ಒಂಬತ್ತು ಗಂಟೆಗೆ ನನ್ನ ದ್ವಿಭಾಷಿ ಬರಬೇಕಾಗಿತ್ತು. ಎಲ್ಲಿಗೆ ಹೋಗುವುದು ಈ ದಿನ ಎಂಬ ಬಗ್ಗೆ ಗೊತ್ತಾಗಿರಲಿಲ್ಲ. ೯.೩೦ಕ್ಕೆ ವೊಲೋಜ ಫೋನ್ ಮಾಡಿದ: ‘ಹನ್ನೊಂದು  ಗಂಟೆಯ  ವೇಳೆಗೆ  ಕಾರು ಬರುತ್ತದೆ; ಊರಾಚೆ ‘ಆರ್‌ಖಾನ್ ಗೆಲ್‌ಸ್ಕೊಯಿ’ ಎಂಬ ಸೊಗಸಾದ ಅರಮನೆಯೊಂದಿದೆ, ಅಲ್ಲಿಗೆ ಹೋಗೋಣ.’

ಹನ್ನೊಂದಕ್ಕೆ ಕಾರು ಬಂತು. ‘ಮಾಸ್ಕೋ ನಗರದ ಸೀಮೆಯನ್ನು ಹಾದು ಪಶ್ಚಿಮ ದಿಕ್ಕಿನಲ್ಲಿ ಹತ್ತು ಮೈಲಿ ಹೋದ ನಂತರ, ಎತ್ತರವಾದ ಮರಗಳ ಕಾಡು ಸಿಕ್ಕಿತು. ಅಲ್ಲಿ ಕಾರು ನಿಲ್ಲಿಸಿ ಕಾಡಿನ ನಡುವಣ ದಾರಿಯಲ್ಲಿ ಕೊಂಚ ದೂರ ನಡೆದೊಡನೆಯೇ ಕಂಡಿತು ‘ಆರ್‌ಖಾನ್ ಗೆಲ್‌ಸ್ಕೊಯಿ’ ಅರಮನೆ. ನಾನು ನೋಡಿದ ಅರಮನೆಗಳಲ್ಲೆಲ್ಲ ಅತ್ಯಂತ ಸುಂದರವಾದದ್ದು ಇದು. ಜಾರ್ ದೊರೆಗಳ ಕಾಲದಲ್ಲಿ ರಾಜಕುಮಾರ ಯೂಸುಪೊವ್ ಎಂಬಾತನಿಗೆ ಸೇರಿದ್ದು. ಹದಿನೆಂಟು ಹತ್ತೊಂಬತ್ತನೆ ಶತಮಾನದ ರಷ್ಯನ್ ಶಿಲ್ಪಕ್ಕೆ ಮಾದರಿಯಾಗಿದೆ ಈ ಅರಮನೆ. ಮುಂದೆ ವಿಸ್ತಾರವಾದ ದಟ್ಟವಾದ ಕಾಡು; ಹಿಂದೆ ಅರ್ಧ ಮೈಲಿ ಉದ್ದದ ಹಸುರು ಹುಲ್ಲು ಬೆಳೆಸಿದ ಉದ್ಯಾನ. ಇಕ್ಕೆಲದಲ್ಲೂ ಗ್ರೀಕ್ ಮಾದರಿಯ ಶಿಲ್ಪ ಕೃತಿಗಳು. ಹಿಂದಿನ ಉದ್ಯಾನದಾಚೆಗೆ ಮತ್ತಷ್ಟು ವಾಸದ ಕೊಠಡಿಗಳು; ನಡುವೆ ವಿಶಾಲವಾದ ವೇದಿಕೆ; ವೇದಿಕೆಯ ಕೆಳಗಿನ ಮೆಟ್ಟಿಲುಗಳು ಬದಿಯಲ್ಲೇ ಹರಿಯುವ ಮಾಸ್ಕ್ವಾ ನದಿಗೆ ಕೊಂಡೊಯ್ಯುತ್ತವೆ.  ನದೀತೀರದ ಹಸುರಿನ  ನಡುವೆ ಶಿಲಾಸನಗಳು. ಉದ್ಯಾನಾವೃತವಾದ ನದೀತೀರದ ಅರಮನೆಯ ಈ ಪ್ರದೇಶ ತುಂಬ ಮನೋಹರವಾಗಿದೆ. ಅರಮನೆಯ ಒಳಗೆ ಕಲಾ ಪ್ರದರ್ಶನವಿದೆ. ದೊಡ್ಡ ದೊಡ್ಡ ವರ್ಣ ಚಿತ್ರಪಟಗಳು; ಅಮೃತಶಿಲೆಯ ಶಿಲ್ಪಗಳು ತುಂಬಿವೆ. ಈ ಜನ ತಮ್ಮ ಹಿಂದಿನ ಕಾಲದ ಎಲ್ಲಾ ಅರಮನೆಗಳನ್ನು, ಗುರುಮನೆಗಳನ್ನು ವಸ್ತುಸಂಗ್ರಹಾಲಯಗಳನ್ನಾಗಿ ಮಾಡಿ, ಪರಂಪರೆಯಲ್ಲಿನ ಅತ್ಯುತ್ತಮ ಅಂಶಗಳನ್ನು ಕಾಯ್ದುಕೊಂಡಿದ್ದಾರೆ.

