(ಹಳ್ಲಿಯ ಮಠದ ಹುಡುಗರೆಲ್ಲಾರೂ ಗುರುದಕ್ಷಿಣೆ ಹಿಡಿದು ನಿಂತಿದ್ದಾರೆ. ಎಲ್ಲರೂ ಬಹು ಬೆಲೆಯುಳ್ಳ ವಸ್ತುಗಳನ್ನು ತಂದಿದ್ದಾರೆ. ಗೋಪಾಲನೂ ತನ್ನ ಕುಡಿಕೆಯನ್ನು ಹಿಡಿದುಕೊಂಡು ದೂರದಲ್ಲಿ ನಿಂತಿದ್ದಾನೆ.)

ರಾಮಚಂದ್ರ
ಕಿಟ್ಟಾ, ನೀನೇನು ತಂದಿರುವೆ?

ಕೃಷ್ಣಮೂರ್ತಿ
ನಾನೊಂದು ರತ್ನ, ಒಂದು ಧೋತಿ, ಒಂದು ಬೆಳ್ಳಿಯ ತಟ್ಟೆ! ನೀನೇನು ತಂದಿರುವೆ?

ರಾಮಚಂದ್ರ
(ತೋರಿಸುತ್ತಾ)
ಮುಗುಟ, ಹಣ್ಣು , ಚಿನ್ನದ ತಟ್ಟೆ.

ಕೃಷ್ಣಮೂರ್ತಿ
(ಮಾಧವನ ಕಡೆ ನೋಡಿ)
ನೀನು?

ಮಾಧವ
(ತೋರಿಸಿ)
ಚಿನ್ನದ ನಾಣ್ಯಗಳು, ತೆಂಗಿನಕಾಯಿ, ಬೆತ್ತದಿಂದ ಹೆಣೆದ ತಟ್ಟೆ. ನೀನೋ, ನಾಣೀ?

ನಾರಾಯಣ
ನಾನೊಂದು ಬಾಳೆಯ ಗೊನೆ, ಒಂದು ಜರತಾರಿ ಪಂಚೆ.

ರಾಮಚಂದ್ರ
ಗೋಪಾಲನೆಲ್ಲಿ?
(ನೋಡಿ)
ನೀನೇನು ತಂದಿದ್ದೀಯೋ?
(ಗೋಪಾಲ ತೋರಿಸುತ್ತಾನೆ.)

ಮಾಧವ
ಓಹೋ ಮಣ್ಣಿನ ಕುಡಿಕೆ!
(ಎಲ್ಲರೂ ನಗುತ್ತಾರೆ.)

ಗೋಪಾಲ
ತುಂಬಾ ಮೊಸರಿದೆ, ನಮ್ಮಣ್ಣ ಕೊಟ್ಟಿದ್ದು.

ಕೃಷ್ಣಮೂರ್ತಿ
ಗುರುಗಳೇನೆಂದು ತಿಳಿದುಕೊಂಡಾರು, ಮಣ್ಣಿನ ಕುಡಿಕೆ ಕೊಟ್ಟರೆ? ಬೇರೇನೂ ಇರಲಿಲ್ಲವೆ?

ಗೋಪಾಲ
ಅಮ್ಮ ‘ಏನೂ ಇಲ್ಲ, ನಾವು ಬಡವರು’ ಎಂದಳು. ಅದಕ್ಕೆ ನನ್ನಣ್ಣನ್ನ ಕೇಳಿದೆ. ಅವನು ಇದನ್ನು ಕೊಟ್ಟ. ಗುರುಗಳಿಗೆ ಹೇಳುತ್ತೇನೆ — ನಾವು ಬಡವರು ಎಂದು.

ನಾರಾಯಣ
ಹೋಗಲಿ ಬಿಡಿ, ಪಾಪ!
(ಗುರುಗಳು ಬಂದು ಕುಳಿತುಕೊಳ್ಳುತ್ತಾರೆ. ಒಬ್ಬೊಬ್ಬರಾಗಿ ತಾವು ತಂದ ಗುರುದಕ್ಷಿಣೆಗಳನ್ನು ಕೊಟ್ಟು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಗುರುಗಳು ಆಶೀರ್ವದಿಸುತ್ತಾರೆ. ಅನಂತರ ದೂರದಲ್ಲಿ ನಿಂತಿದ್ದ ಗೋಪಾಲನನ್ನು ನೋಡುತ್ತಾರೆ.)

