ಏಕೀಕರಣಗೊಂಡಿರುವ ಕರ್ನಾಟಕದ ಒಳಗೆಯೇ ಭಿನ್ನ ಸಮಾಜಗಳಿವೆ, ಭಾಷೆಗಳಿವೆ, ಜಾತಿಗಳಿವೆ, ಲಿಂಗ ಸಂಬಂಧಗಳಿವೆ ಹಾಗೆಯೇ ಗಡಿಯ ಸಮಸ್ಯೆಗಳಿವೆ. ಹಲವು ಸಾಂಸ್ಕೃತಿಕ ವೈವಿಧ್ಯಗಳು ಕೂಡ ಇವುಗಳು ನಡುವೆಯೇ ಇದ್ದು ವಿಭಿನ್ನ ಅಲೆಮಾರಿ ಆದಿವಾಸಿ ಸಮುದಾಯಗಳೂ ಇವೆ. ಇವನ್ನೆಲ್ಲ ಅಖಂಡವಾಗಿ ಹಿಡಿದಿಟ್ಟಿರುವುದು ಯಾವುದು? ಎಂಬುದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಭಾಷೆ ಒಂದೇ ಈ ಎಲ್ಲ ಅಂಶಗಳನ್ನು ಏಕೀಕೃತಗೊಳಿಸಲಾರದು. ಒಂದು ನಿರ್ದಿಷ್ಟ ಭೌಗೋಳಿಕತೆ ಕೂಡ ಎಲ್ಲವನ್ನೂ ಒಳಗೊಳ್ಳಲಾರದು. ಆಧುನಿಕ ಸಮಾಜಗಳು ವಿಸ್ತರಿಸುತ್ತಿರುವಂತೆಯೇ ನಾಡಿನ ಗಡಿನೆಲೆಗಳು ಅಳಿಸಿಹೋಗುತ್ತಿರುತ್ತವೆ. ಭೌಗೋಳಿಕ ವ್ಯಾಪ್ತಿ ಕೂಡ ಒಂದು ತಾಂತ್ರಿಕ ಅಂಶವಾಗಿ ಬಳಕೆಯಾಗುತ್ತಿದೆ. ಭಾವನಾತ್ಮಕವಾದ ಸಂಬಂಧಗಳು ಈಗಾಗಲೆ ತೆಳುವಾಗಿದ್ದು ಅಖಂಡತೆಯು ಕೇವಲ ಭಾವನೆಯೇ ಹೊರತು ವಾಸ್ತವ ಅಲ್ಲ ಎಂಬ ಸಂಗತಿ ಆವರಿಸುತ್ತಿದೆ. ಇಂತಲ್ಲಿ ಏಕೀಕರಣಾ ನಂತರದ ಕರ್ನಾಟಕದ ಒಡಕು ದನಿಗಳು ಅನೇಕ ಪ್ರಶ್ನೆಗಳನ್ನು ಎತ್ತುತ್ತಿವೆ. ರಾಷ್ಟ್ರೀಯತೆಯ ರಾಜ್ಯ ಚಹರೆಯು ಪುನರಾವಲೋಕನಕ್ಕೆ ತೊಡಗಿದೆ. ಅಖಂಡತೆಯಲ್ಲೆ ಅನೇಕ ತಾರತಮ್ಯಗಳಿವೆ ಎಂಬುದು ಹಿಂದಿನಿಂದಲೂ ಕೇಳಿಬರುತ್ತಿರುವ ಸವಾಲು.

