(ಗೋಪಾಲನ ತಾಯಿಯ ಗುಡಿಸಲು. ತಾಯಿ ಚರಕದ ಮುಂದೆ ಕುಳಿತಿದ್ದಾಳೆ. ಗೋಪಾಲನು ಶಾಲೆಯಿಂದ ಬರುತ್ತಾನೆ.)

ತಾಯಿ
ಬಂದೆಯಾ, ಮಗು ಬಾ, ಕುಳಿತುಕೊ.
(ಗೋಪಾಲನು ಕುಳಿತುಕೊಳ್ಳುತ್ತಾನೆ.)
ಇಂದು ನಿಮ್ಮಣ್ಣನಿಗೆ ತಿಂಡಿ ಕೊಟ್ಟೆಯಾ?

ಗೋಪಾಲ
ಹೌದಮ್ಮಾ, ಕೊಟ್ಟೆ.

ತಾಯಿ
ಅವನು ಹೇಗಿದ್ದ, ಮಗು?

ಗೋಪಾಲ
(ದೇವರ ಗೂಡನ್ನು ತೋರಿಸಿ)
ನಮ್ಮ ಈ ವೇಣುಗೋಪಾಲನ ಹಾಗೆಯೇ ಇದ್ದ. ಇದೇ ಹೂವಿನ ಹಾರ ಅವನ ಕೊರಳಲ್ಲಿತ್ತು. ಇದೇ ನವಿಲುಗರಿ, ಇದೇ ಉಡುಪು, ಇವನೇ ಅವನು.

ತಾಯಿ
ಮಗು, ಅವನು ನಿನ್ನೊಡನೆ ಏನು ಮಾತನಾಡಿದ?

ಗೋಪಾಲ
ಏನೇನೊ ಮಾತಾಡಿದನಮ್ಮಾ. ನಾನು ಕೊಳಲೂದು ಎಂದೆ. ಅವನು ಊದಿದ. ಎಷ್ಟು ಇಂಪಾಗಿತ್ತಮ್ಮ! ಕೊಳಲೂದುತ್ತ ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋದ

ತಾಯಿ
(ಕಾತರಳಾಗಿ)
ಎಲ್ಲಿಗೆ? ಗೋಪಾಲ

ಗೋಪಾಲ
ಅದು ಯಾವ ದೇಶವೋ ನನಗೆ ತಿಳಿಯದು. ಅಲ್ಲಿ ಹರಿಯುತ್ತಿದ್ದ ಒಂದು ಹೊಳೆ ನಿಂತು ಗಾನವನ್ನಾಲಿಸುತ್ತಿತ್ತು. ದನಗಳೂ ಹಾಗೆಯೇ. ಕಲ್ಲು ಮರಗಳು ಕುಣಿದಾಡಿಬಿಟ್ಟವು. ಜಿಂಕೆಗಳ ಗುಂಪೊಂದು ಅಲ್ಲಿ ನಿಂತು ಕೊಳಲನ್ನು ಕೇಳುತ್ತಿತ್ತು. ಅಲ್ಲಿಯ ಬನಗಳು ಏನು ರಮಣೀಯವಾದವುಗಳಮ್ಮಾ! ಗೊಂಚಲು ಗೊಂಚಲಾಗಿ ಹಣ್ಣು ಹೂಗಳು ಜೋಲಾಡುತ್ತಿದ್ದವು. ಮಕರಂದವನ್ನು ಹೀರಲೆಂದು ಹಾರಾಡುತ್ತಿದ್ದ ತುಂಬಿಗಳ ಝೇಂಕಾರವಂತೂ ಆ ಬನದಲ್ಲೆಲ್ಲ ತುಂಬಿಹೋಗಿತ್ತು, ಏನಮ್ಮ: ಬಣ್ಣಬಣ್ಣದ ಹಕ್ಕಿಗಳು  ತರತರದ ಮಧುರತಾನ! ಮಲಯದೆಲರು ತಳಿರ ನಡುವೆ ಮೆಲ್ಲಮೆಲ್ಲನೆ ಸುಳಿಸುಳಿದು ನಲಿದಾಡುತ್ತಿತ್ತು. ಹಸುರಂತೂ ಮೃದುವಾದ ಹಾಸಗೆಯಂತೆ ಹಬ್ಬಿಕೊಂಡು ಮುಗುಳು ನಗೆಯನ್ನು ಹೊರಸೂಸುತ್ತಿತ್ತು. ಅಮ್ಮ, ಅಲ್ಲಲ್ಲಿ ಬಣ್ಣದ ಬಟ್ಟೆಗಳನ್ನುಟ್ಟುಕೊಂಡು ಬಣ್ಣದ ಹೂಗಳನ್ನು ಮುಡಿದುಕೊಂಡು ಸಡಗರದಿಂದ ತಿರುಗಾಡುವ, ಓಡುವ, ಹಾಡುವ ದಿವ್ಯ ಮೂರ್ತಿಗಳನ್ನೂ ನೋಡಿದೆ! ಅಮ್ಮ, ಅಲ್ಲಿಂದ ಬರುವುದಕ್ಕೇ ನನಗೆ ಮನಸ್ಸಿರಲಿಲ್ಲ. ಆದರೆ ನನ್ನಣ್ಣ ಎಳೆದುಕೊಂಡು ಬಂದ.

