ಈ ಛತ್ರಿ ನನ್ನದು : ನನಗೂ ಇದಕ್ಕು ಬಹಳ ಕಾಲದ ನಂಟು.
ಮಳೆ ಬಿಸಿಲಲ್ಲಿ ಇದು ನನ್ನ ಎಡಬಿಡದ ಸಂಗಾತಿ. ಬರಿ
ಛತ್ರಿಯಲ್ಲ ಇದು ಪ್ರಶ್ನಾರ್ಥಕ ಚಿಹ್ನೆ ! ಈ ಪ್ರಶ್ನೆಯನು
ಹಿಡಿದು ನನ್ನ ದಾರಿಯ ನಾನು ತುಳಿಯದ ದಿನವೆ
ಇಲ್ಲವೆಂದರು ಸರಿಯೆ. ಪ್ರಶ್ನೆಯಿಲ್ಲದ ಬದುಕೊಂದು
ಬದುಕೆ ? ನನಗಿಲ್ಲ ಪೂರ್ಣವಿರಾಮವನ್ನರಸಿ
ನಡೆಯುವ ಬಯಕೆ. ಈ ಪ್ರಶ್ನೆಯ ಕೆಳಗೆ ಮಡಿಸಿರುವ
ಸಂಶಯದ ನೆರಳ ಬಿಚ್ಚಿ ನಡೆಯುವುದು ನನಗಿಷ್ಟ !

ಹೆಂಗಸರ ಛತ್ರಿಯೋ ವಿಸ್ಮಯದ ಚಿಹ್ನೆ. ಅದ-
ರಿಂದಲೇ ಅವುಗಳಿಗಷ್ಟು ಬಣ್ಣ-ಬೆಡಗು. ಪ್ರಶ್ನೆ-
ಯಿಂದ ವಿಸ್ಮಯದತನಕ ಹಬ್ಬಿದೆ ಬದುಕು ಎರಡು
ಛತ್ರಿಯ ನಡುವೆ. ಹೆಣ್ಣಿಗೆ ಗಂಡು ಪ್ರಶ್ನೆ, ಗಂಡಿಗೆ ಹೆಣ್ಣು
ವಿಸ್ಮಯ ; ಅದಕ್ಕುಚಿತವಾಗಿವೆ ಛತ್ರಿಯ ಮಾಟ,
ಇದರೊಳಗು ಇರಬಹುದು ಮಾಡಿದಾತನ ಹೂಟ.