(ಒಂದು ಸಣ್ಣ ಗುಡಿಸಲು. ಅದರ ಜಗಲಿಯ ಮೇಲೆ ಒಂದು ಮೂಲೆಯಲ್ಲಿ ಒಂದು ಸಣ್ಣ ಗೋಪಾಲನ ವಿಗ್ರಹವಿರುವ ದೇವರ ಗೂಡು. ಗೋಪಾಲನ ತಾಯಿ ಒಂದು ಚರಕದ ಮುಂದೆ ಕುಳಿತು ನೋಲುತ್ತಿದ್ದಾಳೆ.)

(ಆಕೆ ಬಡ ಹೆಂಗಸು, ವಿಧವೆ.)

(ಬೆಳಗಿನ ಹೊತ್ತು)

ಗೋಪಾಲನ ತಾಯಿ
(ವೇಣುಗೋಪಾಲನ ವಿಗ್ರಹವನ್ನು ನೋಡಿ ಕೈಮುಗಿದುಕೊಂಡು)
ಶ್ರೀಕೃಷ್ಣ, ನನ ಮುದ್ದಿನ ಕಂದ, ಗೋಪಾಲ, ನಿನ್ನನ್ನೆ ನಂಬಿರುವೆ. ನೀನಲ್ಲದೆ ಇನ್ನಾರು ಗತಿಯೆನಗೆ? ನನಗೆ ಶಾಸ್ತ್ರಗಳ ಅರಿವಿಲ್ಲ, ವೇದಗಳ ತಿಳಿವಿಲ್ಲ. ಭಕ್ತಿಯೊಂದೇ ನನ್ನ ಬಲ. ಶ್ರೀಮಂತರು ಅರ್ಪಿಸುವ ಹಾಗೆ ನಿನಗೆ ಅರ್ಪಿಸಲು ನನ್ನಲ್ಲಿ ಸಿರಿಯಿಲ್ಲ. ಭಕ್ತವತ್ಸಲ ನೀನು, ಗೋಪಾಲ; ಕರುಣೆಯಿಂದೆನ್ನ ಕಾಪಾಡು. ನನ್ನ ಮುದ್ದು ಮಗು ಗೋಪಾಲನಿಗೆ ಆಯುರಾರೋಗ್ಯ ಸಂಪತ್ತುಗಳು ಬರುವಂತೆ ಮಾಡು. ಅವನ ಸಲಹುವ ಭಾರ ನಿನ್ನ ಮೇಲೆಯೇ, ಕೃಷ್ಣಾ. ಇಗೋ ಭಕ್ತಿ ಸುರಿಯುವ ಕಂಬನಿಯ ಮಾಲೆಯನು ನೆಯ್ದು, ಎದೆಯ ಪೊಂದಳಿಗೆಯಲ್ಲಿಟ್ಟು, ನಿನಗೆ ಅರ್ಪಿಸುವೆ; ಸ್ವೀಕರಿಸು, ಅನುಗ್ರಹಿಸು.

ಅಶರೀರವಾಣಿ
ಪತ್ರಂ ಪುಷ್ಫಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ !
ತದಹಂ ಭಕ್ತ್ಯು ಪಹೃತಂ ಅಶ್ನಾಮಿ ಪ್ರಯತಾತ್ಮನಃ ||

