ನಾನು ೧೯೬೮ನೇ ಇಸವಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರೆ ಗ್ರಾಮದಲ್ಲಿ ಇದ್ದ ತುಂಗಭದ್ರಾ ಫಾರ್ಮ್‌ನ ಮ್ಯಾನೇಜರ್ ಕೆಲಸಕ್ಕೆ ಸೇರಿದೆ. ನಮ್ಮ ಕೃಷಿಕ್ಷೇತ್ರದಲ್ಲಿ ಮುಖ್ಯ ಬೆಳೆಗಳಾಗಿ ಹೈಬ್ರಿಡ್ ಹತ್ತಿ, ಮೆಕ್ಸಿಕನ್ ಗೋಧಿ ಮತ್ತು ಹೈಬ್ರಿಡ್ ಜೋಳ ಬೆಳೆಯುತ್ತಾ ಇದ್ದೆವು. ಅಲ್ಲಿ ನಾನು ೧೯೭೧ನೇ ಇಸವಿಯ ತನಕ ಅಲ್ಲಿ ಕೆಲಸ ಮಾಡಿದೆ. ನಮ್ಮ ಎಲ್ಲ ಬೇಸಾಯ ಕಾರ್ಯಗಳೂ ತುಂಗಭದ್ರಾ ಅಣೆಕಟ್ಟಿನ ನೀರನ್ನೇ ಅವಲಂಬಿಸಿದ್ದುವು. ಬ್ರಹ್ಮಾಚಾರಿಯಾಗಿದ್ದ ನನಗೆ ಅಡುಗೆಮಾಡಿ ಬಡಿಸುತ್ತಿದ್ದ ಮೂವರು ಅಡುಗೆಯವರನ್ನು ನಾನು ಇಂದು ಜ್ಞಾಪಕ ಮಾಡಿಕೊಳ್ಳುತ್ತಿದ್ದೇನೆ.

ಕೆಲಸಕ್ಕೆ ಸೇರಿದ ಹೊಸತರಲ್ಲಿ ನನಗೆ ರಾಜಣ್ಣ ಎಂಬ ಮುಸ್ಲಿಂ ಬಾಣಸಿಗ ಇದ್ದ. ನಾನು ಶಾಖಾಹಾರಿ ಎಂಬುದನ್ನು ಕೇಳಿ ಆತನಿಗೆ ಅಚ್ಚರಿಯಾಗಿತ್ತು. ಆತ, ನೀನು ಶಾಖಾಹಾರಿಯಾಗಿದ್ದು ಅದು ಹೇಗೆ ಇಷ್ಟು ದೊಡ್ಡ ಫಾರ್ಮಿನ ಮ್ಯಾನೇಜರ್ ಸಾಹೇಬನಾದೆ? ಎಂದು ಅಚ್ಚರಿಯಿಂದ ಕೇಳಿದ. ಅದಕ್ಕೆ ನಾನು, ರಾಜಣ್ಣ, ನಾನು ಮಾಡುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಾ ಇದ್ದುದರಿಂದ ನನಗೆ ಈ ಫಾರ್ಮಿನ ಮಾಲಿಕರು ಇಲ್ಲಿಗೆ ಕರೆದು ಈ ಕೆಲಸ ಕೊಟ್ಟರು. ನಾನು ಶಾಖಾಹಾರಿಯೋ? ಮಾಂಸಾಹರಿಯೋ? ಎಂದು ಅವರು ಕೇಳಲಿಲ್ಲ ಎಂದೆ.

ರಾಜಣ್ಣ ನನ್ನ ಮಾತು ಕೇಳಿ ತೋಬಾ..! ತೋಬಾ..! ಮಾಫ್ ಮಾಡು ಸಾಹೇಬ. ನನ್ನ ತಿಳುವಳಿಕೆಯಲ್ಲಿ ಇಷ್ಟು ದೊಡ್ಡ ಫಾರ್ಮ್ ನಡೆಸಬಲ್ಲ ಎಲ್ಲಾ ಮ್ಯಾನೇಜರು ಸಾಹೇಬರುಗಳೂ ಮಾಂಸ ತಿನ್ನುವ ಜನರೇ ಆಗಿರುತ್ತಾರೆ ಎಂಬ ಭಾವನೆ ಇತ್ತು. ಫಿಕರ್ ನಹೀ ಕರೋ! ನಾನು ನಿನಗೆ ಅತ್ಯುತ್ತಮ ಶಾಖಾಹಾರಿ ಭೋಜನ ತಯಾರಿಸಿ ಬಡಿಸುತ್ತೇನೆ. ನಿನ್ನಲ್ಲಿ ಕೆಲಸಕ್ಕೆ ಇರುವ ತನಕ ನಾನು ಕೂಡಾ ಶಾಖಾಹಾರಿಯಾಗಿಯೇ ಇರುತ್ತೇನೆ ಎಂದ.