ಗುರು
ಗೋಪಾಲ, ಅದೇಕೆ ದೂರ ನಿಂತಿದ್ದೀಯಾ? ಬಾ, ಏನು ತಂದಿದ್ದೀಯ, ಕೊಡು.
(ಬಾಲಕರು ನಗುತ್ತಾರೆ.)
ನಗುವುದೇಕೆ ಮಕ್ಕಳಿರಾ? ಗುರುಗಳಿಗೆ ಪ್ರೇಮದಿಂದ, ಭಕ್ತಿಯಿಂದ ಏನು ಕೊಟ್ಟರೂ ಅದು ಮಹತ್ತಾದ್ದೆ. ನನಗೆ ಬೇಕಾಗಿರುವುದು ದಕ್ಷಿಣೆಯ ಬೆಲೆಯಲ್ಲ, ಅದನ್ನು ಕೊಡುವವನ ಹೃದಯದಲ್ಲಿನ ಭಕ್ತಿ. ಬಾ, ಗೋಪಾಲ, ನೀನು ತಂದಿರುವುದನ್ನು ಕೊಡು, ನಾಚಿಕೆಯೇಕೆ?
(ಗೋಪಾಲನು ಕುಡಿಕೆಯನ್ನಿಟ್ಟು ನಮಸ್ಕಾರ ಮಾಡುತ್ತಾನೆ. ಗುರುಗಳು ಆಶೀರ್ವಾದ ಮಾಡಿ ಮೊಸರನ್ನು ಒಂದು ದೊಡ್ಡ ಪಾತ್ರೆಗೆ ಹೊಯ್ದು ಕುಡಿಕೆಯನ್ನು ಕೆಳಗಿಡುತ್ತಾರೆ.)

ರಾಮಚಂದ್ರ
ಇದೇನು, ಗುರುಗಳೆ! ಮೊಸರೆಲ್ಲಾ ಕುಡಿಕೆಯಲ್ಲಿಯೆ ಇದೆಯಲ್ಲ! ಬಹಳ ಗಟ್ಟಿಯಾದ ಮೊಸರಿರಬೇಕು.
(ಗುರುಗಳು ನೋಡಿ ಆಶ್ಚರ್ಯದಿಂದ ಅದನ್ನು ತೆಗೆದುಕೊಳ್ಳುತ್ತಾರೆ.)

ಗುರು
ಇದೇನು ಕೌತುಕ! ಮೊಸರನ್ನು ಪಾತ್ರೆಗೆ ಹೊಯ್ದಿದ್ದೇನೆ! ಆದರೂ ತುಂಬಾ ಇದೆ.
(ಮತ್ತೆ ಹೊಯ್ಯುತ್ತಾರೆ.)

ಕೃಷ್ಣಮೂರ್ತಿ
ಮತ್ತೂ ತುಂಬಾ ಇದೆ, ನೋಡಿ ಗುರುಗಳೆ!
(ಗುರುಗಳು ಬೆರಗಾಗಿ ಅದನ್ನೂ ಹೊಯ್ಯುತ್ತಾರೆ.)

ನಾರಾಯಣ
ಇದೇನಾಶ್ಚರ್ಯ! ಗೋಪಾಲ, ಇದನ್ನು ನಿನಗೆ ಯಾರು ಕೊಟ್ಟರು?

ಗೋಪಾಲ
ಕಾಡಿನಲ್ಲಿರುವ ನನ್ನಣ್ಣ ಗೋಪಾಲ.
(ಗುರುಗಳೆದ್ದು ಗೋಪಾಲನನ್ನು ಮುದ್ದಿಸುತ್ತಾರೆ.)

ಗುರು
ಗೋಪಾಲ, ನನಗೆ ಅವನನ್ನು ತೋರಿಸುವೆಯ? ಅವನನ್ನು ತೋರಿಸಿ ನನ್ನನ್ನು ಧನ್ಯನನ್ನಾಗಿ ಮಾಡು.
(ಗೋಪಾಲನೂ ಗುರುಗಳು ಹೋಗುತ್ತಾರೆ.)

ರಾಮಚಂದ್ರ
ಇದೇನಾಶ್ಚರ್ಯವೋ! ಎಷ್ಟು ಚೆಲ್ಲಿದರೂ ತುಂಬಿಕೊಳ್ಳುತ್ತದೆ. ಕುಡಿಕೆ?

ಕೃಷ್ಣಮೂರ್ತಿ
ಗೋಪಾಲನ ಪುಣ್ಯವೇ ಪುಣ್ಯ.

ಮಾಧವ
ಅವನಣ್ಣ ಇನ್ನಾರು ಅಲ್ಲ ಕಣೋ! ಅವನಮ್ಮ ಪೂಜಿಸುವ ವೇಣುಗೋಪಾಲನೇ ಇರಬೇಕು. ಬನ್ನಿ, ನಾವೂ ಓಡಿ ಹೋಗಿ ನೋಡೋಣ.

ನಾರಾಯಣ
ನಮಗೂ ಆ ಪುಣ್ಯ ಲಭಿಸಿದರೆ ಸಾಕು!
(ಎಲ್ಲರೂ ಓಡುತ್ತಾರೆ.) ‘>ಬೇಡ, ಕಂದ ನಿನ್ನನ್ನು ನೋಡಿದರೇ ಸಾಕು, ಅವನನ್ನು ನೋಡಿದ ಹಾಗೆಯೆ. ನನ್ನ ಪಾಲಿಗೆ ನೀನೇ ಅವನು, ಅವನೇ ನೀನು.