ತಾಯಿ
ಗೋಪಾಲ, ನೀನು ಕರುಣಾಸಾಗರ, ಅನಾಥರಕ್ಷಕ, ದೀನಬಂಧು. ಬಡವಳಾದ ನನ್ನ ಮೇಲೆ ನಿನ್ನ ಕರುಣೆಯ ಮಳೆಯನ್ನು ಕರೆದೆ! ಇಗೋ ನಿನಗೆ ಶರಣು, ಶರಣು.
(ಅಡ್ಡಬಿದ್ದು)
ನನ್ನ ಗೋಪಾಲನೆಲ್ಲಿ? ಹಾಸಿಗೆಯಿಂದ ಇನ್ನೂ ಏಳಲಿಲ್ಲವೊ ಏನೊ?
(ಒಂದು ಮೂಲೆಯ ಕಡೆ ನೋಡಿ)
ಗೋಪಾಲ, ಬೆಳಗಾಯ್ತು, ಮೇಲೇಳು; ನೋಡಲ್ಲಿ, ಸೂರ್ಯನಾರಾಯಣನು ತನ್ನ ಚಿನ್ನದ ಕಿರಣಗಳಿಂದ ಬಾವಿಯ ಬಾಳಿಯ ತೆಂಗಿನ ಮರದ ತುದಿಯಲ್ಲಿ ತೊಳಗುತ್ತಿದಾನೆ. ಕೇಳಲ್ಲಿ ಹಕ್ಕಿಗಳು ಹಾಡುತ್ತ, ಹಾರಾಡಿ ಕೆರೆಯುತ್ತಿವೆ ನಿನ್ನ. ಹೂಗಳು ಅರಳಿ ಬನದಲ್ಲಿ ನಿನಗಾಗಿ ಕಾದುಕೊಂಡಿವೆ. ಎದ್ದೇಳು ಗೋಪಾಲ. ಶಾಲೆಗೆ ಹೊತ್ತಾಗುತ್ತದೆ. ಗುರುಗಳೇನೆಂದಾರು?
ಏಳು ಗೋಪಾಲ, ನನ್ನ ಕಂದಾ.
(ಗೋಪಾಲನು ಶುಚುಯಾದ ಬಟ್ಟೆಗಳನ್ನು ಉಟ್ಟುಕೊಂಡು, ಬುಟ್ಟಿಯಲ್ಲಿ ಹೂಗಳನ್ನು ಕೊಯ್ದುಕೊಂಡು ಬೇಗ ಬರುತ್ತಾನೆ.)

ಗೋಪಾಲ
ಕರೆದೆಯೇನಮ್ಮ?

ತಾಯಿ
ಹೌದು, ಮಗು. ಮಲಗಿದ್ದೆಯೆಂದು ಕರೆದೆ. ಎಲ್ಲಿಗೆ ಹೋಗಿದ್ದೆ?

ಗೋಪಾಲ
ಆಗಲೆ ಎದ್ದು ಸ್ನಾನಮಾಡಿ ನಿನಗೆ ಗೋಪಾಲನ ಪೂಜೆಗೆ ಬೇಕಾದ ಹೂಗಳನ್ನು ಕೊಯ್ಯಲೆಂದು ಬನಗಳಿಗೆ ಹೋಗಿದ್ದೆ.

ತಾಯಿ
ಹೂ ಕೊಯ್ದೆಯೇನು?

ಗೋಪಾಲ
ಹೌದಮ್ಮ, ನೋಡಿಲ್ಲಿ!
(ಬುಟ್ಟಿಯನ್ನು ತೋರಿಸುತ್ತ)
ಬನದಲ್ಲಿ ಏನಮ್ಮ ಸೊಗಸು! ಏನು ಆನಂದ! ಮಲ್ಲಿಗೆಯ ಹೂವು, ಕೇದಗೆಯ ಹೂವು, ಸಂಪಿಗೆಯ ಹೂವು, ಪರ್ವತಬಾಳೆಯ ಹೂವು, ಗೋರಂಟೆಯ ಹೂವು! ಏನಮ್ಮ, ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ತೊರಿತ್ತು. ಆಮೇಲೆ ಹಕ್ಕಿಗಳ ಇಂಪಾದ ಗಾನ! ತಂಗಾಳಿ! ಸೂರ್ಯದೇವನ ಹೊಂಬೆಳಕು! ಹಸರಾದ ಚಿಗುರು ಹುಲ್ಲಿನ ಮೇಲೆ ಕೋಟ್ಯಂತರ ಹಿಮಮಣಿಗಳು ಮಿರುಗುವ ಲೀಲೆ! ಮನೆಗಿಂತ ಬನವೇ ಸೊಗಸಮ್ಮ, ನೀನೊಬ್ಬಳಲ್ಲಿದ್ದರೆ….

ತಾಯಿ
ಹೌದು, ಕಂದಾ! ಅವುಗಳೆಲ್ಲ ನೋಡು, ಆ ಗೋಪಾಲನ ಲೀಲೆ!
(ವಿಗ್ರಹವನ್ನು ತೋರಿಸುತ್ತಾಳೆ.)
ಹೂಗಳನ್ನು ಅಲ್ಲಿಟ್ಟು ನೀನು ಶಾಲೆಗೆ ಹೋಗು. ಹೊತ್ತಾಗಿ ಹೋದರೆ ಗುರುಗಳು ನೊಂದುಕೊಳ್ಳುತ್ತಾರೆ. ನಿನಗಾಗಿ ಗಂಜಿ ಮಾಡಿಟ್ಟಿದ್ದೇನೆ.

