜಕೀಯಗೊಳಿಸಿಕೊಳ್ಳುತ್ತಿದ್ದರೆ ವಿಶ್ವವಿದ್ಯಾಲಯಗಳು ಅದೇ ನಾಡಿನ ಸಂಸ್ಕೃತಿಗಳನ್ನು ವಿಭಿನ್ನವಾಗಿ ಆಲೋಚಿಸುತ್ತಿವೆ. ತೊಂಬತ್ತರ ದಶಕದಿಂದ ಸಂಸ್ಕೃತಿಯ ಅನೇಕ ಕಥನಗಳು ಒಟ್ಟಾಗಿ ನಡೆದಿದ್ದರೂ ಅವೆಲ್ಲವೂ ದಲಿತ ಬಂಡಾಯದ ಸಾಮಾಜಿಕ ನ್ಯಾಯವನ್ನೆ ವಿಭಿನ್ನವಾಗಿ ಬೌದ್ಧಿಕ ನೆಲೆಗಳಿಂದ ನಿರ್ವಚಿಸಿವೆ. ಸ್ತ್ರೀ ಸಂಸ್ಕೃತಿಯ ನಿರ್ವಚನಗಳ ಜೊತೆಯಲ್ಲೆ ದಲಿತ ಸಂಸ್ಕೃತಿ, ಅಲೆಮಾರಿ ಆದಿವಾದಿ ಸಂಸ್ಕೃತಿಯ ವೈಚಾರಿಕ ನಿರೂಪನೆಗಳು ದಟ್ಟವಾದ ಸಮುದಾಯ ಪ್ರಜ್ಞೆಯಿಂದ ಬೆಳೆದಿರುವುದು ಮಹತ್ವದ್ದಾಗಿದೆ. ನಿರಾಕರಿಸಲ್ಪಟ್ಟ ಸಂಗತಿಗಳನ್ನು ಸಮರ್ಥಿಸುವಾಗಲೆಲ್ಲ ಒಂದು ಪೂರ್ವಕಲ್ಪನೆ ಇದ್ದೇ ಇರುತ್ತದೆ. ನಿರಾಕರಿಸಲ್ಪಟ್ಟಿದ್ದು ಅನ್ಯಾಯಕ್ಕೆ ಒಳಪಟ್ಟಿದೆ; ಅದಕ್ಕೆ ನ್ಯಾಯ ಒದಗಿಸಬೇಕು ಎಂಬ ಪೂರ್ವ ತೀರ್ಮಾನ ಮೊದಲೇ ಬಂದು ಬಿಟ್ಟಿರುತ್ತದೆ. ಸಮುದಾಯಗಳ ಪರವಾದ ಈ ಎಚ್ಚರವು ನೈತಿಕವಾದುದು. ಆದರೆ ನ್ಯಾಯ ಪ್ರಜ್ಞೆಯೊಂದೇ ಅರಿವಿನ ವಿಕಾಸಕ್ಕೆ ಸಾಲುವುದಿಲ್ಲ. ಸಂಸ್ಕೃತಿಗಳು ನ್ಯಾಯ ಅನ್ಯಾಯದ ವೈರುಧ್ಯಕ್ಕೆ ಮಾತ್ರವೇ ಸೀಮಿತವಾಗಿ ವಿಕಾಸವಾಗಿರುವುದಿಲ್ಲ. ಮನುಷ್ಯನ ಉಗಮ ವಿಕಾಸದ ಅನೇಕ ಹಂತಗಳಲ್ಲಿ ಸಂಸ್ಕೃತಿಗಳು ನಿರಂತರವಾಗಿ ಬೆಳೆಯುತ್ತಲೇ ಇರುತ್ತವೆ. ವರ್ತಮಾನದ ಕಣ್ಣೋಟ ಮಾತ್ರವೇ ದೂರದ ನೋಟಗಳನ್ನು ಕಾಣಿಸಲಾರದು.

ಸಂಸ್ಕೃತಿ ಚಿಂತನೆಯ ಜನಪ್ರಿಯ ಸಿದ್ಧಮಾದರಿಗಳು ವೈದಿಕ ಅವೈದಿಕ ಜನಾಂಗೀಯ ಸಿದ್ಧ ತರ್ಕಗಳಲ್ಲೇ ಈಗಲೂ ಮುಂದುವರೆಯುತ್ತಿದ್ದು ಈ ವೈರುಧ್ಯಗಳ ಆಚೆಗಿನ ತಿಳುವಳಿಕೆಗಳಿಗೆ ತೆರೆದುಕೊಳ್ಳಬೇಕಾಗಿದೆ. ಹೀಗಿದ್ದರೂ ಕನ್ನಡ ಸಂಸ್ಕೃತಿ ಚಿಂತನೆಗಳಲ್ಲಿ ನಡೆಯುತ್ತಿರುವ ನಿರ್ವಚನಗಳಿಂದ ನಾಡುನುಡಿಯ ನಿರೂಪಣೆಗಳಲ್ಲಾಗಿರುವ ಸಾಧ್ಯತೆಗಳು ಕಡಿಮೆ ಏನಲ್ಲ. ಅವನ್ನಿಲ್ಲಿ ಸಂಕ್ಷಿಪ್ತವಾಗಿ ಗುರುತಿಸುವ.

೧. ಅಲಕ್ಷಿತ ಸಮುದಾಯಗಳ ಸಾಂಸ್ಕೃತಿಕ ಆತ್ಮಕಥನವು ನಿರೂಪಿತವಾಯಿತು.

೨. ನಿರಾಕರಿಸಲ್ಪಟ್ಟ ಜ್ಞಾನ ಪರಂಪರೆಗಳಿಗೆ ನ್ಯಾಯೋಚಿತ ಅವಕಾಶವನ್ನು ವೈಚಾರಿಕವಾಗಿ ಬೌದ್ಧಿಕವಾಗಿ ಶೈಕ್ಷಣಿಕವಾಗಿ ಸಂಶೋಧನೆಯ ದಾರಿಗಳಲ್ಲಿ ರೂಪಿಸಲಾಯಿತು.

೩. ಕನ್ನಡ ಭಾಷೆ ಮತ್ತು ಬಹುರೂಪಿ ಸಂಸ್ಕೃತಿಗಳ ಪರಿಚಯವೂ ದಾಖಲೆಯೂ ನಡೆದು ಕನ್ನಡ ನಾಡಿನ ಸಾಂಸ್ಕೃತಿಕ ವೈವಿಧ್ಯಗಳನ್ನು ಗುರುತಿಸಲು ಸಾಧ್ಯವಾಯಿತು. ಅಲ್ಲದೆ ಸಮುದಾಯಗಳಿಗೆ ಸಾಂಸ್ಕೃತಿಕ ಪ್ರಜ್ಞೆ ವಿಸ್ತರಿಸಿ ಸ್ವಾಭಿಮಾನವು ಉಂಟಾಯಿತು.

೪. ಸಾಹಿತ್ಯ ವಿಮರ್ಶೆಗಿಂತಲೂ ಸಂಸ್ಕೃತಿ ವಿಮರ್ಶೆಯು ಬೆಳೆದು ಮಾನವಿಕ ವಿಜ್ಞಾನಗಳ ಗದ್ಯ ನಿರೂಪಣೆಗಳು ಬೆಳೆದವು.

೫. ಸ್ತ್ರೀ ಸಂವೇದನೆಯ ಮಾತೃ ಮೂಲ ಸಂಸ್ಕೃತಿಯ ಪ್ರತಿಪಾದನೆಯನ್ನು ಲಿಂಗತಾರತಮ್ಯದ ಹಿನ್ನೆಲೆಯಲ್ಲಿ ಗುರುತಿಸಿಕೊಂಡು ಸ್ತ್ರೀ ಸಂಸ್ಕೃತಿಯ ಸೈದ್ಧಾಂತಿಕತೆಯನ್ನೂ ಮತ್ತು ಸಾಹಿತ್ಯದ ಪರಿಕಲ್ಪನೆಗಳನ್ನೂ ಕಂಡುಕೊಳ್ಳಲಾಯಿತು.

೬. ದಲಿತ ಸಂಸ್ಕೃತಿಯ ವೈಚಾರಿಕ ನಿರೂಪಣೆಗಳು ಅನಾವರಣಗೊಂಡವು.

೭. ಸಾಹಿತ್ಯದ ಮಾನದಂಡಗಳ ಜೊತೆ ಸಂಸ್ಕೃತಿಯ ಪರಿಕಲ್ಪನೆಗಳನ್ನು ಬೆಸುಗೆ ಮಾಡಲು ಸಾಧ್ಯವಾಯಿತು.

