(ಕಾಡು. ಶಾಲೆಗೆ ಹೋಗುವ ಗೋಪಾಲನು ಬರುತ್ತಾನೆ. ಸುತ್ತಲೂ ನೋಡುತ್ತಾನೆ.)
ಗೋಪಾಲ
ಅಣ್ಣಾ, ಅಣ್ಣಾ!
(ಕೋಗಿಲೆ ಕೂಗುತ್ತದೆ.)
ನಿನ್ನನ್ನಲ್ಲ ನಾನು ಕೂಗಿದ್ದು. ಅಣ್ಣನ್ನ. ಸುಮ್ಮನೆ ಅಣಕಿಸಬೇಡ. ಅಣ್ಣಾ, ಅಣ್ಣಾ!
(ಅಳಿಲು ಕೂಗುತ್ತದೆ.)
ಈ ಅಳಿಲೇನು ಸುಮ್ಮನೆ ಕಿರಿಚುತ್ತದೆ. ಅಣ್ಣಾ ಎಂದರೆ ನೀನೇ ಏನು? ಅಣ್ಣಾ!
ಬನದ ಗೋಪಾಲ
ಏನು ಗೋಪಾಲ?
ಗೋಪಾಲ
ಹೊರಗೆ ಬಾರಣ್ಣ, ಅಮ್ಮ ಹೇಳಿದ್ದಾಳೆ.
ಬನದ ಗೋಪಾಲ
ನನಗೆ ತುಂಬಾ ಕೆಲಸವಿದೆ. ನೀನು ಶಾಲೆಗೆ ಹೋಗಿ ಬಾ.
ಗೋಪಾಲ
ಅದಾಗದು ನೀನು ಬರಲೇಬೇಕು. ದಿನವೂ ಕೆಲಸವಿದೆ, ಕೆಲಸವಿದೆ ಎನ್ನುವೆ! ಏನು ಕೆಲಸ? ನೀನು ಹೊರಗೆ ಬಂದ ಹೊರತು ನಾನು ಹೋಗುವುದಿಲ್ಲ.
ಬನದ ಗೋಪಾಲ
ಹಾಗೆಲ್ಲ ಹಟಮಾಡಬಾರದು, ತಮ್ಮಾ. ನಾನು ಬಂದರೆ ದನಗಳೆಲ್ಲ ಚೆದರಿ ಓಡಿಹೋಗುತ್ತವೆ. ನೀನು ಹೋಗು.
ಗೋಪಾಲ
ನಾನೊಲ್ಲೆ. ಅಮ್ಮ ತಿಂಡಿ ಕಳುಹಿಸಿದ್ದಾಳೆ. ನಿನಗದನ್ನು ಕೊಡಬೇಕು. ಕೊಡದೆ ಇದ್ದರೆ ಬೈಯುತ್ತಾಳೆ. ನೀನು ಬಂದ ಹೊರತು ನಾನು ಬೇರೆ ಹೋಗುವುದಿಲ್ಲ. ಶಾಲೆಗೆ ಹೊತ್ತಾದರಾಗಲಿ ಗುರುಗಳಿಗೆ ಹೇಳುತ್ತೇನೆ.
ಬನದ ಗೋಪಾಲ
ಸಾಕಪ್ಪ ನಿನ್ನ ಕಾಟ. ಹೇಳಿದ ಮಾತು ಕೇಳುವುದಿಲ್ಲ.
(ಬನದಿಂದ ಹೊರಟು ಬರುತ್ತಾನೆ. ಹಿಂದೆ ಇದ್ದಂತೆಯೇ ತಲೆಯಮೇಲೆ ಸಣ್ಣ ಮಕುಟ, ನವಿಲಗರಿ; ಕೈಲೊಂದು ಕೊಳಲು. ಕೊರಳಲ್ಲಿ ಹಾರ ಮತ್ತು ನೊಸಲಲ್ಲಿ ಗಂಧ.)
ಏನು ಬೇಕಪ್ಪ, ಹೇಳೀಗ.
ಗೋಪಾಲ
(ಓಡಿಹೋಗಿ ಅವನನ್ನು ಹಿಡಿದುಕೊಂಡು ನಿಟ್ಟಿಸಿ ನೋಡುತ್ತಾನೆ.)
ಅಣ್ಣಾ, ನಿನಗೆ ಈ ಹಾರ ಯಾರು ಕೊಟ್ಟರು?
ಬನದ ಗೋಪಾಲ
ನನಮ್ಮ ಕೊಟ್ಟದ್ದು, ಏಕೆ?
ಗೋಪಾಲ
ಇದೇ ಹಾರವನ್ನು ನಮ್ಮಮ್ಮ ವೇಣುಗೋಪಾಲನ ಕೊರಳಿಗೆ ಹಾಕಿದ್ದಳು. ಅಣ್ಣಾ, ಈ ನವಿಲಗರಿ ಎಲ್ಲಿ ಸಿಕ್ಕಿತು ನಿನಗೆ?