ಏಕೀಕರಣ ಚಳುವಳೀಯಲ್ಲೆ ಕನ್ನಡ ನಾಡಿನ ಅಖಂಡತೆಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು. ಅನಿವಾರ್ಯತೆಯಲ್ಲಿ ಕರ್ನಾಟಕ ಒಂದಾಯಿತು. ಹಳೆಯ ಮೈಸೂರಿನ ಒಕ್ಕಲಿಗರಿಗೂ ಹೈದ್ರಾಬಾದ್‌ ಕರ್ನಾಟಕದ ಲಿಂಗಾಯತರಿಗೂ ಕರ್ನಾಟಕವನ್ನು ಆಳುವ ಅಥವಾ ಕಟ್ಟಿ ತಮ್ಮ ರೀತಿಗೆ ರೂಪಿಸಿಕೊಳ್ಳುವ ಪ್ರಶ್ನೆಯಲ್ಲಿ ತಕರಾರುಗಳಿದ್ದವು. ಇದೆಲ್ಲ ತಿಳಿದಿರುವ ಸಂಗತಿ. ಆದರೆ ಏಕೀಕರಣದ ನಂತರವೂ ಈ ಬಿರುಕು ಬೇರೆ ಬೇರೆ ಸಂದರ್ಭಗಳಲ್ಲಿ ರಾಜಕೀಯವಾಗಿ ಬೆಳೆದುಕೊಂಡೇ ಬಂದಿದೆ. ಕರ್ನಾಕಟದಲ್ಲಿಂದು ಪ್ರಧಾನವಾಗಿ ಕೇಳಿ ಬರುತ್ತಿರುವ ಪ್ರತ್ಯೇಕತಾ ಕೂಗುಗಳು ಮುಖ್ಯವಾಗಿ; ಒಂದು ಹೈದ್ರಾಬಾದ್ ಕರ್ನಾಟಕದ್ದು; ಎರಡನೆಯದು ಕೊಡುಗು ಪ್ರತ್ಯೇಕತಾ ರಾಜ್ಯದ ಒತ್ತಾಯದ್ದು. ಇವೆರಡೂ ಸಮಸ್ಯೆಗಳ ಒಳಗೆ ತುಳುನಾಡು ಕೂಡ ತೋರ್ಪಡಿಸಿಕೊಳ್ಳದೆಯೇ ಪ್ರತ್ಯೇಕತಾ ಭಾವನೆಯನ್ನು ಬಿಂಬಿಸುತ್ತಿದೆ. ಈ ಮೂರು ದನಿಗಳು ಮುಖ್ಯವಾಗಿ ವೈರುಧ್ಯಗಳ ಹಿನ್ನೆಲೆಯಿಂದ ಪ್ರತ್ಯೇಕಭಾವನೆಯನ್ನು ತೋರುತ್ತಿವೆ. ಹೈದ್ರಾಬಾದ್ ಕರ್ನಾಟಕವು ಹಿಂದಿನಿಂದಲೂ ಕನ್ನಡ ನಾಡುನುಡಿಯ ಮಹತ್ವದ ಕಾಲ ಘಟ್ಟಗಳನ್ನು ನಿರ್ವಹಿಸಿದ ನಾಡು. ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯು ಬೆಳೆದಿದ್ದೇ ಈ ಪ್ರದೇಶದಲ್ಲಿ ಎಂದು ಹೆಮ್ಮೆಯಿಂದ ಹೇಳಲಾಗುತ್ತದೆ. ರಜಾಕಾರರ ದಾಳಿಗೆ ತುತ್ತಾಗಿ ಕನ್ನಡವನ್ನು ಬಿಡದೆ ಕನ್ನಡ ಸೀಮೆಯನ್ನು ಉಳಿಸಿಕೊಂಡ ಹೆಗ್ಗಳಿಕೆಯೂ ಈ ಸೀಮೆಗೆ ಸಲ್ಲುತ್ತದೆ. ವಿಶೇಷವಾಗಿ ಏಕೀಕರಣಕ್ಕಾಗಿ ಹೋರಾಡಿದ್ದು ಕೂಡ ಹೈದ್ರಾಬಾದ್ ಕರ್ನಾಟಕವೇ. ಇಂತಹ ಹಿನ್ನೆಲೆ ಇರುವ ಈ ಸೀಮೆಯೇ ಇಂದು ಏಕೀಕರಣದ ಒಳಗಿಂದ ಬೇರ್ಪಡಲು ಬಯಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಹಳೆ ಮೈಸೂರಿನ ವಕ್ಕಲಿಗ ರಾಜಕಾರಣಿಗಳ ತಾರತಮ್ಯ ಎಂದು ಹೇಳಲಾಗುತ್ತಿದೆ. ಬಹಳ ಹಿಂದೆಯೇ ಏಕೀಕರಣದ ಭಿನ್ನಾಭಿಪ್ರಾಯದ ಸೇಡನ್ನು ಹೈದ್ರಾಬಾದ್ ಕರ್ನಾಟಕದ ಮೇಲೆ ಹಳೇ ಮೈಸೂರಿನ ರಾಜಕಾರಿಣಿಗಳು ತೀರಿಸಿಕೊಂಡರು ಎಂದು ಹೈದ್ರಾಬಾದ್ ಕರ್ನಾಟಕದವರು ಆರೋಪಿಸುವುದುಂಟು. ಈ ಸೇಡಿನ ಭಾವನೆ ವಿಶೇಷವಾಗಿ ರಾಜಕಾರಣಿಗಳಲ್ಲಿ ಉಳಿದುಕೊಂಡಿತು. ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ, ಸ್ಥಾನಮಾನಗಳ ಹಿನ್ನೆಲೆಯಲ್ಲಿ, ಅಧಿಕಾರಿಗಳ ನೇಮಕದಲ್ಲಿ ಹಾಗೂ ರಾಜಕೀಯ ಪ್ರಾತಿನಿಧ್ಯದಲ್ಲಿ ಎರಡೂ ಭಾಗದ ರಾಜಕಾರಣಿಗಳಲ್ಲಿ ಸಹಮತ ಉಂಟಾಗಿದ್ದು ಬಹಳ ಕಡಿಮೆ.