ಗೋಪಾಲ
ಆಗಲಮ್ಮ, ಹೋಗುತ್ತೇನೆ. ಅಮ್ಮ, ನಾನು ಬರುವಾಗ ಕಾಡು ದಾಟಿ ಬರಬೇಕು ಬೈಗಿನ ಹೊತ್ತು ನನಗಲ್ಲಿ ಒಬ್ಬನೇ ಬರುವುದಕ್ಕೆ ಹೆದರಿಕೆ. ಜೊತೆಗೆ ಯಾರಾದರೂ ಬೇಕಮ್ಮ. ನೆರೆಯೂರಿನಿಂದ ಬರುವ ಹುಡುಗರಿಗೆ ಜೊತೆಗೆ ಆಳುಗಳಿರುವರಮ್ಮ. ರಾಮು, ಕಿಟ್ಟಿ, ನಾಣಿ, ಮಾಧು ಇವರೆಲ್ಲರಿಗೂ ಒಬ್ಬೊಬ್ಬ ಆಳು. ನನಗೆ ಮಾತ್ರ ಯಾರೂ ಇಲ್ಲ.

ತಾಯಿ
ಮಗೂ, ಅವರೆಲ್ಲ ಶ್ರೀಮಂತರ ಮಕ್ಕಳು; ಬೇಕಾದಷ್ಟು ಹಣವಿದೆ. ನಮಗೆಲ್ಲಿ ಬರಬೇಕು? ನೀನೇ ಬಲ್ಲೆ, ಹೊಟ್ಟೆಗೆ ಹಿಟ್ಟು ಸಿಕ್ಕುವುದೇ ಕಷ್ಟ. ನೂಲು ಮಾರಿ ಬಂದ ಮೂರು ಕಾಸಿನಲ್ಲಿ ನಮ್ಮ ಸಂಸಾರವೆಲ್ಲ ಸಾಗಬೇಕು. ನೋಡು, ಆ ಗೋಪಾಲ ಕೊಡಬೇಕು ನಾವು ಉಣಬೇಕು.

ಗೋಪಾಲ
ಅಮ್ಮಾ, ನನಗೊಂದು ಹೊಸ ಪಂಚೆ ಕೊಡುವೆನೆಂದು ಮೊನ್ನೆಯೇ ಹೇಳಿದ್ದೆ; ಇಂದು ಕೊಡುತ್ತಿಯಾ? ನನ್ನ ಗೆಳೆಯರೆಲ್ಲರೂ ನನ್ನನ್ನು ಹಾಸ್ಯಮಾಡುತ್ತಾರಮ್ಮ. ಅವರೆಲ್ಲಾ ಬೆಲೆಯುಳ್ಳ ಬಟ್ಟೆ ಹಾಕಿಕೊಂಡು ಬರುತ್ತಾರೆ.

ತಾಯಿ
ಕೊಡುತ್ತೇನೆ, ಕಂದ, ನಿನಗಾಗಿ ಹಗಲಿರಳೂ ನೂತು ಅದನ್ನು ಸಂಪಾದಿಸಿದ್ದೇನೆ. ಹೋಗು, ಗಂಜಿಯುಂಡು ಬಾ! ಕೊಡುತ್ತೇನೆ.
(ಗೋಪಾಲ ಹೂವಿನ ಬುಟ್ಟಿಯನ್ನು ಇಟ್ಟು ಹೋಗುತ್ತಾನೆ.)
ಲಕ್ಷೀಶ, ಇದುವರೆಗೆ ನಾನು ಬಡವಳೆಂದು ನನಗೆ ತಿಳಿದಿರಲಿಲ್ಲ. ಇಂದು ನನ್ನ ಗೋಪಾಲನ ಬಯಕೆ ನನಗದನ್ನು ತಿಳಿಸಿತು. ಅಯ್ಯೋ! ಆ ಮಗುವಿಗೆ ಬಡತನದ ಬವಣೆಯೇಕೆ? ಇದುವರೆಗೆ ಅವನು ಕೇಳಿದ ವಸ್ತುವನ್ನೆಲ್ಲ ಕೊಟ್ಟು ಅವನಿಗೆ ಬಡತನದ ಸುದ್ದಿಯನ್ನೇ ತಿಳಿಸದಿದ್ದೆ. — ಇಂದು ಅವನ ಜೊತೆಗೆ ಯಾರನ್ನು ಕಳುಹಿಸಲಿ? ಕಾಡಿನಲ್ಲಿ ಮುದ್ದು ಕಂದನಿಗೆ ಹದರಿಕೆಯಂತೆ ಗೋಪಾಲ!