ಬನದ ಗೋಪಾಲ
ಬನದಲ್ಲಿ ಇವುಗಳಿಗೇನು ಬರಗಾಲ, ಬೇಕಾದಷ್ಟಿವೆ.
ಗೋಪಾಲ
ನನಗೂ ಒಂದು ಕೊಡುತ್ತಿಯೇನಣ್ಣ. ಆ ಬಣ್ಣದ ಕಣ್ಣು ಎಷ್ಟು ಚೆಲುವಾಗಿದೆ!
ಬನದ ಗೋಪಾಲ
ನಿನಗೇಕೆ, ತಮ್ಮಾ? ಇವುಗಳೆಲ್ಲಾ ಬನದಲ್ಲಿರುವವರಿಗಲ್ಲದೆ ಮನೆಯಲ್ಲಿರುವವರಿಗಲ್ಲ.
ಗೋಪಾಲ
ನಾನೂ ಬನದಲ್ಲಿರುತ್ತೇನೆ, ನಿನ್ನೊಡನೆ.
ಬನದ ಗೋಪಾಲ
ಸರಿ, ಸರಿ, ನಿನ್ನ ಮಾತು ಕೇಳಿದರೆ! ಆಮೇಲೆ ಅಮ್ಮ ಸಮ್ಮನೆ ಬಿಟ್ಟಾಳೆ, ನನ್ನ?
ಗೋಪಾಲ
ಹಾಗಾದರೆ ನೀನೂ ಬಾ, ಮನೆಗೆ.
ಬನದ ಗೋಪಾಲ
ಆಮೇಲೆ ಇಲ್ಲಿ ದನ ಕಾಯುವವರಾರು? ನೀನು ಶಾಲೆಗೆ ಹೋಗಿ ಹಿಂತಿರುಗಿ ಬರುವಾಗ ಧೈರ್ಯ ಹೇಳುವವರಾರು? ಅದೆಲ್ಲಾ ಆಗದ ಹೋಗದ ಮಾತು ಸುಮ್ಮನಿರಪ್ಪ. ಕಾಟ ಕೊಡಬೇಡ. ಅಣ್ಣನ ಮಾತು ಕೇಳಬೇಕು.
ಗೋಪಾಲ
ಅಮ್ಮ ನಿನಗೋಸ್ಕರ ಈ ತಿಂಡಿ ಕೊಟ್ಟಿದ್ದಾಳೆ, ತೆಗೆದುಕೊ.
(ಕೊಡುತ್ತಾನೆ.)
ಬನದ ಗೋಪಾಲ
ಇದರ ಹೆಸರೇನು, ಗೋಪಾಲ?
ಗೋಪಾಲ
ಅಯ್ಯೋ! — ಗೊತ್ತಿಲ್ಲವೆ? ಅವಲಕ್ಕಿ ಮೊಸರು.
ಬನದ ಗೋಪಾಲ
(ನಗುತ್ತ)
ನನಗೆ ಕಾಡಿನಲ್ಲಿ ಹಣ್ಣು ಹಂಪಲು ತಿನ್ನುವುದೇ ವಾಡಿಕೆ.
ಗೋಪಾಲ
ಅಣ್ಣಾ, ನಿನಗೆ ಕೊಳಲೂದುವುದಕ್ಕೆ ಬರುತ್ತದೆಯೆ? ನಾನೂ ಸ್ವಲ್ಪ ಆಲಿಸಬೇಕು. ಊದು ನೋಡೋಣ.
ಬನದ ಗೋಪಾಲ
ನಿನಗೆ ಶಾಲೆಗೆ ಹೊತ್ತಾಗುವುದಿಲ್ಲವೆ?
ಗೋಪಾಲ
ಹೊತ್ತಾದರಾಯಿತು. ಓಡಿ ಹೋಗುತ್ತೇನೆ. ಊದು.
(ಬನದ ಗೋಪಾಲನು ಊದುತ್ತಾನೆ. ಗೋಪಾಲನು ಮೈ ಮರೆತು ಮಗ್ನನಾಗುತ್ತಾನೆ. ಬನದ ಗೋಪಾಲನು ಊದುವುದನ್ನು ನಿಲ್ಲಿಸಿ ಕರೆಯುತ್ತಾನೆ.)
ಬನದ ಗೋಪಾಲ
ಗೋಪಾಲ!
(ಮಾತಿಲ್ಲ.)
ಗೋಪಾಲ!
(ಮೈಮುಟ್ಟುತ್ತಾನೆ.)
ಗೋಪಾಲ
(ಬೆಚ್ಚಿಬಿದ್ದು, ಬಿಸುಸುಯ್ದು)
ಅಣ್ಣಾ, ನಾನೀಗ ಎಲ್ಲಿದ್ದೇನೆ?
ಬನದ ಗೋಪಾಲ
ಅದೇಕೆ ಹೀಗೆ ಕೇಳುವೆ? ಕಾಡಿನಲ್ಲಿ.