ಹೀಗಾಗಿ ಹೈದ್ರಾಬಾದ್ ಕರ್ನಾಟಕವು ಮಾನಸಿಕ ಅಂತರವನ್ನು ಈಗಲೂ ಎಲ್ಲ ನೆಲೆಗಳಲ್ಲು ಉಳಿಸಿಕೊಳ್ಳುವಂತಾಗಿದೆ. ಪ್ರತ್ಯೇಕ ಧ್ವಜಾರೋಹಣ ಮಾಡುವ ಮಟ್ಟಕ್ಕೆ ಭಿನ್ನತೆಯು ಉಂಟಾಗಿರುವುದು ನಾಡಿನ ಅಖಂಡತೆಯ ವೈಫಲ್ಯವನ್ನು ಸೂಚಿಸುತ್ತಿದೆ. ಭಾಷೆ ಮತ್ತು ಸಂಸ್ಕೃತಿಗಳು ಒಂದಾಗಿದ್ದರೂ ಕೂಡ ಏಕೀಕರಣದ ಬಂಧ ಸಡಿಲವಾಗಿವುದು ಮೂಲತಃ ರಾಜಕೀಯ ಹಿನ್ನೆಲೆಯಿಂದಲೇ ಎಂಬುದು ಸ್ಪಷ್ಟವಾಗುತ್ತಿದೆ. ಒಂದು ನಾಡಿನ ನಿಜವಾದ ಬದ್ಧತೆ ಇಲ್ಲದಿದ್ದರೂ ಹೀಗಾಗುತ್ತದೆ. ರಾಷ್ಟ್ರೀಯತೆಯ ಭಾವೈಕ್ಯತೆಯ ಕೊರತೆಯನ್ನೂ ಇದು ಧ್ವನಿಸುತ್ತಿದೆ. ಸ್ವಾರ್ಥ ಭಾವನೆ ಹೆಚ್ಚಾದಂತೆಲ್ಲ ನಾಡಿನ ಹಿತ ಹಿಂದೆ ಸರಿಯುತ್ತದೆ. ಖಾಸಗೀಕರಣದ ಪರಿಣಾಮ ಕೂಡ ಇಲ್ಲಿ ಇಂತಹ ಒಡಕು ಭಾವನೆಯನ್ನು ಬೆಳೆಸುತ್ತದೆ. ರಾಜಕಾರಣಿಗಳು, ಉದ್ಯಮಿಗಳು ನಾಡನ್ನು ಖಾಸಗೀಕರಿಸಿಕೊಂಡು ಕನ್ನಡ ನಾಡನ್ನೆ ತಮ್ಮ ಸ್ವಂತದ್ದೆಂಬಂತೆ ಬಂಡವಾಳಶಾಹಿ ರಾಜಕಾರಣವನ್ನೂ ಸರ್ವಾಧಿಕಾರಿ ಹಾಗೂ ಪುರೋಗಾಮಿ ನಡತೆಗಳನ್ನೂ ಹೆಚ್ಚಿಸಿಕೊಂಡಂತೆಲ್ಲ ರಾಜ್ಯದ ಭಾವನಾತ್ಮಕ ಸಂಬಂಧ ಕಿತ್ತು ಹೋಗುತ್ತದೆ. ದೇಶದ ಉದ್ದಕ್ಕೂ ಇಂತಹ ಪ್ರತ್ಯೇಕತಾ ಭಾವನೆಯು ತೀವ್ರವಾಗಿ ಉಂಟಾಗುತ್ತಿರುವುದನ್ನು ನೋಡಿದರೆ ಕರ್ನಾಟಕದ ಪ್ರತ್ಯೇಕತಾ ಚಳುವಳಿಯು ಸೌಮ್ಯ ಸ್ವರೂಪದ್ದು. ಹೈದ್ರಾಬಾದ್ ಕರ್ನಾಟಕದ ಪ್ರತ್ಯೇಕತಾ ಭಾವನೆಯು ರಾಜಕೀಯ ನೆಲೆಗಳಲ್ಲಿ ಸಮರ್ಥ ಕಾರಣಗಳನ್ನು ಇಟ್ಟುಕೊಂಡಿದೆ. ಸಾಂಸ್ಕೃತಿಕ ವ್ಯತ್ಯಾಸಗಳು ಇಲ್ಲಿ ಪ್ರಮುಖವಾಗಿಲ್ಲ. ಭೌಗೋಳಿಕ ಹಾಗೂ ಚಾರಿತ್ರಿಕ ಹಿನ್ನೆಲೆಗಳು ಕೂಡ ಸಾಕಷ್ಟು ಪ್ರಭಾವಿಯಾಗಿ ಪ್ರತ್ಯೇಕತಾ ಚಿಂತನೆಗೆ ಪೂರಕವಾಗಿವೆ. ಜಾತಿಯ ಮಾನದಂಡವು ಬಲವಾಗಿ ಬೇರುಬಿಟ್ಟಿದೆ. ಆಡಳಿತಾತ್ಮಕ ಸಮಸ್ಯೆಗಳೂ ಇಲ್ಲಿ ಜೊತೆಗೂಡಿವೆ. ಇವನ್ನೆಲ್ಲ ಮೀರಿದ್ದು ರಾಷ್ಟ್ರೀಯತೆ. ಈ ಭಾವನೆಯೇ ಭಾಗಶಃ ಭಾರತದ ಯಾವ ರಾಜ್ಯಗಳಿಗೂ ಇಲ್ಲ ಎನಿಸುತ್ತದೆ. ಸ್ಥಳೀಯತೆಯೆ ಎಲ್ಲ ಸಮುದಾಯಗಳಿಗೆ ಹಿತವೆನಿಸಿದೆ. ವಿಸ್ತಾರವಾದ ನಾಡು ನುಡಿಯ ಭಾವನೆಗಳು ಇಲ್ಲದಿರುವುದು ವಿಷಾದಕರ, ಜಾತಿಗಳೇ ನಾಡಾಗಿ, ರಾಷ್ಟ್ರವೆ ಮತೀಯ ವ್ಯವಸ್ಥೆಯಾಗಿ ಮುಂದೆ ಇಡೀ ದೇಶವನ್ನೆ ಇನ್ನಷ್ಟು ಛಿದ್ರಗೊಳಿಸಬಲ್ಲವು. ಪರೋಕ್ಷವಾಗಿ ಸರ್ಕಾರದ ರಾಜಕೀಯ ರೀತಿ ನೀತಿಗಳೇ ಪ್ರತ್ಯೇಕತೆಗೆ ಬೇಕಾದ ವಾತಾವರಣವನ್ನು ಉಂಟು ಮಾಡುತ್ತಿರುತ್ತವೆ.

ಕೊಡಗಿನ ಪ್ರತ್ಯೇಕತಾ ಧೋರಣೆಯು ಭಿನ್ನ ರೀತಿಯದು. ವಿಶೇಷವಾಗಿ ಕೊಡಗು ಸಾಂಸ್ಕೃತಿಕ ನೆಲೆಯಲ್ಲಿ ಕನ್ನಡ ನಾಡಿಗಿಂತ ಬೇರೆಯಾದುದು. ಕೊಡವ ನಾಡು ಜನಾಂಗೀಯವಾಗಿ, ಭಾಷಿಕವಾಗಿ, ಭೌಗೋಳಿಕವಾಗಿ, ಚಾರಿತ್ರಿಕ, ಸಾಮಾಜಿಕ, ಆರ್ಥಿಕ ವಾಗಿಯು ಕನ್ನಡ ಸಮಾಜಕ್ಕೆ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಕನ್ನಡ ನಾಡಿನ ಭಾಗವಾಗಿ ಈ ತನಕ ಕೊಡಗಿನ ಸಮಜ ಸಹಕರಿಸಿರುವುದು ವಿಶೇಷವಾಗಿದೆ. ಕೊಡಗಿನ ಪ್ರತ್ಯೇಕತೆ ಹಿಂದಿನಿಂದಲೂ ಇದ್ದ ಭಾವನೆಯೇ ಆಗಿತ್ತು. ಏಕೀಕರಣದ ಸಂದರ್ಭದಲ್ಲಿದ್ದ ರಾಜಕೀಯ, ಆರ್ಥಿಕ ಸಂಬಂಧಗಳು ಏಕೀಕರಣೋತ್ತರ ಕಾಲದಲ್ಲಿ ಸೂಕ್ತವಾಗಿಲ್ಲದೇ ಹೋದದ್ದರಿಂದ ಕೊಡಗಿನವರ ನಿರೀಕ್ಷೆಗಳು ಹಿಡೇರಿರಲಿಲ್ಲ. ಕರ್ನಾಟಕದ ಜೊತೆ ಅವಿನಾಭಾವ ಸಂಬಂಧ ರೂಪುಗೊಳ್ಳಬೇಕಾದಲ್ಲಿ ಬಿರುಕುಗಳೇ ಹೆಚ್ಚಿದವು. ಕೊಡಗಿನ ಒಳಗೆ ಕೇರಳಿಗರ ಪ್ರಭಾವೂ ಹೆಚ್ಚಾಯಿತಲ್ಲದೆ ಕೊಡವ ಸಮಾಜದ ಆರ್ಥಿಕತೆಯ ಮೇಲೆ ಕೇರಳಿಗರ ದಬ್ಬಾಳಿಕೆಯೂ ನಡೆಯುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದವು. ಕರ್ನಾಟಕದ ಅಭಿವೃದ್ಧಿಯಲ್ಲಿ ಕೊಡಗನ್ನು ನಿರ್ಲಕ್ಷಿಸಲಾಗಿದೆ ಎಂಬುದು ನಿತ್ಯದ ಹೇಳಿಕೆಯೂ ಆಯಿತು. ಬಿರುಕಿನ ಲಾಭ ಪಡೆಯಲು ರಾಜಕೀಯ ನಾಯಕರು, ಸ್ಥಳೀಯ ಸಂಘಟನೆಗಳೂ ಮುಂದಾದವು. ಪ್ರತ್ಯಕತೆಯ ಬಿಕ್ಕಟ್ಟಿನಲ್ಲಿ ಕೊಡಗಿನದು ವಿಶೇಷ ಪ್ರಶ್ನೆಯಾಗಿಯೇ ಉಳಿದೆ. ಅಖಂಡವಾದ ಕರ್ನಾಟಕದ ರಾಜಕಾರಣ ಮತ್ತು ಅಭಿವೃದ್ಧಿಯ ಯೋಜನೆಗಳು ಇಲ್ಲದಿರುವುದರಿಂದಲೇ ಇಂತಹ ಪ್ರಶ್ನೆಗಳು ಮೇಲೇಳಲು ಕಾರಣ. ನಂಜುಂಡಪ್ಪ ವರದಿಯು ಈ ಹಿನ್ನೆಲೆಯಲ್ಲಿ ತಕ್ಕ ಕಾರ್ಯಸೂಚಿಗಳನ್ನು ನೀಡಿದ್ದರೂ ಅವನ್ನು ನಿರ್ವಹಿಸುವಲ್ಲಿ ಸರ್ಕರಗಳು ವಿಫಲವಾಗುತ್ತಲೇ ಇವೆ. ಪ್ರತ್ಯೇಕತಾ ಧೋರಣೆಗಳನ್ನು ನಿವಾರಿಸಲು ಬೇಕಾದ ಆರ್ಥಿಕ ಕಾರ್ಯಗಳು ಸಮರ್ಥವಾಗಿ ಜಾರಿಯಾಗದಿದ್ದರೆ ಭಿನ್ನತೆ ಮತ್ತಷ್ಟು ಹೆಚ್ಚುತ್ತದೆ.

ಪ್ರತ್ಯೇಕತಾ ವಾದವು ಏಕೀಕರಣಕ್ಕೆ ವಿರುದ್ಧ ಎಂದೇನೂ ಭಾವಿಸಬೇಕಾದ್ದಿಲ್ಲ. ಜಗತ್ತಿನ ರಾಷ್ಟ್ರಗಳ ಏಕೀಕರಣ ಹಾಗೂ ಪ್ರತ್ಯೇಕತಾ ಹೋರಾಟಗಳನ್ನು ಗಮನಿಸಿದರೆ; ಪ್ರತಿಯೊಂದು ನಿರ್ದಿಷ್ಟ ಸಾಂಸ್ಕೃತಿಕ ಹಿನ್ನೆಲೆಯ ಸಮುದಾಯವೂ ತನ್ನ ಅಸ್ತಿತ್ವಕ್ಕಾಗಿ ಒಂದು ಒಪ್ಪಂದವನ್ನು ದಾಟಿ ಪ್ರತ್ಯೇಕ ಅಸ್ತಿತ್ವಕ್ಕಾಗಿ ಯತ್ನಿಸುವುದು ತಪ್ಪಲ್ಲ. ರಾಜಕೀಯ ತಾರತಮ್ಯ ಮತ್ತು ಸಾಂಸ್ಕೃತಿಕ ಹೇರಿಕೆಗಳು ಕೂಡ ಒಂದು ಜನವರ್ಗವನ್ನು ಪ್ರತ್ಯೇಕತಾ ಭಾವನೆಗೆ ಒಳಪಡಿಸಬಲ್ಲವು. ಕೊಡವ ಸಮಾಜದ ಮೇಲಿನ ಕನ್ನಡದ ಒತ್ತಡಗಳು ಯಾವುದೇ ಅಲ್ಪಸಂಖ್ಯಾತ ಭಾಷೆ, ಸಮಾಜ, ಸಮುದಾಯದ ಭವಿಷ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸೂಕ್ತ ಒಪ್ಪಂದ ಮತ್ತು ಬದ್ಧತೆಗಳು ಇಂತಲ್ಲಿ ಸರಿಯಾಗಿ ಹೊಂದಾಣಿಕೆಯಿಂದ ಜಾರಿಯಾಗದಿದ್ದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ತೊಂದರೆಯಾಗುತ್ತದೆ. ಕೊಡವ ಸಮಾಜದ ಪ್ರತ್ಯೇಕತೆಯ ಕಾರಣಗಳು ಈ ರೂಪದಲ್ಲೇ ವ್ಯಕ್ತವಾಗಿರುವುದು. ಪ್ರಧಾನ ಹಾಗೂ ಅಧೀನ ಎಂಬ ನಂಬಿಕೆಗಳೂ ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಪ್ರಧಾನ ಕನ್ನಡ ರಾಜಕಾರಣದಿಂದ ಕೊಡವ ನಾಡಿಗೆ ತಾರತಮ್ಯ ಉಂಟಾಗಿದೆ ಎಂಬುದು ವರದಿಗಳಿಂದ ಸ್ಪಷ್ಟವಾಗಿದೆ.

