ಜಾತಿ ವ್ಯವಸ್ಥೆಗೂ ಭೂಮಿಯ ಒಡೆತನಕ್ಕೂ ನೇರವಾದ ಸಂಬಂಧಗಳಿವೆ. ಭೂ ಮಾಲಿಕ ಜಾತಿಗಳು ನಾಡಿನ ಸಂಪತ್ತಿನ ಮೇಲೆ ಹೆಚ್ಚು ಅಧಿಕಾರ, ಒಡೆತನ ಸ್ಥಾಪಿಸಿ ಕೊಂಡಿವೆ. ಕೆಳ ಜಾತಿಗಳಿಗೆ ಒಡೆತನ ಇನ್ನೂ ಸಾಧ್ಯವಾಗಿಲ್ಲ. ಮುಂದೆ ಕೂಡ ಅದು ಅಸಾಧ್ಯ. ಜಾತಿಗಳು ಆಧುನಿಕ ಸಮಾಜಗಳಲ್ಲಿ ವರ್ಗಗಳಾಗುತ್ತವೆ ಎಂಬುದು ಮೇಲು ಜಾತಿಗಳ ಸಂದರ್ಭದಲ್ಲಿ ಮಾತ್ರ ನಿಜ. ಕೆಳಜಾತಿಗಳು ಒಂದು ವೇಳೆ ವರ್ಗದ ನೆಲೆಗೆ ಬಂದರೂ ಬದಲಾವಣೆಯನ್ನು ತಾವೇ ರೂಪಿಸಿಕೊಂಡರೂ ವರ್ಗದಲ್ಲಿಯು ದಲಿತರನ್ನು ಸೇರಿಸಿಕೊಳ್ಳುವುದಿಲ್ಲ. ಅಂದರೆ ಸಾಂಪ್ರದಾಯಿಕ ಭೂ ಮಾಲೀಕ ವರ್ಗವು ಜಾತಿಯನ್ನು ಉಳಿಸಿಕೊಂಡೇ ಬಂಡವಾಳ ಶಾಹಿಯೂ ಆಗಿ ರಾಜಕೀಯ ಶಕ್ತಿಯೂ ಆಗುವ ಶಕ್ತಿಯನ್ನು ಪಡೆದುಕೊಂಡಿದೆ. ಇಂತಲ್ಲಿ ಏಕೀಕರಣೋತ್ತರ ಜಾತಿ ಮತ್ತು ಸಂಪತ್ತಿನ ಒಡೆತನದ ಪ್ರಶ್ನೆಯು ದಶಕದಿಂದ ದಶಕಕ್ಕೆ ಹೆಚ್ಚೆಚ್ಚು ಖಾಸಗೀಕರಣಗೊಳ್ಳುತ್ತಿದ್ದು ಕೆಳಜಾತಿಗಳು ದುಡಿದ ದಾಸ್ಯಕ್ಕೆ ಒಳಪಡುತ್ತಿವೆ. ಮೇಲುಜಾತಿಗಳು ಭೂಮಿಯ ಪಾಲನ್ನು ಏಕಸ್ವಾಮ್ಯದಲ್ಲಿ ದಕ್ಕಿಸಿಕೊಂಡಿರುವುದರಿಂದಲೆ ಬಡವರೂ ಹಾಗೂ ಕೆಳಜಾತಿಗಳು ಮತ್ತು ಹಿಂದುಳಿದ ಅಲ್ಪಸಂಖ್ಯಾತ ಇತರೇ ಜಾತಿಗಳು ತಮ್ಮ ಪಾಲನ್ನು ನಾಡಿನಲ್ಲಿ  ಪಡೆಯಲಾಗುತ್ತಿಲ್ಲ.

ಭೂಮಾಲೀಕರ ದಬ್ಬಾಳಿಕೆಯನ್ನು ನಿಯಂತ್ರಿಸಲು ದೇವರಾಜ ಅರಸು ಅವರು ಮಾತ್ರವೇ ಪ್ರಬಲ ಭೂಮಾಲೀಕ ಜಾತಿಗಳ ಆಸ್ತಿಹಕ್ಕಿನ ಮೇಲೆ ನಿಯಂತ್ರಣ ಹೇರಲು ಮುಂದಾದುದು. ಕಾಗೋಡು ಸತ್ಯಾಗ್ರಹ ಕೂಡ ದೂರಗಾಮಿ ಹೋರಾಟವನ್ನು ಆ ಮೊದಲೇ ನಿರ್ವಹಿಸಿ ಸಮಾಜವಾದಿ ರಾಜಕಾರಣವನ್ನು ಪ್ರತಿಪಾದಿಸಿತ್ತು. ಉಳುವವನೇ ಭೂಮಿಯ ಮಾಲೀಕ ಎಂಬ ಸಾಮಾಜಿಕ ನ್ಯಾಯದ ಕಾನೂನು ಇಂದಿರಾ ಗಾಂಧಿಯವರ ಕ್ರಾಂತಿಕಾರಕ ಆಲೋಚನೆಯಾಗಿತ್ತು. ಈ ಕಾನೂನು ಎಲ್ಲ ತಳ ಸಮುದಾಯಗಳನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿತ್ತು. ಇಂತಹ ಉದ್ದೇಶ ಕಾಂಗ್ರೆಸ್ ಪಕ್ಷಕ್ಕೂ ಒಳಗಿತ್ತು. ಗಾಂಧಿವಾದದ ದಲಿತಾಶಯವನ್ನು ಹಾಗೂ ವಿನೋಭಾ ಭಾವೆ ಅವರ ಭೂದಾನ ಚಳುವಳಿಯ ಆಶಯವನ್ನು ಇಂದಿರಾ ‘ಕಾಂಗ್ರೆಸ್’ ತನ್ನ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಎಡಪಂಥೀಯರ ಹೋರಾಟಗಳನ್ನು ಶಮನ ಮಾಡುವ ಗುರಿಯನ್ನುಹೊಂದಿತ್ತು. ಕರ್ನಾಟಕದಲ್ಲಿ ಮೊದಲ ಬಾರಿಗೆ ಭೂಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಕೃಷಿ ಕಾರ್ಮಿಕರಿಗೆ ಹೊಸ ಕನಸುಗಳನ್ನು ತೋರಲಾಯಿತು. ಮೂವತ್ತು ಲಕ್ಷಕ್ಕೂ ಮಿಗಿಲಾಗಿದ್ದ ಭೂ ಹೀನ ಕೃಷಿ ಕಾರ್ಮಿಕರಿಗೆ ಹಾಗೂ ಅಲಕ್ಷಿತ ಜಾತಿಗಳಿಗೆ ಭೂಮಿಯನ್ನು ಹಂಚುವ ಯತ್ನಗಳು ನಡೆದವು. ಆದರೆ ಈ ಕ್ರಾಂತಿಕಾರಿ ಆಲೋಚನೆಯು ಕಾರ್ಯನಿರ್ವಹಣೆಯಲ್ಲಿ ವಿಫಲವಾಯಿತು. ಪ್ರಬಲ ಜಾತಿಗಳ ರಾಜಕಾರಿಣಿಗಳಿಂದಲೂ ಆಡಳಿತಶಾಹಿಯಲ್ಲಿ ಅದೇ ಪ್ರಬಲ ಜಾತಿಗಳ ಅಧಿಕಾರಿಗಳೇ ಇದ್ದಿದ್ದರಿಂದಲೂ ಮತ್ತು ಊಳಿಗಮಾನ್ಯ ಅಲಿಖಿತ ಮೌಲ್ಯಗಳು ಗ್ರಾಮೀಣ ಸಮಾಜದಲ್ಲಿ ನಿರ್ಣಾಯಕವಾಗಿದ್ದು ಅದೇ ನಿಯಮಾವಳಿಗಳು ಜಾರಿಯಲ್ಲಿದ್ದುದರಿಂದ ಭೂಮಿಹಂಚುವ ಯತ್ನಗಳು ಈಡೇರಲಿಲ್ಲ.

