ಒಂದು ಕಾಡು ಸಂಜೆಯ ಸಮಯ. ಗೋಪಾಲನು ಶಾಲೆಯಿಂದ ಹಿಂತಿರುಗಿ ಬರುತ್ತಾನೆ. ತನ್ನ ಕೈಲಿದ್ದ ಚಾಪೆ ಮೊದಲಾದುವುಗಳನ್ನು ಕೆಳಗಿಟ್ಟು ಹೂಗಳನ್ನು ಆಯುತ್ತಾನೆ.

ಗೋಪಾಲ
ಈ ಮರದಲ್ಲಿ ಏನು ಹೂವಿನ ಗೊಂಚಲು! ಭಾರ ಹೆಚ್ಚಾಗಿ ತಲೆ ಬಾಗುತ್ತಿದೆ, ಮರ. ಈ ನೇರಿಲ ಹಣ್ಣು ಎಷ್ಟು ಕಪ್ಪಾಗಿವೆ!
(ಆಯ್ದು ತಿನ್ನುತ್ತಾನೆ.)
ಆಗಲೇ ಬೈಗಾಯ್ತು. ಏನು ಸೂರ್ಯನಪ್ಪ! ನಾನು ಮನೆಗೆ ಹೋಗುವವರೆಗಾದರೂ ಮುಳುಗದೇ ಕಾದರೆ! ಈ ಕಪ್ಪಿನಲ್ಲಿ ನನಗೊಬ್ಬನಿಗೇ ಹೆದರಿಕೆ. ಓಹೋ ಮರೆತಿದ್ದೆ. ಅಮ್ಮ ಹೇಳಿದ್ದು. ನನ್ನಣ್ಣ ಗೋಪಾಲ ಇಲ್ಲಿಯೇ ದನ ಕಾಯುತ್ತಿರುವಂತೆ. ಅವನನ್ನು ಕರೆಯುತ್ತೇನೆ. “ಗೋಪಾಲಣ್ಣಾ, ಗೋಪಾಲಣ್ಣಾ! ಗೋಪಾಲಣ್ಣಾ!” ಇದೇಕೆ, ಉತ್ತರವೇ ಇಲ್ಲ! ದನಗಳನ್ನು ಕಾಯುತ್ತಾ ಇನ್ನೆಲ್ಲಿಗೆ ಹೋದನೋ ಏನೋ? ಅದರೆ ಅಮ್ಮ ಹೇಳಿದ್ದಾಳೆ. ಇಲ್ಲಿಯೇ ಇರುತ್ತಾನೆಂತ. ಅಮ್ಮನ ಮಾತು ಸುಳ್ಳಗಲಾರದು! ಮತ್ತೆ ಕರೆದು ನೋಡುತ್ತೇನೆ; ಅಣ್ಣಾ, ಅಣ್ಣಾ! ಏ ಅಣ್ಣಾ! ನನಗೆ ಹೆದರಿಕೆ, ಅಣ್ಣಾ, ಕತ್ತಲಾಗಿತ್ತಿದೆ. ಎಲ್ಲಿದ್ದೀಯಾಣ್ಣಾ, ಏ ಗೋಪಾಲಣ್ಣಾ!

ಬನದ ಗೋಪಾಲ
(ತೆರೆಯೊಳಗಿಂದಲೆ)
ಏನೊ, ಗೋಪಾಲ?

ಗೋಪಾಲ
ಎಲ್ಲಿದ್ದೀಯಾ? ಹೆದರಿಕೆಯಾಗುತ್ತಿದೆ ನನಗೆ. ಅಮ್ಮ ಹೇಳಿದಳು. ಹೆದರಿಕೆ ಯಾದರೆ ನಿನ್ನನ್ನು ಕರೆ ಅಂತ.

ಬನದ ಗೋಪಾಲ
ಹೆದರಬೇಡ, ನಾನಿಲ್ಲಿಯೇ ಇದ್ದೇನೆ. ಧೈರ್ಯವಾಗಿ ಹೋಗು ಮನೆಗೆ.

ಗೋಪಾಲ
ಎಲ್ಲಿದ್ದೀಯೆ, ಬಾ’ ಣ್ಣಾ —

ಬನದ ಗೋಪಾಲ
ತುಂಬಾ ಕೆಲಸದ ಮೇಲಿದ್ದೇನೆ ಕಣೋ. ಈಗ ಬರುವುದಕ್ಕಾಗುವುದಿಲ್ಲ. ನೀನು ಹೋಗು.

ಗೋಪಾಲ
ನೀನೂ ಮನೆಗೆ ಬರುವುದಿಲ್ಲವೆ — ಅಮ್ಮನ್ನ ನೋಡುವುದಕ್ಕೆ? ಕತ್ತಲಲ್ಲಿ ಕಾಡಿನ ನಡುವೆ ಏಕಿರುವೆ?

ಬನದಗೋಪಾಲ
ನಾನು ಆಮೇಲೆ ಹಿಂದಿನಿಂದ ಬರುತ್ತೇನೆ, ಅಮ್ಮನಿಗೆ ಹೇಳು. ಅಮ್ಮ ನಿನಗಾಗಿ ಕಾದಿದ್ದಾಳೆ; ಬೇಗ ಹೋಗಪ್ಪ.

(ಗೋಪಾಲನು ಹೋಗುತ್ತನೆ. ಬನದ ಗೋಪಾಲನು ಕಾಡಿನಿಂದ ಇಚೆಗೆ ಬರುತ್ತಾನೆ. ತಲೆಯ ಮೇಲೆ ಸಣ್ಣದೊಂದು ಕಿರೀಟ, ನವಿಲುಗರಿ; ಕೈಲೊಂದು ಕೊಳಲು. ಗೋಪಾಲನು ಹೋಗುತ್ತಿರುವುದನ್ನೆ ನಗುತ್ತಾ ಸ್ಪಲ್ಪ ಹೊತ್ತು ನೋಡುತ್ತಾನೆ. ಬಳಿಕ ಕೊಳಲೂದಿ ಹಾಡುತ್ತಾನೆ.)

ಧನ್ಯಾಸಿ-ಆದಿತಾಳ

ತಿಳಿವಳಿಕೆಗೆ ನಾ ಸಿಲುಕೇ ಮನುಜಾ
ಒಲುಮೆಗೆ ಸೆರೆಯಾಗುವೆನು ||||

ತಪಸಿಗಳೆನ್ನನು ಜ್ಞಾನದಿ ಮುಟ್ಟಲು
ಯುಗಯುಗಗಳು ಬಲು ಬಳಲುವರು
ಯೋಗಿಗಳೆನ್ನನು ಜನುಮ ಜನುಮದಲಿ
ಹೊಂದಲು ಸಾಧನೆ ಮಾಡುವರು ||||

ಕಡಲಿನ ಬಿತ್ತರ ಸಾಲದು ಪವಡಿಸೆ
ಭಕ್ತಿಯ ಕಂಬನಿ ಮನೆ ಎನಗೆ
ಹಿಮಗಿರಿ ಎತ್ತರ ಸಾಲದು ನಾನಿರೆ
ಭಕ್ತನ ಹೃದಯವು ಸಾಕೆನಗೆ ||||

ಬೃಂದಾವನದಾ ಗೋಪಿಯರರಿತರೆ
ವೇದಗಳಾಡುವ ಸತ್ಯವನು?
ಹಾಲನು ಮಾರುವ ಹೆಣ್ಣುಗಳೊಲ್ಮೆಯೆ
ಮೀರದೆ ಯೋಗಿಯ ಸಾಧನೆಯ?  ||||

ತೆರೆ