ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಸಿ ವಿವರಿಸಬೇಕಾಗಿದೆ. ಅಂದರೆ, ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾಧರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್‌ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲು ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

ಮೊಗಳ್ಳಿ ಗಣೇಶ್ ಅವರು ಏಕೀಕರಣೋತ್ತರ ಕನ್ನಡ ಕನ್ನಡತ್ವವನ್ನು ಕುರಿತಂತೆ ಪ್ರಸ್ತುತ ಗ್ರಂಥದಲ್ಲಿ ಗಂಭೀರವಾದ ಚಿಂತನೆಯನ್ನು ಮಾಡಿದ್ದಾರೆ. ಸಾಹಿತ್ಯ, ಪ್ರಭುತ್ವ, ಸಮುದಾಯಗಳ ನೆಲೆಗಳಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಪರ ಚಿಂತನೆಗಳನ್ನು ಕುರಿತಂತೆ ವಿಸ್ತೃತವಾದ ಅಧ್ಯಯನವನ್ನು ಮಾಡಿರುವುದು ಪ್ರಸ್ತುತ ಗ್ರಂಥದಿಂದ ವ್ಯಕ್ತವಾಗುತ್ತದೆ. ಭಾಷೆ ಪರಿಸರದ ಕೂಸು. ಅದರ ಹುಟ್ಟು ಮತ್ತು ಬೆಳವಣಿಗೆ ಪರಿಸರದ ಪ್ರಭಾವಲಯದಿಂದ  ನಿರೂಪಿತವಾಗುತ್ತದೆ. ಹೀಗಾಗಿ ಮೊಗಳ್ಳಿ ಅವರು ತಿಳಿಸುವಂತೆ ಭಾಷೆಯ ಉಗಮ ವಿಕಾಸ ಎಂದರೆ ಮಾನವನ ಉಗಮ ವಿಕಾಸವೇ ಸರಿ. ಭಾಷೆಯ ಸ್ವರೂಪ ಎಂದರೆ ಒಂದು ಸಮುದಾಯ ಕಟ್ಟಿಕೊಂಡ ಮತ್ತು ಬಾಳಿ ಬದುಕುವ ಪರಿಸರದ ಪರಿಣಾಮ. ಯಾವುದೇ ಪರಿಸರದಲ್ಲಿ ವ್ಯಕ್ತವಾಗುವ ಬದಲಾವಣೆ ಭಾಷೆಯ ಮೇಲೆ ಒತ್ತಡವನ್ನು ಹೇರುತ್ತದೆ. ಯಾವುದೇ ಭಾಷೆಯ ಸಾಹಿತ್ಯ ಆಯಾ ಭಾಷೆಯ ಇಂತಹ ಪರಿಸರಗಳ ದಾಖಲೆ ಆಗಿರುತ್ತದೆ. ಅಲ್ಲದೆ ಲೇಖಕನ ವೈಯಕ್ತಿಕ ಭಾವನೆಗಳನ್ನು ಪ್ರತಿನಿಧಿಸುತ್ತದೆ ಕೂಡಾ. ಇದರಿಂದಾಗಿ ಒಂದು ಸಾಹಿತ್ಯಿಕ ಕೃತಿಯನ್ನು ಈ ಎಲ್ಲ ನೆಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸುವುದರ  ಮೂಲಕ ಆ ಕೃತಿಯ ಭೌತಿಕ ಪರಿಸರ, ಸಾಮುದಾಯಿಕ ಪರಿಸರ, ಪ್ರಭುತ್ವ ಹಾಗೂ ಈ ಎಲ್ಲ ಸಂಗತಿಗಳಿಂದ ರೂಪಗೊಂಡ ಲೇಖಕನ ಆಲೋಚನಾ ಕ್ರಮವನ್ನು ಅರಿಯಬಹುದಾಗಿದೆ. ಮೊಗಳ್ಳಿ ಅವರು ನವೋದಯ ಸಾಹಿತ್ಯದಿಂದ ಆರಂಭಿಸಿ ಈವರೆಗಿನ ಕನ್ನಡ ಸಾಹಿತ್ಯ ಮತ್ತು ಕನ್ನಡತ್ವದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಂಭೀರವಾಗಿ ಒಳನೋಟಗಳಿಂದ ಆನ್ವಯಿಕವಾಗಿ ಭವಿಷ್ಯದ ನೆಲೆಯಲ್ಲಿ ಅವಲೋಕಿಸಿದ್ದಾರೆ.