ಭೂಮಿಯನ್ನು ಹಂಚುವುದು ಜಾತಿ ನಿಷ್ಠ ಸಮಾಜದಲ್ಲಿ ಸುಲಭವಲ್ಲ. ಜಾತಿಯ ಅಸ್ತಿತ್ವದಲ್ಲಿ ಶೋಷಣೆಯೂ ಬೆಸೆದುಕೊಂಡಿರುತ್ತದೆ. ಜಾತಿಗಳಿಗೆ ವಿಶೇಷವಾಗಿ ಆರ್ಥಿಕ ಅಧಿಕಾರಗಳು ಹಾಗೂ ಶಾಪಗಳು ಜೊತೆಯಾಗಿಯೇ ಬಂದಿರುತ್ತವೆ. ಊಳಿಗಮಾನ್ಯ ಜಾತಿಗಳಿಗೆ ಆರ್ಥಿಕ ಬಲವಿದ್ದರೆ ಕೆಳಜಾತಿಗಳಿಗೆ ಅದೇ ಮೇಲು ಜಾತಿಗಳ ದಬ್ಬಾಳಿಕೆಯ ಶಾಪವು ಅಂಟಿಕೊಂಡಿರುತ್ತದೆ. ಇದರಲ್ಲಿ ಖಾಸಗೀ ಆಸ್ತಿಯ ಅಧಿಕಾರವು ತಲೆಮಾರುಗಳಿಂದ ಪ್ರಾಪ್ತವಾಗಿ ದಾಸ್ಯಕ್ಕೆ ಹೀಡಾದ ಜಾತಿಗಳಿಗೆ ಬಿಡುಗಡೆಯೇ ಸಾಧ್ಯವಾಗದಂತಹ ಗ್ರಾಮೀಣ ಆರ್ಥಿಕ ಆಧಿಪತ್ಯವು ಸೆರೆ ಹಿಡಿದಿರುತ್ತದೆ. ಈ ಕವಚದಿಂದ ಬಿಡಿಸಿಕೊಳ್ಳಲು ಭೂಮಿಯ ಹಂಚಿಕೆ ಒಂದು ಉತ್ತಮ ಮಾರ್ಗ ಎಂದು ತಿಳಿದದ್ದು ಕೂಡ ಸಕಾಲಿಕವಾಗಿರಲಿಲ್ಲ. ಭೂಮಿಯನ್ನು ಪಡೆದ ಮಾತ್ರಕ್ಕೆ ಗ್ರಾಮೀಣ ಜಾತಿ ವ್ಯವಸ್ಥೆಯು ಬದಲಾಗಲಾರದು. ಹಾಗೆಯೇ ದಲಿತರು ವರ್ಗವಾಗಿ ಬಲಿಷ್ಠವಾಗಲು ದಾರಿಗಳು ತೆರೆದಿರಲಾರವು. ಈ ಹಿನ್ನೆಲೆಗಳಿಂದ ನೋಡಿದರೆ ಶ್ರೀಮತಿ ಇಂದಿರಾಗಾಂಧಿ ಅವರ ಇಪ್ಪತ್ತೊಂದು ಅಂಶಗಳ ಕಾರ್ಯಕ್ರಮವು ಭಿನ್ನಾಭಿಪ್ರಾಯಗಳ ನಡುವೆಯೇ ದೇಶದಲ್ಲಿ ಊಳಿಗಮಾನ್ಯ ಜಾತಿಗಳನ್ನು ನಿಯಂತ್ರಿಸಲು ಮಾಡಿದ ರಾಜಕೀಯ ಯತ್ನವಾಗಿತ್ತೆಂಬುದನ್ನು ಒಪ್ಪಬಹುದು.

