ರಾಜ್ಯದ ರಿಪ್ಪನ್‌ಪೇಟೆ, ಸಾಗರ, ಶಿರಸಿ, ಯಲ್ಲಾಪುರ, ಧಾರವಾಡ ಮಾರುಕಟ್ಟೆಗಳಲ್ಲಿ  ಈಗ ಮಿಡಿಮಾವಿನ ಮಾರಾಟ ನಡೆದಿದೆ. ಉಪ್ಪಿನಕಾಯಿಗೆ ಅಪಾರ  ಬೇಡಿಕೆಯಿಂದಾಗಿ  ಕಾಡುಮಾವಿನ ಬೆಲೆ ಏರಿದೆ. ಎಳೆಗಾಯಿ ಕೊಯ್ದು  ಉಪ್ಪಿನಕಾಯಿ ಫ್ಯಾಕ್ಟರಿಗಳಿಗೆ ಪೂರೈಸುವ ದೊಡ್ಡ ದಂಡು ಮಲೆನಾಡಿನ ಪ್ರದೇಶಗಳಲ್ಲಿದೆ. ಅಪ್ಪೆಮಾವು ಎಂದು ಕರೆಯಲ್ಪಡುವ ನೈಸರ್ಗಿಕ ಮರ ಸಾಮಾನ್ಯವಾಗಿ ನದಿಯಂಚಿನಲ್ಲಿ ಬೆಳೆಯುತ್ತದೆ. ಹೂವರಳಿಸಿ ಮಿಡಿ ಬಿಟ್ಟಾಗ ಮರ ಹುಡುಕಿ ಫಲ ಕೊಯ್ಯುವದು ಹಲವರ ವೃತ್ತಿ. ಮಹಾ ಮಹಾಗಾತ್ರದ ಮರವೇರಿ ಟೊಂಗೆ ಟಿಸಿಲುಗಳ ತುತ್ತ ತುದಿಯಲ್ಲಿನ ಫಲ ಕೊಯ್ಯಬೇಕು. ಮರದ ಟೊಂಗೆ ಕತ್ತರಿಸಿ ಎಳೆಗಾಯಿ ಸಂಗ್ರಹಿಸುವ ಸುಲಭ ಪರಿಪಾಠ ಹಲವರದು. ಪರಿಣಾಮ ಫಲ ಬಿಟ್ಟ ಮಾವಿನ ಮರಗಳು ಹಣದಾಸೆಗೆ  ಬಲಿಯಾಗುತ್ತವೆ. ಯಾವ ಕೃಷಿ ಪರಿಶ್ರಮವಿಲ್ಲದೇ  ನಿಸರ್ಗ ಬೆಳೆಸಿದ ಮರಗಳತ್ತ ಎಲ್ಲರ ಕಣ್ಣು, ಫಲ ದೋಚುವ ಪೈಪೋಟಿಯಲ್ಲಿ ಇಂದು ಇಡೀ ಮಾವಿನ ಸಂಕುಲಕ್ಕೆ ಆಪತ್ತು ಒದಗಿದೆ. ಕುಮದ್ವತಿ, ವರದಾ, ಅಘನಾಶಿನಿ, ಕಾಳಿ, ಬೇಡ್ತಿ  ನದಿಯಂಚಿನಲ್ಲಿ ಪ್ರತಿ ವರ್ಷ ಸಾವಿರ ಸಾವಿರ ಮರಗಳು ಟೊಂಗೆ ಕಡಿದು ನಾಶವಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಅಪ್ಪೆಮಾವಿನ ಸಮೃದ್ಧ ತೋಟದಂತಿದ್ದ ಈ ಪ್ರದೇಶಗಳು ವರ್ಷದಿಂದ ವರ್ಷಕ್ಕೆ  ಈಗ ಖಾಲಿ ಖಾಲಿಯಾಗುತ್ತಿವೆ.

ನದಿಯಂಚಿನ ಮರಗಳು ಸರಕಾರಿ ಆಸ್ತಿ, ಅವುಗಳ ಫಲ ಕೊಯುವದಷ್ಟೇ  ನಮ್ಮ ಆಸಕ್ತಿ ಎಂಬ ನಿಲುವು ಹಳ್ಳಿಗರದು. ಟೊಂಗೆ ಕಡಿದು ಫಲ ಕೊಯ್ಯುವವರನ್ನು ತಡೆಯುವ ಜವಾಬ್ದಾರಿ  ತೀರ ಕಡಿಮೆ. ಮಾರುಕಟ್ಟೆ ಬೇಡಿಕೆ ಏರಿರುವ ಈ ದಿನಗಳಲ್ಲಿ ಗಿಡ ಬೆಳೆಸಿ ಫಲ ಮಾರುವದಕ್ಕಿಂತ ಕಾಡು ಮರ ಕಡಿದು  ಕಾಯಿಕೊಯ್ದು  ಹಣ ಗಳಿಸುವದಷ್ಟೇ ಗುರಿ. ಕರ್ನಾಟಕ ಅರಣ್ಯ ಇಲಾಖೆ  ಜನರಲ್ಲಿ ಜಾಗೃತಿ ಮೂಡಿಸಿ ಮರ ಕಡಿತ ತಡೆಯಲು  ಪ್ರಯತ್ನಿಸಬಹುದಿತ್ತು. ವಿಚಿತ್ರವೆಂದರೆ ಪ್ರತಿ ವರ್ಷ ಮಾರ್ಚ ಕಾಲಕ್ಕೆ  ಮಾವಿನಫಲ, ಆಗ ಮರ ಕಡಿತ ಜೋರು. ಇದೇ ಕಾಲಕ್ಕೆ ಪಾಪ! ನಮ್ಮ ಹಿರಿಯ ಅಧಿಕಾರಿಗಳಿಗೆ ಮಾರ್ಚ್ ಕೊನೆಯ ಗಡಿಬಿಡಿಯಲ್ಲಿ ಮರ ನೋಡಲು ಪುರುಸೊತ್ತಿಲ್ಲ. ವಿವಿಧ ಯೋಜನೆಗಳ ಹಣ ಖರ್ಚು,ಲೆಕ್ಕ ಸರಿದೂಗಿಸುವ ಒತ್ತಡ. ಹಣದ ಲೆಕ್ಕಾಚಾರದಲ್ಲಿ ಇಡೀ ಇಲಾಖೆ ತಲ್ಲೀನ. ಅಪುರೂಪಕ್ಕೆ ಒಮ್ಮೆಯಾದರೂ  ಹಿರಿಯ ಅಧಿಕಾರಿಗಳು ಕಾಡು, ನದಿ ಕೊಳ್ಳ ತಿರುಗಿ  ಕೆಲವು ಪ್ರದೇಶಗಳ  ಪರಿಸ್ಥಿತಿ ರಕ್ಷಿಸುವ  ಕೆಲಸ ಮಾಡಿದ್ದರೂ  ಕಡಿತ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಇಂದು ಮಲೆನಾಡಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳಲ್ಲಿ ಬಹುತೇಕ ಜನಕ್ಕೆ ಕಾಡೆಂದರೆ ಅಲರ್ಜಿ! ಆಫೀಸುಗಳಲ್ಲೇ ಕಾಲಹರಣ ಜಾಸ್ತಿ. ಸಸ್ಯ ವೈವಿಧ್ಯ ವಿಶೇಷಗಳ ಪ್ರತ್ಯಕ್ಷ ಅನುಭವವಿದ್ದವರಂತೂ  ತೀರ ಕಡಿಮೆ. ನಾಶವಾಗಿದೆ, ಮರ ಕಡಿತ ನಡೆದಿದೆ ಎಂದು ಜನ ಬೊಬ್ಬೆ ಹಾಕಿದರಷ್ಟೇ ಎಚ್ಚರಾದಂತೆ ನಟನೆ. ನಿರ್ಲಕ್ಷ್ಯದ ಪರಿಣಾಮಕ್ಕೆ  ಮಾವಿನ ಸಂತತಿ ನೋವಿನ ತೀರಕ್ಕೆ  ಹೊರಟಿದೆ.

