(ಹಳ್ಳಿಯ ಮಠ. ನಾರಾಯಣ, ರಾಮಚಂದ್ರ, ಕೃಷ್ಣಮೂರ್ತಿ, ಮಾಧವ ಇವರೆಲ್ಲ ಮಾತಾಡುತ್ತಾ ತಮ್ಮ ತಮ್ಮ ಚಾಪೆಗಳ ಮೇಲೆ ಕುಳಿತ್ತಿದ್ದಾರೆ.)

ಮಾಧವ
ನಾಣೀ, ಈ ದಿನ ಪಾಠ ಗಟ್ಟಿ ಮಾಡಿದ್ದೀಯಾ?

ನಾರಾಯಣ
ಇಲ್ಲ ಕಣೋ, ಎಷ್ಟು ಓದಿದರೂ ತಲೆಗೆ ಅಂಟುವುದೇ ಇಲ್ಲ.

ಕೃಷ್ಣಮೂರ್ತಿ
ದೇವರು ಅಮರ ಬರೆದವನನ್ನು ಏಕೆ ಹುಟ್ಟಿಸಿದನೊ!

ರಾಮಚಂದ್ರ
ಹಾಗೆನ್ನಬೇಡ. ನಿನ್ನ ತಲೆಯಲ್ಲಿ ಮೆದುಳನ್ನಿಡದೆ ಬೂದಿಯನ್ನೇಕೆ ತುಂಬಿದನೋ ಅನ್ನು.

ಕೃಷ್ಣಮೂರ್ತಿ
ಓಹೋ! ಗುರುಗಳು ಇವನನ್ನು ಹೊಗಳಿದರೆಂದು ಆಗಲೇ ಇವನಿಗೆ ಜಂಭ. ಬಿಡೋ ಸಾಕು. ನಿನ್ನಂತೆ ಹಗಲಿರಳೂ ಓದಿದರೆ ನಾವೂ ಬಾಯಿಪಾಠ ಮಾಡುತ್ತೇವೆ.

ಮಾಧವ
ಇದೇಕೆ ಗೋಪಾಲ ಇನ್ನೂ ಬಂದಿಲ್ಲ?

ಕೃಷ್ಣಮೂರ್ತಿ
ಬಹು ದೂರದಿಂದ ಬರಬೇಕು. ಅದರಿಂದ ತಡವಾತಯಿತೊ ಏನೊ? ಪಾಪ! ಅವನಮ್ಮ ಬಹಳ ಬಡವಳು. ಅವನಿಗೆ ತಂದೆ ಇಲ್ಲ. ಅವನ ಜೀವನವೆ ಕಷ್ಟ.

ನಾರಾಯಣ
ಗೋಪಾಲ ಬಲು ಒಳ್ಳೆಯವನು. ಎಷ್ಟು ನಯ! ಏನು ನಡತೆ!

ಮಾಧವ
ಅದರಿಂದಲೇ ಗುರುಗಳಿಗೆ ಅವನಲ್ಲಿ ಅಷ್ಟು ಪ್ರೀತಿ.

ಕೃಷ್ಣಮೂರ್ತಿ
ಅವನ ತಾಯಿ ಮಹಾಭಕ್ತಳಂತೆ. ವೇಣುಗೋಪಾಲನಲ್ಲಿ ಆಕೆಗೆ ಅತ್ಯಂತ ಪ್ರೀತಿಯಂತೆ. ಅವನು ಆಕೆಗೆ ಬೇಕಾದುದನ್ನೆಲ್ಲಾ ತಂದು ಕೊಡುತ್ತಾನೆಂದೂ ಕೆಲವರು ಹೇಳುತ್ತಾರೆ.

ಮಾಧವ
ಎಲೋ, ಗುರುಗಳು ಬಂದರೊ! ಸದ್ದು ಮಾಡಬೇಡಿ.
(ಗುರುಗಳ ಪ್ರವೇಶ. ಎಲ್ಲರೂ ವಿನಯದಿಂದ ಕೈಮುಗಿದು ನಿಲ್ಲುತ್ತಾರೆ. ಗುರುಗಳು ಬಂದು ಚಾಪೆಯಮೇಲೆ ಕುಳಿತು ಸುತ್ತಲು ನೋಡಿ.)

ಗುರು
ಗೋಪಾಲನೆಲ್ಲಿ?

ರಾಮಚಂದ್ರ
ಅವನಿನ್ನೂ ಬಂದಿಲ್ಲ, ಗುರುಗಳೆ.

ಗುರು
ಏಕೆ? ಸ್ವಸ್ಥವಾಗಿದ್ದಾನೆಯಷ್ಟೆ?

ಕೃಷ್ಣಮೂರ್ತಿ
ನಿನ್ನೆ ಎಲ್ಲಾ ಆರೋಗ್ಯವಾಗಿದ್ದ. ಮನೆಯಲ್ಲಿ ಏನು ತೊಂದರೆಯೋ ಏನೊ? ಅದೂ ಅಲ್ಲದೆ ಬಹುದೂರದಿಂದ ಬರಬೇಕು.

