ನನ್ನ ಜೇಬಿನೊಳಕ್ಕೆ ಕೈ ಹಾಕದಿರೊ ಅಣ್ಣ.
ಜೇಬು ನನ್ನದು ; ನಾನಲ್ಲದೆಯೆ ಬೇರೆ
ಯಾರೂ ಕೈಹಾಕಬಾರದು ಅದರೊಳಕ್ಕೆ,
ಏನೇನಿದೆಯೊ, ಬಿಡು ನಿನಗೇಕೆ ಅದರ ಗೊಡವೆ.

ನನ್ನ ಬ್ಯಾಂಕಿನ ಬುಕ್ಕು, ನನ್ನ ಸಾಲದ ಲೆಕ್ಕ,
ನನ್ನ ಪ್ರೇಮದ ಪತ್ರ, ಏನೇನೊ ಇದ್ದೀತು
ಅದು ನನ್ನದು.
ನೀನು ತೀರಿಸಲಾರೆ ನನ್ನ ತಾಪತ್ರಯವ,
ಬಿಟ್ಟುಬಿಡು ; ಕೊಡು ನಿನ್ನ ಸ್ನೇಹ ಮಾತ್ರ.

ಬೇಡ, ನನ್ನ ಜೇಬಿನಲ್ಲಿರುವೆಲ್ಲ ವಿಚಾರ
ನಿನಗೆ ; ನಿನ್ನ ಜೇಬಿನ ಗೊಡವೆ ನನಗು ಬೇಡ.
ಆದಷ್ಟು ನಿರ್ಮಲವಾಗಿದ್ದರಷ್ಟೇ ಸಾಕು ನಮ್ಮ
ನಡುವಣ ಬಾನು ; ಅನಗತ್ಯ ಬೇಡ ಮೋಡ.