ಈ ಹಿನ್ನೆಲೆಯಲ್ಲೆ ತುಳು ನಾಡಿನ ಭಿನ್ನ ಮನೋವರ್ತನೆಯನ್ನು ಗಮನಿಸಬಹುದು. ತುಳುನಾಡಿನ ಪ್ರತ್ಯೇಕತಾ ಹೋರಾಟಗಳು ಘಟಿಸಿಲ್ಲವಾದರೂ ಅಘೋಷಿತ ಪ್ರತ್ಯೇಕತಾ ಸ್ವಭಾವ ಕಂಡುಬರುತ್ತದೆ. ತುಳುನಾಡು ಕರ್ನಾಟಕದ ಬೆಳಗಿದ್ದು ಕೊಂಡೇ ಹೊರಗಿರುವಂತೆ ಕಾಣುತ್ತದೆ. ಅಂದರೆ ತನ್ನಸಾಂಸ್ಕೃತಿಕ ಅನನತ್ಯತೆಯನ್ನು ಸ್ಥಾಪಿಸಿಕೊಳ್ಳುವ ಮೂಲಕ ತುಳುನಾಡು ಕನ್ನಡದ ಯಜಮಾನಿಕೆಯನ್ನು ಎದುರಿಸಿದೆ. ತಾನು ಪ್ರತ್ಯೇಕನಾಗಬೇಕು ಎಂದು ಪ್ರತಿರೋಧಿಸುವ ಬದಲು ತನ್ನ ಇರುವಿಕೆಯೆ ಪ್ರತ್ಯೇಕ ಸ್ವಭಾವದ್ದು ಎಂಬ ಜಾಣ್ಮೆ ಮತ್ತು ಹೊಂದಾಣಿಕೆಯ ಕೌಶಲ್ಯವನ್ನು ತುಳುನಾಡು ಕಂಡುಕೊಂಡಿದೆ. ಸಾಂಸ್ಕೃತಿಕ ಚಾರಿತ್ರಿಕ ಭೌಗೋಳಿಕ ಭಾಷಿಕ ಅನನ್ಯತೆಗಳನ್ನು ಸಮರ್ಥವಾಗಿಉಳಿಸಿಕೊಂಡಿದೆ. ತನ್ನ ಮೇಲಿನ ಇತರೆ ಒತ್ತಡ ಪ್ರಭಾವ ಹೇರಿಕೆ ನಿಯಂತ್ರಣ ಯಜಮಾಣಿಕೆಗಳನ್ನು ತುಳುನಾಡು ನಿರಾಕರಿಸಿ ತನಗೇ ವಿಶಿಷ್ಟವೆನಿಸುವ ಜೀವನ ವಿಧಾನವನ್ನು ರೂಢಿಸಿಕೊಂಡಿದೆ. ಹಾಗೆ ನೋಡಿದರೆ ತುಳು ಸಮುದಾಯಗಳೇ ಕರ್ನಾಟಕದ ಅನನ್ಯತೆಯನ್ನು ಗಟ್ಟಿಯಾಗಿ ಉಳಿಸಿಕೊಂಡಿರುವ ಸಮುದಾಯಗಳು. ಹಳೆಯ ಮೈಸೂರಿನ ಅಪ್ಪಟ ಕನ್ನಡಿಗ ಸಮುದಾಯಗಳು ಕಲುಷಿತ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಿರುವಾಗ ತುಳುನಾಡು ಕರ್ನಾಟಕತ್ವದ ಮೂಲ ಗುಣಗಳನ್ನು ಈಗಲೂ ಮುಂದುವರಿಸಿಸುತ್ತ ಬಂದಿರುವುದು ವಿಶಿಷ್ಟವಾಗಿದೆ.

ಈ ಬಗೆಯಲ್ಲಿ ತುಳುನಾಡು ಕನ್ನಡದ ರಾಜಕೀಯ ಯಜಮಾನಿಕೆಯನ್ನು ಭಾಷಿಕ ಮೇಲರಿಮೆಯನ್ನು ದಾಟಿದೆ. ಕೊಡವ, ತುಳು, ಕೊಂಕಣಿ ಈ ಮೂರೂ ಭಾಷೆಯ ಸಮುದಾಯಗಳು ಕನ್ನಡ ನಾಡಿನ ವಿಶಿಷ್ಠ ಚಹರೆಗಳು. ಇವುಗಳನ್ನು ಉಪೇಕ್ಷಿಸಿ ಕನ್ನಡ ನಾಡು ಬೆಳೆಯಲಾಗದು. ಪ್ರತ್ಯೇಕ ಭಾವನೆಯನ್ನು ಬಗೆಹರಿಸಲು ಅಭಿವೃದ್ಧಿಯ ಆತ್ಮೀಯ ಕ್ರಿಯಾಶೀಲತೆಯೆ ಮದ್ದು. ತುಳುನಾಡಿನ ಸಮುದಾಯಗಳು ಕನ್ನಡದ ಜೊತೆ ಸಜ್ಜನ ಸಂಬಂಧ ರೂಢಿಸಿಕೊಂಡಿವೆ. ಕನ್ನಡದ ಅನನ್ಯತೆಯನ್ನು ಒಪ್ಪಿವೆ. ಕನ್ನಡ ಸಂಸ್ಕೃತಿಯ ಜೊತೆ ಸಾಮರಸ್ಯದ ಅನುಸಂಧಾನ ಮಾಡಿಕೊಂಡು ಕನ್ನಡ ನಾಡಿನ ಅಖಂಡತೆಯಲ್ಲೆ ತುಳುನಾಡು ಘನತೆಯನ್ನು ಕಾಯ್ದುಕೊಂಡಿದೆ. ಇದು ತುಳು ಸಮಾಜದ ಹೊಂದಾಣಿಕೆ. ಇಂತಹ ಹೊಂದಾಣಿಕೆಯನ್ನು ಯಾವುದೇ ಯಾಜಮಾನ್ಯವು ಅತಿಕ್ರಮಿಸಬಾರದು. ಕನ್ನಡ ಪ್ರಭುತ್ವ ತುಳುಸಂಸ್ಕೃತಿಯನ್ನು ಕೂಡ ಗೌರವಿಸುತ್ತ ಬಂದಿದೆ. ಕನ್ನಡನಾಡು ಬೆಳೆಯಬೇಕಾದುದೇ ಹೀಗೆ. ಹಲವು ಸಂಸ್ಕೃತಿಗಳ ಸಂಗಮ ಸಂಬಂಧವೇ ನಾಡಿನ ಪ್ರತಿರೂಪ. ಒಂದೇ ಭಾಷೆ, ಜಾತಿ, ವರ್ಗ, ವರ್ಣ, ಒಂದೇ ಆಡಳಿತ, ಮತಧರ್ಮ ಜೀವನದ ಪದ್ಧತಿಗಳು ಮಾತ್ರವೇ ಒಂದು ನಾಡಿನ ನಿರ್ಮಾಣಕ್ಕೆಸೂಕ್ತವಲ್ಲ. ಬಹುರೂಪಿ ಯಾದ ಕ್ರಮಗಳಲ್ಲಿ ಇವೆಲ್ಲ ಇದ್ದಾಗಲೇ ನಾಡು ಸುಭದ್ರವಾಗಿರಲು ಸಾಧ್ಯ. ಏಕರೂಪಿಯಾದುದು ಬಹಳ ಕಾಲ ಬದುಕಲಾರದು. ಬಹುರೂಪವೇ ನಾಡಿಗೆ ಇರಬೇಕಾದದ್ದು. ಆದರೆ ಬಹುರೂಪಿ ಜೀವನ ಮೌಲ್ಯಗಳು ನಿರ್ವಹಿಸಬೇಕಾದದ್ದು ಸಾಮರಸ್ಯ ಸಂಬಂಧವನ್ನೆ. ಹೊಂದಾಣಿಕೆಯ ಅರ್ಥಪೂರ್ಣತೆಯನ್ನೆ. ಕೂಡಿ ಬಾಳುವ ಗುಣವನ್ನೆ. ಸರ್ವೋದಯ ನೀತಿಯೇ ಇಲ್ಲಿ ಇರಬೇಕಾದುದು. ಏಕೀಕರಣದ ಮೂಲ ಆಶಯವು ಇದೇ ಆಗಿತ್ತು. ಮುಂದೆ ಕೂಡ ಇದೇ ಇರಬೇಕಾದುದು. ಇಂತಹ ನೀತಿಯಾವಾಗ ಸಡಿಲಗೊಳ್ಳುತ್ತದೊ ಆಗ ಪ್ರತ್ಯೇಕತೆಯ ಬಿರುಕು ಕಾಣಿಸಿಕೊಳ್ಳುತ್ತದೆ.