ಗುರು
ಪಾಪ!
(ಗೋಪಾಲನು ಪ್ರವೇಶಿಸಿ, ಗುರುಗಳಿಗೆ ನಮಸ್ಕರಿಸಿ ಒಡನಾಡಿಗಳೊಡನೆ ಚಾಪೆ ಹಾಕಿಕೊಂಡು ಕುಳಿತು ಕೊಳ್ಳುತ್ತಾನೆ.)
ಗೋಪಾಲ, ಸೌಖ್ಯವಾಗಿದ್ದೀಯಾ?

ಗೋಪಾಲ
ಹೌದು, ಗುರುಗಳೆ — ತಮ್ಮ ಕೃಪೆ.

ಗುರು
ಮತ್ತೇಕೆ ಇಷ್ಟು ಹೊತ್ತಾಯ್ತು? ನಿನ್ನ ತಾಯಿ ಸುಖವಾಗಿ ಇರುವರಷ್ಟೆ?

ಗೋಪಾಲ
ತಾಯಿ ಸುಖವಾಗಿದ್ದಾರೆ. ನಾನು ಬರುವಾಗ ಬನದಲ್ಲಿ ನನ್ನಣ್ಣನೊಡನೆ ಸ್ವಲ್ಪ ಹೊತ್ತು ಮಾತನಾಡುತ್ತಿದ್ದೆ. ಆದ್ದರಿಂದ ಹೊತ್ತಾಯಿತು.

ಗುರು
ನಿನಗೊಬ್ಬ ಅಣ್ಣನಿರುವನೆ? ನನಗೆ ಗೊತ್ತಿರಲಿಲ್ಲ.

ಗೋಪಾಲ
ಹೌದು, ಗುರುಗಳೆ.

ಗುರು
ಅವನ ಹೆಸರೇನು?

ಗೋಪಾಲ
ಅವನ ಹೆಸರೂ ಗೋಪಾಲ ಅಂತ.

ಗುರು
ಅವನೇಕೆ ಶಾಲೆಗೆ ಬರುವುದಿಲ್ಲ? ಅವನ ಕೆಲಸವೇನು?

ಗೋಪಾಲ
ಅವನಿಗೆ ದನ ಕಾಯುವುದೇ ಕೆಲಸ.

ಗುರು
ಹಾಗಾದರೆ ಅವನಿಂದ ನಿಮ್ಮಮ್ಮನಿಗೆ ಸ್ವಲ್ಪ ಸಹಾಯವಾಗುತ್ತದೆ?

ಗೋಪಾಲ
ಹೌದು, ಗುರುಗಳೆ, ಬಹಳ ಸಹಾಯವಾಗುತ್ತದೆ.

ಗುರು
ಆಗಲಿ ಮಗು, ಅವನು ಸುಖವಾಗಿ ಬಾಳಲಿ. ನೀನೂ ಹಾಗೆಯೆ ನಿನ್ನ ತಾಯಿಗೆ ನೆರವಾಗಬೇಕು. ಮಕ್ಕಳು ದೇವರ ರಾಜ್ಯದ ಪ್ರಜೆಗಳು; ಹಾಗೆಯೆ ತಾಯಿ ದೇವರಿಗೆ ಸಮಾನ. ಈ ಪ್ರಪಂಚದಲ್ಲಿ ದೇವರ ಪ್ರೀತಿಯ ಮಹತ್ತು ತಾಯಿಯಾಗಿ ಮೈದೋರಿದೆ. ಆದ್ದರಿಂದಲೆ ತಾಯಿ ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೂ ಮರೆತು ಅವರ ಯೋಗಕ್ಷೇಮವನ್ನೆ ಸದಾ ತನ್ನ ಹೃದಯಮಂದಿರದಲ್ಲಿ ಪ್ರತಿಷ್ಠೆಮಾಡಿ ಪೂಜಿಸುತ್ತಾಳೆ. ಮಕ್ಕಳೆಂದರೆ ತಾಯಿಗೆ ಜೀವ; ಮಕ್ಕಳೇ ಅವಳ ಬಾಳಿಗೆ ಬಾಳು. ತಾಯಿಯ ಪ್ರೇಮದ ಶಕ್ತಿಯಿಂದಲೇ ಸೃಷ್ಟಿಚಕ್ರ ನಿಲ್ಲದೆ ತಿರುಗತ್ತದೆ. ಜಗತ್ತಿನ ಆನಂದಕ್ಕೆ ತಾಯಿಯ ಪ್ರೇಮವೇ ಆಧಾರ. ತಾಯಿಯ ವಾತ್ಸಲ್ಯವನ್ನು ಅನುಭವಿಸದವನ ಬಾಳು ಬಾಳಲ್ಲ, ಅದು ವ್ಯರ್ಥ. ಆದ್ದರಿಂದಲೆ ಪ್ರೇಮನಿಧಿಯಾದ ಪರಮಾತ್ಮನನ್ನು ಜಗಜ್ಜನನಿಯೆಂಬ ಭಾವನೆಯಿಂದ ಆರಾಧಿಸುತ್ತಾರೆ. ಕಳ್ಳನಾಗಲಿ, ಠಕ್ಕನಾಗಲಿ, ವಿದ್ವಾಂಸನಾಗಲಿ, ಮಹಾಪುರುಷನಾಗಲಿ, ಪಟುಭಟನಾಗಲಿ, ಯಾರೇ  ಆಗಲಿ ತಾಯಿಯ ಮುಂದೆ ಮಕ್ಕಳೇ ಹೊರತು ಕಳ್ಳನೂ ಅಲ್ಲ, ಠಕ್ಕನೂ ಅಲ್ಲ, ವಿದ್ವಾಂಸನೂ ಅಲ್ಲ, ಮಹಾಪುರುಷನೂ ಅಲ್ಲ, ಪಟುಭಟನೂ ಅಲ್ಲ. ಮಕ್ಕಳಿರಾ! ಹೆಚ್ಚೇನು? ತಾಯಿಗೂ ಪರಮಾತ್ಮನಿಗೂ ಯಾವ ಭೇದವೂ ಇಲ್ಲವೆಂದು ವೇದಗಳೇ ಸಾರುತ್ತಿವೆ. ಆದ್ದರಿಂದ ನೀವು ಯಾರೊಡನೆ ಹೇಗೆ ಬೇಕಾದರೂ ವರ್ತಿಸಿ, ತಾಯಿಯೊಡನೆ ಮಾತ್ರ ಮಕ್ಕಳಾಗಿರಿ. ಹಾಗಿರುವುದರಿಂದ ನಿಮಗೆ ಇಹಪರಗಳೆರಡರಲ್ಲಿಯೂ ಕಲ್ಯಾಣವುಂಟಾಗುತ್ತದೆ. ತಾಯಿಯ ಪ್ರೇಮವೇ ನಿಮ್ಮೆಲ್ಲರಾತ್ಮಗಳಿಗೆ ಜ್ಯೋತಿ, ಉತ್ಸಾಹ, ಆನಂದ ಶಕ್ತಿ, ಮುಕ್ತಿ.

