ಗೆಳೆಯ ಡಾ.ಸಿ.ಆರ್. ಗೋವಿಂದರಾಜು ಅವರು ಏಕೀಕರಣೋತ್ತರ ಕರ್ನಾಟಕದ ಸಾಹಿತ್ಯ ಮತ್ತು ಸಮಾಜ ಕುರಿತಂತೆ ಒಂದು ಲೇಖನ ಬರೆದುಕೊಡಲು ಸಹಜವಾಗಿ ಕೇಳಿದರು. ಸುವರ್ಣ ಕರ್ನಾಟಕ ವರ್ಷಾಚರಣೆಯ ಭಾಗವಾಗಿ ‘ಚಾರಿತ್ರಿಕ ಕರ್ನಾಟಕ’ ಸಂಪುಟವನ್ನು ಅವರು ಸಿದ್ಧಪಡಿಸುತ್ತಿದ್ದರು. ಆ ಸಂಪುಟದಲ್ಲಿ ನನ್ನ ಒಂದು ಲೇಖನ ಇರಬೇಕು ಎಂಬುದು ಅವರ ಕಾಳಜಿಯಾಗಿತ್ತು. ಬರೆದುಕೊಡಲು ತೀರ್ಮಾನಿಸಿದೆನಾದರೂ; ಅರ್ಧಶತಮಾನದ ಕಾಲಾವಧಿಯ ಸಾಹಿತ್ಯ, ಸಮಾಜ, ರಾಜಕಾರಣ, ಸಂಸ್ಕೃತಿ, ಭಾಷೆ ಕುರಿತಾದ ವಿಸ್ತಾರ ವಿಷಯವನ್ನು ಒಂದು ಪುಟ್ಟ ಲೇಖನ ಮಾಡಲು ಸಾಧ್ಯವಿಲ್ಲ ಎಂದು ನಿರಾಸಕ್ತಿ ವಹಿಸಿದೆ. ಜೊತೆಗೆ ಚರಿತ್ರಕಾರರಿಗೆ ಒಗ್ಗುವಂತೆ ಬರೆಯುವ ಆಕರ ಪ್ರಧಾನ ವಿಧಾನವೂ ನನ್ನದಾಗಿರಲಿಲ್ಲ. ಮಿತ್ರ ಗೋವಿಂದರಾಜು ಪ್ರೀತಿಯಿಂದ ‘ಏನೊ ಒಂದತ್ತು ಪುಟ ಬರೆದು ಕೊಡಿ’ ಎಂದು ಒತ್ತಾಯಿಸಿದರು. ಏಕೀಕರಣೋತ್ತರ ಕರ್ನಾಟಕದ ವಾಸ್ತವ ಚರಿತ್ರೆಯನ್ನು ಕುರಿತು ಬರೆಯಲು ಬೇಕಾದ ಸಿದ್ಧತೆಗಳೇ ನನಗೆ ಆಗಿರಲಿಲ್ಲ. ಪ್ರಯತ್ನಿಸಲು ತೊಡಗಿದೆ. ನಾನು ಯಾವತ್ತೂ ಮಾಡುವಂತೆ ಚರಿತ್ರೆಯ ವರ್ತಮಾನದಿಂದ ಅದರ ಗತಕಾಲವನ್ನು ಪ್ರವೇಶಿಸುವ ಕ್ರಮವನ್ನು ಆಯ್ಕೆ ಮಾಡಿಕೊಂಡೆ. ಹಾಗೆಯೆ ಭೌತಿಕ ವಿವರಗಳಿಗಿಂತ ಅಂತಹ ಭೌತಿಕ ಸಾಕ್ಷ್ಯದ ಅಂತರಂಗವನ್ನು ಅರಿತು ಅದರ ಗ್ರಹಿಕೆಯಿಂದೆ ಬರುವ ತಿಳುವಳಿಕೆಯಿಂದ ಗತಕಾಲವನ್ನು ಅನುಸಂಧಾನ ಮಾಡತೊಡಗಿದೆ. ಕೆಲವೇ ದಿನಗಳಲ್ಲಿ ಬರೆದು ಮುಗಿಸಿದೆ. ಲೇಖನ ಬರೆದಾಯ್ತೆ ಎಂದು ಗೋವಿಂದರಾಜು ವಿಚಾರಿಸಿದರು. ‘ಇನ್ನೂರು ಪುಟಗಳ ವಿಸ್ತಾರವಾದ ಲೇಖನವನ್ನೆ ಬರೆದಿರುವೆ, ತೆಗೆದುಕೊಳ್ಳಿ’ ಎಂದೆ ಅವರಿಗೆ ತಮಾಷೆ ಎನಿಸಿತ್ತು. ಅವರು ನಗಾಡಿದರು. ನಾನು ತುಂಬ ಗಂಭೀರವಾಗಿ ಬರವಣಿಗೆಯಲ್ಲಿ ಮುಳುಗಿದ್ದರಿಂದ ಬರಹದ ಸೃಜನಶೀಲ ಓಘದಲ್ಲಿ ವಿಸ್ತರಿಸಿಕೊಂಡಿದ್ದೆ. ಹಸ್ತಪ್ರತಿಯನ್ನೆ ಅವರ ಕೈಗಿತ್ತು ಇದರಲ್ಲಿ ಯಾವ ಭಾಗ ನಿಮಗೆ ಬೇಕೆನಿಸುತ್ತೋ ಆ ಭಾಗವನ್ನು ಬಳಸಿಕೊಳ್ಳಿ ಎಂದೆ. ಹಸ್ತಪ್ರತಿ ಓದಿದ ಅವರು ನಿರಂತರವಾಗಿ ಸಾಗಿರುವ ಈ ಬರಹವನ್ನು ತುಂಡು ಮಾಡಿ ಬಳಸುವುದು ಬೇಡ, ನೀವೇ ಇದನ್ನು ಇಡಿಯಾಗಿ ಪ್ರಕಟಿಸಿಬಿಡಿ ಎಂದು ಹಿಂತಿರುಗಿಸಿದರು. ನನಗೂ ಹಾಗೇ ಎನಿಸಿತ್ತು. ವಿಶ್ವವಿದ್ಯಾಲಯದ ಮೂಲಕವೇ ಪ್ರಕಟಿಸುವುದು ಉತ್ತಮ ಎನಿಸಿ ಪ್ರಭಾರ ಕುಲಪತಿಯಾಗಿದ್ದ ಗೆಳೆಯರಾದ ಹಿ.ಚಿ. ಬೋರಲಿಂಗಯ್ಯ ಅವರಿಗೆ ಹಸ್ತಪ್ರತಿ ತೋರಿದೆ. ತಕ್ಷಣವೇ ಅವರು ಪ್ರಕಟಣೆಗೆ ಒಪ್ಪಿಗೆ ಸೂಚಿಸಿ ಪ್ರಸಾರಾಂಗಕ್ಕೆ ನೀಡಿದರು. ಪ್ರಸಾರಾಂಗದ ನಿರ್ದೇಶಕರಾದ ಮಲ್ಲೇಪುರಂ ಜಿ. ವೆಂಕಟೇಶ ಅವರೂ ತಕ್ಷಣ ಅನುಮೋದಿಸಿದರು. ಸಹಾಯಕ ನಿರ್ದೇಶಕರಾದ ಸುಜ್ಞಾನಮೂರ್ತಿ ಮುಂದಿನದನ್ನು ನೋಡಿಕೊಂಡರು.

ಇದಿಷ್ಟು ಕೃತಿ ರಚನೆ ಮತ್ತು ಪ್ರಕಟನೆಯ ಹಿನ್ನೆಲೆ. ಈ ಕೃತಿಯಲ್ಲಿ ಮುಖ್ಯವಾಗಿ ಆಧುನಿಕ ಕನ್ನಡ ಸಾಹಿತ್ಯದ ಪಂಥಗಳು ಏಕೀಕರಣೋತ್ತರ ಕಾಲದಲ್ಲಿ ಯಾವ ಬಗೆಯ ಧೋರಣೆ ತಳೆದಿವೆ. ಹೇಗೆ ಹೊಸ ನಾಡಿನ ಕನಸನ್ನು ನಿರೂಪಿಸಿವೆ, ಯಾವ ನೈತಿಕ ನೆಲೆಯಲ್ಲಿ ಸಾಮಾಜಿಕ ಚಳುವಳಿಗಳನ್ನು ರೂಪಿಸಿವೆ, ಎಂತಹ ರಾಜಕೀಯ ಇಚ್ಛಾಶಕ್ತಿಯನ್ನು ಬಿಂಬಿಸಿವೆ, ಪ್ರಭುತ್ವದ ಜೊತೆ ಯಾವ ಸ್ವರೂಪದ ಸಂಬಂಧಗಳನ್ನು ಸಾಧಿಸಿಕೊಳ್ಳಲಾಗಿದೆ, ಸಾಹಿತ್ಯದ ಸಂವೇದನೆ ಹೇಗೆ ವಿಸ್ತರಿಸಿದೆ, ಆಧುನಿಕತೆಯ ರೂಪಾಂತರಗಳು ಹೇಗೆ ಸಾಗುತ್ತಿವೆ, ಆರ್ಥಿಕ ಪರಿಣಾಮಗಳು ಯಾವ ದಿಕ್ಕಿಗೆ ಹೊರಳಿವೆ, ತಂತ್ರಜ್ಞಾನ ಮತ್ತು ಮಾಹಿತಿ ವಿಜ್ಞಾನಗಳ ಗುರಿ ಯಾವ ಕಡೆಗಿದೆ, ಅಂಚಿನ ಸಮುದಾಯಗಳ ಬದುಕು ಯಾವ ಗತಿಗೆ ಬಂದಿದೆ, ನಗರ, ಪೇಟೆ, ಪಟ್ಟಣ, ಹಳ್ಳಿಗಳ ಅಂತರ ಯಾವ ಸ್ವರೂಪ ಪಡೆಯುತ್ತಿವೆ, ಜಾಗತೀಕರಣದ ಜೊತೆಯಲ್ಲೆ ಮತೀಯ ಮೂಲಭೂತ ರಾಜಕಾರಣ ಮತ್ತು ಸ್ಥಳೀಯ ಜಾತಿ ವ್ಯವಸ್ಥೆಯ ಖಾಸಗೀಕರಣ ಪ್ರಕ್ರಿಯೆಗಳು ನಾಡನ್ನು ಯಾವ ದಿಶೆಗೆ ಕೊಂಡೊಯ್ಯತ್ತಿವೆ…. ಹೀಗೆ ಅನೇಕ ಸಂಗತಿಗಳನ್ನು ಭಾಷೆ, ಸಂಸ್ಕೃತಿ, ಸಮಾಜ, ಸಾಹಿತ್ಯ, ರಾಜಕಾರಣ ಮತ್ತು ಆರ್ಥಿಕ ಪಲ್ಲಟಗಳ ಮೂಲಕ ವಿಶ್ಲೇಷಿಸಲಾಗಿದೆ. ಕನ್ನಡನಾಡಿನ ಅರ್ಧಶತಮಾನದ ನಡೆಯನ್ನು ನಿರೂಪಿಸಲು ವರ್ತಮಾನದ ಅನುಭವಗಳನ್ನು ಹೆಚ್ಚು ಆಧರಿಸಲಾಗಿದೆ. ಚರಿತ್ರೆಯ ವಿವರ ಜೋಡಿಸುವುದು ನನಗೆ ಮುಖ್ಯ ಅಲ್ಲ. ಆ ಬಗೆಯ ದಾಖಲಾತಿಯ ಇತಿಹಾಸದಲ್ಲಿ ನನಗೆ ಆಸಕ್ತಿಯಿಲ್ಲ. ಇತಿಹಾಸವನ್ನು ಸೃಜನಶೀಲವಾದ ಒಳನೋಟಗಳಿಂದ ವಿಶ್ಲೇಷಿಸಿದಾಗ ಅಲಂಕಾರಿಕವಾದ ಭಾಷೆಗೆ ಬದಲಾಗಿ ಮನುಷ್ಯ ಸಂಬಂಧಗಳ ನ್ಯಾಯದ ನೀತಿಯ ನಿರೂಪಣೆಯು ವಸ್ತುಸ್ಥಿತಿಯ ಭೌತಿಕ ವಿವರಗಳ ಆಚೆಗೆ ಹೋಗಿ ದಮನಿತ ದನಿಯ ಭಾಷೆಯಾಗಿ ಹೊರಹೊಮ್ಮುತ್ತದೆ.