ಸಮರ್ಥ ಸಮಗ್ರ ರಾಜಕಾರಣ ಮಾತ್ರ ಒಂದು ನಾಡಿನ ಅಖಂಡತೆಯನ್ನು ಸಾಧಿಸಬಲ್ಲದು. ಇದಕ್ಕೆ ಆ ನಾಡಿನ ಜನರ ಇಚ್ಛಾಶಕ್ತಿಯು ಬೇಕು. ಇಪ್ಪತ್ತೊಂದನೆ ಶತಮಾನದಲ್ಲಿ ದೇಶದ ಸ್ವರೂಪವೇ ಬದಲಾಗುತ್ತಿದ್ದು, ರಾಜ್ಯ ಎನ್ನುವುದೇ ಒಂದು ಅಭಿವೃದ್ಧೀ ರಾಜಕಾರಣದ ಸಂಸ್ಥೆ ಎನಿಸುತ್ತಿದೆ. ಇದು ಅಪಾಯಕಾರಿಯಾದುದು. ನಾಡಿನ ಅರ್ಥ ಇಲ್ಲಿ ಸಮೂಹ ಶಕ್ತಿಗೆ ಬದಲಾಗಿ ವ್ಯಕ್ತಿ ನಿಷ್ಠ ಶಕ್ತಿಯಾಗಿ ಮಾರ್ಪಡುತ್ತಿದೆ. ವ್ಯಕ್ತಿವಾದಿಗಳಂತೆಯೇ ರಾಜ್ಯಗಳು ಕೂಡ ರೂಪಾಂತರಗೊಳ್ಳುತ್ತಿವೆ. ಇದರಿಂದಲೇ ಏಕೀಕರಣದ ಸೂತ್ರ ಕಳಚಿ ಹೋಗುವುದು. ಅಖಂಡತೆಯು ಭಗ್ನವಾಗುವುದು. ಒಂದು ರಾಜ್ಯ ಕೇವಲ ಒಂದು ಪ್ರಬಲ ಜಾತಿ, ರಾಜಕೀಯ ಪಕ್ಷದ ನಾಯಕ ಇಲ್ಲವೇ ಒಂದು ಬಂಡವಾಳಶಾಹಿ ವ್ಯವಸ್ಥೆಯ ಹಿಡಿತಕ್ಕೆ ಸಿಲುಕಿದರೆ ನಾಡು ಕೂಡ ಖಾಸಗೀ ವ್ಯವಸ್ಥೆಯ ರಾಜಕಾರಣವನ್ನು ಮಾಡಬೇಕಾಗುತ್ತದೆ. ಬಿರುಕು ಮೂಡುವುದೇ ಇಂತಹ ದಾರಿಗಳಲ್ಲಿ. ಏಕೀಕರಣೋತ್ತರ ಕರ್ನಾಟಕದ ಭವಿಷ್ಯವು ಈ ಅಪಾಯವನ್ನು ಮೀರಿಯೇ ಆಕಾರಗೊಳ್ಳಬೇಕಿದೆ.

ಹೀಗೆ ಎಪ್ಪತ್ತರ ದಶಕದ ಕರ್ನಾಟಕದ ಹಿನ್ನೆಲೆಯಲ್ಲಿ ಸ್ಥೂಲವಾಗಿ ಕರ್ನಾಟಕದ ಮಹತ್ವದ ಪಲ್ಲಟಗಳನ್ನು ನಾಡುನುಡಿಯ ಹಿನ್ನೆಲೆಯಲ್ಲಿ ಪರಿಶೀಲಿಸಬಹುದು. ಎಪ್ಪತ್ತರ ದಶದಲ್ಲಿದ್ದ ಬಹುರೂಪಿ ಎಚ್ಚರ, ಹೊಂದಾಣಿಕೆ, ಕೂಡಿ ಕಟ್ಟುವ ತವಕ ಸರಳಗೊಳ್ಳುತ್ತ ಬಂದಿರುವುದನ್ನು ಗಮನಿಸಬಹುದು. ಕರ್ನಾಟಕದ ಏಕೀಕರಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪಯಣ ದುರ್ಗಮವಾಗಿದೆ. ಹೊಸ ಯುಗದ ಸವಾಲುಗಳ ಜೊತೆಗೆ ಅಖಂಡ ಕರ್ನಾಟಕವನ್ನು ಮುನ್ನಡೆಸಲು ಬೇಕಾದ ಅಭಿವೃದ್ಧಿಯ ವಿಕಾಸ ಹಾಗೂ ನೈತಿಕತೆಯು ತುಂಬ ಅಗತ್ಯವಾಗಿದೆ.

* * *