(ಕತ್ತಲಾಗುತ್ತಿದೆ. ಗುಡಿಸಿನ ಹೊಸಲ ಬಳಿ ಗೋಪಾಲನ ತಾಯಿ ಮಗನು ಬರುವ ಹಾದಿಯನ್ನೇ ನೋಡುತ್ತಾ ಕುಳಿತಿದ್ದಾಳೆ. ಕೈಯಲ್ಲಿ ಜಪಮಾಲೆ ಇದೆ.)

ತಾಯಿ
ಸೂರ್ಯನೂ ಮುಳುಗಿದನು. ಹಕ್ಕಿಗಳೂ ಗೂಡಿಗೆ ಹೋದುವು. ದನಗಳೆಲ್ಲಾ ಕೊಟ್ಟಿಗೆಗೆ ಬಂದುವು. ತಾರೆಗಳೂ ಒಂದೊಂದಾಗಿ ಮೂಡುತ್ತಿವೆ. ಕತ್ತಲೂ ಹಬ್ಬುತ್ತಿದೆ. ಗೋಪಾಲನೇಕೆ ಇನ್ನೂ ಬರಲಿಲ್ಲ? ಸುಮ್ಮನೆ ಕಾಲ ಕಳೆಯುವವನಲ್ಲ. ಕಾಡಿನಲ್ಲಿ ಬರಬೇಕು. ಎಷ್ಟು ಭಯಪಡುವನೋ ಏನೋ? ಪರಮಾತ್ಮ, ಅವನ ಸಂರಕ್ಷಣೆ ಭಾರ ನಿನ್ನದೇ ಆಗಿರುತ್ತದೆ.
(ಗೋಪಾಲನು ಬೇಗಬೇಗನೆ ಬರುತ್ತಾನೆ.)
ಮಗು, ಗೋಪಾಲ ಬಂದೆಯಾ, ಬಂದೆಯಾ! ಬಾ, ಕುಳಿತುಕೋ. ಇದೇಕೆ ಇಷ್ಟು ತಡಮಾಡಿ ಬಂದೆ. ಕಾಡಿನಲ್ಲಿ ಬರುವಾಗ ಹೆದರಿಕೊಂಡೆಯೋ ಏನು?

ಗೋಪಾಲ
ನನ್ನಣ್ಣ ಅಲ್ಲಿರುವಾಗ ಹೆದರಿಕೆ ಎಂದರೇನಮ್ಮ? ಅವನೊಡನೆ ಮಾತನಾಡುತ್ತಿದ್ದೆ. ಆದ್ದರಿಂದ ಹೊತ್ತಾಯಿತು. ನೀನು ಹೇಳಿದಂತೆಯೆ, ನನಗೆ ಹೆದರಿಕೆಯಾಗಲು “ಗೋಪಾಲಣ್ಣಾ” ಎಂದು ಕೂಗಿದೆ. ಅವನು ‘ಓ’ ಎಂದ. ಆಮೇಲೆ ಬಹಳ ಮಾತಾಡಿದೆವು.

ತಾಯಿ
(ಕಂಬನಿ ತುಂಬಿದ ಕಂಗಳನ್ನು ಒರೆಸುತ್ತಾ ಮುದ್ದಿಸುತ್ತಾ)
ಪುಣ್ಯವಂತನು ನೀನು, ಮಗನೆ. ನಿನ್ನನ್ನು ಹೆತ್ತವಳು ನಾನೂ ಧನ್ಯಳಾದೆ. ನನ್ನ ಬಡತನವಿಂದು ಮರೆಯಾಯ್ತು. ನನ್ನ ವೈಧವ್ಯವಿಂದು ಅಳಿದುಹೋಯ್ತು, ಇನ್ನೇನ್ನ ಭಾಗ್ಯಕ್ಕೆ ಎಣೆಯಿಲ್ಲ. ಕಂದಾ ನಿನ್ನಣ್ಣ ಗೋಪಾಲನನ್ನು ಕಂಡೆಯಾ? ಅವನು ಹೇಗಿದ್ದ?

ಗೋಪಾಲ
ಇಲ್ಲಮ್ಮ, ಅವನಿಗೆ ತುಂಬಾ ಕೆಲಸವಂತೆ. ಆದ್ದರಿಂದ ಇಂದು ಹೊರಗೆ ಬರಲಾಗುವುದಿಲ್ಲವೆಂದು ಹೇಳಿದ. ನಾನೂ ಮನೆಗೆ ಬಾರೆಂದು ಅವನನ್ನು ಕರೆದೆ; ಆಮೇಲೆ ಬರುತ್ತೇನೆ, ಅಮ್ಮನಿಗೆ ಹೇಳು ಅಂತ ಹೇಳಿದ. ಅದಕ್ಕೇ ನಾನು ಒಬ್ಬನೆ ಬಂದೆ.

ತಾಯಿ
ಕಂದಾ, ನಾಳೆ ನೀನು ಶಾಲೆಗೆ ಹೋಗುವಾಗ ಅವನನ್ನು ಕರೆದು ಹೊರಗೆ ಬರುವಂತೆ ಹೇಳು. ಅವನಿಗೆ ತಿನ್ನುವುದಕ್ಕೇನಾದರೂ ಕೊಡುತ್ತೇನೆ, ತೆಗೆದುಕೊಂಡು ಹೋಗಿ ಕೊಡು.

ಗೋಪಾಲ
ಆ ಕಾಡಿನಲ್ಲಿ, ಈ ಕತ್ತಲೆಯಲ್ಲಿ ಅವನೊಬ್ಬನೇ ಹೇಗಿರುತ್ತಾನಮ್ಮ? ಅವನಿಗೆ ಹದರಿಕೆ ಇಲ್ಲವೆ?

ತಾಯಿ
ಮಗು, ಅವನು ಸರ್ವಗೋಪಾಲಕನು. ಅವನಿಗೇತರ ಭೀತಿ?

ಗೋಪಾಲ
ಅಮ್ಮ, ನನ್ನ ಗೋಪಾಲನ ಪೂಜೆಗೆ ಇದೋ ಹೂಗಳನ್ನು ತಂದಿದ್ದೇನೆ. ಅವನಿಗೆ ತಿನ್ನುವುದಕ್ಕಾಗಿ ಹಣ್ಣುಗಳನ್ನೂ ಆಯ್ದುಕೊಂಡು ಬಂದಿರುತ್ತೇನೆ.

ತಾಯಿ
ಅವನ್ನು ವೇಣುಗೋಪಾಲನ ಮುಂದಿಟ್ಟು ಅಡ್ಡಬೀಳು.
(ಗೋಪಾಲನು ಹೂಗಳನ್ನೂ ಹಣ್ಣುಗಳನ್ನು ಇಟ್ಟು ಅಡ್ಡ ಬೀಳುತ್ತಾನೆ. ಪುನಃ ಚಕಿತನಾಗಿ ಏಳುತ್ತಾನೆ.)

ಗೋಪಾಲ
ಅಮ್ಮ, ನನ್ನಣ್ಣ ಬಂದ! ಬಂದಾ! ನೋಡಿಲ್ಲಿ!

ತಾಯಿ
ಎಲ್ಲಿ ಮಗೂ?

ಗೋಪಾಲ
ಓಡಿಬಂದು ಆ ಗೊಂಬೆ ಒಳಗಡೆ ಸೇರಿಬಿಟ್ಟ!
(ತಾಯಿ ಅಡ್ಡ ಬೀಳುತ್ತಾಳೆ.)