ನಿನ್ನ ಮಾತುಗಳನ್ನು ಕೇಳಿ ನನಗೆ ಇಂದು ತುಂಬಾ ಸಂತೋಷವಾಯಿತು ರಾಜಣ್ಣಾ….! ನಾನೂ ನಿನಗೆ ಒಂದು ಪ್ರಶ್ನೆ ಕೇಳುತ್ತೇನೆ. ಕಟ್ಟಾ ಮುಸ್ಲಿಂ ಆದ ನಿನಗೆ ಅದು ಹೇಗೆ ರಾಜಣ್ಣ ಎಂಬ ಹೆಸರಿಟ್ಟರು? ಎಂದು ಕೇಳಿದೆ. ಸಾಬ್…! ಈ ರಾಯಲ ಸೀಮೆಯ ಒಳಗೆ ಹೆಂಗಸರಿಗೆ ಹೆರಿಗೆ ತುಂಬಾ ಕಷ್ಟವಾದಾಗ ನಮ್ಮ ಮಂದಿ ನಿಮ್ಮ ಮಂತ್ರಾಲಯದ ನಿಮ್ಮ ಗುರುಗಳಿಗೆ ಹರಕೆ ಕಟ್ಟಿ  ರಾಜಣ್ಣಾ… ಈ ಮಗುವನ್ನು ಉಳಿಸಿ ಕೊಡೋ ಸ್ವಾಮೀ..!, ಈ ಮಗುವಿಗೆ ನಿನ್ನ ಹೆಸರೇ ಇಡುತ್ತೇವೆ ಎನ್ನುತ್ತಾ ಇದ್ದರು. ನನ್ನ ತಾಯಿತಂದೆ ಮಂತ್ರಾಲಯದ ರಾಘವೇಂದ್ರ ಗುರುಗಳಿಗೆ ಹರಕೆ ಕಟ್ಟಿದ್ದರಿಂದ ನನ್ನ ಹೆಸರು ರಾಜಣ್ಣ ಆಯಿತು. ಅದೇ ರೀತಿ ಬಹಳ ಜನ ಹಿಂದುಗಳಿಗೆ ಫಕೀರ್‌ಸಾಬ್ ಎಂಬ ಹೆಸರೂ ಈ ಪ್ರದೇಶದಲ್ಲಿ ಇದೆ. ಹುಟ್ಟುವಾಗ ತೊಂದರೆ ಆಗಿ, ಫಕೀರ್ ಸಾಹೇಬರ ದರ್ಗಾಕ್ಕೆ ಹರಕೆ ಕಟ್ಟಿದ ನಂತರ ಹುಟ್ಟಿದವರು ಅವರು..! ಎಂದ.

ರಾಜಣ್ಣ ನನ್ನಲ್ಲಿ ಕೆಲಸ ಮಾಡುವಷ್ಟು ದಿನವೂ ಶುದ್ಧ ಸಸ್ಯಾಹಾರಿಯೇ ಆಗಿದ್ದು, ಬೆಳಗ್ಗೆ ಎದ್ದೊಡನೇ ಸ್ನಾನಮಾಡಿ ಒಗೆದ ಬಟ್ಟೆ ಧರಿಸಿ ಅಡುಗೆ ಮನೆಯನ್ನು ಪ್ರವೇಶಿಸುತ್ತಿದ್ದ.  ಆತನಿಗೆ ತುಂಬಾ ಬಗೆಯ ಅಡುಗೆ ಗೊತ್ತಿಲ್ಲದೇ ಇದ್ದರೂ, ಅನ್ನ, ಜೋಳದ ರೊಟ್ಟಿ, ಚಪಾತಿ, ಪರಾಠಾ, ಪಲ್ಯ ಮತ್ತು ಸಾಂಬಾರು ಚೆನ್ನಾಗಿಯೇ ಮಾಡುತ್ತಿದ್ದ. ನಮ್ಮ ಹಬ್ಬಹರಿದಿನಗಳಲ್ಲಿ ಅವನಿಗೆ ತಿಳಿದ ಫಿರ್ನಿ (ಖೋವಾ, ಕಾಜೂ, ಬಾದಾಮ್, ದ್ರಾಕ್ಷಿ ಬೆರೆಸಿ ತಯಾರಿಸುವ ಗೋಧಿರವೆಯ ಪಾಯಸ) ಅಥವಾ ಡಬಲ್ ರೋಟೀ ಕಾ ಮೀಠಾ, ಅಂದರೆ ಬ್ರೆಡ್, ಹಾಲು, ಸಕ್ಕರೆ, ಗೋಡಂಬಿ, ದ್ರಾಕ್ಷಿ ಬೆರಸಿ ಆತ ತಯಾರಿಸುತ್ತಾ, ಕೇಸರಿಬಾತ್ ತರಹೆಯ ಒಂದು ಸಿಹಿತಿಂಡಿ ತಪ್ಪದೇ ತಯಾರಿಸುತ್ತಿದ್ದ. ಬೆಳಗಿನ ತಿಂಡಿಗೆ ಹೆಸರು ಕಾಳಿನ ಉಸಳಿ, ಉಪ್ಪಿಟ್ಟು, ಅವಲಕ್ಕಿ ಅಥವಾ ಚಪಾತಿ ತಯಾರಿಸುತ್ತಿದ್ದ. ಅಪರೂಪಕ್ಕೊಮ್ಮೆ ಪೂರಿಸಾಗು ಮಾಡುತ್ತಿದ್ದ. ರಾಜಣ್ಣನಿಗೆ ಇಡ್ಲಿ ಅಥವಾ ದೋಸೆ ತಯಾರಿಸಲು ಗೊತ್ತಿರಲಿಲ್ಲ. ಆತ ಸಮಯಕ್ಕೆ ಸರಿಯಾಗಿ ನನಗೆ ಊಟ ತಿಂಡಿ ನೀಡುತ್ತಿದ್ದ.

