ಭೂಕಂಪನವು ಅತ್ಯಂತ ಶಕ್ತಿಶಾಲಿಯಾಗಿದ್ದು ಬಹುದೊಡ್ಡ ಅನಾಹುತಗಳನ್ನು ಮಾಡುವ ಪ್ರಕೃತಿ ವಿಕೋಪ. ಇದು ದೊಡ್ಡ ಪರ್ವತಗಳು, ನಗರಗಳನ್ನೇ ನೆಲಸಮ ಮಾಡುತ್ತದೆ. ನುಂಗಿಬಿಡುತ್ತದೆ. ಕೋಟ್ಯಂತರ ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ.

ಭೂ ತಳಭಾಗದಲ್ಲಿ ಸುಮಾರು ೩೦ ಫಲಕಗಳಿವೆ. ಇವು ಗರಗಸದ ರೀತಿ ಒಂದಕ್ಕೊಂದು ಸೇರಿವೆ. ಆದರೆ ಅಲ್ಲಲ್ಲಿ ಬಿರುಕುಗಳಿವೆ. ಈ ಫಲಕಗಳು ಯಾವಾಗಲೂ ಚಲನೆಯಲ್ಲಿರುತ್ತವೆ. ಕಾಲಾಂತರದಲ್ಲಿ ಶೇಖರಗೊಳ್ಳುತ್ತಲೇ ಇರುವ ಒತ್ತಡವು ಒಮ್ಮೆಲೇ ಬಿಡುಗಡೆಯಾದಾಗ ಭೂ ಫಲಕಗಳು ಕಂಪನಗೊಳ್ಳುತ್ತವೆ. ಭೂ ಫಲಕಗಳ ನಿಧಾನ ಆದರೆ ನಿರಂತರ ಚಲನೆಯು ತುದಿಯಲ್ಲಿ ಅಧಿಕ ಒತ್ತಡ ಸೃಷ್ಟಿಸುತ್ತದೆ. ಇವು ಒಮ್ಮೆಲೇ ಹೊರನುಗ್ಗಿ ವಿವಿಧ ಪದರುಗಳ ಮೂಲಕ ಪ್ರವಹಿಸುತ್ತಾ ಭೂಗರ್ಭದಿಂದ ಸಿಡಿದು ಹೊರಬಂದಾಗ ಬೃಹತ್ ಪ್ರಮಾಣದ ವಿಕೋಪ ಉಂಟಾಗುತ್ತದೆ.

ಭೂಫಲಕಗಳು ಸಮತಲದಲ್ಲಿ ಒಂದಕ್ಕೊಂದು ವಿರುದ್ಧವಾಗಿ ವೇಗವಾಗಿ ಚಲಿಸುವ ಮೂಲಕ ಅಥವಾ ಒಂದರ ಮೇಲೊಂದು ಸೇರಿಕೊಳ್ಳುವುದರ ಮೂಲಕ ಈ ಅನಾಹುತಗಳ ಪರಿಣಾಮ ಗೋಚರಿಸಬಹುದು. ಹಿಮಾಲಯ ರೂಪುಗೊಂಡಿದ್ದು ಈ ರೀತಿ ಒಂದರ ಮೇಲೊಂದು ಗುಡ್ಡಗಳು ಸೇರಿಕೊಂಡ ಪರಿಣಾಮವೆಂದು ತಜ್ಞರ ಅಭಿಪ್ರಾಯ. ಭೂಪ್ರದೇಶವು ಬಿರಿದು ದೂರಾಗುವುದು, ಭೂಕುಸಿತ, ಜ್ವಾಲಾಮುಖಿ ಆಸ್ಫೋಟ ಇವೆಲ್ಲಾ ಭೂಕಂಪದಿಂದಾಗುವ ಪರಿಣಾಮಗಳು. ಯಾವುದೋ ಒಂದು ನಿರ್ದಿಷ್ಟ ಬಿಂದುವಿನಲ್ಲಿ ಉಗಮವಾಗುತ್ತದೆ. ಇದಕ್ಕೆ ಲಂಬವಾಗಿ ಭೂಮಿಯ ಮೇಲ್ಭಾಗದಲ್ಲಿರುವ ಬಿಂದುವಿಗೆ ಅಧಿಕೇಂದ್ರ ಎನ್ನುತ್ತಾರೆ.