ತಾಯಿ
(ಸ್ವಗತ)
ಪರಮಾತ್ಮ, ಕಾಲದೇಶಗಳನ್ನು ಮೀರಿರುವ ನಿನ್ನ ವೇಣುನಾದದ ಮೈಮೆ, ಆನಂದ, ರಹಸ್ಯ ಇವುಗಳನು ಅನುಭವಿಸುವವರೇ ಧನ್ಯರು. ನನ್ನ ಗೋಪಾಲ, ನನ್ನ ಗೋಪಾಲನಿಗೆ ಅದನ್ನು ತೋರಿಸಿದ ನಿನ್ನನ್ನು ನಾನೆಷ್ಟು ಕೊಂಡಾಡಲಿ!
(ವೇಣುಗೋಪಾಲನ ವಿಗ್ರಹವನ್ನು ನೋಡುತ್ತಾ)
ಆಹಾ! ಬೃಂದಾವನ! ಯಮುನಾ ನದಿ!! ಗೋಪಿಯರು!!! ಭಂಗವಂತ!
(ತನ್ನ ಗೋಪಾಲನನ್ನು ಮುದ್ದಿಸುತ್ತಾಳೆ.)

ಗೋಪಾಲ
ಅಮ್ಮ, ನಾಳೆ ನಮ್ಮ ಗುರುಗಳ ಮನೆಯಲ್ಲಿ ಏನೊ ವಿಶೇಷವಂತೆ. ಎಲ್ಲರೂ ಗುರುದಕ್ಷಿಣೆ ತಂದುಕೊಟ್ಟು ಆಶೀರ್ವಾದ ಪಡೆಯುತ್ತಾರೆ. ನನಗೂ ಏನಾದರೂ ಕೊಡಮ್ಮ, ಗುರುದಕ್ಷಿಣಗಾಗಿ.

ತಾಯಿ
ಆಗಲಿ, ಮಗು, ಗುರುಗಳ ಆಶೀರ್ವಾದ ಪರಮಾತ್ಮನ ಆಶೀರ್ವಾದಕ್ಕಿಂತಲೂ ಕಡಿಮೆಯಾದುದಲ್ಲ. ಅವರ ಕೃಪೆ ನಿನ್ನ ಮೇಲೆ ಇರಬೇಕು. ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಸಾಕ್ಷಾತ್ ಪರಮೇಶ್ವರ ಎಂದು ಮಹ್ಮಾರು ಹೇಳಿದ್ದಾರೆ. ಗುರುವನ್ನು ಭಕ್ತಿಯಿಂದ ಪೂಜಿಸು, ದೇವರು ಮೆಚ್ಚುತ್ತಾನೆ.

ಗೋಪಾಲ
ಏನು ಗುರುದಕ್ಷಿನೆ ಕೊಡಲಮ್ಮ?

ತಾಯಿ
ನಾನೇನು ಕೊಡಲಿ, ಮಗು? ನಿನ್ನಣ್ಣನನ್ನೇ ಕೇಳು, ನಾಳೆ ಶಾಲೆಗೆ ಹೋಗುವಾಗ. ಅವನೇ ಏನನ್ನಾದರೂ ಕೊಟ್ಟಾನು.

ಗೋಪಾಲ
ಹೌದಮ್ಮ, ಹಾಗೆಯೇ ಮಾಡುತ್ತೇನೆ.

ತಾಯಿ
ಗೋಪಾಲ, ನಿನ್ನಣ್ಣನನ್ನು ಯಾವಾಗಲೂ ಮರೆಯಬೇಡ. ಅವನ ಮೇಲೆ ನಿನ್ನ ಪ್ರೀತಿ ನಿರಂತರವಾಗಿರಲಿ. ನಿನಗೇನು ಬೇಕಾದರೂ ಅವನನ್ನೆ ಕೇಳು. ನಿನಗೇನು ಕಷ್ಟ ಬಂದರೂ ಅವನಿಗೆ ಹೇಳು.

ಗೋಪಾಲ
ಅಮ್ಮಾ, ನನ್ನಣ್ಣನನ್ನು ನೀನೂ ನೋಡುವೆಯಂತೆ, ನಾಳೆ ನನ್ನೊಡನೆ ಬಾ. ಪಾಪ! ಅವನಿಗೆ ದನ ಕಾಯುವ ಕೆಲಸ. ಇಲ್ಲಿಗೆ ಬರಲು ಸಮಯವಿಲ್ಲವಂತೆ.

ತಾಯಿ
ಬೇಡ, ಕಂದ ನಿನ್ನನ್ನು ನೋಡಿದರೇ ಸಾಕು, ಅವನನ್ನು ನೋಡಿದ ಹಾಗೆಯೆ. ನನ್ನ ಪಾಲಿಗೆ ನೀನೇ ಅವನು, ಅವನೇ ನೀನು.