ಈ ಬಗೆಯ ಹಾದಿನಲ್ಲಿ ಏಕೀಕರಣೋತ್ತರ ಕರ್ನಾಟಕದ ಸಮಾಜೋ ಸಾಂಸ್ಕೃತಿಕ ಇತಿಹಾಸವನ್ನು ಇಲ್ಲಿ ನಿರೂಪಿಸಿರುವೆ. ಒಂದು ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ನಿರ್ವಚಿಸಲು ಆ ಭಾಷೆಯಲ್ಲಾದ ಸಾಹಿತ್ಯಿಕ ಅಭಿವ್ಯಕ್ತಿಗಳು ಮುಖ್ಯ ಪಾತ್ರ ನಿರ್ವಹಿಸಬಲ್ಲವು. ಸಮುದಾಯಗಳ ಭಾಗವಾಗಿ ಪುನರ್ ಸೃಷ್ಟಿಗೊಂಡ ಅನುಭವಲೋಕವು ಯಾವುದೋ ಶಾಸನ, ಪುರಾಣ, ಧರ್ಮಗ್ರಂಥ ಹಾಗೂ ಆಸ್ಥಾನ ಗ್ರಂಥಗಳ ಹಾಗೆ ಇರುವುದಿಲ್ಲ. ಸಾಹಿತ್ಯ ಪಂಥಗಳು ಪರೋಕ್ಷವಾಗಿ ಸಂಸ್ಕೃತಿ ಚರಿತ್ರೆಯ ಸೃಜನಶೀಲ ಆಲೋಚನೆಯಾಗಿಯೇ ಬೆಳೆದು ಬಂದಿರುತ್ತವೆ. ಹಾಗೆಯೇ ಆ ಪಂಥಗಳ ಪ್ರಮುಖ ಸಾಹಿತಿಗಳು ಮತ್ತು ಅವರ ಸಾಹಿತ್ಯ ಕೃತಿಗಳ ನಾಡಿನಲ್ಲಿ ನಡೆದು ಬಂದ ಹಾದಿಯನ್ನೆ ಪ್ರತಿಬಿಂಬಿಸುತ್ತಿರುತ್ತವೆ. ಹೀಗಾಗಿ ಏಕೀಕರಣೋತ್ತರ ಕನ್ನಡನಾಡಿನ ಸಂಸ್ಕೃತಿ ಚರಿತ್ರೆಯಲ್ಲಿ ಸಾಹಿತ್ಯ ಪಂಥಗಳ ಆಲೋಚನೆಗಳು ಮುಖ್ಯವಾಗಿವೆ. ಏಕೀಕರಣ ಚಳುವಳಿಯಲ್ಲು ಆನಂತರದ ಕರ್ನಾಟಕದ ಇತಿಹಾಸದಲ್ಲೂ ಸಾಹಿತ್ಯ ಚಳುವಳಿಗಳು ಪ್ರಮುಖ ಪಾತ್ರ ವಹಿಸಿರುವುದನ್ನು ಗಮನಿಸಬಹುದು. ಸಮಾಜದ ಗತಿಶೀಲತೆಯೂ ಸಾಹಿತ್ಯ ಸಂವೇದನೆಯಲ್ಲಿ ಲೀನವಾಗುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಬಹುಸಮುದಾಯಗಳು ಹೇಗೆ ತಮ್ಮ ಸಮಾಜಗಳ ಅಸ್ತಿತ್ವವನ್ನು ಚಳುವಳಿಗಳ ಮೂಲಕ ರೂಪಿಸಿಕೊಂಡಿವೆ ಎಂಬುದನ್ನು ಸಾಹಿತ್ಯ ಚಳುವಳಿಯ ಜೊತೆಯಲ್ಲೇ ಅನುಸಂಧಾನ ಮಾಡುವುದು ಮತ್ತೂ ಹೆಚ್ಚಿನ ವಿಷಯ ವಿವರಗಳಿಗೆ ಅವಕಾಶ ಮಾಡಿದೆ. ಎಪ್ಪತ್ತರ ದಶಕದಲ್ಲಾದ ಬಹುರೂಪಿ ಎಚ್ಚರಗಳನ್ನು ಹೀಗಾಗಿಯೇ ಗತಿಶೀಲತೆಯ ಭಾಗವಾಗಿ ನೋಡಲಾಗಿದೆ. ಈ ದಶಕದ ಬದಲಾವಣೆಗಳು ಅಚ್ಚರಿ ಹುಟ್ಟಿಸುತ್ತವೆ. ಆದರೆ ಮುಂದಿನ ಎಂಬತ್ತು ಮತ್ತು ತೊಂಬತ್ತರ ದಶಕಗಳು ಎಪ್ಪತ್ತರ ದಶಕದ ಬೆಳವಣಿಗೆಗಳಿಗೆ ವಿರುದ್ಧವಾಗಿ ಘಟಿಸಿರುವುದು ಗಾಬರಿ ಹುಟ್ಟಿಸುತ್ತದೆ. ಕನ್ನಡ ನಾಡಿನ ಏಕೀಕರಣದ ಆಶಯಗಳು ತೀವ್ರವಾಗಿ ಕುಸಿತ ಕಂಡಿರುವುದೇ ತೊಂಬತ್ತರ ದಶಕದಲ್ಲಿ. ಅದು ಜಾಗತೀಕರಣದ ಪರಿಣಾಮ ಎಂದು ಅನೇಕರು ಹೇಳುವವರಿದ್ದಾರೆ. ಇದು ಸೂಕ್ತವಾದ ತೀರ್ಮಾನವಲ್ಲ. ಯಾವುದೊ ಸಮಸ್ಯೆಗೆ ಮತ್ಯಾವುದೊ ಕಾರಣ ಕೊಡುವುದು, ಯಾರದೊ ತಪ್ಪನ್ನು ಮತ್ತಾರಿಗೋ ಆರೋಪಿಸುವುದು ಯಾವುದೇ ಅನ್ಯಾಯಕ್ಕೆ ಮತ್ತಾವುದೊ ಸ್ಥಿತಿಯನ್ನು ದೂರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಯಾವ ಸಮಸ್ಯೆ ಯಾವ ನೆಲೆಯಿಂದ ಬಂದಿದೆ, ಅದರ ನಿರ್ದಿಷ್ಟ ಕಾರಣ ಯಾವುದು, ಅದಕ್ಕೆ ಪರ್ಯಾಯ ಏನು ಎಂಬುದನ್ನು ವಿಶಾಲವಾಗಿ ತಾಳ್ಮೆಯಿಂದ ವಿವರವಾಗಿ ಚಾರಿತ್ರಿಕವಾಗಿ ಪರಾಮರ್ಶಿಸದೇ ಎಲ್ಲವನ್ನೂ ಒಂದು ನಿರ್ದಿಷ್ಟ ವ್ಯವಸ್ಥೆಯ ತಲೆಗೇ ಕಟ್ಟಿಬಿಡುವುದು ತಕ್ಕ ವಿವೇಚನೆ ಆಗುವುದಿಲ್ಲ. ಸಾರಾಸಗಟಾಗಿ ಎಲ್ಲ ಸಮಸ್ಯೆಗೂ ಜಾಗತೀಕರಣವೇ ಕಾರಣ ಎನ್ನುವುದಾಗಲೀ ಅದಕ್ಕೆ ದೇಶೀಕರಣವೇ ಪರ್ಯಾಯ ಎಂದಾಗಲೀ ಹೇಳುವುದು ತರವಲ್ಲ. ಕನ್ನಡನಾಡಿನ ಭವಿಷ್ಯಕ್ಕೆ ವಿಭಿನ್ನ ಬಗೆಯ ಸಾಧ್ಯತೆಗಳನ್ನು ಹುಡುಕಿಕೊಳ್ಳುವಾಗ ನಾವು ಕೇವಲ ಪರ ವಿರೋಧ ವೈರುಧ್ಯ ಚಿಂತನೆಗಳ ಸೆರೆಗೆ ಸಿಲುಕಬಾರದು. ಯಾವುದೇ ಒಂದು ನಾಡು, ಭಾಷೆ, ಸಮಾಜ, ಸಂಸ್ಕೃತಿ, ನಾಗರಿಕತೆ, ಸಮುದಾಯ, ಅಲ್ಲಿನ ಸ್ಥಳೀಯ ಜೀವನ ಕ್ರಮಗಳು, ಜ್ಞಾನ ಪರಂಪರೆಗಳು, ರಾಜಕೀಯ ಕ್ರಮಗಳು, ಉತ್ಪಾದನಾ ವಿಧಾನಗಳು ಯಾವತ್ತೂ ಒಂದೇ ಬಗೆಯ ನಂಬಿಕೆಗಳಲ್ಲಿ ಇರಲಾರವು. ರೂಪ ವಿರೂಪದ ವೈರುಧ್ಯವನ್ನು ಮೀರುವ ಸಲುವಾಗಿಯೇ ವಿಕಾಸದಲ್ಲಿ ಆಯ್ಕೆಗಳಿರುವುದು. ಹೀಗಾಗಿ ಯಾವುದೇ ಸಮಸ್ಯೆಯನ್ನು ದಿಢೀರನೆ ಅರ್ಥೈಸಿ ‘ಇದು ಹೀಗೆ’ ಎಂದು ಠರಾವು ಹೊರಡಿಸುವುದರಿಂದ ನಮ್ಮ ಸಾಧ್ಯತೆಗಳೇ ಮಿತಿಗೊಳಪಡುತ್ತವೆ.