೮. ಸಂಸ್ಕೃತಿ ರಾಜಕಾರಣದ ಪ್ರಮೇಯಗಳನ್ನು ಮಂಡಿಸುವಂತಾಯಿತು. ಹಾಗೂ ಸಮಕಾಲೀನ ಸಮಾಜದಲ್ಲಿ ಗತ ಸಂಸ್ಕೃತಿಗಳ ನಾಯಕರನ್ನು ಪುನರ್ ನೆನಪಿಸಿಕೊಳ್ಳಲು ಸಾಧ್ಯವಾಯಿತು. ಹಾಗೆಯೇ ಸಾಂಸ್ಕೃತಿಕವಾದ ಪ್ರತಿಭಟನೆಯನ್ನು ಕಂಡುಕೊಳ್ಳಲಾಯಿತು.

೯. ದೇಶೀವಾದವನ್ನು ಮಂಡಿಸಲು ಸಾಧ್ಯವಾಯಿತು. ಸ್ಥಳೀಯ ಸಂಸ್ಕೃತಿಗಳ ಪರಿಚಯವಾಯಿತು. ಹಾಗೆಯೆ ಮೌಖಿಕ ಚರಿತ್ರೆ ಎಂಬ ಹೊಸ ಶಾಖೆಯೊಂದು ಸಾಧ್ಯವಾಯಿತು. ಜಾತಿ ಮತ್ತು ಸಂಸ್ಕೃತಿಗಳ ಅಂತರ ಸಂಬಂಧ ಸ್ಪಷ್ಟವಾಯಿತು. ಸಮುದಾಯ ನಿಷ್ಠ ಅಧ್ಯಯನಗಳು ಬೆಳೆದವು.

೧೦. ಅವೈದಿಕ ಜ್ಞಾನ ಪರಂಪರೆಗಳು ಬೆಳಕಿಗೆ ಬಂದವು. ಅಲೆಮಾರಿ ಸಮಾಜದ ಮಾಹಿತಿಗಳು ದಾಖಲಾದವು. ಆದಿವಾಸಿಗಳ ಸಾಂಸ್ಕೃತಿಕ ಆವರಣಗಳು ಗುರುತಿಸಲ್ಪಟ್ಟವು. ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಸಾಂಸ್ಕೃತಿಕ ನೆಲೆಗಳು ಅಧ್ಯಯನಕ್ಕೊಳಪಟ್ಟವು.

೧೧. ಸಾಂಸ್ಕೃತಿಕ ಹುಡುಕಾಟಗಳ ಮೂಲಕವೇ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಂಘಟಿತವಾಗಲು ಆತ್ಮ ವಿಶ್ವಾಸವು ಉಂಟಾಯಿತು.

