ರೈಲು ಕಂಬಿಯ ದಾಟಿ ಒಂದಷ್ಟು ದೂರ ನಡೆದರೆ
ನೀವು, ಹಠಾತ್ತಾಗಿ ತೆರೆಯುವುದು ಬಟ್ಟ ಬಯಲು !
ನೆಲಕು ಆಕಾಶಕ್ಕು ಏನೇನೋ ಮಾತು ; ಈ ನಡುವೆ
ವಿಸ್ತಾರವಾಗಿ ನಿಂತ ಜೋಳದ ಬೆಳೆಯ ಚೆಲುವು.

ಜೋಳದ ಹೊಲದ ತೆನೆತೆನೆಯ ತೂಗಿ ಬೀಸುವ
ಗಾಳಿಯಲ್ಲಿ ನೂರು ಬಗೆ ಮರ‍್ಮರ. ಸಂಜೆಯ ಕೆಳಗೆ
ಅಲ್ಲಲ್ಲಿ ಥಳ ಥಳ ನೀರು. ಪಿರಮಿಡ್ಡಿನಂತೆದ್ದು ಕೂತ
ಬಾತಿಯ ಗುಡ್ಡ, ಮಿಣಿಮಿಣಿ ದೀಪ ಅದರ ತುದಿಗೆ.

ಅಲ್ಲಿಂದ ಇಳಿದು ಹಿಂದಕ್ಕೆ ಬಂದರೆ ನೀವು, ದಾರಿ-
ಯುದ್ದಕ್ಕೂ ಹತ್ತಿ-ಸೇಂಗಾ-ಅವರೆ, ನೆಲದ ಸೊಗಡು.
ಊರ ಕಡೆ ನಡೆವ ಎಮ್ಮೆಯ ಹಿಂಡು; ಅಲ್ಲೊಂದು
ಇಲ್ಲೊಂದು ಗಿರಣಿ; ‘ಬಿಲ್ಲಿ ಕಾರ ಬಿಲ್ಲಿ ಚಾ’ ಬೋರ್ಡು.

ಚನ್ನಗಿರಿ ಚತ್ರದ ಎದುರು ಗಡಿಯಾರ ಗೋಪುರದ
ಕಂಬ; ಅದರ ಸುತ್ತಾ ಗಡಿಬಿಡಿಯ ಊರು
ದಾವಣಗೆರೆ. ಕಚ್ಚೆ ಪಂಚೆಯ ಮುಚ್ಚು ಕೋಟಿನ ತಲೆಗೆ
ಟೋಪಿ; ಕಣ್ಣಲ್ಲಿ ತಕ್ಕಡಿ : ‘ರೂಪಾಯಿಗೆಷ್ಟು ಸೇರು?’

ವರ್ಷಕ್ಕೊಮ್ಮೆ ಜಗದ್ಗುರುಗಳಡ್ಡ ಪಲ್ಲಕ್ಕಿ ;
ಬಸವ ಜಯಂತಿ ; ಭಜನೆಯ ಮೇಳ; ಪ್ರವಚನ.
ದುರುಗಮ್ಮನುತ್ಸವ; ಆನೆಕೊಂಡದ ಜಾತ್ರೆಯಲ್ಲಿ
ಮೈದುಂಬಿ ಕಾರಣಿಕ ನುಡಿವ ಒಗಟು ಶಕುನ.

ಹೊಲಗದ್ದೆಗಳ ದಾಟಿ ದೂರದ ತೋಟದೊಳ-
ಗೂಟ, ಮಾಹೇಶ್ವರನ ಜಾತ್ರೆ. ವರ್ಷಂಪ್ರತಿ
ಒಂಬತ್ತು ಮೈಲಿಗಳಾಚೆ ಹರಿಹರದಲ್ಲಿ
ತುಂಗಭದ್ರೆಗೆ ಬರುವ ‘ಭಾಗೀರತಿ’.

ಇದೆಲ್ಲ ಹಿಂದಿನ ಮಾತು. ಈಗ ಹ್ಯಾಂಗಿದೆ ತಮ್ಮಾ
ನನ್ನ ನೆನಪಿನ ಊರು? ನನ್ನ ಕವಿತೆಯ ಹಕ್ಕಿ
ರೆಕ್ಕೆ ಬಿಚ್ಚಿದ ಊರು; ಗೆಳೆತನದ ಗೂಡುಕಟ್ಟಿದ
ಊರು. ಈಗಲೂ ರೈಲು ಕಂಬಿಗಳ ಹಿಂದಿಕ್ಕಿ

ಒಂದಷ್ಟು ದೂರ ನಡೆದರೆ ನಾನು, ಸಿಕ್ಕಬಹುದೇ
ಹೇಳಿ ಹಠಾತ್ತನೆ ತೆರೆವ ಬಟ್ಟ ಬಯಲು?
ಅರ್ಥವಿಲ್ಲದ ಪ್ರಶ್ನೆ: ಸ್ಥಗಿತಗೊಳ್ಳುವುದುಂಟೆ
ಹೊಸ ನೀರನೊಳಕೊಂಡು ಹರಿವ ಹೊನಲು?