ಆದರೆ ದೀರ್ಘಕಾಲೀನ ಬೆಳವಣಿಗೆಯಾಗಿ ಭೂಸೂಧಾರಣೆಯ ಕಾನೂನುಗಳು ಉಳಿಯಲಿಲ್ಲ. ಭೂಮಾಲೀಕರ ಮೇಲಿದ್ದ ಆಸ್ತಿ ಹಕ್ಕಿನ ನಿಯಂತ್ರಣವು ಮುಂದೆ ಸಡಿಲಗೊಂಡಿತು. ಅರಸು ಅವರ ಕಾಲದ ಭೂಮಿತಿ ಕಾಯ್ದೆಗೆ ದೇವೇಗೌಡರು ತಿದ್ದುಪಡಿ ಮಾಡಿ ಯಾರು ಎಷ್ಟು ಬೇಕಾದರೂ ಭೂಮಿಯನ್ನು ಹೊಂದಬಹುದು ಎಂಬ ಕಾನೂನುಜಾರಿಗೊಳಿಸಿದರು. ಇದು ಶ್ರಿಮಂತರ ಪರವಾದ ಹಾಗೂ ರೈತ ವಿರೋಧಿಯಾದ ನಿಯಮವಾಗಿ ಪರಿಣಮಿಸಿತು. ರಾಜಕೀಯ ವ್ಯಕ್ತಿಗಳು ಇದರಿಂದ ಎಷ್ಟಾದರೂ ಭೂಮಿಖರೀದಿಸಿ ರಾಜಕೀಯವಾಗಿ ಭೂಮಾಲೀಕತ್ವು ವೃದ್ಧಿಸಿತು. ರಾಜಕಾರಣಿಗಳು ಕೋಟಿಗಟ್ಟಲೆ ಹಣವನ್ನು ಭೂಮಿಯ ಮೇಲೆ ಹಾಕಿ ಭೂಮಾಫಿಯಾ ವಿಸ್ತರಿಸಲು ಇದರಿಂದ ಅನುಕೂಲವಾಯಿತು. ಬಡ ರೈತರ ಜಮೀನನ್ನು ಅಭಿವೃದ್ಧಿ ಹೆಸರಿನಲ್ಲಿ ಕಿತ್ತುಕೊಂಡು ಖಾಸಗೀದಾರರಿಗೆ ಮಾರಿ ಸ್ವತಃ ಸರ್ಕಾರಗಳೇ ದಲ್ಲಾಳಿಗಳಾಗಿ ಕಾರ್ಯರ್ನಿಹಿಸುತ್ತಿವೆ. ಏಕೀಕರಣೋತ್ತರ ಕರ್ನಾಟಕದ ಆರಂಭದಲ್ಲಿದ್ದ ನೈಸರ್ಗಿಕ ಸಂಪತ್ತಿನ ಮೇಲಿನ ಹಿಡಿತವು ಎಂಬತ್ತರ ದಶಕದ ವೇಳೆಗೆ ಸರ್ಕಾರಿ ರೂಪಗಳಲ್ಲೇ ಖಾಸಗೀಕರಣಗೊಳ್ಳುತ್ತಿದೆ.

ಏಕೀಕರಣೋತ್ತರ ಕರ್ನಾಟಕದಲ್ಲೀಗ ಭೂ ಹಗರಣಗಳು ಭೂಗಳ್ಳತನ, ಗಣಿಗಾರಿಕೆ, ಬೃಹತ್ ಬಿಲ್ಡರ್ಸ್‌‌ಗಳ ದಂದೆ, ಭೂ ಕಬಳಿಕೆಯ ಆವಾಂತರ ಹಾಗೂ ಪ್ರಭಾವಿ ರಾಜಕಾರಣಿಗಳ ಭೂದಾಹ ವಿಪರೀತವಾಗಿದೆ. ಏಕೀಕರಣೋತ್ತರ ಕರ್ನಾಟಕದಲ್ಲಿ ಭೂ ಮಾಫಿಯಾದ ಕಾರಣದಲ್ಲೇ ಭೂಗತ ಜಗತ್ತು ಪ್ರಬಲವಾಗಿ ಬೆಳೆಯಲು ಕಾರಣವಾಗಿದೆ. ಕೈಗಾರೀಕರಣ ಗೊಳ್ಳುತ್ತಿದ್ದಂತೆಯೇ ನಗರದ ಆಸುಪಾಸಿನ ಭೂಮಿಗಳೆಲ್ಲ ರಾತ್ರೋರಾತ್ರಿ ಶ್ರೀಮಂತರ ಪಾಲಾಗುತ್ತಿವೆ. ಆದಿವಾಸಿಗಳನ್ನು ಇನ್ನೊಂದೆಡೆ ಕಾಡಿನಿಂದಲೇ ಎತ್ತಂಗಡಿ ಮಾಡಿಸಲಾಗುತ್ತಿದೆ. ನಗರಗಳ ಭೂ ಮಾಫಿಯಾ ಕ್ರೂರವಾಗಿ ಸಾಗುತ್ತಿದೆ. ಸ್ವತಃ ಮಂತ್ರಿ ಮುಖ್ಯಮಂತ್ರಿ ಪ್ರಧಾನಿಗಳೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಾಡನ್ನು ಖಾಸಗೀಕರಣದ ಹೆಸರಲ್ಲಿ ಪ್ರಜಾಪ್ರಭುತ್ವದ ಅಡಿಯಲ್ಲಿಯೇ ಕೊಳ್ಳೆ ಹೊಡೆಯುತ್ತಿದ್ದಾರೆ. ವಿಶೇಷ ಆರ್ಥೀಕ ಅಭಿವೃದ್ಧಿ ವಲಯಗಳನ್ನಾಗಿ ಮಾಡುವ ಬೃಹತ್ ಯೋಜನೆಗಳ ನೆಪದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರದ ಕೈಯಿಂದಲೇ ಕಿತ್ತುಕೊಳ್ಳುವಂತೆ ಮಾಡುವ ಜಾಗತಿಕ ನೆಲೆಗಳೂ ಹಳ್ಳಿಗರ ಭೂಮಿಯನ್ನು ಆವರಿಸಿಕೊಳ್ಳುತ್ತಿವೆ. ಖಾಸಗೀಕರಣ, ಬಹುರಾಷ್ಟ್ರೀಯ ಕಂಪನಿಗಳು ರಾಜಕಾರಣ ಹಾಗೂ ಜಾಗತೀಕರಣಗಳು ತೀವ್ರವಾಗಿ ಕರ್ನಾಟಕದ ಎಲ್ಲೆಡೆಗೂ ವಿಸ್ತರಿಸುತ್ತಿವೆ. ಇಲ್ಲೆಲ್ಲ ಭೂಮಿಯ ಸಂಬಂಧವೇ ಮುಖ್ಯವಾಗುತ್ತಿದೆ. ಭೂಮಿಯ ಮೇಲಿನ ಹಕ್ಕು ಸ್ವಾಮ್ಯ ವಿಪರೀತವಾಗುತ್ತಿದ್ದಂತೆಯೆ ನಾಡಿನ ಸ್ವಂತಿಕೆ ಕಳೆದುಹೋಗುತ್ತದೆ. ದೇವೇಗೌಡರು ಮಾಡಿದ ಭೂ ಕಾಯ್ದೆ ತಿದ್ದುಪಡಿಯು ಕ್ರೂರವಾದ ಖಾಸಗೀಕರಣಕ್ಕೆ ಹೆಬ್ಬಾಗಿಲನ್ನು ತೆರೆದುಕೊಟ್ಟಿತು. ಏಕೀಕರಣೋತ್ತರ ಕರ್ನಾಟಕದ ಆಸ್ತಿಪಾಸ್ತಿಯ ಮೇಲೂ ಜನರ ಮೇಲೂ ಹಿಡಿತ ಸಾಧಿಸಿರುವ ಪ್ರತಿಷ್ಠಿತ ರಾಜಕಾರಣಿಗಳು ಸರ್ಕಾರವನ್ನೆ ಖಾಸಗೀಕರಿಸಿ ತಮ್ಮ ವೈಯಕ್ತಿಕ ಆಸ್ತಿಯನ್ನಾಗಿ ಮಾಡಿಕೊಂಡಿರುವುದು ಭವಿಷ್ಯಕ್ಕೆ ಮಾರಕವಾಗಿದೆ. ಒಟ್ಟಿನಲ್ಲಿ ಏಕೀಕರಣಗೊಂಡ ನಂತರದ ಕರ್ನಾಟಕದ ಆಶಯಗಳೆಲ್ಲವೂ ಭೂಮಿಯ ಖಾಸಗೀಕರಣದ ವಿಚಾರದಲ್ಲಿ ತಲೆಕೆಳಗಾಗಿವೆ. ಪ್ರಜಾಪ್ರಭುತ್ವದ ಮತದಾನದ ಮೂಲಕವೇ ಊಳಿಗಮಾನ್ಯ ರಾಜಕೀಯ ಪ್ರಭುತ್ವವು ಜಾತಿ ಆಧಾರದಲ್ಲಿ ಬಂಡವಾಳಶಾಹಿ ಯುಕ್ತಿಯಲ್ಲಿ ತಲೆ ಎತ್ತಿ ನಿಂತಿರುವುದು ಭೀತಿ ಹುಟ್ಟಿಸುವಂತಿದೆ.