[Epicentre]

ಭೂಕಂಪನದ ಅಲೆಗಳಲ್ಲೂ ಮೂರು ವಿಧಗಳು. ಮೊದಲು ಹೊರಹೊಮ್ಮುವ ಅಲೆಗಳನ್ನು ಪ್ರಾಥಮಿಕ ಅಥವಾ ‘ಪಿ’ ಅಲೆಗಳು ಎನ್ನುತ್ತಾರೆ. ಇವು ಘನ, ದ್ರವ, ಅನಿಲ ಮಾಧ್ಯಮಗಳಲ್ಲಿ ಹಾದುಹೋಗುತ್ತವೆ. ಇವುಗಳ ವೇಗ ಸೆಕೆಂಡಿಗೆ ಆರರಿಂದ ಎಂಟು ಕಿಲೋಮೀಟರ್‌ಗಳು. ಇವುಗಳ ಅನಂತರ ಏಳುವ ಅಲೆಗಳು ದ್ವಿತೀಯ ಅಥವಾ ‘ಎಸ್’ ಅಲೆಗಳು. ಇವು ಘನ ಮಾಧ್ಯಮದಲ್ಲಿ ಮಾತ್ರ ಹಾದುಹೋಗಬಲ್ಲವು. ಆಮೇಲೆ ಹುಟ್ಟುವುದೇ ಅಡ್ಡ ಅಲೆಗಳು ಅಥವಾ ‘ಎಲ್’ ಅಲೆಗಳು. ಇವು ಭೂಮಿಯ ಮೇಲ್ಭಾಗದಲ್ಲಿ ಆಕಾಶಾಭಿಮುಖವಾಗಿ ಚಲಿಸುತ್ತವೆ. ಅತ್ಯಂತ ಅಪಾಯಕಾರಿ.

ಭೂಕಂಪನವನ್ನೂ ಸಹ ಮೂರು ವಿಧಗಳಲ್ಲಿ ವಿಂಗಡಿಸಿದ್ದಾರೆ. ೭೦ ಕಿಲೋಮೀಟರ್ ಆಳದವರೆಗಿನ ಭೂಕಂಪನ. ೭೦ರಿಂದ ೩೦೦ ಕಿಲೋಮೀಟರ್ ಆಳದವರೆಗಿನ ಭೂಕಂಪನ. ೩೦೦ ಕಿಲೋಮೀಟರ್ ಆಳದವರೆಗೂ ಪರಿಣಾಮ ಬೀರುವ ಭೂಕಂಪನಗಳು.

ಇವನ್ನೆಲ್ಲಾ ಸಿಸ್ಮೋಗ್ರಾಫ್ ಎನ್ನುವ ಉಪಕರಣದಿಂದ ಅಳೆಯುತ್ತಾರೆ. ಇದು ಭೂಮಿಯ ಮೇಲ್ಭಾಗದಲ್ಲಿರುವ ಭೂಕಂಪನವನ್ನು ಅಳೆಯುತ್ತದೆ. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಹಾಗೂ ಮೇಲ್ಮುಖವಾದ ಚಲನೆಗಳನ್ನು ಮೂರು ವಿಧಗಳಲ್ಲಿ ಅಳೆಯುತ್ತದೆ.