ನಮ್ಮ ಮಲೆನಾಡಿನಲ್ಲಿ ರಸ್ತೆ ಪಕ್ಕ ಸಾಲುಮರ ಬೆಳೆಸುವಾಗ ಮಾವನ್ನು ಬೆಳೆಸಲಾಗಿದೆ. ಆದರೆ ಈಗ ರಸ್ತೆ  ಅಗಲೀಕರಣ  ಏಲ್ಲೆಂದರಲ್ಲಿ ಸಾಲು ಮರಗಳ ಮಾರಣಹೋಮ ನಡೆಸಿದೆ! ನೆರಳು ನೀಡುತ್ತಿದ್ದ  ಸಾವಿರಾರು ಮರಗಳು  ಗರಗಸದ ಪ್ರಹಾರಕ್ಕೆ ನೆಲಕ್ಕೆ ಒರಗಿವೆ. ೧೫೦-೨೦೦ವರ್ಷಗಳ ಹಿಂದೆ ದಾರಿ ನೆರಳಾಗಿ, ಪಶುಪಕ್ಷಿಗಳಿಗೆ ಫಲವಾಗಿ ನೆರವಾದವುಗಳನ್ನು ನೆಲಕ್ಕುರುಳಿಸಿ ಅಭಿವೃದ್ಧಿಯ ಆಟ ಆರಂಭಿಸಿದ್ದೇವೆ. ಸಾಲುಮರ ಬೆಳೆಸಿದವರ ಪ್ರಯತ್ನ ಫಲ ಅರ್ಥಮಾಡಿಕೊಳ್ಳದೇ ಹೆದ್ದಾರಿಗೆ ಮನಸ್ಸು ಮಾರಿದ್ದೇವೆ. ಮೊದಲ ಮರ ಕಡಿಯುವುದರ ಮುಖೇನ ನಾಗರೀಕತೆ ಆರಂಭವಾಯಿತು ಎಂಬ ಮಾತು ನಮಗೆಲ್ಲ ತಿಳಿದಿದೆ, ಇಂದು ಸಾಲು ಮರಗಳನ್ನು ಕಡಿಯುವ  ಉತ್ಸಾಹ ನಮ್ಮನ್ನು  ದಂಗು ಬಡಿಸುತ್ತಿದೆ. ಶಿವಮೊಗ್ಗದ  ಶಿಕಾರಿಪುರ, ತಡಸ ರಸ್ತೆಗಳಲ್ಲಿ  ಈಗ ಒಮ್ಮೆ  ಓಡಾಡಬೇಕು. ಮತ್ತದೇ ಅಗಲೀಕರಣ ಮರ ತಿನ್ನತೊಡಗಿದೆ. ಇವು ಮೈಸೂರು ಸಂಸ್ಥಾನದ ಕಾಲದಲ್ಲಿ  ಬೆಳೆಸಿದ ಮಾವಿನ ಮರಗಳು. ನೂರಾರು ವರ್ಷಗಳ  ಮರ, ಫಲ ವಿಶೇಷ, ಪಾರಿಸಾರಿಕ ಲಾಭ ಅರ್ಥ ಮಾಡಿಕೊಳ್ಳದೇ ಕಡಿತ ಜೋರಾಗಿ ನಡೆದಿದೆ.  ಇಲ್ಲಿನ ಹುಳಿ ಮಾವಿನ ಮರಗಳ ಎಳೆಗಾಯಿ ಸಾವಿರಾರು ಕುಟುಂಬಗಳನ್ನು ಬದುಕಿಸುತ್ತಿದೆ. ಊಟಕ್ಕೆ ರುಚಿ ರುಚಿಯ ಉಪ್ಪಿನಕಾಯಿಗಾಗಿ ಇಲ್ಲಿನ ಫಲಗಳು ಬಳಕೆಯಾಗುತ್ತವೆ. ಇವನ್ನು ಕೊಯ್ದು ಮಾರುವದು ಹಲವರ ತಲತಲಾಂತರದ ವೃತ್ತಿ. ಆದರೆ ಅಭಿವೃದ್ಧಿಗೆ  ಮರದ ಮಹತ್ವಗಳ ಅರಿವಿಲ್ಲ. ರಸ್ತೆ ಅಗಲೀಕರಣಗೊಳಿಸಿದ ಬಳಿಕ ಮತ್ತೆ ಗಿಡ ಬೆಳಸಿದರಾಯಿತು ಎಂಬ ಸರಳ ಲೆಕ್ಕಾಚಾರ. ಕೆಲವೆಡೆ ಹಳೆಯ ಮರ ಉಳಿದಿದೆಯಾದರೂ ಈಗ ಎಳೆಗಾಯಿಗೆ ಟೊಂಗೆ ಕಡಿತ ನಡೆದಿದೆ!  