ಹೀಗಾಗಿ ಕನ್ನಡ ನಾಡಿನ ಅರ್ಧಶತಮಾನದ ನಡಿಗೆಯನ್ನು ನಿರ್ದಿಷ್ಟ ಕಾರಣಗಳಿಗೆ ಒಳಪಡಿಸಲು ಹೋಗಿಲ್ಲ. ಆದರೆ ನಾಡಿನ ವಸ್ತುಸ್ಥಿತಿಯನ್ನು ನಿರೂಪಿಸುತ್ತಲೇ ಸಾಧ್ಯತೆಯ ವಿವಿಧ ಬಗೆಗಳನ್ನು ವಿಶೇಷವಾಗಿ ಬಿಂಬಿಸಲಾಗಿದೆ. ಅಂತೆಯೇ ವೈಫಲ್ಯದ ವಿಷಾದ ಸ್ಥಿತಿಯನ್ನು ಸೂಚಿಸಲಾಗಿದೆ. ಇಡಿಯಾಗಿ ಇಲ್ಲಿ ಬಹುರೂಪಿ ಅಧ್ಯಯನ ವಿಷಯಗಳ ಸಂಯುಕ್ತ ಭಾವವನ್ನು ಸಂಯೋಜಿಸುವ ಯತ್ನವನ್ನು ವರ್ತಮಾನವನ್ನು ಜೊತೆಯಲ್ಲಿಟ್ಟುಕೊಂಡೇ ಏಕೀಕರಣೋತ್ತರ ಕಾಲಘಟ್ಟವನ್ನು ವಿಶ್ಲೇಷಿಸಲಾಗಿದೆ. ಸಾಹಿತ್ಯ ಪಂಥಗಳ ಒಟ್ಟು ಬರಹದ ಆಲೋಚನೆಗಳನ್ನು ತಾತ್ವಿಕವಾಗಿ ಇಲ್ಲಿ ವಿಶದೀಕರಿಸಲಾಗಿದೆಯೇ ವಿನಃ ಆಯಾ ಲೇಖಕರ ಸಾಹಿತ್ಯ ಕೃತಿಗಳ ವಿಶ್ಲೇಷಣೆಗೆ ಹೋಗಿಲ್ಲ. ಅದು ಚರಿತ್ರೆಯ ಕರ್ತವ್ಯವೂ ಅಲ್ಲ. ಕನ್ನಡ ನಾಡಿನ ಭಾಗವಾಗಿ ಸಾಹಿತ್ಯ ಪಂಥಗಳು ಹೇಗೆ ನಿರೂಪಣೆಗಳನ್ನು ಸಾಧಿಸಿವೆ ಎಂಬುದನ್ನು ಅನುಸರಿಸಿದಾಗ ಸಾಹಿತ್ಯದ ಆಚೆಗಿನ ವಾಸ್ತವ ಸಮಾಜದ ವಿಚಾರಗಳೇ ಮುಂದಾಗಿವೆ. ಹೀಗಾಗಿ ಸಾಹಿತ್ಯದ ಅಂತರ್‌ಶಿಸ್ತೀಯ ಕ್ರಮಗಳು ಇಲ್ಲಿನ ನಿರೂಪಣೆಯಲ್ಲಿ ಅಂತರ‍್ಯತವಾಗಿ ಬೆರೆತಿವೆ. ಮಾನವಿಕ ವಿಜ್ಞಾನಗಳೆಲ್ಲ ಮೂಲ ಸ್ವರೂಪವನ್ನು ಬದಲಿಸಿಕೊಳ್ಳುತ್ತಿರುವ ಪರಿಣಾಮ ಇದಾಗಿದೆ. ಸಂಯುಕ್ತ ವಿಚಾರಗಳ ವಿಶ್ಲೇಷಣೆಯಿಂದ ನಿರೂಪಣೆಗಳು ವಿಸ್ತಾರಗೊಳ್ಳುತ್ತವೆ. ಆದ್ದರಿಂದಲೆ ಚರಿತ್ರೆಯ ರಚನಾ ವಿದಾನವು ಚರಿತ್ರೆಯ ನಿರ್ದಿಷ್ಟ ತೀರ್ಮಾನಗಳಿಗೆ ಬದಲಾಗಿ ತೀರ್ಮಾನಗಳಿಗಿರಬಹುದಾದ ಚಾರಿತ್ರಿಕ ಹಿನ್ನೆಲೆಯನ್ನೂ ಮನಸ್ಸಿನ ವಿವಿಧ ಭಾವನೆಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಸಮಾಜ ಮತ್ತು ಸಂಸ್ಕೃತಿಯ ಸುಪ್ತ ಪ್ರಜ್ಞೆಯನ್ನು ವಿಶೇಷವಾಗಿ ತೆರೆದಂತಾಗುತ್ತದೆ. ಚರಿತ್ರೆಯ ಹೊಸ ರಚನಾ ಕ್ರಮಕ್ಕೆ ಅವಶ್ಯವಾಗಿ ಬೇಕಿರುವುದು ಸಮುದಾಯಗಳ ಸುಪ್ತ ಪ್ರಜ್ಞೆ. ಈ ಸುಪ್ತಪ್ರಜ್ಞೆಯು ಸಮಾಜಗಳ ನಡವಳಿಕೆಯಲ್ಲಿರುತ್ತದೆ. ಹಾಗೆಯೇ ಆ ಸಮಾಜಗಳ ಅಂತಹ ಅನುಭಾವಗಳನ್ನು ಗಾಢವಾಗಿ ಬಿಂಬಿಸಿದ ಸೃಜನಶೀಲ ನಿರೂಪಣೆಗಳಲ್ಲಿಯೂ ಇರುತ್ತದೆ. ಜೊತೆಗೆ ಆ ನಾಡಿನ ರಾಜಕೀಯದಲ್ಲೂ ಅಭಿವೃದ್ಧಿಯ ಆರ್ಥಿಕ ಕ್ರಮಗಳಲ್ಲೂ ಅಡಕವಾಗಿರುತ್ತದೆ. ಅವರವರ ಸಂಸ್ಕೃತಿಯಲ್ಲಂತೂ ಗತಕಾಲದ ಸುಪ್ತಪ್ರಜ್ಞೆಯನ್ನು ಮುಖ್ಯವಾಗಿ ಆಧರಿಸಿಯೇ ಇಲ್ಲಿನ ನಿರೂಪಣೆಯನ್ನು ಮಾಡಲಾಗಿದೆ.