ಅಲೆಗಳ ವಿಸ್ತಾರ ಹಾಗೂ ಪರಿಣಾಮಗಳನ್ನು ಆಧರಿಸಿ ಅಳೆಯುವ ಮಾನವನ್ನು ರಿಕ್ಟರ್‌ಮಾನ ಎನ್ನುತ್ತಾರೆ. ‘ಎಸ್’ ಅಲೆಗಳ ಪರಿಮಾಣ(magnitude)ಕ್ಕಿಂತ ‘ಪಿ’ ಅಲೆಗಳ ಪರಿಮಾಣ ೧೦ ಪಟ್ಟು ಹೆಚ್ಚು. ‘ಎಲ್’ ಅಲೆಗಳ ಪರಿಣಾಮ ೧೦೦ ಪಟ್ಟು ಹೆಚ್ಚು. ರಿಕ್ಟರ್ ಮಾನವು ಸೊನ್ನೆಯಿಂದ ಪ್ರಾರಂಭವಾಗುತ್ತದೆ. ಇದಕ್ಕೆ ಗರಿಷ್ಠ ಮಿತಿಯಿಲ್ಲ. ಆದರೂ ಭೂ ಫಲಕಗಳು ೯.೫ಕ್ಕಿಂತಲೂ ಅಧಿಕ ರಿಕ್ಟರ್‌ಮಾನದಷ್ಟು ಒತ್ತಡವನ್ನು ಸಹಿಸಿಕೊಳ್ಳಲು ಅಸಮರ್ಥವಾಗಿವೆ.

ಭೂಕಂಪನದಿಂದ ಅತಿಯಾದ ಶಕ್ತಿ ಉತ್ಪತ್ತಿಯಾಗುವುದು ಅದರ ಪರಿಮಾಣವನ್ನು ಅವಲಂಬಿಸಿದೆ. ಲಾತೂರಿನಲ್ಲಾದ ಭೂಕಂಪನ ಹಾಗೂ ಸುನಾಮಿಗಳನ್ನು ಹೋಲಿಸಿದಾಗ ಅವುಗಳ ಪರಿಮಾಣಗಳ ಪ್ರಮಾಣ ತಿಳಿಯುತ್ತದೆ. ಹೀಗೆ ಪರಿಮಾಣಗಳನ್ನು ಅಳೆಯುವುದರ ಮೂಲಕವೂ ಭೂಕಂಪನಗಳನ್ನು ತೀಕ್ಷ್ಣತೆಯನ್ನೂ ಅಳೆಯಬಹುದು. ಅದನ್ನು ಮೂಮೆಂಟ್‌ಮಾನ ಎನ್ನುತ್ತಾರೆ.

ಅದೇ ರೀತಿ ಭೂಕಂಪನದ ತೀವ್ರತೆಯನ್ನು ಆಧರಿಸಿಯೂ ಅಳೆಯಬಹುದು. ಇದನ್ನು ಮರ್‍ಸೆಲ್ಲಿಮಾನ ಎಂದು ಕರೆಯುತ್ತಾರೆ.

ಸಾವಿರಾರು ಭೂಕಂಪನಗಳು ದಿನಾಲೂ ಸಂಭವಿಸುತ್ತಿರುತ್ತವೆ. ಅದು ನಮಗೆ ತಿಳಿಯದಷ್ಟು ಚಿಕ್ಕದಾಗಿರಬಹುದು. ಕೆಲವೊಮ್ಮೆ ಭೂಮಿ ನಡುಗಿದ್ದು ತಿಳಿದರೂ ಅದೇ ಭೂಕಂಪನವೆಂದು ನಾವು ಭಾವಿಸದೇ ಇರುವ ಸಾಧ್ಯತೆಯೂ ಇದೆ. ರಿಕ್ಟರ್‌ಮಾನದಲ್ಲಿ ಪರಿಮಾಣ ನಾಲ್ಕಕ್ಕೂ ಮೇಲಿರುವ ಭೂಕಂಪನಗಳು ಮಾತ್ರ ಹಾನಿಯುಂಟುಮಾಡುವುದರ ಮೂಲಕ ಜಗತ್ತಿಗೆ ಅರಿವಾಗುತ್ತದೆ. ವಾರ್ಷಿಕ ಭೂಕಂಪನಗಳ ಸಂಖ್ಯೆ ಐದು ಲಕ್ಷಕ್ಕೂ ಹೆಚ್ಚು.