ನದೀತೀರದಲ್ಲಿ ಅದರ ಪಕ್ಕದ ಕಾಡಿನಲ್ಲಿ ತಿರುಗಾಡುವುದೇ ಒಂದು ಸೊಗಸು. ಮಧ್ಯಾನ್ಹದ  ಆಕಾಶ  ನಿರ್ಮಲವಾಗಿ ಬಿಸಿಲು ಹಾಸಿಕೊಂಡಿತ್ತು. ಸುಮಾರು ಎರಡೂವರೆ ಗಂಟೆಯವರೆಗೂ ತಿರುಗಾಡಿ, ಹೋಟೆಲಿಗೆ ಮರಳಿದ್ದಾಯಿತು. ‘ನಾಲ್ಕು ಗಂಟೆಯ ತನಕ, ಲೆನಿನ್ ಶವಾಲಯದ ಬಾಗಿಲು ಪ್ರೇಕ್ಷಕರಿಗೆ ತೆರೆದಿರುತ್ತದೆ. ನೀವು  ಬಂದಾಗಿನಿಂದ ಲೆನಿನ್ನನ ಪಾರ್ಥಿವ ಶರೀರವನ್ನು ನೋಡಲೇ ಇಲ್ಲ. ಈ ದಿನ ಹೋಗೋಣವೇನು’ – ಎಂದ ವೊಲೋಜ. ನಾನು ‘ ಈ ದಿನ ಏನೂ ಬೇಡ’ ಎಂದೆ.

ದೇವರ ಕಲ್ಪನೆಯನ್ನೆ ಕಿತ್ತೊಗೆದ ಈ ಜನ ಲೆನಿನ್ನನ ಶವಾಲಯದ ನೆಪದಲ್ಲಿ ಉಳಿಸಿಕೊಂಡ ಅಥವಾ ರೂಪಿಸಿಕೊಂಡ ಹೊಸ ಧಾರ್ಮಿಕ ವಿಧಿ ಸ್ವಾರಸ್ಯವಾಗಿದೆ. “God means a dead person”-ಎಂದು ವಿಲ್‌ಡ್ಯೂರಾಂಟನ Mansions of Philosophy ಯಲ್ಲಿ ಓದಿದ ನೆನಪು. ದೇವರ ಕಲ್ಪನೆ ಹುಟ್ಟಿದ್ದೇ ಹೀಗೆ. ಮನುಷ್ಯ ಸತ್ತ ನಂತರ ಅವನ ಆತ್ಮ ಇನ್ನೂ ಅಲ್ಲೇ ಸುಳಿಯುತ್ತದೆ ಎಂಬ ನಂಬಿಕೆ ಪ್ರಾಚೀನ ಜನಾಂಗಗಳಲ್ಲಿ ಇನ್ನೂ ಇದೆ. ಅದರಲ್ಲಿ, ಸತ್ತ ವ್ಯಕ್ತಿ ಗುಂಪಿನ ಮುಖಂಡನೋ, ಮಹಿಮಾಶಾಲಿಯಾದ ವ್ಯಕ್ತಿಯೋ, ರಾಜನೋ ಆಗಿದ್ದ ಪಕ್ಷದಲ್ಲಿ, ಆತನ ಸಮಾಧಿ ಮಾಡಿ, ಆತನಿಗೆ ಪ್ರಿಯವಾದ ವಸ್ತುಗಳನ್ನೆಲ್ಲಾ ಅಲ್ಲಿರಿಸಿ, ಆತನ ಆತ್ಮ ಅಲ್ಲೇ ಸಂಚರಿಸುತ್ತಿದೆ ಎಂಬ ಭಾವನೆಯನ್ನು ತುಂಬಿಕೊಂಡು ಆರಾಧಿಸುವ ಪರಿಪಾಠದಿಂದ, ದೇವರ ಕಲ್ಪನೆ ಮೊದಲಾಗಿರಬೇಕು. ಲೆನಿನ್ನನ ವಿಚಾರದಲ್ಲಿ, ಆತ ಎಷ್ಟೇ ಕ್ರಾಂತಿಕಾರನಾಗಿ ಬದುಕಿದ್ದರೂ, ಆತ ದೇವರು – ಧರ್ಮಗಳನ್ನು ನಿರಾಕರಿಸಿದ್ದರೂ, ಆತ ಸತ್ತನಂತರ ಮತ್ತೆ ಚರಿತ್ರೆ ಪುನರಾವರ್ತನೆಯಾಗಿ, ಜನ ಆತನನ್ನು  ದೇವರ ನಿಲುವಿಗೆ ಏರಿಸಲು ಪ್ರಯತ್ನಪಡುತ್ತಿರುವುದು ಸ್ವಾರಸ್ಯವಾಗಿದೆ.