ಬದಲಾದ  ಈ ಕಾಲದಲ್ಲಿ ರಸ್ತೆ ಪಕ್ಕ ಗಿಡ ಬೆಳೆಸುವದು ಸುಲಭವಿಲ್ಲ, ಉರುವಲು, ಮೇವು, ಅತಿಕ್ರಮಣ, ಬೆಂಕಿ ಪರಿಣಾಮಕ್ಕೆ ಗಿಡ ಕಮರುವ ಸಂದರ್ಭವೇ ಜಾಸ್ತಿ. ಬೆಳೆಸಿದ ಮರ ಕಡಿಯುವಷ್ಟು ಸುಲಭದಲ್ಲಿ  ನೆಟ್ಟ ಗಿಡ ಬೆಳೆಸಲಾಗದು, ಬೆಳೆದರೂ ಫಲ ಕೊಡಲು ಕನಿಷ್ಠ ೩-೪ ದಶಕ ಕಾಯಬೇಕು!

ಕಳಿಂಗ ಯುದ್ಧದ ಹಿಂಸೆಯಿಂದ ಜರ್ಝರಿತ ಸಾಮ್ರಾಟ ಅಶೋಕ ಬೌದ್ಧ ಗುರುಗಳ ಅಪ್ಪಣೆಯಂತೆ ಪುಣ್ಯ ಕಾರ್ಯ ನಡೆಸುತ್ತಾನೆ. ನೆರಳಿಗಾಗಿ ದಾರಿಯ ಇಕ್ಕೆಲಗಳಲ್ಲಿ  ಸಾಲು ಮರ ಬೆಳೆಸಿದನೆಂದು ನಾವು  ಪಠ್ಯ ಪುಸ್ತಕದಲ್ಲಿ ಓದಿದ್ದೇವೆ. ಬಳ್ಳಾರಿ-ಬಾಂಡ್ರಾವಿ ರಸ್ತೆಯಲ್ಲಿ, ಪುಣಾ-ಬೆಂಗಳೂರು ಹೆದ್ದಾರಿಯಲ್ಲಿ, ಬರಗಾಲದ ಜಮಖಂಡಿಯಲ್ಲಿ ಆಲ, ಮಾವು, ಬೇವು, ಹುಣಸೆ  ಮುಂತಾದ ಹೆಮ್ಮರಗಳ ಸಾಲು ನಮ್ಮ ರಾಜಮಹಾರಾಜರ ಕಾಲದ ಕತೆ ಸಾರುತ್ತವೆ. ಆದರೆ ಈ ಮರಗಳೆಲ್ಲ ಈಗಾಗಲೇ ಕಡಿದು ನಾಶವಾಗಿವೆ. ಮಾವಿನಲ್ಲಂತೂ ನದಿದಂಡೆಯ ಮರ, ರಸ್ತೆಯಂಚಿನ ಮರಗಳೆಲ್ಲದರ ಕತೆ ಧುರಂತದಲ್ಲಿದೆ. ಮಲೆನಾಡಿನ ಜನರ ಬದುಕಲ್ಲಿ  ಮಾವಿಗೆ ವಿಶಿಷ್ಟ ಸ್ಥಾನವಿದೆ, ಅಡುಗೆಯಲ್ಲಂತೂ ವಿಶೇಷ  ಮೆರಗು  ಪಡೆದಿದೆ. ಲಾಗಾಯ್ತಿನಿಂದ ಫಲ ಪ್ರೀತಿಸುವ ನಾವು  ಈಗ ಮರ ಮರೆತವರಂತೆ ವರ್ತಿಸಿದ್ದೇವೆ. ಮರ ಉಳಿಸಿ, ಗಿಡ ಬೆಳೆಸುವ ಕಾರ್ಯ ನಮ್ಮ  ಪ್ರಥಮ ಆದ್ಯತೆಯಾಗಬೇಕು.