ಅಶರೀರವಾಣಿ
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||

ತಾಯಿ
ಆಗಲಿ, ಗೋಪಾಲ, ನಿನ್ನನ್ನೇ ನಂಬುವಂತೆ ಹೇಳಿ, ನನ್ನ ಗೋಪಾಲನನ್ನ ಕಳುಹಿಸುತ್ತೇನೆ.
(ಗೋಪಾಲನು ಬಗಲಲ್ಲಿ ಒಂದು ಸಣ್ಣ ಚಾಪೆ ಇಟ್ಟುಕೊಂಡು. ಕೈಯಲ್ಲಿ ಓಲೆ ಹಿಡಿದು, ಲೇಖನಿ ತೆಗೆದುಕೊಂಡು ಸಿದ್ಧನಾಗಿಬರುತ್ತಾನೆ.)

ಗೋಪಾಲ
ಅಮ್ಮ, ನಾನು ಶಾಲೆಗೆ ಹೊರಡುತ್ತೇನೆ.
(ತಾಯಿಗೆ ನಮಸ್ಕಾರ ಮಾಡುತ್ತಾನೆ.)

ತಾಯಿ
ಹಣೆಗೆ ತಿಲಕವನ್ನಿಟ್ಟುಕೋ, ಕಂದ, ಆ ಕರಡಿಗೆ ತೆಗೆದು ಕೊಂಡು ಬಾ, ಇಲ್ಲಿ.
(ಗೋಪಾಲನು ಕರಡಿಗೆ ತಂದುಕೊಡುತ್ತಾನೆ. ತಾಯಿ ತಿಲಕವನ್ನಿಡುತ್ತಾಳೆ.)
ಕಂದಾ, ಸುಖವಾಗಿ ಹೋಗಿ ಬಾ. ಗೋಪಾಲನು ನಿನ್ನ ಜೊತೆಗೆ ಇರಲಿ. ತೆಗೆದುಕೊ, ಈ ಪಂಚೆಯನ್ನು.
(ಕೊಡುತ್ತಾಳೆ.)
ನೀನು ಶಾಲೆಯಿಂದ ಬರುವಾಗ ಕಾಡಿನಲ್ಲಿ ಹೆದರಿಕೆಯಾದರೆ ಗೋಪಾಲನನ್ನು ಕೂಗು. ಬರುತ್ತಾನೆ.

ಗೋಪಾಲ
ಯಾರಮ್ಮ ಅವನು?

ತಾಯಿ
ನಿನ್ನಣ್ಣ, ನನ್ನ ಹಿರಿಯ ಮಗ. ಕಾಡಿನಲ್ಲಿ ಅವನು ಯಾವಾಗಲು ದನ ಕಾಯುತ್ತಾ ಇರುತ್ತಾನೆ. ನೀನು ಕರೆದರೆ ಬಂದು ನಿನ್ನನ್ನ ಕಾಡು ದಾಟಿಸುತ್ತಾನೆ.

ಗೋಪಾಲ
ಅಮ್ಮ, ಅವನಿಗೆ ನನ್ನ ಗುರುತಿದೆಯೆ?

ತಾಯಿ
ಹೌದು, ಅವನಿಗೆ ಎಲ್ಲರ ಗುರುತೂ ಇರುತ್ತದೆ. ನೀನು ಹೆದರಬೇಡ, ಹೊಗು. ನೀನು ಕರೆದರೆ ಬಂದೇ ಬರುತ್ತಾನೆ.
(ಗೋಪಾಲನು ಹೋಗುತ್ತಾನೆ.)
ನನ್ನ ಭಕ್ತಿಗೆ ಬಲವಿಲ್ಲೆಂದು ಕೋಪಮಾಡಬೇಡ, ಗೋಪಾಲ.
(ವಿಗ್ರಹಕ್ಕೆ ಪುನಃ ಅಡ್ಡಬೀಳುತ್ತಾಳೆ.)