ಇಂತಹ ಸಕಾರಾತ್ಮಕ ಅಂಶಗಳು ಸಂಸ್ಕೃತಿ ಚಿಂತನೆಯಿಂದ ಉಂಟಾಗಿವೆ. ಸಂಸ್ಕೃತಿ ಚಿಂತನೆಯ ಮೊದಲ ಘಟ್ಟದ ಲಾಭ ನಷ್ಟಗಳ ಲೆಕ್ಕಾಚಾರ ಬೇರೆ. ವರ್ತಮಾನದ ಸಂಸ್ಕೃತಿ ಚಿಂತನೆಗಳು ಈಗ ತಾನೆ ಆರಂಭವಾಗಿದ್ದು ಮುಂದಿನ ದಾರಿ ಮತ್ತಷ್ಟು ವಿಶಿಷ್ಟವಾಗಬಲ್ಲದು. ನಾಡು ನುಡಿಯ ಸಾಂಸ್ಕೃತಿಕ ವೈಚಾರಿಕ ಕಥನಗಳು ನಿರಂತರವಾಗಿರುತ್ತವೆ. ಬಲಪಂಥೀಯರ ಸಂಸ್ಕೃತಿ ಚಿಂತನೆಯೂ ಇದೇ ಕಾಲ ಘಟ್ಟದಲ್ಲಿ ಬಲವಾಗಿಯೇ ಇದೆ. ಅದು ಬೇರೊಂದು ಆಯಾಮದ ಕಥನ. ಎಡ ಪಂಥೀಯ ಹಿನ್ನೆಲೆಯ ಸಂಸ್ಕೃತಿ ಕಥನವೇ ಕನ್ನಡ ನಾಡುನುಡಿಯ ಸದ್ಯದ ತರ್ಕ ನಿರ್ವಚನವಾಗಿದೆ. ಎಡಪಂಥೀಯ ಧೋರಣೆಯು ಜನಸಾಮಾನ್ಯರ ಪರವಾದುದು ಹಾಗೂ ಸಾಂಸ್ಕೃತಿಕ ಯಜಮಾನ್ಯಕ್ಕೆ ವಿರುದ್ಧವಾದುದು. ಏಕರೂಪಿ ಸಾಂಸ್ಕೃತಿ ನಿರೂಪಣೆಯು ಅಪಾಯಕಾರಿಯಾದುದು. ಹಿಂದೂವಾದದ ಸಂಸ್ಕೃತಿ ಚಿಂತನೆಯು ಸ್ವದೇಶಿವಾದದ ನೆಪದಲ್ಲಿ ಮತೀಯ ಮೂಲಭೂತವಾದವನ್ನು ಮಂಡಿಸುತ್ತದೆ. ಅದನ್ನು ಬಹುರೂಪಿ ಸಂಸ್ಕೃತಿಗಳ ಮೀಮಾಂಸೆಯಲ್ಲಿ ಪರಿಗಣಿಸಲು ಬರುವುದಿಲ್ಲ. ಹೀಗಾಗಿಯೇ ಚಿದಾನಂದ ಮೂರ್ತಿ ಅವರ ಕನ್ನಡ ನಾಡು ನುಡಿಯ ಸಂಸ್ಕೃತಿ ಚಿಂತನೆಗೂ ರಹಮತ್ ತರೀಕೆರೆಯಂತವರ ಸಂಸ್ಕೃತಿ ಚಿಂತನೆಗಳಿಗೂ ಅಂತರವನ್ನು ಅತಿರೇಖವನ್ನು ಕಾಣಲು ಸಾಧ್ಯವಾಗುವುದು.

