(ಕಾಡು. ಗೋಪಾಲನ ಕೈಹಿಡಿದು ಗುರುಗಳು ಬರುತ್ತಾರೆ.)

ಗುರು
ಗೋಪಾಲ, ನಿನ್ನ ಭಾಗ್ಯಕ್ಕೆ ಎಣೆಯಿಲ್ಲ. ದಿನವೂ ನಿನಗವನು ಕಾಣುವನೆ?

ಗೋಪಾಲ
ಹೌದು, ಗುರುಗಳೆ, ದಿನವೂ ನಾನು ನನ್ನಣ್ಣನೊಡನೆ ಮಾತಾಡುತ್ತೇನೆ. ಆಟ ವಾಡುತ್ತೇನೆ. ಅವನು ಕೊಳಲೂದುವುದನ್ನೂ ಕೇಳುತ್ತೇನೆ.

ಗುರು
ಎಲ್ಲಿ, ಇದೇ ಸ್ಥಳದಲ್ಲಿಯೆ?

ಗೋಪಾಲ
ಹೌದು, ಕರೆಯುತ್ತೇನೆ, ತಾಳಿ. “ಅಣ್ಣಾ, ಅಣ್ಣಾ, ಗೋಪಾಲಣ್ಣಾ.”
(ಉತ್ತರವಿಲ್ಲ.)

ಗುರು
ಏನೋ, ಉತ್ತರವೇ ಇಲ್ಲ.

ಗೋಪಾಲ
ಅಣ್ಣಾ. ಗೋಪಾಲಣ್ಣಾ, ನಮ್ಮ ಗುರುಗಳು ಬಂದಿದ್ದಾರೆಯೋ ಬಾರೋ.
(ಸ್ವಲ್ಪ ಅಲಿಸಿ)
ಅಣ್ಣಾ, ಏ ಅಣ್ಣಾ!

ಗುರು
ಏನು ಗೋಪಾಲ ನಿಜವಾಗಿಯೂ ಬರುತ್ತಿದ್ದನೆ?

ಗೋಪಾಲ
ಹೌದು, ಗುರುಗಳೆ, ನಾನು ಸುಳ್ಳು ಹೇಳುತ್ತೇನೆಯೆ? ನೋಡಿ ಇದೇ ಹಾಸುಗಲ್ಲಿನ ಮೇಲೆ ಎಷ್ಟೋ ಸಲ ಇಬ್ಬರೂ ಕುಳಿತು ಹರಟೆಯಾಡಿದ್ದೇವೆ. ಸ್ವಲ್ಪ ತಾಳಿ, ಅವನೇನೋ ಕೆಲಸದ ಮೇಲಿರಬಹುದು. ಮತ್ತೆ ಕರೆಯುತ್ತೇನೆ. “ಅಣ್ಣಾ, ಅಣ್ಣಾ, ಏ ಗೋಪಾಲಣ್ಣಾ!”
(ನಿರುತ್ತರ. ಗೋಪಾಲನು ದುಃಖದಿಂದ)
ಏ ಅಣ್ಣಾ,  ಬಾರೋ, ಗುರುಗಳೂ ಬಂದಿದ್ದಾರೊ. ನೀನು ಬಾರದಿದ್ದಲ್ಲಿ ಸುಳ್ಳು ಹೇಳುತ್ತೇನೆಂದು ತಿಳಿದುಕೊಳ್ಳತ್ತಾರೋ, ಬಾರೋ.

ಬನದ ಗೋಪಾಲ
(ಕಾಣಿಸಿಕೊಳ್ಳದೆ)
ಏನು, ಗೋಪಾಲ?

ಗೋಪಾಲ
ಕೇಳಿಸಿತೆ, ಗುರುಗಳೆ?

ಗುರು
ಹೌದು. ಅವನು ಇಲ್ಲಿಗೆ ಬರುವಂತೆ ಹೇಳಪ್ಪ. ನಾನೂ ನೋಡಬೇಕು.