ನಾನು ಜವಳಗೆರೆಗೆ ಹೋದ ಹೊಸತರಲ್ಲಿ ಜೋಳ ತಿಂದು ರೂಢಿ ಇಲ್ಲದ ಕಾರಣ, ಜೋಳದ ರೊಟ್ಟಿ ತಿನ್ನುತ್ತಿರಲಿಲ್ಲ. ಬರೇ ಅನ್ನ ಚಪಾತಿಯ ಊಟ ಮಾಡುತ್ತಿದ್ದೆ. ಕ್ರಮೇಣ ಅಲ್ಲಿನ ನಲ್ವತ್ತು ಡಿಗ್ರಿಗೂ ಹೆಚ್ಚಿನ ಉಷ್ಣ ಹವಾಮಾನದಲ್ಲಿ ತಲೆಸುತ್ತುವುದು ಮತ್ತು ವಾಂತಿಬಂದಂತೆ ಆಗುವುದು ಶುರುವಾಯ್ತು. ಆಗ ನಮ್ಮ ಫಾರ್ಮಿನ ಪಕ್ಕದ ಪಾಪಾರಾವ್ ಫಾರ್ಮಿನ ಮ್ಯಾನೇಜರ್ ಆಗಿದ್ದ ಶ್ರೀ ರಾಘವ ರಾಜು ಎಂಬ ಹಿರಿಯರು, ಪೆಜತ್ತಾಯಗಾರೂ…! ಪ್ಲೀಸ್ ಈಟ್ ಲೋಕಲ್ ಜೊವಾರ್ ರೋಟಿ, ಯು ಶಲ್ ಬಿ ಆಲ್‌ರೈಟ್. ಫಾರ್ ದಿಸ್ ಕ್ಲೈಮೆಟ್ ಯೂ ಶುಡ್ ಈಟ್ ವ್ಹಾಟ್ ದ ಲೋಕಲ್ ಪ್ಯೂಪಲ್ ಈಟ್….! ಎಂದು ಹೇಳಿದರು. ಅವರು ಹೇಳಿದಂತೆ ಜೋಳದ ರೊಟ್ಟಿಗಳನ್ನು ಮತ್ತು ಸ್ವಲ್ಪವೇ ಅನ್ನವನ್ನು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಬಳಸಲು ಶುರುಮಾಡಿದೆ. ನನ್ನ ತಲೆಸುತ್ತುವ ಮತ್ತು ವಾಂತಿ ಬರುವ ಕಾಯಿಲೆ ತನ್ನಷ್ಟಕ್ಕೆ ವಾಸಿ ಆಯಿತು.

ನಮ್ಮ ವಿಶಾಲ ಭಾರತ ದೇಶದಲ್ಲಿ ಪ್ರತೀ ಪ್ರದೇಶದ ಹವಾಮಾನಕ್ಕೆ ಒಗ್ಗುವ ಆಹಾರ ಪದ್ಧತಿಯನ್ನು ನಮ್ಮ ಹಿರಿಯರು ರೂಢಿಸಿಕೊಂಡಿದ್ದರು. ಆ ಆಹಾರ ಪದ್ಧತಿಯನ್ನು ಪಾಲಿಸಿದರೆ, ಆಯಾ ಪ್ರದೇಶದಲ್ಲಿ ವಾಸಿಸುವ ಜನರ ಆರೋಗ್ಯ ಚೆನ್ನಾಗಿರುತ್ತೆ. ಅದಲ್ಲದೇ, ಆಹಾರದಲ್ಲಿ ಉಪಯೋಗಿಸಲ್ಪಡುವ ಧಾನ್ಯಗಳು ಆ ಪ್ರದೇಶದಲ್ಲೇ ಬೆಳೆಯಲ್ಪಡುವವಾಗಿರುತ್ತವೆ. ಇದು ನಮ್ಮ ದೇಶದ ಆಹಾರ ಸಂಸ್ಕೃತಿ. ನಮ್ಮ ದೇಶದ ಆಹಾರ ಸಂಸ್ಕೃತಿಗೆ ಆರು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಈ ವಿಚಾರವನ್ನು ಗಮನಿಸದೇ ನಾನು ತೊಂದರೆಗೆ ಒಳಗಾಗಿದ್ದೆ. ಮಾನ್ಯ ರಾಘವ ರಾಜು ಅವರ ಸಲಹೆಯಂತೆ ನಡೆದ ಮೇಲೆ ನನ್ನ ಆರೋಗ್ಯ ಕೆಡಲೇ ಇಲ್ಲ.

ಸುಮಾರು ಐದು ತಿಂಗಳು ಕೆಲಸ ಮಾಡಿದ ನಂತರ ರಾಜಣ್ಣನ ತಂದೆ ಸತ್ತುಹೋದ ಸುದ್ದಿ ಬಂತು. ಆತನು ತನ್ನ ಸ್ವಂತ ಊರಾದ ಲಿಂಗಸಗೂರಿಗೆ ಹೋಗಿ ತನ್ನ ಮನೆಯ ಜವಾಬ್ದಾರಿಯನ್ನು ವಹಿಸಕೊಳ್ಳಬೇಕಾಯಿತು. ನನ್ನ ಮನೆಯ ಅಡುಗೆ ಕೆಲಸಕ್ಕೆ ಗಂಗಪ್ಪ ಎಂಬ ರಾಯಚೂರಿನ ಲಿಂಗಾಯತರ ಯುವಕ ಒಬ್ಬನನ್ನು ಗೊತ್ತುಮಾಡಿ ಕೊಟ್ಟು ರಾಜಣ್ಣ ತನ್ನ ಊರಿಗೆ ಹೊರಟು ಹೋದ.