ಸಂಸ್ಕೃತಿ ನಿರ್ವಚನಗಳಲ್ಲಿ ಎಡಪಂಥೀಯ ಆಲೋಚನೆಗಳು ದಟ್ಟ ಪ್ರಭಾವ ಬೀರುತ್ತಲೆ ಇವೆ ಹಾಗೆಯೇ ಬಲ ಪಂಥೀಯರ ಧೋರಣೆಗಳೂ ಬಲವಾಗುತ್ತಿವೆ. ಆದರೆ ಸೃಜನಶೀಲ ಸಾಹಿತ್ಯ ಸೃಷ್ಟಿಯಲ್ಲಿ ಮಾರ್ಕ್ಸ್‌‌ವಾದಿ ವಿಚಾರಗಳು ತಮ್ಮ ಪ್ರಭಾವಳಿಯನ್ನು ಕಳೆದುಕೊಂಡಿರುವುದು ಕುತೂಹಲಕರವಾಗಿದೆ. ಆದರೆ ಸಂಶೋಧನೆಯ ಬರಹಗಳಲ್ಲೂ ಎಡಪಂಥೀಯ ಧೋರಣೆ ಸಾಕಷ್ಟು ಪ್ರಮಾಣದಲ್ಲಿ ಸೇರಿಕೊಳ್ಳುತ್ತಿರುವುದು ಸಕಾರಾತ್ಮಕವಾಗಿದೆ. ಇದು ಸಮುದಾಯಗಳ ಪರವಾದ ನ್ಯಾಯದ ನೀತಿಯಿಂದಾದ ಪರಿಣಾಮ. ಯಾವುದೇ ಸೈದ್ಧಾಂತಿಕತೆಯನ್ನು ಅತಿಯಾಗಿ ಅವಲಂಭಿಸಿದರೆ ಮೂಲ ಉದ್ದೇಶವೇ ಕರಗಿ ಹೋಗಬಲ್ಲದು. ಇಲ್ಲವೇ ಮೂಲ ವಿಷಯವೇ ತತ್ವದ ಗುರಿಗಾಗಿ ಬಳಸಲ್ಪಡಬಹುದು. ಸಂಸ್ಕೃತಿ ಚಿಂತನೆಗಳಿಂದ ಕನ್ನಡ ನಾಡುನುಡಿಯ ಕಥನ ಬೆಳೆದಿದೆಯಾದರೂ ಅದರ ಸರಳೀಕರಣದಿಂದ ಅನೇಕ ಮಿತಿಗಳೂ ಎದುರಾಗುತ್ತಿವೆ. ವಿಶೇಷವಾಗಿ ತಜ್ಞ ವಿದ್ವಾಂಸರು, ಚಿಂತಕರು, ವಿಮರ್ಶಕರು, ಲೆಖಕರು ರೂಪಿಸುವ ಸಂಸ್ಕೃತಿ ಚಿಂತನೆಯು ಗಾಢವಾಗಿ ವಿಸ್ತರಿಸಿಕೊಳ್ಳುತ್ತಿದ್ದರೆ; ಅದೇ ವೇಳೆ ವಿಶ್ವವಿದ್ಯಾಲಯಗಳ ಸಂಶೋಧನೆಯ ವಲಯಗಳಲ್ಲಿ ಪಿಎಚ್.ಡಿ., ಎಂ.ಫಿಲ್. ಡಿ.ಲಿಟ್.ಪದವಿಗಾಗಿ ರೂಪಿಸಲ್ಪಡುತ್ತಿರುವ ಸಂಸ್ಕೃತಿ ಅಧ್ಯಯನಗಳು ಬಹಳ ಜಾಳಾಗಿ ಅನೇಕ ಅಪವ್ಯಾಖ್ಯಾನಗಳಲ್ಲಿ ತೊಡಗಿವೆ. ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಈಗ ಸಮುದಾಯ ಪ್ರಜ್ಞೆಯ ಸಂಸ್ಕರತಿ ಅಧ್ಯಯನಗಳು ಸಾಹಿತ್ಯ, ಭಾಷೆ, ಚರಿತ್ರೆ, ಜಾನಪದ, ಸಮಾಜ ಹಾಗೂ ಆರ್ಥಿಕ ರಾಜಕೀಯ ನೆಲೆಗಳಲ್ಲಿ ವೇಗವಾಗಿ ನಡೆಯುತ್ತಿವೆ. ಇಂತಹ ಅಧ್ಯಯನಗಳ ವಿಧಾನಗಳು, ಮಾಹಿತಿಗಳು, ಮಾರ್ಗದರ್ಶನಗಳು, ಕ್ಷೇತ್ರಕಾರ್ಯಗಳು, ಅಧ್ಯಯನ ಸಂಗತಿಗಳು, ಬರಹ ರೀತಿಗಳು, ತಳೆಯುವ ನಿಲುವುಗಳು, ಬಳಸುವ ಕ್ರಮಗಳು, ಮಾಡುವ ಮೌಲ್ಯ ಮಾಪನಗಳು ಎಷ್ಟೊಂದು ಸರಳೀಕರಣಗೊಂಡಿವೆ ಎಂದರೆ ಯಾರೂ ಬೇಕಾದರೂ ಒಂದು ರಾತ್ರಿ ಹಗಲು ಕುಳಿತು ಏನನ್ನಾದರೂ ಬರೆದು ಸಂಸ್ಕೃತಿ ಅಧ್ಯಯನ ಮಾಡಿ ಮುಗಿಸಿ ಪದವಿ ಪಡೆದುಬಿಡಬಹುದು. ಇದು ಒಟ್ಟು ನಾಡುನುಡಿಯ ಸಂಶೋಧನೆಯ ನೈತಿಕತೆಯನ್ನೆ ನಾಶಪಡಿಸುವಂತಿದೆ.