ಅತ್ಯಂತ ಹೆಚ್ಚು ಪರಿಮಾಣವಿದ್ದು ಕ್ಷಣಮಾತ್ರ ಉಂಟಾದ ಭೂಕಂಪನಕ್ಕಿಂತ ಕಡಿಮೆ ಪರಿಮಾಣದ ದೀರ್ಘಾವಧಿಯ ಭೂಕಂಪನ ಹೆಚ್ಚು ಹಾನಿಗೆ ಕಾರಣ. ೨೬ ಜನವರಿ ೨೦೦೧ರಲ್ಲಾದ ಭುಜ್ ಭೂಕಂಪನವು ಭೂಮಟ್ಟದಿಂದ ಕೇವಲ ೧೫ಕಿಲೋಮೀಟರ್ ಆಳದಲ್ಲಿತ್ತು. ಹೀಗಾಗಿ ಭಾರೀ ಅನಾಹುತಕ್ಕೆ ಕಾರಣವಾಯಿತು. ಅತಿ ಆಳದ ಭೂಕಂಪನಗಳು ಕಡಿಮೆ ಪರಿಣಾಮ ಬೀರುತ್ತವೆ. ಭೂಮಿಯ ಮೇಲ್ಭಾಗಕ್ಕೆ ಹತ್ತಿರವಿದ್ದಷ್ಟೂ ಹಾನಿಯೂ ಹೆಚ್ಚು.

ಭೂಕಂಪನಕ್ಕೆ ಜ್ವಾಲಾಮುಖಿಗಳ ಆಸ್ಫೋಟ, ಜಲಾಶಯಗಳಿಂದಾಗುವ ಒತ್ತಡ, ಗಣಿಗಾರಿಕೆ, ಭೂಕುಸಿತ ಇವೆಲ್ಲಾ ಕಾರಣವಾಗಬಹುದು.

ರಾಮಾಯಣದಲ್ಲಿ ಸೀತೆಯನ್ನು ಭೂದೇವಿಯೇ ಸ್ವತಃ ಬಾಯಿ ತೆರೆದು ಮೇಲೆ ಬಂದು ಭೂಮಿಯೊಳಗೆ ಕರೆದೊಯ್ದಳು ಎನ್ನುವ ಮಾತಿದೆ. ಅಂದು ರಾಮರಾಜ್ಯದಲ್ಲಿ, ರಾಮಸಭೆಯಲ್ಲಿ ಭೂಕಂಪನವಾಗಿತ್ತೇ? ಅಲ್ಲಿ ಸೀತೆಯೊಬ್ಬಳೇ ಭೂಕಂಪನಕ್ಕೆ ಆಹುತಿಯಾದಳೇ? ಅಥವಾ ಜೊತೆಯಲ್ಲಿ ಇನ್ನೂ ಅನೇಕರು ಭೂಮಿಯೊಳಗೆ ಸೇರಿಹೋದರೆ? ವಾಲ್ಮೀಕಿಯೇ ಹೇಳಬೇಕು.

ಪ್ರಪಂಚದ ಒಂದಿಷ್ಟು ಭೀಕರ ಭೂಕಂಪನಗಳು.

ಚೀನಾದ ಶೆಂಸಿ ೧೫೫೬
ಲಿಸ್ಬನ್ – ಪೋರ್ಚುಗಲ್ ೧೭೫೫
 ಕಛ್-ಭಾರತ ೧೮೧೯
ಅಸ್ಸಾಂ-ಭಾರತ ೧೮೯೭
ಕಾಂಗ್ರಾ-ಭಾರತ ೧೯೦೫
ಸ್ಯಾನ್‌ಫ್ರಾನ್ಸಿಸ್ಕೊ ೧೯೦೬
ಟೋಕಿಯೋ ೧೯೨೩
ಬಿಹಾರ-ಭಾರತ ೧೯೩೪
ಅಲಾಸ್ಕಾ ೧೯೬೪
ಉತ್ತರಕಾಶಿ-ಭಾರತ ೧೯೯೧
ಮರಾಠವಾಡ-ಲಾತೂರು ೧೯೯೩
ಇರಾಕ್ ೧೯೯೭
ಗುಜರಾತ್-ಭುಜ್ ೨೦೦೧