ಗೋಪಾಲ
ಅಣ್ಣಾ, ಗುರುಗಳು ನಿನ್ನನ್ನು ನೋಡಬೇಕಂತೆ, ಇಲ್ಲಿ, ಬಾ ‘ ಣ್ಣ.

ಬನದ ಗೋಪಾಲ
(ಕಾಣಿಸಿಕೊಳ್ಳದೆ)
ತಮ್ಮಾ, ಗೋಪಾಲ, ನಿನ್ನ ತಾಯಿಯ ಭಕ್ತಿ, ನಿನೊಲ್ಮೆ ಇವುಗಳಿಗೆ ಮೆಚ್ಚಿ ನಿಮಗೆ ಕಾಣಿಸಿಕೊಂಡು ನಿನ್ನೊಡನೆ ಆಟವಾಡುತ್ತೇನೆ. ನಿಮ್ಮ ಗುರುಗಳಿಗೆ ಹೇಳು: ನನ್ನನ್ನು ನೋಡುವ ಕಾಲ ಅವರಿಗಿನ್ನೂ ಬಂದಿಲ್ಲ. ಅವರಿನ್ನೂ ಬಹುಕಾಲ ಕಾಯಬೇಕು.
(ಗೋಪಾಲನು ಕಂಬನಿ ತುಂಬಿ ಗುರುಗಳ ಕಡೆ ನೋಡುತ್ತಾನೆ. ಗುರುಗಳು ಅವನ್ನನ್ನು ಮುದ್ದಾಡುತ್ತಾರೆ.)

ಗುರು
ಕಂದ, ಗೋಪಾಲ, ನೀನೆ ಧನ್ಯ! ನಿನ್ನನ್ನು ಪಡೆದ ಮಾತೆಯ ಪವಿತ್ರಳು; ನಿನ್ನ ಸಂಗ ಲಭಿಸಿದ ನಾನೇ ಪುಣ್ಯವಂತ. ನಿನ್ನಣ್ಣನನ್ನು ನಾನಿನ್ನು ನೋಡುವುದೇಕೆ? ನಿನ್ನನ್ನು ನೋಡಿದೆನಲ್ಲಾ ಅಷ್ಟೇ ಸಾಕು. ಯಾವ ಜನ್ಮದ ಪುಣ್ಯ ಫಲವೋ ಇದು? ಭಕ್ತನಿಗೂ ಭಗವಂತನಿಗೂ ಭೇದಲಿಲ್ಲ. ನನ್ನ ಪಾಲಿಗೆ ನೀನೇ ಅವನು!
(ಹುಡುಗರೆಲ್ಲಾ ಓಡಿಬರುತ್ತಾರೆ.)
ಮಕ್ಕಳಿರಾ, ವೇಣುಗೋಪಾಲನ ಒಡನಾಡಿಯಾದ ಈ ಗೋಪಾಲನನ್ನು ನೋಡುವ ನಾವೇ ಧ್ಯನರು. ಬನ್ನಿ, ಎಲ್ಲರೂ ಸೇರಿ ಪರಮಾತ್ಮನನ್ನು ಪ್ರಾರ್ಥಿಸೋಣ.
(ಎಲ್ಲರೂ ಹಾಡುತ್ತಾರೆ.)
ಜಯತು ಜಯ ಜಗದಂತರಾತ್ಮನಿಗೆ ಜಯತು ಜಯತು
ಜಯತು ಜಯ ಚೈತನ್ಯವಾರಿಧಿಗೆ ಜಯತು ಜಯತು
ಜಯತು ಜಯ ಸಚ್ಚಿದಾನಂದನಿಗೆ ಜಯತು ಜಯತು
ಜಯತು ಜಯ ಪರಮ ಕರುಣಾನಿಧಿಗೆ ಜಯತು ಜಯತು
ಜಯತು ಜಯ ಭಕ್ತಸುರಭೂಜನಿಗೆ ಜಯತು ಜಯತು
ಜಯತು ಜಯ ಶ್ರೀರಾಮಕೃಷ್ಣರಿಗೆ ಜಯತು ಜಯತು