ನನ್ನ ಮನೆಯ ಅಡುಗೆಯ ಜವಾಬ್ದಾರಿ ಗಂಗಪ್ಪನಿಗೆ ಸಿಕ್ಕಿದ ನಂತರ ನಾನು ಆತನ ಅಡುಗೆಗೆ ಹೊಂದಿಕೊಳ್ಳಲು ಕಷ್ಟಪಡಬೇಕಾಯಿತು. ಗಂಗಪ್ಪ ಅಡುಗೆಗೆ ಕೆಂಪುಮೆಣಸು ಮತ್ತು ಬೆಳ್ಳುಳ್ಳಿ ಸ್ವಲ್ಪ ಹೆಚ್ಚಾಗಿ ಬಳಸುತ್ತಿದ್ದ. ಗಂಗಪ್ಪಾ, ದಯವಿಟ್ಟು ಸ್ವಲ್ಪ ಬೆಳ್ಳುಳ್ಳಿ ಮತ್ತು ಕೆಂಪು ಮೆಣಸಿನಕಾಯಿ ಅಡುಗೆಗೆ ಕಡಿಮೆ ಬಳಸು ಎಂದು ಹಲವು ಬಾರಿ ಕೇಳಿಕೊಂಡ ನಂತರಂ ಆತನ ಅಡುಗೆ ನನಗೆ ಸಹ್ಯ ಎನಿಸಿತು. ಬಂದ ಹೊಸದರಲ್ಲಿ ಗಂಗಪ್ಪ ತಯಾರಿಸುವ ಸಾಂಬಾರಿಗೆ ಏಲಕ್ಕಿ, ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ತಯಾರಿಸುತ್ತಿದ್ದ. ಆ ಸಾಂಬಾರು ತಿನ್ನಲು ನನಗೆ ಕಷ್ಟವಾಗುತ್ತಿತ್ತು. ಗಂಗಪ್ಪಾ ಸಾಂಬಾರಿಗೆ ಯಾಲಕ್ಕಿ, ದ್ರಾಕ್ಷಿ, ಗೋಡಂಬಿ ಯಾಕೆ ಹಾಕುತ್ತಿ? ನನಗೆ ನೀನು ಮಾಡಿದ ಸಾಂಬಾರು ರುಚಿಸುವುದಿಲ್ಲ ಎಂದರೆ, ನಿಮ್ಮಂತಹಾ ದೊಡ್ಡ ಸಾಹೇಬರುಗಳಿಗೆ ನಾನು ಇದೇರೀತಿ ಸಂಬಾರು ತಯಾರಿಸಿ, ಬಡಿಸುವುದು. ಇವೆಲ್ಲಾ ವಸ್ತುಗಳನ್ನು ಸಾಂಬಾರಿಗೆ ಹಾಕಿದರೆ, ನಮ್ಮ ಧಕ್ಕಣಿ ಅಡುಗೆಯಲ್ಲಿ ಅದು ಶಾಹೀ ಸಾಂಬಾರು ಎನ್ನಿಸುತ್ತೆ. ನಿಮಗೆ ರುಚಿಸುವುದಿಲ್ಲ ಅಂತಾದರೆ, ನಾನು ನಮ್ಮಂತಹರ ಮನೆಗಳಲ್ಲಿ ತಯಾರಿಸುವ ಸಾಧಾರಣ ‘ಬ್ಯಾಳೇ ಸಾಂಬಾರ್ ತಯಾರಿಸಿ ಹಾಕ್ತೀನ್ರೀ, ಸರ! ಎಂದ. ಆ ನಂತರ, ಗಂಗಪ್ಪ ಮಾಡಿ ಬಡಿಸಿದ ಜನಸಾಮಾನ್ಯರ ಸಾಂಬಾರ್ ತಿನ್ನಲು ರುಚಿ ಎನಿಸಿತು.

ಗಂಗಪ್ಪನು ಜೋಳದ ರೊಟ್ಟಿಗಳನ್ನು ರಾಜಣ್ಣನಿಗಿಂತಲೂ ಚೆನ್ನಾಗಿ, ಅಂದರೆ ಇನ್ನೂ ಮೆದುವಾಗಿ ಮತ್ತು ತೆಳುವಾಗಿ ತಯಾರಿಸುತ್ತಿದ್ದ. ವಿವಿಧ ರೀತಿಯ ಚಟ್ನಿ ಪುಡಿಗಳನ್ನು ಮಾಡಿ ಬಾಟಲಿಗಳಲ್ಲಿ ತುಂಬಿಟ್ಟು ಬಡಿಸುತ್ತಿದ್ದ. ನಾನು ಗಂಗಪ್ಪನ ಅಡುಗೆಗೆ ಹೊಂದಿಕೊಂಡೆ.

ಒಂದು ವರ್ಷ ಕಳೆಯುತ್ತಲೇ ಗಂಗಪ್ಪ, ನನಗೆ ಮುಂದಿನ ವಾರ ಲಗ್ನ ಮಾಡ್ತಾರ್ರೀ ಸಾಹೇಬ್ರೆ…! ನಾನು ನಮ್ಮೂರಿಗೆ ಹೋಗುವವ! ಎಂದ.

ಗಂಗಪ್ಪಾ ನೀನು ಲಗ್ನ ಆಗುವುದು ಸಂತೋಷದ ವಿಚಾರ, ನಾನು ನಿನಗೆ ಪ್ರತ್ಯೇಕ ವಾಸದ ಮನೆ ಕೊಡುವ ವ್ಯವಸ್ಥೆ ಮಾಡುತ್ತೇನೆ. ಇಲ್ಲೇ ಆರಾಮಾಗಿ ಇದ್ದು ಸಂಸಾರ ಮಾಡು ಎಂದೆ. ಅದಕ್ಕೆ ಆತ, ನನ್ನ ಎಂಡ್ರು ಆಗ್ವಾಕಿ, ಈ ಅಡವಿಯೊಳಗೆ ಬಂದು ಸಂಸಾರ ಮಾಡಾಕಿಲ್ಲ..!! ಅಂತ ಕಂಡೀಶನ್ ಹಾಕ್ಯಾಳ್ರೀ..! ಎಂದ. ಈ ಅಡವಿಯೊಳಗೆ ಬಂದು ನಿಲ್ಲೋವಾಕೀನ್ನ ನೀ ನೋಡ್ಬಾರ್ದಾ ಗಂಗಪ್ಪಾ? ಎಂದರೆ, ನನ್ನ ಲಗ್ನಾ ಆಗೋವಾಕಿ ನನ್ನ ಅಕ್ಕನ ಮಗ್ಳೇ ಅದಾಳ್ರೀ! ನಾ ಬ್ಯಾರೆ ಕಡೀ ನೋಡೋ ಹ್ಯಾಂಗೇನೇ ಇಲ್ರೀ! ಎಂದುಬಿಟ್ಟ. ಗಂಗಪ್ಪನೇನೋ ಹೊರಟುಬಿಟ್ಟ. ನನಗೆ ಅಡುಗೆಗೆ ಬೇರೆ ಜನ ಸಿಗುವುದೇ ಕಷ್ಟ ಆಯಿತು. ಒಂದು ವಾರದೊಳಗೆ ನನಗೆ ಬೇರೆ ಅಡುಗೆಯ ಜನ ಸಿಕ್ಕುವುದು ಅಸಂಭವವೆನಿಸಿತು. ಅದಲ್ಲದೇ, ಹೊಸದಾಗಿ ಬರುವ ಅಡುಗೆಯವನನ್ನು ಗಂಗಪ್ಪ ತರಬೇತು ಮಾಡಬೇಕಿತ್ತು.

ಗಂಗಪ್ಪ ಹೊರಟುಹೋದ ಮೇಲೆ ನನ್ನ ಊಟ ತಿಂಡಿಗೆ ಸೊನ್ನೆ ಬೀಳುವ ಸಂದರ್ಭ ಬಂದೊದಗಿತ್ತು. ನಾನು ಎರಡು ಮೈಲು ದೂರದ ಜವಳಗೆರೆಗೆ ಹೋದರೂ ಅಲ್ಲಿ ನನಗೆ ಊಟ ಬಡಿಸುವ ಹೋಟೆಲ್ ಇರಲಿಲ್ಲ. ಅಲ್ಲಿದ್ದುದು ಎರಡು ಚಾ ಅಂಗಡಿ ಮಾತ್ರ. ಹನ್ನೆರಡು ಮೈಲು ದೂರದ ಸಿಂಧನೂರಿಗೆ ಹೋಗಿ ಅಲ್ಲಿನ ಹೋಟೆಲ್‌ಗಳಲ್ಲಿ ಊಟ ತಿಂಡಿ ಮಾಡಿಕೊಂಡು ನನ್ನ ಫಾರ್ಮಿನ ಕೆಲಸ ನಿಭಾಯಿಸುವುದು ಅಸಾಧ್ಯದ ಮಾತಾಗಿತ್ತು.

ಆಗ ಆಪದ್ಭಾಂದವನಂತೆ ನನ್ನ ಸಹಾಯಕ್ಕೆ ಬಂದವನು ನಮ್ಮ ಲಂಬಾಣಿ ಆಳುಗಳ ನಾಯಕ ಆಶಾಳ್ ಭೀಮಪ್ಪ. ಸಾಹೇಬ್ರೆ, ನಮ್ಮ ಮಾನಪ್ಪನ ಮಗ ಲಖ್‌ಪತಿಯನ್ನು ನಿಮ್ಮ ಅಡುಗೆ ಕೆಲಸಕ್ಕೆ ತಯಾರ್ ಮಾಡಾಣ್ರಿ…! ಹುಡುಗ ಸೂಟಿಯಾಗಿ ಇದ್ದಾನ್ರಿ. ಅವನ ಮನಿಯಾಗ ರೊಟ್ಟಿಗಿಟ್ಟಿ ತಟ್ಟಿ ಅವನಿಗೆ ರೂಢಿ ಅದ. ನಮ್ ಗಂಗಪ್ಪ ವಸಿ ಹೇಳಿಕೊಟ್ಟರೆ, ಎಲ್ಡು ದಿನದಾಗ್ ನಿಮ್ಮ ಅಡುಗೆ ಕೆಲ್ಸ ಕಲಿತ್ ಬಿಡ್ತಾನ್ರಿ. ಚಿಂತೀ ಮಾಡ್ಬೇಡ್ರಿ ಎಂದ. ವಿಧಿಯಿಲ್ಲದೇ ನಾನು ಭೀಮಪ್ಪನ ಸಲಹೆಯನ್ನು ಒಪ್ಪಿಕೊಳ್ಳಲೇಬೇಕಾಯಿತು.

ಆ ದಿನ ಸಾಯಂಕಾಲವೇ ಸುಮಾರು ಹದಿನಾರು ವರ್ಷ ಪ್ರಾಯದ ಲಖ್‌ಪತಿ ಕೆಲಸ ಕಲಿಯಲು ಹಾಜರ್ ಆದ.  ಸ್ನಾನಮಾಡಿ ಒಗೆದ ಬಟ್ಟೆ ಧರಿಸಿ ಬಂದ. ಲಖ್‌ಪತಿಯು   ಮಾನಪ್ಪ ದಂಪತಿಗಳ ಏಕಮಾತ್ರ ಪುತ್ರ. ನೋಡಲು ಗುಂಡುಗುಂಡಾಗಿ ಚುರುಕಾಗಿಯೇ ಇದ್ದ. ಆತ ಪಾಠಶಾಲೆಯ ಬಾಗಿಲು ನೋಡಿದವನೇ ಅಲ್ಲ. ಇದುತನಕ ತನ್ನ ತಾಯಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತಾ ಓರಗೆಯ ಮಕ್ಕಳೊಡನೆ ಆಟವಾಡುತ್ತಾ ಆರಾಮಾಗಿ ಇದ್ದ ಹುಡುಗ. ತಮ್ಮ ಗುಂಪಿನ ನಾಯಕ ಆಶಾಳ್ ಭೀಮಪ್ಪನ ಹೆದರಿಕೆಗೆ ಅದೇ ಮೊದಲ ಬಾರಿ ನನ್ನ ಬಳಿ ಕೆಲಸಕ್ಕೆ ಸೇರಿದ್ದ.