ಗೋಪಾಲ
ಹರಿಯುವುದನ್ನು ನಿಲ್ಲಿಸಿ ನಿಂತು ಕೇಳುತ್ತಿದ್ದ ಆ ನದಿಯಲ್ಲಿ? ಕುಣಿದಾಡಿದ ಆ ಕಲ್ಮರಗಳೆಲ್ಲಿ? ಕಿವಿಯೆತ್ತಿ ಆಲಿಸುತ್ತಿದ್ದ ಆ ಜಿಂಕೆಗಳೆಲ್ಲಿ? ಕಲ್ಲಿನಂತೆ ನಿಂತಿದ್ದ ಆ ತುರುವೃಂದವೆಲ್ಲಿ?
ಬನದ ಗೋಪಾಲ
ಇದೇನು ಹೀಗೆನ್ನುವೆ? ನಾನೇನೂ ಕಾಣೆನಲ್ಲಾ!
ಗೋಪಾಲ
ಇಲ್ಲ, ನಾನು ಕಂಡೆ. ಯಾವುದೋ ಬೇರೊಂದು ಲೋಕಕ್ಕೆ ಹೋಗಿದ್ದೆ. ಅಲ್ಲಿ ಅವೆಲ್ಲವನ್ನೂ ನೋಡಿದೆ. ಅಲ್ಲಿಂದ ಬರುವುದಕ್ಕೆ ನನಗೆ ಮನಸ್ಸೇ ಇರಲಿಲ್ಲ. ನೀನೇ ಎಳೆದುಕೊಂಡು ಬಂದೆ.
ಬನದ ಗೋಪಾಲ
ನನಗೊಂದೂ ಅರ್ಥವಾಗುವುದಿಲ್ಲವಪ್ಪ ನಿನ್ನ ಮಾತು.
ಗೋಪಾಲ
ಅಣ್ಣಾ, ಯಾವಾಗಲೂ ನೀನು ಹಾಡುವುದು, ನಾನು ಕೇಳುವುದು! ಹೀಗಿದ್ದರೆಷ್ಟು ಚೆನ್ನಾಗಿತ್ತು!
ಬನದ ಗೋಪಾಲ
ಆಮೇಲೆ ನಾನು ದನಕಾಯುವುದೆಲ್ಲಿ! ನೀನು ಶಾಲೆಗೆ ಹೋಗುವುದೆಲ್ಲಿ? ಮುಂದೆ ಗತಿ? ನಿನಗೆ ಶಾಲೆಗೆ ಹೊತ್ತಾಯ್ತು. ಬೇಗ ಹೋಗು.
ಗೋಪಾಲ
ನಿನ್ನನ್ನು ಬಿಟ್ಟಿರುವುದಕ್ಕೆ ನನಗೆ ಮನಸ್ಸಿಲ್ಲ. ನೀನೂ ಬಾ ನನ್ನ ಜೊತೆಗೆ. ಇಬ್ಬರೂ ಶಾಲೆಗೆ ಹೋಗೋಣ. ಗುರುಗಳಿಗೆ ನಾನು ಹೇಳುತ್ತೇನೆ.
ಬನದ ಗೋಪಾಲ
ದನಕಾಯುವ ನನಗೆ ಓದುವುದು ಬರೆಯುವುದು ಇವೆಲ್ಲಾ ಏಕೆ?
ಗೋಪಾಲ
ಹಾಗೆಲ್ಲ, ವೇದಗಳನ್ನು ಕಲಿಸುತ್ತಾರೆ, ಶಾಸ್ತ್ರಗಳನ್ನು ಬೋಧಿಸುತ್ತಾರೆ, ವ್ಯಾಕರಣ ಹೇಳಿಕೊಡುತ್ತಾರೆ.
ಬನದ ಗೋಪಾಲ
ಅವೆಲ್ಲ ನನಗೆ ಬೇಡಪ್ಪ. ನಿನ್ನ ವೇದವೂ ಬೇಡ, ಶಾಸ್ತ್ರವೂ ಬೇಡ. ಅವಲಕ್ಕಿ ಮೊಸರು ಸಿಕ್ಕಿದರೆ ಅಷ್ಟೇ ಸಾಕು. ಹೊತ್ತಾಯ್ತು, ನೀನಿನ್ನು ನಡೆ. ಅಗೋ ನೋಡು, ದನಗಳು ‘ಅಂಬಾ’ ಎಂದು ಕರೆಯುತ್ತಲಿವೆ. ನಾನಿನ್ನು ಹೋಗುತ್ತೇನೆ.
(ಓಡುತ್ತಾನೆ.)
ಗೋಪಾಲ
ನಾನೇಕೆ ಓದುವುದು? ನನ್ನಣ್ಣನಂತೆಯೆ ಇದ್ದರೆ ಸಾಲದೆ? ಆದರೆ ಅಮ್ಮ ಓದಲೇಬೇಕು ಅಂತ ಹೇಳುತ್ತಾಳೆ.
(ಮೆಲ್ಲಗೆ ಹೋಗುತ್ತಾನೆ.)
Leave A Comment