ಕೊನೆಗೂ ಕರ್ನಾಟಕದ ಮೇಲಿನ ಯಜಮಾನ್ಯವು ಭೂಮಾಲೀಕ ಜಾತಿಗಳಿಗೇ ಮೀಸಲು ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂತಲ್ಲಿ ಸ್ಥಳೀಯ ಭೂಮಾಲೀಕ ಜಾತಿಗಳು ದೂರದ ಬಹುರಾಷ್ಟ್ರೀಯ ಕಂಪನಿಗಳ ಒಡೆತನದ ಮೇಲೆ ಪ್ರತಿರೋಧ ತೋರುವುದು ವಿಚಿತ್ರವಾಗಿದೆ. ಹೊರಗಿನ ಒಡೆಯನನ್ನು ಹೊಡೆದೋಡಿಸಲು ನಮ್ಮಲ್ಲಿರುವ ಪುರಾತನ ಭೂಮಾಲೀಕ ಖಾಸಗೀ ಅಧಿಪತಿಗಳಿಗೆ ದಲಿತರ ಆದಿವಾಸಿಗಳ ಅಲೆಮಾರಿಗಳ ಹಿಂದುಳಿದ ಅಲ್ಪಸಂಖ್ಯಾತ ಜಾತಿಗಳ ಬೆಂಬಲಬೇಕು. ಆದರೆ ಒಳಗಿಂದೊಳಗೆ ಇದೇ ಸಂಪ್ರದಾಯಿಕ ಭೂಮಾಲೀಕ ಖಾಸಗೀ ಅಧಿಪತಿಗಳಿಗೆ ದಲಿತರ ಆದಿವಾಸಿಗಳ ಅಲೆಮಾರಿಗಳ ಹಿಂದುಳಿದ ಅಲ್ಪಸಂಖ್ಯಾತ ಜಾತಿಗಳ ಬೆಂಬಲಬೇಕು. ಆದರೆ ಒಳಗಿಂದೊಳಗೆ ಇದೇ ಸಂಪ್ರದಾಯಿಕ ಭುಮಾಲೀಕ ಜಾತಿಗಳು ಸನಾತನ ಕಾಲದಿಂದಲೂ ಸ್ಥಳೀಯ ಸಮುದಾಯಗಳ ನೆತ್ತರು ಹೀರುತ್ತ ಅವರ ಭೂಮಿಗಳನ್ನೆಲ್ಲ ಕಬಳಿಸುತ್ತಿರುವುದು ಅನ್ಯಾಯದ ಪರಮಾವಧಿಯಾಗಿದೆ. ಹೊರಗಿನ ಮಾಲೀಕ ಒಳಗಿನ ಮಾಲೀಕ ಇಬ್ಬರೂ ಸಂದರ್ಭ ಬಂದಾಗ ಒಂದಾಗುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳ ಜೊತೆ ನಮ್ಮ ಸರ್ಕಾರಗಳ ಮಂತ್ರಿ ಮಹೋದಯರು ಕೈ ಜೋಡಿಸಿ ಆರ್ಥಿಕ ಅಪರಾಧೀಕರಣವನ್ನು ಎಗ್ಗಿಲ್ಲದೆ ಪಾಲಿಸುತ್ತಿದ್ದಾರೆ. ಇಂತಲ್ಲಿ ಭೂಹೀನ ಸಮುದಾಯಗಳ ಅರಣ್ಯರೋಧನವು ಯಾರಿಗೂ ತಟ್ಟುವುದಿಲ್ಲ. ಸರ್ಕಾರಗಳೇ ಜನ ಪ್ರತಿನಿಧಿಗಳೇ ರಾಜ್ಯವನ್ನು ಹರಾಜಿಗಿಡುತ್ತಿರುವಲ್ಲಿ ಇಲ್ಲಿನ ನೆಲಜಲ ಸಂಪತ್ತಿಗೂ ಈ ಮಣ್ಣಿಗೂ ಯಾವ ನೈತಿಕ ಮಾನವೀಯ ಸಂಬಂಧಗಳೂ ಉಳಿದಿಲ್ಲ ಎಂಬುದನ್ನು ಸೂಚಿಸುತ್ತದೆ.