ಲಖ್‌ಪತಿಯೇನೋ ಕೆಲಸ ಕಲಿಯಲು ಬಂದ. ಆದರೆ, ಉತ್ತಮ ಜಾತಿಗೆ ಸೇರಿದ ಗಂಗಪ್ಪ ತನ್ನ ಪಾಕಶಾಸ್ತ್ರ ಪ್ರವೀಣತೆಯನ್ನು ಯಕಶ್ಚಿತ್ ಲಂಬಾಣಿ ಜಾತಿಯ ಹುಡುಗನಾದ ಲಖ್‌ಪತಿಗೆ ಧಾರೆಯೆರೆಯಲು ಸಿದ್ಧನಾಗಿರಲಿಲ್ಲ..! ಈ ವಿಚಾರ ನಮ್ಮ ಫೀಲ್ಡ್ ಸೂಪರ್‌ವೈಜರ್ ವೀರಭದ್ರ ಗೌಡ ಎಂಬುವರಿಂದ ನನಗೆ ತಿಳಿದುಬಂತು. ನನಗೆ ಎಂದೂ ಜಾತಿಭೇದ ಇರಲಿಲ್ಲ. ಗಂಗಪ್ಪನ ನಡತೆ ನನಗೆ ವಿಚಿತ್ರವಾಗಿ ಕಂಡಿತು. ನಾನು ಲಖ್‌ಪತಿಯನ್ನು ನನ್ನ ಆಫೀಸಿಗೆ ಕರೆದು, ನಿಮ್ಮ ನಾಯಕನಾದ ಆಶಾಳ್ ಭೀಮಪ್ಪನನ್ನು ಕರೆದುಕೊಂಡು ಬಾ!ಎಂದೆ. ಹತ್ತು ನಿಮಿಷಗಳಲ್ಲೇ ಹುಡುಗ ಲಖ್‌ಪತಿ ಆಶಾಳ್ ಭೀಮಪ್ಪನೊಡನೆ ಹಾಜರಾದ. ಆಗಲೇ ಸಾಯಂಕಾಲದ ಏಳು ಗಂಟೆ ಆಗಿತ್ತು. ಭೀಮಪ್ಪ ಮೊದಲನೇ ರೌಂಡ್ ಸರಾಯಿ ಸೇವಿಸಿದ್ದರಿಂದ ಆತನ ಮುಖ ಮತ್ತು ಕಣ್ಣುಗಳು ಕೆಂಪಾಗಿದ್ದುವು. ಆದರೂ, ಭೀಮಪ್ಪ ತನ್ನ ಸಮತೋಲ ಸ್ಥಿತಿಯಲ್ಲೇ ಇದ್ದ. ನಾನು ಭೀಮಪ್ಪನಿಗೆ ಇದ್ದ ವಿಷಯ ತಿಳಿಸಿದೆ.

ಗಂಗಪ್ಪನ ಜಾತಿವಾರ್ ದೊಡ್ಡಸ್ತಿಕೆಯ ವರ್ತನೆ ಕೇಳಿದೊಡನೆ ಆಶಾಳ್ ಭೀಮಪ್ಪ ಸಿಟ್ಟಿನಿಂದ ಹಲ್ಲು ಕಡಿಯತೊಡಗಿದ. ಸಾಹೇಬ್ರೇ, ಈ ವಿಷಯ ನನಗೆ ಬಿಡ್ರಿ. ಆ ಗಂಗಪ್ಪನನ್ನು ಸರಿ ಮಾಡುವುದು ನನಗೆ ಎಷ್ಟು ಹೊತ್ತು..! ಎನ್ನುತ್ತಾ ನನ್ನ ಕ್ವಾರ್ಟರ್ಸ್ ಕಡೆಗೆ ಲಖ್‌ಪತಿಯನ್ನು ಕರೆದುಕೊಂಡೇ ನಡೆದ. ಸರಿಯಾಗಿ ಎರಡೇ ನಿಮಿಷಗಳಲ್ಲಿ ಭೀಮಪ್ಪ ಹಿಂತಿರುಗಿ ನನ್ನ ಆಫೀಸಿಗೆ ಬಂದು, ಸಾಹೇಬ್ರೇ, ಲಖ್‌ಪತಿಯನ್ನು ಗಂಗಪ್ಪ ಅಡುಗೆ ಮನೆಗೆ ಸೇರಿಸಿ ಕೊಂಡಾಯಿತ್ರಿ! ಇನ್ನು ಆ ಬಗ್ಗೆ ಯಾವ ತಕರಾರೂ ಇಲ್ಲ. ನಾನು ಇನ್ನು ಬರ್ತೀನ್ರೀ, ಸಲಾಮ್…! ಎಂದು ತನ್ನ ತಾಂಡದ ಕಡೆಗೆ ನಡೆದ. ಸಿಟ್ಟಿನಿಂದ ಕೆಂಡವಾಗಿದ್ದ ಭೀಮಪ್ಪನ ಅವತಾರ ಕಂಡೇ ಗಂಗಪ್ಪ ತನ್ನ ನಿಲುವನ್ನು ಕೂಡಲೇ ಬದಲಾಯಿಸಿ ಲಖ್‌ಪತಿಯನ್ನು ನಮ್ಮ ಅಡುಗೆಯ ಮನೆಯೊಳಗೆ ಸೇರಿಸಿಕೊಂಡಿದ್ದ..!! ಪ್ರಕರಣ ಅಷ್ಟು ಬೇಗನೇ ಇತ್ಯರ್ಥವಾಗಿತ್ತು. ಮುಂದಿನ ವಾರ ಲೆಕ್ಕಚಾರ ಮಾಡಿಸಿಕೊಂಡು ಗಂಗಪ್ಪ ತನ್ನ ಊರಿಗೆ ಹೊರಟು ಹೋಗಿದ್ದ. ಲಖ್‌ಪತಿ ನನ್ನ ಮನೆಯ ಬಾಣಸಿಗನಾಗಿ ಕೆಲಸ ಶುರುಮಾಡಿದ್ದ.

ಲಖ್‌ಪತಿಯ ಅಡುಗೆಯಲ್ಲಿ ಗಂಗಪ್ಪನ ನಾಜೂಕು ಇರಲಿಲ್ಲ. ಜೋಳದ ರೊಟ್ಟಿ ದಪ್ಪಗೆ ಆಗಿ ದಗ್ಡಾ ರೊಟ್ಟಿ ಅನ್ನಿಸಿಕೊಳ್ಳುತ್ತಿತ್ತು. ನಾನು ಮೊದಲಿನಿಂದಲೂ ಊಟದ ರುಚಿಯ ಬಗ್ಗೆ ತಲೆಕೆಡಿಸಿಕೊಂಡ ಆಸಾಮಿಯಲ್ಲ. ಜೋಳದ ರೊಟ್ಟಿ, ತರಕಾರಿ, ಸ್ವಲ್ಪ ಅನ್ನ, ಸಾಂಬಾರು ಮತ್ತು ಮೊಸರು ಇದ್ದರೆ ನಾನು ಊಟ ಮುಗಿಸುತ್ತಿದ್ದೆ.

ಮುಂದಕ್ಕೆ ಲಖ್‌ಪತಿ ತಾನಾಗಿ ಸ್ವಲ್ಪ ಅಡುಗೆಯಲ್ಲಿ ಪರಿಣತಿ ತೋರಿಸುತ್ತಾ ಬಂದ. ಆತನಿಗೆ ಸಿಹಿತಿಂಡಿ ಮಾಡಲು ಬರುತ್ತಿರಲಿಲ್ಲ. ನನಗೂ ಸಿಹಿತಿಂಡಿಯ ಆಸೆಯಿರಲಿಲ್ಲ. ಅಪರೂಪಕ್ಕೆ ಯಾರಾದರೂ ಅತಿಥಿಗಳು ಬರುವ ಸಂದರ್ಭದಲ್ಲಿ ಸಿಂಧನೂರಿನ ಅಶೋಕಭವನದಿಂದ ಸಿಹಿತಿಂಡಿ ತರಿಸುತ್ತಿದ್ದೆ.

ನಾನು ದಿನಕ್ಕೆ ಐದು ಅಥವಾ ಆರು ಕಪ್ ಚಹಾ ಸೇವಿಸುತ್ತಿದ್ದೆ. ಬೆಳಗಿನ ಹೊತ್ತು  ಮಾತ್ರ ಒಂದುಕಪ್ ಕಾಫಿಯನ್ನು ಬೆಡ್‌ಕಾಫಿಯಾಗಿ ಸೇವಿಸುತ್ತಿದ್ದೆ. ಲಖ್‌ಪತಿಗೆ ಎಷ್ಟು ಒಳ್ಳೆಯ  ಕಾಫಿಪುಡಿ ತಂದುಕೊಟ್ಟರೂ, ಅದನ್ನು ಹಾಲು ಮತ್ತು ನೀರಿನೊಂದಿಗೆ ಚೆನ್ನಾಗಿ ಕುದಿಸಿ, ಕಾಫಿಯನ್ನು ಕೆಡಿಸಿಕೊಡುತ್ತಿದ್ದ. ಆತನು ಕೆಡಿಸಿಕೊಡುತ್ತಿದ್ದ ಕಾಫಿ ಕುಡಿಯಲಾರದೇ ಕಷ್ಟಪಟ್ಟೆ. ಕೊನೆಗೆ, ಸಿಂಧನೂರಿನಿಂದ ಒಂದು ಬಾಟಲ್ ನೆಸ್‌ಕೆಫೆ ತಂದು ಲಖ್‌ಪತಿಗೆ ಕೊಟ್ಟು, ಬೆಳಗ್ಗೆ ಹಾಲು ಮತ್ತು ನೀರು ಕುದಿಸಿ ಒಂದು ಕಪ್ಪಿಗೆ ಹಾಕು, ಅದಕ್ಕೊಂದು ಚಿಕ್ಕ ಚಮಚ ಈ ಕಾಫಿಯನ್ನು ಹಾಕಿ, ಕದರಿ ನನಗೆ ಕೊಡು ಎಂದೆ. ಮರುದಿನ ಬೆಳಗ್ಗೆ ಸ್ವಲ್ಪ ಬಿಸಿ ಕಡಿಮೆಯಿರುವ ನೆಸ್‌ಕೆಫೆಯ ಕಪ್ ನನ್ನ ಕೈಗೆ ಬಂತು. ಸ್ವಲ್ಪ ತಣ್ಣಗೆ ಎನಿಸಿದರೂ, ರುಚಿ ಚೆನ್ನಾಗೇ ಇತ್ತು.

ಆದರೆ, ಲಖ್‌ಪತಿ ಅಳುತ್ತಾ ನಿಂತಿದ್ದ. ಯಾಕೋ ಯಾಕೆ ಅಳುತ್ತಿದ್ದಿ ಲಖ್‌ಪತಿ? ಏನಾಯಿತು? ಎಂದು ಪ್ರಶ್ನಿಸಿದೆ. ಸಾಹೇಬ್ರೇ ನೀವು ಸದ್ಯದಲ್ಲೇ ಸತ್ತುಹೋಗುತ್ತೀರಿ..! ಅದಕ್ಕೇ ಅಳುತ್ತಾ ಇದ್ದೇನೆ ಎಂದ. ಸಾಯಲಿಕ್ಕೆ ನನಗೇನು ಧಾಡಿ ಉಂಟಾಗಿದೆ? ಎಂದು ಕೇಳಿದೆ.