ಯಾರಾದರೂ ಕರ್ನಾಟಕದ ಎಲ್ಲ ಸಂಸ್ಕೃತಿ ಅಧ್ಯಯನದ ಹಿನ್ನೆಲೆಯ ಪದವಿ ಕೇಂದ್ರಿತ ಸಂಶೋಧನಾ ಅಧ್ಯಯನಗಳನ್ನು ಗಂಭೀರವಾಗಿ ಪರಿಶೀಲಿಸಿ ನೋಡಿದರೆ ಇಂತಲ್ಲಿ ಸಂಸ್ಕೃತಿ ಚಿಂತನೆಯು ಯಾವ ಅಧೋಗತಿಗೆ ಇಳಿದು ಯಾವ ಬಗೆಯ ದಂಧೆಯಾಗಿ ಮಾರ್ಪಟ್ಟಿದೆ ಎಂಬುದು ತಿಳಿಯುತ್ತದೆ. ಹೀಗಾಗಿಯೇ ವರ್ತಮಾನದ ಸಂಸ್ಕೃತಿ ಅಧ್ಯಯನದಲ್ಲೇ ಅತ್ಯಂತ ಕೆಟ್ಟ ಹಾಗೂ ಅತ್ಯಂತ ವಿಭಿನ್ನ ಸೂಕ್ಷ್ಮ ಸಂವೇದನೆಯ ಅಧ್ಯಯನಗಳು ಒಟ್ಟಾಗಿಯೇ ನಡೆಯುತ್ತಿರುವುದು ವಿಚಿತ್ರವಾಗಿದೆ. ವಿಶ್ವವಿದ್ಯಾಲಯಗಳ ಪದವಿ ನಿಮಿತ್ತ ಸಂಶೋಧನಾ ಬರಹಗಳ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಕೈಬಿಟ್ಟು ಗಂಭೀರ ಸಂಸ್ಕೃತಿ ಚಿಂತನೆಗಳನ್ನು ಗಮನಿಸಿದಾಗ ಭವಿಷ್ಯದ ಸೈದ್ಧಾಂತಿಕ ನಿರ್ವಚನಗಳ ಬಗ್ಗೆ ವಿಶ್ವಾಸ ಹೆಚ್ಚುತ್ತದೆ. ಇಂತವರ ಪೈಕಿ ರಹಮತ್‌ ತರೀಕೆರೆ, ಮೊಗಳ್ಳಿ ಗಣೇಶ್, ನಟರಾಜ್ ಹುಳಿಯಾರ್, ಬಂಜಗೆರೆ ಜಯಪ್ರಕಾಶ್, ಕೇಶವಶರ್ಮ, ಕೆ.ವಿ. ಅಕ್ಷರ, ಸಿ.ಆರ್. ಗೋವಿಂದರಾಜು, ಹಿ.ಚಿ.ಬೋರಲಿಂಗಯ್ಯ, ಚಂದ್ರಶೇಖರ ನಂಗಲಿ, ಬಿ.ಎಂ.ಪುಟ್ಟಯ್ಯ, ಆಶಾದೇವಿ, ತಾರಕೇಶ್ವರ ಮುಂತಾದವರ ಬರಹಗಳು ಗಮನ ಸೆಳೆಯುತ್ತವೆ. ಹಿರಿಯರಾದ ಕೆ.ವಿ.ನಾರಾಯಣ, ಜಿ.ರಾಜಶೇಖರ್, ಡಿ.ಎಸ್.ನಾಗಭೂಷಣ, ಓ.ಎಲ್.ನಾಗಭೂಷಣ ಸ್ವಾಮಿ, ಎಚ್.ಎಸ್.ರಾಘವೇಂದ್ರರಾವ್, ಪುರುಷೋತ್ತಮ ಬಿಳೆಮಲೆ, ಕೆ.ಜಿ.ನಾಗರಾಜಪ್ಪ, ಹನೂರು ಕೃಷ್ಣಮೂರ್ತಿ, ಚಿನ್ನಪ್ಪಗೌಡ, ಹಿ.ಶಿ.ರಾಮಚಂದ್ರೇಗೌಡ, ಎಚ್.ಎಸ್.ಶ್ರೀಮತಿ, ರಾಜೇಂದ್ರ ಚೆನ್ನಿ, ಕೆ.ವಿ.ತಿರುಮಲೇಶ್, ಬರಗೂರು ರಾಮಚಂದ್ರಪ್ಪ, ವಿವೇಕ ರೈ, ಎಂ.ಎಂ. ಕಲಬುರ್ಗಿ ಮೊದಲಾದವರ ಸಂಸ್ಕೃತಿ ಚಿಂತನೆಗಳು ಪರಂಪರೆಯ ಗಾಢ ಸಂಬಂಧದಿಂದ ಸೈದ್ಧಾಂತಿಕವಾದ ಸೇತುವೆಗಳನ್ನು ಗತ ಸಂಸ್ಕೃತಿಗೂ ವರ್ತಮಾನದ ಸಾಮಾಜಿಕ ಬದಲಾವಣೆಗಳಿಗೂ ನಿರ್ಮಿಸುತ್ತಿವೆ. ಇವರೆಲ್ಲರ ನಡುವೆ ಕನ್ನಡ ಸಂಸ್ಕೃತಿ ಚಿಂತನೆಯ ಮುಂಚೋಣಿ ನಾಯಕರಂತೆ ಯು.ಆರ್.ಅನಂತಮೂರ್ತಿಯವರು ತೊಡಗಿರುವುದು ಭವಿಷ್ಯವನ್ನು ಮತ್ತಷ್ಟು ಬಲಪಡಿಸಬಲ್ಲದು.