ಚರಿತ್ರೆಯ ನಿರೂಪಣೆಯಲ್ಲು ಸುಪ್ತಪ್ರಜ್ಞೆಯು ಬೆರೆತಿರುತ್ತದೆ. ಗತಕಾಲದ ಪುನರ್ರಚನೆಗೆ ಬೇಕಾದುದು ಪಳೆಯುಳಿಕೆಗಳಲ್ಲ. ಸುಪ್ತಪ್ರಜ್ಞೆಯು ಪುರಾಣಗಳಲ್ಲಿ ಹೇಗೆ ಅಡಗಿರುತ್ತದೆ ಎಂಬುದನ್ನು ಮನೋವಿಶ್ಲೇಷಣಕಾರರು ಗಾಢವಾಗಿ ತೆರೆದು ತೋರಿದ್ದಾರೆ. ಚರಿತ್ರಕಾರ ಭೌತಿಕ ಸಾಕ್ಷ್ಯಗಳಲ್ಲೇ ಆಸಕ್ತನಾದರೆ ಆತನಿಗೆ ದೊರಕಿಸುವುದು ಜಾಗೃತಾವಸ್ಥೆ ಮಾತ್ರ. ನಡತೆಯಲ್ಲಿ ಬಿಂಬಿತವಾಗುವ ಗತಕಾಲವು ಸುಪ್ತವಾಗಿರುತ್ತದೆ. ಇದರ ಆಧಾರದಿಂದ ಸಮಾಜವನ್ನು ಅರ್ಥಮಾಡಿಕೊಳ್ಳುವುದು ಉಪಯುಕ್ತ ಮಾರ್ಗ. ಕನ್ನಡ, ಕನ್ನಡಿಗ, ಕರ್ನಾಟಕ ಈ ಮುರೂ ಸ್ಥಿತಿಗಳಲ್ಲಿ ಅಡಕವಾಗಿರುವ ಸುಪ್ತಪ್ರಜ್ಞೆಯು ಆಧುನಿಕ ಜಗತ್ತಿನಲ್ಲಿ ತಕ್ಕ ಕ್ರಮದಲ್ಲಿ ವರ್ತಮಾನಕ್ಕೆ ಅನುರೂಪಗೊಂಡಿಲ್ಲ ಎನ್ನುವುದು ಮಾತ್ರ ವಿಷಾದಕರ. ಕನ್ನಡನಾಡಿನ ಕನಸುಗಳು ಹಗಲುಗನಸಾಗಿಯೇ ಮುಂದುವರಿಯುತ್ತಿವೆ. ಈ ಸ್ಥಿತಿಯನ್ನು ಅರ್ಥೈಸುವ ನೆಲೆಯಲ್ಲಿ ಇಲ್ಲಿನ ಬರಹ ಒಂದಿಷ್ಟಾದರೂ ಉಪಯುಕ್ತವಾಗಬಹುದೆಂಬ ವಿಶ್ವಾಸವಿದೆ. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಇಂತಹ ಬರಹಗಳನ್ನು ವಿಶೇಷವಾಗಿ ಕನ್ನಡನಾಡಿಗೆ ಪಸರಿಸುವ ಕಾಯಕವನ್ನು ಮಾಡುತ್ತ ಬಂದಿದೆ. ಅಂತೆಯೇ ವಿಶ್ವವಿದ್ಯಾಲಯದ ಬರಹಗಳನ್ನು ಓದುವ ವರ್ಗವೂ ಗಂಭೀರವಾಗಿದೆ. ನನ್ನ ಕಥೆ, ಕಾದಂಬರಿ, ಕಾವ್ಯ ಬರಹಗಳನ್ನು ಓದುವವರು ಈ ಬಗೆಯ ಬರಹಗಳನ್ನು ವಿಶೇಷವಾಗಿ ಸ್ವೀಕರಿಸಿಲ್ಲ ಎಂಬುದನ್ನು ಬಲ್ಲೆ. ಭಿನ್ನಾಭಿಪ್ರಾಯಗಳ ನಡುವೆಯೂ ಬೌದ್ಧಿಕ ಶಿಸ್ತಿನ ನನ್ನ ಇಂತಹ ಬರಹಗಳನ್ನು ಅನುಸಂಧಾನ ಮಾಡುವವರ ಸಂಖ್ಯೆಯೂ ಗಣನೀಯವಾಗಿದೆ. ಈ ಬರಹ ಅನೇಕರಿಗೆ ಒಪ್ಪಿಗೆಯಾಗಬಹುದೆಂಬ ವಿಶ್ವಾಸ ನನಗಿದೆ. ಸಮಾಜ ವಿಜ್ಞಾನಗಳ ಓದುಗ ವಲಯವು ವಿಶೇಷವಾಗಿ ಕಳೆದ ದಶಕದಿಂದ ವಿಸ್ತರಿಸುತ್ತ ಬಂದಿದೆ. ಸಾಹಿತ್ಯ ಪ್ರಕಾರಗಳ ಓದಿನಿಂದ ಪಡೆಯಬಹುದಾದುಕ್ಕಿಂತ ಸಾಹಿತ್ಯೇತರ ವೈಚಾರಿಕ ಸಾಂಸ್ಕೃತಿಕ ನಿರೂಪಣೆಗಳಿಂದ ಹೊಸ ಬಗೆಯ ಓದುಗರು ಪಡೆದುಕೊಳ್ಳುತ್ತಿದ್ದಾರೆ. ಆ ಮುಲಕ ಬರಹಗಾರರ ಹೊಣೆಯನ್ನು ವಿಸ್ತರಿಸುತ್ತಾರೆ. ಇಂತಹ ಬರಹಗಳಿಗೆ ಕನ್ನಡ ವಿಶ್ವವಿದ್ಯಾಲಯವು ವಿಶೇಷ ಗಮನ ಕೊಡುತ್ತ ಆ ಬಗೆಯ ಅನುಸಂಧಾನದಲ್ಲಿ ತೊಡಗಿದೆ. ಇದಕ್ಕೆ ಪೂರಕವಾದ ಬೌದ್ಧಿಕ ವಾತಾವರಣವೂ ಕರ್ನಾಟಕದ ಉದ್ದಕ್ಕೂ ಇದೆ. ಈ ಪರಿಯ ನನ್ನ ಬರಹಗಳಿಗೆ ಒತ್ತಾಸೆಯಾಗಿರುವ ವಿಶ್ವವಿದ್ಯಾಲಯದ ಪರಿಸರಕ್ಕೆ ನಾನು ಯಾವತ್ತೂ ಋಣಿ. ಹಾಗೆಯೇ ಈ ಕೃತಿಯ ಪ್ರಕಟಣೆಯಲ್ಲಿ ಸಹಕರಿಸಿದ ಎಲ್ಲರನ್ನೂ ನೆನೆಯುವೆ. ವಿಶೇಷವಾಗಿ ಡಾ.ಸಿ.ಆರ್. ಗೋವಿಂದರಾಜು ಅವರನ್ನು ಮತ್ತೊಮ್ಮೆ ಸ್ಮರಿಸಬೇಕು. ಅವರು ಪ್ರೀತಿಯಿಂದ ಲೇಖನ ಬರೆದುಕೊಡಲು ಒತ್ತಾಯಿಸದೆ ಹೋಗಿದ್ದಿದ್ದರೆ ಈ ಕೃತಿಯನ್ನು ನಾನು ಬರೆಯುತ್ತಿರಲಿಲ್ಲ. ಹಾಗೆಯೇ ಈ ಕೃತಿಗೆ ಮುನ್ನುಡಿ ಬರೆದಿರುವ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರು ತುಂಬ ಸಜ್ಜನರು, ಸಂವೇದನಾಶೀಲರು, ಗುಣಗ್ರಾಹಿಗಳು ಹಾಗಾಗಿ ಅವರನ್ನು ವಿಶೇಷವಾಗಿ ಗೌರವಿಸುವೆ. ಉಳಿದಂತೆ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೂ, ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೂ, ಶ್ರೀ ಎಚ್.ಬಿ. ರವೀಂದ್ರ ಅವರಿಗೂ, ಅಂದವಾದ ಮುಖಪುಟ ರೂಪಿಸಿದ ಶ್ರೀ ಕೆ.ಕೆ.ಮಕಾಳಿ ಅವರಿಗೂ, ಅಕ್ಷರ ಸಂಯೋಜಿಸಿದ ಶ್ರೀಮತಿ ರಶ್ಮಿಕೃಪಾಶಂಕರ್ ಅವರಿಗೂ ಕೃತಜ್ಞತೆಗಳ.

ಮೊಗಳ್ಳಿ ಗಣೇಶ್