ಕನ್ನಡದ ಅಂದಂದಿನ ಅವಶ್ಯಕತೆಗೆ ಅನುಗುಣವಾಗಿ ಸಾಹಿತ್ಯ ನಿರ್ಮಾಣವಾಗುತ್ತದೆ. ನವೋದಯ ಸಂದರ್ಭದ ಕೃತಿಗಳು ಜನಮುಖಿಯಾಗಿದ್ದು ಅಂದಿನ ಸಾಮಾನ್ಯರ ನಾಡು ನುಡಿಯನ್ನು ಕುರಿತ ಕಾಳಜಿಯನ್ನು ವ್ಯಕ್ತಪಡಿಸುತ್ತವೆ. ಕುವೆಂಪು ಅವರಂತಹ ಕನ್ನಡ ನಾಡು ನುಡಿ ಚಿಂತಕರು ಅಪಾರವಾಗಿಯೂ ಬರೆದದ್ದು ಕಂಡುಬರುತ್ತದೆ. ನವ್ಯದ ಸಂದರ್ಭದಲ್ಲಿ ವೈಯಕ್ತಿಕ ಆಲೊಚನೆಗಳಿಗೆ ಪ್ರಾಧಾನ್ಯತೆ ಇದ್ದರೂ ಸಹ, ‘ಕಟ್ಟುವೆವು ನಾನು ಹೊಸ ನಾಡೊಂದನು’ ಎಂಬ ಘೋಷ ವಾಕ್ಯಗಳು ಬಂದದ್ದು ಗಮನೀಯ. ಪ್ರಗತಿಶೀಲರು ನಾಡು ನುಡಿಗಿಂತ ಹೆಚ್ಚಾಗಿ ಸಮಾಜಮುಖಿ ಕೃತಿಗಳನ್ನು ರಚಿಸಿರುವುದು ಕಂಡುಬರುತ್ತದೆ. ದಲಿತ ಬಂಡಾಯದ ಸಂದರ್ಭದಲ್ಲಿ ಸಾಹಿತ್ಯ ಭಾಷೆಯ ಸ್ವರೂಪವೇ ಬದಲಾದದ್ದು ಅವರು ಆಯ್ದುಕೊಂಡ ಮೂಲ ಸಂವೇದನೆಯ ತೀವ್ರತೆಯ ಪರಿಣಾಮ. ಜನಭಾಷೆ ಹೆಚ್ಚು ಹೆಚ್ಚಾಗಿ ಗ್ರಂಥ ಭಾಷೆಯಾಗಿ ಸಾಮುದಾಯಿಕವಾಗಿ ಪರಿಣಮಿಸಿದುದು ಈ ಸಂದರ್ಭದಲ್ಲಿಯೆ. ೧೯೭೫ರ ಕರ್ನಾಟಕ ಬರಹಗಾರರ ಒಕ್ಕೂಟ ಸ್ಥಾಪನೆ, ಡಾ.ಬಿ.ಆರ್. ಅಂಬೇಡ್ಕರ್, ಶಾಂತವೇರಿ ಗೋಪಾಲಗೌಡ, ಲೋಹಿಯಾ ಮುಂತಾದವರ ವಿಚಾರಧಾರೆಗಳು ಅಂತೆಯೇ ದೇವರಾಜು ಅರಸು ಎಂಬ ಎಪ್ಪತ್ತರ ದಶಕದ ಸಂದರ್ಭಗಳು ಸಾಹಿತ್ಯ ಭಾಷೆಯ ಮೇಲೆ ಬೀರಿದ ಪರಿಣಾಮಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಕನ್ನಡ ಭಾಷೆ ಎಂಬ ಕಲ್ಪನೆ ಗ್ರಾಂಥಿಕ ಕನ್ನಡವನ್ನು ಪ್ರತಿನಿಧಿಸುತ್ತದೆ. ಉಳಿದ ಕನ್ನಡಗಳ ಮೇಲೆ ಇದರ ಪ್ರಭುತ್ವ ನಿರ್ಣಯಕವಾದುದಾಗಿರುತ್ತದೆ. ಒಂದು