ಹೀಗಾಗಿ ವರ್ತಮಾನದ ಕನ್ನಡ ಸಂಸ್ಕೃತಿ ಚಿಂತನೆಗಳು ವಿಶಾಲವಾಗಿ ಸಮಾಜದ ಬಹುರೂಪಗಳನ್ನು ಅರ್ಥೈಸಿಕೊಳ್ಳುತ್ತಿರುವುದು ಕನ್ನಡ ನಾಡುನುಡಿಯ ಮತ್ತೊಂದು ಸುತ್ತಿನ ಪುನರ್ ನಿರ್ಮಾಣದ ಕೆಲಸವೇ ಆಗಿದೆ. ನವೋದಯ ಕಾಲದ ಸಂಸ್ಕೃತಿ ಚಿಂತನೆಗಳು ಒಟ್ಟಾಗಿ ರಾಷ್ಟ್ರೀಯತೆಯ ಕಾರಣಕ್ಕೆ ನಡೆದರೆ; ಅದೇ ಚಿಂತನೆಯು ಇಂದು ಬಹು ಅನನ್ಯತೆಗಳ ಸಮಾನಾಂತರ ರಾಷ್ಟ್ರೀಯತೆಯನ್ನೆ ಸ್ವಚಹರೆಯ ಭಿನ್ನತೆಯಲ್ಲಿ ನಿರ್ವಚಿಸಿಕೊಳ್ಳಲು ಅವಕಾಶ ಮಾಡಿದೆ. ಸಂಸ್ಕೃತಿ ಚಿಂತನೆಯು ಈ ಕಾರಣದಿಂದಲೇ ಒಂದು ಭೌದ್ಧಿಕ ರಾಜಕಾರಣ ಪ್ರತಿರೋಧ ಸ್ವಭಾವೋಕ್ತಿಯೂ ಆಗುತ್ತಿರುವುದು. ಒಟ್ಟಿನಲ್ಲಿ ಇದರಿಂದ ಕನ್ನಡ ಸಮುದಾಯಗಳ ಅಭಿವ್ಯಕ್ತಿಯು ತೆರೆದುಕೊಳ್ಳಲು  ಸಾಧ್ಯವಾಗುತ್ತಿದೆ. ಆ ಮೂಲಕ ಬೌದ್ಧಿಕ ನಿರ್ಮಾಣಕ್ಕೂ ಅವಕಶವಾಗಿದೆ. ನಾಡುನುಡಿಯನ್ನು ಭೌತಿಕವಾಗಿ ಕಟ್ಟುವುದಕ್ಕಿಂತ ಬೌದ್ಧಿಕವಾಗಿ ನಿರ್ಮಿಸುವುದೇ ಭವಿಷ್ಯಕ್ಕೆ ಬೇಕಾದ ಮಾರ್ಗ. ಈ ಹಾದಿಯಲ್ಲಿ ಕನ್ನಡ ನಾಡಿನ ಬಹುರೂಪಿ ಸಂಸ್ಕೃತಿಗಳ ಏಕೀಕರಣವೂ ಆಗಬೇಕು. ಭೌಗೋಳಿಕ ಏಕೀಕರಣಕ್ಕಿಂತ ಸಾಂಸ್ಕೃತಿಕ ಏಕೀಕರಣವೇ ಬಲವಾದುದು. ಭಾಷೆಗಿಂತಲೂ ಸಂಸ್ಕೃತಿಯೇ ಶಕ್ತಿಶಾಲಿ. ಹೀಗಾಗಿ ಕನ್ನಡದ ಸಂಸ್ಕೃತಿ ಚಿಂತನೆಯು ಈ ಬಗೆಯ ಸಾಂಸ್ಕೃತಿಕ ಏಕೀಕರಣವನ್ನು ಈ ಕಾಲದಲ್ಲಿ ಸಂಘಟಿಸುತ್ತಿರುವುದು ಮಹತ್ವದ್ದಾಗಿದೆ.