ಸಾಹೇಬ್ರೇ, ನೀವು ನಿನ್ನೆ ತಂದ ಆ ಹೊಸ ಕಾಫಿಪುಡಿ ವಿಷ! ನಿಮಗೆ ಇಂದು ಒಂದು ಕಪ್ ಕಾಫಿ ನೀವು ಹೇಳಿದ ರೀತಿಯಲ್ಲೇ ಮಾಡಿ, ಸೋಸಿದರೆ, ಸೋಸುವ ಜಾಲಿಯಲ್ಲಿ ಕಾಫಿಪುಡಿಯ ಚರಟ ನಿಂತಿಲ್ಲ! ಕಾಫಿಪುಡಿಯ ಚರಟ ಹೊಟ್ಟೆಗೆ ಸೇರಿದರೆ ಮನುಷ್ಯ ಸತ್ತುಹೋಗುತ್ತಾನೆ ಅಂತ ನಮ್ಮ ತಾಂಡದಲ್ಲಿ ಎಲ್ಲರೂ ಹೇಳುತ್ತಾರೆ. ಇನ್ನು ಈ ಕಾಫಿ ಕುಡಿದರೆ ನೀವು ಸ್ವಲ್ಪ ದಿನದಲ್ಲೇ ಸತ್ತು ಹೋಗಿತ್ತೀರಿ…! ಎಂದು ಇನ್ನೂ ಜೋರಾಗಿ ಅಳತೊಡಗಿದ. ನಾನು ಆತನಿಗೆ ನೆಸ್‌ಕೆಫೆ ನಿಜವಾಗಿಯೂ ಕಾಫಿಯ ಪುಡಿ ಅಲ್ಲ. ಅದು ಕಾಫಿಯ ಡಿಕಾಕ್ಷನ್ ತಯಾರಿಸಿ, ಅದನ್ನು ಒಣಗಿಸಿ ಮಾಡಿದ ಸತ್ವ ಎಂದು ಎಷ್ಟು ಸಲ ಹೇಳಿದರೂ, ಆತನಿಗೆ ನನ್ನ ಮಾತುಗಳ ಮೇಲೆ ನಂಬಿಕೆ ಹುಟ್ಟಿದಂತೆ ಕಾಣಲಿಲ್ಲ. ಸಾಹೇಬ್ರೇ! ಕ್ಷಮಿಸಿ, ನಿಮಗೆ ಎಂದೆಂದಿಗೂ ಆ ಬಾಟಲಿಯ ಹೊಸ ಕಾಫಿಯನ್ನು ತಯಾರಿಸಿಕೊಡಲು ನನ್ನ ಮನಸ್ಸು ಒಪ್ಪುವದಿಲ್ಲ. ಆ ಬಾಟಲಿಯನ್ನು ನಾನು ಈಗಾಗಲೇ ಹೊರಗೆ ಎಸೆಯುತ್ತೇನೆ. ನೀವು ನನಗೆ ಯಾವ ಶಿಕ್ಷೆ ಬೇಕಾದರೂ ಕೊಡಿ…! ಎಂದ.

ನಾನು ಸೋತು, ಸರಿಯಪ್ಪಾ! ಆ ಬಾಟಲಿ ಎಸೆದುಬಿಡು. ಆದರೆ, ಜವಳಗೆರೆ ಈರಣ್ಣನ ಅಂಗಡಿಯಿಂದ ನೀನು ತರುವ ಕಾಫಿಪುಡಿಯಲ್ಲಿ ನನಗೆ ಒಂದು ಕಪ್ ಒಳ್ಳೆಯ ಕಾಫಿ ಮಾಡಿಕೊಟ್ಟರೆ ಸಾಕು..! ಎಂದೆ. ಮರುದಿನದಿಂದ ನನಗೆ ಮೊದಲಿನ ತರಹೆಯ ಕಾಫಿಯೇ ಸಿಗತೊಡಗಿತು. ನಾನು ಕಣ್ಣುಮುಚ್ಚಿ ಅದನ್ನು ಕುಡಿಯುವ ಅಭ್ಯಾಸ ಮಾಡಿಕೊಂಡೆ.

ಲಖ್‌ಪತಿ ತನ್ನ ಅಡುಗೆಯ ಕೆಲಸಗಳನ್ನು ಬೇಗಬೇಗನೇ ಮಾಡಿ, ನಮ್ಮ ಫಾರ್ಮಿನ ಟ್ರಾಕ್ಟರ್ ಡ್ರೈವರುಗಳಿಗೆ ಸಲಾಂ ಹೊಡೆಯುತ್ತಾ ಟ್ರಾಕ್ಟರ್ ಡ್ರೈವರರ ಹೆಲ್ಪರ್ ಕೆಲಸ ಕಲಿತುಕೊಂಡ. ನಾನು ಎಪ್ಪತ್ತೊಂದನೇ ಇಸವಿಯಲ್ಲಿ ಜವಳಗೆರೆಯ ಫಾರ್ಮ್ ಬಿಟ್ಟು ಮಲೆನಾಡು ಸೇರುವ ಸಂದರ್ಭದಲ್ಲಿ ಲಖ್‌ಪತಿಗೆ ನನ್ನ ಸ್ನೆಹಿತರೊಬ್ಬರ ಬಳಿ ಶಿಫಾರಸು ಮಾಡಿ ಟ್ರಾಕ್ಟರ್ ಡ್ರೈವರನ ಹೆಲ್ಪರ್ ಕೆಲಸ ಕೊಡಿಸಿದೆ. ಹದಿನೆಂಟು ವರ್ಷ ತುಂಬುತ್ತಲೇ ಲಖ್‌ಪತಿ ಲೈಸನ್ಸ್ ಪಡೆದು ಅವರ ಟ್ರಾಕ್ಟರ್ ಡ್ರೈವರ್ ಆದನಂತೆ. ಹಲವು ವರ್ಷ ಅವರಲ್ಲಿ ಟ್ರಾಕ್ಟರ್ ಡ್ರೈವರನಾಗಿ ದುಡಿದ ಲಖ್‌ಪತಿ ಇಂದು ಒಂದು ಸ್ವಂತ ಟ್ರಾಕ್ಟರ್ ಖರೀದಿಸಿ, ಬಾಡಿಗೆಯ ಉಳುಮೆಮಾಡುತ್ತಾ ಸುಖವಾಗಿ ಜೀವನ ಮಾಡುತ್ತಾ ಇದ್ದಾನಂತೆ.

ಯಾಕೋ ಇಂದು ಊಟಮಾಡುತ್ತಾ ಇರುವಾಗ ನನ್ನನ್ನು ಸಲಹಿದ ಮೂರು ಮಂದಿ ಅನ್ನದಾತರುಗಳ ನೆನಪಾಯಿತು. ಅವರ ಬಗ್ಗೆ ಬರೆದೇಬಿಟ್ಟೆ!

* * *