ಪ್ರಭುತ್ವದ ಭಾಷೆ ದೂರದ ಗ್ರಾಮೀಣ ಪರಿಸರದ ಗುಡ್ಡಗಾಡುಗಳಲ್ಲಿ ವಾಸಿಸುತ್ತಿರುವ ಸಮುದಾಯಗಳ ದೇಸಿ ಕನ್ನಡ ಭಾಷೆಯ ಮೇಲೆ ಬೀರಬಹುದಾದ ಪ್ರಭಾವವೂ ಅಷ್ಟೇ ದಟ್ಟವಾಗಿರುತ್ತದೆ. ದೂರದರ್ಶನ, ಆಕಾಶವಾಣಿಯಂತಹ ಮಾಧ್ಯಮಗಳು ಅತಿ ಸುಲಭವಾಗಿ ಲಭ್ಯವಾಗಿರುವ ಇಂದಿನ ದಿನಮಾನದಲ್ಲಿ ದೇಸಿ ಭಾಷೆಗಳ ಅಸ್ತಿತ್ವವನ್ನು ಮೊಗಳ್ಳಿ ಗಣೇಶ್ ಅವರು ತಕ್ಕುದಾಗಿ ಚರ್ಚಿಸಿದ್ದಾರೆ. ಕೃತಿಯ ಉದ್ದಕ್ಕೂ ಕಾಣುವ ಸೃಜನಶೀಲ ಒಳನೋಟಗಳು ಈ ಬರಹವನ್ನು ಅರ್ಥಪೂರ್ಣಗೊಳಿಸಿವೆ. ಕರ್ನಾಟಕವು ಏಕೀಕರಣಗೊಂಡು ಪೂರೈಸಿದ ಅರ್ಧಶತಮಾನದ ಬೆಳವಣಿಗೆಗಳನ್ನು ಸಾಹಿತ್ಯ ಪರಂಪರೆಗಳ ಮೂಲಕ ಅನುಸಂಧಾನ ಮಾಡಿರುವ ರೀತಿಯು ಅನನ್ಯವಾಗಿದೆ. ಕನ್ನಡ ಸಮಾಜದ ಚರಿತ್ರೆಯನ್ನು ನಾಡು ನುಡಿಯ ಭಾಗವಾಗಿ ನಿರ್ವಚಿಸುವ, ಶೋಧಿಸುವ, ಧ್ಯಾನಿಸುವ, ಅನ್ವಯಿಸುವ ಕ್ರಮದಲ್ಲಿ ಮೊಗಳ್ಳಿಯವರು ಮಂಡಿಸುವ ವಿಚಾರಗಳು ಗಹನವಾಗಿವೆ. ಸ್ವತಃ ಕನ್ನಡ ಸಾಹಿತ್ಯದ ಮುಖ್ಯ ಲೇಖಕರಾಗಿ ಮೊಗಳ್ಳಿಯವರು ಸಾಹಿತ್ಯಾವಲೋಕನ ಮಾಡುತ್ತಲೇ ಸಮಾಜವಿಜ್ಞಾನಿಯ ಜ್ಞಾನ ಕ್ರಮಗಳನ್ನು ನಿರೂಪಿಸುವ ರೀತಿಯು ಇಲ್ಲಿನ ಬರಹಕ್ಕೆ ವಿಶಿಷ್ಟತೆಯನ್ನು ತಂದುಕೊಟ್ಟಿದೆ. ಏಕೀಕರಣೋತ್ತರ ಕನ್ನಡ ನಾಡಿನ ಚರಿತ್ರೆಯನ್ನು ಸೃಜನಶೀಲವಾಗಿ ನಿರೂಪಿಸುವ ಅಪರೂಪದ ಕೃತಿ ಇದು. ಇಂತಹ ಒಂದು ಮೌಲಿಕ ಕೃತಿಯನ್ನು ರಚಿಸಿದ ಮೊಗಳ್ಳಿಯವರನ್ನು ಅಭಿನಂದಿಸುವೆ. ಹಾಗೆಯೇ ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಡಾ. ಮುರಿಗೆಪ್ಪ
ಕುಲಪತಿ