ಗೋಪಾಲ
ಗುರುಗಳೆ, ತಮ್ಮ ಉಪದೇಶವನ್ನು ಭಕ್ತಿಯಿಂದ ಎದೆಯಲ್ಲಿಟ್ಟುಕೊಂಡು ನನ್ನ ನಡತೆಯಲ್ಲಿ ತೋರಿಸುತ್ತೇನೆ. ತಮ್ಮ ಕೃಪೆ ನನಗಿರಲಿ.

ಗುರು
ಬಾಲಕರೆ, ಇಂದಿನ ಪಾಠವನ್ನು ಪ್ರಾರಂಭಿಸುವುದಕ್ಕೆ ಮುಂಚೆ, ನಿಮಗೊಂದು ವಿಷಯ ಹೇಳಬೇಕಾಗಿದೆ. ನಾಳೆ ನಮ್ಮ ಮನೆಯಲ್ಲಿ ಒಂದು ವಿಶೇಷ ಕಾರ್ಯ ನಡೆಯುತ್ತದೆ. ಅದಕ್ಕಾಗಿ ನಿಮಗೆ ಮಂಗಳಕರವಾಗಲೆಂದು ನಿಮ್ಮಿಂದ ಗುರುದಕ್ಷಿಣೆ ಸ್ವೀಕರಿಸಬೇಕೆಂದು ಬಯಸುತ್ತೇನೆ. ನಿಮ್ಮ ನಿಮ್ಮ ಕೈಲಾದ ದಕ್ಷಿಣೆ ತಂದುಕೊಡಿ.

ಎಲ್ಲರೂ
(ಸಂತೋಷದಿಂದ)
ಆಗಲಿ, ಗುರುಗಳೆ.

ಗುರು
ಇನ್ನು ಇಂದಿನ ಪಾಠ ಪ್ರಾರಂಭಿಸೋಣ.
(ಎಲ್ಲರೂ ಪ್ರಾರ್ಥಿಸುತ್ತಾರೆ.)
ಹರಿ ಶಿವ ಕಮಲಜ ರೂಪದಿ ತೋರುವ ಪರಮಾತ್ಮಗೆ ತಲೆಬಾಗುವೆವು
ಸತ್ಯರೂಪನಿಗೆ ನಿತ್ಯನಾದವಗ ಭಕ್ತಿಯಿಂದ ಕೈಮುಗಿಯುವೆವು
ಜೀವಜಂತುಗಳಿಗೆಲ್ಲ ಶಾಂತಿಸುಖವಾಗಲೆಂದು ನೆರೆ ಪಾಡುವೆವು
ಸತ್ಯಧರ್ಮಗಳು ಹೆಚ್ಚೆ ಭೂಮಿಯೊಳು ನಿಚ್ಚ ನಾವುಗಳು ಬೇಡುವೆವು.